ಒಂದೊಳ್ಳೆ ಮಾತು
ಹಿಂದೆ ಮೃಕಂಡು ಎಂಬ ಮಹರ್ಷಿಗಳಿದ್ದರು. ಅವರಿಗೆ ಬಹಳ ಕಾಲದವರೆಗೆ ಮಕ್ಕಳಿರ ಲಿಲ್ಲ. ಕಠಿಣ ತಪಸ್ಸಿನ ನಂತರ ಪರಶಿವನು ಅವರಿಗೆ ದರ್ಶನ ನೀಡಿ ಒಂದು ಆಯ್ಕೆಯನ್ನು ನೀಡಿದನು: ‘ನಿನಗೆ ನೂರು ವರ್ಷ ಬದುಕುವ ಸಾಮಾನ್ಯ ಮಗ ಬೇಕೇ? ಅಥವಾ ಕೇವಲ 16 ವರ್ಷ ಬದುಕುವ ಅಸಾಧಾರಣ ಜ್ಞಾನಿ ಬೇಕೇ?’ ಎಂದು ಕೇಳಿದನು.
ಮಹರ್ಷಿಗಳು ಜ್ಞಾನವಂತ ಮಗನನ್ನೇ ಆರಿಸಿಕೊಂಡರು. ಹಾಗೆ ಜನಿಸಿದವನೇ ಮಾರ್ಕಂಡೇಯ. ಮಾರ್ಕಂಡೇಯನು ಬಾಲ್ಯದಿಂದಲೇ ಪರಮ ಶಿವಭಕ್ತನಾಗಿದ್ದನು. ಅವನ ಮುಖದಲ್ಲಿ ದೈವಿಕ ತೇಜಸ್ಸಿತ್ತು. ಆದರೆ ಅವನು 16ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಅವನ ತಂದೆ-ತಾಯಿಯ ಮುಖದಲ್ಲಿ ಕಳವಳ ಹೆಚ್ಚಾಯಿತು. ಅವರ ಕಣ್ಣೀರಿಗೆ ಕಾರಣವೇನೆಂದು ಮಾರ್ಕಂಡೇಯ ಕೇಳಿದಾಗ, ಅವನ ಅಲ್ಪಾಯುಷ್ಯದ ರಹಸ್ಯ ಬಯಲಾಯಿತು.
ಆದರೆ ಮಾರ್ಕಂಡೇಯ ಅಂಜಲಿಲ್ಲ. ಅವನು ತನ್ನ ಹೆತ್ತವರಿಗೆ ಧೈರ್ಯ ಹೇಳಿ, ‘ಜನ್ಮ ನೀಡಿದವನು ಆ ಪರಶಿವನೇ ಆಗಿರುವಾಗ, ಮರಣದ ಭಯವೇಕೆ?’ ಎಂದು ಕೇಳಿದನು.
ಇದನ್ನೂ ಓದಿ: Roopa Gururaj Column: ಭವಿಷ್ಯವಾಣಿಯನ್ನು ಸುಳ್ಳು ಮಾಡಿದ ಮಿಂಚಿನ ಆಟಗಾರ್ತಿ ವಿಲ್ಮಾ ರುಡಾಲ್ಫ್
ಮಾರ್ಕಂಡೇಯನ 16ನೇ ವರ್ಷದ ಕೊನೆಯ ದಿನ ಬಂದಿತು. ಅವನು ಸಮುದ್ರದ ತೀರದಲ್ಲಿ ಒಂದು ಮರಳಿನ ಶಿವಲಿಂಗವನ್ನು ಮಾಡಿ, ಅದರ ಮುಂದೆ ಕುಳಿತು ತನ್ಮಯತೆಯಿಂದ ಧ್ಯಾನಿಸಲು ಆರಂಭಿಸಿದನು. ಅಷ್ಟರಲ್ಲಿ, ಕಾಲನ ದೂತರು ಅವನ ಪ್ರಾಣವನ್ನು ಕೊಂಡೊ ಯ್ಯಲು ಬಂದರು. ಆದರೆ ಮಾರ್ಕಂಡೇಯನ ಸುತ್ತಲಿದ್ದ ಶಿವಶಕ್ತಿಯ ಪ್ರಭಾವದಿಂದ ಅವರು ಹತ್ತಿರ ಸುಳಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಸಾಕ್ಷಾತ್ ಯಮಧರ್ಮರಾಜನೇ ತನ್ನ ಮಹಿಷನನ್ನೇರಿ ಬಂದನು. ಯಮನು ತನ್ನ ಕಾಲಪಾಶವನ್ನು ಎಸೆದಾಗ, ಮಾರ್ಕಂಡೇ ಯನು ಭಯದಿಂದ ಶಿವಲಿಂಗವನ್ನು ಗಟ್ಟಿಯಾಗಿ ಅಪ್ಪಿಕೊಂಡನು.
ಅಂದು ಅವನ ಅಂತರಾಳದಿಂದ ಹೊರಹೊಮ್ಮಿದ ಶಕ್ತಿಯುತ ಸ್ತೋತ್ರವೇ ಮಹಾ ಮೃತ್ಯುಂಜಯ ಮಂತ್ರ. ಅದು ಹೀಗಿದೆ:
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ |
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ||
ಯಮನ ಪಾಶವು ಮಾರ್ಕಂಡೇಯ ಮತ್ತು ಶಿವಲಿಂಗ ಎರಡನ್ನೂ ಸುತ್ತಿಕೊಂಡಿತು. ತನ್ನ ಭಕ್ತನಿಗೆ ಸಂಕಷ್ಟ ಬಂದಾಗ ಕೈಬಿಡದ ಮಹಾದೇವನು ತಕ್ಷಣವೇ ಲಿಂಗದಿಂದ ಪ್ರಕಟ ನಾದನು.
ಉಗ್ರರೂಪ ತಾಳಿದ ಶಿವನು ಯಮನನ್ನು ತಡೆದು, ‘ಮಾರ್ಕಂಡೇಯನು ನನ್ನ ರಕ್ಷಣೆಯಲ್ಲಿ ದ್ದಾನೆ, ಅವನಿಗೆ ಸಾವಿಲ್ಲ’ ಎಂದು ಘೋಷಿಸಿದನು. ಅಂದಿನಿಂದ ಮಾರ್ಕಂಡೇಯನು ‘ಸಪ್ತ ಚಿರಂಜೀವಿಗಳ’ ಜತೆಗೆ ಒಬ್ಬ ‘ಹೆಚ್ಚುವರಿ’ ಅಥವಾ ‘ವಿಶೇಷ’ ಚಿರಂಜೀವಿ ಎನಿಸಿಕೊಂಡನು.
ಮಹಾ ಮೃತ್ಯುಂಜಯ ಮಂತ್ರವು ಕೇವಲ ಒಂದು ಪ್ರಾರ್ಥನೆಯಲ್ಲ, ಅದೊಂದು ದೈವಿಕ ರಕ್ಷಾಕವಚ. ಬದುಕಿನಲ್ಲಿ ಎದುರಾಗುವ ಸಾವು, ರೋಗ ಅಥವಾ ಸಂಕಷ್ಟಗಳ ಭಯವನ್ನು ಇದು ದೂರ ಮಾಡುತ್ತದೆ. ಹೇಗೆ ಒಂದು ಸೌತೆ ಕಾಯಿಯು ಹಣ್ಣಾದ ನಂತರ ಬಳ್ಳಿಯಿಂದ ತಾನಾಗಿಯೇ ಸುಲಭವಾಗಿ ಬೇರ್ಪಡುತ್ತದೆಯೋ (ಉರ್ವಾರುಕಮಿವ ಬಂಧನಾನ್), ಹಾಗೆಯೇ ಈ ಮಂತ್ರವು ನಮ್ಮನ್ನು ಅಜ್ಞಾನ ಮತ್ತು ಸಂಸಾರದ ಬಂಧನದಿಂದ ನೋವಿ ಲ್ಲದೆ ಬಿಡುಗಡೆ ಮಾಡಿ ಜ್ಞಾನದತ್ತ ಕೊಂಡೊಯ್ಯುತ್ತದೆ.
ಸಂಕಷ್ಟದ ಸಮಯದಲ್ಲಿ ಮನುಷ್ಯನು ಮಾನಸಿಕವಾಗಿ ಕುಗ್ಗಿದಾಗ, ಈ ಮಂತ್ರದ ಪಠಣವು ಅಂತರಾದಲ್ಲಿ ಅದಮ್ಯವಾದ ಧೈರ್ಯವನ್ನು ತುಂಬುತ್ತದೆ. ಈ ಮಂತ್ರವನ್ನು ಪಠಿಸುವಾಗ ಪ್ರತಿಯೊಂದು ಪದದ ಅರ್ಥವನ್ನು ಮನಸ್ಸಿನಲ್ಲಿ ಸ್ಮರಿಸಿದರೆ, ಅದು ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
ಮಾರ್ಕಂಡೇಯ ಪುರಾಣವು 18 ಮಹಾ ಪುರಾಣಗಳಲ್ಲಿ ಒಂದಾಗಿದ್ದು, ಮಾರ್ಕಂಡೇಯ ಮಹರ್ಷಿಗಳ ಹೆಸರಿನ ಇದೆ. ಇದರಲ್ಲಿ ಅವರ ಜೀವನ ಮತ್ತು ಅವರು ಪಡೆದ ಜ್ಞಾನದ ಬಗ್ಗೆ ವಿವರವಾದ ಉಖವಿದೆ. ಶಿವನ ಮಹಿಮೆಯನ್ನು ಸಾರುವ ಶಿವ ಪುರಾಣದಲ್ಲಿ, ಭಕ್ತ ಮಾರ್ಕಂಡೇಯನನ್ನು ಮೃತ್ಯುವಿನಿಂದ ಶಿವನು ಹೇಗೆ ರಕ್ಷಿಸಿದನು ಎಂಬ ಘಟನೆಯನ್ನು ‘ಮೃತ್ಯುಂಜಯ’ ರೂಪದ ವರ್ಣನೆಯಲ್ಲಿ ನೀಡಲಾಗಿದೆ. ಲಿಂಗ ಪುರಾಣದಲ್ಲಿಯೂ ಶಿವಲಿಂಗದ ಮಹತ್ವವನ್ನು ವಿವರಿಸುವಾಗ ಈ ಕಥೆಯನ್ನು ಉಲ್ಲೇಖಿಸಲಾಗಿದೆ.
ಪುರಾಣಗಳ ಪ್ರಕಾರ, ಮಾರ್ಕಂಡೇಯನು ಇಂದಿಗೂ ಅದೃಶ್ಯ ರೂಪದಲ್ಲಿ ಬದುಕಿರುವ ಚಿರಂಜೀವಿಗಳಲ್ಲಿ ಒಬ್ಬನು ಎಂದು ನಂಬಲಾಗುತ್ತದೆ. ಮಹಾ ಮೃತ್ಯುಂಜಯ ಮಂತ್ರವು ಮೊದಲಿಗೆ ಋಗ್ವೇದದಲ್ಲಿ ಕಂಡುಬರುತ್ತದೆ. ಇದನ್ನು ‘ರುದ್ರ ಮಂತ್ರ’ ಎಂದೂ ಕರೆಯು ತ್ತಾರೆ. ಮಾರ್ಕಂಡೇಯನು ಈ ಮಂತ್ರವನ್ನು ನಿರಂತರವಾಗಿ ಜಪಿಸಿ ಮೃತ್ಯುವನ್ನು ಗೆದ್ದಿದ್ದ ರಿಂದ, ಇದಕ್ಕೆ ಮೃತ್ಯುಂಜಯ ಮಂತ್ರ ಎಂಬ ಹೆಸರು ಅನ್ವರ್ಥವಾಯಿತು.
ಜೀವನದಲ್ಲಿ ನಮಗೆ ಮುಂದೇನು ಎಂದು ತಿಳಿಯದಿದ್ದಾಗ ಭಗವಂತನಿಗೆ ನಮ್ಮನ್ನು ಸಮರ್ಪಿಸಿಕೊಂಡರೆ ಅವನೇ ನಮಗೆ ದಾರಿಯನ್ನು ತೋರುತ್ತಾನೆ. ಅವನಿಗೆ ಶರಣಾದವರು ಎಂದಿಗೂ ಸೋತಿದ್ದಿಲ್ಲ. ಸಾವಿನ ಭಯ ಕ್ಕಿಂತ ಭಕ್ತಿಯ ಶಕ್ತಿ ದೊಡ್ಡದು ಎಂಬುದನ್ನು ಮರೆಯದಿರೋಣ...