ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr N Someshwara Column: ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದ ಲಿಂಬೆ !

ಸ್ಕರ್ವಿಯ ಅತ್ಯಂತ ಕುಪ್ರಸಿದ್ಧ ಲಕ್ಷಣಗಳು ಮೊದಲು ನಾವಿಕರ ಬಾಯಿಯಲ್ಲಿ ಕಂಡವು. ಹಲ್ಲು ಗಳನ್ನು ಹಿಡಿದಿಟ್ಟುಕೊಂಡಿರುವ ದವಡೆಮೂಳೆ ಊದಿಕೊಂಡವು, ರಕ್ತ ಸ್ರಾವವಾಗಲಾರಂಭಿಸಿದವು, ಬಾಯಿ ಯಿಂದ ದುರ್ವಾಸನೆಯು ಬಂದು, ಹಲ್ಲುಗಳು ಸಡಿಲವಾಗಿ, ಒಂದೊಂದಾಗಿ ಉದುರಿ ಹೋಗಿ ಬೊಚ್ಚ ಬಾಯಿಯು ಉಂಟಾಯಿತು.

ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದ ಲಿಂಬೆ !

-

ಹಿಂದಿರುಗಿ ನೋಡಿದಾಗ

ಸಮುದ್ರದ ಮೇಲೊಂದು ಅದೃಶ್ಯ ಮೃತ್ಯು: ಹದಿನೆಂಟನೇ ಶತಮಾನದ ಕಾಲವದು. ಜಗತ್ತನ್ನು ಗೆಲ್ಲಲು ಹೊರಟ ಬ್ರಿಟಿಷ್ ಸಾಮ್ರಾಜ್ಯದ ನೌಕಾಪಡೆಗೆ (ರಾಯಲ್ ನೇವಿ) ಶತ್ರು ದೇಶಗಳ ಫಿರಂಗಿ ಗಳಿಗಿಂತಲೂ ದೊಡ್ಡದೊಂದು ಅದೃಶ್ಯ ಶತ್ರು ಕಂಟಕವಾಗಿ ಕಾಡುತ್ತಿತ್ತು. ಆ ಶತ್ರುವಿನ ಹೆಸರು ‘ಸ್ಕರ್ವಿ’. ಹದಿನೈದನೇ ಶತಮಾನದಿಂದ ಹದಿನೆಂಟನೇ ಶತಮಾನದವರೆಗಿನ ಅನ್ವೇಷಣೆಯ ಆ ಯುಗದಲ್ಲಿ (ಏಜ್ ಆಫ್ ಸೇಲ್) ಸಮುದ್ರದ ಬಿರುಗಾಳಿ, ಹಡಗು ಮುಳುಗಡೆ ಅಥವಾ ಶತ್ರುಗಳ ಯುದ್ಧದಿಂದ ಸತ್ತ ನಾವಿಕರಿಗಿಂತ ಈ ಸ್ಕರ್ವಿ ರೋಗಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು! ಇತಿಹಾಸಕಾರರ ಪ್ರಕಾರ, ಸುಮಾರು 20 ಲಕ್ಷ (ಎರಡು ಮಿಲಿಯನ್) ನಾವಿಕರನ್ನು ಈ ಭೀಕರ ರೋಗ ನುಂಗಿ ನೀರು ಕುಡಿದಿತ್ತು.

ಈ ಇಡೀ ಕತೆಯ ಅತ್ಯಂತ ಆಘಾತಕಾರಿ ಮತ್ತು ದುರಂತದ ಭಾಗವೆಂದರೆ, ಈ ಮಾರಣಾಂತಿಕ ರೋಗಕ್ಕೆ ಅತ್ಯಂತ ಸರಳವಾದ ಮದ್ದು ಹಡಗಿನಲ್ಲಿಯೇ ಲಭ್ಯವಿತ್ತು. ಆದರೂ ಕೇವಲ ಸಾಂಪ್ರ ದಾಯಿಕ ಮೂಢನಂಬಿಕೆಗಳು, ಆಡಳಿತಾತ್ಮಕ ಉದಾಸೀನತೆ ಮತ್ತು ವೈಜ್ಞಾನಿಕ ಅಹಂ ನಿಂದಾಗಿ ಬ್ರಿಟಿಷ್ ನೌಕಾಪಡೆ ಲಕ್ಷಾಂತರ ಜೀವಗಳನ್ನು ಬಲಿಗೊಟ್ಟಿತು. ಸಾಕ್ಷ್ಯಗಳು ಕಣ್ಣೆದುರಿದ್ದರೂ, ಸತ್ಯವನ್ನು ಒಪ್ಪಿಕೊಳ್ಳಲು ಇಡೀ ವ್ಯವಸ್ಥೆ ದಶಕಗಳ ಕಾಲ ಹಠ ಹಿಡಿದು ಕುಳಿತ ಇತಿಹಾಸದ ಕರಾಳ ಅಧ್ಯಾಯವಿದು.

ಜಾಗತಿಕ ಸಮುದ್ರಯಾನ: ಕಮೋಡೋರ್ ಜಾರ್ಜ್ ಅನ್ಸನ್ 1740ರಲ್ಲಿ ಕೈಗೊಂಡ ಜಾಗತಿಕ ಸಮುದ್ರಯಾನವನ್ನು ಕೈಗೊಂಡ. ಪೆಸಿಫಿಕ್ ಸಾಗರದಲ್ಲಿ ಸ್ಪೇನ್ ದೇಶದ ಸಾರ್ವಭೌಮತ್ವವನ್ನು ಕೊನೆಗಾಣಿಸಲು ಯುದ್ಧವನ್ನು ಘೋಷಿಸಿದ. ಆತ ಆರು ಬೃಹತ್ ಯುದ್ಧ ಹಡಗುಗಳಲ್ಲಿ 1900ಕ್ಕೂ ಹೆಚ್ಚು ನಾವಿಕ/ಸೈನಿಕರೊಂದಿಗೆ ಪ್ರಯಾಣವನ್ನು ಆರಂಭಿಸಿದ. ಆದರೆ, ಆತ ಮರಳಿ ಬರುವಷ್ಟ ರಲ್ಲಿ ಶತ್ರುಗಳ ದಾಳಿಗಿಂತ ಹೆಚ್ಚಾಗಿ ಸ್ಕರ್ವಿ ರೋಗದ ಭೀಕರತೆಗೆ ಸಿಲುಕಿ ಕೇವಲ ಒಂದೇ ಒಂದು ಹಡಗು ಉಳಿದಿತ್ತು ಮತ್ತು ಶೇಕಡಾ 70ಕ್ಕಿಂತ ಹೆಚ್ಚು (ಸುಮಾರು 1400) ನಾವಿಕರು ಹೆಣವಾಗಿದ್ದರು. ಬ್ರಿಟಿಷ್ ಸಾಮ್ರಾಜ್ಯಕ್ಕೆ ಇದು ಕೇವಲ ಮಾನವ ಸಂಪನ್ಮೂಲದ ನಷ್ಟವಾಗಿರಲಿಲ್ಲ, ದೊಡ್ಡ ಆರ್ಥಿಕ ಮತ್ತು ವ್ಯೂಹಾತ್ಮಕ ಹೊಡೆತವಾಗಿತ್ತು.

ಇದನ್ನೂ ಓದಿ: Dr N Someshwara Column: ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

ಲಕ್ಷಣಗಳು: ಜಾರ್ಜ್ ಅನ್ಸನ್‌ರ ಜತೆಯಲ್ಲಿ ಧರ್ಮಗುರು ರಿಚರ್ಡ್ ವಾಲ್ಟರ್ ಪ್ರಯಾಣವನ್ನು ಮಾಡುತ್ತಿದ್ದರು. ಅವರು ಸ್ಕರ್ವಿ ಕಾಯಿಲೆಯ ಭೀಕರತೆಯನ್ನು ನಿಖರವಾಗಿ ದಾಖಲಿಸಿದ್ದಾರೆ. ನಾವಿಕರು ಸಮುದ್ರದಲ್ಲಿ ತಿಂಗಳುಗಟ್ಟಲೆ ಯಾನ ಮಾಡುವಾಗ ಅವರಿಗೆ ತಿನ್ನಲು ಉಪ್ಪಿನ ಮಾಂಸ, ಒಣ ಆಹಾರ, ಬಿಸ್ಕತ್ತು ಮಾತ್ರ ದೊರೆಯುತ್ತಿದ್ದವು. ನಾವಿಕರು ಸ್ಕರ್ವಿ ಪೀಡಿತರಾದಾಗ, ಆರಂಭ ದಲ್ಲಿ ಯಾವುದೇ ಸ್ಪಷ್ಟ ರೋಗಲಕ್ಷಣಗಳು ಕಾಣುತ್ತಿರಲಿಲ್ಲ. ನಿಧಾನವಾಗಿ ಶಕ್ತಿಹೀನನಾಗುತ್ತಿದ್ದ. ಅತಿಯಾದ ಆಯಾಸ, ನಿಶ್ಶಕ್ತಿ, ಕೆಲಸ ಮಾಡಲು ಮನಸ್ಸಿಲ್ಲದಿರುವುದು, ಕಾಲುಗಳಲ್ಲಿ ಭಾರ, ಸ್ನಾಯುಗಳಲ್ಲಿ ವಿಪರೀತ ನೋವು, ಕೀಲುಗಳಲ್ಲಿ ನೋವು ಕಂಡುಬಂದವು.

ಸ್ಕರ್ವಿಯ ಅತ್ಯಂತ ಕುಪ್ರಸಿದ್ಧ ಲಕ್ಷಣಗಳು ಮೊದಲು ನಾವಿಕರ ಬಾಯಿಯಲ್ಲಿ ಕಂಡವು. ಹಲ್ಲು ಗಳನ್ನು ಹಿಡಿದಿಟ್ಟುಕೊಂಡಿರುವ ದವಡೆಮೂಳೆ ಊದಿಕೊಂಡವು, ರಕ್ತ ಸ್ರಾವವಾಗಲಾರಂಭಿಸಿ ದವು, ಬಾಯಿಯಿಂದ ದುರ್ವಾಸನೆಯು ಬಂದು, ಹಲ್ಲುಗಳು ಸಡಿಲವಾಗಿ, ಒಂದೊಂದಾಗಿ ಉದುರಿ ಹೋಗಿ ಬೊಚ್ಚಬಾಯಿಯು ಉಂಟಾಯಿತು.

ಆರೋಗ್ಯಕರ ಚರ್ಮಕ್ಕೆ ಕೊಲಾಜೆನ್ ಅಗತ್ಯ. ವಿಟಮಿನ್-ಸಿ ಕೊರತೆಯಿದ್ದಾಗ ಉತ್ತಮ ಕೊಲಾ ಜೆನ್ ದೇಹದಲ್ಲಿ ರೂಪುಗೊಳ್ಳುವುದಿಲ್ಲ. ಹಾಗಾಗಿ ಚರ್ಮದಡಿಯ ಲೋಮನಾಳಗಳು ಸುಲಭವಾಗಿ ಛಿದ್ರವಾಗಲಾರಂಭಿಸಿದವು. ಚರ್ಮದ ಮೇಲೆ ಸಣ್ಣ ಕೆಂಪು ಚುಕ್ಕೆಗಳು ಕಾಣಿಸಿಕೊಂಡವು.

ಕಾಲುಗಳಲ್ಲಿ ಕಪ್ಪು-ನೀಲಿ ಮಚ್ಚೆಗಳು, ಸಣ್ಣಪುಟ್ಟ ಗಾಯಗಳಾಗಿ ಹೆಚ್ಚು ರಕ್ತಸ್ರಾವ, ಕೂದಲಿನ ಬೇರುಗಳ ಸುತ್ತ ಕೆಂಪು ಚುಕ್ಕೆಗಳು, ಚರ್ಮ ಒರಟಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದವು.

ಸ್ಕರ್ವಿಯ ಒಂದು ಭಯಾನಕ ಲಕ್ಷಣವೆಂದರೆ, ನಾವಿಕರು ಕ್ರಮವಾಗಿ ನಡೆಯುವ ಶಕ್ತಿಯನ್ನು ಕಳೆದುಕೊಂಡು ಅಸಹಾಯಕರಾಗುವುದು. ಕಾಲುಗಳಲ್ಲಿ ತೀವ್ರ ನೋವು, ಮೊಣಕಾಲು, ಪಾದ, ತೊಡೆಗಳಲ್ಲಿ ನೋವು, ನಿಂತುಕೊಳ್ಳಲು ಕಷ್ಟ, ಸ್ವಲ್ಪ ನಡೆದರೂ ಆಯಾಸ, ಹಾಸಿಗೆಯಿಂದ ಏಳಲಾರದ ಸ್ಥಿತಿ, ಇಂತಹ ರೋಗಿಗಳು ಮೇಲಿನ ಡೆಕ್ಕಿಗೆ ಬರಲು ಸಹ ಅಸಮರ್ಥರಾಗಿರುತ್ತಿದ್ದರು.

111 ok

ವಿಟಮಿನ್-ಸಿ ಕೊರತೆಯಿಂದ ಗಾಯ ಗುಣಮುಖವಾಗುವ ಕ್ರಿಯೆ ನಿಧಾನಗೊಳ್ಳುತ್ತದೆ. ಹಳೆಯ ಗಾಯಗಳು ಮತ್ತೆ ತೆರೆದುಕೊಳ್ಳುವುದು, ಶಸ್ತ್ರಚಿಕಿತ್ಸೆಯ ಗಾಯಗಳು ಗುಣವಾಗದಿರುವುದು, ಚರ್ಮ ದಲ್ಲಿ ಕಂಡುಬರುವ ಸಣ್ಣ ಪುಟ್ಟ ಬಿರುಕುಗಳು ದೊಡ್ಡದಾಗುವುದು, ಸೋಂಕು ಹೆಚ್ಚಾಗುವುದು, ಹಳೆಯ ಗಾಯಗಳ ಗುರುತುಗಳು ಕೂಡ ನೋವು ಕೊಡಬಹುದು ಎಂಬ ವಿವರಣೆಗಳು ಸ್ಕರ್ವಿಯ ಐತಿಹಾಸಿಕ ವರದಿಗಳಲ್ಲಿ ಕಾಣುತ್ತವೆ.

ಚರ್ಮ ಮತ್ತು ಮೂಳೆ-ಸ್ನಾಯುಗಳ ಶಿಥಿಲವಾಗುತ್ತಿದ್ದವು. ಚರ್ಮದ ಬಣ್ಣಗೆಟ್ಟು ಕಪ್ಪಾಗಿ, ನಾವಿಕ ರಲ್ಲಿ ತೀವ್ರವಾದ ಆಂತರಿಕ ರಕ್ತಸ್ರಾವಗಳು (ಇಂಟರ್ನಲ್ ಬ್ಲೀಡಿಂಗ್) ಉಂಟಾಗುತ್ತಿದ್ದವು. ಇದರಿಂದಾಗಿ ಅವರ ದೇಹದ ಹಲವು ಭಾಗಗಳಲ್ಲಿ ಚರ್ಮದ ಮೇಲೆ ಯಾರೋ ಶಾಯಿಯನ್ನು ಚೆಲ್ಲಿದಂತೆ ಕಪ್ಪಾಗುತ್ತಿದ್ದವು.

ಈ ಸಮುದ್ರಯಾನದ ದಾಖಲೆಗಳಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಅತ್ಯಂತ ಭಯಾನಕ ಅಂಶ ವೆಂದರೆ, ದಶಕಗಳ ಹಿಂದೆಯೇ ಸಂಪೂರ್ಣವಾಗಿ ಗುಣವಾಗಿದ್ದ ಹಳೆಯ ಗಾಯಗಳು ಮತ್ತು ಶಸ್ತ್ರ ಚಿಕಿತ್ಸೆಯ ಗುರುತುಗಳು ಯಾವುದೇ ಕಾರಣವಿಲ್ಲದೆ ತಾವಾಗಿಯೇ ಮತ್ತೆ ಸೀಳಿಕೊಂಡು ತೆರೆದು ಕೊಳ್ಳುತ್ತಿದ್ದವು. ಹಿಂದೆ ಮುರಿದು ಮತ್ತೆ ಒಂದಾಗಿದ್ದ ಮೂಳೆಗಳ ಸಂಯೋಜಕ ಭಾಗಗಳು ಕರಗಿ ಹೋಗುತ್ತಿದ್ದವು. ಇದರಿಂದಾಗಿ ಮೂಳೆಗಳು ಮತ್ತೆ ಬೇರ್ಪಟ್ಟು ಮುರಿದು ಹೋಗುತ್ತಿದ್ದವು.

ನಾವಿಕರಿಗೆ ವಿಪರೀತ ಕೀಲು ನೋವು ಬರುತ್ತಿತ್ತು; ಕಾಲುಗಳು ಅತಿಯಾಗಿ ಬಾತುಕೊಂಡು, ಸ್ನಾಯು ಗಳ ಶಾಶ್ವತ ಮುದುಡಿಕೊಳ್ಳುತ್ತಿದ್ದವು. ಸಮುದ್ರ ತೀರದ ಹೂವುಗಳ ಸುವಾಸನೆಯೂ ಸಹ ಅವರಿಗೆ ತೀವ್ರವಾದ ಯಾತನೆಯನ್ನು ಉಂಟು ಮಾಡುತ್ತಿತ್ತು. ಅಷ್ಟೇ ಅಲ್ಲದೆ, ರೋಗದ ಕೊನೆಯ ಹಂತದಲ್ಲಿದ್ದ ನಾವಿಕರಿಗೆ ಹಡಗಿನಲ್ಲಿ ಕೇಳಿ ಬರುತ್ತಿದ್ದ ಗನ್‌ನ ಹಠಾತ್ ಶಬ್ದದಂತಹ ದೊಡ್ಡ ಸದ್ದುಗಳು ಎಷ್ಟು ಆಘಾತ ನೀಡುತ್ತಿದ್ದವೆಂದರೆ, ಅವರು ತಕ್ಷಣವೇ ಆ ಕಂಗೆಡಿಸುವ ಶಬ್ದವನ್ನು ಕೇಳುತ್ತಿರುವಂತೆಯೆ ಪ್ರಾಣವನ್ನು ಬಿಡುತ್ತಿದ್ದರು. ನಾವಿಕರಲ್ಲಿ ತೀವ್ರವಾದ ಭಾವನಾತ್ಮಕ ಬದಲಾವಣೆಗಳು, ವಿಪರೀತ ಜಡತ್ವ ಹಾಗೂ ಅನ್ಸನ್ ಅವರು ವಿವರಿಸಿದಂತೆ ಅತ್ಯಂತ ಭೀಕರವಾದ ಭಯಗಳು ಮತ್ತು ತೀವ್ರವಾದ ಖಿನ್ನತೆಯು ಕಂಡುಬರುತ್ತಿದ್ದವು.

ಹಠಾತ್ ಸಾವು: ದೈಹಿಕವಾಗಿ ಸ್ವಲ್ಪ ಮಟ್ಟಿಗೆ ಸ್ಥಿರವಾಗಿರುವಂತೆ ಕಾಣುತ್ತಿದ್ದ ಅಥವಾ ಸಣ್ಣಪುಟ್ಟ ಚಲನವಲನಗಳನ್ನು ಮಾಡಲು ಶಕ್ತರಾಗಿದ್ದ ಅನೇಕ ನಾವಿಕರು, ಸ್ವಲ್ಪವೇ ಸ್ವಲ್ಪ ದೈಹಿಕ ಶ್ರಮ ದಲ್ಲಿ ತೊಡಗುತ್ತಿರುವಂತೆಯೇ ತಕ್ಷಣ ಆಂತರಿಕ ರಕ್ತಸ್ರಾವ ಅಥವಾ ಹೃದಯಾಘಾತಕ್ಕೆ ಒಳಗಾಗಿ ನಿಂತಲ್ಲಿಯೇ ಕುಸಿದು ಬಿದ್ದು ತಕ್ಷಣವೇ ಸಾವನ್ನಪ್ಪುತ್ತಿದ್ದರು.

ಜೇಮ್ಸ್ ಲಿಂಡ್:

1747ರಲ್ಲಿ ಬ್ರಿಟಿಷ್ ಸರಕಾರವು ಜೇಮ್ಸ್ ಲಿಂಡ್ (1716-1794) ಎಂಬ ವೈದ್ಯನನ್ನು ಬ್ರಿಟಿಷ್ ನೌಕಾಪಡೆಯ ಶಸ್ತ್ರಚಿಕಿತ್ಸಕನನ್ನಾಗಿ (ನೇವಲ್ ಸರ್ಜನ್) ಆಗಿ ಆಯ್ಕೆ ಮಾಡಿತು. ಇವರು ಹೇಗಾದರೂ ಮಾಡಿ ಸ್ಕರ್ವಿಯನ್ನು ತಡೆಗಟ್ಟುವುದಾಗಿ ಪ್ರತಿಜ್ಞೆಯನ್ನು ಮಾಡಿದರು. ಆಗಿನಕಾಲದ ವೈದ್ಯಕೀಯ ಜಗತ್ತನ್ನು ಗ್ರೀಕ್ ವೈದ್ಯ ಗ್ಯಾಲನ್‌ನ ಹ್ಯೂಮರಲ್ ಥಿಯರಿ (ದೇಹದ ದ್ರವಗಳ ಅಸಮತೋಲನ) ಆಳುತ್ತಿತ್ತು. ನಮ್ಮ ದೇಹದಲ್ಲಿ ನಾಲ್ಕು ರೀತಿಯ ರಸಗಳು-ರಕ್ತ, ಕಫ, ಹಳದಿ ರಕ್ತ ಮತ್ತು ಕಪ್ಪು ರಕ್ತ-ಇರುತ್ತವೆಯೆಂದು, ಈ ರಸಗಳ ಪ್ರಮಾಣದಲ್ಲಿ ಏರುಪೇರಾದಾಗ ಕಾಯಿಲೆಗಳು ಬರುತ್ತವೆ ಎನ್ನುವುದು ಈ ರಸ ಸಿದ್ಧಾಂತದ ತಿರುಳಾಗಿತ್ತು.

ಲಂಡನ್ನಿನ ರಾಯಲ್ ಕಾಲೇಜಿನ ವೈದ್ಯರು ಹಡಗಿನ ಒಳಗೆ ಇರುವ ಅತಿಯಾದ ತೇವಾಂಶ ಹಾಗೂ ಅವು ಸೇವಿಸುತ್ತಿದ್ದ ಅರೆಬರೆಕೊಳೆತ ಉಪ್ಪು ಮಾಂಸವೇ ಕಾರಣವೇ ಸ್ಕರ್ವಿಗೆ ಕಾರಣ ಎಂದು ನಂಬಿದ್ದರು. ಆದರೆ, ಜೇಮ್ಸ್ ಲಿಂಡ್ ಸ್ಕರ್ವಿ ಕಂಡುಬರಲು ನಾವಿಕ ದೈನಂದಿನ ಆಹಾರದಲ್ಲಿರುವ ಯಾವುದೋ ಒಂದು ಕೊರತೆಯೇ ಕಾರಣ ಇರಬಹುದು ಎಂದು ಶಂಕಿಸಿದರು.

ಮೊದಲ ಕ್ಲಿನಿಕಲ್ ಅಧ್ಯಯನ: 1747ರ ಮೇ 20. ಜೇಮ್ಸ್ ಲಿಂಡ್ ಎಚ್‌ಎಂಎಸ್ ಸಾಲಿಸ್ಬರಿ ಹಡಗಿನಲ್ಲಿದ್ದರು. ಇಲ್ಲಿ ಮನುಕುಲದ ಮೊದಲ ನಿಯಂತ್ರಿತ ವೈದ್ಯಕೀಯ ಪ್ರಯೋಗವನ್ನು (ಕಂಟ್ರೋಲ್ಡ್ ಕ್ಲಿನಿಕಲ್ ಟ್ರಯಲ್) ನಡೆಸಿದರು.

ಜೇಮ್ಸ್ ಲಿಂಡ್ ತೀವ್ರ ಸ್ಕರ್ವಿ ರೋಗವಿದ್ದ 12 ನಾವಿಕರನ್ನು ಆಯ್ದುಕೊಂಡರು. ಅವರನ್ನು ತಲಾ ಇಬ್ಬರಂತೆ ಆರು ಗುಂಪುಗಳನ್ನಾಗಿ ವಿಂಗಡಿಸಿ ದರು. ಎಲ್ಲರಿಗೂ ಒಂದೇ ರೀತಿಯ ಮೂಲ ಆಹಾರ ನೀಡಿದರು. ಜತೆಗೆ ಒಂದೊಂದು ಗುಂಪಿಗೆ ಒಂದೊಂದು ವಿಶೇಷ ಪ್ರತ್ಯೇಕ ‘ಆಮ್ಲೀಯ ಚಿಕಿತ್ಸೆ’ ಯನ್ನು ಆರಂಭಿಸಿದರು:

೧. ೧ನೇ ಗುಂಪು: ದಿನಕ್ಕೆ ಒಂದು ಕ್ವಾರ್ಟರ್ ಸೈಡರ್ (ಸೇಬಿನ ಮದ್ಯ)

೨. ೨ನೇ ಗುಂಪು: ದಿನಕ್ಕೆ ಮೂರು ಬಾರಿ ಗಂಧಕಾಮ್ಲದ ಹನಿಗಳು (ಎಲಿಕ್ಸರ್ ಆಫ್ ವಿಟ್ರಿಯೋಲ್)

೩. ೩ನೇ ಗುಂಪು: ದಿನಕ್ಕೆ ಮೂರು ಚಮಚ ವಿನೆಗರ್

೪. ೪ನೇ ಗುಂಪು: ದಿನಕ್ಕೆ ಅರ್ಧ ಪಿಂಟ್ ಸಮುದ್ರದ ನೀರು

೫. ೫ನೇ ಗುಂಪು: ದಿನಕ್ಕೆ ಎರಡು ಕಿತ್ತಳೆ ಮತ್ತು ಒಂದು ಲಿಂಬೆ ಹಣ್ಣು

೬. ೬ನೇ ಗುಂಪು: ಬೆಳ್ಳುಳ್ಳಿ, ಸಾಸಿವೆ ಮತ್ತು ಜಾಯಿ ಕಾಯಿ ಮಿಶ್ರಿತ ಕಷಾಯ

ಈ ವಿಶೇಷ ಚಿಕಿತ್ಸೆಯನ್ನು ಒಂದು ವಾರದ ಕಾಲ ನೀಡಿದರು.

ಫಲಿತಾಂಶವು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಐದನೆಯ ಗುಂಪಿನ ತೀವ್ರ ಸ್ಕರ್ವಿ ಪೀಡಿತ ನಾವಿಕರು, ದಿನಕ್ಕೆ ಎರಡು ಕಿತ್ತಳೆ ಹಾಗೂ ಒಂದು ಒಂದು ಲಿಂಬೆ ಹಣ್ಣನ್ನು ತಿನ್ನುತ್ತಿದ್ದವರು, ಪರಿಪೂರ್ಣವಾಗಿ ಚೇತರಿಸಿಕೊಂಡರು ಹಾಗೂ ತಮ್ಮ ದೈನಂದಿನ ಕೆಲಸಕ್ಕೆ ಹಿಂದಿರುಗಿದರು. ಹುಳಿಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ಕರ್ವಿ ಕಾಯಿಲೆಯನ್ನು ಗುಣಪಡಿಸ ಬಹುದು ಎಂಬ ಸತ್ಯವನ್ನು ಜೇಮ್ಸ್ ಲಿಂಡ್ ಜಗತ್ತಿಗೆ ಸಾರಿದರು.

ಮಾನವರ ಅಲ್ಪಬುದ್ಧಿ: ಹುಳಿಹಣ್ಣುಗಳು ಸ್ಕರ್ವಿಯನ್ನು ಗುಣಪಡಿಸುತ್ತದೆ ಎಂಬ ತಮ್ಮ ಸಂಶೋಧನೆಯನ್ನು ಜಗತ್ತಿಗೆ ಸಾರಲು ಜೇಮ್ಸ್ ಲಿಂಡ್, 1753ರಲ್ಲಿ ’ಏ ಟ್ರೀಟೀಸ್ ಆಫ್ ದಿ ಸ್ಕರ್ವಿ’ ಎಂಬ ಪುಸ್ತಕವನ್ನು ಬರೆದರು. ಪ್ರಕಟಿಸಿದರು. ಸಂಪೂರ್ಣವಾಗಿ ಗುಣಮುಖರಾದ ಇಬ್ಬರು ನಾವಿಕರು ಎಲ್ಲರ ಕಣ್ಣೆದುರೇ ಇದ್ದರು.

ಆದರೆ, ದುರದೃಷ್ಟಾವಶಾತ್ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣ, ಜೇಮ್ಸ್ ಲಿಂಡ್ ಅವರ ಅಮೂಲ್ಯ ಸಂಶೋಧನೆಯ ಲಾಭ ಆ ಬಡಪಾಯಿ ನಾವಿಕರಿಗೆ ದೊರೆಯಲಿಲ್ಲ. ಹುಳಿಹಣ್ಣು ಗಳನ್ನು ಹಡಿಗಿನೊಳಗೆ ತೆಗೆದುಕೊಂಡು ಹೋಗಲು, ಸಂಗ್ರಹಿಸಿಟ್ಟುಕೊಳ್ಳಲು ಹಾಗೂ ನಿತ್ಯ ತಿನ್ನಲು ಯಾವುದೇ ಅಡ್ಡಿಯಿರಲಿಲ್ಲ. ಅವರು ಧಾರಾಳವಾಗಿ ಹುಳಿಹಣ್ಣುಗಳನ್ನು ತಮ್ಮೊಡನೆ ಇಟ್ಟುಕೊಳ್ಳ ಬಹುದಾಗಿತ್ತು. ಆದರೆ, ಬ್ರಿಟಿಷ್ ನೌಕಾಪಡೆಯ ಉನ್ನತ ಅಧಿಕಾರಿಗಳು ಮತ್ತು ಲಂಡನ್‌ನ ಸುಶಿಕ್ಷಿತ ವೈದ್ಯರು ಹುಳಿಹಣ್ಣುಗಳು ಸ್ಕರ್ವಿಯನ್ನು ಗುಣಪಡಿಸುತ್ತವೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ನಿರಾಕರಣೆಯ ಹಿಂದೆ ಕೆಲವು ಪ್ರಮುಖ ಸಾಂಸ್ಕೃತಿಕ ಮತ್ತು ಆರ್ಥಿಕ ಕಾರಣ ಗಳಿದ್ದವು:

೧. ವೈಜ್ಞಾನಿಕ ಮತ್ತು ವರ್ಗೀಯ ಅಹಂಕಾರ: ಲಂಡನ್‌ನ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಓದಿದ ಪ್ರತಿಷ್ಠಿತ ವೈದ್ಯರಿಗೆ ಹಡಗಿನ ಸಾಮಾನ್ಯ ಸರ್ಜನ್ ಒಬ್ಬ ಹೇಳಿದ ಲಿಂಬೆಹಣ್ಣಿನ ಉಪಾಯ ತುಂಬಾ ಹಗುರವಾಗಿ ಕಂಡಿತು. ರೋಗಕ್ಕೆ ದೇಹದ ಒಳಗಿನ ದ್ರವಗಳ ತಾಪಮಾನವನ್ನು ಸಮತೋಲನಗೊಳಿಸುವ ದೊಡ್ಡ ಚಿಕಿತ್ಸೆ ಬೇಕೇ ಹೊರತು, ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಹಣ್ಣುಗಳು ಅದನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬ ಭ್ರಮೆ ಅವರದಾಗಿತ್ತು.

೨. ತಪ್ಪು ಸಂಸ್ಕರಣೆ ಮತ್ತು ಆರ್ಥಿಕತೆ: ಲಿಂಬೆ ಮತ್ತು ಕಿತ್ತಳೆ ಹಣ್ಣುಗಳು ಬೇಗನೆ ಕೊಳೆಯು ತ್ತಿದ್ದರಿಂದ ಅವುಗಳನ್ನು ದೀರ್ಘಕಾಲ ಸಂರಕ್ಷಿಸಲು ನೌಕಾಪಡೆಯು ಅದರ ರಸವನ್ನು ಕುದಿಸಿ ‘ರೋಬ್’ ಎಂ ಸಿರಪ್ಪನ್ನು ಸಿದ್ಧಪಡಿಸಿತು. ಆದರೆ, ತಾಮ್ರದ ಪಾತ್ರೆಗಳಲ್ಲಿ ರಸವನ್ನು ಕುದಿಸುವಾಗ, ಹಣ್ಣಿನ ರಸದಲ್ಲಿ ಇದ್ದ ಮುಖ್ಯ ಪೋಷಕಾಂಶವಾದ ವಿಟಮಿನ್-ಸಿ ಸಂಪೂರ್ಣ ನಾಶವಾಗಿ ಹೋಗುತ್ತಿತ್ತು. ಈ ರೋಬ್‌ರಸವನ್ನು ಕುಡಿದವರಿಗೂ ಸ್ಕರ್ವಿ ಬರಲಾರಂಭಿಸಿತು. ವಿಟಮಿನ್-ಸಿ ಎಂಬ ಪೋಷಕಾಂಶ ಇರುವ ಬಗ್ಗೆ ಆಗ ಯಾರಿಗೂ ತಿಳಿದಿರದ ಕಾರಣ, ಲಿಂಡ್ ಅವರ ಸಿದ್ಧಾಂತ ತಪ್ಪು ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದರು.

೩. ಪರ್ಯಾಯ ಹುಸಿ ಆವಿಷ್ಕಾರಗಳು: ನೌಕಾಪಡೆಯು ಜೇಮ್ಸ್ ಲಿಂಡ್ ಅವರ ಸಂಶೋಧನೆ ಯನ್ನು ಬದಿಗಿಟ್ಟು, ಮಾಲ್ಟ್ ಅಥವಾ ಹಸಿ ಕೋಸುಗಡ್ಡೆಯ ರಸವನ್ನು ಚಿಕಿತ್ಸೆಯಾಗಿ ಬಳಸಲು ಉತ್ತೇಜನ ನೀಡಿತು. ಇದು ರೋಗವನ್ನು ತಡೆಯಲು ವಿಫಲವಾಯಿತು.

ಹೀಗಾಗಿ, ಜೇಮ್ಸ್ ಲಿಂಡ್ ತಮ್ಮ ಪ್ರಯೋಗವನ್ನು ನಡೆಸಿ ಸುಮಾರು 50 ವರ್ಷಗಳಾದರೂ, ಅದರ ಮಹತ್ವವನ್ನು ಬ್ರಿಟಿಷ್ ಅಧಿಕಾರಿಗಳು ತಿಳಿಯಲು ಅಸಮರ್ಥರಾದರು. ಬರೋಬ್ಬರಿ ಅರ್ಧ ಶತಮಾನದ ಕಾಲ ಸ್ಕರ್ವಿ ರಕ್ಕಸ ಲಕ್ಷಾಂತರ ನಾವಿಕರನ್ನು ಕೊಲ್ಲುತ್ತಲೇ ಇದ್ದ!

ಆ ಅಸಹಾಯಕ ನಾವಿಕರ ದೇಹಗಳು ಸಮುದ್ರದ ತಳವನ್ನು ಸೇರುತ್ತಲೇ ಇದ್ದವು. ಹುಳಿಹಣ್ಣುಗಳು ಸ್ಕರ್ವಿಯನ್ನು ತಡೆಯುತ್ತದೆ ಎಂಬ ಪ್ರತ್ಯಕ್ಷ ಪುರಾವೆಯಿದ್ದರೂ, ಅದನ್ನು ಅರಿಯುವ ಸಾಮಾನ್ಯ ತಿಳಿವಳಿಕೆ ಅಂದಿನ ವೈದ್ಯರಿಗೆ ಹಾಗೂ ಹಡಗಿನ ಅಧಿಕಾರಿಗಳಿಗೆ ಇರದಿದ್ದ ಕಾರಣ, ನಾವಿಕರು ಹುಳುಗಳಂತೆ ನಿರಂತರವಾಗಿ ಸಾಯುತ್ತಲೇ ಹೋಗುವುದು ಅನಿವಾರ್ಯವಾಯಿತು.

ಲಿಂಬೆ ದಂಗೆ ಮತ್ತು ಬ್ರಿಟಿಷ್ ಸಾಮ್ರಾಜ್ಯದ ಉದಯ: ಕೊನೆಗೆ, 1795ರಲ್ಲಿ ನೌಕಾಪಡೆಯ ಪ್ರಮುಖ ವೈದ್ಯಕೀಯ ಅಧಿಕಾರಿ ಗಿಲ್ಬರ್ಟ್ ಬ್ಲೇನ್ ಅವರ ಶ್ರಮದ ಫಲವಾಗಿ ಬ್ರಿಟಿಷ್ ನೌಕಾಪಡೆ ಯಲ್ಲಿ ನಾವಿಕರಿಗೆ ಕಡ್ಡಾಯವಾಗಿ ದಿನಕ್ಕೆ ಮುಕ್ಕಾಲು ಔನ್ಸ್ ಲಿಂಬೆರಸ ಕೊಡುವ ನಿಯಮ ಜಾರಿಗೆ ಬಂತು. ಇದನ್ನು ನೌಕಾಪಡೆಯ ಇತಿಹಾಸದಲ್ಲಿ ಒಂದು ದೊಡ್ಡ ಆಡಳಿತಾತ್ಮಕ ಬದಲಾವಣೆ ಅಥವಾ ‘ಲಿಂಬೆ ದಂಗೆ’ ಎನ್ನಬಹುದು. ಇದಾದ ನಂತರವೇ ಬ್ರಿಟಿಷ್ ನಾವಿಕರಿಗೆ ಜಗತ್ತಿನಾದ್ಯಂತ ‘ಲೈಮಿಸ್’ (ನಿಂಬಿಗರು) ಎಂಬ ಅಡ್ಡಹೆಸರು ಬಂದಿತು.

ನೆಪೋಲಿಯನ್ ವಿರುದ್ಧದ ಯುದ್ಧದಲ್ಲಿ ಫ್ರೆಂಚ್ ಮತ್ತು ಸ್ಪ್ಯಾನಿಷ್ ನೌಕಾಪಡೆಗಳು ಸ್ಕರ್ವಿಯಿಂದ ತತ್ತರಿಸುತ್ತಿದ್ದರೆ, ಬ್ರಿಟಿಷ್ ನಾವಿಕರು ಲಿಂಬೆರಸದ ಬಲದಿಂದ ಆರೋಗ್ಯವಾಗಿದ್ದರು. ಬ್ರಿಟಿಷರು ಜಗತ್ತಿನಾದ್ಯಂತ ತಮ್ಮ ವಸಾಹತುಶಾಹಿ ಸಾಮ್ರಾಜ್ಯವನ್ನು ವಿಸ್ತರಿಸಲು ಮತ್ತು ಸಮುದ್ರದ ಮೇಲೆ ಏಕಸ್ವಾಮ್ಯ ಸಾಧಿಸಲು ಈ ಪುಟ್ಟ ಲಿಂಬೆಹಣ್ಣು ಪ್ರಮುಖ ಕಾರಣವಾಯಿತು ಎಂದರೆ ಆಶ್ಚರ್ಯವೇನಿಲ್ಲ.

ಆಧುನಿಕ ಪ್ರಸ್ತುತತೆ: 1930ರಲ್ಲಿ ಹಂಗೇರಿಯನ್ ಜೈವಿಕ ರಸಾಯನಶಾಸ್ತ್ರಜ್ಞ ಆಲ್ಬರ್ಟ್ ಸೆಂಟ್-ಗ್ಯೋಗಿರ್ ಲಿಂಬೆಯಲ್ಲಿದ್ದ ಆ ರಹಸ್ಯ ಆಮ್ಲವನ್ನು ಬೇರ್ಪಡಿಸಿ ಅದಕ್ಕೆ ‘ಆಸ್ಕಾರ್ಬಿಕ್ ಆಸಿಡ್’ ಅಥವಾ ‘ವಿಟಮಿನ್-ಸಿ’ ಎಂದು ಹೆಸರಿಟ್ಟರು (ಇದಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು).

ಮಾನವನ ದೇಹವು ಸ್ವತಃ ವಿಟಮಿನ್-ಸಿ ಉತ್ಪಾದಿಸಿಕೊಳ್ಳಲಾರದು ಮತ್ತು ಅದನ್ನು ಶೇಖರಿಸಿಟ್ಟು ಕೊಳ್ಳಲಾರದು. ಹಾಗಾಗಿ ಅದನ್ನು ಪ್ರತಿದಿನ ಆಹಾರದ ಮೂಲಕವೇ ಪಡೆಯಬೇಕು ಎಂಬ ಸತ್ಯವು ಇಡೀ ಜಗತ್ತಿಗೆ ಮನವರಿಕೆಯಾಯಿತು. ಆದರೆ... ಪ್ರಸ್ತುತ ಜಂಕ್ ಫುಡ್ ವ್ಯಾಮೋಹಕ್ಕೆ ಬಲಿಯಾ ಗಿರುವ ನಮ್ಮ ಯುವಜನತೆಯು ಸಬ್-ಕ್ಲಿನಿಕಲ್ ವಿಟಮಿನ್-ಸಿ ಡೆಫಿಶಿಯನ್ಸಿಗೆ ತುತ್ತಾಗಿದೆ. ಇದು ಅತ್ಯಂತ ವಿಷಾಧನೀಯ. ಹಾಗಾಗಿ ಮನೆಯಲ್ಲಿರುವ ಪ್ರತಿಯೊಬ್ಬರು ದಿನಕ್ಕೆ ಒಂದು ಹುಳಿಹಣ್ಣನ್ನು ತಿನ್ನುವ ಪ್ರತಿಜ್ಞೆಯನ್ನು ಕೈಗೊಳ್ಳೋಣ.