ಪ್ರಕಾಶಪಥ
ಪ್ರಕಾಶ ಶೇಷರಾಘವಾಚಾರ್
ನೇಣುಗಂಬ ಎದುರಿದ್ದರೂ ‘ವಂದೇ ಮಾತರಂ’ ಎಂದು ಘೋಷಿಸುತ್ತಾ ನಗುನಗುತ್ತಾ ಪ್ರಾಣತ್ಯಾಗ ಮಾಡಿದವರ ಪರಂಪರೆಯೇ ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್‌ನಲ್ಲಿತ್ತು. ಆದರೆ ಇಂದು ಅದೇ ಕಾಂಗ್ರೆಸ್‌ನ ನಾಯಕರು ನೇಣುಗಂಬಕ್ಕೆ ಏರಿಸಿದರೂ ವಂದೇ ಮಾತರಂ ಹಾಡುವುದಿಲ್ಲ ಎಂಬ ನಿಲುವು ತಾಳುವ ಮಟ್ಟಕ್ಕೆ ಬಂದಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ವಂದೇ ಮಾತರಂ ಹಾಡಿದವರಿಂದ, ವಂದೇ ಮಾತರಂನ ಪೂರ್ಣ ಗೀತೆಯನ್ನೇ ಹಾಡಲು ಹಿಂಜರಿಯುವ ಇಂದಿನ ಕಾಂಗ್ರೆಸ್‌ವರೆಗೆ- ಇದು ಕೇವಲ ನಿಲುವಿನ ಬದಲಾವಣೆಯಲ್ಲ; ಎಂಟು ದಶಕಗಳಲ್ಲಿ ಕಾಂಗ್ರೆಸ್‌ನ ರಾಜಕೀಯ ಮತ್ತು ನೈತಿಕ ಅಧಃಪತನದ ಕನ್ನಡಿ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ಈ ಬದಲಾವಣೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಮಳೆಗಾಲದ ಸಂಸತ್ ಅಧಿವೇಶನದಲ್ಲಿ ವಂದೇ ಮಾತರಂನ ಆರು ಚರಣಗಳನ್ನು ಹಾಡುವುದಕ್ಕೆ ಸಂಬಂಧಿಸಿದ ಮಸೂದೆ ಅಂಗೀಕಾರಗೊಂಡಿದ್ದು, ಅದರ ಮೂಲಕ ಪೂರ್ಣ ಗೀತೆಯನ್ನು ಹಾಡುವುದು ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ. ಈ ಕಾಯಿದೆ ಜಾರಿಗೆ ಬರುವ ಮೊದಲು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ವಂದೇ ಮಾತರಂನ ಎರಡು ಚರಣಗಳನ್ನಷ್ಟೇ ಹಾಡಲಾಗುತ್ತಿತ್ತು.
ಇದನ್ನೂ ಓದಿ: Prakash Shesharaghavachar Column: ವಿಜಯೇಂದ್ರ ಕೈ ಬಲಪಡಿಸಿದ ಬಳ್ಳಾರಿ ಪಾದಯಾತ್ರೆ
ಈ ಮಸೂದೆಯಲ್ಲಿ ನ್ಯೂನತೆಗಳಿವೆ, ಆಕ್ಷೇಪಾರ್ಹ ಅಂಶಗಳಿವೆ ಅಥವಾ ಆರು ಚರಣಗಳನ್ನು ಹಾಡುವುದಕ್ಕೆ ವಿರೋಧವಿದೆ ಎಂದಾದರೆ, ಮಸೂದೆ ಸಂಸತ್ತಿನಲ್ಲಿ ಮಂಡನೆಯಾದಾಗಲೇ ವಿರೋಧ ಪಕ್ಷದ ಸದಸ್ಯರು ತಮ್ಮ ಆಕ್ಷೇಪವನ್ನು ದಾಖಲಿಸಬೇಕಿತ್ತು. ಸರ್ಕಾರದ ಗಮನ ಸೆಳೆದು, ಅದರ ಸಾಧಕ-ಬಾಧಕಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕಿತ್ತು. ಆದರೆ ಸಂಸತ್ತಿನ ಕಲಾಪವೇ ನಡೆಯದಂತೆ ಗದ್ದಲ ಸೃಷ್ಟಿಸಿ, ಚರ್ಚೆಗೆ ಅವಕಾಶವಿಲ್ಲದ ವಾತಾವರಣ ನಿರ್ಮಿಸಿದ ಬಳಿಕ, ಮಸೂದೆ ಅಂಗೀಕಾರಗೊಂಡಿದೆ ಎಂದು ಹೇಳಿ ಇಂದು ‘ನಾವು ಆರು ಚರಣಗಳನ್ನು ಹಾಡುವುದಿಲ್ಲ’ ಎನ್ನುವುದು ಎಷ್ಟು ಸಮರ್ಥನೀಯ? ಈ ವಿವಾದ ಭುಗಿಲೆದ್ದಿದ್ದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಪೂರ್ತಿ ಹಾಡಲು ಮುಂದಾಗಿದ್ದನ್ನು ಸೋನಿಯಾ ಗಾಂಧಿ ಅತ್ಯಂತ ಅಸಹನೆ ಮತ್ತು ಕೋಪದಿಂದ ನಿಲ್ಲಿಸಲು ಹೇಳಿದ ವಿಡಿಯೋ ವೈರಲ್ ಆದ ತರುವಾಯ.
ಪರ ಮತ್ತು ವಿರೋಧದ ಗುಂಪುಗಳು ಇದರ ಬಗ್ಗೆ ವಾಗ್ಯುದ್ಧ ನಡೆಸುತ್ತಿದ್ದಾರೆ. ಇದರ ಬೆನ್ನ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಸೆಪ್ಟೆಂಬರ್ 8ರ ಸರ್ಕಾರಿ ಆದೇಶದ ಮೂಲಕ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯ ಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಸಾಮಾನ್ಯ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸೂಚಿಸಲಾಗಿದೆ.
ಇದಕ್ಕೆ ಇನ್ನಷ್ಟು ವಿವಾದದ ಸ್ವರೂಪ ನೀಡಿದ್ದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರ ಹೇಳಿಕೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಸರ್ಕಾರದ ಎರಡು ಚರಣಗಳ ಆದೇಶವನ್ನು ಮೀರಿ ಪೂರ್ಣ ವಂದೇ ಮಾತರಂ ಹಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಇನ್ನಷ್ಟು ಚುಚ್ಚುವಂತೆ ಮತ್ತು ಪಂಚ್ ಇರುವಂತೆ, ಪುತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ವಂದೇ ಮಾತರಂನ ಆರು ಚರಣಗಳನ್ನು ಹಾಡುವುದನ್ನೇ ಪೊಲೀಸ್ ಅಧಿಕಾರಿ ತಡೆಯಲು ಯತ್ನಿಸುತ್ತಾರೆ. ಓಟಿಗಾಗಿ ಅಧಿಕಾರಸ್ಥರು ತುಷ್ಟೀಕರಣ ರಾಜಕಾರಣ ಮಾಡಿದರೆ, ಲಾಭದಾಯಕ ಹುದ್ದೆಗಾಗಿ ಅಧಿಕಾರಿಗಳು ಸರ್ಕಾರದ ತುಷ್ಟೀಕರಣ ಮಾಡುತ್ತಾರೆ.
ಇವೆರಡರ ನಡುವೆ ಬಲಿಯಾಗುವುದು ಮಾತ್ರ ರಾಷ್ಟ್ರಭಕ್ತಿ! ದೌರ್ಭಾಗ್ಯ, ವಂದೇ ಮಾತರಂ ಹಾಡುವುದಕ್ಕೂ ಅಧಿಕಾರಿಗಳ ಅನುಮತಿ ಬೇಕಾದ ಪರಿಸ್ಥಿತಿ ಬಂದಿದೆ. ಬಂಕಿಮಚಂದ್ರ ಚಟ್ಟೋ ಪಾಧ್ಯಾಯರು ರಚಿಸಿದ ವಂದೇ ಮಾತರಂ ಸ್ವಾತಂತ್ರ್ಯ ಹೋರಾಟಗಾರರ ಪಾಲಿಗೆ ಕೇವಲ ಗೀತೆಯಾಗಿರಲಿಲ್ಲ. ಅದು ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದ ರಣಘೋಷವಾಗಿತ್ತು.
ಅನೇಕ ಕ್ರಾಂತಿಕಾರಿಗಳು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸುವಾಗ ಈ ಘೋಷವನ್ನು ಮೊಳಗಿಸಿದ್ದರು. ತಮ್ಮ ವರ್ತಮಾನವನ್ನು ಬಲಿಕೊಟ್ಟು ನಮ್ಮ ಭವಿಷ್ಯವನ್ನು ಕಟ್ಟಿಕೊಟ್ಟ ಆ ವೀರರ ರಣಗೀತೆಯೇ ವಂದೇ ಮಾತರಂ. ಆದರೆ ಇಂದು ಓಲೈಕೆ ರಾಜಕೀಯದ ಲೆಕ್ಕಾಚಾರದಲ್ಲಿ ಅದೇ ವಂದೇ ಮಾತರಂನ ಪೂರ್ಣ ಗೀತೆಯನ್ನು ಹಾಡುವುದಕ್ಕೂ ಹಿಂಜರಿಯುವ ಪರಿಸ್ಥಿತಿ, ಸ್ವಾತಂತ್ರ್ಯ ತಂದು ಕೊಟ್ಟವರು ಎಂದು ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ ಪಾರ್ಟಿಗೆ ಬಂದೊದಗಿದೆ.
ವಂದೇ ಮಾತರಂ ಒಂದು ಪಕ್ಷದ ಸ್ವತ್ತು ಅಲ್ಲ. ಅದು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಅವಿಭಾಜ್ಯ ಭಾಗ. 1923ರ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಅವರು ವಂದೇ ಮಾತರಂ ಹಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್ ಆಕ್ಷೇಪವನ್ನು ಲೆಕ್ಕಿಸದೆ ವಂದೇ ಮಾತರಂ ಹಾಡಿದರು. 1937ರಲ್ಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ವಂದೇ ಮಾತರಂನ ಕೆಲವು ಭಾಗಗಳಿಗೆ ಮತ್ತು ಅದರಲ್ಲಿನ ಧಾರ್ಮಿಕ ಅರ್ಥವ್ಯಾಖ್ಯಾನಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಲೀಗ್‌ನ ಈ ವಿರೋಧದ ಹಿನ್ನೆಲೆಯಲ್ಲಿ ವಂದೇ ಮಾತರಂ ವಿಷಯ ಕಾಂಗ್ರೆಸ್‌ನೊಳಗೂ ಗಂಭೀರ ಚರ್ಚೆಗೆ ಕಾರಣವಾಯಿತು. ಜವಾಹರಲಾಲ್ ನೆಹರು ಅವರು 1937ರ ಅಕ್ಟೋಬರ್ 20ರಂದು ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದ ಪತ್ರದಲ್ಲಿ, ವಂದೇ ಮಾತರಂನ ‘ಆನಂದಮಠ’ ಹಿನ್ನೆಲೆ ಮುಸ್ಲಿಮರಿಗೆ ಅಸಮಾಧಾನ ಉಂಟುಮಾಡಬಹುದು ಎಂದು ದಾಖಲಿಸಿದ್ದರು.
ಅದಾದ ಬಳಿಕ, 1937ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಸ್ಲಿಂ ಸಮುದಾ ಯದ ಆಕ್ಷೇಪಗಳನ್ನು ಪರಿಗಣಿಸಿ, ರಾಷ್ಟ್ರೀಯ ಸಭೆಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಶಿಫಾರಸು ಮಾಡಿತು. 24 ಜನವರಿ 1950ರಂದು ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಜನ ಗಣ ಮನ ಮತ್ತು ವಂದೇ ಮಾತರಂ ಎರಡಕ್ಕೂ ಸಮಾನ ಗೌರವ ಮತ್ತು ಸ್ಥಾನಮಾನ ನೀಡಬೇಕೆಂಬ ನಿಲುವನ್ನು ಅಧಿಕೃತವಾಗಿ ವ್ಯಕ್ತಪಡಿಸಿದ್ದರು.
1937ರಲ್ಲಿ ಕೇವಲ ಎರಡು ಚರಣ ಹಾಡಲು ಕೈಗೊಂಡ ನಿರ್ಣಯ ರಾಜಕೀಯ ಪಕ್ಷವೊಂದರ ತೀರ್ಮಾನವೇ ಹೊರತು ಅದಕ್ಕೆ ಯಾವುದೇ ಕಾಯಿದೆಯ ಬಲವಿರಲಿಲ್ಲ. 2026ರಲ್ಲಿ ಆರು ಚರಣ ಗಳನ್ನು ಹಾಡಲು ಕಡ್ಡಾಯಗೊಳಿಸಿರುವುದು ಕಾಯಿದೆಯ ಬಲದ ಆಧಾರದ ಮೇಲೆ; ಹೀಗಾಗಿ ನಾವು 1937ರ ನಿರ್ಣಯದಂತೆ ಎರಡು ಚರಣ ಹಾಡುತ್ತೇವೆ ಎನ್ನುವುದು ಕಾಂಗ್ರೆಸ್ ನಾಯಕರು ಹೇಳುವುದು ವಿತಂಡವಾಗುತ್ತದೆ.
1950 ರಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡ ದಿನದಿಂದಲೂ ವಂದೇ ಮಾತರಂ ಎರಡೇ ಚರಣ ಹಾಡಬೇಕು ಎಂದು ಉಲ್ಲೇಖಿಸಿಲ್ಲ. ಆದ ಕಾರಣ 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೈಗೊಂಡ ನಿರ್ಣಯ ಕೇವಲ ಪಕ್ಷದ ತೀರ್ಮಾನವಾಗಿತ್ತು. ಸ್ವಾತಂತ್ರ್ಯ ಪೂರ್ವದಿಂದಲೇ ಮುಸ್ಲಿಂ ಸಮುದಾಯದ ಬೆಂಬಲ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ನಾಯಕತ್ವ ತುಷ್ಟೀಕರಣದ ರಾಜಕಾರಣಕ್ಕೆ ಮುಂದಾಗಿತ್ತು ಎಂಬ ಟೀಕೆಗಳು ಇತಿಹಾಸದಲ್ಲಿ ದಾಖಲಾಗಿವೆ.
ಮಹಾತ್ಮ ಗಾಂಧಿಯವರು ತಮ್ಮ ಪ್ರಾರ್ಥನೆಗಳಲ್ಲಿ ಬಳಸುತ್ತಿದ್ದ ರಘುಪತಿ ರಾಘವ ರಾಜಾರಾಮ್ ಭಜನೆಯಲ್ಲಿ ಈಶ್ವರ ಎಂಬುದರ ಜೊತೆಗೆ ಕೇಶವ ತೆಗೆದು ಅ ಸೇರಿಸಿ, ಈಶ್ವರ ಅ ತೇರೆ ನಾಮ್ ಎಂದು ಭಜನೆಯನ್ನು ರೂಪಿಸಿದರು. ಆದರೆ ಇಂತಹ ಸೌಹಾರ್ದದ ಸಂಕೇತಗಳ ಹೊರತಾಗಿಯೂ, ಮುಸ್ಲಿಂ ರಾಜಕೀಯ ನಾಯಕತ್ವದ ನಿಲುವು ಮೃದುವಾಗಲಿಲ್ಲ.
ಬದಲಾಗಿ, ಪ್ರತ್ಯೇಕ ರಾಜಕೀಯ ಹಕ್ಕುಗಳು ಮತ್ತು ಬೇಡಿಕೆಗಳ ಕುರಿತ ಅವರ ಒತ್ತಾಯ ಮುಂದು ವರಿಯಿತು. ಬಂಕಿಮಚಂದ್ರ ಚಟ್ಟೋಪಾಧ್ಯಾಯರು ನವೆಂಬರ್ 7, 1875ರಂದು ಈ ಕವಿತೆಯನ್ನು ರಚಿಸಿದರು. ಇದು ಮೊದಲು ಬಂಗದರ್ಶನ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ 1882ರಲ್ಲಿ ಪ್ರಕಟವಾದ ಅವರ ಆನಂದಮಠ ಕಾದಂಬರಿಯ ಭಾಗವಾಯಿತು.
2025ರಲ್ಲಿ ವಂದೇ ಮಾತರಂನ 150ನೇ ವರ್ಷಾಚರಣೆಯ ಸಂದರ್ಭದಲ್ಲಿ, ಅದರ ಪೂರ್ಣ ಆವೃತ್ತಿಗೆ ಸೂಕ್ತ ಗೌರವ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಧಿಕೃತ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆಯ ಗಾಯನಕ್ಕೆ ಒತ್ತು ನೀಡಿತು ಮತ್ತು ವಂದೇ ಮಾತರಂಗೆ ರಾಷ್ಟ್ರಗೀತೆಯ ಸಮಾನ ಗೌರವದ ಸ್ಥಾನವನ್ನು ನೀಡಲಾಯಿತು. 1952ರಲ್ಲಿ ಜನಸಂಘ ಸ್ಥಾಪನೆಯಾದ ದಿನದಿಂದಲೇ, ಪಕ್ಷದ ವಿವಿಧ ಕಾರ್ಯಕ್ರಮಗಳ ಆರಂಭದಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡುವುದು ನಮ್ಮ ರಾಷ್ಟ್ರೀಯ ಸಂಸ್ಕೃತಿಯ ಭಾಗವಾಗಿದೆ. ಆದ್ದರಿಂದ ಇದು ಯಾವುದೇ ಹೊಸ ನಿಯಮ ದಿಂದ ಆರಂಭವಾದ ಆಚರಣೆಯಲ್ಲ; ದೇಶಭಕ್ತಿ ಮತ್ತು ರಾಷ್ಟ್ರೀಯ ಭಾವನೆಯೊಂದಿಗೆ ವಂದೇ ಮಾತರಂಗೆ ಗೌರವ ಸಲ್ಲಿಸುವುದು ಬಹುಕಾಲದ ಪರಂಪರೆಯಾಗಿದೆ.
ವಂದೇ ಮಾತರಂ ಮೂಲತಃ ದೇಶಭಕ್ತಿಗೀತೆಯಾಗಿ ರಚಿತವಾದ ಕಾವ್ಯ. ರಾಷ್ಟ್ರಗೀತೆಯಂತೆ ಇದರ ಸಾಮೂಹಿಕ ಗಾಯನದ ಪರಂಪರೆ ಆರಂಭದಿಂದಲೂ ಇರಲಿಲ್ಲ. ಆದರೆ ಈಗ ವಂದೇ ಮಾತರಂ ಚರ್ಚೆ ತೀವ್ರವಾಗುತ್ತಿದ್ದಂತೆ, ಬಿಜೆಪಿ ನಾಯಕರಿಗೆ ಪೂರ್ಣ ಗೀತೆ ಹಾಡಿ ಎಂದು ಸವಾಲು ಹಾಕಲಾಗುತ್ತಿದೆ. ಇದರ ನಡುವೆ ವಂದೇ ಮಾತರಂ ಕುರಿತು ಮತ್ತೊಂದು ಕುತೂಹಲಕಾರಿ ವೈರುಧ್ಯ ನ್ಯಾಯಾಲಯದ ಮೆಟ್ಟಿಲೇರಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲ ಗಿರೀಶ್ ಭಾರದ್ವಾಜ್ ಅವರು ರಾಜ್ಯ ಸರ್ಕಾರವು ವಂದೇ ಮಾತರಂನ ಕೇವಲ ಎರಡು ಚರಣಗಳನ್ನು ಹಾಡಲು ಸೂಚಿಸಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಮಧ್ಯಂತರ ತಡೆ ಕೊಡುವುದಿಲ್ಲ ಎಂದು ಕೋರ್ಟ್ ಹೇಳಿದೆ. ಇನ್ನೊಂದೆಡೆ, ಸಂಗೀತಜ್ಞ ಟಿ.ಎಂ. ಕೃಷ್ಣ ಅವರು ವಂದೇ ಮಾತರಂನ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನೊಂದೆಡೆ ಬೌದ್ಧ ಮತೀಯ ಚಳವಳಿಕಾರ ಬಿಡಿ ಬೋರ್ಕರ್ ಅವರೂ ವಂದೇ ಮಾತರಂ ಹಾಡುವುದು ತಮ್ಮ ಧಾರ್ಮಿಕ ಭಾವನೆಗಳಿಗೆ ವಿರುದ್ಧ ಎಂದು ಸುಪ್ರೀಂ ಮೆಟ್ಟಿಲು ಏರಿದ್ದಾರೆ. ರಾಷ್ಟ್ರೀಯ ಭಾವನೆ ಮೂಡಿಸುವ ಯತ್ನಕ್ಕೆ ಎಷ್ಟೊಂದು ಅಡೆತಡೆಗಳು! ಒಂದೆಡೆ ಎರಡು ಚರಣಗಳಷ್ಟೇ ಸಾಕು ಎನ್ನುವ ಸರ್ಕಾರದ ನಿಲುವು, ಮತ್ತೊಂದೆಡೆ ಆರು ಚರಣಗಳನ್ನು ಕಡ್ಡಾಯ ಗೊಳಿಸಬಾರದು ಎನ್ನುವ ಅರ್ಜಿಗಳು- ಇವೆರಡರ ನಡುವೆ ನ್ಯಾಯಾಲಯಗಳ ತೀರ್ಪುಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂಬುದೇ ಈಗ ಕುತೂಹಲದ ವಿಷಯ.
ವಂದೇ ಮಾತರಂ ಹಾಡಲು ಇಚ್ಛಿಸದವರು ಹಾಡದೇ ಮೌನವಾಗಿ ನಿಂತರೂ ಸಾಕು. ಎದ್ದು ನಿಂತು ಗೌರವ ಸಲ್ಲಿಸುವುದೇ ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ನೀಡಿದ ಅಪಾರ ಕೊಡುಗೆಗೆ. ಎಲ್ಲರೂ ಹಾಡಲೇಬೇಕು ಎಂಬ ಕಡ್ಡಾಯವಿಲ್ಲ. ಆದರೆ ವಂದೇ ಮಾತರಂಗೆ ಧರ್ಮದ ಬಣ್ಣ ಹಚ್ಚಿ ವಿವಾದ ಸೃಷ್ಟಿಸಿದಾಗ ಈ ಸರಳ ಸತ್ಯವೇ ಮಸುಕಾಗಿದೆ.