Prakash Shesharaghavachar Column: ವಿಜಯೇಂದ್ರ ಕೈ ಬಲಪಡಿಸಿದ ಬಳ್ಳಾರಿ ಪಾದಯಾತ್ರೆ
ರಾಜಕೀಯ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು, ಆತ್ಮವಿಶ್ವಾಸ ಮತ್ತು ಹೋರಾಟದ ಮನೋ ಭಾವವನ್ನು ತುಂಬಬೇಕಾದರೆ, ಅದು ಕೇವಲ ಔಪಚಾರಿಕ ಸಭೆ, ಸಮಾರಂಭಗಳಿಂದ ಸಾಧ್ಯವಿಲ್ಲ. ಜನರ ಸಮಸ್ಯೆಗಳ ಪರವಾಗಿ ಬೀದಿಗಿಳಿದು ನಡೆಸುವ ಜನಪರ ಹೋರಾಟವೇ ಕಾರ್ಯಕರ್ತರಿಗೆ ಹೊಸ ಶಕ್ತಿಯನ್ನು ತುಂಬುವುದು.
-
ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಹತ್ತು ದಿನಗಳ ಬಳ್ಳಾರಿ ಪಾದಯಾತ್ರೆ ಕೇವಲ ಒಂದು ರಾಜಕೀಯ ಕಾರ್ಯಕ್ರಮವಲ್ಲ, ಅದು ರಾಜ್ಯ ಬಿಜೆಪಿಗೆ ಹೊಸ ಚೈತನ್ಯ, ಕಾರ್ಯಕರ್ತರಿಗೆ ಹೊಸ ಉತ್ಸಾಹ ಮತ್ತು ಪಕ್ಷದ ಹೋರಾಟದ ಮನೋಭಾವಕ್ಕೆ ಪುನಃಶ್ಚೇತನ ನೀಡುವ ಮಹತ್ವದ ಹೆಜ್ಜೆಯಾಯಿತು. ಪಾದಯಾತ್ರೆಯು ಕರ್ನಾಟಕದ ರಾಜಕೀಯದಲ್ಲಿ ಬಿ.ವೈ. ವಿಜಯೇಂದ್ರ ಅವರ ನಾಯಕತ್ವ ದ ಬಲವಾದ ಹೆಜ್ಜೆಗುರುತನ್ನು ಮೂಡಿಸಿದೆ.
ರಾಜ್ಯ ಬಿಜೆಪಿಗೆ ಕಳೆದ ಮೂರು ವರ್ಷಗಳಿಂದ ಒಂದು ರೀತಿಯ ‘ಬೂಸ್ಟರ್ ಡೋಸ್’ನ ಅಗತ್ಯವಿತ್ತು. ಪಕ್ಷದ ಕಾರ್ಯಕರ್ತರು ಹಿಂದಿನ ಚೈತನ್ಯಭರಿತ, ಹೋರಾಟದ ಮನೋಭಾವದ ಬಿಜೆಪಿಯನ್ನು ಮತ್ತೆ ಕಾಣುವ ಕಾತರದಲ್ಲಿದ್ದರು. ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರ ನೇತೃತ್ವದ ಯುವ ನಾಯಕತ್ವದ ಮುಂದೆ ಪಕ್ಷವನ್ನು ಮತ್ತೊಮ್ಮೆ ಹೋರಾಟಕ್ಕೆ ಸಜ್ಜುಗೊಳಿಸಿ, ಕಾರ್ಯಕರ್ತ ರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ತುಂಬುವ ಮಹತ್ವದ ಸವಾಲು ಎದುರಾಗಿತ್ತು.
ರಾಜಕೀಯ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು, ಆತ್ಮವಿಶ್ವಾಸ ಮತ್ತು ಹೋರಾಟದ ಮನೋ ಭಾವವನ್ನು ತುಂಬಬೇಕಾದರೆ, ಅದು ಕೇವಲ ಔಪಚಾರಿಕ ಸಭೆ, ಸಮಾರಂಭಗಳಿಂದ ಸಾಧ್ಯವಿಲ್ಲ. ಜನರ ಸಮಸ್ಯೆಗಳ ಪರವಾಗಿ ಬೀದಿಗಿಳಿದು ನಡೆಸುವ ಜನಪರ ಹೋರಾಟವೇ ಕಾರ್ಯಕರ್ತರಿಗೆ ಹೊಸ ಶಕ್ತಿಯನ್ನು ತುಂಬುವುದು.
ಈ ನಿಟ್ಟಿನಲ್ಲಿ ಹತ್ತು ದಿನಗಳ ಬಳ್ಳಾರಿ ಪಾದಯಾತ್ರೆ ಕೇವಲ ಒಂದು ರಾಜಕೀಯ ಕಾರ್ಯಕ್ರಮ ವಲ್ಲ, ಅದು ರಾಜ್ಯ ಬಿಜೆಪಿಗೆ ಹೊಸ ಚೈತನ್ಯ, ಕಾರ್ಯಕರ್ತರಿಗೆ ಹೊಸ ಉತ್ಸಾಹ ಮತ್ತು ಪಕ್ಷದ ಹೋರಾಟದ ಮನೋಭಾವಕ್ಕೆ ಪುನಃಶ್ಚೇತನ ನೀಡುವ ಮಹತ್ವದ ಹೆಜ್ಜೆಯಾಯಿತು. ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿಗಳ ಹಗರಣದಲ್ಲಿ ಆರೋಪಿಯಾಗಿ, ಸಿದ್ದರಾಮಯ್ಯ ಸಂಪುಟ ದಿಂದ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಆರೋಪಗಳಿಂದ ಸಂಪೂರ್ಣ ಮುಕ್ತರಾಗುವ ಮುನ್ನವೇ ಡಿ.ಕೆ. ಶಿವಕುಮಾರ್ ಅವರು ಮತ್ತೆ ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರು.
ಇದನ್ನೂ ಓದಿ: Prakash Shesharaghavachar Column: ರಾಹುಲ್ ಗಾಂಧಿ ಮತ್ತೊಮ್ಮೆ ಫೇಲ್!
ಈ ನಿರ್ಧಾರದ ಮೂಲಕ ಅವರು ಬಿಜೆಪಿಗೆ ಸರ್ಕಾರದ ವಿರುದ್ಧ ಹೋರಾಡಲು ಅಯಾಚಿತ ವಾಗಿಯೇ ಒಂದು ಪ್ರಬಲ ರಾಜಕೀಯ ಅಸ್ತ್ರವನ್ನು ಒದಗಿಸಿದರು. ವಾಲ್ಮೀಕಿ ಹಗರಣದ ವಿರುದ್ಧ ಹಿಂದೆಯೂ ಸದನದ ಒಳಗೂ ಹೊರಗೂ ನಿರಂತರ ಹೋರಾಟ ನಡೆಸಿದ್ದ ಬಿಜೆಪಿಗೆ, ನಾಗೇಂದ್ರ ಅವರ ಮರುಸೇರ್ಪಡೆ ಆಡಳಿತ ಪಕ್ಷವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಅವಕಾಶವಾಯಿತು.
ರಾಜ್ಯಾಧ್ಯಕ್ಷರ ಕರೆಯ ಮೇರೆಗೆ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಸಾವಿರಾರು ಕಾರ್ಯಕರ್ತರು ರೋಷಾವೇಶದಿಂದ ಬೀದಿಗಿಳಿದು ಹೋರಾಟ ನಡೆಸಿದರು. ವಿಧಾನ ಸೌಧಕ್ಕೆ ಬರುವುದಿಲ್ಲ ಎಂಬ ವಿಶ್ವಾಸದಲ್ಲಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ವಿಜಯೇಂದ್ರ ನೇತೃತ್ವದ ಕಾರ್ಯಕರ್ತರು ಒಮ್ಮೆಗೆ ವಿಧಾನಸೌಧದ ದೇವರಾಜ ಅರಸು ದ್ವಾರದ ಬಳಿ ಪ್ರತಿಭಟನೆ ಮಾಡಿ ಪೊಲೀಸರನ್ನು ಕಕ್ಕಾಬಿಕ್ಕಿ ಮಾಡಿದರು. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡು ವವರೆಗೆ ಸದನದ ಕಲಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಎರಡೂ ಸದನಗಳ ವಿರೋಧ ಪಕ್ಷದ ನಾಯಕರು ಘೋಷಿಸಿದರು.
ಹತ್ತು ದಿನದ ಕಲಾಪದಲ್ಲಿ ಯಾವುದೇ ಚರ್ಚೆ ನಡೆಯದ ಕಾರಣ ಸರ್ಕಾರ ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡಿತು. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸಿದ ಸಂಘಟಿತ ಮತ್ತು ನಿರಂತರ ಹೋರಾಟವು ಸರ್ಕಾರದ ಮೇಲೆ ತೀವ್ರ ರಾಜಕೀಯ ಒತ್ತಡವನ್ನು ಹೇರಿತು. ಇದರ ಪರಿಣಾಮವಾಗಿ ಮುಖ್ಯಮಂತ್ರಿಯಾದ ನಂತರ ನಡೆದ ಮೊದಲ ಅಧಿವೇಶನದಲ್ಲಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ತಮ್ಮ ವಿಚಾರವನ್ನು ವ್ಯಕ್ತಪಡಿಸುವ ಅವಕಾಶದಿಂದಲೂ ವಂಚಿತರಾದರು.
ಒಟ್ಟಿನಲ್ಲಿ, ಬೀದಿಯಿಂದ ವಿಧಾನಸೌಧದವರೆಗೆ ನಡೆದ ಈ ಹೋರಾಟವು ರಾಜ್ಯ ಬಿಜೆಪಿಯ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿ, ಪಕ್ಷದ ಹೋರಾಟದ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿತು. ಸದನದ ಅಧಿವೇಶನ ಮುಗಿಯುತ್ತಿದ್ದಂತೆಯೇ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಲಿಂಗಸಗೂರಿನಿಂದ ಬಳ್ಳಾರಿಯವರೆಗೆ 170 ಕಿಲೋಮೀಟರ್ ಪಾದಯಾತ್ರೆ ಘೋಷಿಸಿದರು.
ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣ, ಸಚಿವ ನಾಗೇಂದ್ರ ಅವರ ರಾಜೀನಾಮೆ ಸೇರಿದಂತೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು, ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವ ಹೋರಾಟಕ್ಕೆ ಬಿಜೆಪಿ ಸಜ್ಜಾಯಿತು. ಬಿಜೆಪಿಯ ಈ ನಿರಂತರ ಒತ್ತಡ ಮತ್ತು ನಕಾರಾತ್ಮಕ ಪ್ರಚಾರದ ಭೀತಿಗೆ ಕಾಂಗ್ರೆಸ್ ಸರ್ಕಾರ ಕೊನೆಗೂ ಮಣಿಯಬೇಕಾಯಿತು.
ದೆಹಲಿ ನಾಯಕರ ನಿರ್ದೇಶನದಂತೆ ಸಚಿವ ಬಿ.ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಇನ್ನೂ ಸರಿಯಾಗಿ ನಿಲ್ಲುವ ಮೊದಲೇ ಸಂಪುಟದ ಮೊದಲ ವಿಕೆಟ್ ಪತನಗೊಂಡಿತ್ತು. ನಾಗೇಂದ್ರರವರಿಗೆ ವಾಲ್ಮೀಕಿ ನಿಗಮದ 187 ಕೋಟಿ ಹಣದ ದುರುಪಯೋಗದ ಆರೋಪಗಳು ಎದುರಾದಾಗ ಇದರಿಂದ ದಲಿತ ಸಮಾಜಕ್ಕೆ ಆದ ನಷ್ಟದ ಬಗ್ಗೆ ಕಾಳಜಿಯೇ ಇರಲಿಲ್ಲ.ಆದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೂಡಲೇ, ನಾನು ದಲಿತನಾಗಿರುವುದರಿಂದ ನನ್ನನ್ನು ಗುರಿಯಾಗಿಸಲಾಗಿದೆ ಎಂಬ ಸಮರ್ಥನೆಗೆ ಮೊರೆ ಹೋದದ್ದು ಮಾತ್ರ ಅತ್ಯಂತ ಪೇಲವವಾಗಿತ್ತು.
ಹಗರಣದ ಹೊಣೆಗಾರಿಕೆ ಎದುರಾದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು, ರಾಜೀನಾಮೆ ಯ ನಂತರ ಅದಕ್ಕೆ ಜಾತಿಯ ಬಣ್ಣ ನೀಡುವುದು- ಇದು ದಲಿತ ಸಮಾಜದ ನೋವಿಗೆ ನ್ಯಾಯ ಮಾಡುವ ಪ್ರಯತ್ನವಲ್ಲ; ರಾಜಕೀಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ದುರ್ಬಲ ಪ್ರಯತ್ನವಾಗಿತ್ತು.
ಪಕ್ಷದ ವಲಯದಲ್ಲಿ ನಾಗೇಂದ್ರ ರಾಜಿನಾಮೆ ತರುವಾಯ ಪಾದಯಾತ್ರೆ ನಡೆಯುವುದಾ? ಎಂಬ ಪ್ರಶ್ನೆ ಕೇಳಿ ಬಂದಿತು. ಬೇಡ ಅನ್ನುವ ಸಲಹೆಯು ಸಹಾ ಕೇಳಿ ಬಂದಿತು. ಆದರೆ ವಿಜಯೇಂದ್ರ ರವರು ಪಾದಯಾತ್ರೆ ನಡೆಯಬೇಕು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಬೇಕು ಎಂಬ ದೃಢ ಸಂಕಲ್ಪ ಮಾಡಿದ್ದರ ಪರಿಣಾಮ ಹತ್ತು ದಿನಗಳ 170 ಕಿಮೀ ಪಾದಯಾತ್ರೆಗೆ ಸೆಪ್ಟಂಬರ್ 1ರಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಂದ ಅದ್ದೂರಿಯಾಗಿ ಚಾಲನೆ ನೀಡಿದರು. ಹತ್ತು ದಿನಗಳ ಬಳ್ಳಾರಿ ಚಲೋ ಪಾದಯಾತ್ರೆಯು ಕೇವಲ ನಡಿಗೆಯಾಗಿರಲಿಲ್ಲ.
ಜನರ ಸಂಕಷ್ಟವನ್ನು ಅರಿಯುವ ಸಾಧನವಾಯಿತು. ಪಾದಯಾತ್ರೆಯ ಮೂರನೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಾದಯಾತ್ರೆಯ ನಡುವೆಯೇ ರೈತರೊಂದಿಗೆ ಬೆರೆತು, ಅವರ ಬದುಕಿನ ನೈಜ ಸಂಕಷ್ಟವನ್ನು ಅರಿಯುವ ಪ್ರಯತ್ನ ಮಾಡಿದರು.
ಕೆಸರಿನ ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದರು. ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು, ಅವರ ಸಮಸ್ಯೆಗಳನ್ನು ಆಲಿಸಿದರು. ಕುನ್ನಟಗಿ ಕ್ಯಾಂಪ್‌ನ್ನಲ್ಲಿ ರೈತರ ಜಮೀನಿ ನಲ್ಲಿಯೇ ರೈತ ಮಹಿಳೆಯ ರೊಂದಿಗೆ ನೆಲದ ಮೇಲೆ ಕುಳಿತು ಮಧ್ಯಾಹ್ನದ ಊಟ ಸವಿದರು. ಕಲ್ಯಾಣ ಕರ್ನಾಟಕದ ಸಾಂಪ್ರದಾಯಿಕ ಊಟವನ್ನು ಸೇವಿಸುತ್ತಾ, ರೈತರ ಬೆಳೆ, ಮಳೆ, ಸಾಲ ಮತ್ತು ಸರ್ಕಾರದ ನೆರವಿನ ಕುರಿತು ಅವರ ಅಹವಾಲುಗಳನ್ನು ಆಲಿಸಿದರು.
ಪಾದಯಾತ್ರೆಯ ಸಂದರ್ಭದಲ್ಲಿ ಜೆನ್ ಝೀಯೊಂದಿಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೇರವಾಗಿ ಸಂವಾದ ನಡೆಸಿದರು. ಉದ್ಯೋಗ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಯುವಕರಿಗೆ ದೊರೆಯಬೇಕಾದ ಅವಕಾಶಗಳ ಕುರಿತು ಯುವಕರ ಅಭಿಪ್ರಾಯ ಗಳನ್ನು ಆಲಿಸಿದರು. ಪಾದಯಾತ್ರೆಯುದ್ದಕ್ಕೂ ಭೇಟಿಯಾದ ಯುವಕರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ, ಅವರ ನಿರೀಕ್ಷೆಗಳು ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲಾಯಿತು. ಕೇವಲ ರಾಜಕೀಯ ಭಾಷಣಕ್ಕೆ ಸೀಮಿತವಾಗದೆ, ನಿಮ್ಮ ಸಮಸ್ಯೆ ಏನು? ನಿಮ್ಮ ನಿರೀಕ್ಷೆ ಏನು? ಎಂದು ಯುವಕರ ಮಾತಿಗೆ ಕಿವಿಗೊಡುವ ಸಂವಾದಕ್ಕೆ ಆದ್ಯತೆ ನೀಡಲಾಯಿತು.
ಪಾದಯಾತ್ರೆಯ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸ ಲಾಯಿತು. ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವನ್ನು ಸ್ಮರಿಸಿ, ಗುರುಗಳಿಗೆ ಗೌರವ ಸಲ್ಲಿಸಲಾಯಿತು. ಇದರ ಜೊತೆಗೆ ಶಿಕ್ಷಕರೊಂದಿಗೆ ನೇರವಾಗಿ ಸಂವಾದ ನಡೆಸಿ ಅಭಿಪ್ರಾಯಗಳನ್ನು ಆಲಿಸಲಾಯಿತು. ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ಬಳಿ ರಾಮಾಯಣ, ಮಹಾಭಾರತ ಹಾಗೂ ವಿವಿಧ ಜಾನಪದ ಕಥೆಗಳನ್ನು ಹಗಲು ವೇಷಗಾರರಾಗಿ ಬಿತ್ತರಿಸುತ್ತಾ ತಮ್ಮ ವೃತ್ತಿಜೀವನ ನಡೆಸುತ್ತಿರುವ ಅಲೆಮಾರಿ ಬುಡ್ಗ ಜಂಗಮ ಸಮುದಾಯದವರನ್ನು ಭೇಟಿ ಮಾಡಿದರು.
ಬುಡ್ಗ ಜಂಗಮ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಆತ್ಮೀಯವಾಗಿ ಚರ್ಚಿಸಿದರು. ವಿಶೇಷವಾಗಿ ಒಳಮೀಸಲಾತಿ, ಉದ್ಯೋಗಾವಕಾಶಗಳು ಸೇರಿದಂತೆ ಅಲೆಮಾರಿ ಜನಾಂಗದ ಆಶೋತ್ತರಗಳನ್ನು ಆಲಿಸಿ, ಅವರ ಬದುಕಿನ ಸಂಕಷ್ಟಗಳನ್ನು ಹತ್ತಿರದಿಂದ ಅರಿತುಕೊಂಡರು. ‘ಬಳ್ಳಾರಿ ಚಲೋ’ ಪಾದಯಾತ್ರೆಯ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ಜನರ ಸಮಸ್ಯೆಗಳನ್ನು ಅರಿತುಕೊಳ್ಳುವ, ಅವರ ನೋವು- ನಿರೀಕ್ಷೆಗಳನ್ನು ಆಲಿಸುವ ಹಾಗೂ ಅದಕ್ಕೆ ಪರಿಹಾರದ ದಾರಿ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನವಿತ್ತು.
ಬಳ್ಳಾರಿಯ ಬಿಸಿಲಿನ ಜಳವು ಪಾದಯಾತ್ರೆಯ ಉತ್ಸಾಹ ಕುಗ್ಗಿಸಲು ಸಾಧ್ಯವಾಗಲಿಲ್ಲ. ದಿನ ಕಳೆದಂತೆ ಪಾದಯಾತ್ರೆಯೊಂದಿಗೆ ಜನರ ಬೆಂಬಲವು ಹೆಚ್ಚುತ್ತಾ ಹೋಯಿತು. ಸಾವಿರ ಜನರಿಂದ ಆರಂಭವಾಗಿದ್ದ ಸಭೆಗಳು ಕ್ರಮೇಣ ಹತ್ತಾರು ಸಾವಿರದ ಜನಸಾಗರವಾಗಿ ಪರಿವರ್ತನೆಯಾದವು. ವಿಜಯೇಂದ್ರ ಅವರ ಮಾತುಗಳನ್ನು ಆಲಿಸಲು ಸ್ವಯಂಪ್ರೇರಿತವಾಗಿ ಸೇರುತ್ತಿದ್ದ ಜನಸಮೂಹವೇ ‘ಬಳ್ಳಾರಿ ಚಲೋ’ದ ಯಶಸ್ಸಿಗೆ ಜೀವಂತ ಸಾಕ್ಷಿಯಾಯಿತು. ಈ ಜನಬೆಂಬಲ ಸಹಜವಾಗಿಯೇ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ತಳಮಳ ಮೂಡಿಸಿತು.
ಪಾದಯಾತ್ರೆಯ ಯಶಸ್ಸಿನಿಂದ ವಿಚಲಿತಗೊಂಡ ಕಾಂಗ್ರೆಸ್ ನಾಯಕರು ವಿಷಯಾಧಾರಿತ ಉತ್ತರ ನೀಡುವ ಬದಲು ಮನಬಂದಂತೆ ಟೀಕಿಸುವುದು ಸಾಮಾನ್ಯವಾಯಿತು. ಸಮಾರೋಪ ಸಮಾರಂಭಕ್ಕೆ ಮುನ್ಸಿಪಲ್ ಮೈದಾನದಲ್ಲಿ ನಡೆಸಲು ಅನುಮತಿ ನೀಡಲು ಸಹಾ ತಕರಾರು ಮಾಡಿದರು. ಹತ್ತು ದಿನಗಳ ಕಾಲ ನಡೆದ ಈ ಬೃಹತ್ ಪಾದಯಾತ್ರೆಯನ್ನು ಬಿಜೆಪಿಯ ಕಾರ್ಯ ಕರ್ತರ ತಂಡ ಅತ್ಯಂತ ಅಚ್ಚುಕಟ್ಟಾಗಿ ಮತ್ತು ವೃತ್ತಿಪರವಾಗಿ ನಿರ್ವಹಿಸಿತು.
ಕಾರ್ಯಕ್ರಮಗಳ ವ್ಯವಸ್ಥೆಯಿಂದ ಹಿಡಿದು ಸಮಾರೋಪ ಕಾರ್ಯಕ್ರಮದ ತನಕ ಸಮನ್ವಯತೆ ಸಾಧಿಸಿ, ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡದೆ ಸಮರ್ಥವಾಗಿ ನಿಭಾಯಿಸಿದರು. ನೂರಾರು ಕಾರ್ಯಕರ್ತರು, ವ್ಯವಸ್ಥೆಯನ್ನು ಬದ್ಧತೆಯಿಂದ ನಿರ್ವಹಿಸಿದ್ದು ಪಾದಯಾತ್ರೆಯ ಯಶಸ್ಸಿನ ಪ್ರಮುಖ ಕಾರಣಗಳಲ್ಲಿ ಒಂದಾಯಿತು. ಬಳ್ಳಾರಿ ಚಲೋ ಪಾದಯಾತ್ರೆಯ ರಥವನ್ನು ಸಿದ್ಧಪಡಿಸಿದ್ದ ಬೆಂಗಳೂರು ಉತ್ತರ ಜಿಲ್ಲೆ ಅಧ್ಯಕ್ಷ ಹರೀಶ್ 2018ರಲ್ಲಿ ಯಡಿಯೂರಪ್ಪನವರ ಪರಿವರ್ತನಾ ಯಾತ್ರೆಯ ರಥವನ್ನು ಹಾಗೂ ಇದೀಗ ವಿಜಯೇಂದ್ರರವರಿಗೂ ರಥವನ್ನು ಸಿದ್ಧಪಡಿಸಿದೆ ಎಂದು ಹೆಮ್ಮಯಿಂದ ಹೇಳುತ್ತಾರೆ.
ಹತ್ತು ದಿನಗಳ ಪಾದಯಾತ್ರೆಯು ಕರ್ನಾಟಕದ ರಾಜಕೀ ಯದಲ್ಲಿ ಬಿ.ವೈ. ಜಯೇಂದ್ರ ಅವರ ನಾಯಕತ್ವದ ಬಲವಾದ ಹೆಜ್ಜೆಗುರುತನ್ನು ಮೂಡಿಸಿದೆ. ರಾಜಕೀಯ ಪಯಣದಲ್ಲಿ ‘ಬಳ್ಳಾರಿ ಚಲೋ’ ಒಂದು ಪ್ರಮುಖ ಮೈಲಿಗಲ್ಲು ಎಂಬುದರಲ್ಲಿ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯ ಸಾರಥ್ಯವನ್ನು ಇನ್ನಷ್ಟು ಪ್ರಬಲವಾಗಿ, ಪರಿಣಾಮಕಾರಿಯಾಗಿ ಮತ್ತು ಜನಸ್ಪರ್ಶಿಯಾಗಿ ಮುನ್ನಡೆಸುವ ನಾಯಕತ್ವಕ್ಕೆ ಈ ಪಾದಯಾತ್ರೆ ನಾಂದಿ ಹಾಡಿದೆ.