ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Hunj Column: ಹಿಂದೂ ಎಂಬ ಪದದ ಹಿಂದು ಮುಂದು !

ಕ್ರಿಸ್ತಪೂರ್ವ ಆರನೇ (ಕ್ರಿ. ಪೂ. 521) ಶತಮಾನದಲ್ಲಿ ಇರಾನಿನ ಬಿಸೋಟನ್ ಪರ್ವತದ ಹದಿನೈದು ಮೀಟರ್ ಎತ್ತರ ಮತ್ತು ಇಪ್ಪತ್ತೈದು ಮೀಟರ್ ಅಗಲದ ಬೆಟ್ಟದಂಚಿನ ಏಣಿನ ಮೇಲೆ ಕೆತ್ತಿರುವ ಯುನೆಸ್ಕೊ ಪರಂಪರೆಯ ತಾಣ ಎಂದು ಗುರುತಿಸಿರುವ ಒಂದು ಶಿಲಾಶಾಸನವಿದೆ. ಇದನ್ನು ಬೇಹಿಸ್ತಾನ ಶಾಸನ ಅಥವಾ ಒಂದನೇ ಡೇರಿಯಸ್ (ದಾರಿಯಸ್) ಶಾಸನ ಎಂದು ಕರೆಯುತ್ತಾರೆ.

ವಚನಾಮೃತ (ಭಾಗ-1)

ರವಿ ಹಂಜ್

ಹಿಂದೂ ಎಂಬ ಪದ ಇತ್ತೀಚಿನದು. ಅದು ವೇದಗಳಲ್ಲಿಲ್ಲ. ಉಪನಿಷತ್ತುಗಳಲ್ಲಿಲ್ಲ. ವಚನಗಳಲ್ಲಿಲ್ಲ! ಹಿಂದೂ ಎಂದರೆ ಪರ್ಷಿಯನ್ ಭಾಷೆಯಲ್ಲಿ ಕಳ್ಳ, ಗುಲಾಮ, ಡಕಾಯಿತ ಎಂದಿದೆ. ಪರ್ಷಿಯನ್ನರು ಭಾರತೀಯರನ್ನು ಕಳ್ಳ, ಗುಲಾಮ ಎಂದು ಹೀಗಳೆಯಲು ಹಿಂದೂ ಎಂದು ಕರೆಯುತ್ತಿದ್ದರು ಎಂಬ ಭಾಷಣಗಳನ್ನು, ಹೇಳಿಕೆಗಳನ್ನು ಸಾಕಷ್ಟು ಕೇಳಿರುತ್ತೀರಿ. ಇಂತಹ ಮಾತುಗಳನ್ನು ಯಾರೋ ಸಾಮಾನ್ಯರು ಹೇಳಿದ್ದರೆ ಅದಕ್ಕೆ ಅಷ್ಟು ಮಹತ್ವವಿರುತ್ತಿರಲಿಲ್ಲ. ಆದರೆ ನಾಡಿನ ಸಾಕ್ಷಿಪ್ರಜ್ಞೆ, ಸಂಶೋಧಕ, ಬುದ್ಧಿಜೀವಿ ಎಂಬೆ ಗುಣವಿಶೇಷಣಗಳನ್ನು ಹೊಂದಿದ ವ್ಯಕ್ತಿಗಳು ಮತ್ತು ಮಂತ್ರಿ ಮಹೋದಯರು ಅಂತಹ ಹೇಳಿಕೆಗಳನ್ನು ನೀಡಿದರೆ ಯಾವ ಪರಾಮರ್ಶೆಯಿಲ್ಲದೆ ಜನಸಾಮಾನ್ಯರು ಅದನ್ನು ಅಪ್ಪಿ ಒಪ್ಪಿಕೊಳ್ಳುವುದು ಸಹಜ. ಏಕೆಂದರೆ ಈ ಮಹಾಮಹಿಮರು ಹೊಂದಿರುವ ಗುಣ ವಿಶೇಷಣಗಳೇ ಸಮಾಜದಲ್ಲಿ ಅತ್ಯಂತ ಭೂಷಣಪ್ರಾಯವಾಗಿವೆ!

ಹಾಗಾಗಿ ಇಂಥವರ ಹೇಳಿಕೆಗಳನ್ನು ಯಾವುದೇ ಪರಾಮರ್ಶೆಗೆ ಒಳಪಡಿಸುವುದು ಅನಗತ್ಯ ಎಂಬ ಅಭಿಪ್ರಾಯ ಸಹ ಸಮಾಜದಲ್ಲಿ ಸ್ಥಾಪಿತ ವಾಗಿದೆ. ಆದರೆ ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎಂಬ ತಾರ್ಕಿಕ ತತ್ವವೂ ಭಾರತೀಯ ಸಮಾಜದಲ್ಲಿ ಸ್ಥಾಪಿತವಾಗಿದೆ.

ಬಸವಣ್ಣನು ಸಹ, ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ; ತರ್ಕದ ಬೆನ್ನ ಬಾರ ನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ, ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ. ಎಂದು ತನ್ನ ವಚನದಲ್ಲಿ ಪರಾಮರ್ಶನ ಪ್ರಕ್ರಿಯೆಯನ್ನು ಒರೆ ಕಟ್ಟುವೆ, ನಿಗಳವನಿಕ್ಕುವೆ, ಬಾರನೆತ್ತುವೆ, ಕೊಯಿವೆ ಎಂಬರ್ಥದಲ್ಲಿ ಹೇಳಿದ್ದಾನೆ.

ಇದನ್ನೂ ಓದಿ: Ravi Hunj Column: ವೀರಶೈವ ಪದ ತೆಗೆದು ಲಿಂಗಾಯತ ಹಾಕಿದರೆ ಸಾಲದು !

ಇದನ್ನೇ ಇಂದಿನ ಆಧುನಿಕ ಯುಗದ ವಿಶ್ಲೇಷಣಾ ತಂತ್ರದಲ್ಲಿ scrutinizing, slicing and dicing ಎನ್ನುತ್ತಾರೆ. ಹಾಗಾಗಿ ಹಿಂದೂ ಪದೈತಿಹಾಸವನ್ನು ಒರೆಯ ಕಟ್ಟಿ ನಿಗಳವನಿಕ್ಕಿ ಬಾರನೆತ್ತಿ (ದ್ವಾರ ವನೆತ್ತಿ) ಅಲಂಕಾರಿಕ ತೋರಿಕೆಯ ಮೂಗ ಕುಯಿದು ಪರಾಮರ್ಶಿಸಿ ನೋಡೋಣ.

ಕ್ರಿಸ್ತಪೂರ್ವ ಆರನೇ (ಕ್ರಿ. ಪೂ. 521) ಶತಮಾನದಲ್ಲಿ ಇರಾನಿನ ಬಿಸೋಟನ್ ಪರ್ವತದ ಹದಿನೈದು ಮೀಟರ್ ಎತ್ತರ ಮತ್ತು ಇಪ್ಪತ್ತೈದು ಮೀಟರ್ ಅಗಲದ ಬೆಟ್ಟದಂಚಿನ ಏಣಿನ ಮೇಲೆ ಕೆತ್ತಿರುವ ಯುನೆಸ್ಕೊ ಪರಂಪರೆಯ ತಾಣ ಎಂದು ಗುರುತಿಸಿರುವ ಒಂದು ಶಿಲಾಶಾಸನವಿದೆ. ಇದನ್ನು ಬೇಹಿಸ್ತಾನ ಶಾಸನ ಅಥವಾ ಒಂದನೇ ಡೇರಿಯಸ್ (ದಾರಿಯಸ್) ಶಾಸನ ಎಂದು ಕರೆಯುತ್ತಾರೆ. ಇದನ್ನು ಕೆತ್ತಿಸಿದ್ದು ದಾರಿಯಸ್ ದಿ ಗ್ರೇಟ್ ಎಂದೇ ಖ್ಯಾತನಾದ ಪರ್ಷಿಯನ್ ಸಾಮ್ರಾಜ್ಯದ ಸಾಮ್ರಾಟ. ಈತನು ಕ್ರಿಸ್ತಪೂರ್ವ 522ರಿಂದ ಕ್ರಿಸ್ತಪೂರ್ವ 486ರವರೆಗೆ ಪರ್ಷಿಯನ್ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದಿದ್ದನು.

ಈ ಶಾಸನದ ಒಂದು ವಿಶೇಷವೆಂದರೆ ಒಂದೇ ವಿಷಯವನ್ನು ಹಳೆಯ ಪರ್ಷಿಯನ್, ಎಲಮೈಟ್ ಮತ್ತು ಬ್ಯಾಬಿಲೋನಿಯನ್ ಮೂರೂ ಭಾಷೆಯಲ್ಲಿ ಕೆತ್ತಿರುವುದು. ಅಂದ ಹಾಗೆ ಬಿಸೋಟನ್ ಎಂಬುದು ಬೇಹಿಸ್ತಾನ ಎಂಬುದರ ಆಂಗ್ಲ ರೂಪ. ಬೇಹಿಸ್ತಾನ ಎಂದರೆ ಪರ್ಷಿಯನ್ ಭಾಷೆಯಲ್ಲಿ ದೇವಸ್ಥಾನ ಎಂಬ ಅರ್ಥವಿದೆ. ಹಾಗಾಗಿ ಈ ಪರ್ವತವನ್ನು ಪವಿತ್ರ ಪರ್ವತ ಎಂದೇ ಕರೆಯುತ್ತಾರೆ.

Pyra

ಈ ಶಾಸನದಲ್ಲಿ ದಾರಿಯಸನ ವಂಶಾವಳಿಯನ್ನು ತಿಳಿಸುತ್ತ ಈತನು ಅವರ ವಂಶದ ಒಂಬತ್ತನೇ ರಾಜ ಎನ್ನಲಾಗಿದೆ. ಈತನ ಸಾಮ್ರಾಜ್ಯವು ಪರ್ಷಿಯಾ, ಪಾರ್ಥಿಯಾ, ಅರ್ಮೇನಿಯಾ, ಗ್ರೀಸ್, ಈಜಿಪ್ಟ್, ಬ್ಯಾಬಿಲೋನಿಯಾ, ಅರೇಬಿಯಾ, ಸೋಗ್ಡಿಯಾ, ಬಾಕಿಯಾ, ಶಕ, ಮಕ, ಗಾಂಧಾರ ಇನ್ನೂ ಮುಂತಾದ ದೇಶಗಳನ್ನು ಹೊಂದಿತ್ತು ಎಂದು ವರ್ಣಿಸಲಾಗಿದೆ. ಸಿಂಧೂ ನದಿಯ ಆಚೆಗಿನ ದಾರಿಯಸ್ ಆಡಳಿತದ ಪ್ರದೇಶಗಳನ್ನು ಹಿಂದೂಶ್ ಎಂದು ಕರೆಯಲಾಗಿದೆ. ಹಾಗಾಗಿ ಹಿಂದೂ ಎಂಬ ಪದದ ಬಳಕೆ ಕ್ರಿಸ್ತಪೂರ್ವ ಆರನೇ ಶತಮಾನಕ್ಕೂ ಹಿಂದಿನಿಂದಲೂ ಇತ್ತು ಎಂದು ವೈಜ್ಞಾನಿಕವಾಗಿ ವಿಶ್ವಮಾನ್ಯವಾಗಿ ಸಾಬೀತಾಗಿದೆ.‌

ಇನ್ನು ಋಗ್ವೇದದಲ್ಲಿನ ನದಿಸ್ತುತಿ ಸೂಕ್ತವು ಸಿಂಧೂ ನದಿಯ ಜಲಸಂಪತ್ತನ್ನು ವರ್ಣಿಸುವ ಸೂಕ್ತ ವಾಗಿದೆ. ಸಿಂಧೂ ನದಿಯನ್ನು ಸಾಗರದಷ್ಟು ಅಗಾಧ ಎನ್ನುತ್ತಾ ಸಪ್ತ ಸಿಂಧೂ ಎನ್ನಲಾಗಿದೆ. ಈ ಸಪ್ತ ಸಿಂಧೂ ಎಂಬುದೇ ಸಪ್ತಸಾಗರ ಎಂಬ ಪದೋತ್ಪತ್ತಿಯ ಮೂಲವಾಗಿದೆ. ಋಗ್ವೇದದ ನದಿಸ್ತುತಿ ಸೂಕ್ತದ ಶ್ಲೋಕ ಹೀಗಿದೆ.

ಪ್ರ ಸು ವಾ ಆಪೋ ಮಹಿಮಾನಮ್ ಉತ್ತಮಂ ಕಾರ್ರ‍ು ವೋಚಾತಿ ಸದನೇ ವಿವಸ್ವತಃ |

ಪ್ರ ಸಪ್ತ-ಸಪ್ತ ತ್ರೇಧಾ ಹಿ ಚಕ್ರಮುಃ ಪ್ರ ಸೃತ್ವರೀಣಾಮ್ ಅತಿ ಸಿಂರ್ಧೂ ಓಜಸಾ

ಸಂಶೋಧಕ ಗ್ಯಾವಿನ್ ಫ್ಲಡ್, ವೇದಗಳಲ್ಲಿನ ಸಪ್ತ ಸಿಂಧೂ ಎಂಬುದೇ ಜೆಂಡಾ ಅವೆಸ್ತಾದಲ್ಲಿ ಹಪ್ತ ಹಿಂದೂ ಎಂದಾಗಿದೆ ಎನ್ನುತ್ತಾರೆ. ತಾರ್ಕಿಕವಾಗಿ ಗ್ಯಾವಿನ್ ಫ್ಲಡ್ ಅಭಿಪ್ರಾಯ ಸರಿಯಿದೆ. ಏಕೆಂದರೆ ಜೆಂಡಾ ಅವೆಸ್ತಾ ಎನ್ನುವುದು ಜೋರಾಷ್ಟ್ರಿಯನ್ ಅಗ್ನಿ ಆರಾಧಕರ ಒಂದು ಪವಿತ್ರ ಗ್ರಂಥ.

ಹಿಂದೂಗಳಿಗೆ ವೇದಗಳಿದ್ದಂತೆ ಅಗ್ನಿ ಆರಾಧಕರಿಗೆ ಜೆಂಡಾ ಅವೆಸ್ತಾ ಇದೆ. ಅವೆಸ್ತನ್ ಭಾಷೆಯಲ್ಲಿನ ಈ ಗ್ರಂಥವು ಸ ಅಕ್ಷರಕ್ಕೆ ಪರ್ಯಾಯವಾಗಿ ಹ ಬಳಸುವ ಕಾರಣ ಸಪ್ತ ಸಿಂಧೂ ಎನ್ನುವುದು ಹಪ್ತ ಹಿಂದೂ ಆಗಿದೆ. ಅದೇ ರೀತಿ ಸೋಮ(ರಸ)ವು ಹೋಮ ಎಂದು, ಸೇನಾ ಎಂಬುದು ಹೇನಾ, ಸುರ ಎಂಬುದು ಹುರ, ಅಸುರ ಎಂಬುದು ಅಹುರ, ಯಜ್ಞ ಯಹ್ನ ಎಂದಾಗಿದೆ. ಅವೆಸ್ತಾ ತತ್ವಗಳಾದ ಹುಮತ (ಒಳ್ಳೆಯ ಆಲೋಚನೆ), ಹೂಕ್ತ (ಒಳ್ಳೆಯ ಮಾತು), ಮತ್ತು ಹುವರ್ಶ್ತಾ (ಒಳ್ಳೆಯ ಕಾರ್ಯ) ಗಳನ್ನು ಸಂಸ್ಕೃತದಲ್ಲಿ ಸುಮತ, ಸೂಕ್ತ, ಮತ್ತು ಸುವರ್ಶ್ತಾ ಎಂದು ಬರೆಯಲಾಗುತ್ತದೆ.

ವೇದ ಮತ್ತು ಅವೆಸ್ತಾಗಳ ನಡುವೆ ಕೇವಲ ಭಾಷೆಯ ಸಾಮ್ಯತೆಯಲ್ಲದೆ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಸಾಮ್ಯತೆಗಳು ಗಾಢವಾಗಿವೆ. ವೈದಿಕ ಭಾರತೀಯರು ಮತ್ತು ಜೋರಾಷ್ಟ್ರಿಯನ್ ಇರಾನಿ ಯರು ಒಂದೇ ಬಳ್ಳಿಯ ಹೂಗಳು ಎಂದೇ ಇತಿಹಾಸದಲ್ಲಿ ಗುರುತಿಸಲಾಗಿದೆ. ಆದರೂ ಮುಂದೆ ದಾಯಾದಿ ಕಲಹದಂತೆ ಎರಡೂ ಪಂಗಡಗಳಲ್ಲಿ ಪರಸ್ಪರ ವೈರತ್ವ ಮೂಡಿರುವುದನ್ನೂ ಕಾಣಬಹುದು.

ವೇದಗಳಲ್ಲಿ ಇಂದ್ರ ಸುರನಾದರೆ, ಅವೆಸ್ತಾದಲ್ಲಿ ಇಂದ್ರನು ಅಸುರ. ಅದೇ ರೀತಿ ಅವೆಸ್ತಾದ ಅಹುರ ಮಜ್ದಾ ಎಂಬ ಪರಮದೇವ ವೇದಗಳಲ್ಲಿ ಅಸುರ! ಸಿಂಧೂಬಯಲಿನ ನಾಗರಿಕತೆಯ ವಿಕಾಸದಲ್ಲಿ ಅಗ್ನಿ ಆರಾಧಕರು ಮತ್ತು ಪ್ರಕೃತಿಯಾರಾಧಕರು ಜೊತೆಜೊತೆಯಲ್ಲಿ ಕೂಡಿ ಬಾಳುತ್ತಿದ್ದರು. ವಿಕಾಸಕ್ಕೆ ತಕ್ಕಂತೆ ಹೊಸ ಹೊಸ ಆಲೋಚನೆಗಳು, ಆಚರಣೆಗಳು ಕಾಲಾನುಕ್ರಮವಾಗಿ ವಲಸಿಗರು ಬಂದಂತೆ ಸಂಸ್ಕೃತಿಯ ಕೊಡು-ಕೊಳ್ಳುವಿಕೆಯಿಂದ ಸಿಂಧೂ ಬಯಲಿನ ನಾಗರಿಕ ಸಂಸ್ಕೃತಿ ವಿಕಾಸಗೊಳ್ಳುತ್ತಾ ಬಂದಿತು. ವೈದಿಕ ಪ್ರಕೃತಿಯಾ ರಾಧನೆಯ ವಾಯು, ವರುಣ, ಅಗ್ನಿ, ಆಕಾಶಗಳಿಗೆ ಭೂಮಿಯೂ ಸೇರಿ ಪಂಚಕಾಯಗಳಾದವು.

ಈ ಶಕ್ತಿಗಳಿಗೆ ಇಂದ್ರ ಅಧಿಪತಿಯೆನಿಸಿದನು. ಈ ಪರಿಷ್ಕೃತ ಶಕ್ತಿಗಳ ಆರಾ ಧನೆಗೆ ತಕ್ಕ ನಿಯಮ ಗಳೊಂದಿಗೆ ವೇದಗಳು ಪರಿಷ್ಕೃ ತಗೊಂಡವು. ಆದರೆ ಕೆಲವು ನಿಷ್ಠರಿಗೆ ಈ ಹೊಸ ಆಲೋಚನೆಗಳು ಹಿಡಿಸಲಿಲ್ಲ. ಹಾಗಾಗಿ ಅಗ್ನಿ ಆರಾಧಕರ ಒಂದು ಗುಂಪು ಬೇರೆಯಾಗಿ ಪಾರ್ಶವಾಗಿ ಪಾರಸ, ಪಾರ್ಥಿ ಯನ್ನರೆನಿಸಿಕೊಂಡರು. ಈ ಪಾರ್ಥಿಯನ್ನರೇ ಮುಂದೆ ಸಮುದ್ರಯಾನದ ಮೂಲಕ ದಕ್ಷಿಣ ಭಾರತವನ್ನು ತಲುಪಿ ಪಲ್ಲವರೆಂದು ಖ್ಯಾತರಾದರು ಎಂದು ಸಂಶೋಧನೆಗಳು ಹೇಳುತ್ತವೆ.

ಇರಲಿ, ಪ್ರಕೃತಿಯಾರಾಧಕರ ಮತ್ತು ಅಗ್ನಿ ಆರಾಧಕರ ಭಿನ್ನಾಭಿಪ್ರಾಯಗಳ ಪಲ್ಲಟವೇ ವೇದ ಮತ್ತು ಅವೆಸ್ತಾಗಳಲ್ಲಿನ ಸಾಮ್ಯತೆ ಮತ್ತು ವೈರುಧ್ಯಗಳಿಗೆ ಕಾರಣಗಳಾಗಿವೆ. ಇರಲಿ, ಅವೆಸ್ತಾ ತತ್ವಗಳು ಮೌಖಿಕವಾಗಿ ಕ್ರಿಸ್ತಪೂರ್ವ ಹದಿನೈದರಿಂದ ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಬಳಕೆ ಯಲ್ಲಿದ್ದು ಕ್ರಿಸ್ತಶಕ ಒಂದರಿಂದ ಎರಡನೇ ಶತಮಾನದ ನಡುವೆ ಲಿಖಿತ ರೂಪ ಪಡೆದುಕೊಂಡಿವೆ ಎಂದು ಸಂಶೋಧನೆಗಳು ಹೇಳುತ್ತವೆ. ಅಲ್ಲಿಗೆ ಕ್ರಿಸ್ತಪೂರ್ವದಿಂದಲೂ ಹಿಂದೂ ಪದ ವ್ಯಾಪಕವಾಗಿ ಬಳಕೆಯಲ್ಲಿತ್ತು ಎಂದಾಗುತ್ತದೆ.

ಕ್ರಿಸ್ತಶಕ ಏಳನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ಕೊಟ್ಟು ಹದಿನಾರು ವರ್ಷಗಳ ಕಾಲ ಭಾರತ ದುದ್ದಕ್ಕೂ ಸಂಚರಿಸಿದ್ದ ಚೀನೀ ಬೌದ್ಧ ಭಿಕ್ಷು ಹುಯೆನ್ ತ್ಸಾಂಗನು ತನ್ನ ಪಶ್ಚಿಮದ ದಸ್ತಾವೇಜು ಗಳು ಕೃತಿಯಲ್ಲಿ ಭಾರತೀಯರನ್ನು ಇನ್ ತೂ(ಚೀನೀ ಲಿಪಿಯಲ್ಲಿ) ಎಂದರೆ ಹಿಂದೂ ಎಂದು ದಾಖಲಿಸಿದ್ದಾನೆ.

ಅದೇ ರೀತಿ ಹುಯೆನ್ ತ್ಸಾಂಗನ ನಂತರ ಅದೇ ಏಳನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದ ಯಿತ್ಸಿಂಗ್ ಸಹ ಸಿಂಧೂ ಎಂಬುದನ್ನು ಸಿ ಇನ್ ತೂ ಎಂದು ಮತ್ತು ಹಿಂದೂ ಎಂಬುದನ್ನು ಇನ್ ತೂ ಎಂದೂ ಬಳಸಿzನೆ. ಇವರೀ ರ್ವರೂ ಭೌಗೋಳಿಕವಾಗಿ ಭಾರತೀಯರನ್ನು ಹಿಂದೂ ಎಂದಿದ್ದರೂ ಹುಯೆನ್ ತ್ಸಾಂಗನು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಸಹ ಭಾರತೀಯ ರನ್ನು ಹಿಂದೂ ಎಂದು ಗುರುತಿಸಿದ್ದಾನೆ.

ನಂತರದ ಎಂಟನೇ ಶತಮಾನದ ಚಚ್ನಾಮಾ ಎನ್ನುವ ಗ್ರಂಥದಲ್ಲಿ ಭಾರತೀಯರನ್ನು ಹಿಂದೂ ವಾನ್ ಎಂದೂ ಮತ್ತು ಅವರ ಭಾಷೆಯನ್ನು ಹಿಂದವಿ ಎಂದೂ ದಾಖಲಿಸಲಾಗಿದೆ. ಪ್ರೊಫೆಸರ್ ಡಿ. ಎನ್. ಝಾ ಅವರು ಚಚ್ನಾಮಾ ಗ್ರಂಥವನ್ನು ವಿಶ್ಲೇಷಿಸುತ್ತಾ, ಇಲ್ಲಿನ ಹಿಂದೂವಾನ್ ಪದ ಧಾರ್ಮಿಕವಲ್ಲ.

ಇದನ್ನು ಭೌಗೋಳಿಕ ಅರ್ಥದಲ್ಲಿ ಬಳಸಲಾಗಿದೆ ಎನ್ನುತ್ತಾರಾದರೂ ಏಳನೇ ಶತಮಾನದಿಂದ ಭಾರತೀಯರನ್ನು ಭೌಗೋಳಿಕವಲ್ಲದೆ ಸಾಂಸ್ಕೃತಿಕವಾಗಿ ಸಹ ಹಿಂದೂ ಎಂದು ಗುರುತಿಸುತ್ತಿದ್ದುದು ಹುಯೆನ್ ತ್ಸಾಂಗನ ಕೃತಿಗಳಿಂದ ತಿಳಿದು ಬರುತ್ತದೆ.

ಹನ್ನೊಂದನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಆಲ್ ಬರೂನಿ ತನ್ನ ತಾರೀಖ-ಆಲ್-ಹಿಂದ್ ಕೃತಿಯಲ್ಲಿ ಸ್ಪಷ್ಟವಾಗಿ‌ ಹಿಂದೂ ಪದವನ್ನು ಧಾರ್ಮಿಕ ನೆಲೆಯಿಂದ ಬಳಸಿದ್ದಾನೆ. ಬರೂನಿಯು ಸ್ಪಷ್ಟವಾಗಿ ಜೈನ, ಬೌದ್ಧರಾದಿಯಾಗಿ ಎಲ್ಲಾ ಇಸ್ಲಾಮೇತರ ಭಾರತೀಯರನ್ನು ಹಿಂದೂ ಎಂದು ಕರೆದಿದ್ದಾನೆ.

ಅಲ್ಲಿಗೆ ಹಿಂದೂ ಎಂಬ ಭೌಗೋಳಿಕ ಜನಾಂಗೀಯ ಪದವು ಮುಸ್ಲಿಂ ದಾಳಿಯ ಕಾಲದಿಂದ ಕ್ರಮೇಣವಾಗಿ ಮುಸ್ಲಿಮರು ಮುಸ್ಲಿಮೇತರರನ್ನು (ಇತರೆಯವರನ್ನು) ಧಾರ್ಮಿಕವಾಗಿ ಗುರುತಿಸುವ ಪದವಾಗಿ ಬಳಕೆಯಾಗತೊಡಗಿತು. ಇದು ಆಲ್ ಬರೂನಿಯ ಕೃತಿಗಳಿಂದ ಸ್ಪಷ್ಟವಾಗುತ್ತದೆ.

ಇನ್ನು ವಚನ, ಭಗವದ್ಗೀತೆ, ಪುರಾಣಗಳಲ್ಲಿ ಹಿಂದೂ ಎಂದು ಬರೆಯುವ ಅವಶ್ಯಕತೆಯೇ ಇರಲಿಲ್ಲ. ಅವುಗಳ ಮುಖ್ಯ ಉದ್ದೇಶ ನ್ಯಾಯ, ನೀತಿ, ನೈತಿಕತೆ, ಧರ್ಮ, ಆತ್ಮಾನುಸಂಧಾನ, ಮನದಲ್ಲಿನ ದ್ವಂದ್ವಗಳನ್ನು ನಿಭಾಯಿಸಿ ಸಾಂಸಾರಿಕ ತತ್ವಪರಿಪಾಲನೆಯ ಪಥದಿಂದ ಆಧ್ಯಾತ್ಮಿಕ ಮಾರ್ಗ ವನ್ನು ಅನುಸರಿಸುವ ಮಾರ್ಗವನ್ನು ಬೋಧಿಸುವುದಾಗಿದೆ. ಹಾಗಾಗಿ ಅವುಗಳಲ್ಲಿ ಹಿಂದೂ ಪದವನ್ನು ಹುಡುಕುವುದು ಸರಿಯೆನಿಸದು. (ಮುಂದಿನ ಭಾಗದಲ್ಲಿ: ಹಿಂದೂ ಪದಕ್ಕೆ ಅಪವ್ಯಾಖ್ಯಾನ ಹೇಗೆ ಬಂತು?)