ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಕೃಷ್ಣ-ಸುಧಾಮರ ಅಪೂರ್ವ ಮೈತ್ರಿ

ಎಂದಿಗೆ ನಾವು ಯಾವುದೇ ಸ್ನೇಹ ಪ್ರೀತಿಯಲ್ಲಿ ಅಪೇಕ್ಷೆಯನ್ನು ಇರಿಸಿಕೊಳ್ಳದೆ ಕೊಡಲು ಸಾಧ್ಯ ವಾಗುತ್ತದೋ ಅಂದಿಗೆ ಮಾತ್ರ ಅದು ಸಾರ್ಥಕ. ನಮ್ಮ ಇಂದಿನ ಯಾಂತ್ರಿಕ ಬದುಕಿನಲ್ಲಿ, ಲಾಭ-ನಷ್ಟಗಳನ್ನು ಲೆಕ್ಕ ಹಾಕುವ ಸಂಬಂಧಗಳ ನಡುವೆ ನಾವೂ ಕೃಷ್ಣ -ಸುಧಾಮರ ಪವಿತ್ರ ಸ್ನೇಹ ದಂತಹ ಶುದ್ಧ ಭಾವನೆಯನ್ನು ಉಳಿಸಿಕೊಂಡರೆ ನಮ್ಮೊಳಗಿನ ಕೃಷ್ಣ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.

ಒಂದೊಳ್ಳೆ ಮಾತು

ಜಗತ್ತನ್ನೇ ಆಳುವ ದ್ವಾರಕಾಧೀಶ ಶ್ರೀಕೃಷ್ಣ ಒಂದು ಕಡೆಯಾದರೆ, ಹರಿದ ಹಳೆಯ ಬಟ್ಟೆ ತೊಟ್ಟು ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡ ಬ್ರಾಹ್ಮಣ ಸುಧಾಮ ಮತ್ತೊಂದು ಕಡೆ. ಇವರಿಬ್ಬರ ಸ್ನೇಹ ಕೇವಲ ಬಾಲ್ಯದ ನೆನಪಲ್ಲ, ಅದು ಅಂತರಂಗದ ಶುದ್ಧ ಪ್ರೇಮಕ್ಕೆ ಸಾಕ್ಷಿ.

ಮನೆ ತುಂಬ ಬಡತನವಿದ್ದರೂ ಸುಧಾಮ ಎಂದು ಕೂಡ ಕೃಷ್ಣನ ಬಳಿ ಸಹಾಯ ಕೇಳಲು ಬಯಸಲಿಲ್ಲ. ಆದರೆ ಪತ್ನಿಯ ಒತ್ತಾಯಕ್ಕೆ ಮಣಿದು, ತನ್ನ ಬಾಲ್ಯದ ಗೆಳೆಯನನ್ನು ನೋಡಲು ಹೊರಟ ಸುಧಾಮ ಕೈಯಲ್ಲಿ ಹಿಡಿದಿದ್ದು ಕೇವಲ ಒಂದು ಹಿಡಿ ಅವಲಕ್ಕಿ. ಜಗತ್ತಿನ ಒಡೆಯನಿಗೆ ಇದನ್ನು ಹೇಗೆ ನೀಡಲಿ? ಎಂಬ ಸಂಕೋಚ ಅವನಲ್ಲಿತ್ತು. ಆದರೆ ದ್ವಾರಕೆಯ ಅರಮನೆಯ ಬಾಗಿಲಿಗೆ ಸುಧಾಮ ಬಂದಾಗ ನಡೆದಿದ್ದೇ ಬೇರೆ.

ಸುಧಾಮನ ಸ್ಥಿತಿಯನ್ನು ನೋಡಿ ದ್ವಾರಪಾಲಕರು ಹೀಯಾಳಿಸಲಿಲ್ಲ, ಬದಲಾಗಿ ಅವನ ಹೆಸರನ್ನು ಕೇಳಿ ಕೃಷ್ಣನಿಗೆ ವಿಷಯ ಮುಟ್ಟಿಸಿದರು. ತನ್ನ ಗೆಳೆಯ ಬಂದಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ, ಕೃಷ್ಣ ಅರಮನೆಯ ಸಿಂಹಾಸನದಿಂದ ಹಾರಿ ಬಂದ.

ಇದನ್ನೂ ಓದಿ: Roopa Gururaj Column: ಇರುವೆಗಳಿಂದ ಮದ್ದು ಮಾಡಿಸಿಕೊಳ್ಳುವ ಕಾಗೆ

ಪಾದರಕ್ಷೆಯೂ ಇಲ್ಲದೆ ಓಡುತ್ತಾ ಹೋಗಿ ಸುಧಾಮನನ್ನು ಅಪ್ಪಿಕೊಂಡ. ಆ ದೃಶ್ಯ ದ್ವಾರಕೆ ಯ ಜನರಿಗೇ ಅಚ್ಚರಿ ತಂದಿತ್ತು. ಸಾಕ್ಷಾತ್ ಪರಮಾತ್ಮನೇ ಒಬ್ಬ ಬಡವನ ಪಾದ ತೊಳೆದು ಕಣ್ಣೀರಿಟ್ಟಿದ್ದ.ಕುಶಲೋಪರಿ ವಿಚಾರಿಸಿದ ನಂತರ ಕೃಷ್ಣ ಕೇಳಿದ, ‘ಗೆಳೆಯಾ, ನನಗಾಗಿ ಏನು ತಂದಿದ್ದೀಯೆ? ಸುಧಾಮ ಸಂಕೋಚದಿಂದ ಆ ಅವಲಕ್ಕಿಯ ಗಂಟನ್ನು ಬಚ್ಚಿಡಲು ಯತ್ನಿಸಿದ.

ಆದರೆ ಕೃಷ್ಣ ಹಠ ಮಾಡಿ ಅದನ್ನು ಕಿತ್ತುಕೊಂಡು, ಒಂದು ಹಿಡಿ ಅವಲಕ್ಕಿಯನ್ನು ಬಾಯಿಗೆ ಹಾಕಿಕೊಂಡ. ಆ ಒಂದು ತುತ್ತಿಗೇ ಸುಧಾಮನ ಬಡತನದ ಕರ್ಮವೆಲ್ಲ ಕರಗಿ ಹೋಗಿತ್ತು. ಎರಡನೇ ತುತ್ತು ತಿಂದಾಗ ಸುಧಾಮನ ಮನೆಯಲ್ಲಿ ಸಂಪತ್ತು ತುಂಬಿತ್ತು.

ಕೃಷ್ಣ ಸಹಾಯ ಮಾಡುವಾಗ ನಾನು ಕೊಡುತ್ತಿದ್ದೇನೆ ಎಂಬ ಅಹಂಕಾರ ತೋರಿಸಲಿಲ್ಲ, ಬದಲಾಗಿ ಗೆಳೆಯ ನೀಡಿದ ಪ್ರೀತಿಯ ಕಾಣಿಕೆಯನ್ನು ದಕ್ಕಿಸಿಕೊಳ್ಳುವ ಭಕ್ತನಾದ. ಸುಧಾಮ ತನ್ನ ಇಡೀ ಭೇಟಿಯಲ್ಲಿ ಒಮ್ಮೆಯೂ ನನಗೆ ಬಡತನ, ಸಹಾಯ ಮಾಡು ಎಂದು ಕೇಳಲೇ ಇಲ್ಲ.

ಕೃಷ್ಣನ ಪ್ರೀತಿಯಲ್ಲಿ ಮಿಂದೆದ್ದ ಅವನಿಗೆ ಲೌಕಿಕ ಆಸೆಗಳೇ ಮರೆತು ಹೋಗಿದ್ದವು. ಮೌನ ವಾಗಿಯೇ ಹಿಂದಿರುಗಿದ ಸುಧಾಮನಿಗೆ ತನ್ನ ಗುಡಿಸಲು ಈಗ ಅರಮನೆಯಾಗಿ ಮಾರ್ಪಟ್ಟಿ ರುವುದು ಕಂಡಿತು. ತಾನು ಕೇಳದೆಯೇ ಅದೆಲ್ಲವನ್ನೂ ಕೃಷ್ಣ ನೀಡಿದ್ದ. ಸುಧಾಮ ಕೃಷ್ಣನ ಬಳಿ ತನ್ನ ಸಂಕಷ್ಟಗಳನ್ನು ಹೇಳಿಕೊಳ್ಳಲು ಬಂದವನು, ಕೃಷ್ಣನ ಸಾನ್ನಿಧ್ಯದಲ್ಲಿ ಅವನಿಗೆ ತನ್ನ ಬಡತನವೇ ಮರೆತುಹೋಯಿತು.

ಏನನ್ನೂ ಕೇಳದೆಯೇ ಎಲ್ಲವನ್ನೂ ಪಡೆಯುವ ಆ ಮೌನವೇ ಶ್ರೇಷ್ಠ ಪ್ರಾರ್ಥನೆ. ನಾವು ದೇವರ ಮುಂದೆ ಅಥವಾ ನಮಗೆ ಬೇಕಾದವರ ಮುಂದೆ ಪಟ್ಟಿ ಹಿಡಿದು ಬೇಡಿಕೆ ಇಡುತ್ತೇವೆ. ಆದರೆ ಅರ್ಹತೆ ಮತ್ತು ಭಕ್ತಿ ಇದ್ದಲ್ಲಿ, ನಾವು ಕೇಳದೆಯೇ ನಮಗೆ ಸಲ್ಲಬೇಕಾದದ್ದು ಸಂದೇಹವಿಲ್ಲದೆ ಲಭಿಸುತ್ತದೆ ಎಂಬುದು ಸುಧಾಮನ ಮೌನ ನಮಗೆ ಕಲಿಸುವ ದೊಡ್ಡ ಪಾಠ.

ಅನೇಕ ಸಂಬಂಧಗಳಲ್ಲಿ ಕಾಲಕ್ರಮೇಣ ನಾವು ಯಾರು ಹೆಚ್ಚು ಕೊಟ್ಟೆವು, ಯಾರು ಹೆಚ್ಚು ಪಡೆದುಕೊಂಡೆವು ಎನ್ನುವ ಲೆಕ್ಕಾಚಾರಕ್ಕೆ ಇಳಿದು ಬಿಡುತ್ತೇವೆ. ಅದೆಷ್ಟೇ ನಿರ್ವಂಚನೆ ಯಿಂದ ಪ್ರೀತಿಸಿದ್ದರೂ ಅದು ಯಾವುದೋ ಭಿನ್ನಾಭಿಪ್ರಾಯ ತಲೆಯೆತ್ತಿದಾಗ ಈ ಲೆಕ್ಕಚಾರ ಬೇಕಿಲ್ಲದೆ ಮನಸ್ಸಿನಲ್ಲಿ ಇಣುಕಿ ಬಿಡುತ್ತದೆ. ಅದನ್ನು ಮಾತಿನಲ್ಲಿ ಆಡಿ ಅವರಿಗೂ ನೋವುಂಟು ಮಾಡಿ, ನಾವು ಕೂಡ ಅಷ್ಟೇ ನೋವು ಅನುಭವಿಸುತ್ತೇವೆ.

ಎಂದಿಗೆ ನಾವು ಯಾವುದೇ ಸ್ನೇಹ ಪ್ರೀತಿಯಲ್ಲಿ ಅಪೇಕ್ಷೆಯನ್ನು ಇರಿಸಿಕೊಳ್ಳದೆ ಕೊಡಲು ಸಾಧ್ಯವಾಗುತ್ತದೋ ಅಂದಿಗೆ ಮಾತ್ರ ಅದು ಸಾರ್ಥಕ. ನಮ್ಮ ಇಂದಿನ ಯಾಂತ್ರಿಕ ಬದುಕಿನಲ್ಲಿ, ಲಾಭ-ನಷ್ಟಗಳನ್ನು ಲೆಕ್ಕ ಹಾಕುವ ಸಂಬಂಧಗಳ ನಡುವೆ ನಾವೂ ಕೃಷ್ಣ -ಸುಧಾಮರ ಪವಿತ್ರ ಸ್ನೇಹದಂತಹ ಶುದ್ಧ ಭಾವನೆಯನ್ನು ಉಳಿಸಿಕೊಂಡರೆ ನಮ್ಮೊಳಗಿನ ಕೃಷ್ಣ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.

ರೂಪಾ ಗುರುರಾಜ್

View all posts by this author