ವಿಶ್ವರಂಗ
ನಿನ್ನೆ ಆಸ್ಟ್ರೇಲಿಯಾದಲ್ಲಿರುವ ನನ್ನ ಒಬ್ಬ ಕ್ಲೈಂಟ್ ಜೊತೆ ಮಾತುಕತೆಯಲ್ಲಿ ತೊಡಗಿದ್ದೆ. ಮಾತಿನ ಮಧ್ಯೆ ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ಭಾರತೀಯರ ಬಗ್ಗೆ ಜನಾಂಗೀಯ ದ್ವೇಷ ಹೆಚ್ಚಾಗಿದೆ ಎನ್ನಿಸುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎನ್ನುವ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕವರು, ನಿಜವಾಗಿ ಹೇಳಬೇಕೆಂದರೆ ಆಸ್ಟ್ರೇಲಿಯನ್ನರನ್ನು ನಾವು ಏನೂ ಅನ್ನುವಂತಿಲ್ಲ. ಇಲ್ಲಿನ ನೆಲದ ರೀತಿ ನೀತಿ ರಿವಾಜುಗಳಿಗೆ ಎಳ್ಳುಕಾಳಷ್ಟೂ ಗೌರವವನ್ನು ನಾವು ನೀಡುತ್ತಿಲ್ಲ. ಅದರಲ್ಲೂ ಭಾರತದ ಪಂಜಾಬಿನಿಂದ ಬಂದವರು ಪಂಜಾಬಿನಲ್ಲಿ ಹೇಗೆ ಬದುಕುತ್ತಿದ್ದರೋ ಹಾಗೆ ಇಲ್ಲಿ ಬದುಕುತ್ತಾರೆ. ಇಲ್ಲಿನ ಭಾಷೆ ಕಲಿಯುವುದು, ಇಲ್ಲಿನ ಜನರ ಜೊತೆ ಬೆರೆಯುವುದು ಅವರಿಗೆ ಬೇಕಾಗಿಲ್ಲ.
ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮದೇ ಸಮುದಾಯದ ನಡುವೆ, ತಮ್ಮ ಊರಿನಲ್ಲಿ ಬದುಕಿದಂತೆ ಬದುಕುತ್ತಾರೆ. ಸ್ಥಳೀಯರ ಭಾವನೆಗಳಿಗೆ ಅವರು ಕಿಂಚಿತ್ತೂ ಬೆಲೆ ಕೊಡುವುದಿಲ್ಲ. ಹೀಗಾಗಿ ಕೆಲವು ಸ್ಥಳೀಯರ ಕೋಪಕ್ಕೆ ಇಡೀ ಭಾರತೀಯ ಸಮುದಾಯ ಬೆಲೆ ತೆರೆಬೇಕಾಗುತ್ತದೆ ಎಂದರು. ತಕ್ಷಣ ಅಮೆರಿಕಾದಲ್ಲಿನ ವಾತಾವರಣ ಕಣ್ಣ ಮುಂದೆ ತೇಲಿ ಹೋಯ್ತು. ಪಕ್ಕದ ಆಂಧ್ರದಿಂದ ಹೋಗಿರುವ ಭಾರತೀಯ ಪ್ರಜೆಗಳು ತೀರಾ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದಲ್ಲಿ ನೆಲೆ ನಿಂತಿದ್ದಾರೆ.
ಆಸ್ಟ್ರೇಲಿಯಾ, ಕೆನಡಾದಲ್ಲಿ ಪಂಜಾಬಿಗಳು ಮಾಡಿರುವ ಕೆಲಸವನ್ನು ಅಮೆರಿಕದಲ್ಲಿ ಆಂಧ್ರದ ಜನ ಮಾಡಿದ್ದಾರೆ, ಮಾಡುತ್ತಿದ್ದಾರೆ. ಡಮ್ಮಿ ಐಟಿ ಕಂಪನಿಗಳನ್ನು ತೆರೆಯುವುದು, ಈ ಸಂಸ್ಥೆಗಳ ಮೂಲಕ ಹೆಚ್ಒನ್ಬಿ ವೀಸಾ ಅಪ್ಲೈ ಮಾಡಿ ಜನರನ್ನು ಕರೆಸಿಕೊಳ್ಳುವುದು, ಡಮ್ಮಿ ಯೂನಿ ವರ್ಸಿಟಿ ಸರ್ಟಿಫಿಕೇಟ್ ಪಡೆದುಕೊಂಡು ಕೆಲಸ ಗಿಟ್ಟಿಸಿಕೊಳ್ಳುವುದು ಹೀಗೆ ಒಂದಲ್ಲ ಹಲವಾರು ರೀತಿಯ ಕಾನೂನು ಬಾಹಿರ ಕೆಲಸದಲ್ಲಿ ಇವರು ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: Rangaswamy Mookanahally Column: ಕಣ್ಣಿಗೆ ಕಾಣದ ಸಣ್ಣ ಕಲ್ಲಿನಿಂದಲೇ ಎಡವುವುದು !
ಇತ್ತೀಚಿಗೆ ಅಮೇರಿಕಾದಲ್ಲಿ ಹೆಚ್ಚಾಗಿರುವ ಭಾರತೀಯರ ಬಗೆಗಿನ ಜನಾಂಗೀಯ ದ್ವೇಷಕ್ಕೆ ಇನ್ನೊಂದು ಮುಖವೂ ಉಂಟು. ಭಾರತದ ಒಂದು ರಾಜ್ಯದ ಜನರು ಮಾಡಿರುವ ಕೆಲಸದಿಂದ ಇಡೀ ಭಾರ ತೀಯ ಸಮುದಾಯ ಇದಕ್ಕೆ ಬೆಲೆಯನ್ನು ತೆರುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ನಡೆದರೆ ಅವರ ನೆಲದಲ್ಲಿ ಅವರ ದೇಶಕ್ಕೆ ಸಿಗುವ ಬೆಂಬಲಕ್ಕಿಂತ ಭಾರತಕ್ಕೆ ಹೆಚ್ಚು ಬೆಂಬಲ ಸಿಗುತ್ತದೆ.
ಅಲ್ಲಿ ಭಾರತದ ಪರ ಘೋಷಣೆ ಕೂಗುವ ಯಾವ ಸುಶಿಕ್ಷಿತ ಭಾರತೀಯನಿಗೂ ತಾನು ಮಾಡುತ್ತಿರು ವುದು ತಪ್ಪು ಎನ್ನಿಸುವುದೇ ಇಲ್ಲ. ಭಾರತಕ್ಕೆ ನಿಷ್ಠೆ ತೋರಿಸುವುದರಲ್ಲಿ ಅವರಲ್ಲಿ ಬೇರೆ ಯಾವ ಲಾಜಿಕ್ಕು ಕೆಲಸ ಮಾಡುವುದಿಲ್ಲ. ದೂರದ ಬಿಹಾರ ಅಥವಾ ಉತ್ತರಪ್ರದೇಶದಿಂದ ಬಂದ ವ್ಯಕ್ತಿ ಕನ್ನಡ ಮಾತಾಡದಿದ್ದಾಗ, ಇಲ್ಲಿನ ನೆಲ, ಜಲ, ಸಂಸ್ಕಾರಕ್ಕೆ ವಿರುದ್ಧ ವರ್ತಿಸಿದಾಗ ನಮಗೆ ಉಗ್ರವಾದ ಕೋಪ ಬರುತ್ತದೆ.
ಅದು ಸಹಜ. ಇದೇ ಲಾಜಿಕ್ ಅನ್ಯ ದೇಶದಲ್ಲಿದ್ದಾಗ ಮಾತ್ರ ಮಾಯವಾಗುತ್ತದೆ. ಅಲ್ಲಿನ ಸ್ಥಳೀಯರು ಇದರ ವಿರುದ್ಧ ಕೋಪಗೊಂಡರೆ ಅದು ಜನಾಂಗೀಯ ದ್ವೇಷ ಎನ್ನುತ್ತೇವೆ. ಅದೇ ನಮ್ಮ ರಾಜ್ಯಕ್ಕೆ ಬಂದು ಇಲ್ಲಿದ್ದೂ ಇಲ್ಲಿನಂತಾಗದಿದ್ದಾಗ ನಾವು ಕೋಪಗೊಂಡರೆ ಅದು ನಮ್ಮ ತನ, ನಮ್ಮ ಭಾಷೆ, ನಮ್ಮ ಸಂಸ್ಕಾರ ಉಳಿಸಿಕೊಳ್ಳಲು ನಾವು ಮಾಡುವ ಹೋರಾಟ! ಈ ದ್ವಂದ್ವ ನೀತಿಗೆ ಸದಾ ನನ್ನ ಧಿಕ್ಕಾರ ಹೇಳಿಕೊಂಡು ಬಂದಿದ್ದೇನೆ.
ನನ್ನದು ಈ ವಿಚಾರದಲ್ಲಿ ಸರಳ ಮಂತ್ರ. ನಾವಿರುವ ನೆಲದ ಭಾಷೆಗೆ ನಾವು ಗೌರವ ಕೊಡಬೇಕು. ಅಲ್ಲಿನ ಸಂಸ್ಕಾರ ನಮ್ಮದಾಗಿಸಿಕೊಳ್ಳಬೇಕು. ನಾವು ಅಲ್ಲಿಗೆ ಬದುಕು ಕಟ್ಟಿಕೊಳ್ಳಲು ಹೋಗಿರುತ್ತೇವೆ. ಹೀಗಾಗಿ ನಮ್ಮ ನಿಷ್ಠೆ ಮೊದಲು ಅಲ್ಲಿನ ನೆಲಕ್ಕೆ ಇರಬೇಕು. ಭಾರತೀಯರಾಗಿದ್ದೂ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ದೇಶದಲಿದ್ದರೆ ಆಯಾ ದೇಶವನ್ನೇ ಬೆಂಬಲಿಸಬೇಕು. ತೀರಾ ಇತ್ತೀಚಿಗೆ ಬ್ರಿಟನ್ ದೇಶದಲ್ಲಿ ಕೇವಲ ಪೌರತ್ವ ತೆಗೆದುಕೊಂಡ ಮಾತ್ರಕ್ಕೆ ಯಾರೂ ಬ್ರಿಟಿಷ್ ಆಗಲು ಸಾಧ್ಯವಿಲ್ಲ ಎನ್ನುವ ಕೂಗು ಶುರುವಾಗಿದೆ.
ಇಂತಹ ಭಾವತೀವ್ರತೆ ಅವರಲ್ಲಿ ಏಕೆ ಉಂಟಾಯಿತು ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುವೆ. ಯೂರೋಪಿನ ದೇಶಗಳಿರಬಹುದು, ಬ್ರಿಟನ್ ಅಥವಾ ಅಮೆರಿಕ, ಅವರದೂ ತಪ್ಪಿದೆ. ಮೊದಲಿಗೆ ವಲಸಿಗರು ಆಡಿದ ಆಟಕ್ಕೆ ಆಡಲು ಬಿಟ್ಟದ್ದು ಮಹಾತಪ್ಪು. ಕಡಿವಾಣ ಹಾಕುವುದು ಅನಿವಾರ್ಯವಾಗಿತ್ತು. ಮೊದಲಿಗೆ ವಲಸೆ ಹೋದವರಲ್ಲಿ ವಲಸೆ ಬಂದ ನೆಲಕ್ಕೆ ಮರ್ಯಾದೆ ನೀಡುವ ಗುಣ ಇರಬೇಕಿತ್ತು. ಇದೀಗ ಬಲಪ್ರಯೋಗದ ಮೂಲಕ ಸಮಾಜದಲ್ಲಿ ಒಂದು ನಿಯಮವನ್ನು ತರಲು ಪ್ರಯತ್ನ ಮಾಡುತ್ತಿದ್ದಾರೆ.
ಭಾಷೆ ವಿಚಾರದಲ್ಲಿ ಮಾತ್ರ ಇವರಿಂದ ಕಲಿಯುವುದು ಬಹಳವಿದೆ. ಯೂರೋಪಿನ ಸ್ಪೇನ್ ದೇಶದಲ್ಲಿ ವ್ಯಯಿಸಿದ 18 ವರ್ಷದಲ್ಲಿ ಒಂದು ದಿನವೂ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಅಲ್ಲಿನ ನೆಲದಲ್ಲಿ ಜೀವಿಸಲು ಶುರು ಮಾಡಿದ ಮೂರು ತಿಂಗಳಲ್ಲಿ ಭಾಷೆ ಕಲಿತು, ಅಲ್ಲಿನ ಸಮಾಜದ ಜನರ ಜೊತೆ ಬೆರೆತದ್ದರ ಫಲವದು.
ನಾವು ಕರ್ನಾಟಕ ಅಥವಾ ಭಾರತದಲ್ಲಿ ಇದ್ದಂತೆ, ನಮ್ಮ ಮನೆಯಲ್ಲಿ ಇದ್ದಂತೆ ಇರಬೇಕು, ನಮ್ಮತನ, ನಮ್ಮ ಭಾಷೆಯ ಅಭಿಮಾನ ಜರ್ಮನಿಯಲ್ಲೂ ತೋರಿಸಬೇಕು ಎನ್ನುವುದು ಮೂರ್ಖತನ. ಅಷ್ಟೊಂದು ಭಾಷೆ, ದೇಶದ ಮೇಲೆ ಅಭಿಮಾನ ಇದ್ದವರು ಅನ್ಯ ದೇಶಕ್ಕೆ ಹೋಗಲೇ ಬಾರದು ಎನ್ನುವುದು ನನ್ನ ಅಭಿಪ್ರಾಯ. ಹೋದ ಮೇಲೆ ಅಲ್ಲಿನ ಭಾಷೆ, ನೆಲದ ಸಂಸ್ಕಾರ ನಮ್ಮದು ಎನ್ನುವ ವಿಶಾಲ ಮನೋಭಾವ ಬೆಳೆಸಿಕೊಂಡು ಬಿಟ್ಟರೆ ಸಾಕು. ಜಗತ್ತಿನಲ್ಲಿ ಇವತ್ತು ನಡೆಯು ತ್ತಿರುವ ಜನಾಂಗೀಯ ಕಲಹಗಳು ಬಹಳ ಮಟ್ಟಿಗೆ ಇಲ್ಲವಾಗುತ್ತವೆ.
ಯೂರೋಪಿನ ಬಹುತೇಕ ದೇಶಗಳಲ್ಲಿ ಪದವಿಯವವರೆಗೂ ಮಾತೃ ಭಾಷೆಯಲ್ಲಿ ಶಿಕ್ಷಣವಿರುತ್ತದೆ. ಜರ್ಮನಿಯಲ್ಲಿ ಜರ್ಮನ್, ಸ್ಪೇನಿನಲ್ಲಿ ಸ್ಪ್ಯಾನಿಷ್, ಫ್ರಾನ್ಸಿನಲ್ಲಿ ಫ್ರೆಂಚ್ ಹೀಗೆ ಆಯಾ ದೇಶದ ಭಾಷೆಯಲ್ಲಿ ಶಿಕ್ಷಣ ಮುಂದುವರೆಯುತ್ತದೆ. ಪದವಿಯ ನಂತರ ಮಾಸ್ಟರ್ಸ್ ಅಥವಾ ಪಿಎಚ್ಡಿ ಪಡೆದುಕೊಳ್ಳಲು ಇಂಗ್ಲಿಷ್ ಭಾಷೆಯಲ್ಲಿ ಕಲಿಕೆಯನ್ನು ಮುಂದುವರಿಸಬಹುದು. ಬೇಡವೆಂದಲ್ಲಿ ಮತ್ತೆ ಅವರ ಮಾತೃ ಭಾಷೆಯಲ್ಲಿ ಆ ಪದವಿಗಳನ್ನು ಕೂಡ ಪಡೆದುಕೊಳ್ಳಬಹುದು.
ಜಪಾನ್ ದೇಶದಲ್ಲಿ, ಚೀನಾದಲ್ಲಿ ಎಡೆ ಅವರ ಮಾತೃ ಭಾಷೆಯಲ್ಲಿ ಶಿಕ್ಷಣವಾಗುತ್ತದೆ. ಹೀಗಾಗಿ ಆ ದೇಶಗಳು ಆ ಮಟ್ಟಕ್ಕೆ ಬೆಳೆದು ನಿಂತಿವೆ. ಮಾತೃ ಭಾಷೆಯಲ್ಲಿ ಕಲಿಯುವುದು ಹೆಚ್ಚು ಸೂಕ್ತ ಮತ್ತು ಪರಿಣಾಮಕಾರಿ ಯಾಗಿರುತ್ತದೆ ಎನ್ನುವುದನ್ನು ಇವತ್ತಿಗೆ ಸಮಾಜ ಒಪ್ಪುತ್ತದೆ. ಹೀಗಿದ್ದೂ ಭಾರತ ದಲ್ಲಿ ಮಾತ್ರ ಇಂಗ್ಲಿಷ್ ಮೋಹ ಇನ್ನೂ ಬಿಟ್ಟಿಲ್ಲ. ಇಂಗ್ಲಿಷ್ ಇವತ್ತಿಗೂ ಕಲಿಯುತ್ತಿರುವ ಭಾಷೆ.
ಬಹುತೇಕ ಶಿಕ್ಷಕರು ತಮಗೆ ತಿಳಿದದ್ದನ್ನು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸುವಲ್ಲಿ ವಿಫಲರಾಗುವುದು ಇಂಗ್ಲಿಷ್ ಭಾಷೆಯಲ್ಲಿ ಹಿಡಿತವಿಲ್ಲದ ಕಾರಣ, ಅಂದ ಮಾತ್ರಕ್ಕೆ ಅವರು ದಡ್ಡರಲ್ಲ. ಅವರಿಗೆ ವಿಷಯeನವಿರುತ್ತದೆ. ಆದರೆ ಅದನ್ನು ತಲುಪಿಸುವಲ್ಲಿ ವಿಫಲರಾಗುತ್ತಾರೆ. ಬಹಳಷ್ಟು ಮಕ್ಕಳ ಕಥೆ ಕೂಡ ಇದೇ ಆಗಿದೆ. ಯೂರೋಪಿನ ದೇಶಗಳಲ್ಲಿ ಮಾತೃಭಾಷೆ ಶಿಕ್ಷಣ ಎನ್ನುವುದು ಕಡ್ಡಾಯ ಎನ್ನುವ ಪ್ರಶ್ನೆ ಉದ್ಭವವಾಗುವುದಿಲ್ಲ. ಏಕೆಂದರೆ ಆ ಭಾಷೆ ಬಿಟ್ಟು ಅವರು ಬೇರೆ ಭಾಷೆಯ ಬಗ್ಗೆ ಯೋಚಿಸುವುದೂ ಇಲ್ಲ. ಹೀಗಾಗಿ ಅವರ ಭಾಷೆಯಲ್ಲಿ ಕಲಬೆರಕೆಯಿಲ್ಲ.
ಕಳೆದ ನೂರು ವರ್ಷದಲ್ಲಿ ಜಗತ್ತು ಬಹಳ ಬದಲಾಗಿದೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್, ವೈಫೈ ಹೀಗೆ ಹಲವಾರು ಹೊಸ ಪದಗಳು ಇಂದಿಗೆ ಸೃಷ್ಟಿಯಾಗಿವೆ. ಅಂದಿಗೆ ಈ ಪದಾರ್ಥಗಳು ಇರಲಿಲ್ಲ. ಹೀಗಾಗಿ ನಮ್ಮ ಭಾಷೆಯಲ್ಲಿ ಇವುಗಳ ಹೆಸರು ಕೂಡ ಇರಲಿಲ್ಲ. ಯೂರೋಪಿನ ದೇಶಗಳಲ್ಲಿ ಮೇಲೆ ಉಖಿಸಿದ ಯಾವ ಇಂಗ್ಲಿಷ್ ಪದಗಳ ಬಳಕೆಯಿಲ್ಲ. ಕಂಪ್ಯೂಟರ್, ಮೊಬೈಲ್ ಇತ್ಯಾದಿ ಎಲ್ಲಕ್ಕೂ ಅವರ ಬಳಿ ಪರ್ಯಾಯವಾಗಿ ಆಯಾ ದೇಶದ ಭಾಷೆಯಲ್ಲಿ ಪದಗಳಿವೆ.
ನಮ್ಮಲ್ಲಿ ಮಾತ್ರ ಕಲಬೆರಕೆ. ನಾವು ಮಾತನಾಡುವ ಕನ್ನಡದಲ್ಲಿ ಅರ್ಧ ಇಂಗ್ಲಿಷ್ ಪದಗಳು ತುಂಬಿರುತ್ತವೆ. ನಮ್ಮಲ್ಲಿ ಏಕೆ ಇಂತಹ ಹೊಸ ಪದಾರ್ಥಗಳಿಗೆ ಪರ್ಯಾಯ ಕನ್ನಡ ಪದಗಳು ಸೃಷ್ಟಿಯಾಗಲಿಲ್ಲ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಅದಕ್ಕೆ ಉತ್ತರ ಕೂಡ ನಮ್ಮ ಕಲಿಕೆಯ ಮಾಧ್ಯಮದಲ್ಲಿದೆ. ಅಲ್ಲಿ ಎಲ್ಲವೂ ಅವರ ಮಾತೃಭಾಷೆಯಲ್ಲಿ ಇರುವ ಕಾರಣ ಇಂಗ್ಲಿಷ್ ಪದಗಳು ನುಸುಳಲು ಅಲ್ಲಿಯ ಶೈಕ್ಷಣಿಕ ವರ್ಗ ಬಿಡುವುದಿಲ್ಲ. ಇದಕ್ಕೆಂದು ಕುಳಿತಿರುವ ಒಂದು ಸಮಿತಿ ಅದಕ್ಕೊಂದು ಪರ್ಯಾಯ ಪದವನ್ನು ಟಂಕಿಸಿ ಜನಮಾನಸದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತಾರೆ.
ಹೀಗಾಗಿ ಅವರ ಭಾಷೆ ಕಳೆದ ಹತ್ತು ವರ್ಷದಲ್ಲಿ ಸಮೃದ್ಧವಾಗಿ ಬೆಳೆದಿದೆ. ಹೊಸ ಆವಿಷ್ಕಾರ, ಪದಾರ್ಥಗಳು ಬಂದ ಹಾಗೆ ಅವರ ಭಾಷೆ ಕೂಡ ವಿಸ್ತಾರಗೊಂಡಿದೆ. ನಮ್ಮಲ್ಲಿ ಎಲ್ಲಾ ಲೂಟಿ ಮಾಡಿದ ಮೇಲೆ ಊರಿನ ಬಾಗಿಲು ಹಾಕಿದರು ಎನ್ನುವಂತೆ ಇಮೈಲ್ ಎನ್ನುವ ಪದ ಜನರ ಮನಸ್ಸಿ ನಲ್ಲಿ ಅಚ್ಚೊತ್ತಿದ ಮೇಲೆ ಮಿಂಚಂಚೆ ಎಂದು ಟಂಕಿಸಿ ಬಳಸಿ ಎನ್ನುತ್ತಾರೆ. ಅದು ಹೆಚ್ಚು ಕಾಲ ನಿಲ್ಲುವುದಿಲ್ಲ. ಮಿಂಚಂಚೆ ಪದ ನಾಲ್ಕು ದಿನ ಬಳಸಿ ಸವಕಲಾಗುತ್ತದೆ.
ಇಮೈಲ್ ನಮ್ಮ ಮನಸ್ಸಿನಲ್ಲಿ ಇಳಿಯುವುದಕ್ಕೆ ಮುಂಚೆ ಹೊಸ ಪದ ಟಂಕಿಸುವ ಕೆಲಸವಾಗಬೇಕು. ಇದನ್ನು ಯಾರು ಮಾಡುತ್ತಾರೆ? ಇದಕ್ಕೆ ಯಾರು ಹೊಣೆ ಹೊರಬೇಕು? ಭಾಷೆ ಉಳಿಯಬೇಕು ಮತ್ತು ಬೆಳೆಯಬೇಕು ಎಂದರೆ ಅದನ್ನು ನಾವು ಹೆಚ್ಚೆಚ್ಚು ಬಳಸಬೇಕು. ನಾವಾಡುವ ಕನ್ನಡದಲ್ಲಿ ಅರ್ಧ ಇಂಗ್ಲಿಷ್ ತುಂಬಿದ್ದರೆ ಅದನ್ನು ಕನ್ನಡ ಎಂದು ಹೇಗೆ ಹೇಳುವುದು? ನಿಜವಾದ ಹೋರಾಟ ಆಗಬೇಕಿರುವುದು ಅನ್ಯಭಾಷಿಕರು ಕನ್ನಡ ಕಲಿಯಲಿ ಎನ್ನುವುದರ ಬಗ್ಗೆಯಲ್ಲ.
ಕಲಬೆರಕೆಯಾಗಿ ನರಳುತ್ತಿರುವ ಕನ್ನಡವನ್ನು ಮತ್ತೆ ಉತ್ತಮಗೊಳಿಸುವುದಕ್ಕೆ, ನಮ್ಮ ಮಗ/ಮಗಳಿಗೆ ಕನ್ನಡ ಬರುವುದಿಲ್ಲ ಎನ್ನುವುದನ್ನು ಹೆಚ್ಚುಗಾರಿಕೆ ಎನ್ನುವಂತೆ ಮಾತಾಡುವ ಕನ್ನಡಿಗರ ಬಗ್ಗೆ. ನಾವು ಮೊದಲು ಸರಿಯಾಗೋಣ. ಆಮೇಲೆ ನಮಗೆ ಇತರರ ಬಗ್ಗೆ ಮಾತಾಡುವ ಹಕ್ಕು ಪಡೆದುಕೊಳ್ಳುತ್ತೇವೆ.
ಕನ್ನಡ ಕಟ್ಟಬೇಕು, ಕನ್ನಡ ಬೆಳೆಸಬೇಕು ಎಂದರೆ ತಮಿಳು, ಹಿಂದಿ ಅಥವಾ ಇನ್ಯಾವುದೇ ಭಾಷೆ ಯನ್ನು ದ್ವೇಷಿಸಬೇಕು ಎಂದಲ್ಲ. ನಮ್ಮ ಭಾಷೆಯನ್ನು ನಾವು ಮೊದಲು ಹೆಚ್ಚು ಬಳಸಬೇಕು. ಶುದ್ಧ ಕನ್ನಡ ಪದಗಳನ್ನು ಟಂಕಿಸುವ ಕೆಲಸವನ್ನು ಶಿಕ್ಷಕ ವರ್ಗ, ಮುದ್ರಣ ಮಾಧ್ಯಮದ ಪತ್ರಕರ್ತರು ಮಾಡಬೇಕು. ಇವರು ಮಾತ್ರವೇ ಮಾಡಬೇಕು ಎಂದಿಲ್ಲ.
ಸಮಾಜದ ಎಲ್ಲಾ ವರ್ಗದ ಜನ ತಮ್ಮ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗ್ಲಿಷ್ ಪದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಬಳಸಬೇಕು. ಅದು ಸುಲಭವಾಗಿ ಜನ ಮಾನಸದಲ್ಲಿ ಉಳಿದು ಕೊಳ್ಳುವಂತಿರಬೇಕು. ಎಲ್ಲಕ್ಕಿಂತ ಮಿಗಿಲಾಗಿ ಈಗಾಗಲೇ ಇರುವ ಆದರೆ ನೆನೆಗುದಿಗೆ ಬಿದ್ದಿರುವ ಕನ್ನಡ ಪದಗಳಾದ ವಾರಾಂತ್ಯ, ಕಾಲುಚೀಲ, ವೇಳೆ, ತಿಂಡಿ, ಶುಭೋದಯ ಇತ್ಯಾದಿ ಪದಗಳನ್ನು ನಮ್ಮ ಮಾತುಗಳಲ್ಲಿ ಮತ್ತೆ ಬಳಸಲು ಶುರು ಮಾಡೋಣ. ಇಲ್ಲವಾದಲ್ಲಿ ಯೂರೋಪಿನಲ್ಲಿ ಆದಂತೆ ಇಲ್ಲೂ ಕೂಡ ಸಂಘರ್ಷದ ಮೂಲಕ ನಿಯಮವನ್ನು ಜಾರಿಗೆ ತರಬೇಕಾದ ಸಮಯ ಬೇಗ ಬರುತ್ತದೆ.
ಎಚ್ಚರ! ಕನ್ನಡವನ್ನು ಪ್ರೀತಿಸುವುದು ಎಂದರೆ ಹಿಂದಿ, ತಮಿಳು ಅಥವಾ ಅನ್ಯ ಭಾಷೆಗಳನ್ನು ದ್ವೇಷಿಸುವುದಲ್ಲ. ಎಲ್ಲಾ ಭಾರತೀಯ ಭಾಷೆಗಳು ಕೂಡ ನಮ್ಮವೇ, ಯಾವುದು ನಮಗೆ ಅನ್ನದ ದಾರಿಯಾಗುತ್ತೆ ಅವೆಲ್ಲವೂ ನಮ್ಮ ಭಾಷೆ, ಯಾವ ಊರು ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತೆ. ಅದೇ ನಮ್ಮೂರು, ಯಾರು ನಮಗೆ ಸಹಾಯ ಹಸ್ತ ಚಾಚುತ್ತಾರೆ ಅವರೇ ನಮ್ಮವರು. ಇದು ಇವತ್ತಿನ ಕಾಲಘಟ್ಟದ ಪರಮಸತ್ಯ. ಸತ್ಯವ ಅರಿತು, ಅದರಲ್ಲಿ ಬೆರೆತು ಬಾಳಿದರೆ ಬದುಕು ಸುಂದರ. ಇಲ್ಲವೇ ಸದಾ ಸಂಘರ್ಷ.