ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ವೋಟ್ ಚೋರಿ ಅಸ್ತ್ರವೂ, ರಾಜಕೀಯ ಲೆಕ್ಕವೂ

ರಾಹುಲ್ ಗಾಂಧಿ ಮತ್ತು ಇಂಡಿ ಒಕ್ಕೂಟದ ನಾಯಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟಿಸಲು, ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಲು ಮತ್ತು ಈ ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶಕ್ಕಾಗಿ ಸುಪ್ರೀಂ ಕೋರ್ಟ್‌ಗೆ ತೆರಳಿದ್ದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಸಮಯ ಕೇಳಿದ್ದರು. ಆದರೆ, ಅದಕ್ಕೆ ಅವರು ಒಪ್ಪಿರಲಿಲ್ಲ

ವೋಟ್ ಚೋರಿ ಅಸ್ತ್ರವೂ, ರಾಜಕೀಯ ಲೆಕ್ಕವೂ

-

ಜನಪಥ

ರಾಷ್ಟ್ರ ರಾಜಕಾರಣದಲ್ಲಿ ‘ವೋಟ್ ಚೋರಿ’ ಎಂಬ ಘೋಷಣೆ ಇದೀಗ ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳ ಪ್ರಮುಖ ರಾಜಕೀಯ ಹೋರಾಟದ ವಿಷಯವಾಗಿ ರೂಪುಗೊಂಡಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಚುನಾವಣಾ ಆಯೋಗವನ್ನು ಮೀರಿ ಸುಪ್ರೀಂ ಕೋರ್ಟ್‌ವರೆಗೂ ತಲುಪಿವೆ. ಈ ಹೋರಾಟವನ್ನು ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕಿನ ರಕ್ಷಣೆ ಎಂದು ಕಾಂಗ್ರೆಸ್ ಬಿಂಬಿಸುತ್ತಿದ್ದರೆ, ಬಿಜೆಪಿ ಇದನ್ನು ಚುನಾವಣಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ರಾಜಕೀಯ ಅಭಿಯಾನವೆಂದು ಟೀಕಿಸುತ್ತಿದೆ.

ಇಲ್ಲಿ ಪ್ರಮುಖ ಪ್ರಶ್ನೆಯೆಂದರೆ, ಎಸ್‌ಐಆರ್‌ನಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವುದು ಕಾಂಗ್ರೆಸ್‌ನ ಮೂಲ ಉದ್ದೇಶವೇ? ಅಥವಾ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಜಕೀಯ ವಾತಾವರಣ ನಿರ್ಮಿಸುವುದೇ ಎನ್ನುವುದು. 2029ರ ಲೋಕಸಭೆ ಚುನಾವಣೆಯು ರಾಹುಲ್ ಗಾಂಧಿಗೆ ಮಾಡು ಇಲ್ಲವೇ ಮಡಿ ಆಗಿರುವುದರಿಂದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದರೆ ಅದರ ನೇರ ಪರಿಣಾಮ ಮುಂದಿನ ಲೋಕಸಭೆ ಚುನಾವಣೆ ಮೇಲೆ ಆಗಲಿದೆ.

ಹೀಗಾಗಿ, ಉತ್ತರ ಪ್ರದೇಶ ಚುನಾವಣೆ ತನಕ ವೋಟ್ ಚೋರಿ ಅಭಿಯಾನವನ್ನೇ ಬಿರುಸುಗೊಳಿಸಿ, ಬಿಜೆಪಿಯು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಚುನಾವಣೆಗಳನ್ನು ಗೆಲ್ಲುತ್ತಿಲ್ಲ ಎಂಬ ಅಭಿಪ್ರಾಯ ವನ್ನು ಜನರ ಮನಸ್ಸಲ್ಲಿ ಗಟ್ಟಿಗೊಳಿಸುವ ವ್ಯವಸ್ಥಿತ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಅದರ ಭಾಗವಾಗಿ ಅ.12ರಂದು ಸುಪ್ರೀಂ ಕೋರ್ಟ್ ಅಂಗಳಕ್ಕೆ ತೆರಳಿ, ಅಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸುವ ಹೈಡ್ರಾಮಾವನ್ನೂ ಇಂಡಿ ಒಕ್ಕೂಟ ಮಾಡಿದೆ.

ಇದನ್ನೂ ಓದಿ: Raghava Sharma Nidle Column: ಅಖಿಲೇಶ್‌ ಗೆಲುವಿಗೆ ಯೋಗಿ ಬ್ರ್ಯಾಂಡ್‌ʼನದೇ ಸವಾಲು

ರಾಹುಲ್ ಗಾಂಧಿ ಮತ್ತು ಇಂಡಿ ಒಕ್ಕೂಟದ ನಾಯಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟಿಸಲು, ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಲು ಮತ್ತು ಈ ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶಕ್ಕಾಗಿ ಸುಪ್ರೀಂ ಕೋರ್ಟ್‌ಗೆ ತೆರಳಿದ್ದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಸಮಯ ಕೇಳಿದ್ದರು. ಆದರೆ, ಅದಕ್ಕೆ ಅವರು ಒಪ್ಪಿರಲಿಲ್ಲ. ಎಸ್‌ಐಆರ್ ಕುರಿತ ವಿಚಾರಗಳು ನ್ಯಾಯಾಲಯದ ಮುಂದಿರುವುದರಿಂದ ಖಾಸಗಿ ಭೇಟಿ ಸೂಕ್ತವಲ್ಲ ಎಂದು ಸಿಜೆಐ ನಿರಾಕರಿಸಿದ್ದರು.

ಸಿಜೆಐಗೆ ಇಂಡಿಯಾ ಒಕ್ಕೂಟ ನಾಯಕರು ಸಲ್ಲಿಸಿರುವ ಅರ್ಜಿಯಲ್ಲಿ, ಚುನಾವಣಾ ಆಯೋಗದ ಆಂತರಿಕ ನಿರ್ಧಾರಗಳ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸುವುದು, ಮತದಾರರ ಹೆಸರುಗಳ ತೆಗೆದು ಹಾಕುವಿಕೆಗೆ ಸ್ವತಂತ್ರ ಆಡಿಟ್ ನಡೆಸುವುದು, ಅರ್ಹ ಮತದಾರರ ಹೆಸರುಗಳನ್ನು ಅನ್ಯಾಯ ವಾಗಿ ತೆಗೆದು ಹಾಕದಂತೆ ರಕ್ಷಣೆ ನೀಡುವುದು ಮತ್ತು ಎಸ್‌ಐಆರ್ ಪ್ರಕ್ರಿಯೆಯನ್ನು ಮಧ್ಯಂತರ ವಾಗಿ ಸ್ಥಗಿತಗೊಳಿಸುವಂತೆ ಕೋರಲಾಗಿದೆ. ಈ ಬೇಡಿಕೆಯನ್ನು ವಕೀಲರ ಮೂಲಕವೋ ಅಥವಾ ಆನ್ ಲೈನ್ -ಲಿಂಗ್ ಮೂಲಕ ಸಲ್ಲಿಸಬಹುದಿತ್ತು.

Vote chori ok

ಆದರೆ, ಕಾಂಗ್ರೆಸ್ಸಿಗರು ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ‘March for Democracy’ ಎಂದು ಹೆಸರಿಟ್ಟು, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರನ್ನು ಒಗ್ಗೂಡಿಸಿತು. ಬಿಜೆಪಿಯ ಚುನಾವಣಾ ಗೆಲುವುಗಳ ಹಿಂದೆ ಚುನಾವಣಾ ಆಯೋಗದ ದೊಡ್ಡ ಕೊಡುಗೆ ಇದೆ ಎಂಬುದನ್ನು ಬಿಂಬಿಸುವುದು ಇದರ ಮೂಲ ಉದ್ದೇಶ. ಇದಕ್ಕಾಗಿ ಚುನಾವಣಾ ಆಯೋಗದ ವಿರುದ್ಧ ಸಾರ್ವಜನಿಕ ಒತ್ತಡ ಹೆಚ್ಚಿಸುವುದು, ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವುದು ಮತ್ತು ‘ವೋಟ್ ಚೋರಿ’ ಆರೋಪವನ್ನು ರಾಷ್ಟ್ರಮಟ್ಟದ ಚರ್ಚೆಯಾಗಿ ಮುಂದುವರಿಸುವುದನ್ನು ಕಾಂಗ್ರೆಸ್ ಬಯಸುತ್ತಿದೆ.

ಗಮನಾರ್ಹ ಸಂಗತಿಯೆಂದರೆ, ಸುಪ್ರೀಂ ಕೋರ್ಟ್ ಈಗಾಗಲೇ ಎಸ್‌ಐಆರ್ ನಡೆಸುವ ಚುನಾವಣಾ ಆಯೋಗದ ಅಧಿಕಾರವನ್ನು ಎತ್ತಿಹಿಡಿದಿದೆ. ಹೊಸ ಅರ್ಜಿಯಲ್ಲಿ ವಿಪಕ್ಷಗಳು ಆ ಮೂಲ ಅಧಿಕಾರ ಕ್ಕಿಂತ ಹೆಚ್ಚಾಗಿ ಎಸ್‌ಐಆರ್ ಅನುಷ್ಠಾನದ ವಿಧಾನ ಮತ್ತು ಚುನಾವಣಾ ಆಯೋಗದ ನಿರ್ಧಾರ ಗಳನ್ನು ಪ್ರಶ್ನಿಸಿವೆ.

ಹೀಗಾಗಿ ಕಾಂಗ್ರೆಸ್ ತನ್ನ ಆರೋಪಗಳಿಗೆ ನ್ಯಾಯಾಲಯದಲ್ಲಿ ಯಾವ ದಾಖಲೆಗಳನ್ನು ಸಲ್ಲಿಸುತ್ತದೆ ಮತ್ತು ಆ ದಾಖಲೆಗಳು ಕೇಳಿರುವ ನ್ಯಾಯಾಂಗ ಪರಿಹಾರಕ್ಕೆ ಎಷ್ಟು ಆಧಾರಗಳನ್ನು ಒದಗಿಸುತ್ತದೆ ಎನ್ನುವುದು ಕುತೂಹಲಕರ. ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜೀ ನಾಮೆಗಾಗಿ ಕಾಕ್ರೋಚ್ ಜನತಾ ಪಾರ್ಟಿಯ ಯುವಕರು ಜಂತರ್ ಮಂತರ್‌ನಲ್ಲಿ ಕೋಲಾಹಲ ಎಬ್ಬಿಸುವ ಉದ್ದೇಶ ಹೊಂದಿದ್ದರಿಂದ ಅನೇಕರನ್ನು ಬಂಧಿಸಲಾಯ್ತು.

ಇದೀಗ, ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳ ಎಂಬ ಮಾನ್ಯತೆಯನ್ನೇ ದಿಲ್ಲಿ ಪೊಲೀಸ್ ಆಯುಕ್ತರು (ಗೃಹ ಸಚಿವಾಲಯದ ವ್ಯಾಪ್ತಿ) ರದ್ದುಪಡಿಸಿದ್ದಾರೆ. ಇದಕ್ಕೆ, ನಮ್ಮ ಹೋರಾಟಕ್ಕೆ ಹೆದರಿ ಜಂತರ್ ಮಂತರ್ ಮುಚ್ಚಿದರೇನಂತೆ, ದೇಶಾದ್ಯಂತ ನಾವು ಹೋರಾಟ ಮಾಡುತ್ತೇವೆ ಎಂದು ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಪ್ರತಿಕ್ರಿಯಿಸಿದ್ದಾರೆ. ಹಾಗೆ ನೋಡಿದರೆ, ಪ್ರತಿಭಟನಾ ಸ್ಥಳವನ್ನು ಜಂತರ್ ಮಂತರ್‌ನಿಂದ ಬೇರೆಡೆಗೆ ಸ್ಥಳಾಂತರಿಸುವ ಪ್ರಸ್ತಾವ ಬಹಳ ಹಿಂದೆಯೇ ಇತ್ತು.

2017ರಲ್ಲಿಯೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಕುರಿತ ಆದೇಶ ನೀಡಿತ್ತು. ಜಂತರ್ ಮಂತರ್ ಸುತ್ತಮುತ್ತಲಿನ ನಿವಾಸಿಗಳು ಶಬ್ದಮಾಲಿನ್ಯ, ತ್ಯಾಜ್ಯ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ದೂರು ನೀಡಿದ್ದರಿಂದ ಈ ಪ್ರದೇಶದಲ್ಲಿ ಪ್ರತಿಭಟನೆಗಳನ್ನು ನಿಲ್ಲಿಸಿ, ರಾಮಲೀಲಾ ಮೈದಾನಕ್ಕೆ ಸ್ಥಳಾಂತರಿಸಲು ಹಸಿರು ನ್ಯಾಯಾಧೀಕರಣ ನಿರ್ದೇಶಿಸಿತ್ತು. ಕೆಲ ದಿನಗಳ ಹಿಂದೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಪ್ರತಿಭಟನಾ ಕಾರರಿಗೆ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಲಭ್ಯ ಮತ್ತು ಹೆಚ್ಚಿನ ಸ್ಥಳಾವಕಾಶ ವಿರುವ ಪರ್ಯಾಯ ಸ್ಥಳ ಗುರುತಿಸುವಂತೆ ಸೂಚಿಸಿದೆ.

ಜಂತರ್ ಮಂತರ್ ಕುರಿತ ನಿರ್ಧಾರ ಹಳೆಯ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ವಿವಾದದ ಮುಂದು ವರಿಕೆಯಾಗಿದ್ದರೂ, ಸಿಜೆಪಿ, ಕಾಂಗ್ರೆಸ್ ಹೋರಾಟದ ಬೆನ್ನಿಗೆ ಮಾನ್ಯತೆ ರzಗಿರುವುದರಿಂದ ಈ ಕುರಿತ ರಾಜಕೀಯ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಏತನ್ಮಧ್ಯೆ, ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ನ್ಯಾಯಾಲಯದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬಂತೆ ಮಾತನಾಡುತ್ತಾ, ಸುಪ್ರೀಂ ಕೋರ್ಟ್ ನಮ್ಮ ನೆರವಿಗೆ ಬರುತ್ತಿಲ್ಲ ಎಂಬ ಆಪಾದನೆ ಮಾಡಿದರು.

ದಿಲ್ಲಿ ಪ್ರತಿಭಟನೆಗಳಿಗೆ ಸಂಬಂಧಿಸಿದ ನಿರ್ಬಂಧಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೋಯ್ಮಾಲ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠವು ಕಾನೂನುಬಾಹಿರ ಬಂಧನಗಳನ್ನು ತಡೆಯಲು, ಸಂಚಾರ ಮತ್ತು ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧಗಳನ್ನು ಕಾನೂನಿನ ಮಿತಿಯೊಳಗೆ ಇರಿಸಲು ನಿರ್ದೇಶಿಸಿದ ಬಳಿಕ ಸಿಬಲ್ ಅವರು ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವ ಆದೇಶ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಕೃತಜ್ಞತೆ ಸಲ್ಲಿಸಿದರು.

ಆದರೂ, ಕೆಲ ಕಾನೂನು ಪಂಡಿತರು ನ್ಯಾಯಾಂಗದ ವಿರುದ್ಧ ಮಾತನಾಡುತ್ತಾ ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರುವ ಯತ್ನ ಮಾಡುತ್ತಿದ್ದಾರೆನ್ನುವುದು ಗುಟ್ಟಿನ ವಿಷಯವೇನಲ್ಲ. ಈ ಹಿಂದೆ 2018ರಲ್ಲಿ ಕಾಂಗ್ರೆಸ್ ಸೇರಿದಂತೆ ಏಳು ವಿರೋಧ ಪಕ್ಷಗಳು ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಸ್ತಾವನೆಗೆ ನೋಟಿಸ್ ಸಲ್ಲಿಸಿದ್ದವು.

ನಿವೃತ್ತ ಸಿಜೆಐಗಳಾದ ರಂಜನ್ ಗೊಗೊಯ್, ಡಿ.ವೈ.ಚಂದ್ರಚೂಡ್, ಹಾಗೂ ನಿವೃತ್ತ ನ್ಯಾ.ಅರುಣ್ ಮಿಶ್ರಾ ಅವರ ಕಾರ್ಯವೈಖರಿಗಳನ್ನು ಕೂಡ ವಿಪಕ್ಷಗಳು ಹಲವು ಬಾರಿ ಪ್ರಶ್ನಿಸಿದ್ದವು. ನಿರ್ದಿಷ್ಟ ಪ್ರಕರಣಗಳಲ್ಲಿ ಯಾವ ನ್ಯಾಯಮೂರ್ತಿಗಳು ತಮ್ಮ ವಾದಕ್ಕೆ ಪೂರಕವಾಗಿ ಆದೇಶ/ತೀರ್ಪು ಗಳನ್ನು ನೀಡುವುದಿಲ್ಲವೋ ಅಂಥವರನ್ನು ಪಕ್ಷಪಾತಿ ನ್ಯಾಯಮೂರ್ತಿ ಎಂಬಂತೆ ಬಿಂಬಿಸುತ್ತಾ, ಅವರು ಕೇಂದ್ರ ಸರ್ಕಾರದ ರಕ್ಷಣೆ ಮಾಡುತ್ತಾರೆ ಎಂಬ ನರೇಟಿವ್ ಅನ್ನು ವ್ಯವಸ್ಥಿತವಾಗಿ ಹೆಣೆಯಲಾಗುತ್ತದೆ. ‌

ಹಾಗಂತ, ವಿಪಕ್ಷಗಳ ಪ್ರತಿ ಟೀಕೆಯನ್ನೂ ನ್ಯಾಯಾಂಗದ ಮೇಲಿನ ದಾಳಿ ಎನ್ನಲಾಗದು. ಆದರೆ, ರಾಜಕೀಯ ಟೀಕೆಯ ಹೆಸರಿನಲ್ಲಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವರ್ತನೆಗಳನ್ನು ಸಮರ್ಥಿಸ ಲಾಗುವುದಿಲ್ಲ. ಈಗ ವೋಟ್ ಚೋರಿ ಹೆಸರಲ್ಲಿ ಹಾಲಿ ಸಿಜೆಐ ಮೇಲೂ ಇಂಥದ್ದೇ ರೀತಿಯಲ್ಲಿ ಒತ್ತಡ ಹೇರಲಾಗುತ್ತಿದೆ. ಕೆಲ ವಿರೋಧ ಪಕ್ಷದ ನಾಯಕರು ಎಸ್‌ಐಆರ್ ವಿಚಾರದಲ್ಲಿ ನ್ಯಾಯಾಲಯದ ನಿಲುವುಗಳನ್ನು ಟೀಕಿಸಿದ್ದಾರೆ. ಕೇರಳ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ, ‘ಡಿಯರ್ ಸೂರ್ಯಕಾಂತ್, ಕಾನೂನು-ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ ಈಗಲೇ ರಾಜೀನಾಮೆ ನೀಡಿ. ಅದನ್ನು ನಿಭಾಯಿಸಬಲ್ಲ ಮತ್ತೊಬ್ಬರನ್ನು ನಾವು ಹುಡುಕುತ್ತೇವೆ’ ಎಂಬ ಹುಂಬತನದ ಹೇಳಿಕೆಯೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿತು. ‌

ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಅಳಿಸಿಹಾಕಲಾಯಿತು. ಬಿಜೆಪಿ ಚುನಾವಣಾ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ ಎನ್ನುವುದು ರಾಹುಲ್ ಗಾಂಧಿ-ವಿಪಕ್ಷಗಳ ಆರೋಪ. ಕೆಲ ರಾಜ್ಯಗಳಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳು ಮತ್ತು ಹೆಸರುಗಳ ತೆಗೆದುಹಾಕುವಿಕೆಯ ಬಗ್ಗೆ ಪ್ರಶ್ನೆಗಳು ಎದ್ದಿರುವುದರಿಂದ ಅಂತಹಾ ಆಕ್ಷೇಪಗಳಿಗೆ ಪೂರಕವಾಗಿ ದಾಖಲೆಗಳನ್ನು ಸಲ್ಲಿಸಿ ಸಮಸ್ಯೆ ಇತ್ಯರ್ಥಪಡಿಸುವ ಪ್ರಕ್ರಿಯೆ ಜಾರಿ ಯಲ್ಲಿದೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ 90 ಲಕ್ಷ ಮತದಾರರನ್ನು ತೆಗೆದು ಹಾಕಲಾಗಿತ್ತು. ಈಗ ನೈಜ, ಅರ್ಹ ಮತದಾರರನ್ನು ಸೇರ್ಪಡೆಗೊಳಿಸಲು ಆಯೋಗವು ಅಭಿಯಾನ ನಡೆಸಿದೆ. ರಾಜ್ಯಾದ್ಯಂತ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮತದಾರರಿಗೆ ಯಾವುದೇ ದೂರುಗಳಿದ್ದರೆ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿ (BLO), ಸಹಾಯಕ ಮತದಾರರ ನೋಂದಣಾಧಿಕಾರಿ (AERO), ಮತದಾರರ ನೋಂದಣಾಧಿಕಾರಿ (ERO) ಅಥವಾ ಜಿಲ್ಲಾ ಚುನಾವಣಾಧಿಕಾರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಈ ಬೆಳವಣಿಗೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ವಾಗುವಂತೆ ಚುನಾವಣೆಯನ್ನು ವಂಚನಾತ್ಮಕವಾಗಿ ನಡೆಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಅದೇನೇ ಇರಲಿ, ಕಳೆದ ಚುನಾವಣೆಯಲ್ಲಿ ತಮಗೆ ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂಬ ಅಳಲು ಆ ಅರ್ಹ ಮತದಾರರಲ್ಲಿ ಶಾಶ್ವತವಾಗಿ ಉಳಿಯಲಿದೆ ಎನ್ನುವುದು ಕೂಡ ವಾಸ್ತವ. ಹೀಗಿದ್ದರೂ, ಒಂದು ಪಕ್ಷಕ್ಕೆ ಅನುಕೂಲವಾಗುವಂತೆ ಚುನಾವಣಾ ಆಯೋಗ ಅಕ್ರಮ ಎಸಗಿದೆ ಎನ್ನಲು ಆಧಾರಗಳಿಲ್ಲ. ಬಂಗಾಳದಲ್ಲಿ ಆಗಿನ ಟಿಎಂಸಿ ಸರ್ಕಾರ ಆಯೋಗಕ್ಕೆ ಸಹಕಾರ ನೀಡಲಿಲ್ಲ ಎಂಬ ಆರೋಪವಿದೆ. ಮತ್ತೊಂದೆಡೆ, ಆಯೋಗದ ಮೇಲಿನ ಆಪಾದನೆಗಳಿಗೆ ನಿಮ್ಮಲ್ಲಿ ಆಧಾರ ಏನಿದೆ ಎಂದು ರಾಹುಲ್ ಗಾಂಧಿ ಬಳಿ ಕೇಳಿದರೆ, ಅವರಿಂದ ತಾರ್ಕಿಕ ಉತ್ತರ ಈವರೆಗೆ ಬಂದಿಲ್ಲ.

ದೇಶದಲ್ಲಿ ಎಸ್‌ಐಆರ್ ನಡೆಯುತ್ತಿರುವುದು ಇದೇನು ಮೊದಲಲ್ಲ. ಇದುವರೆಗೆ 10 ಸಲ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ದೇಶದಲ್ಲಿ ನಡೆದಿದೆ. ಮೃತಪಟ್ಟವರು, ಸ್ಥಳಾಂತರಗೊಂಡವರು, ನಕಲಿ ನೋಂದಣಿಗಳು ಮತ್ತು ಕಾನೂನಿನ ಪ್ರಕಾರ ಅನರ್ಹರಾದವರ ಹೆಸರುಗಳನ್ನು ಸೂಕ್ತ ಪರಿಶೀಲನೆ ಯ ನಂತರ ತೆಗೆದುಹಾಕುವುದು ಚುನಾವಣಾ ವ್ಯವಸ್ಥೆಯ ಅಗತ್ಯ ಕ್ರಮ. ಕೆಲವೆಡೆ ಜೀವಂತವಾಗಿ ರುವ ಅರ್ಹ ಮತದಾರರನ್ನು ತಪ್ಪಾಗಿ ಪಟ್ಟಿಯಿಂದ ಹೊರಗಿಡಲಾದದ್ದು ವಿವಾದಕ್ಕೆಡೆ ಮಾಡಿದೆ.

ಹಾಗೆ ನೋಡಿದರೆ, ಕಾಂಗ್ರೆಸ್ಸಿನ ಕೆಲ ನಾಯಕರು ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ತತ್ವವನ್ನು ಬೆಂಬಲಿಸಿzರೆ. ಹರಿಯಾಣದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಕ್ಯಾಪ್ಟನ್ ಅಜಯ್ ಸಿಂಗ್ ಯಾದವ್ ಅವರು ನಕಲಿ ಮತದಾರರ ನೋಂದಣಿಗಳನ್ನು ಪಕ್ಷದ ಕಾರ್ಯಕರ್ತರು ಗುರುತಿಸಬೇಕು ಎಂದು ಕರೆ ನೀಡಿದ್ದರು. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಪಕ್ಷದ ಬೂತ್ ಮಟ್ಟದ ಕಾರ್ಯ ಕರ್ತರು ಭಾಗವಹಿಸಬೇಕು ಎಂಬ ನಿಲುವನ್ನೂ ಹರಿಯಾಣ ಕಾಂಗ್ರೆಸ್ ವ್ಯಕ್ತಪಡಿಸಿತ್ತು. ಅಂದರೆ, ಕಾಂಗ್ರೆಸ್ ನೊಳಗೂ ಮತದಾರರ ಪಟ್ಟಿಯನ್ನು ದೋಷ ಮುಕ್ತಗೊಳಿಸುವ ಅಗತ್ಯವನ್ನು ಒಪ್ಪಿಕೊಳ್ಳುವವರಿದ್ದಾರೆ ಎಂದಾಯಿತು.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವೋಟ್‌ಚೋರಿ ಕ್ಯಾಂಪೇನ್ ಹಿಂದಿರುವ ರಾಜಕೀಯ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಹಕಾರ, ಬಿಜೆಪಿ ವಿರೋಧಿ ಮತಗಳ ಒಗ್ಗೂಡುವಿಕೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತ ಚರ್ಚೆ- ಇವೆಲ್ಲವೂ ಮುಂದಿನ ಚುನಾವಣಾ ರಾಜಕಾರಣಕ್ಕೆ ಸಂಬಂಧಿಸಿವೆ.

ದೆಹಲಿ ಪ್ರತಿಭಟನೆಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿರುವುದು ಎಸ್‌ಐಆರ್ ವಿವಾದ ಕಾಂಗ್ರೆಸ್‌ಗೆ ಸೀಮಿತ ವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಅತ್ಯಗತ್ಯ; ಹಾಗೇ ಅರ್ಹ ಮತದಾರರ ಹಕ್ಕುಗಳ ರಕ್ಷಣೆಯೂ ಮುಖ್ಯ. ಈ ಎರಡರ ನಡುವಿನ ಸಮತೋಲನವನ್ನು ರಾಜಕೀಯ ಆರೋಪ/ಪ್ರತ್ಯಾರೋಪಗಳಿಗಿಂತ ಕಾನೂನು, ದಾಖಲೆ ಮತ್ತು ಪಾರದರ್ಶಕ ಪ್ರಕ್ರಿಯೆಗಳೇ ನಿರ್ಧರಿಸಬೇಕು.