ಶಾಸ್ತ್ರಿ ನಮನ
ಹರ್ಷ ಹೆಗಡೆ ಕೊಂಡದಕುಳಿ
ದೇಶ ಕಂಡ ಅತ್ಯಂತ ಸರಳ, ಸಜ್ಜನ, ಪ್ರಾಮಾಣಿಕ ಪ್ರಧಾನಿ ಎಂದರೆ ಲಾಲ್ ಬಹಾದ್ದೂರ್ ಶಾಸ್ತ್ರಿ. ದೇಶವನ್ನು ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೋಘವಾಗಿ ನಿಭಾಯಿಸಿದ ಕೀರ್ತಿ ಶಾಸ್ತ್ರೀಜಿ ಅವರಿಗೆ ಸಲ್ಲುತ್ತದೆ. ಆಂತರಿಕ ಹಾಗೂ ಬಾಹ್ಯ ಪರಿಸ್ಥಿತಿಗಳೆಲ್ಲವೂ ದೇಶದ ಅಭಿವೃದ್ಧಿಗೆ ವಿರುದ್ಧ ವಾಗಿದ್ದ ಸಂದರ್ಭದಲ್ಲಿ ದೇಶವನ್ನು ಹೊಸ ದಿಶೆಯತ್ತ ಮುನ್ನಡೆಸಿದ ಪರಿ ನಿಜಕ್ಕೂ ಅದ್ಭುತ ವಾದದ್ದು. ಅಷ್ಟು ಅಚ್ಚುಕಟ್ಟಾಗಿ ತನಗಿದ್ದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಭಾರತದಂತಹ ದೇಶವನ್ನು ನಡೆಸಿದ್ದು ಶಾಸ್ತ್ರೀಜಿ. ಶಾಸ್ತ್ರಿ ಹುಟ್ಟಿದ್ದು 1904ರ ಅ.2ರಂದು. ಕಿತ್ತು ತಿನ್ನುವ ಬಡತನ ಪುಟ್ಟ ಬಾಲಕ ಶಾಸ್ತ್ರಿಯನ್ನು ಬಹು ಸರಳವಾಗಿ ರೂಪಿಸಿತು. ಇವರು ಪ್ರಾಥಮಿಕ ಶಾಲೆಗೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಾಗಿತ್ತು.
ದೋಣಿಗೆ ಕೊಡಲು ಹಣವಿಲ್ಲವಾದ್ದರಿಂದ ಶಾಸ್ತ್ರೀಜಿ ಈಜಿಕೊಂಡೇ ಶಾಲೆಗೇ ಹೋಗುತ್ತಿದ್ದರಂತೆ. ಪದವಿ ಶಿಕ್ಷಣವನ್ನು ಕಾಶಿ ವಿದ್ಯಾಪೀಠದಿಂದ ಪಡೆದುಕೊಂಡ ಬಳಿಕ ಶ್ರೀವಾಸ್ತವ್ ಆಗಿದ್ದವರು ಶಾಸ್ತ್ರಿ ಎಂಬ ಬಿರುದಾಂಕಿತರಾದರು. 1915ರಲ್ಲಿ ಗಾಂಧೀಜಿ ಭಾಷಣಗಳನ್ನು ಕೇಳಿ ಪ್ರಭಾವಿತರಾದರು.
1921ರಲ್ಲಿ ಅಸಹಕಾರ ಚಳುವಳಿಯ ಮುಖಾಂತರ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. 6 ವರ್ಷಗಳ ಸೆರೆಮನೆವಾಸವನ್ನೂ ಅನುಭವಿಸಿದರು. ಕೆಲವು ಚಳುವಳಿಗಳಲ್ಲಿ ಭಾಗವಹಿಸುವಾಗ ಇವರು ಅದೆಷ್ಟು ಎಳೆಯ ವಯಸ್ಸಿನವರಾಗಿದ್ದರೆಂದರೆ, ಬಂಧಿಸಿದ ಪೊಲೀಸರು ಸಣ್ಣ ಹುಡುಗ ಎಂದು ಬುದ್ಧಿವಾದ ಹೇಳಿ ಬಿಟ್ಟು ಕಳುಹಿಸುತ್ತಿದ್ದರಂತೆ.
ಇದನ್ನೂ ಓದಿ: Nanjangud Mohan Column: ಸಂಬಂಧಗಳಿಗೆ ಮಠದ ಗೋಡೆಗಳಿಲ್ಲ; ಮಾನವೀಯ ಗುಣಗಳಿಗೆ ಗಡಿಗಳಿಲ್ಲ
ಶಾಸ್ತ್ರೀಜಿ ಭಾರತದ ಪ್ರಧಾನ ಮಂತ್ರಿಗಳಾದರೂ ಏಕಾಏಕಿ ಆ ಹುದ್ದೆಗೆ ಏರಿದವರಲ್ಲ. ಸಾಮಾನ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿಯೇ ಹಂತ ಹಂತವಾಗಿ ಮೇಲೆ ಬಂದವರು. ರೈಲ್ವೆ ಮಂತ್ರಿಯಾಗಿ ಕಾರ್ಯ ನಿರ್ವಹಿಸಿ, 1956ರಲ್ಲಿ ರೈಲ್ವೆ ಅಪಘಾತವಾದಾಗ ನೈತಿಕ ಹೊಣೆ ಹೊತ್ತು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದನ್ನು ಜನ ಇಂದಿಗೂ ಹೊಣೆಗಾರಿಕೆ, ಪ್ರಾಮಾಣಿಕತೆಯ ಪರಾಕಾಷ್ಠೆಯಾಗಿ ನೆನೆಯುತ್ತಾರೆ. ಮುಂದೆ ಕೇಂದ್ರ ಗೃಹ ಮಂತ್ರಿಯಾಗಿಯೂ ಕೆಲಸ ನಿರ್ವಹಿಸಿದರು.
1964ರಲ್ಲಿ ನೆಹರೂ ನಿಧನರಾದ ಬಳಿಕ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯೆದ್ದಿತ್ತು. ಶಾಸ್ತ್ರೀಜಿ ಅಧಿಕಾರದ ಚುಕ್ಕಾಣಿ ಹಿಡಿದಾಗ ದೇಶದ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಆಗಷ್ಟೇ ಚೀನಾದೊಂದಿಗೆ ಭಾರತ ಸೋತು ಹೋಗಿದ್ದ ಕಾರಣ ಇತ್ತ ಪಾಕಿಸ್ತಾನ ಸುಲಭವಾಗಿ ಭಾರತವನ್ನು ಆಕ್ರಮಿಸುವ ತಯಾರಿ ನಡೆಸಿತ್ತು.
ಪಾಕಿಸ್ತಾನಿಗಳು ಜಮ್ಮು ಕಾಶ್ಮೀರದ ಕೆಲವು ಭಾಗಗಳನ್ನು ಆಕ್ರಮಿಸಿಕೊಳ್ಳಲು ಆರಂಭಿಸಿದರು. ಭಾರತದ ಹಲವು ಟ್ಯಾಂಕ್‌ಗಳನ್ನೂ ವಶಪಡಿಸಿಕೊಂಡರು. ಶಾಸ್ತ್ರಿ ತಡಮಾಡಲಿಲ್ಲ. ದೇಶದ ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ಕೊಟ್ಟುಬಿಟ್ಟರು. ಶಾಸ್ತ್ರಿ ಸೇನೆಗೆ ಪಾಕಿಸ್ತಾನದ ಲಾಹೋರ ನ್ನು ವಶಪಡಿಸಿಕೊಳ್ಳಲು ತಾಕೀತು ಮಾಡಿದರು. ಭಾರತದ ಸೇನೆ ಪಾಕಿಸ್ತಾನದೊಳಕ್ಕೆ ನುಗ್ಗಿಯೇ ಬಿಟ್ಟಿತು. ಪಾಕಿಸ್ತಾನಕ್ಕೆ ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಭಾರತೀಯ ಸೇನೆ ಲಾಹೋರ್ ನ ಹೊರವಲಯವನ್ನು ವಶಪಡಿಸಿಕೊಂಡು ಮುಂದೆ ಬರುತ್ತಿತ್ತು.
ಪರಿಸ್ಥಿತಿ ಅರಿತ ಪಾಕಿಸ್ತಾನ ಇನ್ನು ತನಗೆ ಉಳಿಗಾಲವಿಲ್ಲವೆಂದು ಯುದ್ಧ ನಿಲ್ಲಿಸುವಂತೆ ಒತ್ತಡ ತರಲು ಅಮೆರಿಕಾ, ರಷ್ಯಾದ ಕಾಲಿಗೆ ಬಿತ್ತು. ಅಮೆರಿಕಾ ಭಾರತಕ್ಕೆ ಯುದ್ಧ ವಿರಾಮ ಘೋಷಿಸದಿದ್ದರೆ ಗೋಧಿ ರಫ್ತು ನಿಲ್ಲಿಸುತ್ತೇವೆ ಎಂದು ಬೆದರಿಕೆ ಹಾಕಿತು. ಪ್ರತಿಯಾಗಿ ಶಾಸ್ತ್ರೀಜಿ, ನೀವು ಕಳುಹಿಸುವ ಗೋಧಿಯನ್ನು ನಮ್ಮ ದೇಶದ ಹಂದಿಗಳೂ ತಿನ್ನುವುದಿಲ್ಲ ಎಂದು ಖಡಕ್ ಪ್ರತ್ಯುತ್ತರ ನೀಡಿದರು.
ಮುಂದಾಗಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿದಾಗ ಭಾರತ ಯುದ್ಧ ವಿರಾಮ ಘೋಷಣೆ ಮಾಡಿತು. ಆ ಸಮಯದಲ್ಲಿ ದೇಶವನ್ನು ಆಹಾರದ ಕೊರತೆ ತೀವ್ರವಾಗಿ ಕಾಡುತ್ತಿತ್ತು. ಇದನ್ನು ಹೋಗಲಾಡಿಸುವ ಸಲುವಾಗಿ ಶಾಸ್ತ್ರೀಜಿ ದೇಶದ ಜನತೆಗೆ ವಾರದಲ್ಲಿ ಒಂದು ದಿನ ಉಪವಾಸ ಇರುವಂತೆ ಕರೆಕೊಟ್ಟರು. ಈ ಕರೆಗೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಬರೀ ಜನರಿಗಷ್ಟೇ ಪಾಲಿಸಲು ಹೇಳದೆ ತಾವೂ ಸಹ ಮನೆಯಲ್ಲಿ ಸೋಮವಾರ ಅಡುಗೆ ಮಾಡದಂತೆ ತಮ್ಮ ಮಡದಿಗೆ ಹೇಳಿದ್ದರಂತೆ. ಆ ದಿನ ಅವರ ಮನೆಯಲ್ಲಿ ಯಾರೂ ಸಹ ಊಟ ಮಾಡುತ್ತಿರಲಿಲ್ಲವಂತೆ.
ಒಬ್ಬ ನಾಯಕನಾದವನು ಇರಬೇಕಾದ ಪರಿಗೆ ಶಾಸ್ತ್ರೀಜಿ ಅದ್ಭುತ ಉದಾಹರಣೆ. ಒಮ್ಮೆ ಶಾಸ್ತ್ರೀಜಿ ಗುಜರಾತ್‌ನ ಆನಂದ್ ಎಂಬಲ್ಲಿ ಭಾರತದ ಶ್ವೇತ ಕ್ರಾಂತಿಯ ಹರಿಕಾರ ವರ್ಗಿಸ್ ಕುರಿಯನ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಆ ರಾತ್ರಿ ಅವರು ಅ ತಂಗಲು ನಿರ್ಧರಿಸಿದರು. ಆದರೆ ಕುರಿಯನ್ ಅವರ ಮನೆಯಲ್ಲಲ್ಲದೆ ಆ ಊರಿನಲ್ಲಿ ಅಪರಿಚಿತರಾಗಿ. ಹೀಗೆಂದಾಗ ಸ್ವತಃ ಕುರಿಯನ್ ಅವರೇ ಬೆಚ್ಚಿಬಿದ್ದಿದ್ದರಂತೆ.
ನಂತರ ಅವರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಶಾಸ್ತ್ರೀಯವರನ್ನು ಆ ಹಳ್ಳಿಗೆ ಬಿಟ್ಟು ಬಂದಿದ್ದರಂತೆ. ಅಲ್ಲಿ ತಾನು ದಾರಿ ತಪ್ಪಿ ಬಂದ ಪ್ರಯಾಣಿಕ ಎಂದು ತಮ್ಮನ್ನು ಪರಿಚಯಿಸಿಕೊಂಡ ಶಾಸ್ತ್ರೀಜಿ ರಾತ್ರಿ ಆ ಊರಿನವರೊಂದಿಗೆ ಸಹಕಾರಿ ಒಕ್ಕೂಟಗಳು ಹೇಗೆ ಸಹಕಾರಿಯಾಗಿವೆ ಎಂದೆಲ್ಲ ತಿಳಿದುಕೊಂಡು ಬಂದು ಮರುದಿನ ಕುರಿಯನ್ ಅವರಿಗೆ ಅಲ್ಲಿ ಆನಂದ್‌ನಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಕೇಳಿಕೊಂಡರಂತೆ.
ಶಾಸ್ತ್ರೀಜಿ ಗೃಹ ಮಂತ್ರಿಗಳಾದಾಗ ಅವರ ಬಳಿ ಸ್ವಂತ ಮನೆಯೇ ಇರಲಿಲ್ಲ. ಒಂದು ಬಾಡಿಗೆ ಮನೆಯಲ್ಲಿ ವಾಸಿಮಾಡುತ್ತಿದ್ದರು. ಹೀಗಾಗಿಯೇ ಅವರನ್ನು ಎಲ್ಲರೂ ಹೋಮ್‌ಲೆಸ್ ಹೋಂ ಮಿನಿಸ್ಟರ್ ಎಂದು ಕರೆಯುತ್ತಿದ್ದರು. ಅವರು ಪ್ರಧಾನಿಯಾಗಿದ್ದಾಗ ಅವರ ಬಳಿ ಸ್ವಂತ ಕಾರೂ ಸಹ ಇರಲಿಲ್ಲ. ಅವರು ಸರ್ಕಾರಿ ಕಾರನ್ನು ತಮ್ಮ ಸ್ವಂತಕ್ಕೆ ಬಳಸುತ್ತಿರಲಿಲ್ಲ.
ಸರ್ಕಾರದ ಯಾವುದೇ ಹುದ್ದೆಯಲ್ಲಿಲ್ಲದೆ, ಒಂದು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರದೆ ಸರ್ಕಾರಿ ಬಂಗಲೆಯಲ್ಲಿ ಬಿಟ್ಟಿ ವಾಸಿಸುವ ಈಗಿನ ರಾಜಕಾರಣಿಗಳ ನಡುವೆ ಶಾಸ್ತ್ರಿ ಆದರ್ಶವಾಗಿ ನಿಲ್ಲುತ್ತಾರೆ. ಸ್ವಂತ ಕಾರು ಕೊಳ್ಳಲು ಅವರು ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಹಾಕಿದಾಗ ಮರುದಿನವೇ ಅವರಿಗೆ ಸಾಲ ದೊರೆಯಿತು, ಇದರಿಂದ ಆಶ್ಚರ್ಯಚಕಿತರಾದ ಇವರು ಸಾಮಾನ್ಯನಿಗೂ ಇದೆ ಸೌಲಭ್ಯ ಸಿಗುವುದೇ ಎಂದು ಪ್ರಶ್ನಿಸಿದ್ದರಂತೆ.
ಭಾರತ ಪಾಕಿಸ್ತಾನ ಯುದ್ಧ ವಿರಾಮದ ಬಳಿಕ ಶಾಂತಿ ಮಾತುಕತೆಗೆ ರಷ್ಯಾ ಭಾರತವನ್ನು ಆಹ್ವಾನಿ ಸಿತು. ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ಸತತ ಏಳು ದಿನಗಳ ಕಾಲ ನಡೆದ ಶಾಂತಿ ಮಾತುಕತೆಯಲ್ಲಿ ಶಾಸ್ತ್ರೀ ಪಾಕಿಸ್ತಾನದ ಯಾವ ಶರತ್ತುಗಳಿಗೂ ಒಪ್ಪಿರಲಿಲ್ಲ. ಜೊತೆಗೆ ನಿಮ್ಮ ಷರತ್ತುಗಳಿಗೆ ಒಪ್ಪಲು ನೀವು ಮತ್ತೊಬ್ಬ ಪ್ರಧಾನಿ ಬರುವವರೆಗೂ ಕಾಯಬೇಕು ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು.
ಕೊನೆಯಲ್ಲಿ ಕಡೆಯ ದಿನ ಮನಸ್ಸು ಬದಲಿಸಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆ ದಿನ ರಾತ್ರಿ ಶಾಸ್ತ್ರೀ ಹಾಲು ಕುಡಿದು ಎಂದಿನಂತೆ ಮಲಗಿದ್ದರು. ಆದರೆ ಮರುದಿನ ಬೆಳಿಗ್ಗೆ ಏಳಲೇ ಇಲ್ಲ. ಅವರ ಆಪ್ತ ರಾಮನಾಥ ಹಾಲು ಕೊಟ್ಟು ತೆರಳಿದ್ದರು. ಕೊನೆಗೆ ತಮ್ಮ ಕುಟುಂಬದವರೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಅದೇ ಕೊನೆಯಾಗಿ ಹೋಯ್ತು.
ಶಾಸ್ತ್ರೀಜಿ ಹೃದಯಾಘಾತದಿಂದ ಸತ್ತರು ಎಂದು ವರದಿ ಮಾಡಲಾಯ್ತೆ ವಿನಃ ಅವರ ಮರಣೋತ್ತರ ಪರೀಕ್ಷೆ ನಡೆಸಲೇ ಇಲ್ಲ. ಶಾಸ್ತ್ರೀಜಿ ನಿಧನರಾದಾಗಲೂ ಅವರ ಬಳಿ ಇನ್ನೂ ಒಂದು ಸ್ವಂತ ಮನೆಯಿರಲಿಲ್ಲ ಎನ್ನಲಾಗುತ್ತದೆ.