ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ʼರೋಮ್‌ʼನ ಭೂಮಿಯೊಳಗಿನ ಪ್ರಪಂಚ

ಒಂದು ಅಂದಾಜಿನ ಪ್ರಕಾರ, ಕ್ರಿಸ್ತ ಶಕ ೮೦ರ ದಶಕದಲ್ಲಿ ರೋಮ ನಗರದ ಜನಸಂಖ್ಯೆಯು ಹತ್ತು ಲಕ್ಷವಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಹತ್ತು ಲಕ್ಷ ಜನಸಂಖ್ಯೆಯ ಬೃಹತ್ ನಗರ ವೊಂದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸುಲಭದ ಕೆಲಸ ವಾಗಿರಲಿಲ್ಲ.

Mohan Vishwa Column: ʼರೋಮ್‌ʼನ ಭೂಮಿಯೊಳಗಿನ ಪ್ರಪಂಚ

-

ವೀಕೆಂಡ್‌ ವಿತ್‌ ಮೋಹನ್

ಯುರೋಪಿನಲ್ಲಿ ಕುಡಿಯಲು ‘ಮಿನರಲ್ ವಾಟರ್’ ಅನ್ನು ಕೇಳಿದರೆ ನಗೆಪಾಟಲಿಗೆ ಗುರಿಯಾದ ಹಾಗೆ, ಅಲ್ಲಿನ ಬಹುತೇಕ ದೇಶಗಳಲ್ಲಿ ಶೌಚಾಲಯದಲ್ಲಿ ಬರುವ ನೀರನ್ನೂ ಕುಡಿಯಬಹುದು. ರೋಮ್ ನಗರದ ಬಹುತೇಕ ಗಲ್ಲಿಗಳಲ್ಲಿ ಕಾಣಸಿಗುವ ನಲ್ಲಿಗಳಲ್ಲಿನ, ಕಾರಂಜಿಗಳಲ್ಲಿನ ನೀರೂ ಕುಡಿಯಲು ಯೋಗ್ಯವಾಗಿವೆ.

ಪುರಾತನ ವಾಸ್ತುಶಿಲ್ಪಗಳಿಗೆ ಪ್ರಸಿದ್ಧವಾಗಿರುವ ಮಾಯಾನಗರಿ ರೋಮ. ಈ ನಗರದ ಬೀದಿಗಳಲ್ಲಿ ಓಡಾಡುವುದು ಅದ್ಭುತ ಅನುಭವವೇ ಸರಿ. ರೋಮ್ ನಗರದಲ್ಲಿ ನೂರಾರು ವರ್ಷಗಳಿಂದ ಗಟ್ಟಿಯಾಗಿ ನೆಲೆಯೂರಿರುವ ಪ್ರಾಚೀನ ಮನೆಗಳ ಮೆಟ್ಟಿಲುಗಳ ಮೇಲೆ ಓಡಾಡುವುದು ಮತ್ತೊಂದು ರೀತಿಯ ಅದ್ಭುತ ಅನುಭವ.

ರೋಮ್ ನಗರದ ಹಲವು ಮನೆಗಳ ಮುಖ್ಯದ್ವಾರಗಳು ಕಡಿಮೆಯೆಂದರೂ ಒಂದು ಕ್ವಿಂಟಾಲ್ ತೂಕವಿರುತ್ತವೆ. ಕ್ರಿಸ್ತಶಕ ೮೦ರಲ್ಲಿ ರೋಮನ್ನರು ತಮ್ಮ ಸಾಮ್ರಾಜ್ಯ ವಿಸ್ತರಣೆ ಯ ಜತೆಗೆ ಪ್ರಜೆಗಳ ನಾಗರಿಕತೆಯ ಬಗ್ಗೆಯೂ ಹೆಚ್ಚಿನ ಗಮನ ಹರಿಸಿದ್ದರು.

ಒಂದು ಅಂದಾಜಿನ ಪ್ರಕಾರ, ಕ್ರಿಸ್ತ ಶಕ ೮೦ರ ದಶಕದಲ್ಲಿ ರೋಮ ನಗರದ ಜನಸಂಖ್ಯೆಯು ಹತ್ತು ಲಕ್ಷವಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಹತ್ತು ಲಕ್ಷ ಜನಸಂಖ್ಯೆಯ ಬೃಹತ್ ನಗರವೊಂದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸುಲಭದ ಕೆಲಸವಾಗಿರಲಿಲ್ಲ. ಇಂದಿನ ಕಾಲದ ಮೆಟ್ರೋ ನಗರಗಳಿಗೆ ಸರಿಸಮಾನವಾದ ಮೂಲಭೂತ ಯೋಜನೆಗಳನ್ನು ರೋಮನ್ನರು ತಮ್ಮ ಪ್ರಜೆಗಳಿಗೆ ಬಹಳ ಹಿಂದೆಯೇ ನೀಡಿದ್ದರೆಂಬುದಕ್ಕೆ, ನಿರ್ಮಾಣವಾಗಿದ್ದ ಹಲವು ಯೋಜನೆಗಳ ಕುರುಹು ಇಂದಿಗೂ ಅಲ್ಲಿ ಕಾಣಸಿಗುತ್ತವೆ.

ಇದನ್ನೂ ಓದಿ: Mohan Vishwa Column: ವಿದ್ಯಾವಂತರು ಭಯೋತ್ಪಾದಕರಾದರೆ ಕಥೆ ಏನು ?

ರೋಮನ್ನರು ವಾಸ್ತುಶಿಲ್ಪಗಳಿಗೆ ಹೆಸರುವಾಸಿಯಾದವರು. ವಿವಿಧ ರೀತಿಯ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ರೋಮನ್ನರು ಪ್ರಸಿದ್ಧರಾಗಿದ್ದರು. ಇಂದಿಗೂ ಇಟಾಲಿಯನ್ ಶೈಲಿಯ ಬೃಹತ್ ಮನೆಗಳು, ಇಟಾಲಿಯನ್ ಅಡುಗೆ ಮನೆಗಳು ಜಗತ್ತಿನೆಡೆ ಪ್ರಸಿದ್ಧವಾಗಿವೆ. ಎರಡು ಸಾವಿರ ವರ್ಷಗಳ ಹಿಂದೆ ರೋಮನ್ನರು ಸಿಮೆಂಟ್ ಕಾಂಕ್ರೀಟ್ ಬಳಸುತ್ತಿದ್ದರು.

ರೋಮನ್ ಕಾಂಕ್ರೀಟ್ ಇಂದಿಗೂ ಜಗತ್ಪ್ರಸಿದ್ಧವಾಗಿದೆ. ರೋಮಿನಲ್ಲಿ ತಯಾರಿಸುವ ಕಾಂಕ್ರೀಟ್ ಮಿಶ್ರಣ ಜಗತ್ತಿನಲ್ಲಿ ಎಲ್ಲಿಯೂ ಸಿಗುವುದಿಲ್ಲ. ಇದು ಇಂದಿಗೂ ಜಗತ್ತಿನ ಅತ್ಯಂತ ಬಲವಾದ ಕಾಂಕ್ರೀಟ್ ಮಿಶ್ರಣವಾಗಿದೆ. ಈ ಮಿಶ್ರಣಗಳನ್ನು ಬಳಸಿ ಎರಡು ಸಾವಿರ ವರ್ಷಗಳ ಹಿಂದೆ ಕಟ್ಟಿದ ಕಟ್ಟಡಗಳು ರೋಮ್‌ನಲ್ಲಿ ಇಂದಿಗೂ ಗಟ್ಟಿಯಾಗಿ ನಿಂತಿವೆ.

ಜ್ವಾಲಾಮುಖಿಯ ಬೂದಿ, ಸುಣ್ಣ, ಸಮುದ್ರದ ನೀರು, Tobermite (ರಾಸಾಯನಿಕ) ಬಳಸಿ ರೋಮನ್ ಕಾಂಕ್ರೀಟ್ ಅನ್ನು ತಯಾರಿಸಲಾಗುತ್ತದೆ. ಈ ಕಾಂಕ್ರೀಟ್ ಮಿಶ್ರಣ ಕೇವಲ ೩೬ ಗಂಟೆಗಳಲ್ಲಿ ಗಟ್ಟಿಯಾಗುತ್ತದೆ. ಈ ವೈಜ್ಞಾನಿಕ ಸೂತ್ರವನ್ನು ರೋಮನ್ನರು ಎರಡು ಸಾವಿರ ವರ್ಷಗಳ ಹಿಂದೆ ಬಳಸಿ ನೂರಾರು ಕಟ್ಟಡಗಳನ್ನು ನಿರ್ಮಿಸಿದ್ದರು.

Screenshot_1 R

ಕೆಲವು ವಿಜ್ಞಾನಿಗಳು ಇಂದಿನ ಕಾಲದಲ್ಲಿ ಈ ಮಿಶ್ರಣವನ್ನು ಬಳಸುವುದರಿಂದ ಕಟ್ಟಡಗಳಲ್ಲಿ ರಾಸಾಯನಿಕ ಪ್ರಕ್ರಿಯೆಯುಂಟಾಗಿ ಬಿರುಕು ಬಿಡಬಹುದೆಂದು ಹೇಳುತ್ತಾರೆ. ರೋಮನ್ನರಿಗೆ ಪ್ರಕೃತಿಯಲ್ಲಿ ಸಿಗುತ್ತಿದ್ದ ನೈಸರ್ಗಿಕ ಸಂಪನ್ಮೂಲಗಳು ತುಂಬಾ ಅನುಕೂಲ ಕರವಾಗಿದ್ದವು. ಈ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಲೆ ರೋಮನ್ನ ರಿಗೆ ಚೆನ್ನಾಗಿ ತಿಳಿದಿತ್ತು.

ಇಂದಿಗೂ ರೋಮ್ ನಗರದ ಹಲವು ಕಡೆಗಳಲ್ಲಿ ಎರಡು ಸಾವಿರ ವರ್ಷಗಳ ಹಿಂದೆ ರೋಮನ್ನರು ನೈಸರ್ಗಿಕ ಸಂಪನ್ಮೂಲಗಳನ್ನು ಅಗೆದು ತೆಗೆಯಲು ತೋಡಿದ್ದ ಗಣಿಗಳಿವೆ. ರೋಮ್ ನಗರದಲ್ಲಿ ಇಂದಿಗೂ ಜನರು ಓಡಾಡುವ ರಸ್ತೆಗಳ ಕೆಳಗೆ ಅದೆಷ್ಟೋ ಗಣಿಗಳಿವೆ, ಮನೆಗಳ ಕೆಳಗಿವೆ, ಮೆಟ್ರೋ ರೈಲುಗಳು ಸಂಚರಿಸುವ ಕಂಬಿಗಳ ಕೆಳಗೆ ಗಣಿಗಳಿವೆ.

ಇಡೀ ರೋಮ್ ನಗರದಲ್ಲಿ ಇಂದಿಗೂ ಅಂದಾಜು ೭೦ ಗಣಿಗಳು ಇದೆಯೆಂದು ಹೇಳಲಾಗು ತ್ತದೆ. ಇವುಗಳ ಮೇಲೆ ರೋಮ್ ನಗರ ತನ್ನ ಪ್ರಾಚೀನತೆಯನ್ನು ಉಳಿಸಿ ಕೊಳ್ಳುವುದರ ಜತೆಗೆ ಆಧುನಿಕ ಅಭಿವೃದ್ಧಿಯನ್ನೂ ಕೈಗೊಂಡಿರುವುದು ವಿಶೇಷ.

ರೋಮನ್ನರ ವಾಸ್ತುಶಿಲ್ಪ ಹಾಗೂ ವೈಜ್ಞಾನಿಕ ಆವಿಷ್ಕಾರಗಳಿಗೆ ಅದ್ಭುತ ಸಾಕ್ಷಿಯೆಂಬಂತೆ ರೋಮ್ ನಗರದ ಹೃದಯಭಾಗದಲ್ಲಿದೆ Pantheon ದೇವಸ್ಥಾನ. ಕ್ರಿಸ್ತಶಕ 113ರಿಂದ 125 ರ ನಡುವೆ ಕಟ್ಟಿರುವ ಈ ದೇವಸ್ಥಾನದ ವಾಸ್ತುಶಿಲ್ಪ ಇಂದಿಗೂ ಪ್ರವಾಸಿಗರನ್ನು ಆಕರ್ಷಿಸು ತ್ತದೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆ ದೇವಸ್ಥಾನದ ಮೇಲಿರುವ ಬೃಹತ್ Dome ಅಥವಾ ಗುಮ್ಮಟ.

ಕಂಬಿಗಳಿಲ್ಲದೆ ವೃತ್ತಾಕಾರದ ಗುಮ್ಮಟವನ್ನು ಕಟ್ಟುವುದು ಸಾಧ್ಯವಿಲ್ಲದ ಕಾಲದಲ್ಲಿ ಕೇವಲ ಸಿಮೆಂಟ್ ಕಾಂಕ್ರೀಟ್ ಬಳಸಿ ಈ ಬೃಹತ್ ಗುಮ್ಮಟವನ್ನು ಕಟ್ಟಲಾಗಿದೆ. ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಿರುವ ಈ ಗುಮ್ಮಟ ಇಂದಿಗೂ ಜಗತ್ತಿನ ಅತಿ ದೊಡ್ಡ ಪುರಾತನ ಗುಮ್ಮಟವಾಗಿದೆ.

ಸುಮಾರು ೨೦ ಮೀಟರ್ ಸುತ್ತಳತೆಯ ಈ ಗುಮ್ಮಟವನ್ನು ಕಟ್ಟಲು ಸುತ್ತಲೂ ಎಂಟು ಕಂಬಗಳನ್ನು ಬಳಸಲಾಗಿದೆ. ಗುಮ್ಮಟದ ಕೆಳಗಿನ ಎಂಟು ಕಂಬಗಳ ಮೇಲೆ ಗುಮ್ಮಟದ ತೂಕವನ್ನು ಎಂಟು ದಿಕ್ಕುಗಳಿಂದಲೂ ಸಮತೋಲನವಾಗಿ ಇರುವಂತೆ ಈ ವಾಸ್ತುಶಿಲ್ಪ ವನ್ನು ನಿರ್ಮಿಸಲಾಗಿದೆ.

ಈ ವೈಜ್ಞಾನಿಕ ವಿಧಾನದ ಫಲವಾಗಿ ಇಂದಿಗೂ ಕಂಬಿಗಳ ಸಹಾಯವಿಲ್ಲದೆ ಬೃಹತ್ ಗುಮ್ಮಟವು ಕೊಂಚವೂ ಹಾನಿಯಾಗದೆ ಸುಮಾರು ಎರಡು ಸಾವಿರ ವರ್ಷಗಳ ನಂತರವೂ ಗಟ್ಟಿಯಾಗಿ ನಿಂತಿದೆ. ರೋಮ ನಗರಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರು Colosseum ಗೆ ಭೇಟಿ ನೀಡದೆ ಇರುವುದಿಲ್ಲ.

ಕ್ರಿಸ್ತಶಕ ೮೦ರ ದಶಕದಲ್ಲಿ ರೋಮನ್ನರು ಈ ಕ್ರೀಡಾಂಗಣವನ್ನು ನಿರ್ಮಿಸಿದ್ದರು. ಸುಮಾರು ೬೦ ಸಾವಿರ ಜನರು ಕೂರಬಹುದಾದ ಬಹು ದೊಡ್ಡ ಕ್ರೀಡಾಂಗಣವಿದು. ಅಂದಿನ ಕಾಲ ದಲ್ಲಿ ವೀಕ್ಷಕರಿಗಾಗಿ ಸಾರ್ವಜನಿಕ ಶೌಚಾಲಯಗಳನ್ನು ಈ ಕ್ರೀಡಾಂಗದಲ್ಲಿ ಕಟ್ಟಲಾಗಿತ್ತು. ಶಕ್ತಿ ಪ್ರದರ್ಶಿಸಲು Gladiator ಗಳಿಗೆ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿತ್ತು. Gladia tor ಗಳಿಗೆ ತಾವು ಸೆಣಸಾಡಿ ಕೊಲ್ಲಲು ಯಾವ ಪ್ರಾಣಿ ವೇದಿಕೆಯ ಮೇಲೆ ಬರುತ್ತದೆ ಯೆಂಬ ಊಹೆ ಇರುತ್ತಿರಲಿಲ್ಲ.

ನೆಲಮಾಳಿಗೆಯಿಂದ ಅವರ ಮುಂದೆ ಯಾವ ಕಾಡುಮೃಗ ಬೇಕಾದರೂ ಬರಬಹುದಿತ್ತು. ನೆಲಮಾಳಿಗೆಯಲ್ಲಿ ಈ ಮೃಗಗಳನ್ನು ಮೇಲಕ್ಕೆ ಕಳುಹಿಸಲು Manual Lift ಗಳನ್ನು ರೋಮ ನ್ನರು ಬಳಸುತ್ತಿದ್ದರು. ಈ ಲಿಫ್ಟ್‌ ಗಳು ಕೈಕೊಟ್ಟರೆ ಮೆಟ್ಟಿಲುಗಳ ಮೂಲಕ ಸೇವಕರು ಪಂಜರದೊಳಗಿನ ಕಾಡುಮೃಗಗಳನ್ನು ಮೇಲೆತ್ತಲು ವ್ಯವಸ್ಥೆಯನ್ನು ಮಾಡುತ್ತಿದ್ದರು.

ಇಂದಿನ ಕಾಲದ ಕ್ರೀಡಾಂಗಣದಲ್ಲಿ ವಿಐಪಿಗಳು ಕುಳಿತುಕೊಳ್ಳುವ ವ್ಯವಸ್ಥೆ ಇರುವ ಹಾಗೆ, Colosseum ನಲ್ಲಿಯೂ ವಿಐಪಿಗಳಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು. ರೋಮ್ ನಗರದ ಮಧ್ಯಭಾಗದಲ್ಲಿರುವ ಈ ವಾಸ್ತುಶಿಲ್ಪವು ಜಗತ್ತಿನ ಪ್ರವಾಸಿಗರನ್ನು ವರ್ಷವಿಡೀ ಆಕರ್ಷಿಸುತ್ತದೆ. Colosseum ಕೂಡ ರೋಮನ್ನರ ಸಿಮೆಂಟ್ ಕಾಂಕ್ರೀಟ್‌ ನಿಂದಲೇ ನಿರ್ಮಾಣವಾಗಿರುವುದರಿಂದ ಹಲವು ದಾಳಿಗಳ ನಂತರವೂ, 2000 ವರ್ಷಗಳ ಬಳಿಕವೂ ತನ್ನ ಕುರುಹುಗಳನ್ನು ಉಳಿಸಿಕೊಂಡಿದೆ.

ಯುರೋಪಿನಲ್ಲಿ ಕುಡಿಯಲು ‘ಮಿನರಲ್ ವಾಟರ್’ ಅನ್ನು ಕೇಳಿದರೆ ನಗೆಪಾಟಲಿಗೆ ಗುರಿಯಾದ ಹಾಗೆ, ಅಲ್ಲಿನ ಬಹುತೇಕ ದೇಶಗಳಲ್ಲಿ ಶೌಚಾಲಯದಲ್ಲಿ ಬರುವ ನೀರನ್ನೂ ಕುಡಿಯಬಹುದು. ರೋಮ್ ನಗರದಲ್ಲಿ ಬೀದಿಯಲ್ಲಿ ಕಾಣ ಸಿಗುವ ನಲ್ಲಿಗಳಲ್ಲಿ ನೀರು ಕುಡಿಯಬಹುದು.

ರೋಮ್ ನಗರದ ಬಹುತೇಕ ಗಲ್ಲಿಗಳಲ್ಲಿ ಕಾಣಸಿಗುವ ನೀರಿನ ನಲ್ಲಿಗಳಲ್ಲಿನ ನೀರು ಕುಡಿಯಲು ಯೋಗ್ಯವಾಗಿವೆ. ಇದರ ಜತೆಗೆ ನಗರದ ನೀರಿನ ಕಾರಂಜಿಗಳಲ್ಲಿನ ನೀರೂ ಕುಡಿಯಲು ಯೋಗ್ಯವಾದದ್ದು. ರೋಮ್ ನಗರಕ್ಕೆ ನೀರನ್ನು ಒದಗಿಸುವ ನದಿ ಟೈಬರ್. ಸುಮಾರು ಎರಡು ಸಾವಿರ ವರ್ಷಗಳಿಂದ ಈ ನದಿಯ ನೀರನ್ನು ಅಲ್ಲಿಯ ಜನ ಕುಡಿಯು ತ್ತಿದ್ದಾರೆ.

ಕ್ರಿಸ್ತಶಕ 100ರ ಆಸುಪಾಸಿನಲ್ಲಿ ರೋಮ್ ನಗರದ ಜನತೆಯ ನೀರಿನ ದಾಹ ನೀಗಿಸುವ ಸಲುವಾಗಿ ಅಂದಿನ ರಾಜ ಟೈಬರ್ ನದಿಯಿಂದ ಸುಮಾರು ೨೦ ಕಿಲೋಮೀಟರ್‌ಗಳ ಉದ್ದದ ದೊಡ್ಡ ಸುರಂಗಗಳನ್ನು ನಿರ್ಮಿಸಿ ಅದರ ಮೂಲಕ ಜನರಿಗೆ ನೀರನ್ನು ಒದಗಿಸು ತ್ತಿದ್ದ. ರೋಮ್ ನಗರದ ಸುಮಾರು ೨೫ ಮೀಟರ್ ಆಳಕ್ಕೆ ಹೋದರೆ ಇಂದಿಗೂ ಆ ಸುರಂಗ ವನ್ನು ಕಾಣಬಹುದು. ಇಂದಿಗೂ ಆ ಸುರಂಗದಲ್ಲಿ ನೀರು ಹರಿಯುತ್ತದೆ.

ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿತವಾದ ಈ ಸುರಂಗ ರೋಮ್ ನಗರದ ಜನರ ನೀರಿನ ಜೀವನಾಡಿಯಾಗಿತ್ತು. ಭೌತಶಾಸದ ಪ್ರಯೋಗದ ಮೂಲಕ 2000 ವರ್ಷಗಳ ಹಿಂದೆಯೇ ನೀರು ಸುಗಮವಾಗಿ ಹರಿಯಲೆಂದು ಈ ದೊಡ್ಡ ಸುರಂಗವನ್ನು ನಿರ್ಮಿಸ ಲಾಗಿತ್ತು. 2000 ವರ್ಷಗಳು ಕಳೆದರೂ ‘ಜಲನಿರೋಧಕ’ ಸಿಮೆಂಟಿನ ಪ್ರಭಾವದಿಂದ ಈ ಸುರಂಗ ಇಂದಿಗೂ ಸುರಕ್ಷಿತವಾಗಿದೆ. ಈ ಸುರಂಗದ ಮೇಲೆ ಇಂದು ಬಸ್ಸುಗಳು ಓಡಾಡು ತ್ತವೆ, ಮೆಟ್ರೋ ರೈಲುಗಳು, ಟ್ರಾಮ್‌ಗಳು ಓಡಾಡುತ್ತವೆ, ಆದರೂ ಈ ಸುರಂಗ ಸುರಕ್ಷಿತ ವಾಗಿದೆ.

ಟೈಬರ್ ನದಿಯಿಂದ ರೋಮ್ ನಗರಕ್ಕೆ ಕುಡಿಯುವ ನೀರು ಪೂರೈಸಲು ಈ ಮಾದರಿಯ ಸುಮಾರು ೨೦ ಸುರಂಗಗಳಿವೆ. ರೋಮ್ ನಗರದ ವಿಶ್ವವಿಖ್ಯಾತ Trevi Fountain ಗೆ ಇಂದಿಗೂ ಈ ಸುರಂಗದ ಮೂಲಕವೇ ನೀರಿನ ಪೂರೈಕೆಯಾಗುತ್ತದೆ. 2000 ವರ್ಷಗಳ ಹಿಂದೆ ರೋಮನ್ನರು ನಗರದ ಹಲವೆಡೆ ಸಾರ್ವಜನಿಕ ಶೌಚಗೃಹ ಹಾಗೂ ಸ್ನಾನಗೃಹ ಗಳನ್ನು ನಿರ್ಮಿಸಿದ್ದರು.

ಈ ಶೌಚಗೃಹಗಳಿಂದ ಹೊರ ಬರುವ ನೀರನ್ನು ಜಾಗರೂಕತೆಯಿಂದ ನಗರದ ಹೊರಗಡೆ ಕಳುಹಿಸಬೇಕಿತ್ತು. ನೀರಿನ ಪೂರೈಕೆಗೆ ಸುರಂಗವನ್ನು ನಿರ್ಮಿಸಿದ ರೀತಿಯಲ್ಲಿ ರೋಮನ್ನರು ಈ ನೀರನ್ನು ನಗರದಿಂದ ಹೊರ ಹಾಕಲು ಮತ್ತೊಂದು ದೊಡ್ಡ ಸುರಂಗವನ್ನು ಕೊರೆದಿ ದ್ದರು. ಎರಡು ಸಾವಿರ ವರ್ಷಗಳ ಹಿಂದೆ ಕೊರೆದ ಈ ಸುರಂಗ ರೋಮ್ ನಗರದಲ್ಲಿ ಇಂದಿಗೂ ಇದೆ ಮತ್ತು ಇಂದಿಗೂ ಇಲ್ಲಿ ನೀರು ಹರಿಯುತ್ತದೆ. ಈ ಸುರಂಗವನ್ನೂ ರೋಮನ್ ಸಿಮೆಂಟ್ ಕಾಂಕ್ರೀಟ್‌ನಿಂದ ನಿರ್ಮಾಣ ಮಾಡಲಾಗಿದೆ.

ಸುರಂಗದ ಒಳಹೊಕ್ಕರೆ ರೋಮನ್ನರು ಸುರಂಗದ ಮೇಲ್ಪದರವನ್ನು ಸಿಮೆಂಟ್‌ನಿಂದ ಮುಚ್ಚಿರುವುದನ್ನು ಕಾಣಬಹುದು. ಈ ಸುರಂಗದ ತಳಭಾಗ, ಅಂದರೆ ನೀರು ಹರಿಯುವ ಭಾಗದ ಮೇಲೆ ಹಾಸಿರುವ ಕಲ್ಲು ಬಹಳ ವಿಶಿಷ್ಟವಾಗಿದೆ. ನೀರಿನ ಸರಾಗ ಹರಿವನ್ನು ಹೆಚ್ಚಿಸಲು ಈ ವಿಶಿಷ್ಟ ಕಲ್ಲನ್ನು ಬಳಸಿಕೊಳ್ಳಲಾಗಿದೆ. ಈ ಸುರಂಗದೊಳಗೆ ಪ್ರವಾಹ ಬಂದಾಗ ಹರಿದಿರುವ ನೀರಿನ ಕುರುಹುಗಳನ್ನು ಇಂದಿಗೂ ಕಾಣಬಹುದು.

ನಗರದ ಕಲುಷಿತ ನೀರನ್ನು ಹೊರ ಹಾಕಲು ರೋಮ್ ನಗರದಲ್ಲಿ ಸುಮಾರು 74 ಸುರಂಗ ಗಳು ಇಂದಿಗೂ ಕಾಣಸಿಗುತ್ತವೆ. ಪ್ರಾಚೀನ ರೋಮ್ ನಾಗರಿಕತೆಯ ಮತ್ತೊಂದು ವೈಶಿಷ್ಟ್ಯ ವೆಂದರೆ, ಭೂಮಿಯ ಒಳಗಡೆ ಇರುವ ‘ಸ್ಮಶಾನಗಳು’. Roman Catacombs ಗಳೆಂದು ಕರೆಯುವ ಈ ಭೂಮಿಯೊಳಗಿನ ಸ್ಮಶಾನಗಳನ್ನು ಎರಡನೆಯ ಶತಮಾನದಲ್ಲಿ ರೋಮ್ ನಗರದಲ್ಲಿ ನಿರ್ಮಿಸಲಾಗಿತ್ತೆಂದು ಹೇಳುತ್ತಾರೆ.

ಸುಮಾರು 2000 ಮೃತದೇಹಗಳನ್ನು ಹೂಳುವ ಸಾಮರ್ಥ್ಯವಿರುವ ಈ ಭೂಮಿಯೊಳಗಿನ ಸ್ಮಶಾನಗಳನ್ನು ಇಂದಿಗೂ ರೋಮ್ ನಗರದ ನೆಲಮಾಳಿಗೆಯಲ್ಲಿ ಕಾಣಬಹುದು. ಸುಮಾರು 800 ಮೀಟರ್ ಉದ್ದವಿರುವ ಈ ನೆಲಮಾಳಿಗೆಗಳಲ್ಲಿ ಕ್ರಿಶ್ಚಿಯನ್ ಸಂಪ್ರದಾಯ ದಂತೆ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲಾಗಿದೆ.

ಮೃತದೇಹಗಳನ್ನು ಮಣ್ಣಿನ ಗೋಡೆಗಳಲ್ಲಿ ಹೂಳಲು ನೆಲಮಾಳಿಗೆಯ ಸ್ಮಶಾನದಲ್ಲಿ ನಿರ್ಮಿಸಿರುವ ಕಪಾಟು ಮಾದರಿಯ ವಿನ್ಯಾಸಗಳು ಇಂದಿಗೂ ಹಾಗೆಯೆ ಉಳಿದಿವೆ. ರೋಮ್ ನಗರದ ಮನೆಗಳ ಕೆಳಗೆ ಇಂದಿಗೂ ಪುರಾತನ ಸ್ಮಶಾನಗಳಿರುವುದು ಅಲ್ಲಿನ ಜನರಿಗೆ ತಿಳಿದಿದೆ. ರೋಮ್ ನಗರದಲ್ಲಿ ನೆಲಮಾಳಿಗೆಯಲ್ಲಿ ಸುಮಾರು ೪೦ಕ್ಕೂ ಹೆಚ್ಚಿನ ಸ್ಮಶಾನಗಳಿವೆಯೆಂದು ಪುರಾತತ್ವ ಇಲಾಖೆಯವರು ಹೇಳುತ್ತಾರೆ.

ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದಲೂ ಈ ರೀತಿಯ ನೆಲಮಾಳಿಗೆಯ ಸ್ಮಶಾನ ವನ್ನು ಕಟ್ಟಲಾಗಿತ್ತೆಂದು ಹೇಳಲಾಗುತ್ತದೆ. ಕಣ್ಣಮುಂದೆ ಕಾಣುವ ರೋಮ್ ನಗರದ ವಾಸ್ತುಶಿಲ್ಪ ಒಂದೆಡೆಯಾದರೆ, 2000 ವರ್ಷಗಳ ಹಿಂದೆ ಭೂಮಿಯೊಳಗಡೆ ರೋಮನ್ನರು ನಿರ್ಮಿಸಿರುವ ಸಾರ್ವಜನಿಕ ಮೂಲಸೌಕರ್ಯ ಸೌಲಭ್ಯಗಳು ಮತ್ತೊಂದೆಡೆ ಇಂದಿಗೂ ಬಳಕೆಯಾಗುತ್ತಿವೆ.