ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪಶ್ಚಿಮ ಬಂಗಾಳದ ಬೆಹರಾಮ್ ಪುರ ಲೋಕಸಭಾ ಕ್ಷೇತ್ರದಿಂದ 1999 ರಿಂದ 2019ರವರೆಗೆ ಐದು ಬಾರಿ ಆಯ್ಕೆಯಾಗಿದ್ದ ವರು. 2019ರಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದವರು. ಇವರು ಪ್ರತಿನಿಧಿಸುತ್ತಿದ್ದ ಬೆಹರಾಮ್‌ಪುರ ಕ್ಷೇತ್ರದಲ್ಲಿ ಶೇ.70ರಷ್ಟು ಮುಸ್ಲಿಂ ಮತದಾರರು, ಅಂದರೆ ಇಲ್ಲಿನ ಚುನಾವಣಾ ಗೆಲುವಿನಲ್ಲಿ ಮುಸ್ಲಿಮರ ಮತಗಳೇ ನಿರ್ಣಾಯಕ.
ಮಮತಾ ಬ್ಯಾನರ್ಜಿಯವರ ಕಟುಟೀಕಾಕಾರರಾಗಿದ್ದ ಅಧೀರ್ ರಂಜನ್‌ರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಕ್ರಿಕೆಟಿಗ ಯೂಸಫ್ ಪಠಾಣ್‌ಗೆ ಟಿಕೆಟ್ ನೀಡಿತು. ಯೂಸಫ್ ಪಠಾಣ್ ಅವರು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೋಲ್ಕತಾ ನೈಟ್‌ರೈಡರ‍್ಸ್ ತಂಡದ ಪರವಾಗಿ ಆಡಿದವರು ಕೂಡ.
ಮೊದಲ ಬಾರಿಗೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಈ ಯೂಸಫ್ ಪಠಾಣ್, ತಾವೊಬ್ಬ ಅಪ್ಪಟ ಜಾತ್ಯತೀತವಾದಿ ಎಂದು ಬೀಗುತ್ತಿದ್ದ ಅಧೀರ್ ರಂಜನ್ ಚೌಧರಿಯವ ರನ್ನು ಪರಾಭವಗೊಳಿಸಿದರು. ಐದು ಬಾರಿ ‘ಕೈ’ ಪಕ್ಷದ ಕೈಹಿಡಿದಿದ್ದ ಮುಸ್ಲಿಂ ಮತದಾರರು, ಟಿಎಂಸಿಯಿಂದ ಯೂಸಫ್ ಪಠಾಣ್ ಸ್ಪರ್ಧೆ ಮಾಡಿದ ಕೂಡಲೇ ತಮ್ಮ ಆಯ್ಕೆಯನ್ನೂ ಬದಲಾಯಿಸಿದರು.
ಇದನ್ನೂ ಓದಿ: Prakash Shesharaghavachar Column: ಅಂತೂ ಇಂತೂ ಅಂತ್ಯ ಕಾಣುತ್ತಿರುವ ರಕ್ತಸಿಕ್ತ ನಕ್ಸಲ್ ವಾದ
ಮುಸ್ಲಿಂ ಮತದಾರರ ಒಲವು, ಜಡ್ಡುಗಟ್ಟಿರುವ ಜಾತ್ಯತೀತ ಪಕ್ಷಗಳಿಂದ ವಿಮುಖವಾಗಿ ಮೂಲಭೂತವಾದವನ್ನು ಪ್ರತಿನಿಧಿಸುವ ಪಕ್ಷದತ್ತ ವಾಲುತ್ತಿರುವ ಆತಂಕದ ಬೆಳವಣಿಗೆ ಯ ಆರಂಭವಾಗಿದೆ ಬೆಹರಾಮ್‌ಪುರ ಕ್ಷೇತ್ರದಲ್ಲಿನ ಈ ಗೆಲುವು. ಮಹಾರಾಷ್ಟ್ರದ 29 ನಗರಪಾಲಿಕೆಗಳ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತದಾರರ ಬದಲಾಗುತ್ತಿರುವ ಪ್ರವೃತ್ತಿ ಇದಕ್ಕೆ ತಾಜಾ ಉದಾಹರಣೆ. ಮುಂಬೈ ಮಹಾನಗರ ಪಾಲಿಕೆಯ ಈ ಬಾರಿಯ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮೊದಲ ಆಯ್ಕೆಯು ಕಾಂಗ್ರೆಸ್ ಅಥವಾ ಸಮಾಜ ವಾದಿ ಪಾರ್ಟಿ ಆಗಿರಲಿಲ್ಲ; ಮುಸ್ಲಿಂ ನಾಯಕತ್ವದ ಪಕ್ಷಗಳಾದ ‘ಇಂಡಿಯನ್ ಸೆಕ್ಯುಲರ್ ಲಾರ್ಜೆ ಅಸೆಂಬ್ಲಿ ಆಫ್ ಮಹಾರಾಷ್ಟ್ರ ಪಾರ್ಟಿ’ (ಇಸ್ಲಾಂ ಪಾರ್ಟಿ) ಮತ್ತು ಓವೈಸಿ ಅವರ ‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್’ ಎಐಎಂಐಎಂ) ಪಕ್ಷಗಳ ಕಡೆಗೆ ಅವರು ಒಲವು ತೋರಿದರು.
ಶೇ.80ರಷ್ಟು ಅಲ್ಪಸಂಖ್ಯಾತರಿರುವ ಮುಂಬ್ರಾ-ಕಲ್ವಾ ವಿಧಾನಸಭಾ ಕ್ಷೇತ್ರವನ್ನು ಎನ್‌ಸಿಪಿ ಶಾಸಕ ಜಿತೇಂದ್ರ ಅವಧ್ ಅವರು ಕಳೆದ ಎರಡು ದಶಕಗಳಿಂದ ಪೋಷಿಸುತ್ತಿದ್ದರು. ತಮ್ಮ ಮತಬ್ಯಾಂಕ್ ಅನ್ನು ಗಟ್ಟಿಪಡಿಸಿಕೊಳ್ಳಲು ತಮ್ಮ ಜಾತ್ಯತೀತ ನೀತಿಯನ್ನು ಪ್ರಖರವಾಗಿ ತೋರ್ಪಡಿಸಿ, ಹಿಂದೂಗಳನ್ನು ಅವಹೇಳನ ಮಾಡಿ ತಮ್ಮ ಮತಬ್ಯಾಂಕ್‌ಗೆ ಖುಷಿ ಕೊಡುತ್ತಿದ್ದರು.
ರಾಮಮಂದಿರದ ಬಗ್ಗೆ ಕೇವಲವಾಗಿ ಮಾತನಾಡುವುದಕ್ಕೂ ಅವರು ಹಿಂಜರಿಯಲಿಲ್ಲ, ಗುಜರಾತಿನಲ್ಲಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ, ಲಷ್ಕರ್ ಗುಂಪಿಗೆ ಸೇರಿದ್ದ ಇಶ್ರತ್ ಜಹಾನ್ ಎಂಬ ಭಯೋತ್ಪಾದಕಿಯನ್ನು ಬೆಂಬಲಿಸಲೂ ಹೇಸಲಿಲ್ಲ.
ಇಂಥ ಜಿತೇಂದ್ರ ಅವಧ್, ತಮ್ಮ ಮೂವತ್ತು ವರ್ಷಗಳ ಸ್ನೇಹಿತ ಯೂನಸ್ ಶೇಖ್‌ರ ಮಗಳಿಗೆ ಮತ್ತು ಅವರ ಬೆಂಬಲಿಗರಿಗೆ ಪಾಲಿಕೆಯ ಚುನಾವಣೆಗೆ ಟಿಕೆಟ್ ಅನ್ನು ನಿರಾಕರಿಸಿ ದಾಗ, ಜಿತೇಂದ್ರರ ವಿರುದ್ಧವೇ ಬಂಡಾಯವೆದ್ದು ‘ಎಐಎಂಐಎಂ’ ಪಕ್ಷದ ಟಿಕೆಟ್ ಪಡೆದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು.
ಜಿತೇಂದ್ರ ಅವಧ್‌ರ ಮುಂಬ್ರಾ-ಕಲ್ವಾ ಕ್ಷೇತ್ರದ ಆರು ವಾರ್ಡ್‌ಗಳ ಪೈಕಿ ಅಷ್ಟರಲ್ಲೂ ‘ಎಐಎಂಐಎಂ’ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಈ ಪೈಕಿ ಯೂನಸ್ ಶೇಖ್ ಮಗಳಾದ ಸೆಹರ್ ಶೇಖ್ ಸಾಧಿಸಿದ ಗೆಲುವು ಭರ್ಜರಿಯಾಗಿತ್ತು. ಪಾಪ!
ತಮ್ಮ ಮತಬ್ಯಾಂಕ್ ಅನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದ ಅವಧ್ʼರವರ ತುಷ್ಟೀಕರಣ ರಾಜಕಾರಣವು ಅವರ ಸಹಾಯಕ್ಕೆ ಬರಲೇ ಇಲ್ಲ. ಅಲ್ಪ ಸಂಖ್ಯಾತರ ಮತಗಳಿಗಾಗಿ ಹಿಂದೂಗಳನ್ನು ಟೀಕಿಸಿ ಅವರಿಂದಲೂ ದೂರವಾಗಿದ್ದ ಅವಧ್‌ರವರು, ಈಗ ಮುಸ್ಲಿಂ ಮತಗಳೂ ಇಲ್ಲವಾಗಿ ಅತಂತ್ರ ಸ್ಥಿತಿಯನ್ನು ತಲುಪಿದ್ದಾರೆ.
ಪಾಲಿಕೆ ಚುನಾವಣೆ ಗೆದ್ದಿರುವ ಸೆಹರ್ ಶೇಖ್ ತಮ್ಮ ಗೆಲುವನ್ನು ಸಂಭ್ರಮಿಸುತ್ತಾ, “ಮುಂದಿನ ಐದು ವರ್ಷದಲ್ಲಿ ಇಡೀ ಮುಂಬ್ರಾ ಕ್ಷೇತ್ರವನ್ನು ಹಸಿರುಮಯ ಮಾಡುತ್ತೇವೆ. ಮುಂದಿನ ಐದು ವರ್ಷದಲ್ಲಿ ಮುಂಬ್ರಾದ ಎಲ್ಲಾ ಕ್ಷೇತ್ರಗಳು ನಮ್ಮ ‘ಮಜ್ಲಿಸ್ ಪಾರ್ಟಿ’ಯ ಪಾಲಾಗಬೇಕು" ಎಂದು ಅಬ್ಬರಿಸಿದರು. ಈಕೆಯ ಆಕ್ರಮಣಕಾರಿ ನಿಲುವು ವೈರಲ್ ಆಗಿ, ತಮ್ಮ ಹೇಳಿಕೆಯ ಬಗ್ಗೆ ಆಕೆ ಸ್ಪಷ್ಟೀಕರಣ ಕೊಡಬೇಕಾಗಿ ಬಂತು. ಹಸಿರು ಬಳಿಯುವುದಾಗಿ ಸೆಹರ್ ಶೇಖ್ ಅವರೇನೋ ಹೇಳಿಕೊಂಡಿದ್ದಾರೆ, ಆದರೆ ಮಹಾರಾಷ್ಟ್ರದಲ್ಲಿರುವುದು ಬಿಜೆಪಿಯ ಸರಕಾರ ಎಂಬುದನ್ನು ಅವರು ಮರೆತಹಾಗೆ ಕಾಣುತ್ತದೆ!
ಮಹಾರಾಷ್ಟ್ರದ ಮಾಲೆಗಾಂವ್ ನಗರಪಾಲಿಕೆಯಲ್ಲಿ ಎನ್ʼಸಿಪಿಯ ಮಾಜಿ ಶಾಸಕ ಅಸೀಫ್ ಶೇಖ್ ಹೊಸದಾಗಿ ಆರಂಭಿಸಿರುವ ರಾಜಕೀಯ ಪಕ್ಷದ ಹೆಸರು ‘ಇಂಡಿಯನ್ ಸೆಕ್ಯುಲರ್ ಲಾರ್ಜೆಸ್ಟ್ ಅಸೆಂಬ್ಲಿ ಆಫ್ ಮಹಾರಾಷ್ಟ್ರ ಪಾರ್ಟಿ’ ಅಥವಾ ISLAM PARTY; ತಮ್ಮ ಪಕ್ಷದ ಹೆಸರಲ್ಲಿ ‘ಇಸ್ಲಾಂ’ ಎಂಬ ಶಬ್ದ ಬರಬೇಕು ಎಂಬ ಏಕೈಕ ಕಾರಣಕ್ಕೆ ಇಂಥ ಅಸಂಬದ್ಧ ಹೆಸರನ್ನು ಇಟ್ಟುಕೊಂಡು ಮೊದಲ ಬಾರಿ ಚುನಾವಣಾ ಕಣಕ್ಕಿಳಿದ ಮಹಾಶಯರು ಇವರು.
ಈ ಪಕ್ಷವು 35 ಸ್ಥಾನದಲ್ಲಿ ಜಯಗಳಿಸಿದ್ದರೆ, ಅಸಾದುದ್ದೀನ್ ಓವೈಸಿ ಅವರ ‘ಎಐಎಂಐಎಂ’ ಪಕ್ಷ 21 ಸ್ಥಾನಗಳನ್ನು ಗಳಿಸಿದೆ. ಈ ಹಿಂದೆ ಮಾಲೇಗಾಂವ್‌ನಲ್ಲಿ ಕಾಂಗ್ರೆಸ್ ಮತ್ತು ಸಮಾಜ ವಾದಿ ಪಾರ್ಟಿಗಳ ಪ್ರಾಬಲ್ಯವಿತ್ತು; ಆದರೆ ಮುಸ್ಲಿಂ ನೇತೃತ್ವದ ಈ ಎರಡೂ ಪಕ್ಷಗಳು ಸ್ಪರ್ಧೆಮಾಡಿದ ಕೂಡಲೇ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಗಳನ್ನು ಮುಸ್ಲಿಂ ಮತದಾರರು ನೆಲ ಕಚ್ಚಿಸಿದ್ದಾರೆ.
ಈಗ ‘ಸಂಭಾಜಿ ನಗರ’ ಅಂತ ಮರುನಾಮಕರಣಗೊಂಡಿರುವ ಕ್ಷೇತ್ರವು ಹಿಂದೆ ‘ಔರಂಗಾ ಬಾದ್’ ಎಂದು ಕರೆಸಿಕೊಳ್ಳುತ್ತಿತ್ತು. ಇಲ್ಲಿನ 115 ಸೀಟುಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಒಂದೇ ಸೀಟು; ಆದರೆ ‘ಎಐಎಂಐಎಂ’ ಪಕ್ಷವು 33 ಸೀಟುಗಳನ್ನು ಗೆದ್ದಿದೆ. ಅಲ್ಲಿಗೆ, ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಅವರ ಆಯ್ಕೆಯು ‘ಮುಸ್ಲಿಂ ನೇತೃತ್ವದ ಪಕ್ಷ’ವೇ ಆಯಿತೇ ಹೊರತು, ಕಾಂಗ್ರೆಸ್-ಎನ್‌ಸಿಪಿ ಆಗಲಿಲ್ಲ. ಈ ಮೊದಲು ಸಮಾಜವಾದಿ ಪಾರ್ಟಿಯು ಅಲ್ಪಸಂಖ್ಯಾತ ಸಮುದಾಯದ ಮೊದಲ ಆಯ್ಕೆಯಾಗಿತ್ತು.
ಮುಸ್ಲಿಂ ನಾಯಕತ್ವದ ಪಕ್ಷಗಳು ಸ್ಪರ್ಧೆ ಮಾಡಿದ ಕೂಡಲೇ, ಈ ಸಮುದಾಯದವರ ಆಯ್ಕೆ ಬದಲಾಗಿ, ಮತವೆಲ್ಲಾ ನೇರವಾಗಿ ‘ಇಸ್ಲಾಂ ಪಾರ್ಟಿ’, ‘ಎಐಎಂಐಎಂ’ ಪಕ್ಷಗಳ ಪಾಲಾಯಿತು!
ಮುಂಬೈ ಪಾಲಿಕೆಯಲ್ಲಿ ಕಾಂಗ್ರೆಸ್ 24 ಸೀಟುಗಳನ್ನು ಗೆದ್ದಿದ್ದು, ಅದರಲ್ಲಿ 14 ಸ್ಥಾನಗಳಲ್ಲಿ ರುವುದು ಮುಸ್ಲಿಂ ಅಭ್ಯರ್ಥಿಗಳೇ ಆಗಿದ್ದಾರೆ. ಎಲ್ಲಿ ಮುಸ್ಲಿಂ ಪಕ್ಷದ ಆಯ್ಕೆ ಇಲ್ಲವೋ ಅಲ್ಲಿ ಮಾತ್ರ ಕಾಂಗ್ರೆಸ್‌ಗೆ ಅಥವಾ ಉದ್ಧವ್ ಠಾಕ್ರೆ ಬಣದ ಶಿವಸೇನೆಗೆ ಈ ಸಮುದಾಯದವರು ಮತ ನೀಡಿದ್ದಾರೆ.
2017ರಲ್ಲಿ ನಡೆದ ಮಹಾರಾಷ್ಟ್ರದ ನಗರಪಾಲಿಕೆಯ ಚುನಾವಣೆಯಲ್ಲಿ ಓವೈಸಿಯವರ ಪಕ್ಷವು 84 ಸ್ಥಾನಗಳಲ್ಲಿ ಜಯಗಳಿಸಿತ್ತು. 2026ರಲ್ಲಿ ಅದೀಗ 124 ಸ್ಥಾನಕ್ಕೆ ಏರಿದೆ. ಇದರರ್ಥ, ಢೋಂಗಿ ಜಾತ್ಯತೀತವಾದಿಗಳು ತಮ್ಮ ರಾಜಕೀಯ ಲಾಭಕ್ಕೆ ಅಲ್ಪಸಂಖ್ಯಾತರನ್ನು ಬಳಕೆ ಮಾಡಿಕೊಳ್ಳುವ ಪರಿಪಾಠಕ್ಕೆ ಅಂತ್ಯಕಾಲ ಸನ್ನಿಹಿತವಾಗಿ, ಧರ್ಮದ ಆಧಾರದ ಮೇಲೆ ಧ್ರುವೀಕರಣವಾಗುವ ಅಪಾಯಕಾರಿ ಪ್ರವೃತ್ತಿಗೆ ಅದು ದಾರಿ ಮಾಡಿಕೊಟ್ಟಿದೆ.
ಮುಸಲ್ಮಾನರು ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷವನ್ನು ತಿರಸ್ಕರಿಸಿ, ಓವೈಸಿ ಅವರ ಪಕ್ಷವನ್ನು ಅಥವಾ ‘ಇಸ್ಲಾಂ ಪಾರ್ಟಿ’ಯನ್ನು ಬೆಂಬಲಿಸುವುದು ತಪ್ಪೇನಲ್ಲ; ಆದರೆ ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ‘ಎಐಎಂಐಎಂ’ ಪಕ್ಷವನ್ನು, “ಇದು ಬಿಜೆಪಿಯ ‘ಬಿ’ ಟೀಮ್; ಇದು ಕೇವಲ ಮುಸ್ಲಿಂ ಮತಗಳನ್ನು ಒಡೆದು ಬಿಜೆಪಿಗೆ ಪರೋಕ್ಷ ವಾಗಿ ಬೆಂಬಲಿಸುತ್ತಿದೆಯಷ್ಟೇ" ಎಂದು ಆರೋಪಿಸುತ್ತಿದ್ದರು.
ಪರಿಸ್ಥಿತಿ ಬದಲಾಗಿ ಮೂರಂಕಿ ದಾಟಿರುವ ಓವೈಸಿಯವರ ‘ಎಐಎಂಐಎಂ’ ಪಕ್ಷವು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರಗಳಿಂದ ಸ್ಪರ್ಧಿಸಿ, ಢೋಂಗಿ ಜಾತ್ಯತೀತ ಪಕ್ಷಗಳ ನಿದ್ರೆಗೆಡಿಸುವುದಂತೂ ಖಚಿತ!
ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶವು ಢೋಂಗಿಗಳಿಗೆ ಎಚ್ಚರಿಕೆಯ ಗಂಟೆಯಾಗಿತ್ತು. ಇದರಲ್ಲಿ ಕಾಂಗ್ರೆಸ್ 6 ಸ್ಥಾನದಲ್ಲಿ ಗೆದ್ದರೆ ‘ಎಐಎಂಐಎಂ’ ಪಕ್ಷ 5 ಸ್ಥಾನ ದಲ್ಲಿ ಗೆದ್ದಿತ್ತು. ಬಿಹಾರದಲ್ಲಿಯೂ, ಅಲ್ಪಸಂಖ್ಯಾತರ ಮತಗಳ ಪ್ರಾಬಲ್ಯವಿದ್ದ ಕ್ಷೇತ್ರಗಳಲ್ಲಿ ಮುಸ್ಲಿಮರ ಮೊದಲ ಆಯ್ಕೆ ಓವೈಸಿಯವರ ಪಕ್ಷವಾಯಿತೇ ವಿನಾ ಕಾಂಗ್ರೆಸ್ ಆಗಲಿಲ್ಲ.
ಅತಿರೇಕವೆಂಬಷ್ಟರ ಮಟ್ಟಿಗೆ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ, ಹಿಂದೂಗಳ ಧ್ವನಿಯನ್ನೇ ಉಡುಗಿಸಿದ್ದ ಕಾಂಗ್ರೆಸ್ ಪಕ್ಷವು ಮುಸ್ಲಿಂ ಮತದಾರರಿಂದ ದೂರವಾಗುತ್ತಿದೆ.
ಇದರ ಲಾಭವು ‘ಇಸ್ಲಾಂ ಪಾರ್ಟಿ’ ಅಥವಾ ‘ಎಐಎಂಐಎಂ’ ಪಕ್ಷಗಳಿಗೆ ದಕ್ಕುತ್ತಿದೆ. ದುರಂತ ವೆಂದರೆ, ಕಾಂಗ್ರೆಸ್‌ಗಾಗಲೀ ಅಥವಾ ಸಮಾಜವಾದಿ ಪಕ್ಷಕ್ಕಾಗಲೀ ಇದು ಅರ್ಥವಾಗುತ್ತಿಲ್ಲ!
ಮಹಾರಾಷ್ಟ್ರ ಪಾಲಿಕೆಯ ಚುನಾವಣೆಯ ಯಶಸ್ಸು ‘ಎಐಎಂಐಎಂ’ ಅಥವಾ ಮುಸ್ಲಿಂ ನೇತೃತ್ವದ ಪಕ್ಷಗಳಿಗೆ ಮಾದರಿಯಾಗುತ್ತದೆ. ಕರ್ನಾಟಕದಲ್ಲಿಯೂ ಎಸ್‌ಡಿಪಿಐ ಪಾರ್ಟಿ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಈಗಾಗಲೇ ತಳವೂರುತ್ತಿದೆ. ಬದಲಾಗುತ್ತಿರುವ ಆಯ್ಕೆಯು ಅಲ್ಪಸಂಖ್ಯಾತರ ಮತಗಳ ಮೇಲೆ ಸದಾ ಕಣ್ಣಿಟ್ಟಿರುವ ಕಾಂಗ್ರೆಸ್ʼಗೆ ಮಾರಣಾಂತಿಕ ಬೆಳವಣಿಗೆಯಾಗಿದೆ.
2026ರಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆ ನಡೆಯಲಿದೆ. ಇಲ್ಲಿ 30-35 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯವಿದೆ. ಪ್ರಸ್ತುತ ಅಲ್ಲಿ ಒಂದೇ ಒಂದು ಪ್ರಬಲವಾದ ಮುಸ್ಲಿಂ ಪಕ್ಷವಿಲ್ಲ ದಿದ್ದರೂ, ಬದ್ರುದ್ದೀನ್ ಅಜ್ಮಲ್ ನೇತೃತ್ವದ ‘ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್’ ( AIUDF ) ಪಕ್ಷವು ವಿಶೇಷವಾಗಿ ಕೆಳ ಅಸ್ಸಾಂ ಮತ್ತು ಬರಾಕ್ ಕಣಿವೆಯಲ್ಲಿ ಅನೇಕ ಬಂಗಾಳಿ ಮುಸ್ಲಿಮರನ್ನು (ಮಿಯಾ ಮುಸ್ಲಿಮರು) ಪ್ರತಿನಿಧಿಸುವ ರಾಜಕೀಯ ಶಕ್ತಿ ಯಾಗಿದ್ದು, ಅಲ್ಪಸಂಖ್ಯಾತರ ಹಿತಾಸಕ್ತಿಗಳ ಮೇಲೆ ಇದು ಗಮನವನ್ನು ಕೇಂದ್ರೀಕರಿಸಿ ಪ್ರಮುಖ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ.
‘ರಾಷ್ಟ್ರೀಯ ಉಲೆಮಾ ಮಂಡಳಿ’ (RUC) 2026ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಜನೆಯನ್ನು ಪ್ರಕಟಿಸಿದ್ದು, 15 ಜಿಲ್ಲೆಗಳಲ್ಲಿ ಮುಸ್ಲಿಂ ಪ್ರಾಬಲ್ಯದ 30-35 ಸ್ಥಾನಗಳನ್ನು ಗುರಿಯಾಗಿಸಿಕೊಂಡಿದೆ. ಈ ಬಾರಿಯ ಫಲಿತಾಂಶವು ಕಾಂಗ್ರೆಸ್ ಪಕ್ಷದ ಭವಿಷ್ಯದ ಮೇಲೆ ದಟ್ಟ ಪರಿಣಾಮ ಬೀರುವುದು ನಿಶ್ಚಿತ.
ಮುಸ್ಲಿಮರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ದೇಶವ್ಯಾಪಿಯಾಗಿ ಅದರ ಪರಿಣಾಮವಾಗುವುದರಲ್ಲಿ ಸಂದೇಹ ಬೇಡ. ಮಹಾರಾಷ್ಟ್ರ ಚುನಾವಣೆಯು ಢೋಂಗಿ ಜಾತ್ಯತೀತ ಪಕ್ಷಗಳಿಗೆ ಪಾಠವಾಗಬೇಕು. ಕೇವಲ ವೋಟಿಗಾಗಿ ಮಾಡುವ ಓಲೈಕೆ ರಾಜಕಾರಣವು ಇನ್ನು ಮುಂದೆ ನಡೆಯುವುದಿಲ್ಲ; ಏಕೆಂದರೆ ಅಲ್ಪಸಂಖ್ಯಾತರು ತಮ್ಮದೇ ನಾಯಕತ್ವದ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ. ಹಾಗೆಯೇ, ಜನಸಂಖ್ಯೆಯ ವ್ಯತ್ಯಾಸ ದಿಂದ ನೆಲಸ್ತರದಲ್ಲಿ ನಮ್ಮ ಮಣ್ಣಿನ ಸಂಸ್ಕೃತಿಯ ಮೇಲಾಗುವ ದುಷ್ಪರಿಣಾಮದ ಬಗ್ಗೆಯೂ ಬಹುಸಂಖ್ಯಾತರಿಗೆ ಜ್ಞಾನೋದಯ ಆಗಬೇಕಿದೆ.
(ಲೇಖಕರು ಬಿಜೆಪಿಯ ವಕ್ತಾರರು)