ನ್ಯಾಯ ನೆಮ್ಮದಿ
ಡಾ.ಜಗದೀಶ್ ಮಾನೆ
ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಎಲಕೆಜಿ ಇಂದ ಹಿಡಿದು ಬಿಎ, ಬಿಎಸ್‌ಸಿ ಪದವಿಗಳ ಪರೀಕ್ಷೆಯ ವರೆಗೂ ಬಹುತೇಕ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಉತ್ತೀರ್ಣ ರಾಗುತ್ತಿದ್ದಾರೆ. ಯಾವುದೇ ವಿದ್ಯಾರ್ಥಿಗಳನ್ನು ಕೇಳಿದರೂ, ನಂದು ಶೇ.90-95 ಆಯಿತು ಸಾರ್ ಅಂತಾರೆ.
ಹೀಗಿರುವಾಗಲೂ ಅದೊಂದು ಪದವಿ ಇದೆ, ಅಲ್ಲಿ ಮಾತ್ರ ಅದೆಷ್ಟೇ ಬುದ್ಧಿವಂತರಿದ್ದರೂ ಅವರು ಯಾರು ಕೂಡಾ ಶೇ.60 ದಾಟುವುದಿಲ್ಲ. ಅದುವೇ ‘ಕಾನೂನು’ ಪದವಿ. ಇದೊಂದು ಪದವಿ ಮಾತ್ರ ಅಂದಿನಿಂದ ಈವರೆಗೂ ತನ್ನ ಘನತೆಯನ್ನ ಇನ್ನೂ ಹಾಗೇ ಉಳಿಸಿಕೊಂಡಿದೆ. ಇಲ್ಲಿ ಕೇವಲ ಶೇ.40ರಷ್ಟು ಅಂಕ ಪಡೆದು ಜ ಪಾಸ್ ಆಗುವುದೇ ಒಂದು ದೊಡ್ಡ ಸಾಧನೆ. ಈ ಪರೀಕ್ಷೆಗಳಲ್ಲಿ ಶೇ.100ಕ್ಕೆ 80ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಕಾರಣ ಈ ಪರೀಕ್ಷೆಗಳ ಮೌಲ್ಯ ಮಾಪನಗಳು ಅಷ್ಟೊಂದು ಕಠಿಣವಾಗಿ ಮತ್ತು ಅಚ್ಚುಕಟ್ಟಾಗಿ ನಡೆಯುತ್ತದೆ. ಯಾಕೆಂದರೆ ಕಾನೂನು ಶಿಕ್ಷಣದ ಸ್ವಭಾವವೇ ಹಾಗಿದೆ.
ಇದು ಕೇವಲ ನೆನಪಿನ ಆಧಾರದ ಮೇಲೆ ಅಂಕ ಪಡೆಯುವ ವಿಷಯವಲ್ಲ ಹಾಗೂ ಉತ್ತರಗಳಲ್ಲಿ ‘ಪಾಯಿಂಟ್’ ಮಾತ್ರ ಸಾಲದು. ತಾರ್ಕಿಕ ಚಿಂತನೆ, ಪ್ರಕರಣಗಳ ವಿಶ್ಲೇಷಣೆ, ಕಾನೂನು ಭಾಷೆ, ಕೇಸ್-ಲಾ ಆಧಾರಿತ ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಬೇಕು.
ಜತೆಗೆ ಬರವಣಿಗೆಯಲ್ಲಿ ಲಾಜಿಕ್ ಮತ್ತು ಸ್ಟ್ರಕ್ಚರ್ ಇರಬೇಕಾಗುತ್ತದೆ. ಹಾಗಾಗಿ ಕಾನೂನು ಪದವಿ ಯಲ್ಲಿ ಜಸ್ಟ್ ಪಾಸ್ ಆಗುವುದೇ ಒಂದು ಮಟ್ಟದ ಅರಿವು ಮತ್ತು ಅನ್ವಯ ಸಾಮರ್ಥ್ಯವನ್ನು ತೋರಿಸುತ್ತದೆ. ಅದಕ್ಕಾಗಿ ಇಲ್ಲಿ ಕಡಿಮೆ ಅಂಕವೂ ಬಹಳಷ್ಟು ಅರ್ಥಪೂರ್ಣವಾಗಿರುತ್ತದೆ.
ಒಬ್ಬ ಸಾಮಾನ್ಯ ಪ್ರಜೆಗೆ ಸಂವಿಧಾನದ ಒಂದು ಸಾಲನ್ನು ಕೊಡಬಲ್ಲದೇ, ನ್ಯಾಯ ಸಿಗದವನ ಕಣ್ಣೀರು ಒರೆಸಬಲ್ಲದೇ ಎಂಬಿತ್ಯಾದಿ ಪ್ರಶ್ನೆಗಳಿಗೆಲ್ಲ ‘ಹೌದು’ ಎನ್ನುವ ಉತ್ತರವೇ ಕಾನೂನು ಪದವಿ. ಈ ಕಪ್ಪು ಕೋಟು ಕೇವಲ ವೃತ್ತಿಯ ಸಂಕೇತವಲ್ಲ, ಅದು ನ್ಯಾಯದ ಪರವಾದ ಪ್ರತಿಜ್ಞೆಯಾಗಿದೆ. ಶೇ.50ರಷ್ಟು ಅಂಕ ಪಡೆದು ಪಾಸಾದ ವಕೀಲನು, ಶೇ.90ರಷ್ಟು ಅಂಕ ಪಡೆದ ಎಂಜಿನಿಯ ರ್ಗಿಂತಲೂ ಈ ಸಮಾಜದಲ್ಲಿ ಹೆಚ್ಚು ಪರಿಣಾಮವನ್ನು ಬೀರುತ್ತಾನೆ.
ಇದನ್ನೂ ಓದಿ: Dr Jagadeesh Maane Column: ಅಂಕಪಟ್ಟಿ ನಗುತ್ತಿದೆ, ಮಕ್ಕಳು ಅಳುತ್ತಿದ್ದಾರೆ, ಇದು ಯಾವ ಶಿಕ್ಷಣ ?!
ಯಾಕೆ ಗೊತ್ತೇ? ಇದಕ್ಕೆ ಒಂದು ಸಣ್ಣ ಉದಾಹರಣೆ ಕೋಲಾರದ ನಂಜಮ್ಮ ಎಂಬ ರೈತ ಮಹಿಳೆ ಯು ತನ್ನ ಎರಡು ಎಕರೆ ಜಮೀನು ಉಳಿಸಿಕೊಳ್ಳಲು ಸುಮಾರು ಹತ್ತಾರು ವರ್ಷಗಳ ಕಾಲ ಕೋರ್ಟ್ ಅಲೆದಿರುತ್ತಾಳೆ. ಕೊನೆಗೆ 2018ರಲ್ಲಿ ಒಬ್ಬ ಯುವ ವಕೀಲ ಆ ತಾಯಿಗೆ ಉಚಿತವಾಗಿ ಆ ಕೇಸ್ ಗೆದ್ದುಕೊಡುತ್ತಾನೆ. ಆ ವಕೀಲ ಓದಿದ್ದು ಎಲ್ಎಲ್ʼಬಿ ಮಾತ್ರ.
ಹಾಗಾಗಿ ಕಾನೂನು ಎನ್ನುವುದು ಪುಸ್ತಕದ ಬೂಸ್ಟ್ ಅಲ್ಲ, ಅದು ಜನಸಾಮಾನ್ಯನ ಕೈಯಲ್ಲಿರುವ ಅತ್ಯಂತ ಪ್ರಬಲ ಆಯುಧವಾಗಿದೆ. ಆ ಆಯುಧವನ್ನು ಹಿಡಿಯುವ, ಝಳಪಿಸುವ, ಮತ್ತು ಅಗತ್ಯ ಬಿzಗ ಚಲಾಯಿಸುವ ಕಲೆಯೇ ಕಾನೂನು ಪದವಿ. ಬನ್ನಿ!
ಈ ಕೋಟು-ಕಪ್ಪು ಗೌನಿನ ಹಿಂದಿನ ಕಥೆ, ವ್ಯಥೆ, ಮತ್ತು ಶಕ್ತಿಯನ್ನು ಅರಿಯೋಣ. ಅಂಕಗಳ ಹಿಂದೆ ಓಡುವ ಅನೇಕ ಪದವಿಗಳಿರುವ ಈ ಮಧ್ಯ ನ್ಯಾಯದ ಅರಿವಿಗಾಗಿ ನಿಂತು ಸಂವಿಧಾನದ ಜಾಗೃತಿ ಮತ್ತು ಹಕ್ಕುಗಳನ್ನು ಅರಿಯುವ, ಸಮಾಜಕ್ಕೆ ಆ ಅರಿವಿನ ಬೆನ್ನೆಲುಬಾಗಿದೆ ಈ ಕಾನೂನು ಶಿಕ್ಷಣ. ಇದರ ಪರೀಕ್ಷೆಯು ಕೇವಲ ‘ಮಾಹಿತಿ ಪರೀಕ್ಷೆ’ ಅಲ್ಲ, ಇದೊಂದು ‘ನ್ಯಾಯದ ಪರೀಕ್ಷೆ’.
ಇಲ್ಲಿ ಒಂದು ಪ್ರಶ್ನೆಗೆ 4 ಕಾನೂನು, 3 ತೀರ್ಪು, 2 ವಾದ ಹಾಕಿದರೂ ಇಲ್ಲಿ ನ್ಯಾಯದ ದೃಷ್ಟಿಕೋನಕ್ಕೆ ಮಾತ್ರ ಅಂಕ. ಇಲ್ಲಿ ಶೇ.100ರಷ್ಟು ಸರಿ ಎಂಬುದೇ ಇಲ್ಲ, ನೂರರಷ್ಟು ನ್ಯಾಯಯುತ ಎಂಬುದಿದೆ. ಉದಾಹರಣೆ ಗಣಿತದಲ್ಲಿ 2+2=4. ಆದರೆ, ಕಾನೂನಿನಲ್ಲಿ ‘ಕೊಲೆ’ ಎಂದರೆ 302 IPC , ಆದರೆ ಅದು ಆತ್ಮರಕ್ಷಣೆಯಾದರೆ 100 IPC. ವಿಶ್ಲೇಷಣೆ, ನೀತಿ, ನಿರ್ಭೀತಿಗೆ ಹೆಚ್ಚಿನ ಮಾನ್ಯತೆ ಇದೆ.
ಇಲ್ಲಿ ಬೇರೆ ಪದವಿಗಳಂತೆ ಪಠ್ಯವನ್ನು ಒಪ್ಪಿಸುವುದಿಲ್ಲ, ಬದಲಿಗರ ಪ್ರಶ್ನಿಸಲಾಗುತ್ತದೆ. ಈ ರೀತಿಯ ವಿವೇಚನೆಗಳಿಗೆ ಪಠ್ಯಪುಸ್ತಕಗಳಿಲ್ಲ. ಆದ್ದರಿಂದಾಗಿ ಅದಕ್ಕೆ ಅಂಕ ಕಡಿಮೆ. ಈ ಕುರಿತು ’ The power of the lawyer is in the uncertainty of the law’ ಎನ್ನುವ ಜೆರೆಮಿ ಬೆಂಥಮ್ ಅವರ ಈ ಮಾತಿನಲ್ಲಿ ಹುರುಳಿದೆ.
ಸಮಸ್ಯೆಯನ್ನು ಹಲವು ಕೋನಗಳಿಂದ ನೋಡುವ ಕಲೆ ವಕೀಲರಲ್ಲಿರುತ್ತದೆ. ಅಂತಹ ವಕೀಲ ರಿರುವ ಕಾರಣದಿಂದಲೇ ಇಂದು ಬಡವರು, ಮಹಿಳೆಯರು ಮತ್ತು ದಲಿತರ ಹಕ್ಕುಗಳ ಹೋರಾಟ ಗಳು ಕೋರ್ಟ್ ಮೆಟ್ಟಿಲೇರುತ್ತಿವೆ. ಪಿಐಎಲ್ ಮೂಲಕ ಪರಿಸರ, ಶಿಕ್ಷಣ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗಳನ್ನು ತರಲಾಗಿದೆ.
ಉದಾಹರಣೆ 2G, ಕಲ್ಲಿದ್ದಲು ಹಗರಣ, ನಿರ್ಭಯಾ ಕೇಸ್‌ಗಳನ್ನು ನೆನಪಿಸಿಕೊಳ್ಳಬಹುದು. ಸರಕಾರ ಗಳು ತಪ್ಪು ಮಾಡಿದಾಗ ಮತ್ತು ಸಂವಿಧಾನದ ನಿಯಮಗಳು ಉಲ್ಲಂಘನೆಯಾಗುವ ಸ್ಥಿತಿ ಬಂದಾಗ ಅದನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸಿ ಪ್ರಜಾಪ್ರಭುತ್ವದ ರಕ್ಷಣೆ ಮಾಡುತ್ತಾರೆ ವಕೀಲರು.
ಯಾವುದೇ ಕೇಸ್ ಒಂದೇ ತರಹ ಇರುವುದಿಲ್ಲ. ಭಿನ್ನವಾಗಿರುತ್ತವೆ. ದಿನ ದಿನವೂ ಹೊಸ ಹೊಸ ಸವಾಲುಗಳಿರುತ್ತವೆ. ಹಾಗಾಗಿ ಮಿದುಳು ನಿರಂತರವಾಗಿ ಯೋಚಿಸುತ್ತಲಿರುತ್ತದೆ. ಒಬ್ಬ ಅಮಾಯಕ ನಿರಪರಾಧಿಯನ್ನು ಜೈಲಿನಿಂದ ಬಿಡಿಸಿದಾಗ ಮತ್ತು ಒಂದು ಹೆಣ್ಣಿಗೆ ಜೀವನಾಂಶ ಕೊಡಿಸಿದಾಗ ಸಿಗುವ ನೆಮ್ಮದಿ ಯಾವುದೇ ಸಂಬಳದಲ್ಲೂ ಸಿಗುವುದಿಲ್ಲ. ನಮ್ಮ ಯುಕ್ತಿಯಲ್ಲಿರುತ್ತದೆ. ವೈದ್ಯರು ಜೀವ ಉಳಿಸಿದರೆ, ಒಂದು ಕೆಟ್ಟ ಯಂತ್ರವನ್ನು ಒಬ್ಬ ಎಂಜಿನಿಯರ್ ಸರಿಪಡಿಸಬಹುದು. ಆದರೆ, ಒಂದು ಕುಟುಂಬ ನಾಶವಾದರೆ ಇಡೀ ತಲೆಮಾರೇ ಹಾಳಾಗುತ್ತದೆ.
ಹಾಗಾಗಿ ವಕೀಲರು ಜೀವಕ್ಕೂ ಮತ್ತು ದೇಶಕ್ಕೂ ‘ಘನತೆ’ ಸಿಗುವಂತೆ ಮಾಡುತ್ತಾರೆ. ಆದ್ದರಿಂದ ಅದಕ್ಕೆ ಜವಾಬ್ದಾರಿ ಹೆಚ್ಚು, ಅಂಕ ಕಡಿಮೆ. ಇಲ್ಲಿ ಕೇವಲ ಶೇ.50ರಷ್ಟು ಸಾಕು, ಇನ್ನುಳಿದ ಶೇ.50 ರಷ್ಟು ಅಂಕಗಳನ್ನು ನಿಮಗೆ ಸಮಾಜವೇ ಕೊಡುತ್ತದೆ, ಮತ್ತು ಕೊಟ್ಟಿದೆ. ಉದಾಹರಣೆ ಗಾಂಧೀಜಿ, ನೆಹರು, ಅಂಬೇಡ್ಕರ್, ರಾಮ್ ಜೇಠ್ಮಲಾನಿ, ನೆಲ್ಸನ್ ಮಂಡೇಲಾ ಇವರೆಲ್ಲರೂ ವಕೀಲರು. ಪೆನ್ನು ಮತ್ತು ತರ್ಕದಿಂದಲೇ ಇವರು ದೇಶದ ದಿಕ್ಕನ್ನೇ ಬದಲಿಸಿ ಜನರ ಕಣ್ಣೀರು ಒರೆಸುವ ಮೂಲಕ ದೇಶವನ್ನು ಕಟ್ಟಿದರು.
ಕಾನೂನು ಪದವಿ ಅಧ್ಯಯನ ಮಾಡಿದ ಅಂಬೇಡ್ಕರ್ ಕಾನೂನು ಪದವಿಯು ‘ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆ’ ಎಂದು ಕರೆದಿದ್ದರು. ಅದರ ಹಿಂದೆ ಬಲವಾದ ಕಾರಣಗಳೂ ಇವೆ. ಅವರ ದೃಷ್ಟಿಯಲ್ಲಿ, ಕಾನೂನಿನ ಆಳ್ವಿಕೆ ಇಲ್ಲದ ಸಮಾಜವೆಂದರೆ ಅದು ‘ಕಾಡಿನ ನ್ಯಾಯ’ದಂತೆ. ಸಂವಿ ಧಾನ ಮತ್ತು ಕಾನೂನುಗಳು ಮನುಷ್ಯನನ್ನು ಪಶುತ್ವದಿಂದ ಮೇಲಕ್ಕೆತ್ತಿ ನಾಗರಿಕನನ್ನಾಗಿ ಮಾಡುತ್ತವೆ.
ಹೀಗಾಗಿ ಕಾನೂನು ಕುಸಿದರೆ ನಾಗರಿಕತೆಯೂ ಕುಸಿಯುತ್ತದೆ ಎಂದಿದ್ದರು. ಅಂಬೇಡ್ಕರ್‌ರವರು ಬ್ರಿಟಿಷರ ಕಾಲದ ದಬ್ಬಾಳಿಕೆ, ಜಾತೀಯತೆ ಈ ಎರಡನ್ನೂ ನೋಡಿದ್ದರು. ಆದ್ದರಿಂದ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಕಾಗದದಿಂದ ನೆಲಕ್ಕೆ ತರುವ ಕೆಲಸವನ್ನು ಒಬ್ಬ ವಕೀಲರಾಗಿ ಅವರು ಮಾಡಿದರು.
ಒಬ್ಬ ನ್ಯಾಯಾಧೀಶ, ಒಬ್ಬ ಪೊಲೀಸ್, ಒಬ್ಬ ಮಂತ್ರಿ ತಪ್ಪು ಮಾಡಿದಾಗ ಪ್ರಶ್ನಿಸುವ ಹಕ್ಕು ಮತ್ತು ಧೈರ್ಯವನ್ನು ಸಂವಿಧಾನದ ಮೂಲಕ ಕೊಟ್ಟರು. ಆ ಸಂವಿಧಾನವನ್ನು ಅರ್ಥೈಸಿ ಉಳಿಸುವ ಪ್ರತಿಜ್ಞೆಯನ್ನು ಪ್ರತಿಯೊಬ್ಬ ಕಾನೂನು ಪದವೀಧರ ತೆಗೆದುಕೊಂಡು ಸಂವಿಧಾನ ಸೋಲದಂತೆ ನೋಡಿಕೊಳ್ಳುತ್ತಾನೆ.
ಏಕೆಂದರೆ ಸಂವಿಧಾನ ಸತ್ತರೆ, ನ್ಯಾಯ ಸಾಯುತ್ತದೆ. ನ್ಯಾಯ ಸತ್ತರೆ, ನಾಗರಿಕತೆಯೂ ಉಳಿಯು ವುದಿಲ್ಲ. ಸಾಮಾನ್ಯವಾಗಿ ವಕೀಲರು ನ್ಯಾಯಾಲಯದಲ್ಲಿ ಕೇಸ್ ಗೆಲ್ಲುವುದಿಲ್ಲ, ಸಮಾಜದಲ್ಲಿ ನ್ಯಾಯವನ್ನು ಗೆಲ್ಲಿಸುತ್ತಾರೆ ಎನ್ನುವ ಈ ಅಂಶ ವಕೀಲ ವೃತ್ತಿಯ ನಿಜವಾದ ಧ್ಯೇಯವನ್ನು ತೋರಿಸುತ್ತದೆ.
ಕೋರ್ಟಿನಲ್ಲಿ ಒಂದು ತೀರ್ಪು ಸಿಕ್ಕರೆ ಅದು ಕೇವಲ ಒಬ್ಬ ವ್ಯಕ್ತಿಗೆ ಸಿಗುವ ಗೆಲವು. ಆದರೆ ಆ ತೀರ್ಪಿನಿಂದ ಸಮಾಜದ ಮೌಲ್ಯ, ಕಾನೂನಿನ ವ್ಯಾಖ್ಯಾನ ಬದಲಾದರೆ ಅದು ಇಡೀ ಸಮಾಜಕ್ಕೆ ಸಿಗುವ ನ್ಯಾಯ. ವಕೀಲರು ಕೆಲವೊಂದು ಕೇಸ್ ಗೆದ್ದಾಗ ಅದು ಪೂರ್ವನಿದರ್ಶನವಾಗುತ್ತದೆ.
ಮುಂದೆ ಲಕ್ಷಾಂತರ ಜನರಿಗೆ ಅದೇ ಕಾನೂನು ಅನ್ವಯವಾಗುತ್ತದೆ. ಉದಾಹರಣೆ ಮೆನಕಾ ಗಾಂಧಿ ವರ್ಸಸ್ ಭಾರತ ಸರಕಾರ 1978ರ ಕೇಸ್. ಮೆನಕಾ ಗಾಂಧಿ ಅವರ ಪಾಸ್ಪೋರ್ಟ್ ವಶಪಡಿಸಿ ಕೊಂಡಾಗ, ವಕೀಲರು ಕೇವಲ ಅವರ ಪಾಸ್ಪೋರ್ಟ್ ವಾಪಸ್ ಕೊಡಿಸಲಿಲ್ಲ.
‘ವೈಯಕ್ತಿಕ ಸ್ವಾತಂತ್ರ್ಯ’ ಎಂಬ ಸಂವಿಧಾನದ 21ನೇ ವಿಧಿಯನ್ನು ವಿಸ್ತರಿಸಿದರು. ಈ ಒಂದು ಕೇಸ್ ನಿಂದ ಇವತ್ತು ‘ಜೀವಿಸುವ ಹಕ್ಕು’ ಎಂದರೆ ಅದು ಕೇವಲ ಉಸಿರಾಡುವುದಲ್ಲ, ಗೌರವದಿಂದ ಬದುಕುವ ಹಕ್ಕು ಎಂಬ ಅರ್ಥ ಬಂದಿದೆ. ಹಾಗಾಗಿ ವಕೀಲರು ಗೆದ್ದಿದ್ದು ಕೇವಲ ಮೆನಕಾ ಗಾಂಧಿ ಕೇಸಲ್ಲ, ಪ್ರತಿ ನಾಗರಿಕನ ಘನತೆಯನ್ನು.
ಅದೇ ರೀತಿ ವಿಶಾಖಾ ವರ್ಸಸ್ ರಾಜಸ್ಥಾನ ಸರಕಾರ 1997ರ ಕೇಸ್; ಕೆಲಸದ ಸ್ಥಳದಲ್ಲಿ ನಡೆಯು ತ್ತಿದ್ದ ಲೈಂಗಿಕ ಕಿರುಕುಳಕ್ಕೆ ಕಾನೂನೇ ಇರಲಿಲ್ಲ. ಭನ್ವಾರಿ ದೇವಿ ಮೇಲಿನ ದೌರ್ಜನ್ಯದ ನಂತರ ವಕೀಲರು ಸುಪ್ರೀಂ ಕೋರ್ಟ್ʼನಲ್ಲಿ ಹೋರಾಡಿದರು. ಪರಿಣಾಮವಾಗಿ, ‘ವಿಶಾಖಾ ಮಾರ್ಗಸೂಚಿ ಗಳು’ ಬಂದವು.
ಇವತ್ತು ಪ್ರತಿಯೊಂದು ಕಂಪನಿಯಲ್ಲಿ ICC ಸಮಿತಿ ಇರುವುದಕ್ಕೆ ಕಾರಣ ಆ ಒಂದು ಕೇಸ್ ಕಾರಣ. ಹಾಗಾಗಿ ಅಂದು ವಕೀಲರು ಗೆದ್ದಿದ್ದು ಕೇವಲ ಒಬ್ಬ ಮಹಿಳೆ ಪರವಾದ ನ್ಯಾಯವನ್ನಲ್ಲ, ಬದಲಿಗೆ ಕೋಟ್ಯಂತರ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣ.
ಹೀಗಂತ ಇಲ್ಲಿ ಕೇವಲ ಗೆಲುವಿಗಷ್ಟೇ ಮಹತ್ವವಿರುವುದಲ್ಲ. ಸೋತಂತಹ ಅದೆಷ್ಟೋ ಕೇಸುಗಳು ಕೂಡಾ ಸಾಮಾಜಿಕವಾಗಿ ಜಾಗೃತಿಯನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ವಕೀಲರು ಕೋರ್ಟಿ ನಲ್ಲಿ ಸೋತರೂ ಸಮಾಜದ ದೃಷ್ಟಿಕೋನವನ್ನು ಗೆದ್ದಿರುತ್ತಾರೆ. ಉದಾಹರಣೆ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರ ಭಿನ್ನಾಭಿಪ್ರಾಯದ ತೀರ್ಪು 1976 ತುರ್ತು ಪರಿಸ್ಥಿತಿ ಸಂದರ್ಭ ಎಡಿಎಮ್ ಜಿಬ್ರಾಲ್ಟರ್ ಕೇಸ್‌ನಲ್ಲಿ ಸರಕಾರದ ಪರ ತೀರ್ಪು ಬರುತ್ತದೆ. ಆಗ ಮೂಲಭೂತ ಹಕ್ಕುಗಳನ್ನು ಅಮಾನತು ಗೊಳಿಸಬಹುದು ಎಂದಿತ್ತು ಕೋರ್ಟ್.
ಆ ಸಂದರ್ಭದಲ್ಲಿ ಖನ್ನಾ ಅವರೊಬ್ಬರೇ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರು. ಆಗ ಅವರು ಆ ಕೇಸ್ ಸೋಲುತ್ತಾರೆ. ಆದರೆ, ಅವರ ತೀರ್ಪು ಇವತ್ತು ಭಾರತೀಯ ನ್ಯಾಯಾಂಗದ ಅತ್ಯಂತ ಶ್ರೇಷ್ಠ ತೀರ್ಪುಗಳಲ್ಲಿ ಒಂದು. ಅವರ ವಾದದ ಪರಿಣಾಮವಾಗಿ 44ನೇ ತಿದ್ದುಪಡಿ ಬಂದು, ತುರ್ತು ಪರಿಸ್ಥಿತಿ ಯಲ್ಲಿ ಕೂಡಾ 21ನೇ ವಿಧಿ ರದ್ದಾಗಕೂಡದೆಂಬ ಕಾನೂನು ಆಯಿತು.
ಪರಿಣಾಮ ಸೋಲಿನಲ್ಲೂ ನ್ಯಾಯ ಗೆದ್ದಿತು! ಇನ್ನು ಅನೇಕ ವಕೀಲರು ಕೇವಲ ವಾದ ಮಾಡುವು ದಿಲ್ಲ, ಕಾನೂನು ಸುಧಾರಣೆಗಾಗಿ, ಸಮಾಜ ಜಾಗೃತಿಗಾಗಿಯೂ ಕೆಲಸ ಮಾಡುತ್ತಾರೆ. ಉದಾಹರಣೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಎಂ.ಸಿ.ಮೆಹ್ತಾ ಅವರಂತಹ ವಕೀಲರು ಪರಿಸರ ಮತ್ತು ಮಕ್ಕಳ ಹಕ್ಕುಗಳಿಗಾಗಿ ಪಿಐಎಲ್ ಹಾಕಿದರು.
ಪಟಾಕಿ ಕಾರ್ಖಾನೆಯಲ್ಲಿ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದ ಪ್ರಕರಣದಲ್ಲಿ ಅವರು ಗೆದ್ದಿದ್ದು ಕೇವಲ 200 ಮಕ್ಕಳ ಬಿಡುಗಡೆ ಮಾತ್ರವಲ್ಲ, ಬದಲಿಗೆ ಆ ತೀರ್ಪಿನಿಂದ ಬಾಲಕಾರ್ಮಿಕ ಕಾಯ್ದೆಯು ಮತ್ತಷ್ಟು ಬಿಗಿಯಾಗಿ ಸಾವಿರಾರು ಮಕ್ಕಳು ಶಾಲೆಗೆ ಹೋಗುವಂತಾಯಿತಲ್ಲ ಅದೇ ಹೆಮ್ಮೆಯ ಸಂಗತಿ.
ಕಾನೂನು ಹಾಗೂ ಇತರೆ ಪದವಿಗಿರುವ ವ್ಯತ್ಯಾಸಗಳು: ಬೇರೆ ಇತರೆ ಯಾವುದೇ ಪದವಿಗಳಲ್ಲಿ ಶೇ.90ರಷ್ಟು ಅಂಕಗಳನ್ನು ಪಡೆದರೆ ವಿಷಯವನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರೆ ಎಂದರ್ಥ. ಆದರೆ, ಎಲಎಲಬಿಯಲ್ಲಿ ಕೇವಲ ಶೇ.50ರಷ್ಟು ಅಂಕ ಪಡೆದರೂ, ನೀವು ಒಂದು ಸಮಸ್ಯೆಗೆ 5 ಆಯಾಮಗಳಿಂದ ಉತ್ತರ ಕೊಡಬಲ್ಲಿರಿ ಎಂಬ ಅರ್ಥವಾಗುತ್ತದೆ. ಇಲ್ಲಿ ‘ಸರಿ’ ಉತ್ತರವಿಲ್ಲ, ಬದಲಿಗೆ ಸಮರ್ಥನೀಯ ‘ವಾದ’ ಮಾತ್ರ ಬಹಳ ಅಚ್ಚುಕಟ್ಟಾಗಿದೆ.
ಹಾಗಾಗಿ ‘ಕಾನೂನು ಎನ್ನುವುದು ಪುಸ್ತಕಕ್ಕಿಂತ ಹೆಚ್ಚಾಗಿ ಒಬ್ಬ ವಕೀಲನ ವಿವೇಕದಲ್ಲಿದೆ’ ಎನ್ನುವ ಮಾತನ್ನು ನ್ಯಾಯಮೂರ್ತಿ ಲೀಲಾ ಸೇಠ್ ಹೇಳುತ್ತಾರೆ. ಶೇ.50ರಷ್ಟು ಅಂಕದ ಹಿಂದೆ ನೂರಾರು ಕೇಸ್ ಲಾಗಳ ಓದು, ರಾತ್ರಿ ನಿದ್ದೆಗೆಟ್ಟು ತಯಾರಿಸಿದ ವಾದದಲ್ಲಿ ಒಬ್ಬ ನಿರಪರಾಧಿಯನ್ನು ಉಳಿಸುವ ಛಲ ಇರುತ್ತದೆ. ಇಲ್ಲಿ ಕಡಿಮೆ ಅಂಕ ಅಥವಾ ಫೇಲ್ ಮಾಡುವುದೆಂದರೆ ಜನರನ್ನು ಹೊರಗಿಡುವುದಲ್ಲ, ಅರ್ಹರನ್ನು ಮಾತ್ರ ಒಳಗೆ ಬಿಡುವುದು.
ವಕೀಲ ವೃತ್ತಿಯು ನೇರವಾಗಿ ನ್ಯಾಯಾಂಗದ ಭಾಗವಾಗಿರುವುದರಿಂದ ನ್ಯಾಯದ ತಕ್ಕಡಿಯನ್ನು ಹಿಡಿಯುವವನ ಕೈ ನಡುಗಬಾರದು. ಅದಕ್ಕಾಗಿ ಮೌಲ್ಯಮಾಪನದಲ್ಲಿ ಕಠಿಣತೆ ಇರಲೇ ಬೇಕಾಗು ತ್ತದೆ. ಒಂದು ವೇಳೆ ಇತರೆ ಪದವಿಗಳಂತೆ ಇಲ್ಲಿಯೂ ಎಲ್ಲರಿಗೂ ಶೇ.90ರಷ್ಟು ಮಾರ್ಕ್ಸ್ ಕೊಟ್ಟು ವಕೀಲರ ಸಂಖ್ಯೆ ಹೆಚ್ಚಿಸಿದರೆ, ಅರ್ಧಂಬರ್ಧ ಜ್ಞಾನ ಇರುವವರೆಲ್ಲ ನ್ಯಾಯಾಲಯದ ಮೇಲೆ ಒತ್ತಡ ಹೆಚ್ಚಿಸಿ ಕಕ್ಷಿದಾರರಿಗೆ ಅನ್ಯಾಯ ಮತ್ತು ನಿರಪರಾಧಿಗಳಿಗೆ ಜೀವಾವಧಿ ಶಿಕ್ಷೆ ಆಗಬಹುದು. ಆದ್ದರಿಂದ ಅಳೆದು ತೂಗಿ ಮೌಲ್ಯಮಾಪನ ಮಾಡಲಾಗುತ್ತದೆ.
ಬೇರೆಲ್ಲ ಪದವಿಗಳಲ್ಲಿ ಅಂಕಪಟ್ಟಿಗಳು ನಕ್ಕರೆ ಇಲ್ಲಿ ಅಂಕಪಟ್ಟಿಗಳು ಮಾತ್ರ ಅಳುತ್ತವೆ, ದೇಶದ ಭವಿಷ್ಯ ಉಜ್ವಲ. ಈ ಮೂಲಕ ಇದು ಕಾನೂನು ಮತ್ತು ನ್ಯಾಯವನ್ನು ಕಾಪಾಡುವ ಪದವಿ. ಕಾನೂನು ಕ್ಷೇತ್ರದಲ್ಲಿ ಪರಿಪೂರ್ಣತೆ ಅಳೆಯಲು ಕಷ್ಟ ಪ್ರತಿಯೊಂದು ಉತ್ತರಕ್ಕೂ ವಿಭಿನ್ನ ದೃಷ್ಟಿಕೋನಗಳು ಇರುತ್ತವೆ.
ಕೋರ್ಟ್‌ಗಳಲ್ಲಿಯೂ ಸಾಕಷ್ಟು ಭಿನ್ನಾಭಿಪ್ರಾಯಗಳಿರುತ್ತವೆ. ಕೆಲವೊಮ್ಮೆ ನ್ಯಾಯಾಧೀಶರೇ ವಿಭಿನ್ನ ತೀರ್ಪುಗಳನ್ನು ನೀಡುತ್ತಾರೆ. ಆದರೆ ಇದು ವಿಷಯದ ಸಂಕೀರ್ಣತೆಯನ್ನು ತೋರಿಸುತ್ತದೆ. ಇಂದು ವಕೀಲರಿಗೆ ಪೊಲೀಸ್ ಠಾಣೆಯಿಂದ ಸುಪ್ರೀಂ ಕೋರ್ಟ್ ತನಕ ಅವನ ಮಾತಿಗೆ ಬೆಲೆ ಇದೆ. ಅಮೆರಿಕದಂತಹ ದೇಶದಲ್ಲೂ ಕೂಡಾ ’Law School grading’ ಕಠಿಣ ಇರುವುದರಿಂದಲೇ ಅವರ ಲಾಯರ್‌ಗಳಿಗೆ ಜಾಗತಿಕವಾಗಿ ಬಹಳಷ್ಟು ಮಹತ್ವ ಇದೆ.
ಎಲ್ಎಲ್ʼಬಿ ಪದವಿ ಎಲ್ಲರನ್ನೂ ಶ್ರೀಮಂತರನ್ನಾಗಿ ಮಾಡದಿದ್ದರೂ ನಿಮ್ಮಿಂದಾಗಿ ಒಬ್ಬ ತಪ್ಪಿತಸ್ಥ ಶ್ರೀಮಂತ, ರಾಜಕಾರಣಿಗಳು ಮಂತ್ರಿಗಳು ಹಾಗೂ ಅಧಿಕಾರಿಗಳು ಅವರೆಲ್ಲರೂ ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಕಾನೂನಿನ ಮುಂದೆ ತಲೆಬಾಗುವಂತೆ ಮಾಡುತ್ತದೆ. ಪ್ರಸ್ತುತ ಅಂತಹ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಮುಂದೇ ಇವೆ, ದರ್ಪದಿಂದ ಮೆರೆದ ಅಧಿಕಾರಿಗಳು, ಚಿತ್ರನಟರು, ರಾಜಕಾರಣಿಗಳು ಇನ್ನೂ ಅನೇಕರು.
ಉದಾಹರಣೆ ತಮಿಳುನಾಡಿನ ಒಂಬತ್ತು ಜನ ಪೊಲೀಸ್ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ, ನಟ ದರ್ಶನ್ ಜೈಲಲ್ಲಿ ಕಂಬಿ ಎಣಿಸುತ್ತಿದ್ದರೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಮಂತ್ರಿ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಮೂಲಕ ನ್ಯಾಯಾಂಗ ವ್ಯವಸ್ಥೆಯ ಮೇಲೆ ಶ್ರೀ ಸಾಮಾನ್ಯನ ನಂಬಿಕೆ ಮಗದಷ್ಟು ಹೆಚ್ಚಾಗಿದೆ.
ವಕೀಲ ವೃತ್ತಿಗೆ ಇದಕ್ಕಿಂತ ದೊಡ್ಡ ಹೆಮ್ಮೆ ಇನ್ಯಾವುದೂ ಇಲ್ಲ. ಹಾಗಾಗಿ ಜಸ್ಟಿಸ್ ವಿ.ಆರ್. ಕೃಷ್ಣ ಅಯ್ಯರ್ ಅವರು ’Law is not a trade, not briefs, not merchandise. It is a public calling to pursue justice’ ಎಂದು ಹೇಳಿದ ಮಾತು ಈ ಸಂದರ್ಭದಲ್ಲಿ ಸ್ಮರಣೀಯ.