Leena Kamath Joshi Column: ವಿದ್ಯೆ ಮತ್ತು ವಿಕೃತಿ: ಉಗ್ರವಾದದ ಹೊಸ ಮುಖ
ವೈವಿಧ್ಯವು ನಮ್ಮ ಬಲವಾದರೂ, ದುರದೃಷ್ಟವಶಾತ್, ಕೆಲ ಶಕ್ತಿಗಳಿಗೆ ಅದು ದೌರ್ಬಲ್ಯದ ಅಂಶವಾಗಿದೆ. ಹಲವು ಪಾಶ್ಚಿಮಾತ್ಯ ಮತ್ತು ಪುಟ್ಟ ರಾಷ್ಟ್ರಗಳು ಎದುರಿಸುವ ಸಮಸ್ಯೆಗಳಿಗಿಂತ ಭಾರತೀಯರ ಸವಾಲುಗಳು ತೀರಾ ಭಿನ್ನವಾಗಿವೆ. ಬೇರೆ ದೇಶಗಳು ಕೇವಲ ಆರ್ಥಿಕ ಅಥವಾ ಭೌಗೋಳಿಕ ಸವಾಲುಗಳನ್ನು ಎದುರಿಸಿದರೆ, ನಾವು ಮೂಲಭೂತ ವಾದದ ಸವಾಲನ್ನು ಎದುರಿಸುತ್ತಿದ್ದೇವೆ.
-
ಜನಜಾಗೃತಿ
ಲೀನಾ ಕಾಮತ ಜೋಶಿ
ನಾವು ಎದುರಿಸುತ್ತಿರುವ ಸನ್ನಿವೇಶವು ಅತ್ಯಂತ ಅಪಾಯಕಾರಿಯಾಗಿದೆ. ಇದನ್ನು ಕೇವಲ ರಾಜಕೀಯ ಅಥವಾ ಸಾಮಾಜಿಕ ಬಿಕ್ಕಟ್ಟು ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ನಮ್ಮ ರಾಷ್ಟ್ರೀಯ ಅಸ್ತಿತ್ವದ ಪ್ರಶ್ನೆಯಾಗಿದೆ. ಬಾಹ್ಯವಾಗಿ, ಗಡಿಯಲ್ಲಿ ನಿಂತಿರುವ ಶತ್ರುವನ್ನು ಗುರುತಿಸುವುದು ಸುಲಭ. ಅವರನ್ನು ನೇರವಾಗಿ ಹೊಡೆದುರುಳಿಸಿ ನಮ್ಮ ಗಡಿಯನ್ನು ರಕ್ಷಿಸಿಕೊಳ್ಳಬಹುದು. ಆದರೆ, ನಮಗೆ ಈಗ ಎದುರಾಗಿರುವ ಸವಾಲು ಸಂಪೂರ್ಣವಾಗಿ ವಿಭಿನ್ನವಾಗಿದೆ.
ನಮ್ಮೊಂದಿಗೆ ಬದುಕುತ್ತಿರುವ, ನಮ್ಮಂತೆಯೇ ಕಾಣುತ್ತಿರುವ, ಕೆಲವೊಮ್ಮೆ ನಮ್ಮದೇ ಭಾಗ ವಾಗಿರುವ ಆಂತರಿಕ ಶತ್ರುಗಳನ್ನು ಹುಡುಕಿ ಗುರುತಿಸುವುದು ನಿಜಕ್ಕೂ ಕಷ್ಟದ ಕೆಲಸ. ಈ ಆಂತರಿಕ ಶತ್ರುಗಳು ಗೂಢಚಾರರು ಅಥವಾ ಸಣ್ಣ ಬಂಡುಕೋರರಲ್ಲ. ಅವರು ಒಂದು ವ್ಯವಸ್ಥೆ.
ಇದು ಮೂಲಭೂತವಾದ, ಸೈದ್ಧಾಂತಿಕ ವಿಷ ಮತ್ತು ವಿಭಜನಕಾರಿ ಮನಸ್ಸುಗಳ ರೂಪ ದಲ್ಲಿ ನಮ್ಮ ಸಮಾಜದೊಳಗೆ ಪ್ರವೇಶಿಸಿದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮಾತ್ರವಲ್ಲ, 140 ಕೋಟಿಗೂ ಹೆಚ್ಚು ಜನರನ್ನು ಹೊಂದಿರುವ ಒಂದು ವಿಶಿಷ್ಟ ನಾಗರಿಕತೆ.
ವೈವಿಧ್ಯವು ನಮ್ಮ ಬಲವಾದರೂ, ದುರದೃಷ್ಟವಶಾತ್, ಕೆಲ ಶಕ್ತಿಗಳಿಗೆ ಅದು ದೌರ್ಬಲ್ಯದ ಅಂಶವಾಗಿದೆ. ಹಲವು ಪಾಶ್ಚಿಮಾತ್ಯ ಮತ್ತು ಪುಟ್ಟ ರಾಷ್ಟ್ರಗಳು ಎದುರಿಸುವ ಸಮಸ್ಯೆ ಗಳಿಗಿಂತ ಭಾರತೀಯರ ಸವಾಲುಗಳು ತೀರಾ ಭಿನ್ನವಾಗಿವೆ. ಬೇರೆ ದೇಶಗಳು ಕೇವಲ ಆರ್ಥಿಕ ಅಥವಾ ಭೌಗೋಳಿಕ ಸವಾಲುಗಳನ್ನು ಎದುರಿಸಿದರೆ, ನಾವು ಮೂಲಭೂತ ವಾದದ ಸವಾಲನ್ನು ಎದುರಿಸುತ್ತಿದ್ದೇವೆ. ಈ ಮೂಲಭೂತವಾದವು ದೇಶದ ಪ್ರಗತಿಯನ್ನು ಸಹಿಸದೆ, ನಿರಂತರವಾಗಿ ರಾಷ್ಟ್ರದ ಹಿತಾಸಕ್ತಿಗಳ ವಿರುದ್ಧ ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ: Roopa Gururaj Column: ಕಷ್ಟ ಬಂದಾಗ ನಾವು ಏನಾಗುತ್ತೇವೆ ?
ಈ ಆಂತರಿಕ ಶತ್ರುಗಳು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ, ನಮ್ಮ ಶಿಕ್ಷಣ, ಮಾಧ್ಯಮ, ರಾಜಕೀಯ ಮತ್ತು ಸಾಮಾಜಿಕ ರಚನೆಗಳೊಳಗೆ ಬೇರೂರಿದ್ದಾರೆ. ಇವರ ಮುಖ್ಯ ಗುರಿ ದೇಶವನ್ನು ಆರ್ಥಿಕವಾಗಿ ಅಥವಾ ಮಿಲಿಟರಿಯಾಗಿ ದುರ್ಬಲ ಗೊಳಿಸುವುದಲ್ಲ; ಬದಲಿಗೆ ಮಾನಸಿಕ ಮತ್ತು ಭಾವನಾತ್ಮಕ ವಿಭಜನೆ.
ಜನರು ಪರಸ್ಪರ ನಂಬಿಕೆ ಕಳೆದುಕೊಳ್ಳುವಂತೆ ಮಾಡಿ, ನಿರಂತರ ಕಲಹದ ಸ್ಥಿತಿಯನ್ನೇ ಸೃಷ್ಟಿಸುವುದು ಇವರ ಕಾರ್ಯತಂತ್ರ. ಈ ದೇಶದ 140 ಕೋಟಿ ಜನರಿಗೂ ಬೇಕಾಗಿರುವುದು ಪ್ರಗತಿ, ಸುರಕ್ಷತೆ ಮತ್ತು ಉತ್ತಮ ಜೀವನ. ಆದರೆ, ಕೆಲವರು ಈ ಸಾಮೂಹಿಕ ಆಕಾಂಕ್ಷೆ ಯನ್ನು ಕಡೆಗಣಿಸಿ, ದ್ವೇಷದ ರಾಜಕಾರಣವನ್ನು ಮುಂದುವರಿಸುತ್ತಿದ್ದಾರೆ.
ಕೊಲ್ಲುವಿಕೆ ಮತ್ತು ನಾಶಮಾಡುವಿಕೆಯಲ್ಲಿ ಬೆಳವಣಿಗೆ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರು ಸಿದ್ಧರಿಲ್ಲ. ಒಂದು ಪ್ರಗತಿಪರ ಸಮಾಜದಲ್ಲಿ, ಒಬ್ಬ ಮನುಷ್ಯ ಇನ್ನೊಬ್ಬನನ್ನು ದ್ವೇಷಿಸುವ ಅಥವಾ ಕೊಲ್ಲುವ ಮೂಲಕ ಏನನ್ನೂ ಸಾಧಿಸಲಾಗದು.
ಇದರ ಅಂತಿಮ ಫಲಿತಾಂಶವೆಂದರೆ ಹಿನ್ನಡೆ, ಸಾಮಾಜಿಕ ಅಸ್ಥಿರತೆ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯ. ಶಿಕ್ಷಿತ ಮುಸ್ಲಿಮರು, ಅನಕ್ಷರಸ್ಥ ಮುಸ್ಲಿಮರಿಗಿಂತ ಅಪಾಯಕಾರಿ. ಈ ಮಾತು ಕೇಳಲು ಅಸಹಜ ಅನಿಸಬಹುದು, ವಿವಾದಾತ್ಮಕವೂ ಹೌದು. ಸುಮಾರು ೧೨ ವರ್ಷಗಳ ಹಿಂದೆ ನನ್ನ ಹಿರಿಯ ಅಧಿಕಾರಿಯೊಬ್ಬರು ಇದೇ ಮಾತನ್ನು ಹೇಳಿದ್ದರು. ಆಗ ನನಗೆ ಅದು ಅರ್ಥವಾಗಿರಲಿಲ್ಲ, ಅದೊಂದು ಅತಿಶಯೋಕ್ತಿ ಎಂದು ಭಾವಿಸಿದ್ದೆ.
ಶಿಕ್ಷಣವು ಜ್ಞಾನ, ವಿವೇಚನೆ ಮತ್ತು ಸಹಿಷ್ಣುತೆಯನ್ನು ತರುತ್ತದೆ ಎಂಬುದು ನನ್ನ ಬಲ ವಾದ ನಂಬಿಕೆ. ಓದಿದವರು ಎಂದಿಗೂ ಹಿಂಸಾಚಾರ ಮತ್ತು ಮೂಲಭೂತವಾದದ ಮಾರ್ಗ ವನ್ನು ಆಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಅಂದುಕೊಂಡಿದ್ದೆ ಅಂದಿನ ದಿನಗಳಲ್ಲಿ; ಹೀಗಾಗಿ ಆ ಮಾತಿನ ಗಂಭೀರತೆ ನನಗರ್ಥವಾಗಿರಲಿಲ್ಲ.
ಶಿಕ್ಷಣವು ಸಮಾಜವನ್ನು ಸುಧಾರಿಸುವ ಸಾಧನ. ಕಲಿಯುವುದರಿಂದ ಅಪಾಯ ಹೇಗೆ ಹೆಚ್ಚಾಗುತ್ತದೆ? ಎಂಬುದು ನನ್ನ ಎಣಿಕೆಯಾಗಿತ್ತು. ಆದರೆ ಇತ್ತೀಚಿನ ಘಟನೆಗಳನ್ನು, ದೆಹಲಿಯಂಥ ಪ್ರಮುಖ ನಗರಗಳಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳ ಕುರಿತಾದ ತನಿಖೆಗಳನ್ನು ಗಮನಿಸಿದಾಗ, ಆ ಹಿರಿಯ ಅಧಿಕಾರಿಯ ಮಾತಿನಲ್ಲಿದ್ದ ಕಠೋರ ಸತ್ಯವು ಅರಿವಾಗತೊಡಗಿದೆ.
ದೆಹಲಿಯಲ್ಲಿನ ಸ್ಫೋಟಗಳು ದೇಶಾದ್ಯಂತ ಆತಂಕವನ್ನು ಸೃಷ್ಟಿಸಿವೆ. ಕಡಿಮೆ ತೀವ್ರತೆಯ ಸ್ಫೋಟಗಳಾದರೂ, ಅವುಗಳ ಹಿಂದಿನ ಉದ್ದೇಶ ಮತ್ತು ಆಯೋಜನೆಯ ಜಟಿಲತೆ ಆಘಾತ ಕಾರಿ. ಈ ಕೃತ್ಯದ ಆರೋಪಿಗಳನ್ನು ಬಂಧಿಸಿದಾಗ ಹೊರಬಿದ್ದ ಸತ್ಯಗಳು ದೇಶವನ್ನು ದಂಗುಬಡಿಸಿವೆ. ಈ ಕೃತ್ಯದ ಹಿಂದೆ ಕೆಲವು ವಿದ್ಯಾವಂತ ಮತ್ತು ಉತ್ತಮ ಹಿನ್ನೆಲೆಯ ಯುವಕ-ಯುವತಿಯರ ಕೈವಾಡವಿರುವುದು ತನಿಖೆಗಳಿಂದ ಸ್ಪಷ್ಟವಾಗಿದೆ.
ಎಂಜಿನಿಯರಿಂಗ್ ಪದವೀಧರರು, ವೈದ್ಯಕೀಯ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ ಪಡೆದ ವರು ಮತ್ತು ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದ ವೃತ್ತಿಪರರೂ ಇಂಥ ಭಯೋ ತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದು ‘ಭಯೋತ್ಪಾದಕ’ರ ಕುರಿತ ನಮ್ಮ ಸಾಂಪ್ರದಾಯಿಕ ಕಲ್ಪನೆಗಳನ್ನು ಮರುಪರಿಶೀಲಿಸುವಂತೆ ಮಾಡುತ್ತದೆ.
ಹಿಂದಿನ ದಿನಗಳಲ್ಲಿನ ಭಯೋತ್ಪಾದಕ ಚಟುವಟಿಕೆಗಳು ಕೇವಲ ದೈಹಿಕ ಬಲವನ್ನು ಮತ್ತು ಕಚ್ಚಾ ಬಾಂಬ್‌ಗಳನ್ನು ಅವಲಂಬಿಸಿದ್ದವು. ಅವುಗಳ ಹಿಂದೆ ಸಿದ್ಧಾಂತ ಇರುತ್ತಿ ದ್ದರೂ, ಕಾರ್ಯಾಚರಣೆಯ ಸಂಕೀರ್ಣತೆ ಕಡಿಮೆ ಇರುತ್ತಿತ್ತು. ಆದರೆ, ಇಂದಿನ ಭಯೋ ತ್ಪಾದಕ ಜಾಲಗಳು ರಾಷ್ಟ್ರೀಯ ಭದ್ರತೆಗೆ ಕಂಡರಿಯದ ಸವಾಲುಗಳನ್ನು ಒಡ್ಡುತ್ತಿವೆ.
ದೆಹಲಿ, ಮುಂಬೈ, ಬೆಂಗಳೂರಿನಂಥ ಮಹಾನಗರಗಳಲ್ಲಿ ನಡೆಯುವ ಸ್ಫೋಟಗಳು ಮತ್ತು ದಾಳಿಗಳು ಕೇವಲ ಗೊಂದಲ ಸೃಷ್ಟಿಸಲು ನಡೆಸುವ ಕೃತ್ಯಗಳಲ್ಲ; ಅವು ಅತ್ಯಂತ ನಿಖರ ವಾದ ಯೋಜನೆ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮತ್ತು ವ್ಯವಸ್ಥಿತ ಆರ್ಥಿಕ ಬೆಂಬಲ ವನ್ನು ಹೊಂದಿರುತ್ತವೆ. ಭಯೋತ್ಪಾದನೆಯ ಸ್ವರೂಪ ಬದಲಾಗಿದೆ. ಅನಕ್ಷರಸ್ಥರು, ಬಡವರು, ಅವಕಾಶವಂಚಿತರು ಉಗ್ರವಾದದ ಬಲೆಗೆ ಸುಲಭವಾಗಿ ಬೀಳುತ್ತಾರೆ ಎಂದು ಸಾಮಾನ್ಯವಾಗಿ ನಾವು ನಂಬುತ್ತೇವೆ, ಶಿಕ್ಷಣದ ಕೊರತೆಯು ಅವರನ್ನು ತಪ್ಪು ಮಾರ್ಗಕ್ಕೆ ತಳ್ಳುತ್ತದೆ ಎಂದು ಭಾವಿಸುತ್ತೇವೆ.
ಆದರೆ, ಭಯೋತ್ಪಾದನೆಯ ಇತ್ತೀಚಿನ ಸ್ವರೂಪವನ್ನು ಗಮನಿಸಿದರೆ, ಈ ಕಲ್ಪನೆ ಸಂಪೂರ್ಣವಾಗಿ ತಪ್ಪೆಂದು ಅರಿವಾಗುತ್ತದೆ. ಉಗ್ರ ಸಂಘಟನೆಗಳು ಬಡವರು ಅಥವಾ ಅನಕ್ಷರಸ್ಥರನ್ನು ಮಾತ್ರವಲ್ಲದೆ, ಉತ್ತಮ ಶಿಕ್ಷಣ ಪಡೆದ, ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ ಹೊಂದಿರುವ ವ್ಯಕ್ತಿಗಳನ್ನೂ ತಮ್ಮ ಜಾಲಕ್ಕೆ ಸೆಳೆದುಕೊಳ್ಳುತ್ತಿವೆ.
ಆಘಾತಕಾರಿ ಸತ್ಯವಾದರೂ ಇದನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. ಇತ್ತೀಚೆಗೆ ಭಯೋತ್ಪಾದನಾ ಜಾಲಗಳಲ್ಲಿ ಸಿಕ್ಕಿಬಿದ್ದವರ ಹಿನ್ನೆಲೆಯನ್ನು ಅವಲೋಕಿಸಿದರೆ, ಅವರಲ್ಲಿ ಅನೇಕರು ಉನ್ನತ ಶಿಕ್ಷಣ (ವೈದ್ಯಕೀಯ, ಎಂಜಿನಿಯರಿಂಗ್), ಮಾಹಿತಿ ತಂತ್ರಜ್ಞಾನದ ಅರಿವು ಮತ್ತು ಬಲವಾದ ಸಂವಹನ ಕೌಶಲಗಳನ್ನು ಹೊಂದಿರುವುದು ಅರಿವಾಗುತ್ತದೆ.
ಶಿಕ್ಷಿತ ವ್ಯಕ್ತಿಗಳು ತಮ್ಮ ಬುದ್ಧಿವಂತಿಕೆ, ವಿಶ್ಲೇಷಣಾತ್ಮಕ ಕೌಶಲ ಮತ್ತು ತಾಂತ್ರಿಕ ಜ್ಞಾನ ವನ್ನು ಉಗ್ರ ಕೃತ್ಯಗಳಿಗೆ ಬಳಸಿದಾಗ, ಅದು ಹೆಚ್ಚು ಭೀಕರ ಪರಿಣಾಮಗಳನ್ನು ಉಂಟು ಮಾಡು ತ್ತದೆ. ಅವರಿಗೆ ಯೋಜನೆಗಳನ್ನು ರೂಪಿಸುವ, ಸಂಕೀರ್ಣ ಕಾರ್ಯತಂತ್ರಗಳನ್ನು ಹೆಣೆಯುವ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ತಮ್ಮ ಉದ್ದೇಶಗಳನ್ನು ಸಾಧಿಸುವ ಸಾಮರ್ಥ್ಯವಿರುತ್ತದೆ.
ಅಂತರ್ಜಾಲ, ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳು, ಹಣಕಾಸು ವ್ಯವಹಾರಗಳು, ಲಾಜಿಸ್ಟಿಕ್ಸ್ ಮತ್ತು ಗುಪ್ತಚರ ಸಂಗ್ರಹಣೆ- ಇವೆಲ್ಲವೂ ಉನ್ನತ ಮಟ್ಟದ ಶಿಕ್ಷಣ ಮತ್ತು ಕೌಶಲವನ್ನು ಬೇಡುತ್ತವೆ. ಎಂಜಿನಿಯರ್‌ಗಳು, ವೈದ್ಯರು, ಐಟಿ ತಜ್ಞರು, ವಿಶ್ವವಿದ್ಯಾಲಯದ ವಿದ್ಯಾರ್ಥಿ ಗಳು ಇವರು ಸಾಮಾನ್ಯ ಜನರಲ್ಲಿ ಸುಲಭವಾಗಿ ಬೆರೆತು ಹೋಗುತ್ತಾರೆ, ಯಾರೂ ಅನುಮಾ ನಿಸದಂತೆ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಾರೆ.
ಇವರು ಅತ್ಯಂತ ಬುದ್ಧಿವಂತಿಕೆಯಿಂದ ತಮ್ಮ ಗುರುತನ್ನು ಮರೆಮಾಚುತ್ತಾರೆ, ಕಾನೂನು ಸಂಸ್ಥೆಗಳ ಕಣ್ತಪ್ಪಿಸಿ ಕಾರ್ಯನಿರ್ವಹಿಸುತ್ತಾರೆ. ಅನಕ್ಷರಸ್ಥ ಅಥವಾ ಕಡಿಮೆ ವಿದ್ಯಾವಂತ ಉಗ್ರಗಾಮಿಗಳಿಗೆ ಇಂಥ ಸಂಕೀರ್ಣ ಜಾಲಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸಾಧ್ಯವಿಲ್ಲ.
ಇದುವೇ ಶಿಕ್ಷಿತರ ಅಪಾಯವನ್ನು ಹೆಚ್ಚಿಸುತ್ತದೆ. ಶಿಕ್ಷಿತ ವ್ಯಕ್ತಿಗಳು ಧಾರ್ಮಿಕ ಗ್ರಂಥಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿ, ಹಿಂಸೆಯನ್ನು ನ್ಯಾಯಸಮ್ಮತಗೊಳಿಸಲು ಪ್ರಯತ್ನಿಸುತ್ತಾರೆ. ತಮ್ಮ ಬುದ್ಧಿವಂತಿಕೆಯನ್ನು ಪ್ರಚಾರ ಮತ್ತು ನೇಮಕಾತಿಗಾಗಿ ಬಳಸು ತ್ತಾರೆ, ಇತರರನ್ನು ಮನವೊಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಇಂಥ ವ್ಯಕ್ತಿಗಳು ಕೇವಲ ಭಾವನಾತ್ಮಕತೆಯಿಂದ ಪ್ರೇರಿತರಾಗಿರುವುದಿಲ್ಲ, ಬದಲಿಗೆ ತಮ್ಮ ವಿರೂಪಗೊಂಡ ಸಿದ್ಧಾಂತವನ್ನು ಸರಿ ಎಂದು ನಂಬಿ, ವ್ಯವಸ್ಥಿತವಾಗಿ ಯೋಜನೆಗಳನ್ನು ಕಾರ್ಯಗತ ಗೊಳಿಸುತ್ತಾರೆ.
ಇದರ ಪರಿಣಾಮವಾಗಿ, ಅವರು ಸಮಾಜಕ್ಕೆ ಹೆಚ್ಚು ಅಪಾಯಕಾರಿ ಎಂಬುದು ಸ್ಪಷ್ಟ. ದೆಹಲಿ ಸೋಟದಂಥ ಘಟನೆಗಳ ಹಿಂದೆ ಅದೆಷ್ಟು ಯೋಜನೆ, ತಾಂತ್ರಿಕ ಜ್ಞಾನ ಮತ್ತು ಸಮನ್ವಯವಿದೆ ಎಂಬುದು ಅರಿವಾಗುತ್ತದೆ. ಕಚ್ಚಾ ಬಾಂಬ್‌ಗಳನ್ನು ಬಳಸಿ ನಡೆಸುವ ದಾಳಿಗಳಿಗಿಂತ ಇಂಥ ಸ್ಫೋಟಗಳು ಹೆಚ್ಚು ಸೂಕ್ಷ್ಮವಾದಂಥವು.
ಸುಧಾರಿತ ಸ್ಫೋಟಕಗಳ ಬಳಕೆ, ಗುಪ್ತ ಸಂವಹನ ಮಾರ್ಗಗಳು, ಜಿಪಿಎಸ್ ಟ್ರ್ಯಾಕಿಂಗ್ ಮತ್ತು ಗುರಿಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಣೆ ಇವೆಲ್ಲವನ್ನೂ ಅನಕ್ಷರಸ್ಥರು ಅಥವಾ ಕೇವಲ ಭಾವನಾತ್ಮಕವಾಗಿ ಪ್ರೇರಿತರಾದವರು ಮಾಡಲು ಸಾಧ್ಯವಿಲ್ಲ ಶಿಕ್ಷಣವು ಎಂದಿಗೂ ಅಪಾಯಕಾರಿಯಲ್ಲ. ಅಪಾಯ ಇರುವುದು ಶಿಕ್ಷಣವನ್ನು ದುರುಪಯೋಗ ಪಡಿಸಿ ಕೊಳ್ಳುವುದರಲ್ಲಿ, ಮತ್ತು ಮೂಲಭೂತವಾದಿ ವಿಚಾರಗಳನ್ನು ಆಳವಾಗಿ ಬೇರೂರಿಸುವು ದರಲ್ಲಿ.
ಈ ವಿದ್ಯಮಾನದ ಹಿಂದಿನ ಕೆಲವು ಕಾರಣಗಳನ್ನು ವಿಶ್ಲೇಷಿಸುವುದು ಅಗತ್ಯ: ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳು ಧರ್ಮವನ್ನು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತವೆ. ಅವು ಕುರಾನ್ ಮತ್ತು ಹದೀಸ್‌ಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿ, ಯುವಕರನ್ನು ಉಗ್ರಗಾಮಿ ಕೃತ್ಯಗಳಿಗೆ ಪ್ರೇರೇಪಿಸುತ್ತವೆ.
ಕೆಲವು ವಿದ್ಯಾವಂತ ಮುಸ್ಲಿಂ ಯುವಕರು ಸಮಾಜದಲ್ಲಿ ಅನ್ಯರು ಎಂಬ ಭಾವನೆಗೆ ಒಳಗಾಗಿರಬಹುದು. ರಾಜಕೀಯ, ಆರ್ಥಿಕ ಅಥವಾ ಸಾಮಾಜಿಕ ಕಾರಣಗಳಿಂದಾಗಿ ತಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ನಂಬಿಕೆ ಅವರಲ್ಲಿ ಬೆಳೆದು, ಮೂಲಭೂತ ವಾದಿ ಗುಂಪುಗಳೆಡೆಗೆ ವಾಲುವಂತೆ ಮಾಡಿರಬಹುದು.
ಅಂತರ್ಜಾಲವು ಮೂಲಭೂತವಾದಿ ಪ್ರಚಾರಗಳಿಗೆ ಪ್ರಬಲ ವೇದಿಕೆಯಾಗಿದೆ. ವಿದ್ಯಾವಂತ ಯುವಕರು ಈ ವೇದಿಕೆಗಳನ್ನು ಹೆಚ್ಚು ಬಳಸುವವರಾಗಿರುವುದರಿಂದ, ಇಂಥ ಪ್ರಚಾರ ಗಳಿಗೆ ಸುಲಭವಾಗಿ ಒಳಗಾಗುತ್ತಾರೆ ಮತ್ತು ತಮ್ಮದೇ ಆದ ’ಇಕೋ ಚೇಂಬರ್’ಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.
ಮೂಲಭೂತವಾದಿ ಸಿದ್ಧಾಂತಗಳ ವಿರುದ್ಧ ಪ್ರಬಲವಾದ ಮತ್ತು ಮನವೊಲಿಸುವ ಪ್ರತಿ ನಿರೂಪಣೆಗಳನ್ನು ರೂಪಿಸುವಲ್ಲಿನ ವೈಫಲ್ಯ. ಮುಖ್ಯವಾಹಿನಿ ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ಸರಕಾರಗಳು ಈ ವಿಷಯದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ.
ಶಿಕ್ಷಣವು ಸ್ವತಃ ಅಪಾಯಕಾರಿಯಲ್ಲ, ಆದರೆ ಅದನ್ನು ಯಾವ ಸಿದ್ಧಾಂತದಿಂದ ಪ್ರಭಾವಿತ ವಾಗಿ ಬಳಸಲಾಗುತ್ತದೆ ಎಂಬುದು ನಿರ್ಣಾಯಕ. ಈ ನೂತನ ಬೆದರಿಕೆಯನ್ನು ಅರ್ಥ ಮಾಡಿಕೊಂಡು ಅದನ್ನು ಎದುರಿಸಲು ಹೊಸ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಶಿಕ್ಷಣವು ಧನಾತ್ಮಕ ಶಕ್ತಿಯಾಗಿ ಪರಿವರ್ತಿತವಾಗಬೇಕೇ ಹೊರತು, ವಿನಾಶಕಾರಿ ಶಕ್ತಿಯಾಗಿ ಅಲ್ಲ.
ಈ ವಿದ್ಯಮಾನವು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಲ್ಲ, ಬದಲಿಗೆ ಮೂಲ ಭೂತವಾದಕ್ಕೆ ಒಳಗಾಗುವ ಯಾವುದೇ ವ್ಯಕ್ತಿಗೂ ಅನ್ವಯಿಸುತ್ತದೆ. ಹಾಗಾಗಿ, ಈ ಸಮಸ್ಯೆ ಯನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡು, ಸೂಕ್ತ ಪರಿಹಾರಗಳನ್ನು ಕಂಡು ಹಿಡಿಯು ವುದು ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿಗೆ ಅನಿವಾರ್ಯವಾಗಿದೆ.
ಕೇವಲ ಬಡತನ ಅಥವಾ ಅನಕ್ಷರತೆಯನ್ನು ದೂಷಿಸುವುದರಿಂದ ಪ್ರಯೋಜನವಿಲ್ಲ, ಬದಲಿಗೆ ಮೂಲಭೂತವಾದಿ ಸಿದ್ಧಾಂತಗಳ ಬೌದ್ಧಿಕ ಬೇರುಗಳನ್ನು ಗುರುತಿಸಿ ಕಿತ್ತೊಗೆಯ ಬೇಕಿದೆ. ಶಿಕ್ಷಣವು ಒಳ್ಳೆಯದನ್ನೇ ಮಾಡುತ್ತದೆ. ಆದರೆ, ಅದನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎನ್ನುವುದು ಅತಿ ಮುಖ್ಯ.
(ಲೇಖಕಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ)