Ravi Hunj Column: ವೀರಶೈವ ಪದ ತೆಗೆದು ಲಿಂಗಾಯತ ಹಾಕಿದರೆ ಸಾಲದು !
ಶ್ರೀಯುತ ಶಿರಹಟ್ಟಿಮಠರು ತಮ್ಮ ಸೌಖ್ಯದ ಪರಿಧಿಯಾಚೆ ಚಿಂತಿಸುವುದೂ ಇಲ್ಲ, ಕಣ್ತೆರೆದು ನೋಡು ವುದೂ ಇಲ್ಲ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಶ್ರೀಯುತರು, ರವಿ ಹಂಜ್ ಆರೋಪಗಳಿಗೆ ವಚನ ಸಾಹಿತ್ಯ ಮತ್ತು ಐತಿಹಾಸಿಕ ಸತ್ಯಗಳ ಆಧಾರದ ಮೇಲೆ ಮುಖಾಮುಖಿ ಯಾಗಬೇಕಿದೆ ಎನ್ನುತ್ತಾ ಭಾವನಾತ್ಮಕ ಸಂಕಥನಗಳ ಮೂಲಕವೇ ಅಭಿಪ್ರಾಯವನ್ನು ಮಂಡಿಸು ತ್ತಾರೆ.
-
ವಚನಾಮೃತ (ಭಾಗ-2)
ರವಿ ಹಂಜ್
ಚೌಕಿಮಠರು, ಭಿನ್ನಾಭಿಪ್ರಾಯಗಳು ಇರಬಹುದು; ಆದರೆ ಅವು ವ್ಯಕ್ತಿತ್ವದ ಸಮಗ್ರ ಸೇವೆಯನ್ನು ಮಸುಕಾಗಿಸುವುದು ಸಲ್ಲ ಎನ್ನುತ್ತಾರೆ. ಇಲ್ಲಿ ಮಸುಕಾಗಿಸುವುದು ಬಿಡಿ, ಮಸಿ ಹಚ್ಚುವ ಕೃತ್ಯಗಳಿಗೆ ಮಸಿಯನ್ನು ಸಿದ್ಧರಾಮ ಶ್ರೀಗಳೇ ಕೊಡಿಸುತ್ತಿದ್ದಾರೆ. ಖುದ್ದು ಚೌಕಿಮಠರೇ ಜಾಮದಾರರು ವೀರಶೈವರ ಮುಖಕ್ಕೆ ಮಸಿ ಬಳಿಯ ಬೇಕು ಎಂದುದನ್ನು ವಿರೋಧಿಸಿ ಕಳೆದ ವರ್ಷ ಲೇಖನ ಬರೆದ ದ್ದು ನನಗೆ ಇನ್ನೂ ನೆನಪಿದೆ. ಇದನ್ನು ಸಿದ್ಧರಾಮ ಶ್ರೀಗಳು ಎಲ್ಲಿ ಯೂ ಈವರೆಗೆ ವಿರೋಧಿಸಿಲ್ಲ. ಹಾಗಾಗಿ ಶ್ರೀ ಚೌಕಿಮಠರು ಹೇಳಿದಂತೆ ಸಮಗ್ರತೆ ಮತ್ತು ನ್ಯಾಯಸಮ್ಮತ ದೃಷ್ಟಿಕೋನಕ್ಕೆ ಆದ್ಯತೆ ಯನ್ನು ಶ್ರೀ ಚೌಕಿಮಠರೇ ದಯಮಾಡಿ ನೀಡಿಕೊಂಡು ಜಗದ್ಗುರುಗಳಿಗೆ ಮಾರ್ಗದರ್ಶನ ಮಾಡಬಲ್ಲರು ಎಂಬ ವಿಶ್ವಾಸ ನನಗಿದೆ.
ಅದೆಲ್ಲಕ್ಕೂ ಮುಕುಟವಿಟ್ಟಂತೆ ತೋಂಟದ ಸಿದ್ಧಲಿಂಗೇಶ್ವರ ಭ್ರಷ್ಟ ಎಂದು ಘೋಷಿಸಿದ ಬಳಗ ಜಗದ್ಗುರುಗಳ ಹಿಂದಿದೆ. ಶ್ರೀ ಚೌಕಿಮಠರೇ, ಅಖಂಡ ವೀರಶೈವ ಲಿಂಗಾಯತ ಧರ್ಮದ ಸಮನ್ವಯ ಸಾಧಿಸಬೇಕೆಂಬ ನಿಮ್ಮ ನಿಲುವಿಗೆ ಅಖಂಡ ವೀರಶೈವ ಲಿಂಗಾಯತ ಧರ್ಮೀಯರು ಬದ್ಧರಿದ್ದಾರೆ. ಆದರೆ ಅದನ್ನು ಭಂಗಗೊಳಿಸಬೇಕೆಂಬ ಲಿಂಗಾಹತರು ಪಣ ತೊಟ್ಟಿದ್ದಾರೆ.
ಅಂತಹ ಧರ್ಮ ಭಂಜಕ ಲಿಂಗಾಹತ ಗುಂಪಿನ ತಾರಾ ಮುಖಂಡರಾಗಿ ಶ್ರೀ ಸಿದ್ಧರಾಮ ಶ್ರೀಗಳು ಹೊಮ್ಮಿದ್ದಾರೆ. ಹಾಗಿದ್ದಾಗ ಶ್ರೀ ಚೌಕಿಮಠರಂತಹ ನೈತಿಕ ಜವಾಬ್ದಾರಿ ಹೊಂದಿದ ಹಿರಿಯರು ಜಗದ್ಗುರುಗಳಿಗೆ ಸತ್ಯವನ್ನು ಮನವರಿಕೆ ಮಾಡಿ ತಿಳಿ ಹೇಳಬೇಕೇ ಹೊರತು ಅವರನ್ನು ಬೆಂಬಲಿಸಿ ಬಾರಾ ಖೂನ್ ಮಾಫ್ ಮಾಡಬಾರದಾಗಿ ವಿನಂತಿಸುತ್ತೇನೆ.
ಇನ್ನು ಮೂರನೆಯ ಅಭಿಪ್ರಾಯ ನಿರೀಕ್ಷಿಸಿದಂತೆ ಶರಣ ವಿನಯ ಶಿರಹಟ್ಟಿಮಠ ಇವರದಾಗಿದೆ. ‘ಭಿನ್ನಮತದ ಸೊಗಸು’ ಎಂಬ ಮಾತನ್ನು ಹಿರಿಯ ಸಾಮಾಜಿಕ ಚಿಂತಕರೂ, ಜನಪದ ತಜ್ಞರೂ, ಮತ್ತು ನನ್ನ ಹಿತೈಷಿಗಳೂ ಆದ ಕಾಳೇಗೌಡ ನಾಗವಾರರು ಆಗಾಗ್ಗೆ ನನಗೆ ಹೇಳುತ್ತಿರುತ್ತಾರೆ.
ಇದನ್ನೂ ಓದಿ: Ravi Hunj Column: ಗಣಾಚಾರವೊಂದು ಮುಖಾಚಾರ ಮೂರು !
ಭಿನ್ನಮತ ಎಷ್ಟೇ ಕ್ಷೀಣವಾಗಿದ್ದರೂ ಅದು ಇದ್ದರೇನೇ ಪ್ರಜಾಪ್ರಭುತ್ವದಲ್ಲಿ ಸೊಗಸು. ಇದೇ ಅಭಿಪ್ರಾಯದ ವಿಶ್ವವಾಣಿ ಸಹ ಪ್ರತಿರೋಧದ ಒಂದು ದನಿ ಕ್ಷೀಣವಾಗಿದ್ದರೂ ಅದಕ್ಕೆ ವೇದಿಕೆ ಕಲ್ಪಿಸಬೇಕೆಂಬ ಪತ್ರಿಕಾಧರ್ಮಕ್ಕೆ ಬದ್ಧವಾಗಿ ಶಿರಹಟ್ಟಿಮಠರ ಅಭಿಪ್ರಾಯಗಳನ್ನು ಆಗಾಗ್ಗೆ ಪ್ರಕಟಿಸಿದೆ.
ಶ್ರೀಯುತ ಶಿರಹಟ್ಟಿಮಠರು ತಮ್ಮ ಸೌಖ್ಯದ ಪರಿಧಿಯಾಚೆ ಚಿಂತಿಸುವುದೂ ಇಲ್ಲ, ಕಣ್ತೆರೆದು ನೋಡುವುದೂ ಇಲ್ಲ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಶ್ರೀಯುತರು, ರವಿ ಹಂಜ್ ಆರೋಪಗಳಿಗೆ ವಚನ ಸಾಹಿತ್ಯ ಮತ್ತು ಐತಿಹಾಸಿಕ ಸತ್ಯಗಳ ಆಧಾರದ ಮೇಲೆ ಮುಖಾಮುಖಿ ಯಾಗಬೇಕಿದೆ ಎನ್ನುತ್ತಾ ಭಾವನಾತ್ಮಕ ಸಂಕಥನಗಳ ಮೂಲಕವೇ ಅಭಿಪ್ರಾಯವನ್ನು ಮಂಡಿಸು ತ್ತಾರೆ.
ಈ ಹಿಂದೆ ಐತಿಹಾಸಿಕ ಶಿಲಾ ಶಾಸನಗಳು ರಾಜರ ದರ್ಪದ ಸಂಕೇತಗಳು ಎಂದು ನಿರಾಕರಿಸಿದ್ದ ಅವರು ಇಂದು ವ್ಯತಿರಿಕ್ತವಾಗಿ ಐತಿಹಾಸಿಕ ಸತ್ಯದ ನೆಲೆಯಲ್ಲಿ ಮುಖಾಮುಖಿಯಾಗಬೇಕು ಎನ್ನು ತ್ತಿದ್ದಾರೆ. ಇರಲಿ, ಅವರ ಅಭಿಪ್ರಾಯದಲ್ಲಿ ವಚನ ಸಾಹಿತ್ಯ ಮತ್ತು ಐತಿಹಾಸಿಕ ಸತ್ಯಗಳ ಆಧಾರಗಳು ಎಲ್ಲಿವೆ ಎಂದು ಅವರ ಲೇಖನದಲ್ಲಿ ಹುಡುಕುತ್ತಿದ್ದೇನೆ, ಸಿಕ್ಕಿಲ್ಲ!
ಅವರ ಮುಂದುವರಿದ ವಾದದಲ್ಲಿ, ಜಾಮದಾರರು, ಮೀನಾಕ್ಷಿ ಬಾಳಿಯವರು ಅಥವಾ ಸಾಣೇಹಳ್ಳಿ ಶ್ರೀಗಳು ವೇದಿಕೆಯ ಮೇಲೆ ತಮ್ಮ ಸಂಶೋಧನಾತ್ಮಕ ಅಥವಾ ವಿಮರ್ಶಾತ್ಮಕ ವಿಚಾರಗಳನ್ನು ಮಂಡಿಸುವಾಗ ಸಿದ್ಧರಾಮ ಶ್ರೀಗಳು ಅದನ್ನು ತಡೆಯದೆ ನಗುತ್ತಾ ಕುಳಿತಿರುತ್ತಾರೆ ಎಂಬುದು ಅವರ ಮುಖ್ಯ ಆರೋಪ. ಆದರೆ, ಒಬ್ಬ ವಿರಕ್ತ ಪರಂಪರೆಯ ಮಠಾಧೀಶರಾಗಿ ಸಾರ್ವಜನಿಕ ವೇದಿಕೆಯಲ್ಲಿ ಹೇಗೆ ವರ್ತಿಸಬೇಕು? ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ನೋಡಿದರೆ, ‘ನುಡಿದರೆ ಮುತ್ತಿನ ಹಾರ ದಂತಿರಬೇಕು’ ಎಂಬುದು ಶರಣರ ನಿಯಮ.
ಡಾ.ಸಿದ್ಧರಾಮ ಶ್ರೀಗಳು ವೇದಿಕೆಯ ಘನತೆಯನ್ನು ಕಾಯ್ದುಕೊಳ್ಳಲು ಮತ್ತು ತಕ್ಷಣದ ಉದ್ವೇಗ ವನ್ನು ತಡೆಯಲು ಮೌನವನ್ನು ಒಂದು ಸಂಯಮದ ಅಸ್ತ್ರವಾಗಿ ಬಳಸಿರಬಹುದು. ಸಾರಸ್ವತ ಲೋಕದಲ್ಲಿ ಅಥವಾ ಸಂಶೋಧನಾ ವಲಯದಲ್ಲಿ ವ್ಯಕ್ತವಾಗುವ ತೀಕ್ಷ್ಣ ಸೈದ್ಧಾಂತಿಕ ವಿಮರ್ಶೆ ಗಳನ್ನು ‘ಅವಹೇಳನ’ ಎಂದು ಕರೆಯುವ ಬದಲು, ಅವುಗಳನ್ನು ಬೌದ್ಧಿಕ ಚರ್ಚೆಯ ಚೌಕಟ್ಟಿನಲ್ಲಿ ನೋಡ ಬೇಕಾಗುತ್ತದೆ ಎನ್ನುತ್ತಾರೆ.
ಜಾಮದಾರರು ಸಿದ್ಧಲಿಂಗೇಶ್ವರ ಭ್ರಷ್ಟ ಎಂದದ್ದು, ಸಾಣೇಹಳ್ಳಿ ಶ್ರೀ, ಜಂಗಮರು ಅವಿವೇಕಿಗಳು ಎಂದು ಜನಾಂಗೀಯ ಅವಹೇಳನ ಮಾಡಿದ್ದು, ಜೆ.ಎಸ್.ಪಾಟೀಲರಂತೂ, ಯಾವ ವಚನ ಪರಂಪರೆಯ ಮಠ ಇದೆಯೋ ಯಾವ ಶರಣ ಪರಂಪರೆಯ ಮಠ ಇದೆಯೋ, ಅಂತಹ ಮಠಕ್ಕೆ ಆದ ಲುಚ್ಚಾಗಳು ಯಾರಾದರೂ ಕುಂಕುಮ ಹಚ್ಚಿಕೊಂಡು ನಿಮ್ಮ ಹಳ್ಳಿಗಳಿಗೆ ಬಂದ್ರೆ, ನಿಮ್ಮ ಕಾಲಲ್ಲಿ ಇರೋದನ್ನು ಕೈಗೆ ತೆಗೆದುಕೊಳ್ಳಿರಿ ಅಂತ ಹೇಳ್ತೇನೆ ಎಂಬ ದ್ವೇಷದ ಪರಮಾವಧಿಯ ಹೊಲಸನ್ನೇ ನೂರಾರು ಸಭೆಗಳ ವೇದಿಕೆ ಮೇಲಿಂದ ಹರಿಸುತ್ತಿರುವುದು ಶಿರಹಟ್ಟಿಮಠರಿಗೆ ವಚನ ಸಾಹಿತ್ಯದ ಅದ್ಯಾವ ಕೋನದಿಂದ ಮುತ್ತಿನ ಹಾರವೆನಿಸುತ್ತವೆಯೋ ಆ ಕೋರಣೇಶ್ವರನೇ ಬಲ್ಲ!
ಮೂಲಭೂತವಾಗಿ ಇಂತಹ ಕೊಳಕು ಜನಾಂಗೀಯ ದ್ವೇಷಕ್ಕೆ ಸಭಾ ಗೌರವ, ಸಾರಸ್ವತ ಲೋಕ, ಸೈದ್ಧಾಂತಿಕ ವಿಮರ್ಶೆ, ಬೌದ್ಧಿಕ ಚೌಕಟ್ಟು ಎನ್ನುವ ಅಲಂಕಾರಿಕ ಪರಿಭಾಷೆಯನ್ನು ತೊಡಿಸಿದಾ ಕ್ಷಣ ಅಮೇಧ್ಯವೆಲ್ಲವೂ ಪ್ರಸಾದವಾಗುವುದೇ? ಮೊದಲಿಗೆ ಶಿರಹಟ್ಟಿಮಠರು ಪ್ರಾಥಮಿಕ ಹಂತದಿಂದ ವಚನಗಳನ್ನು ಸರಿಯಾದ ಅರ್ಥದಲ್ಲಿ ಓದಿ ಬಳಸುವುದನ್ನು ಕಲಿಯಬೇಕು. ಉದಕದ ತಂಪವ ತಾವರೆಯಲ್ಲದೆ ಹೊರಗಣ ಕೊರಡೆತ್ತಬಲ್ಲುದೊ? ಹೂವಿನ ಪರಿಮಳವ ತುಂಬಿಯಲ್ಲದೆ ಹೊರಗಣ ನೊಣನೆತ್ತಬಲ್ಲುದೊ? ಎಂಬಂತೆ ವಚನಗಳನ್ನು ಅಪಾತ್ರರನ್ನು ಅಲಂಕರಿಸಲು ಬಳಸುವುದು ವಚನಗಳಿಗೆ ಅವಮಾನಿಸಿದಂತೆ ಎಂಬುದನ್ನು ಶ್ರೀಯುತರು ಅರಿಯಬೇಕು.
ತುಂಬಿದ ಸಭೆಯಲ್ಲಿ ಅವಮಾನಿತನಾಗಿ ಪ್ರಳಯವನ್ನೇ ಮಾಡಿದ ಶಿವನಿಂದ ಹಿಡಿದು ಅವಮಾನಿತ ಗೊಂಡು ಶಪಿಸಿದ ಋಷಿಗಳ, ಅವಮಾನಿತಗೊಂಡೇ ಕ್ರಾಂತಿ ಮಾಡಿದ ಶರಣರ ಸಮೇತವಾಗಿ ಆಧುನಿಕ ಬಾಲಿವುಡ್ ಸ್ಯಾಂಡಲ್‌ವುಡ್ ಚಲನಚಿತ್ರಗಳವರೆಗೆ ಭರಪೂರ ಬದಲಾವಣೆಯನ್ನೇ ಮಾಡಿದ ದೃಷ್ಟಾಂತಗಳಿಂದ ವಾಸ್ತವದ ಸಾಕಷ್ಟು ಕಥನಗಳಿವೆ.
ವಚನ ಸಾಹಿತ್ಯದಲ್ಲಿಯೇ ಸಭಾಗೌರವವೆಂದು ಮಂದಸ್ಮಿತರಾಗಿ ಕುಳಿತ ಯಾವೊಬ್ಬ ಶರಣನ ಕತೆಯೂ ಇಲ್ಲ ಎಂಬುದು ವಚನ ಸಾಹಿತ್ಯದ ಆಧಾರದ ಮಾಹಿತಿ ಮತ್ತು ಐತಿಹಾಸಿಕ ಸತ್ಯದ ಮುಖಾಮುಖಿ. ಅಂದು ಮಂದಸ್ಮಿತರಾಗಿದ್ದ ಶ್ರೀ ಸಿದ್ಧರಾಮ ಶ್ರೀಗಳು ಸಭೆಗಳು ಮುಗಿದ ನಂತರ ವಾಗಲಿ ಈತನಕವಾಗಲಿ ಮೇಲಿನ ಶಿರಹಟ್ಟಿಮಠರ ಅನಿಸಿಕೆಯ ವಿದ್ವಾಂಸರ ನುಡಿಗಳನ್ನು ಖಂಡಿಸಿಲ್ಲ. ಈಗಲೂ ಅವರ ಬೆಂಬಲಿಗರು ಆಪಾದಿಸಿದ ಭ್ರಷ್ಟ ತೋಂಟದ ಸಿದ್ಧಲಿಂಗೇಶ್ವರರು ಸಾಂಸ್ಥಿಕರಿಸಿದ ಪೀಠದ ಮೇಲೆ ಆಸೀನರಾಗಿ ಮಂದಸ್ಮಿತರಾಗಿದ್ದಾರೆ ಎಂಬುದು ಐತಿಹಾಸಿಕ ಸಾರ್ವತ್ರಿಕ ಸತ್ಯದ ಮುಖಾಮುಖಿ.
ತಮ್ಮ ಅಭಿಪ್ರಾಯವನ್ನು ಮುಂದುವರಿಸುತ್ತಾ ಶಿರಹಟ್ಟಿಮಠರು, ಎಂ.ಎಂ.ಕಲಬುರ್ಗಿ ಅವರನ್ನು ‘ಧರ್ಮಭಂಜಕ ಪಿತಾಮಹ’ ಎಂದು ಅತ್ಯಂತ ಕಟುವಾಗಿ ನಿಂದಿಸಿದ್ದಾರೆ. ವಚನ ಸಾಹಿತ್ಯಕ್ಕೆ ಅಂಟಿ ಕೊಂಡಿದ್ದ ಪ್ರಕ್ಷಿಪ್ತಗಳನ್ನು (ನಂತರದ ದಿನಗಳಲ್ಲಿ ಸೇರಿಸಲಾದ ಸುಳ್ಳುಗಳು) ವೈಜ್ಞಾನಿಕವಾಗಿ ಶೋಧಿಸಿ, ಶರಣರ ನೈಜ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಿದ ಒಬ್ಬ ಮಹಾನ್ ಸಂಶೋಧಕನ ಬಗ್ಗೆ ಇಂತಹ ಪದಬಳಕೆ ಮಾಡುವುದು ಅವರದೇ ಲೇಖನದ ಆಶಯಕ್ಕೆ ವಿರುದ್ಧವಾಗಿದೆ.
ಒಂದೆಡೆ ಬಸವಣ್ಣನವರ ‘ಇವನಾರವ ಇವನಾರವ’ ವಚನವನ್ನು ಉಲ್ಲೇಖಿಸುತ್ತಾ, ಇತರರು ದ್ವೇಷ ಕಾರುತ್ತಿದ್ದಾರೆ ಎಂದು ಆರೋಪಿಸುವ ಶಿರಹಟ್ಟಿಮಠ ಅವರು, ತಾವೇ ಸ್ವತಃ ಕಲಬುರ್ಗಿ ಮತ್ತು ಜೆ.ಎಸ್.ಪಾಟೀಲರಂತಹ ವಿದ್ವಾಂಸರ ಮೇಲೆ ಕಟುವಾದ ವೈಯಕ್ತಿಕ ದಾಳಿ ಮಾಡಿದ್ದಾರೆ. ಇದು ಅವರ ಬರಹದಲ್ಲಿನ ದ್ವಂದ್ವವನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.
ಲೇಖನದಲ್ಲಿ ಜಿ.ಎಸ್.ಪಾಟೀಲ್ ಹಾಗೂ ಇತರ ವಿದ್ವಾಂಸರ ಪುಸ್ತಕಗಳು ಮತ್ತು ವಚನಗಳ ಪರಿಷ್ಕರಣೆಯ ಪ್ರಯತ್ನಗಳನ್ನು ವಿಕೃತ ತಂತ್ರಜ್ಞಾನದ ಕಾಲದ ವಿಕೃತಿ ಎಂದು ಕರೆಯಲಾಗಿದೆ. ಇತಿಹಾಸ ಮತ್ತು ಸಾಹಿತ್ಯ ಸಂಶೋಧನೆಯಲ್ಲಿ ‘ಪ್ರಕ್ಷಿಪ್ತ’ (ನಂತರ ಸೇರಿಸಲಾದ) ಅಂಶಗಳನ್ನು ಗುರುತಿಸುವುದು ಒಂದು ವೈಜ್ಞಾನಿಕ ಪ್ರಕ್ರಿಯೆ.
ವಚನ ಸಾಹಿತ್ಯವು ಮೌಖಿಕ ಪರಂಪರೆಯಿಂದ ಲಿಖಿತ ರೂಪಕ್ಕೆ ಬರುವಾಗ ಹಲವು ಮಾರ್ಪಾಡು ಗಳನ್ನು ಕಂಡಿದೆ ಎಂಬುದು ಹಿರಿಯ ಸಂಶೋಧಕ ರೆಲ್ಲರೂ ಒಪ್ಪುವ ಸತ್ಯ ಎಂದಿದ್ದಾರೆ. ಧರ್ಮಭಂಜಕ ಎಂ.ಎಂ.ಕಲಬುರ್ಗಿಯವರ ಸಂಶೋಧನೆಗಳು ಅವರ ಪುಸ್ತಕಗಳಲ್ಲಿಯೇ ಪುಟದಿಂದ ಪುಟಕ್ಕೆ ರದ್ದಾಗುವುದನ್ನು, ಜಾಮದಾರರ ತಪ್ಪುಗಳನ್ನು, ಜೆ.ಎಸ್.ಪಾಟೀಲರ ಸುಳ್ಳಿನ ಸರಮಾಲೆ ಯನ್ನು ಸಾಕ್ಷಿ ಸಮೇತ ಈ ಹಿಂದೆಯೇ ಬಸವ ಮಂಟಪದಲ್ಲಿ ತೋರಿಸಲಾಗಿದೆ. ಹಾಗಾಗಿ ಬಸವಣ್ಣ ನನ್ನು ಕೇವಲ ಗುರಾಣಿ ಮಾಡಿಕೊಂಡ ಲಿಂಗಾಹತ ಧರ್ಮಭಂಜಕರು ಖಂಡಿತವಾಗಿ ಇವನಾರವ ನೆಂಬ ಪ್ರಶ್ನೆಗೆ ಹೇಳಿಮಾಡಿಸಿದ ವ್ಯಕ್ತಿಗಳು.
ಪ್ರಕ್ಷಿಪ್ತಗಳನ್ನು ಸೋಸಿ ಎಂ.ಎಂ. ಕಲಬುರ್ಗಿಯವರು ಬಿಡುಗಡೆ ಮಾಡಿರುವ ವಚನಗಳಲ್ಲಿ ವೀರಶೈವ ಪದ ವಿಜೃಂಭಿಸಿ ಲಿಂಗಾಯತ ಪದ ನಾಮಕಾವಸ್ಥೆಯಾಗಿ ಅತ್ಯಂತ ವಿರಳವಾಗಿದೆ. ಶಿರಹಟ್ಟಿಮಠರು ಪ್ರಕ್ಷೇಪವನ್ನು ಸೋಸುವುದು ಎಂದರೆ ಏನೆಂದುಕೊಂಡಿದ್ದಾರೆ ಎಂಬುದೇ ಸೋಜಿಗ. ಏಕೆಂದರೆ ಈವರೆಗಿನ ಹನ್ನೆರಡನೇ ಶತಮಾನದ ಒಂದೇ ಒಂದು ತಾಳೆಗರಿ ಪತ್ತೆಯಾಗಿಲ್ಲ. ಈವರೆಗೆ ಸಿಕ್ಕಿರುವ ಎಲ್ಲ ತಾಡೋಲೆಗಳೂ ಹದಿನೈದನೇ ಶತಮಾನದ ಕೊನೆಯವು. ನಂತರದ ದಿನಗಳಲ್ಲಿ ಸೇರಿಸಲಾದ ಸುಳ್ಳುಗಳು ಎಂದು ಘೋಷಿಸಿ ತಿದ್ದಲು ಇವರು ಹೇಳುವ ಸಂಶೋಧಕ ಪಂಡಿತರು ಖುದ್ದು ಹಿಂದಿನ ಜನ್ಮಗಳಲ್ಲಿ ವಚನಗಳನ್ನು ರಚಿಸಿದ ಶರಣರಾಗಿ ಜೀವಿಸಿದ್ದರೆ ಎಂಬುದು ಐತಿಹಾಸಿಕ ಸಾರ್ವತ್ರಿಕ ಸತ್ಯದ ಮುಖಾಮುಖಿ.
ಎಲ. ಬಸವರಾಜುರವರು ತಮ್ಮ ‘ಅಲ್ಲಮನ ವಚನ ಚಂದ್ರಿಕೆ’ ಪೀಠಿಕೆಯಲ್ಲಿ (ಪುಟ ೨೯, ೩೦) ವಚನಗಳಲ್ಲಿ ಯಾವುದನ್ನು ತಾರ್ಕಿಕವಾಗಿ ಪ್ರಕ್ಷಿಪ್ತವೆಂದು ಗುರುತಿಸಬೇಕು ಎಂಬ ಸ್ಪಷ್ಟತೆಯನ್ನು ಸ್ಥಿತಪ್ರಜ್ಞರಾಗಿ ಕಟ್ಟಿಕೊಡುತ್ತಾರೆ. ಈ ಪ್ರಕಾರವಾಗಿ ಅಥವಾ ಸಂಶೋಧನಾತ್ಮಕ ನೆಲೆಯ ಯಾವುದೇ ತಾರ್ಕಿಕ ಪ್ರಕಾರವಾಗಿಯಾಗಲಿ ವಿಭಜಕರು ತುರುಕುವಿಕೆಯನ್ನು ಪ್ರಸ್ತುತಪಡಿಸಿದರೆ ಒಪ್ಪಬಹುದು.
ಆದರೆ ಅಂತಹ ಯಾವುದೇ ತಾರ್ಕಿಕ ನೆಲೆಯ ವಾದ ಇವರಲ್ಲಿಲ್ಲ. ಕೇವಲ ವೀರಶೈವ ಪದ ತೆಗೆದು ಲಿಂಗಾಯತ ಮಾಡಬೇಕು. ಸಂಸ್ಕೃತ ಪದಗಳನ್ನು ಕನ್ನಡೀಕರಿಸಬೇಕು ಎಂಬ ತಮ್ಮ ಪ್ರಕ್ಷಿಪ್ತ ಅಜೆಂಡಾವನ್ನು ತುರುಕುತ್ತಾರೆಯೇ ಹೊರತು ಇನ್ಯಾವ ತರ್ಕವೂ ಅವರಲ್ಲಿಲ್ಲ ಎಂಬುದು ಐತಿಹಾಸಿಕ ಸಾರ್ವತ್ರಿಕ ಸತ್ಯದ ಮುಖಾಮುಖಿ.
ಹೀಗಿದ್ದೂ ಶಿರಹಟ್ಟಿಮಠರು ಕಲಬುರ್ಗಿಯವರನ್ನು ಶತಮಾನದ ಸಂಶೋಧಕ ಎಂದೇ ಪರಿಭಾವಿ ಸುತ್ತಾರೆ. ಅದಕ್ಕೂ ಮಿಗಿಲಾಗಿ ಒಂದೇ ಒಂದು ಐತಿಹಾಸಿಕ ಸಾಕ್ಷಿ ಪುರಾವೆಗಳಿಲ್ಲದೆ ಪುಂಖಾನು ಪುಂಖ ಕತೆಗಳನ್ನು ಹೆಣೆಯುವ ಜೆ.ಎಸ್. ಪಾಟೀಲ, ಜಾಮದಾರ ಇವರನ್ನು ಅದ್ಯಾವ ಐತಿಹಾಸಿಕ ನೆಲೆಯಲ್ಲಿ ಶಿರಹಟ್ಟಿಮಠರು ಸಂಶೋಧಕರು ಎನ್ನುತ್ತಾರೋ ಬಸವಣ್ಣನೇ ಬಲ್ಲ!
ಶ್ರೀಯುತ ಶಿರಹಟ್ಟಿಮಠರೇ, ನಿಮ್ಮ ಲೇಖನದಲ್ಲಿ, ವಚನ ಸಾಹಿತ್ಯ ಮತ್ತು ಐತಿಹಾಸಿಕ ಸತ್ಯಗಳ ಆಧಾರದ ಮೇಲೆ ಮುಖಾಮುಖಿಯಾಗಬೇಕಿದೆ ಎಂಬ ನಿಶ್ಶೂನ್ಯ ಮುಖ ಎಲ್ಲಿದೆ ಎಂದು ಹುಡುಕುತ್ತಿದ್ದೇನೆ. ನೀವು ದಯಮಾಡಿ ಮೊದಲು ಜೆ.ಎಸ್.ಪಾಟೀಲ್, ಜಾಮದಾರರ ಲೇಖನ ಗಳನ್ನು, ಭಾಷಣಗಳನ್ನು ನಿಮ್ಮ ಆತ್ಮಲಿಂಗಕ್ಕನುಸಾರವಾಗಿ ಓದಿ ಆತ್ಮಸಾಕ್ಷಿಗನುಗುಣವಾಗಿ ಚಿಂತಿಸಿ ಬಸವ ಸಾಕ್ಷಾತ್ಕಾರ ಪಡೆಯಿರಿ ಎಂದು ಹಾರೈಸುವೆ.
ಅಲ್ಲಿಯವರೆಗೆ ನೀವು ಬಸವಣ್ಣ, ಶರಣ, ವಚನಗಳನ್ನು ಬಳಸಲು ಅನರ್ಹರು. ಸಮಗ್ರವಾಗಿ ಈ ಮೂರೂ ಅಭಿಪ್ರಾಯಗಳಲ್ಲಿನ ಸಮನಾಂಶ ಎಂದರೆ ಸ್ಥಿತಪ್ರಜ್ಞತೆ ಇರದ ಭಾವನಾತ್ಮಕ ಮನಸ್ಸು! ಸನ್ಯಾಸಿಯಾದರೂ ರಾಗದ್ವೇಷಗಳನ್ನು ಮೀರದ ಹಂದಿಗುಂದ ಶ್ರೀಗಳ ಅರಿವಿನ ವ್ಯತಿರಿಕ್ತತಾ ಅಸ್ವಸ್ಥತೆಯ ಮನಸ್ಸು, ತಪ್ಪುಗಳನ್ನು ಮನ್ನಿಸಿಯೂ ಒಗ್ಗೂಡಿಸಿ ಅಖಂಡತೆಯನ್ನು ಕಾಪಾಡ ಬೇಕೆಂಬ ಚೌಕಿಮಠರ ಸಾಮಾಜಿಕ ಕಳಕಳಿಯ ಸೌಮ್ಯ ಮನಸ್ಸು, ಮತ್ತು ಐತಿಹಾಸಿಕ ಸಾಕ್ಷಿ ಏನೇ ಇದ್ದರೂ ಕುರುಡಾಗಿ ಅಮೇಧ್ಯಕ್ಕೆ ಸುಗಂಧ ದ್ರವ್ಯ ಹಾಕಿ ಪ್ರಸಾದದ ರೂಪ ಕೊಡಬೇಕೆಂಬ ಶಿರಹಟ್ಟಿಮಠರ ಸೈದ್ಧಾಂತಿಕ ಗುಲಾಮಿಕೆಯ ಮನಸ್ಸು.
ಇದರಲ್ಲಿ ಸಾಮಾಜಿಕ ತುಡಿತದ ಅಖಂಡತೆಯ ಮನಸ್ಸನ್ನು ಹೊರತು ಪಡಿಸಿದರೆ ಉಳಿದೆರಡೂ ಅರಿವಿನ ವ್ಯತಿರಿಕ್ತತಾ ಅಸ್ವಸ್ಥತೆಯ ಎರಡು ಭಿನ್ನ ಸ್ವರೂಪಗಳು. ಸನ್ಯಾಸಿ ಸ್ವಾಮಿಗಳು ರಾಗ ದ್ವೇಷಗಳನ್ನು ಗೆಲ್ಲದೆ ದೈವವು ಹಂದಿಗುಂದ ಎಂದು ನಿಶ್ಚಯಿಸಿದ ಅವರ ಗಮ್ಯಕ್ಕೆ ತಕ್ಕಂತೆ ಅಸಭ್ಯ ಮಲಿನ ಸೂತ್ರವನ್ನು ಅಳವಡಿಸಿಕೊಂಡರೆ, ಸಂಸಾರಿಗರು ದೈವವು ವಿನಯ ಎಂದು ನಿಶ್ಚಯಿಸಿದ ಅವರ ಗಮ್ಯಕ್ಕೆ ತಕ್ಕಂತೆ ಸಂಭಾವಿತರಾಗಿ ಅಮೇಧ್ಯಕ್ಕೂ ಕುಲೀನಸೂತ್ರವನ್ನು ಹಾಕಿಕೊಂಡಿದ್ದಾ ರಷ್ಟೇ. ಇಂತಹ ಅರಿವಿನ ವ್ಯತಿರಿಕ್ತತಾ ಅಸ್ವಸ್ಥತೆಯು ಇಡೀ ಲಿಂಗಾಹತ ಧರ್ಮ ಭಂಜಕರ ಮನಃಸ್ಥಿತಿ ಸ್ವರೂಪವಾಗಿದೆ ಎಂಬುದು ದುರಿತ ಶತಮಾನದ ದುರಂತ!
ಇದೂ ಸಹ ದೈವ ನಿಶ್ಚಿತ ದೇವವಾಣಿಯು ವಿಶ್ವವಾಣಿಯಾಗಿ ಪ್ರತಿಧ್ವನಿಸುತ್ತಿದೆ!
ಮನವಂ ಹೊಯ್ದಾಡದಂತೆ ಸ್ಥಿರೀಕರಿಸಿ ನೋಟಮಂ ಲಿಂಗದಲ್ಲಿ ದೃಢೀಕರಿಸಿ
ಲಿಂಗಾನಂದಮಂ ಪಡೆವ ಮಾರ್ಗವಂ ಶಿವಯೋಗಂ!
ಮನವಂ ನಿಯಂತ್ರಿಸದೇ ಬರಿದೆ ಬಸವ, ಲಿಂಗ, ಶರಣ, ವಚನವೆಂದಡೆ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವತ್ತತ್ತ ನಿಮ್ಮ ಶ್ರೀಚರಣ, ಬ್ರಹ್ಮಾಂಡದಿಂದವತ್ತತ್ತ
ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವನೆತ್ತ ಅರಿಯಬಲ್ಲರುಂ?
ಇಂತಿಪ್ಪ ಇವಂಗಳೆಲ್ಲರುಂ ಕರಸ್ಥಲಕ್ಕೆ ಬಂದಿಪ ಲಿಂಗಮಂ
ಚುಳುಕಿಸಿಕೊಳ್ಳುವರುಂ ಹಗೆದಿಬ್ಬೇಶ್ವರಂ!