ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Leena Joshi Kamath Column: ಯಾದವರ ಕಲಹ: ಯುಗಯುಗಾಂತರಗಳ ಶಾಪದ ಕಥನ

ಮಹಾಭಾರತದ ಕಾಲದಲ್ಲಿ ನಡೆದ ಯಾದವರ ಕಲಹದ ಕಥೆ ನಮಗೆ ಗೊತ್ತಿದೆ. ಕೃಷ್ಣ ಪರಮಾತ್ಮನ ಕುಟುಂಬ, ಬೃಹತ್ ಸಾಮ್ರಾಜ್ಯ, ಉನ್ನತ ಯಾದವ ಕುಲ- ಇವೆಲ್ಲವೂ ಅವರವರ ನಡೆದ ಆಂತರಿಕ ಕಲಹದಿಂದಾಗಿ ನಾಶವಾದದ್ದು ಇತಿಹಾಸ. ಆದರೆ ಆ ಘಟನೆ ಕೇವಲ ಪುರಾತನ ಇತಿಹಾಸದ ಕಥೆಯಾಗಿಯೇ ಉಳಿದಿಲ್ಲ ಎನ್ನುವುದು ಇಂದಿನ ರಾಜಕೀಯವನ್ನು ಗಮನಿಸಿದರೆ ತಿಳಿಯುತ್ತದೆ.

ಕದನ ಕುತೂಹಲ

ಲೀನಾ ಜೋಶಿ ಕಾಮತ

ಯಾದವರ ಕಲಹದ ಮೂಲವು ಮಹಾಭಾರತದ ಕಾಲದಿಂದಲೂ ಪ್ರಸಿದ್ಧವಾಗಿದೆ. ಶ್ರೀಕೃಷ್ಣನ ನೇತೃತ್ವದಲ್ಲಿ ದ್ವಾರಕೆ ಶೌರ್ಯ ಮತ್ತು ಸಂಪತ್ತಿನ ಶಿಖರವನ್ನು ಏರಿ, ಜಗದ್ವಿಖ್ಯಾತವಾಗಿತ್ತು. ಆದರೆ ದೈವಿಕ ಶಾಪವಿರಬಹುದು ಅಥವಾ ಕರ್ಮದ ಫಲ ವಿರಬಹುದು, ಕಾಲಕ್ರಮೇಣ ಯಾದವರಲ್ಲಿ ಅಹಂಕಾರ, ದುರಾಸೆ ಮತ್ತು ಮದ್ಯ ಪಾನದ ಚಟಗಳು ಹೆಚ್ಚಾಗತೊಡಗಿದವು.

ಇತಿಹಾಸವನ್ನು ಓದುವಾಗ ಅಥವಾ ಪುರಾಣ ಕಥೆಗಳನ್ನು ಕೇಳುವಾಗ, ಅವು ಕೇವಲ ಗತಕಾಲದ ಘಟನೆಗಳೆಂದು ನಾವೆ ಭಾವಿಸುತ್ತೇವೆ. ಆದರೆ ಕೆಲವೊಂದು ಘಟನೆಗಳು, ಸಂದರ್ಭಗಳು ಕಾಲಾತೀತವಾಗಿ, ಆಧುನಿಕ ಯುಗದಲ್ಲೂ ವಿಭಿನ್ನ ರೂಪದಲ್ಲಿ ಪುನರಾ ವರ್ತನೆಯಾಗುತ್ತವೆ ಎಂಬುದಕ್ಕೆ ನಮ್ಮ ಕಣ್ಣೆದುರೇ ಸಾಕಷ್ಟು ಉದಾಹರಣೆಗಳಿವೆ.

ಮಹಾಭಾರತದ ಕಾಲದಲ್ಲಿ ನಡೆದ ಯಾದವರ ಕಲಹದ ಕಥೆ ನಮಗೆ ಗೊತ್ತಿದೆ. ಕೃಷ್ಣ ಪರಮಾತ್ಮನ ಕುಟುಂಬ, ಬೃಹತ್ ಸಾಮ್ರಾಜ್ಯ, ಉನ್ನತ ಯಾದವ ಕುಲ- ಇವೆಲ್ಲವೂ ಅವರವರ ನಡೆದ ಆಂತರಿಕ ಕಲಹದಿಂದಾಗಿ ನಾಶವಾದದ್ದು ಇತಿಹಾಸ. ಆದರೆ ಆ ಘಟನೆ ಕೇವಲ ಪುರಾತನ ಇತಿಹಾಸದ ಕಥೆಯಾಗಿಯೇ ಉಳಿದಿಲ್ಲ ಎನ್ನುವುದು ಇಂದಿನ ರಾಜಕೀಯವನ್ನು ಗಮನಿಸಿದರೆ ತಿಳಿಯುತ್ತದೆ.

ಉತ್ತರ ಭಾರತದಲ್ಲಿ ಚಾಲ್ತಿಯಲ್ಲಿರುವ ಒಂದು ಗಾದೆ ಇತಿಹಾಸದ ಈ ವಿಚಿತ್ರ ಸಾರ್ವಕಾಲಿಕ ವಿರೋಧಾಭಾಸವನ್ನು ಸ್ಪಷ್ಟವಾಗಿ ಸಾರುತ್ತದೆ: ‘ಯಾದವರ ಅಂತ್ಯವನ್ನು ಬೇರೆ ಯಾರೂ ಮಾಡಲಾರರು; ಅವರು ಹೊಡೆದಾಡಿ, ಕಚ್ಚಾಡಿ ತಾವಾಗಿಯೇ ಸಾಯುತ್ತಾರೆ’. ಈ ಮಾತು ಕೇವಲ ಹಿರಿಯರ ನುಡಿಯಾಗಿ ಉಳಿದಿಲ್ಲ, ಬದಲಿಗೆ ಪ್ರಬಲ ಸಮುದಾಯವೊಂದು ತನ್ನ ಆಂತರಿಕ ಸಂಘರ್ಷಗಳಿಂದಲೇ ತನ್ನ ಪತನಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಎತ್ತಿ ತೋರಿಸುವ ಗಂಭೀರ ಐತಿಹಾಸಿಕ ವಿಶ್ಲೇಷಣೆಯಾಗಿದೆ.

ಇದನ್ನೂ ಓದಿ: Leena Kamath Joshi Column: ವಿದ್ಯೆ ಮತ್ತು ವಿಕೃತಿ: ಉಗ್ರವಾದದ ಹೊಸ ಮುಖ

ಯಾದವರ ಕಲಹವು, ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಿರುವ ಶಾಪವೇನೋ ಎಂಬಂತೆ, ಅವರ ಶಕ್ತಿ ಮತ್ತು ಒಗ್ಗಟ್ಟಿನ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ವೈಭವದ ನಂತರದ ದ್ವಾರಕೆಯ ವಿನಾಶ ಯಾದವರ ಕಲಹದ ಮೂಲವು ಮಹಾಭಾರತದ ಕಾಲ ದಿಂದಲೂ ಪ್ರಸಿದ್ಧವಾಗಿದೆ.

ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಿದ ಶ್ರೀಕೃಷ್ಣನ ನೇತೃತ್ವದಲ್ಲಿ ದ್ವಾರಕೆ ಸಮೃದ್ಧಿ, ಶೌರ್ಯ ಮತ್ತು ಸಂಪತ್ತಿನ ಶಿಖರವನ್ನು ಏರಿ, ಜಗದ್ವಿಖ್ಯಾತವಾಗಿತ್ತು. ಆದರೆ ದೈವಿಕ ಶಾಪವಿರ ಬಹುದು (ಗಾಂಧಾರಿಯ ಶಾಪ ಅಥವಾ ಮುನಿಗಳ ಶಾಪ), ಅಥವಾ ಕರ್ಮದ ಫಲವಿರ ಬಹುದು, ಕಾಲಕ್ರಮೇಣ ಯಾದವರಲ್ಲಿ ಅಹಂಕಾರ, ದುರಾಸೆ ಮತ್ತು ಮದ್ಯಪಾನದ ಚಟಗಳು ಹೆಚ್ಚಾಗತೊಡಗಿದವು. ಐಶ್ವರ್ಯ ಮತ್ತು ಅತಿಶಯ ಶಕ್ತಿಯು ಅವರಿಗೆ ತಮ್ಮ ಮೂಲ ಮೌಲ್ಯಗಳನ್ನು ಮರೆಸುವಂತೆ ಮಾಡಿದ್ದವು.

ಪ್ರಭಾಸ ಕ್ಷೇತ್ರದ ಬಳಿ ಯಾದವ ಯುವಕರು ಸೇರಿದ್ದಾಗ, ಮದ್ಯದ ಅಮಲಿನಲ್ಲಿ ಪರಸ್ಪರ ರಲ್ಲಿ ವಾಗ್ವಾದ ಮತ್ತು ಜಗಳ ಪ್ರಾರಂಭವಾಯಿತು. ಈ ಸಣ್ಣ ವಾಗ್ವಾದವು ಕ್ರಮೇಣ ವಿಕೋಪಕ್ಕೆ ತಿರುಗಿ, ಅನಿಯಂತ್ರಿತವಾದ ದೊಡ್ಡ ಯುದ್ಧವಾಗಿ ಮಾರ್ಪಟ್ಟಿತು. ಆ ಕ್ಷಣ ದಲ್ಲಿ ಅವರಿಗೆ ಶತ್ರುಗಳು ಹೊರಗಿನವರಾಗಿರಲಿಲ್ಲ; ಅವರವರೇ ಮಾರಕ ಶಸ್ತ್ರಗಳನ್ನು ಕೈಗೆತ್ತಿಕೊಂಡು ಒಬ್ಬರನ್ನೊಬ್ಬರು ಹತ್ಯೆಗೈದರು.

ತಮ್ಮೆಲ್ಲ ಶೌರ್ಯವನ್ನು ಹೊರಗಿನ ಶತ್ರುಗಳ ವಿರುದ್ಧ ಬಳಸಬೇಕಿದ್ದ ಅವರು, ತಮ್ಮ ಆಂತರಿಕ ಶಕ್ತಿಯನ್ನೇ ಪರಸ್ಪರ ನಾಶಮಾಡಲು ಉಪಯೋಗಿಸಿದರು. ಶ್ರೀಕೃಷ್ಣನು ತನ್ನ ಪ್ರೀತಿಯ ಕುಲದ ಜನರು ಕಣ್ಣೆದುರೇ ಪರಸ್ಪರ ಕಾದಾಡಿ, ನಾಶವಾಗುವುದನ್ನು ಅಸಹಾಯಕನಾಗಿ ನೋಡಬೇಕಾಯಿತು.

Screenshot_9 ಋ

ಅಹಂಕಾರ ಮತ್ತು ಮದ್ಯದ ಅಮಲಿನಲ್ಲಿ ಕುರುಡರಾಗಿದ್ದ ಜನರು ಆತನ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಶ್ರೀಕೃಷ್ಣನ ಮಗ ಸಾಂಬನನ್ನು ಒಳಗೊಂಡಂತೆ ಇಡೀ ಯಾದವ ಕುಲವೇ ಸಾಮೂಹಿಕವಾಗಿ ನಾಶವಾಯಿತು. ಈ ದುರಂತವು ಕೃಷ್ಣನ ಜೀವನದ ಅತಿ ದೊಡ್ಡ ಮತ್ತು ಅಂತಿಮ ವಿರಹವಾಗಿತ್ತು. ಯಾದವರ ಈ ವಿಽಯ ಅಂತ್ಯವನ್ನು ಬೇರೆ ಯಾವುದೇ ಶಕ್ತಿ ನಿರ್ಧರಿಸಲಿಲ್ಲ; ಅವರೇ ತಮ್ಮ ಕಲಹದಿಂದ ತಮ್ಮನ್ನು ಪತನಗೊಳಿಸಿ ಕೊಂಡರು.

ರಾಜಕೀಯ ರಂಗದಲ್ಲಿ ಕಲಹದ ಪುನರಾವರ್ತನೆ ಮಹಾಭಾರತದ ಕಾಲದ ಘಟನೆ ಕೇವಲ ಪುರಾತನ ಇತಿಹಾಸದ ಕಥೆಯಾಗಿಯೇ ಉಳಿದಿಲ್ಲ. ಆ ಇತಿಹಾಸದ ಮರುಕಳಿಕೆ ಈ ಕಲಿಯುಗದಲ್ಲೂ ಕಾಣಿಸುತ್ತಿದೆ. ಕಲಿಯುಗದಲ್ಲಿ ಈ ‘ಯಾದವರ ಕಲಹ’ ವಿಭಿನ್ನ, ಆದರೆ ಅಷ್ಟೇ ವಿನಾಶಕಾರಿಯಾಗಿ ಪುನರಾವರ್ತಿತವಾಗುತ್ತಿದೆ.

ರಾಜಕೀಯ ರಂಗದಲ್ಲಿ, ಯಾದವ ಸಮುದಾಯದ ನಾಯಕರು ಕಟ್ಟಿದ ರಾಜಕೀಯ ಪಕ್ಷಗಳು, ಹೊರಗಿನ ವಿರೋಧದಿಂದಲ್ಲದೆ, ತಮ್ಮದೇ ಆಂತರಿಕ ಸಂಘರ್ಷಗಳಿಂದ ಕುಸಿದು ಬೀಳುತ್ತಿರುವುದನ್ನು ನಾವು ಪದೇ ಪದೆ ನೋಡುತ್ತಿದ್ದೇವೆ. ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದಾಗಲೂ, ನಾಯಕರು ತಮ್ಮ ಕುಟುಂಬದ ಸದಸ್ಯರ ಅಥವಾ ಹತ್ತಿರದ ಸಂಬಂಽಕರ ನಡುವಿನ ಅಧಿಕಾರದ ಹಪಾಹಪಿ ಮತ್ತು ಅಹಂಕಾರದ ಘರ್ಷಣೆಗಳನ್ನು ನಿಗ್ರಹಿಸಲು ವಿಫಲರಾಗುತ್ತಾರೆ.

ಸಹೋದರರು, ಪುತ್ರರು, ಪುತ್ರಿಯರು ಮತ್ತು ಸೋದರಳಿಯರ ನಡುವಿನ ಒಳಜಗಳಗಳು, ಮಹಾಭಾರತದ ಕಾಲದ ಯಾದವರಂತೆ, ಇಂದು ರಾಜಕೀಯ ಪಕ್ಷಗಳನ್ನು ಇಬ್ಭಾಗ ಮಾಡುತ್ತಿವೆ. ಒಬ್ಬರ ಮೇಲೊಬ್ಬರು ನಡೆಸುವ ಟೀಕೆ, ಮುಕ್ತ ವೇದಿಕೆಯ ಅಧಿಕಾರಕ್ಕಾಗಿ ನಡೆಸುವ ಪೈಪೋಟಿ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಯ ಅತಿರೇಕ ಇವು ಇಂಥ ಪಕ್ಷಗಳ ಸಾಮೂಹಿಕ ಶಕ್ತಿಯನ್ನು ಕ್ಷೀಣಿಸುವಂತೆ ಮಾಡುತ್ತಿವೆ.

ಈ ಆಂತರಿಕ ಸಂಘರ್ಷಗಳು, ಶತ್ರುಗಳಿಗೆ ಸುಲಭವಾಗಿ ಲಾಭ ಪಡೆಯಲು ಅವಕಾಶ ನೀಡುತ್ತವೆ. ಹೊರಗಿನ ಪ್ರತಿಸ್ಪರ್ಧಿಗಳು ಆಕ್ರಮಿಸುವ ಅಗತ್ಯವಿಲ್ಲ; ಯಾದವ ನಾಯಕರೇ ತಮ್ಮೊಳಗೆ ಕಾದಾಡಿ, ತಮ್ಮ ರಾಜಕೀಯ ಶಕ್ತಿಯನ್ನು ನಾಶಮಾಡಿಕೊಳ್ಳುತ್ತಾರೆ. ಇದು ಕೇವಲ ರಾಜಕೀಯ ವೈಫಲ್ಯವಲ್ಲ, ಬದಲಿಗೆ ಇತಿಹಾಸದ ದುರಂತ ಪಾಠವನ್ನು ಕಲಿಯಲು ವಿಫಲರಾದ ಒಂದು ಸಮುದಾಯದ ಪುನರಾವರ್ತಿತ ಶಾಪವಾಗಿದೆ.

ಇದು ನಿಜಕ್ಕೂ ಆಶ್ಚರ್ಯಕರ ಮತ್ತು ದುರದೃಷ್ಟಕರ. ಇದಕ್ಕೆ ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಕರುಣಾಜನಕ ಸ್ಥಿತಿ. ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಜೀವನದುದ್ದಕ್ಕೂ ಹಗಲಿರುಳೂ ಶ್ರಮಿಸಿ, ಸಮಾಜವಾದಿ ಪಕ್ಷವನ್ನು ಕಟ್ಟಿದರು. ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದಲ್ಲಿ ಅದನ್ನು ಒಂದು ಪ್ರಬಲ ಶಕ್ತಿಯಾಗಿ ರೂಪಿಸಿದರು.

ಭಾರತೀಯ ರಾಜಕಾರಣದಲ್ಲಿನ ಹಿರಿಯ ಅನುಭವಿ ನಾಯಕರಾಗಿ, ಇಂದಿಗೂ ಅವರ ಹೇಳಿಕೆಗಳಿಗೆ, ದೃಷ್ಟಿಕೋನಗಳಿಗೆ ಬೆಲೆ ಇದೆ. ಆದರೆ, ಅವರು ಕಷ್ಟಪಟ್ಟು ಕಟ್ಟಿದ ಆ ದೊಡ್ಡ ಸಾಮ್ರಾಜ್ಯ, ಅವರ ಕುಟುಂಬದೊಳಗೇ ಅಧಿಕಾರಕ್ಕಾಗಿ ನಡೆದ ಕಲಹದಿಂದಾಗಿ ಮೂರು ಭಾಗಗಳಾಗಿ ಒಡೆಯಿತು. ಅವರ ಮಗ ಅಖಿಲೇಶ್ ಯಾದವ್ ಮತ್ತು ಮುಲಾಯಂ ಅವರ ಸಹೋದರ ಶಿವಪಾಲ್ ಯಾದವ್ ನಡುವೆ ತಾರಕಕ್ಕೇರಿದ ಕಲಹ, ಪಕ್ಷವನ್ನು ಸಂಪೂರ್ಣ ವಾಗಿ ದುರ್ಬಲಗೊಳಿಸಿತು.

ಅದರ ಘನತೆಯನ್ನು ಕುಗ್ಗಿಸಿತು ಮತ್ತು ಅಂತಿಮವಾಗಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವಂತೆ ಮಾಡಿತು. ತಾವು ಕಟ್ಟಿ ಬೆಳೆಸಿದ ಪಕ್ಷದ ಅವನತಿಯನ್ನು ಕಣ್ಣೆದುರೇ ನೋಡುವಂಥ ಪರಿಸ್ಥಿತಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಬಂದಿತು. ತಂದೆಯಾಗಿ, ಪಕ್ಷದ ನಾಯಕರಾಗಿ ಅವರು ಇದರಿಂದಾಗಿ ಎಷ್ಟು ಸಂಕಟಪಟ್ಟಿರಬಹುದು ಎಂದು ಊಹಿಸುವುದೂ ಕಷ್ಟ.

ಈ ಘಟನೆಯು ಯಾದವರ ಕಲಹದ ಆಧುನಿಕ ರೂಪಕ್ಕೆ ಅತ್ಯುತ್ತಮ ಉದಾಹರಣೆ ಯಾಗಿದೆ, ಅಲ್ಲವೇ? ಈಗ, ಇದೇ ಯಾದವೀ ಕಲಹದ ಸರದಿ ಬಿಹಾರದ ರಾಜಕೀಯದಲ್ಲಿ ಪ್ರಬಲವಾಗಿದ್ದ ಲಾಲೂ ಪ್ರಸಾದ್ ಯಾದವ್ ಕುಟುಂಬದ್ದು. ಅಲ್ಲಿನ ರಾಜಕೀಯದಲ್ಲಿ ಲಾಲೂ ಪ್ರಸಾದ್ ಒಂದು ಯುಗವನ್ನೇ ಸೃಷ್ಟಿಸಿದ್ದರು. ಸಾಮಾನ್ಯ ಕುಟುಂಬದಿಂದ ಬಂದು, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಅಸಂಖ್ಯಾತ ಹಿಂದುಳಿದ ವರ್ಗಗಳ ಧ್ವನಿ ಯಾಗಿ ಹೊರ ಹೊಮ್ಮಿದ ಲಾಲೂ, ತಮ್ಮದೇ ಆದ ಒಂದು ರಾಜಕೀಯ ಸಾಮ್ರಾಜ್ಯವನ್ನು ಕಟ್ಟಿದರು. ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷವು ಬಿಹಾರ ರಾಜಕೀಯದ ಅವಿಭಾಜ್ಯ ಅಂಗ. ಲಾಲೂ ಪ್ರಸಾದ್ ಬಿಹಾರದ ರಾಜಕೀಯದಲ್ಲಿ ಒಂದು ಪ್ರಬಲ ಶಕ್ತಿ, ‘ಕಿಂಗ್‌ಮೇಕರ್’ ಎಂದು ಹೆಸರುವಾಸಿಯಾಗಿದ್ದವರು.

ಅದೆಷ್ಟೋ ಅಡೆತಡೆಗಳು, ಕಾನೂನು ಹೋರಾಟಗಳು, ಆರೋಗ್ಯ ಸಮಸ್ಯೆಗಳ ನಡುವೆ ಯೂ ಅವರು ತಮ್ಮದೇ ಆದ ಪ್ರಬಲ ರಾಜಕೀಯ ಸಾಮ್ರಾಜ್ಯವನ್ನು ಕಟ್ಟಿದರು. ಆದರೆ, ಈಗ ಅವರ ಕಣ್ಮುಂದೆಯೇ ಆ ಸಾಮ್ರಾಜ್ಯ ಒಡೆಯುತ್ತಿದೆ. ಅವರ ಮಕ್ಕಳಾದ ತೇಜಸ್ವಿ ಯಾದವ್ ಮತ್ತು ತೇಜ್‌ಪ್ರತಾಪ್ ಯಾದವ್ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿರುವ ಪೈಪೋಟಿ ಮತ್ತು ಕಲಹಗಳು ಪಕ್ಷವನ್ನು ವಿಭಜಿಸಿವೆ.

ಈ ಕಲಹದ ನಡುವೆ, ಒಂದು ಗಮನಾರ್ಹ ಮತ್ತು ಮನಕಲಕುವ ಘಟನೆ ಬಿಹಾರ ವಿಧಾನ ಸಭಾ ಚುನಾವಣಾ ಫಲಿತಾಂಶದ ನಂತರ ನಡೆದಿದೆ. ಲಾಲೂ ಪ್ರಸಾದ್ ಅವರ ಆರೋಗ್ಯ ಹದಗೆಟ್ಟಾಗ, ಅವರನ್ನು ಸಾವಿನ ದವಡೆಯಿಂದ ಹೊರತರಲು ಅವರ ಮಗಳು ರೋಹಿಣಿ ಆಚಾರ್ಯ ತಂದೆಗೆ ಒಂದು ಕಿಡ್ನಿ ದಾನ ಮಾಡಿ ಅವರ ಜೀವವನ್ನು ಉಳಿಸಿದರು.

ತಂದೆಯ ಜೀವಕ್ಕಾಗಿ ತಮ್ಮದೇ ಒಂದು ಭಾಗವನ್ನು ತ್ಯಾಗ ಮಾಡಿದ ಮಹಾನ್ ಕಾರ್ಯ ಅದು, ನಿಜಕ್ಕೂ ಮೆಚ್ಚುವಂಥದ್ದು. ಆಕೆಯ ತ್ಯಾಗದಿಂದ ಲಾಲೂ ಪ್ರಸಾದರು ಮರುಜನ್ಮ ಪಡೆದರು. ಆದರೆ, ಆಕೆಯ ತ್ಯಾಗಕ್ಕೆ ಪ್ರತಿಯಾಗಿ ಸಿಕ್ಕ ಗೌರವವೇನು? ಎಂಬ ಪ್ರಶ್ನೆ ಈಗ ಮೂಡುತ್ತಿದೆ.

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಪಕ್ಷದಲ್ಲಿ ಮತ್ತು ಕುಟುಂಬದಲ್ಲಿ ಆಂತರಿಕ ಕಲಹ ತೀವ್ರಗೊಂಡಿದೆ ಎಂದೆ ಸುದ್ದಿ ಹರಿದಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ಅಥವಾ ಅಧಿಕಾರಕ್ಕಾಗಿ, ರೋಹಿಣಿ ಅವರ ನಿಷ್ಠೆ ಮತ್ತು ತ್ಯಾಗವನ್ನು ಪ್ರಶ್ನಿಸಲಾಗುತ್ತಿದೆ, ಅಪಮಾನಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಕೆ ಕಣ್ಣೀರು ಸುರಿಸಿ ಮನೆ ಯಿಂದ ಹೊರನಡೆದ ಪ್ರಸಂಗ ನಡೆದಿವೆ ಎನ್ನಲಾಗಿದೆ.

ಇದು ನಿಜವೇ ಆಗಿದ್ದರೆ, ಕುಟುಂಬ ಮೌಲ್ಯಗಳ ಅವನತಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದು ಬೇಕಿಲ್ಲ. ತಮ್ಮ ಮಕ್ಕಳ ನಡುವಿನ ಇಂಥ ಕಲಹವನ್ನು, ಮಾಡಿದ ತ್ಯಾಗಕ್ಕೆ ಪ್ರಶಂಸೆಯ ಬದಲಿಗೆ ಮಗಳಿಗೆ ಸಿಗುತ್ತಿರುವ ಅವಮಾನವನ್ನು ಲಾಲೂ ಪ್ರಸಾದರು ನೋಡ ಬೇಕಾಗಿ ಬಂದಿರುವುದು ನಿಜಕ್ಕೂ ದುರಂತ.

ಕಿಡ್ನಿ ಕಸಿಗೆ ಒಳಗಾಗಿ, ಸಾವಿನಂಚಿನಿಂದ ಮರಳಿದ ಅವರು, ದೈಹಿಕವಾಗಿ ಗುಣಮುಖ ರಾಗಿದ್ದರೂ, ತಮ್ಮ ಮಕ್ಕಳ ನಡುವೆ ನಡೆಯುತ್ತಿರುವ ಕಲಹವನ್ನು ನೋಡಿ ಮಾನಸಿಕ ವಾಗಿ ‘ಜೀವಂತ ಶವ’ದಂತೆ ಬದುಕುತ್ತಿzರೆ. ತಂದೆಗೆ ಜೀವದಾನ ಮಾಡಿದ ಮಗಳನ್ನೇ ಅವಮಾನಿಸಿ, ದೂರ ತಳ್ಳುತ್ತಿರುವ ಸನ್ನಿವೇಶವು ಕುಟುಂಬದ ಮೌಲ್ಯಗಳ ಕುಸಿತವನ್ನು ತೋರಿಸುತ್ತದೆ.

ಸಾಮಾನ್ಯವಾಗಿ ನಾಯಕರು ತಾವು ಕಟ್ಟಿ ಬೆಳೆಸಿದ ಸಂಸ್ಥೆಗಳು ತಮ್ಮ ಕಣ್ಣೆದುರೇ ಒಡೆಯುವುದನ್ನು ನೋಡಬೇಕಾಗಿ ಬರುತ್ತದೆ. ಆದರೆ, ಇಲ್ಲಿ ಮುಖ್ಯವಾಗಿ ಯಾದವ ಸಮುದಾಯದ ಮುಖಂಡರ ವಿಷಯದಲ್ಲಿ ಈ ಆಂತರಿಕ ಕಲಹ ಹೆಚ್ಚು ತೀವ್ರವಾಗಿ ಮತ್ತು ವಿನಾಶಕಾರಿಯಾಗಿ ಪರಿಣಮಿಸುವುದನ್ನು ನಾವು ಪದೇ ಪದೆ ಕಾಣುತ್ತಿದ್ದೇವೆ.

ಯಾಕೆ ಹೀಗಾಗುತ್ತದೆ? ಯಾದವರಲ್ಲಿನ ಒಗ್ಗಟ್ಟಿನ ಕೊರತೆ ಮತ್ತು ಆಂತರಿಕ ಕಲಹಕ್ಕೆ ಕಾರಣಗಳನ್ನು ಹುಡುಕಿದರೆ, ಹಲವಾರು ಅಂಶಗಳು ಎದ್ದು ಕಾಣುತ್ತವೆ. ಬಲವಾದ ಅಹಂಕಾರ, ಅಧಿಕಾರದ ಅತಿಯಾದ ದಾಹ, ಇತರರ ಯಶಸ್ಸನ್ನು ಸಹಿಸದಿರುವ ಮನೋ ಭಾವ, ಮತ್ತು ಕುಟುಂಬದಲ್ಲಿ ಸ್ಪಷ್ಟ ಉತ್ತರಾಧಿಕಾರಿ ನೀತಿಯ ಕೊರತೆ ಇವೆಲ್ಲವೂ ಇದಕ್ಕೆ ಕಾರಣವಾಗಿರಬಹುದು.

ಒಮ್ಮೆ ಅಧಿಕಾರದ ರುಚಿ ಕಂಡ ಬಳಿಕ, ಅದನ್ನು ಬಿಟ್ಟುಕೊಡಲು ಅಥವಾ ಹಂಚಿಕೊಳ್ಳಲು ಮನಸ್ಸಿಲ್ಲದಿರುವುದು ಈ ರೀತಿಯ ಕಲಹಗಳಿಗೆ ತಳಹದಿಯಾಗಿದೆ. ಮಹಾಭಾರತದ ಕಾಲದಿಂದಲೂ ನಡೆದುಕೊಂಡು ಬಂದ ಈ ‘ಶಾಪ’ ಕಲಿಯುಗದ ರಾಜಕೀಯದಲ್ಲಿಯೂ ಸತ್ಯವಾಗಿ ಪರಿಣಮಿಸುತ್ತಿರುವುದು ನಿಜಕ್ಕೂ ಆತಂಕಕಾರಿ. ಯಾದವರು ಶೌರ್ಯ, ಬಲ, ಬುದ್ಧಿವಂತಿಕೆಗೆ ಹೆಸರುವಾಸಿ.

ಆದರೆ ಅವರದೇ ಆಂತರಿಕ ಕಲಹಗಳು, ಪರಸ್ಪರರ ವಿರುದ್ಧದ ಸ್ಪರ್ಧೆ ಮತ್ತು ಅಧಿಕಾರದ ಮೋಹವು ಅವರ ಪ್ರಗತಿಯನ್ನೇ ಕುಂಠಿತಗೊಳಿಸುತ್ತಿವೆ. ಈ ಸನ್ನಿವೇಶಗಳು ಮುಂದು ವರಿದರೆ, ಅವರ ರಾಜಕೀಯ ಶಕ್ತಿಯು ಇನ್ನಷ್ಟು ದುರ್ಬಲವಾಗುವ ಸಾಧ್ಯತೆಯಿದೆ. ಯಾದವರ ಇತಿಹಾಸವು ಪ್ರಬಲವಾದ ಪಾಠವನ್ನು ಹೇಳುತ್ತದೆ. ಅದೆಂದರೆ- ಯಾವುದೇ ಸಮುದಾಯದ ಅತಿ ದೊಡ್ಡ ಶತ್ರು ಹೊರಗಿನಿಂದ ಬರುವುದಿಲ್ಲ; ಅದು ಆಂತರಿಕ ದ್ವೇಷ, ದುರಾಸೆ ಮತ್ತು ಅಹಂಕಾರದ ರೂಪದಲ್ಲಿ ಅವರೊಳಗೇ ಮನೆಮಾಡಿರುತ್ತದೆ.

ಶಕ್ತಿ ಮತ್ತು ಸಂಪತ್ತು ಹೆಚ್ಚಾದಾಗ, ಸ್ವಯಂ ಸಂಯಮ ಮತ್ತು ಏಕತೆ ಅತ್ಯಗತ್ಯ. ಕಲಹದ ಮಾರ್ಗವನ್ನು ತೊರೆದಾಗ ಮಾತ್ರ, ಇತಿಹಾಸದ ದುರಂತ ಮರುಕಳಿಸುವುದನ್ನು ನಿಲ್ಲಿಸ ಬಹುದು...

(ಲೇಖಕಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿ)