Roopa Gururaj Column: ಭವಿಷ್ಯವಾಣಿಯನ್ನು ಸುಳ್ಳು ಮಾಡಿದ ಮಿಂಚಿನ ಆಟಗಾರ್ತಿ ವಿಲ್ಮಾ ರುಡಾಲ್ಫ್
1960ರ ಒಲಿಂಪಿಕ್ಸ್ ವಿಲ್ಮಾಳ ಜೀವನದ ಅತ್ಯುನ್ನತ ಶಿಖರ. ಕೇವಲ 11 ಸೆಕೆಂಡುಗಳಲ್ಲಿ 100 ಮೀಟರ್ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದಳು. 200 ಮೀಟರ್ ಓಟದಲ್ಲಿಯೂ ಚಿನ್ನ 4*100 ಮೀಟರ್ ರಿಲೇನಲ್ಲಿ ಅಂತಿಮ ಓಟಗಾರ್ತಿಯಾಗಿ ಓಡಿದ ವಿಲ್ಮಾ, ಅಮೆರಿಕ ತಂಡಕ್ಕೆ ಜಯ ತಂದುಕೊಟ್ಟಳು.
-
ಒಂದೊಳ್ಳೆ ಮಾತು
ವಿಲ್ಮಾ ರುಡಾಲ್ಫ್ ಜನಿಸಿದ್ದು 1940ರಲ್ಲಿ, ಅಮೆರಿಕದ ಟೆನ್ನೆಸ್ಸೀಯಲ್ಲಿ ತೀವ್ರ ವರ್ಣಭೇದ ನೀತಿ ಇದ್ದ ಕಾಲದಲ್ಲಿ. ಬಡತನ ಮತ್ತು ಅನಾರೋಗ್ಯದ ನಡುವೆ ಆಕೆಯನ್ನು ಪೋಲಿಯೋ ಮಾತ್ರವಲ್ಲದೆ, ನ್ಯುಮೋನಿಯಾ ಮತ್ತು ಸ್ಕಾರ್ಲೆಟ್ ಜ್ವರವೂ ಬಾಧಿಸಿತ್ತು.
ತಾಯಿಯು ವಿಲ್ಮಾಳನ್ನು ಪ್ರತಿ ವಾರ 80 ಮೈಲಿ ದೂರದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯು ತ್ತಿದ್ದರು. ಅಷ್ಟೇ ಅಲ್ಲದೆ, ಮನೆಯವರೆಲ್ಲರೂ ಸರದಿಯಂತೆ ದಿನಕ್ಕೆ 4 ಬಾರಿ ವಿಲ್ಮಾಳ ಕಾಲುಗಳನ್ನು ಮಸಾಜ್ ಮಾಡುತ್ತಿದ್ದರು. ಆಕೆಯ ಕಾಲುಗಳಿಗೆ ಬ್ರೇಸ್ ಹಾಕಿದ್ದರು. ಕಷ್ಟಪಟ್ಟು ನಡೆಯುತ್ತಿದ್ದ ಹುಡುಗಿಗೆ ಇದೆಲ್ಲವೂ ಬಂಧನವಾಯಿತು.
9ನೇ ವಯಸ್ಸಿಗೆ ಅವಳು ಬ್ರೇಸ್ ಅನ್ನು ಕಿತ್ತು ಹಾಕಿದಳು. ‘ಇನ್ನು ಮುಂದೆ ನಾನು ಯಾರ ಸಹಾಯವೂ ಇಲ್ಲದೆ ನಡೆಯುತ್ತೇನೆ, ಅಷ್ಟೇ ಅಲ್ಲ ಓಡಿ ತೋರಿಸುತ್ತೇನೆ’ ಎಂದು ಹಠ ತೊಟ್ಟಳು. ಅವಳಿಗೆ ಬೆಂಬಲವಾಗಿ ಅವಳ ತಾಯಿ ಮತ್ತು ಕುಟುಂಬ ಸದಾ ಇತ್ತು.
ಇದನ್ನೂ ಓದಿ: Roopa Gururaj Column: ಇಂದಿರಾ ನೂಯಿ ಸೀರೆಯುಟ್ಟ ಸಿಂಹಿಣಿಯ ಅಪ್ರತಿಮ ಯಾನ
ಅದೇ ಹಠದಲ್ಲಿ 13ನೇ ವಯಸ್ಸಿನಲ್ಲಿ ಓಟದ ಸ್ಪರ್ಧೆಯಲ್ಲಿ ಕೊನೆಯವಳಾಗಿ ಬಂದಾಗ ವಿಲ್ಮಾ ಕುಗ್ಗಲಿಲ್ಲ. ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡಳು. ಟೆನ್ನೆಸ್ಸೀ ಸ್ಟೇಟ್ ಯೂನಿವರ್ಸಿಟಿಯಲ್ಲಿ ಕೋಚ್ ‘ಎಡ್ ಟೆಂಪಲ್’ ಅವರ ಮಾರ್ಗದರ್ಶನದಲ್ಲಿ ಆಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡಳು. 16ನೇ ವಯಸ್ಸಿನ (1956ರ ಮೆಲ್ಬೋರ್ನ್ ಒಲಿಂಪಿP) ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದಳು.
1960ರ ಒಲಿಂಪಿಕ್ಸ್ ವಿಲ್ಮಾಳ ಜೀವನದ ಅತ್ಯುನ್ನತ ಶಿಖರ. ಕೇವಲ 11 ಸೆಕೆಂಡುಗಳಲ್ಲಿ 100 ಮೀಟರ್ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದಳು. 200 ಮೀಟರ್ ಓಟದಲ್ಲಿಯೂ ಚಿನ್ನ 4*100 ಮೀಟರ್ ರಿಲೇನಲ್ಲಿ ಅಂತಿಮ ಓಟಗಾರ್ತಿಯಾಗಿ ಓಡಿದ ವಿಲ್ಮಾ, ಅಮೆರಿಕ ತಂಡಕ್ಕೆ ಜಯ ತಂದುಕೊಟ್ಟಳು.
ಒಂದೇ ಒಲಿಂಪಿಕ್ಸ್‌ನಲ್ಲಿ 3 ಚಿನ್ನದ ಪದಕ ಗೆದ್ದ ಮೊದಲ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ವಿಲ್ಮಾ ಟ್ರ್ಯಾಕ್ ಮೇಲೆ ಮಾತ್ರವಲ್ಲದೆ, ಸಮಾಜದಲ್ಲೂ ಬದಲಾವಣೆ ಬಯಸಿದ್ದಳು. ರೋಮ್‌ನಿಂದ ಹಿಂದಿರುಗಿದಾಗ ತನಗೆ ನೀಡಿದ ಸ್ವಾಗತ ಸಮಾರಂಭದಲ್ಲಿ ಕಪ್ಪು ಮತ್ತು ಬಿಳಿ ಜನರನ್ನು ಪ್ರತ್ಯೇಕವಾಗಿ ಕೂರಿಸಬಾರದು ಎಂದು ಪಟ್ಟು ಹಿಡಿದಳು.
ಆಕೆಯ ಹಠದ ಫಲವಾಗಿ ಟೆನ್ನೆಸ್ಸೀಯ ಇತಿಹಾಸದ ಮೊದಲ ಬಾರಿಗೆ ಎರಡೂ ಜನಾಂಗ ದವರು ಒಂದೇ ಕಡೆ ಸೇರಿ ಆಕೆಯನ್ನು ಗೌರವಿಸಿದರು. ಜಗತ್ತಿನ ಅತಿ ವೇಗದ ಮಹಿಳೆ (The Tor nado ) ಎಂಬ ಗೌರವ ಪಡೆದ ವಿಲ್ಮಾಗೆ, ಜೇಮ್ಸ್ ಇ. ಸುಲ್ಲಿವಾನ್ ಪ್ರಶಸ್ತಿ, ಅಮೆರಿಕದ ಒಲಿಂಪಿಕ್ ಹಾಲ್ ಆಫ್ ಫ್ರೇಮ್ ಪ್ರಶಸ್ತಿಗಳು ಸಮಯೋ ಚಿತವಾಗಿ ದೊರೆತವು.
“ನೀನು ಎಲ್ಲವನ್ನೂ ಸಾಧಿಸಬಲ್ಲೆ ಎಂದು ನನ್ನ ತಾಯಿ ನನಗೆ ನಂಬಿಸಿದರು, ನಾನು ಅದನ್ನು ಕಾರ್ಯಗತಗೊಳಿಸಿದೆ" ಎಂದು ಆತ್ಮವಿಶ್ವಾಸದಿಂದ ಹೇಳಿದಳು ವಿಲ್ಮಾ ರುಡಾಲ್ಫ್. ಆಕೆಯ ಜೀವನ ನಮಗೆ ಕಲಿಸುವ ಪಾಠವೊಂದೇ- ಅದೆಂದರೆ, ನಮ್ಮ ದೈಹಿಕ ಮಿತಿ ಗಳಿಗಿಂತ ನಮ್ಮ ಮಾನಸಿಕ ಶಕ್ತಿ ಬಹಳ ದೊಡ್ಡದು.
ಪರೀಕ್ಷೆಗಳ ಸಮಯವಿದು, ಮಕ್ಕಳು ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ತಂದೆ-ತಾಯಿಗಳಾಗಿ ನಾವು ಅವರಿಗೆ “ನೀವು ಖಂಡಿತ ಸಾಧಿಸಬಹುದು" ಎಂಬ ಧೈರ್ಯ ತುಂಬಿ ಜತೆಗಿದ್ದರೆ ಅವರು ಆತ್ಮವಿಶ್ವಾಸದಿಂದ ಓದಿ ಒಳ್ಳೆಯ ಅಂಕಗಳನ್ನು ಗಳಿಸಲು ಸಾಧ್ಯ ವಾಗುತ್ತದೆ. ಅದನ್ನು ಬಿಟ್ಟು ಅವರು ಮಾಡಿದ ತಪ್ಪುಗಳ ಪಟ್ಟಿ ಮಾಡುತ್ತಾ, ಅವರಿಗೆ ಅದನ್ನು ನೆನಪಿಸಿ ಆತ್ಮ ವಿಶ್ವಾಸವನ್ನು ಕುಗ್ಗಿಸಿದರೆ, ಅವರು ಖಂಡಿತ ಸಮಾಧಾನದಿಂದ ಓದಿ ಸಮಚಿತ್ತದಿಂದ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ.
ಅನೇಕ ಮನೆಗಳಲ್ಲಿ ತಂದೆ-ತಾಯಿಗಳು ಮಕ್ಕಳಿಗೆ ಹೆದರಿಸಿ ಹದ್ದುಬಸ್ತಿನಲ್ಲಿ ಇಟ್ಟು ಕೊಳ್ಳುವುದೇ ಕರ್ತವ್ಯ ಎಂದುಕೊಂಡಿದ್ದಾರೆ. ಆದರೆ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಒಂದು ಪ್ರೀತಿ ಮಾತಿನಿಂದ, ಆತ್ಮೀಯ ನುಡಿಯಿಂದ ಅವರ ಆತ್ಮವಿಶ್ವಾಸವನ್ನ ಜಾಗೃತ ಗೊಳಿಸಬಹುದು. ಅದೇ ಒಂದು ಕೊಂಕು ಮಾತಿನಿಂದ ಅವರ ಆಸಕ್ತಿಯನ್ನು ಕೊಂದು ಬಿಡಲೂಬಹುದು. ಆದ್ದರಿಂದಲೇ ಅವರನ್ನು ಹೇಗೆ ಒಳ್ಳೆಯ ರೀತಿಯಲ್ಲಿ ಪ್ರೇರೇಪಿಸಬೇಕು ಎಂದು ನಾವು ತಿಳಿದಿರಬೇಕು. ಮಕ್ಕಳನ್ನು ಭಯದಿಂದ ಅಲ್ಲ ಭರವಸೆಯಿಂದ ಬೆಳೆಸಬೇಕು.
ಆಕಾಶಕ್ಕೆ ಹಾರಲು ರೆಕ್ಕೆಗಳಿಗೆ ಕಸುವು ತುಂಬುವ ಶಕ್ತಿ ತಂದೆ, ತಾಯಿ, ಗುರುಗಳಿಗಿದೆ. ಅದನ್ನು ಸಮಯೋಚಿತವಾಗಿ ಉಪಯೋಗಿಸಬೇಕಷ್ಟೆ.