ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahally Column: ಕಣ್ಣಿಗೆ ಕಾಣದ ಸಣ್ಣ ಕಲ್ಲಿನಿಂದಲೇ ಎಡವುವುದು !

ಒಳ್ಳೆಯ ಗುಣ ಮತ್ತು ನಡತೆ ಯಾರೊಬ್ಬರ ಸ್ವತ್ತಲ್ಲ. ಅದು ಯಾರದೂ ಆಗಬಹುದು ಮತ್ತು ಎಲ್ಲರದೂ ಆಗಬಹುದು. ನಿಜ ಹೇಳಬೇಕೆಂದರೆ ಇಂತಹ ಗುಣ ಎಲ್ಲರದೂ ಆಗಬೇಕು. ಇದಕ್ಕೆ ಒಂದು ಉದಾಹರಣೆ ಎಂದರೆ ನಾನು ಬಾಲ್ಯ ಕಳೆದ ಪೀಣ್ಯ ಸ್ಲಂನಿಂದ ಅನತಿ ದೂರದಲ್ಲಿದ್ದ ದುರ್ಗಾ ಬುಕ್ ಸ್ಟಾಲ್ ಎನ್ನುವ ನ್ಯೂಸ್ ಪೇಪರ್ ಏಜೆನ್ಸಿ ಪಕ್ಕದಲ್ಲಿ ನಿತ್ಯವೂ ಸಂಜೆ ರಾಮಣ್ಣ ಎನ್ನುವವರು ಚಾಟ್ಸ್ ಹಾಕುತ್ತಿದ್ದರು. ಅದೊಂದು ಹಳೆಯ ತಳ್ಳುವಗಾಡಿ!

ಕಣ್ಣಿಗೆ ಕಾಣದ ಸಣ್ಣ ಕಲ್ಲಿನಿಂದಲೇ ಎಡವುವುದು !

-

ವಿಶ್ವರಂಗ

ಮನಶ್ಶಾಸ್ತ್ರದ ಪ್ರಕಾರ ಯಾವ ಮನುಷ್ಯ ಅತ್ಯಂತ ಸಣ್ಣ ವಿಷಯವನ್ನೂ ಗಮನಿಸಿ, ನೆನಪಿಟ್ಟುಕೊಂಡು ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಾನೆ ಅದು ಆತನ ನಡತೆ, ಗುಣವನ್ನು ಹೇಳುತ್ತದೆ ಎನ್ನಲಾಗುತ್ತದೆ. Believe it or not, the way a man handles the small things in life can speak volumes about his character ಎನ್ನುವ ಮಾತನ್ನು ಇಂಗ್ಲಿಷ್ ಭಾಷಿಕರು ಬಳಸುತ್ತಾರೆ. ಯಾವ ಮನುಷ್ಯ ಸಣ್ಣ ಸಣ್ಣ ಅಂಶಗಳನ್ನು ಗಮನಿಸುತ್ತಾನೆ ಮತ್ತು ಅದಕ್ಕೆ ಬೇಕಾದ ಸಿದ್ಧತೆ ಮತ್ತು ಬದಲಾವಣೆ ಮಾಡಿಕೊಳ್ಳುತ್ತಾನೆ ಅಂತಹ ಮನುಷ್ಯ ದೊಡ್ಡ ವಿಷಯವನ್ನು ಗಮನಿಸದೆ ಇರಲಾರ ಎನ್ನುವ ನಂಬಿಕೆಯಿಂದ ಇಂತಹ ಮಾತುಗಳು ಹುಟ್ಟಿವೆ.

ಬಹಳ ವೇಳೆ ಇದು ನಿಜ ಕೂಡ. ಚಿಕ್ಕ ವಿಷಯಗಳು ಎಂದರೆ ಅವು ಬಹಳ ಚಿಕ್ಕವು ಕೂಡ ಆಗಿರಬಹುದು. ಆದರೆ ಅದು ಮಾಡುವ ಬದಲಾವಣೆ ಬಹಳ ದೊಡ್ಡದು. ನನ್ನ ಅಪ್ಪ ಅವರ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಜನರ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರು. ಮಾತನಾಡಿಸುವಾಗ ಪ್ರತಿಯೊಬ್ಬರನ್ನೂ ಹೆಸರಿಡಿದು ಭುಜದ ಮೇಲೆ ಕೈ ಹಾಕಿ ಮಾತನಾಡಿಸುತ್ತಿದ್ದರು. ಹೀಗೆ ವ್ಯಕ್ತಿ ಯಾರೇ ಆಗಿರಲಿ ಅವರ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಎಷ್ಟೇ ಸಮಯದ ನಂತರ ಸಿಕ್ಕಾಗ ಅವರ ಹೆಸರಿಡಿದು ಮಾತನಾಡಿಸಿದಾಗ ಅದು ಮಾಡುವ ಪರಿಣಾಮವೇ ಬೇರೆ. ಇದರ ಮಹತ್ವವನ್ನು ಬಲ್ಲವನೇ ಬಲ್ಲ.

ಇದೇ ರೀತಿ ಮಾಡುವ ಕೆಲಸ, ತಯಾರಿಸುವ ಪದಾರ್ಥ, ನೀಡುವ ಸೇವೆಯಲ್ಲಿ ಕೂಡ ಅತ್ಯಂತ ಸಣ್ಣ ಪುಟ್ಟ ಅಂಶಗಳನ್ನು ಗಮನಿಸಿ ಸೇವೆ ನೀಡಿದರೆ ಅದು ಗ್ರಾಹಕನ ಮೇಲೆ ಬೀರುವ ಪರಿಣಾಮ, ಅದರ ಮೂಲಕ ವ್ಯಾಪಾರದ ಮೇಲೆ, ಗಳಿಕೆಯ ಮೇಲೆ ಆಗುವ ಪರಿಣಾಮ ಬಹಳ ದೊಡ್ಡದು. ನನ್ನ ಸ್ನೇಹಿತರೊಬ್ಬರು ಕಾಫಿ ಶಾಪ್ ನಡೆಸುತ್ತಿದ್ದಾರೆ.

ಇದನ್ನೂ ಓದಿ: Rangaswamy Mookanahalli Column: ಸಿಸು: ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ ಕುಗ್ಗದ ಧೈರ್ಯ !

ಅದು ಅವರು ಸಮಯವನ್ನು ಸರಿಯಾಗಿ ಕಳೆಯಲು ಆಯ್ದುಕೊಂಡ ಮಾರ್ಗ. 45ಕ್ಕೆ ನಿವೃತ್ತಿ ಪಡೆದು, ಇಷ್ಟದ ಕೆಫೆ ಬಿಸಿನೆಸ್ ಶುರು ಮಾಡಿದ್ದಾರೆ. ಗ್ರಾಹಕನ ಬೇಕು ಬೇಡಗಳನ್ನು ಅವರು ಬಹುಬೇಗ ಅರಿತು ಬಿಡುತ್ತಾರೆ. ಸಕ್ಕರೆ ಬೇಡ ಆದರೆ ಸ್ಟ್ರಾಂಗ್ ಕಾಫಿ ಇರಲಿ ಎನ್ನುವ ಗ್ರಾಹಕ ಎರಡನೇ ಬಾರಿ ಬಂದಾಗ ಅದನ್ನು ಹೇಳುವ ಅವಶ್ಯಕತೆ ಇರುವುದಿಲ್ಲ. ಇವರೇ ‘ಸ್ಟ್ರಾಂಗ್ ವಿಥೌಟ್ ಶುಗರ್ ಅಲ್ವಾ ಸಾರ್?’ ಎನ್ನುತ್ತಾರೆ.

ಬಂದ ಗ್ರಾಹಕನಲ್ಲಿ ನನ್ನ ಬೇಕು ಬೇಡವನ್ನು ಇವರು ಗಮನಿಸಿದ್ದಾರೆ. ನಾನು ಇವರಿಗೆ ಬಹಳ ಮುಖ್ಯ ಎನ್ನುವ ಭಾವನೆ ಬರುತ್ತದೆ. ನಿತ್ಯವೂ ಬರುವ ನೂರಾರು ಜನ ಗ್ರಾಹಕರ ಎಲ್ಲಾ ಬೇಕು ಬೇಡಗಳು ಅವರಿಗೆ ಮನಸಿನಲ್ಲಿ ಅಚ್ಚೊತ್ತಿದೆ. ಫಲಿತಾಂಶ ಅವರ ಕೆಫೆ ಸದಾ ಜನರಿಂದ ತುಂಬಿರುತ್ತದೆ! ವಿದ್ಯಾವಂತರಿಗೆ ಮಾತ್ರ ಈ ರೀತಿಯ ಗುಣ ಬಂದಿರುತ್ತದೆ, ಅಥವಾ ಅವರು ಅದನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿ ಕೊಂಡಿರುತ್ತಾರೆ ಎನ್ನುವಂತಿಲ್ಲ.

ಒಳ್ಳೆಯ ಗುಣ ಮತ್ತು ನಡತೆ ಯಾರೊಬ್ಬರ ಸ್ವತ್ತಲ್ಲ. ಅದು ಯಾರದೂ ಆಗಬಹುದು ಮತ್ತು ಎಲ್ಲರದೂ ಆಗಬಹುದು. ನಿಜ ಹೇಳಬೇಕೆಂದರೆ ಇಂತಹ ಗುಣ ಎಲ್ಲರದೂ ಆಗಬೇಕು. ಇದಕ್ಕೆ ಒಂದು ಉದಾಹರಣೆ ಎಂದರೆ ನಾನು ಬಾಲ್ಯ ಕಳೆದ ಪೀಣ್ಯ ಸ್ಲಂನಿಂದ ಅನತಿ ದೂರದಲ್ಲಿದ್ದ ದುರ್ಗಾ ಬುಕ್ ಸ್ಟಾಲ್ ಎನ್ನುವ ನ್ಯೂಸ್ ಪೇಪರ್ ಏಜೆನ್ಸಿ ಪಕ್ಕದಲ್ಲಿ ನಿತ್ಯವೂ ಸಂಜೆ ರಾಮಣ್ಣ ಎನ್ನುವವರು ಚಾಟ್ಸ್ ಹಾಕುತ್ತಿದ್ದರು. ಅದೊಂದು ಹಳೆಯ ತಳ್ಳುವಗಾಡಿ!

2

ರಾಮಣ್ಣ ಕೂಡ ಅಂದಿಗೆ 60ರ ಆಸುಪಾಸಿನಲ್ಲಿದ್ದರು. ಇಂದಿಗೆ ಅವರ ಇರುವಿಕೆ ಬಗ್ಗೆ ನನಗೆ ಗೊತ್ತಿಲ್ಲ. ಅವರು ಪ್ರತಿಯೊಬ್ಬ ಗ್ರಾಹಕನ ಹೆಸರಿನ ಮುಂದೆ ಅಣ್ಣ, ಅಣ್ಣಯ್ಯ, ತಮ್ಮ, ಮರಿ, ಪುಟಾಣಿ, ಕಂದ, ಅಮ್ಮಯ್ಯ ಎನ್ನುವ ಪದಗಳನ್ನು ಸಮಯ, ಸಂದರ್ಭ ಮತ್ತು ವ್ಯಕ್ತಿಗಳನ್ನು ನೋಡಿ ಹೇಳುತ್ತಿದ್ದರು. ಸಾಲದ್ದಕ್ಕೆ ಅಷ್ಟು ಜನರಿಗೆ ಚಾಟ್ಸ್ ಹೇಗೆ ಬೇಕು ಎನ್ನುವುದು ಅವರಿಗೆ ಗೊತ್ತಿರುತ್ತಿತ್ತು. ಖಾರ ಬೇಡದವರಿಗೆ ಆತ ಎಂದೂ ಖಾರ ಹಾಕಿ ಕೊಟ್ಟದ್ದು ನನಗಂತೂ ನೆನಪಿಲ್ಲ. ಇದನ್ನೇ ಅಲ್ಲವೇ ನಾವು ಮ್ಯಾನೇಜ್ಮೆಂಟ್‌ನಲ್ಲಿ ಅಟೆನ್ಷನ್ ಟು ಡೀಟೇಲ್ ಎನ್ನುವುದು! ಆತ ಯಾವ ಶಾಲೆಯನ್ನೂ ಕಲಿತಿರಲಿಲ್ಲ. ಆದರೂ ಆತನಿಗೆ ಚೆನ್ನಾಗಿ ಒಂದು ವಿಷಯ ಗೊತ್ತಾಗಿತ್ತು.

ಗ್ರಾಹಕನಿಗೆ ಸಾಧ್ಯವಾದಷ್ಟೂ ಉತ್ತಮ ಅನುಭವ ನೀಡಬೇಕು, ಆತನ ಬೇಕು ಬೇಡಗಳು ಅರಿತುಕೊಂಡರೆ ಯಶಸ್ಸು ಎನ್ನುವುದನ್ನು ತಿಳಿದುಕೊಂಡಿದ್ದರು. ಅವರ ಪುಟಾಣಿ ತಳ್ಳುಗಾಡಿಯ ಸುತ್ತ ಸದಾ ಜನಸಾಗರ ವಿರುತ್ತಿತ್ತು. ನಮ್ಮಲ್ಲಿ ಇಂತಹವರ ಸಂಖ್ಯೆ ವಿರಳ. ಆದರೆ ಯೂರೋಪು ದೇಶಗಳಲ್ಲಿ ಕೆಲಸ ಮಾಡುವರಲ್ಲಿ ಕೂಡ ಈ ಗುಣವನ್ನು ನಾವು ಯಥೇಚ್ಛವಾಗಿ ಕಾಣಬಹುದು. ಅದು ಕೆಲಸದ ಮೇಲಿನ ಶ್ರದ್ಧೆ ಮತ್ತು ಸಹಜೀವಿಯ ಬಗೆಗಿನ ಪ್ರೀತಿ ಮತ್ತು ಅನುಕಂಪದಿಂದ ಹುಟ್ಟಿದ್ದು. ‌ತೀರಾ ಇತ್ತೀಚಿಗೆ ಫಿನ್ ಲ್ಯಾಂಡ್ ಪ್ರವಾಸವನ್ನು ಮಾಡುವ ಯೋಗ ನನ್ನದಾಗಿತ್ತು.

ಫಿನ್‌ಲ್ಯಾಂಡ್ ಜಗತ್ತಿಗೆ ಮಾದರಿಯಾಗಿ ಮತ್ತು ಇತರ ದೇಶಗಳಿಗಿಂತ ಶ್ರೇಷ್ಠವಾಗಿ ನಿಂತಿರುವುದು ಅದು ಸಣ್ಣ ಸಣ್ಣ ವಿಷಯಗಳಿಗೆ ನೀಡುವ ಪ್ರಾಮುಖ್ಯದಿಂದ ಎನ್ನುವುದು ನಾನು ಕಂಡು ಕೊಂಡ ಸತ್ಯ. ಕೇವಲ ತಿನ್ನುವುದು ಮತ್ತು ಕುಡಿಯುವುದರ ಬಗ್ಗೆ ಮಾತ್ರವಲ್ಲ, ಬದುಕಿನ ಎಲ್ಲಾ ಅಂಶಗಳಲ್ಲೂ ಬಹು ಜನರಿಗೆ ಯಾವುದು ಉತ್ತಮ ಅನುಭವ ನೀಡಬಲ್ಲದು ಎನ್ನುವುದನ್ನು ಅವರು ಊಹಿಸಿಕೊಳ್ಳುತ್ತಾರೆ. ಮತ್ತು ಅದಕ್ಕೆ ತಕ್ಕಂತೆ ಬದಲಾವಣೆಗಳನ್ನು ಜಾರಿಗೆ ತರುತ್ತಾರೆ.

ಬಹುತೇಕರಿಗೆ ಯಾವ ಸಮಸ್ಯೆ ಬರಬಹುದು ಎನ್ನುವುದನ್ನು ಮನಗಂಡು ಅದಕ್ಕೆ ಪರಿಹಾರ ಒದಗಿಸುವ ಪದಾರ್ಥಗಳನ್ನು ನಿರ್ಮಿಸಿ ಮಾರುಕಟ್ಟೆಗೆ ಬಿಡುತ್ತಾರೆ. ಹೀಗಾಗಿ ಜಗತ್ತಿನೆಡೆ ಫಿನ್‌ಲ್ಯಾಂಡ್ ಎಂದರೆ ಆ ಮಟ್ಟದ ಗೌರವ. ಜಗತ್ತಿನ 20 ಪ್ರತಿಶತ ಸೇಲ್ಸ್‌ʼಮ್ಯಾನ್‌ಗಳು ಉಳಿದ 80 ಪ್ರತಿಶತ ಸೇಲ್ಸ್‌ʼಮ್ಯಾನ್‌ಗಳಿಗಿಂತ 16 ಪಟ್ಟು ಹೆಚ್ಚು ಹಣವನ್ನು ಗಳಿಸುತ್ತಾರೆ ಮತ್ತು ಗ್ರಾಹಕರು ಪದೇಪದೆ ಈ ಮಾರಾಟಗಾರರನ್ನೇ ಕೇಳಿಕೊಂಡು ಬರುತ್ತಾರೆ ಎನ್ನುತ್ತದೆ ಅಂಕಿಅಂಶ. ಹೀಗೇಕೆ ಎನ್ನುವುದನ್ನು ಹೇಳುವ ಅವಶ್ಯಕತೆಯಿಲ್ಲ ಎಂದುಕೊಳ್ಳುವೆ.

ಮೊಬೈಲ್ ಇರಬಹುದು, ಟಿವಿ, ವಾಷಿಂಗ್ ಮಷೀನ್, ಪದಾರ್ಥ ಯಾವುದೇ ಇರಲಿ ಗ್ರಾಹಕ ಕೇಳುವುದಕ್ಕೆ ಮುಂಚೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು, ಗ್ರಾಹಕನ ಅವಶ್ಯಕತೆ ಅರಿತು ಉತ್ತಮ ಪದಾರ್ಥವನ್ನು ಸಜೆ ಮಾಡುವುದು ಇವರ ಯಶಸ್ಸಿನ ಹಿಂದಿನ ಮಂತ್ರ. ಉಳಿದ 80 ಜನ ಗ್ರಾಹಕನಿಗೆ ಪದಾರ್ಥದ ಬಗ್ಗೆ ಎಷ್ಟು ಗೊತ್ತಿರುತ್ತದೆ ಅಷ್ಟನ್ನೇ ಮತ್ತೆ ಹೇಳುವುದರಿಂದ ಅವರು ಅ ಉಳಿದುಕೊಂಡರು. ಇದರರ್ಥ ಮಾಡುವ ಕೆಲಸದ ಪೂರ್ಣ ಮಾಹಿತಿ ನಮ್ಮದಾಗಿರಬೇಕು. ಜಗತ್ತಿನಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಿರಬೇಕು. ಅದಕ್ಕೆ ಸಂಬಂಧಿಸಿದಂತೆ ಸಿಗುವ ಎಲ್ಲಾ ಪುಸ್ತಕವನ್ನು, ಮಾಹಿತಿಯನ್ನು ಕಲೆ ಹಾಕಬೇಕು. ಮಾಡುವ ಕೆಲಸದಲ್ಲಿ ಅತ್ಯುತ್ತಮ ಎನ್ನಿಸಿಕೊಳ್ಳುವುದು ಗುರಿಯಾಗಿರಬೇಕು.

ಒಂದು ಅತಿ ಸಣ್ಣ ಮಾಹಿತಿ ಬದುಕನ್ನು ಬದಲಿಸಬಲ್ಲದು. ಇದೇಕೆ ಬಹಳ ಮುಖ್ಯ ಎನ್ನುವುದನ್ನು ನೋಡೋಣ.

- ಈ ರೀತಿ ಸಣ್ಣ ಸಣ್ಣ ಅಂಶಗಳನ್ನು ಗಮನಿಸುವುದರಿಂದ ಕೆಲಸದಲ್ಲಿ ಆಗುವ ತಪ್ಪುಗಳು ಬಹಳ ಕಡಿಮೆಯಾಗುತ್ತವೆ.

- ಕೆಲಸದಲ್ಲಿನ ಗುಣಮಟ್ಟ ಹೆಚ್ಚಾಗುತ್ತದೆ.

- ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ನಿರ್ಮಾಣವಾಗುತ್ತದೆ.

- ಸಂಸ್ಥೆಯ ಬಗೆಗಿನ ಗೌರವ ಹೆಚ್ಚಾಗುತ್ತದೆ. ಏಕವ್ಯಕ್ತಿ ಸಂಸ್ಥೆಯಾಗಿದ್ದರೆ ಅಥವಾ ಸೇವೆಯನ್ನು ನೀಡುವ ವ್ಯಕ್ತಿಯಾಗಿದ್ದರೆ ಆಗ ವ್ಯಕ್ತಿಯ ಬಗ್ಗೆ ಗೌರವ ಹೆಚ್ಚುತ್ತದೆ. ಇದರಿಂದ ಸಂಸ್ಥೆಯನ್ನು ಅಥವಾ ವ್ಯಕ್ತಿಯನ್ನು ಹುಡುಕಿಕೊಂಡು ಬರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ. ಜಗತ್ತಿಗೆ ಜಗತ್ತೇ ಕೆಲಸವಿಲ್ಲ, ಹಣವಿಲ್ಲ ಎನ್ನುವಾಗ ಕೂಡ ಇವರ ಬದುಕಿಗೆ ತೊಂದರೆಯಾಗುವುದಿಲ್ಲ.

- ಇಂತಹ ಮನಸ್ಥಿತಿಯಿಂದ ಸಮಾಜದಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಜೊತೆಗೆ ಹೊಸ ಆವಿಷ್ಕಾರ ಗಳಿಗೆ ಕೂಡ ಇದು ದಾರಿ ಮಾಡಿಕೊಡುತ್ತದೆ. - ಗೆಲುವು ಎನ್ನುವುದು ಅಡಿಕ್ಟಿವ್. ಅದು ಟೀಮ್ ವರ್ಕ್‌ಗೆ ಪ್ರೋತ್ಸಾಹ ನೀಡುತ್ತದೆ. ಒಂದು ತಂಡವಾಗಿ ಗೆಲ್ಲಲು ಬೇಕಾದ ಮನಸ್ಥಿತಿಯನ್ನು ಸೃಷ್ಟಿ ಮಾಡುತ್ತದೆ. - ಈ ರೀತಿ ಸಣ್ಣ ಅಂಶಗಳನ್ನು ಗಮನಿಸುವುದರಿಂದ, ಕಾನೂನು ಹೇಳುವ ಕೆಲವು ಅನುಸರಿಸಲೇಬೇಕಾದ ನಿಯಮಾವಳಿಗಳನ್ನು ಸಮಯಕ್ಕೆ ನಿರ್ವಹಿಸಲು ಸಾಧ್ಯವಾಗುತ್ತದೆ. ಗಮನಿಸಿ, ಕೆಲವೊಮ್ಮೆ ಈ ರೀತಿ ಅನುಸರಿಸದ ಕಾರಣ ಲಕ್ಷಾಂತರ ರೂಪಾಯಿ ಹಣವನ್ನು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ.

- ಈ ರೀತಿ ಡಿಟೇಲಿಂಗ್‌ನಲ್ಲಿ ಆಸಕ್ತಿ ಇರುವ ಕೆಲಸಗಾರ ಸಂಸ್ಥೆಯ ಆಸ್ತಿಯಾಗುತ್ತಾನೆ. ದೀರ್ಘಾವಧಿಯಲ್ಲಿ ಇದರಿಂದ ಬಹಳ ಹೆಚ್ಚಿನ ಲಾಭವಾಗುತ್ತದೆ.

- ನಿರಂತರತೆ ಕಾಯ್ದುಕೊಳ್ಳುವ ಕಾರಣ ವ್ಯಕ್ತಿ ಅಥವಾ ಸಂಸ್ಥೆ ಬ್ರ್ಯಾಂಡ್ ಆಗಿ ಬೆಳೆಯಲು ಸಹಕಾರಿ ಯಾಗುತ್ತದೆ. ಈ ಗುಣ ಎಲ್ಲರಲ್ಲೂ ಹುಟ್ಟಿನಿಂದ ಬಂದಿರಬೇಕು ಎಂದಿಲ್ಲ. ಇದನ್ನು ನಾವು ಕಲಿಯಬಹುದು. ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬಹದು. ಹೇಗೆ ಈ ರೀತಿಯ ಕ್ಷಮತೆಯನ್ನು ಬೆಳೆಸಿಕೊಳ್ಳಬಹುದು ಎನ್ನುವುದರ ಬಗ್ಗೆ ಚಿತ್ತ ಹರಿಸೋಣ.

೧) ಸನ್ನಿವೇಶವನ್ನು ಸಿಮ್ಯುಲೇಶನ್ ಮೂಲಕ ಸೃಷ್ಟಿಸುವುದು. ಗಮನಿಸಿ, ನಿಜವಾದ ಸನ್ನಿವೇಶದಲ್ಲಿ ಸಣ್ಣಪುಟ್ಟ ಅಂಶಗಳನ್ನು ಗಮನಿಸದೆ ಹೋದರೆ ಅದರಿಂದ ತಪ್ಪುಗಳಾಗುತ್ತವೆ. ಒಂದು ತಪ್ಪು ಅನೇಕ ತಪ್ಪುಗಳಿಗೆ ಕಾರಾಣವಾಗುತ್ತದೆ. ಹೀಗಾಗಿ ನೈಜ ಎನ್ನಿಸುವ ಸನ್ನಿವೇಶವನ್ನು ಆಟದ ಮೂಲಕ ಸೃಷ್ಟಿಸುವುದನ್ನು ಸಿಮ್ಯುಲೇಶನ್ ಎನ್ನಲಾಗುತ್ತದೆ. ಇಂತಹ ಆಟದಲ್ಲಿ ಕೆಲಸಗಾರರನ್ನು ತೊಡಗಿಸು ವುದರಿಂದ ಅವರಲ್ಲಿ ಈ ರೀತಿಯ ಅಟೆನ್ಷನ್ ಟು ಡೀಟೇಲ್ ಕಲಿಯುವ ಕ್ಷಮತೆ ಬರುತ್ತದೆ. ತಪ್ಪುಗಳಾದಾಗ ಎಲ್ಲಿ ಮತ್ತು ಏಕೆ ತಪ್ಪಾಗಿದೆ ಎಂದು ಗ್ರಹಿಸಿ ಕೊಂಡು ತಿದ್ದಿ ಕೊಳ್ಳುವ ಅವಕಾಶ ಕೂಡ ಇರುತ್ತದೆ.

೨) ತಪ್ಪುಗಳಾದಾಗ ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವಂತೆ ಕೆಲಸಗಾರರನ್ನು ಮೋಟಿವೇಟ್ ಮಾಡುವುದು ಬಹಳ ಮುಖ್ಯ. ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಕಲಿಕೆಯ ಹಾದಿಯ ಪ್ರಥಮ ಹೆಜ್ಜೆ.

೩) ಮಾಡುವ ಕೆಲಸವನ್ನು ಸಾಧ್ಯವಾದಷ್ಟು ಸಣ್ಣದಾಗಿ ಒಡೆಯುವುದು ಮಾಡಬೇಕು. ಅಂದರೆ ಬ್ರೇಕಿಂಗ್ ಡೌನ್ ದಿ ವರ್ಕ್. ಒಂದು ದೊಡ್ಡ ಕೆಲಸವನ್ನು ಸಣ್ಣ ಸಣ್ಣದಾಗಿ ವಿಭಾಗಿಸಿದಾಗ ಅದರಲ್ಲಿನ ಸಣ್ಣಸಣ್ಣ ಅಂಶಗಳನ್ನು ಕೂಡ ಗ್ರಹಿಸಲು ಸಾಧ್ಯವಾಗುತ್ತದೆ.

೪) ಮಾನಸಿಕ ಒತ್ತಡ ಕಡಿಮೆ ಇರುವಂತೆ ನೋಡಿಕೊಳ್ಳುವುದರಿಂದ ಕೆಲಸಗಾರರಲ್ಲಿ ಕ್ಷಮತೆ ಹೆಚ್ಚಾಗುತ್ತದೆ. ಆಗ ಗಮನಿಸುವ ಶಕ್ತಿ ಕೂಡ ಹೆಚ್ಚಾಗುತ್ತದೆ. ವೈಯಕ್ತಿಕ ಒತ್ತಡ ಕೂಡ ಸಂಸ್ಥೆಯ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಎಂಪ್ಲಾಯೀಸ್ ವೆಲ್ ಬೀಯಿಂಗ್ ಅದರಲ್ಲೂ ಮೆಂಟಲ್ ವೆಲ್ ಬೀಯಿಂಗ್ ಬಗ್ಗೆ ಗಮನ ಕೊಡಬೇಕು.

೫) ಉತ್ತಮ ವಾತಾವರಣ ನಿರ್ಮಾಣ ಮಾಡುವುದರಿಂದ ಕೂಡ ಅಟೆನ್ಷನ್ ಟು ಡಿಟೈಲಿಂಗ್ ಸಾಧಿಸಲು ಸಾಧ್ಯ. ವರ್ಕ್ ಎನ್ವಿರಾನ್ಮೆಂಟ್ ಬಹಳ ಮುಖ್ಯ. ಅದು ಮೇಕ್ ಆರ್ ಬ್ರೇಕ್ ಎನ್ನುವ ಸನ್ನಿವೇಶವನ್ನು ಸೃಷ್ಟಿಸುವ ತಾಕತ್ತು ಹೊಂದಿರುತ್ತದೆ. ಹೀಗಾಗಿ ಒಳ್ಳೆಯ ಕೆಲಸದ ವಾತಾವರಣ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಟ್ಟಾರೆ ನಾವು ಮಾಡುವ ಕೆಲಸ, ನೀಡುವ ಸೇವೆಯ ಸಂಪೂರ್ಣ ಮಾಹಿತಿ ತಿಳಿದುಕೊಂಡು, ಪೂರ್ಣ ತನ್ಮಯತೆಯಿಂದ ತೊಡಗಿಸಿಕೊಂಡು, ನಮ್ಮನ್ನು ನಾವು ಗ್ರಾಹಕನ ಜಾಗದಲ್ಲಿ ಕಲ್ಪಿಸಿಕೊಂಡು ನೋಡಿದಾಗ ಇದಕ್ಕೆ ಉತ್ತರ ಸಿಗುತ್ತದೆ. ಗ್ರಾಹಕನ ಸಮಸ್ಯೆ ನಮ್ಮ ಸಮಸ್ಯೆ ಎಂದುಕೊಂಡಾಗ ನಾವು ನೋಡುವ ರೀತಿ ಬದಲಾಗುತ್ತದೆ. ಹೀಗಾಗಿ ಪೂರ್ಣ ಉಪಶಮನ ಕೂಡ ದೊರೆಯುತ್ತದೆ. ಸಂತೃಪ್ತ ಗ್ರಾಹಕನಿಗಿಂತ ಬೇರೆ ದೊಡ್ಡ ಜಾಹೀರಾತು ಜಗತ್ತಿನಲ್ಲಿಲ್ಲ ಎನ್ನುವ ಸತ್ಯ ಗೊತ್ತಾದರೆ ಅಟೆನ್ಷನ್ ಟು ಡಿಟೈಲಿಂಗ್ ತಂತಾನೆ ಎಲ್ಲರೂ ಶುರು ಮಾಡುತ್ತಾರೆ. ಮಾಡಬೇಕು. ಇಲ್ಲದಿದ್ದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಗಾಲವಿರುವುದಿಲ್ಲ. ನೆನಪಿರಲಿ, ಇಲ್ಲಿಯವರೆಗೂ ಕಣ್ಣಿಗೆ ಕಾಣುವ ದೊಡ್ಡ ಕಲ್ಲನ್ನು ಯಾರೂ ಎಡವಿ ಬಿದ್ದು ಹಲ್ಲು ಮುರಿದುಕೊಂಡ ಉದಾಹರಣೆ ನಮ್ಮ ಮುಂದಿಲ್ಲ. ಆದರೆ ಲಕ್ಷಾಂತರ ಜನ ನಿತ್ಯವೂ ಸಣ್ಣ, ಕಣ್ಣಿಗೆ ಕಾಣದ ಕಲ್ಲಿನ ಕಾರಣ ಎಡವುತ್ತಲೇ ಇರುತ್ತಾರೆ.