Dr Jagadeesh Maane Column: ಅಂಕಪಟ್ಟಿ ನಗುತ್ತಿದೆ, ಮಕ್ಕಳು ಅಳುತ್ತಿದ್ದಾರೆ, ಇದು ಯಾವ ಶಿಕ್ಷಣ ?!
ವಾಸ್ತವದಲ್ಲಿ ವಿದ್ಯಾರ್ಥಿಯನ್ನು ಸತ್ಯವಂತನನ್ನಾಗಿ ಮಾಡುವುದೇ ಶಿಕ್ಷಣದ ಮೂಲ ಉದ್ದೇಶ. ಆದರೆ ಇವತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಕೇವಲ ಅಂಕವಂತನನ್ನಾಗಿ ಮಾಡುತ್ತಿದೆಯೇ ಹೊರತು ಸತ್ಯವಂತನನ್ನಾಗಿ ಮಾಡುತ್ತಿಲ್ಲ ಎನ್ನುವ ‘ಅಬ್ದುಲ್ ಕಲಾಂ’ರು ಹೇಳಿದ ಈ ಸತ್ಯವನ್ನು ಅರಿಯಬೇಕು.
-
ಕಲಿಕೆ ಕಿರಣ
ಡಾ.ಜಗದೀಶ್ ಮಾನೆ
ವಾಸ್ತವದಲ್ಲಿ ವಿದ್ಯಾರ್ಥಿಯನ್ನು ಸತ್ಯವಂತನನ್ನಾಗಿ ಮಾಡುವುದೇ ಶಿಕ್ಷಣದ ಮೂಲ ಉದ್ದೇಶ. ಆದರೆ ಇವತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಕೇವಲ ಅಂಕ ವಂತನನ್ನಾಗಿ ಮಾಡುತ್ತಿದೆಯೇ ಹೊರತು ಸತ್ಯವಂತನನ್ನಾಗಿ ಮಾಡುತ್ತಿಲ್ಲ ಎನ್ನುವ ‘ಅಬ್ದುಲ್ ಕಲಾಂ’ರು ಹೇಳಿದ ಈ ಸತ್ಯ ಮನಗಾಣಬೇಕು. ವಿಕಸಿತ ಭಾರತ 2047ರ ಕನಸು ನನಸಾಗುವುದು ಅರಿವಿನಿಂದ ಹೊರತು ಅಂಕಪಟ್ಟಿಯಿಂದಲ್ಲ ಎಂಬ ಸತ್ಯವನ್ನು ಈಗಲಾದರೂ ಅರಿಯೋಣ.
ಇದೀಗ ಹತ್ತನೇ ತರಗತಿಯ ಫಲಿತಾಂಶ ಬಂದಿದೆ. ಅದರಲ್ಲಿ ಸುಮಾರು ಏಳೆಂಟು ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಬಂದ ಖುಷಿಯಲ್ಲಿದ್ದರೆ, ಇನ್ನು ಕೆಲವರಿಗೆ ಮೂರು-ನಾಲ್ಕು ಅಂಕಗಳ ಕಡಿತದಿಂದ ಈ ಗುರಿ ಮುಟ್ಟದೇ ಮುಖ ಸಪ್ಪೆ ಮಾಡಿದ್ದಾರೆ.
ಇನ್ನು 90ಕ್ಕಿಂತ ಮೇಲ್ಪಟ್ಟು ಅಂಕ ಪಡೆದರೂ ಅಂಕ ಕಡಿಮೆ ಆಯಿತು ಅಂತ ಮನನೊಂದವರೂ ಬಹುತೇಕರಿದ್ದಾರೆ. ಅದರಲ್ಲಿ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ನಿದರ್ಶನವೂ ಇದೆ. ಮೊನ್ನೆಯ ಪಿಯುಸಿ ಫಲಿತಾಂಶದಲ್ಲೂ ಬಹುತೇಕ ಹೀಗೇ ಆಗಿತ್ತು. ಆದರೆ ಹಿಂದೆ ಒಂದು ಕಾಲ ವಿತ್ತು, ಅದು 1980ದಶಕ, ಆಗ ಹತ್ತನೇ ತರಗತಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ತಾಲೂಕಿಗೊಬ್ಬ, ಅಥವಾ ಜಿಲ್ಲೆಗೆ ಒಬ್ಬಿಬ್ಬರು ಟಾಪರ್. ಆ ಮೂಲಕ ಅವರೇ ಜೀನಿಯಸ್.
ಶೇ.62ರಷ್ಟು ತೆಗೆದ ಹುಡುಗನಿಗೆ ಊರ ತುಂಬೆಲ್ಲ ಸನ್ಮಾನ ಸತ್ಕಾರಗಳಾಗುತ್ತಿದ್ದವು. ಆದರೆ ಇಂದು ಶೇ.92ರಷ್ಟು ತೆಗೆದ ಹುಡುಗಿ ‘ಮಾರ್ಕ್ಸ್ ಕಡಿಮೆ ಆಯ್ತು’ ಅಂತ ಅಳುತ್ತಾಳೆ. ಆಕೆಯ ಪೋಷಕರು ಸ್ವಾಭಿಮಾನಕ್ಕೆ ಧಕ್ಕೆ ಬಂದವರಂತೆ ಆಡುತ್ತಾರೆ. ವಾಸ್ತವದಲ್ಲಿ ಬದಲಾದದ್ದು ಅಂಕವೋ? ನಮ್ಮ ನಿರೀಕ್ಷೆಯೋ? ಮೌಲ್ಯವೋ? ಎಂಬುದನ್ನು ತಿಳಿಯಬೇಕಿದೆ. ಕಳೆದ ಈ 30 ವರ್ಷದಲ್ಲಿ ನಮ್ಮ ಮಕ್ಕಳು ಬುದ್ಧಿವಂತರಾದರೋ? ಅಥವಾ ನಮ್ಮ ಅಳತೆಗೋಲು ಮಂದವಾಯಿತೋ? ಈ ಲೆಕ್ಕಾ ಚಾರ ತಪ್ಪಿದ್ದಲ್ಲಿ ಎಂಬುದನ್ನು ಅರಿಯಬೇಕು.
ವಾಸ್ತವದಲ್ಲಿ ವಿದ್ಯಾರ್ಥಿಯನ್ನು ಸತ್ಯವಂತನನ್ನಾಗಿ ಮಾಡುವುದೇ ಶಿಕ್ಷಣದ ಮೂಲ ಉದ್ದೇಶ. ಆದರೆ ಇವತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಕೇವಲ ಅಂಕವಂತನನ್ನಾಗಿ ಮಾಡುತ್ತಿದೆಯೇ ಹೊರತು ಸತ್ಯವಂತನನ್ನಾಗಿ ಮಾಡುತ್ತಿಲ್ಲ ಎನ್ನುವ ‘ಅಬ್ದುಲ್ ಕಲಾಂ’ರು ಹೇಳಿದ ಈ ಸತ್ಯವನ್ನು ಅರಿಯಬೇಕು.
ಇದನ್ನೂ ಓದಿ: Dr Jagadeesh Maane Column: ದರ್ಪಕ್ಕೆ ದಂಡನೆ: ನ್ಯಾಯದ ಜ್ಯೋತಿಯಲ್ಲಿ ಬೆಳಗಿದ ತೀರ್ಪು
ಎಲ್ಲರೂ ಪ್ರಥಮ ಅನ್ನುವ ಈಗಿನ ಶಿಕ್ಷಣ ಪದ್ಧತಿ ಸಿಹಿಯಾದ ವಿಷ ಇದ್ದಂತೆ. ಇದರಿಂದ ತಾತ್ಕಾಲಿಕ ಸಂತೋಷ ಸಿಕ್ಕರೂ ದೀರ್ಘಕಾಲದಲ್ಲಿ ಸಮಾಜ ಮತ್ತು ದೇಶದ ಬುನಾದಿಯನ್ನ ಅಲುಗಾಡಿಸುತ್ತದೆ, ಈ ಅಂಕಗಳ ಅತಿರೇಕವು ನೈಜ ಶಿಕ್ಷಣವನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಬಾಯಿಪಾಠಕ್ಕೆ ಬಹುಮಾನ ನೀಡಿ ಯೋಚನೆಗಳಿಗೆ ಶಿಕ್ಷೆ ಕೊಡುವುದು ಸಮಾಜಕ್ಕೆ ದೊಡ್ಡ ಮಾರಕವಾಗುತ್ತದೆ. ಈ ಮೂಲಕ ಅಂಕಗಳ ಕಾರ್ಖಾನೆಗಳಲ್ಲಿ ಅರಿವಿನ ಕಗ್ಗೊಲೆ ಆಗುತ್ತಿರುವುದರ ಪರಿಣಾಮವಾಗಿ ಶಿಕ್ಷಣ ವ್ಯವಸ್ಥೆ ಯಲ್ಲಿ ಪಲ್ಲಟಗಳಾಗುತ್ತವೆ. ಈ ಹಂತದಲ್ಲಿ ನಿರ್ಮಾಣ ಆಗುವವರು ಜಾತೀಯತೆ, ಭ್ರಷ್ಟಾಚಾರ ದಂತಹ ಕೃತ್ಯಗಳಲ್ಲಿ ತೊಡಗುತ್ತ ರಾಷ್ಟ್ರ ವಿರೋಧಿಗಳಾಗುತ್ತಿದ್ದಾರೆ. ಈ ಪರಿಣಾಮ ಇಂದು ಆರ್ಥಿಕ ಮತ್ತು ಉದ್ಯೋಗ ಕ್ಷೇತ್ರಗಳ ಮೇಲೆ ಸಾಕಷ್ಟು ಪ್ರಭಾವಗಳು ಬೀರುತ್ತವೆ.
ಇಂದು ಕೋಟ್ಯಂತರ ವಿದ್ಯಾರ್ಥಿಗಳು ಶೇ.90 ರಿಂದ 95ರಷ್ಟು ಅಂಕಗಳೊಂದಿಗೆ ಪದವಿಗಳನ್ನು ಪಡೆ ಯುತ್ತಾರೆ. ಆದರೆ NASSCOM ವರದಿಯ ಪ್ರಕಾರ ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ.20ರಷ್ಟು ಜನ ಮಾತ್ರ ಕೆಲಸಕ್ಕೆ ನೇರವಾಗಿ ನೇಮಕವಾಗುವಷ್ಟು ಕೌಶಲ್ಯತೆ ಹೊಂದಿರುತ್ತಾರೆ. ಪರಿಣಾಮ, ಇಲ್ಲಿ ಕೇವಲ ಪ್ರಥಮ ದರ್ಜೆಯ ನಿರುದ್ಯೋಗಿಗಳ ಸೈನ್ಯ ಸೃಷ್ಟಿಯಾಗುತ್ತದೆ. ಈ ಮೂಲಕ ಉತ್ಪಾದಕತೆಯಲ್ಲೂ ಕುಸಿತವಾಗುತ್ತದೆ.
ಅಂಕ ಆಧಾರಿತ ಕಲಿಕೆಯಿಂದ ಬಂದವರು ಕೆಲಸದ ಜಾಗದಲ್ಲಿ ಸಮಸ್ಯೆಗಳನ್ನು ಬಿಡಿಸಲು, ನಿರ್ಧಾರ ತೆಗೆದುಕೊಳ್ಳಲು ತಿಣಕಾಡುತ್ತಾರೆ. ಕಂಪನಿಗಳು ಇವರಿಗೆ ಪುನಃ ಆರು ತಿಂಗಳಿಂದ ಒಂದು ವರ್ಷ ಕಾಲ ತರಬೇತಿ ಕೊಡಬೇಕಾಗುತ್ತದೆ. ಹೀಗಾಗುವುದರಿಂದ ದೇಶದ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆ ಬಹಳಷ್ಟು ಕಡಿಮೆ ಆಗುತ್ತದೆ. ಇನ್ನು ಸ್ಟಾರ್ಟ್‌ಅಪ್, ಸಂಶೋಧನೆಗೂ ಬಹಳ ದೊಡ್ಡ ಪೆಟ್ಟು ಬೀಳುತ್ತದೆ.
ನಾವೀನ್ಯತೆ ಬೇಕಿರುವ ಕ್ಷೇತ್ರಗಳಿಗೆ ಕೇವಲ ‘ಪಠ್ಯ ಉಗುಳುವ’ ಮನಸ್ಥಿತಿ ಹೊಂದಿದವರಲ್ಲ, ಪ್ರಶ್ನೆ ಕೇಳುವ ಮನಸ್ಥಿತಿ ಬೇಕು. ಶೇ.95ರಷ್ಟು ಸಂಸ್ಕೃತಿ ಪ್ರಶ್ನಿಸುವ ಧೈರ್ಯವನ್ನೇ ಕಿತ್ತುಕೊಳ್ಳುತ್ತದೆ. ಪರಿಣಾಮ ದೇಶದ RD, ಪೇಟೆಂಟ್ ಸಂಖ್ಯೆ, ಹೊಸ ಆವಿಷ್ಕಾರಗಳ ಮೇಲೆ ನೇರ ಪರಿಣಾಮ ಬೀಳುತ್ತದೆ.
ಅರ್ಹತೆಯ ಮಾನದಂಡವೂ ಕೂಡಾ ನಾಶವಾಗುತ್ತದೆ. ಮೊದಲು ಶೇ.60ರಷ್ಟು ತೆಗೆದವನನ್ನು ಈ ಸಮಾಜವು ಪ್ರತಿಭಾವಂತ ಅಂತಲೇ ಗುರುತಿಸುತ್ತಿತ್ತು. ಆದರೆ ಈಗ ಎಲ್ಲರಿಗೂ ಶೇ.90-95ರಷ್ಟು ಅಂಕಗಳು ಇರುವುದರಿಂದ ಇಲ್ಲಿ ನಿಜವಾದ ಪ್ರತಿಭೆ ಯಾರು, ಸಾಧಾರಣರು ಯಾರು ಅಂತ ಗುರುತಿ ಸುವುದೇ ಬಲು ಕಷ್ಟ. ಇದರಿಂದ ಸಹಜವಾಗಿ ಮೀಸಲಾತಿ, ಸ್ಕಾಲರ್‌ಶಿಪ್, ಕೆಲಸ ಎಲ್ಲದರಲ್ಲೂ ಗೊಂದಲವಾಗುತ್ತದೆ.
ಸುಳ್ಳು ಆತ್ಮವಿಶ್ವಾಸ ಮತ್ತು ನಂತರದ ಹತಾಶೆ, ಶಾಲಾ-ಕಾಲೇಜುಗಳಲ್ಲಿ ಶೇ.95ರಷ್ಟು ತೆಗೆದ ಬಹು ತೇಕರು ತಾವೇ ದೊಡ್ಡ ಬುದ್ಧಿವಂತರು ಅನ್ನೋ ಭ್ರಮೆಯಲ್ಲಿ ಬೆಳೆಯುತ್ತಾರೆ. ಯಾವಾಗ NEET, KPSC ಹಾಗೂ UPSC, ಸಂದರ್ಶನಗಳಲ್ಲಿ ಸೋತಾಗ ತೀವ್ರ ಹತಾಶೆ, ಖಿನ್ನತೆಗೆ ಒಳಗಾಗುತ್ತಾರೆ. ಉದಾಹರಣೆ NCRB ಡೇಟಾ ಪ್ರಕಾರ ಪರೀಕ್ಷೆ-ಫಲಿತಾಂಶಗಳ ಒತ್ತಡಗಳಿಂದ ಇಂದು ಸಾಕಷ್ಟು ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ.
ಕೆಲವರು ಕಷ್ಟಪಟ್ಟು ಓದುತ್ತಾರೆ, ಹಲವರು ಶ್ರಮ ಪಡದೇ ಸುಲಭವಾಗಿ ಅಂಕಗಳನ್ನು ಪಡೆಯು ತ್ತಾರೆ. ಕೊನೆಗೆ ಇಬ್ಬರಿಗೂ ಒಂದೇ ಪ್ರಮಾಣದಲ್ಲಿ ಅಂಕಗಳು ಬರುತ್ತವೆ. ಇದರಿಂದಾಗಿ ನಿಜವಾಗಿ ಯೂ ಶ್ರಮ ಹಾಕುವವರಿಗೆ ಬಹಳ ಅವಮಾನವಾಗುತ್ತದೆ.
‘ವ್ಯವಸ್ಥೆ ಹೇಗಿದ್ದರೂ ಪಾಸ್ ಮಾಡುತ್ತದೆ ಯಾಕೆ ಕಷ್ಟಪಡಬೇಕು’ ಎಂಬ ಮನೋಭಾವ ಬೆಳೆಯು ತ್ತದೆ. ಶಿಕ್ಷಕರು ಜ್ಞಾನ ದೀವಿಗೆ ಅಲ್ಲ, ಬದಲಿಗೆ ಅವರು ಕೇವಲ ಅದುರ್ಬಲವಾಗುತ್ತಿದ್ದಾರೆ. ರಿಸಲ್ಟ್ ಕಡಿಮೆ ಆಯ್ತು ಅಂತ ಶಿಕ್ಷಕರಿಗೆ ನೋಟಿಸ್ ಕೊಡುವ ವ್ಯವಸ್ಥೆ ಬಂದಾಗ, ಶಿಕ್ಷಕರು ಗುಣಮಟ್ಟ ಬಿಟ್ಟು ಅಂಕದ ಹಿಂದೆ ಬೀಳುವುದೇ ಹೆಚ್ಚು.
ಈ ರೀತಿಯ ಶಿಕ್ಷಣದಿಂದ ತಯಾರಾದ ದುರ್ಬಲ ಮಾನವ ಸಂಪನ್ಮೂಲದ ಪ್ರಭಾವವು ಈ ದೇಶದ ಭವಿಷ್ಯ ಹಾಗೂ ಆಡಳಿತದ ಮೇಲೆ ಬೀಳುತ್ತದೆ. ಯಾವುದೇ ದೇಶದ ನಿಜವಾದ ಸಂಪತ್ತು ಅದರ ಯುವಶಕ್ತಿ. ಆ ಯುವಶಕ್ತಿ ಕೇವಲ ಅಂಕಪಟ್ಟಿಯಲ್ಲಿ ಬಲಿಷ್ಠವಾಗಿ, ನಿಜ ಜೀವನದ ಸವಾಲು ಎದುರಿಸುವಲ್ಲಿ ದುರ್ಬಲವಾದರೆ ದೇಶದ ಪ್ರಗತಿ ಕುಂಠಿತವಾಗುತ್ತದೆ.
ಮುಂದಿನ ಪೀಳಿಗೆಯ ವಿಜ್ಞಾನಿ, ವೈದ್ಯ, ಆಡಳಿತಾಧಿಕಾರಿ, ಶಿಕ್ಷಕ ಎಲ್ಲರೂ ಈ ವ್ಯವಸ್ಥೆಯಿಂದಲೇ ಬರಬೇಕು. ಗ್ರಹಿಕಾ ಶಕ್ತಿ, ವಿಮರ್ಶಾತ್ಮಕ ಚಿಂತನೆ ಇಲ್ಲದೆ ಕೇವಲ ಅಂಕ ಪಡೆದವರು ಆಡಳಿತಕ್ಕೆ ಬಂದರೆ, ನೀತಿ ನಿರೂಪಣೆ, ಸಮಸ್ಯೆ ಪರಿಹಾರ ಎಲ್ಲವೂ ದುರ್ಬಲವಾಗುತ್ತದೆ. ಈ ಮೂಲಕ ಭವಿಷ್ಯ ದಲ್ಲಿ ನಾಯಕತ್ವದ ಕೊರತೆ ಉಂಟಾಗುತ್ತದೆ.
ಜಾಗತಿಕ ಸ್ಪರ್ಧೆಯಲ್ಲಿಯೂ ಹಿನ್ನಡೆ PISA ರೀತಿಯ ಅಂತಾರಾಷ್ಟ್ರೀಯ ಪರೀಕ್ಷೆಗಳಲ್ಲಿ ಭಾರತದ ಮಕ್ಕಳ ಪ್ರದರ್ಶನ ಕಳಪೆಗೊಳ್ಳುತ್ತದೆ. ಕಾರಣ ನಮ್ಮ ಪರೀಕ್ಷೆಗಳು ಕೇವಲ ನೆನಪಿನ ಶಕ್ತಿಗೆ, ಅವರದು ಗ್ರಹಿಕೆಗೆ. ಪರಿಣಾಮ ಶೇ.95ರಷ್ಟು ಪಡೆದ ನಮ್ಮ ಮಗು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಲಾಗದೆ ಹಿಂದೆ ಬೀಳುತ್ತದೆ.
ಶಾರ್ಟ್‌ಕಟ್ ಸಂಸ್ಕೃತಿ, ‘ಕಷ್ಟಪಡದೆ ಅಂಕ ಬರುತ್ತೆ’ ಅನ್ನುವ ನಮ್ಮ ಈ ವ್ಯವಸ್ಥೆಯು ಮಕ್ಕಳಿಗೆ ಶಾರ್ಟ್‌ಕಟ್ ರೂಟ್‌ಗಳನ್ನು ಕಲಿಸುವುದರಲ್ಲಿಯೇ ತಲ್ಲೀನಗೊಂಡಿದೆ. ಹೀಗಾಗಿ ಅವರು ತಮ್ಮ ಮುಂದಿನ ಜೀವನದ ಎಲ್ಲ ಹಂತದಲ್ಲೂ ಅದನ್ನೇ ಹುಡುಕುತ್ತಾರೆ. ನೈತಿಕತೆ ಹಾಗೂ ಪ್ರಾಮಾಣಿಕತೆ ಯ ಬೆಲೆಗಳು ಕಡಿಮೆಯಾಗುವ ಮೂಲಕ ನಮ್ಮ ಮೌಲ್ಯಗಳ ಮೇಲಿನ ಪ್ರಭಾವವು ಕಡಿಮೆ ಯಾಗುತ್ತವೆ.
ಎಲ್ಲರೂ ಪ್ರಥಮ, ಎಲ್ಲರೂ ಗೆಲ್ಲಬೇಕು. ಸೋಲು, ಎರಡನೇ ಸ್ಥಾನ ಅನ್ನುವುದನ್ನು ಅರಗಿಸಿ ಕೊಳ್ಳುವ ಶಕ್ತಿಯೇ ಇಲ್ಲದ ಪೀಳಿಗೆಯು ಸೃಷ್ಟಿಯಾಗುತ್ತದೆ. ಅಂತವರು ಜೀವನದಲ್ಲಿ ಬರುವ ಸಣ್ಣ ಪುಟ್ಟ ಸೋಲುಗಳಿಗೂ ಕುಗ್ಗಿ ಹೋಗುತ್ತಾರೆ. ಕಾರಣ ಅವರೊಳಗೆ ಸೋಲುಗಳನ್ನು ಸ್ವೀಕರಿಸುವ ಮನಸ್ಥಿತಿಗಳೇ ಹೆಚ್ಚಾಗಿ ಅಡಗಿಕೊಳ್ಳುತ್ತವೆ.
ಅಂಕಪಟ್ಟಿಗಳನ್ನೇ ಪ್ರಮುಖ ಮಾನದಂಡವಾಗಿಸಿದ್ದರ ಪರಿಣಾಮ ತಲೆಗಳು ಖಾಲಿಯಾಗುತ್ತಿವೆ. ಇಂದು ಶೇ.95ರಷ್ಟು ಅಂಕ ಪಡೆದು ಸಂಭ್ರಮಿಸುವ ಆ ಮಗು, ನಾಳೆ ಎಲ್ಲೋ ಒಂದುಕಡೆ ಕೇವಲ 35-40 ಸಾವಿರ ಸಂಬಳದ ಕೆಲಸಕ್ಕೆ 20 ರಿಂದ 30 ಲಕ್ಷದವರೆಗೆ ಲಂಚ ಕೊಡಬೇಕಾಗುತ್ತದೆ. ಈಗ ನಡೆದಿರುವುದು ಕೂಡಾ ಅದೆ. ವಾಸ್ತವವಾಗಿ ಕೇವಲ ಪರೀಕ್ಷೆಗಳಲ್ಲಿ ಮಾತ್ರ ಎಲ್ಲರನ್ನೂ ಪಾಸ್ ಮಾಡುವುದು ನಮ್ಮ ಶಿಕ್ಷಣದ ಮೂಲ ಉದ್ದೇಶವಲ್ಲ!
ಬದಲಿಗೆ, ‘ಎಲ್ಲರೊಳಗೂ ಸಮರ್ಥವಾದ ವ್ಯಕ್ತಿತ್ವ ನಿರ್ಮಿಸುವುದು’. ಆದರೆ, ಈಗ ಶಿಕ್ಷಣದ ಆ ಮೂಲ ಉದ್ದೇಶವೇ ಮರೆತು ಹೋಗಿದೆ. ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆದವರು ಬದುಕೆಂಬ ಪರೀಕ್ಷೆಯಲ್ಲಿ ಕೇವಲ ಶೇ.40ರಷ್ಟು ಅಂಕ ತೆಗೆದರೆ ಪ್ರಯೋಜನವಿಲ್ಲ. ಹಾಗಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಭಾರತ ‘ಸಾಕ್ಷರಸ್ಥ ನಿರುದ್ಯೋಗಿಗಳ ದೇಶವಾಗುವುದರಲ್ಲಿ ಅನುಮಾನವಿಲ್ಲ’!
ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆ ಆಗ ಬೇಕಿದೆ, ಹಿಂದೆ ಸಿಲಬಸ್ ಕಡಿಮೆ, ಪ್ರಶ್ನೆಪತ್ರಿಕೆ ಕಠಿಣ, ಹಾಗೂ ಮೌಲ್ಯಮಾಪನ ತುಂಬಾ ಕಟ್ಟುನಿಟ್ಟಾಗಿ ನಡೆಯುತ್ತಿತ್ತು. ಒಂದೇ ಒಂದು ಅಕ್ಷರ ತಪ್ಪಿದರೂ ಅಂಕ ಕಡಿತವಾಗುತ್ತಿತ್ತು. ಹೀಗಾಗಿ ಅಂದು ಶೇ.60ರಷ್ಟು ಪಡೆಯುದೇ ಒಂದು ದೊಡ್ಡ ಹರಸಾಹಸವಾಗುತ್ತಿತ್ತು. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ CCE, ಗ್ರೇಸ್ ಮಾರ್ಕ್ಸ್, ಆಂತರಿಕ ಮೌಲ್ಯಮಾಪನ, ಬಹು ಆಯ್ಕೆಯ ಪ್ರಶ್ನೆಗಳು, ಚಾಯ್ಸ ಉತ್ತರ ಬರೆದರೆ ಅಂಕ ಕೊಡುವ ವ್ಯವಸ್ಥೆ ಇದೆ. ಹೀಗಿರುವಾಗ ಶೇ.90ರಷ್ಟು ಸಾಮಾನ್ಯವಾಗಿದೆ.
ಮೊದಲು ವಿಶ್ಲೇಷಣಾತ್ಮಕ ಪ್ರಶ್ನೆ ಗಳು ಜಾಸ್ತಿ ಇರುತ್ತಿದ್ದವು. ಆದರೀಗ ನೆನಪಿನ ಶಕ್ತಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಜತೆಗೆ ಗೈಡ್/ನೋಟ್ಸ್ ಆಧಾರಿತ ಪ್ರಶ್ನೆಗಳು. ಅಂಕ ವರ್ಸಸ್ ಜ್ಞಾನ, ಇಂದು ಶೇ.95 ರಷ್ಟು ತೆಗೆದ ಮಕ್ಕಳಿಗೆ ಸರಿಯಾಗಿ ಒಂದು ಅರ್ಜಿಯನ್ನು ಬರೆಯಲು ಬರುವುದಿಲ್ಲ. ಅವರಿಗೆ ಮೂಲ ಗಣಿತವೂ ಗೊತ್ತಿಲ್ಲ ಅಂತ ಕಂಪನಿಗಳು ಹೇಳುತ್ತಿವೆ. ASER ವರದಿ ಪ್ರಕಾರ 8ನೇ ತರಗತಿಯ ಮಕ್ಕಳಿಗೆ 2ನೇ ತರಗತಿಯ ಪಠ್ಯ ಓದಲು ಬರುವುದಿಲ್ಲ.
ಈಗಿನ ಪರೀಕ್ಷೆಗಳು ಕೇವಲ ಮಾಹಿತಿ ಉಗುಳುವುದಕ್ಕೆ ಅಂಕ ಕೊಡುತ್ತವೆ. ಸಮಸ್ಯೆ ಬಿಡಿಸುವುದು, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಇವುಗಳಿಗೆ ಮಾನದಂಡವಿಲ್ಲ. ಕಾಲೇಜುಗಳ ರ‍್ಯಾಂಕಿಂಗ್, ಶಿಕ್ಷಕರ ಕಾರ್ಯಕ್ಷಮತೆ ಎಲ್ಲವೂ ಫಲಿತಾಂಶದ ಮೇಲೆ ನಿಂತಿರುತ್ತದೆ. ಹಾಗಾಗಿ ಎಲ್ಲರನ್ನೂ ಪಾಸ್ ಮಾಡಿ, ಪರ್ಸೆಂಟೆಜ್ ನೀಡಲು ಒತ್ತಡ ಹೆಚ್ಚುತ್ತಿದೆ.
ಈ ರೀತಿಯ ವ್ಯವಸ್ಥೆಗೆ ಕಾರಣಗಳೆಂದರೆ, ವಾಣಿಜ್ಯೀಕರಣ; ಖಾಸಗಿ ಶಾಲಾ-ಕಾಲೇಜುಗಳ ಪೈಪೋಟಿ. ಶೇ.100ರಷ್ಟು ಫಲಿತಾಂಶ, ಶೇ.90+ರಷ್ಟು ವಿದ್ಯಾರ್ಥಿಗಳು ಅನ್ನೋದು ಮಾರ್ಕೆಟಿಂಗ್ ಟೂಲ್ ಆಗಿದೆ. ಮತ್ತು ತಮ್ಮ ಮಗು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ತಮ್ಮ ಗೌರವಕ್ಕೆ ಧಕ್ಕೆ ಬರುತ್ತ ದೆಂಬ ಕಾರಣಕ್ಕೆ ಶಿಕ್ಷಕರ ಮೇಲೆ, ಮೌಲ್ಯಮಾಪಕರ ಮೇಲೆ ಪೋಷಕ ಒತ್ತಡ ಹೆಚ್ಚುತ್ತಿದೆ. ಹಾಗೂ ಸಾಕ್ಷರತೆ ಪ್ರಮಾಣ, ತೇರ್ಗಡೆ ಪ್ರಮಾಣವನ್ನು ಹೆಚ್ಚಿಸುವುದು ಸರಕಾರದ ಮೂಲ ಗುರಿಯೂ ಆಗಿದೆ.
ಈ ಪರಿಣಾಮವಾಗಿ ‘ಸರ್ವರಿಗೂ ಶಿಕ್ಷಣ’ ಮತ್ತು ‘ಎಲ್ಲರೂ ಪಾಸ್’ ಎಂಬ ನೀತಿಯಿಂದಾಗಿ ಅಡ್ಡ ಪರಿಣಾಮಗಳಿಂದು ಹೆಚ್ಚುತ್ತಿವೆ. ಮೇಲಾಗಿ LKG ಯಿಂದಲೇ ಟ್ಯೂಷನ್, ಪ್ರಶ್ನೆಪತ್ರಿಕೆ ಊಹಿಸಿ ತಯಾರಿ ಮಾಡಿಸುವುದು, ಉತ್ತರ ಬಾಯಿಪಾಠ ಮಾಡಿಸುವ ಈ ಟ್ಯೂಷನ್-ಕೋಚಿಂಗ್ ಹಾವಳಿ ಗಳೂ ಹೆಚ್ಚುತ್ತಿವೆ. ಈ ಎಲ್ಲ ಅಂಶಗಳು ಶಿಕ್ಷಣ ವ್ಯವಸ್ಥೆಯನ್ನು ಬಹಳ ಗಂಭೀರ ಸ್ಥಿತಿಗೆ ಕೊಂಡೊಯ್ಯುತ್ತಿವೆ.
ಇಲ್ಲಿ ಯಾರು ದಡ್ಡರು? ಬುದ್ಧಿವಂತರಾರು? ಮೊದಲು ಶೇ.60ರಷ್ಟು ತೆಗೆದವನು ಆತ ಅತ್ಯಂತ ಕಠಿಣ ಸ್ಪರ್ಧೆಯಲ್ಲಿ, ಕಡಿಮೆ ಸಂಪನ್ಮೂಲದಲ್ಲಿ ಗೆಲ್ಲುತ್ತಿದ್ದ. ಮತ್ತು ಆತನ ಗ್ರಹಿಕೆ, ಶ್ರಮ ಜಾಸ್ತಿ ಇರುತ್ತಿತ್ತು. ಆದರೆ ಈಗ ಶೇ.95ರಷ್ಟು ತೆಗೆಯುವವನು ಇಂದಿನ ವ್ಯವಸ್ಥೆ ಕೊಟ್ಟ ಚೌಕಟ್ಟಿನಲ್ಲಿ ಚೆನ್ನಾಗಿ ಆಡುತ್ತಿದ್ದಾನೆ. ಆದರೆ ಅದು ನಿಜವಾದ ಬುದ್ಧಿಮತ್ತೆಯ ಮಾನದಂಡವಂತೂ ಅಲ್ಲವೇ ಅಲ್ಲ.
ಮಧ್ಯಮ ವರ್ಗದ ಪ್ರತಿಭಾವಂತ ಮಗು ಮತ್ತು ನಿಜಕ್ಕೂ ಕಲಿಕೆಯಲ್ಲಿ ಹಿಂದುಳಿದ ಮಗು, ಈ ಇಬ್ಬರಿಗೂ ಶೇ.90ರಷ್ಟು ಸಿಗುತ್ತೆ. ಹೀಗಾದಾಗ ಇದರಲ್ಲಿ ಯಾರು ಪ್ರತಿಭಾವಂತ ಅಂತ ಗುರುತಿಸು ವುದು ಬಹಳ ಕಷ್ಟ. ಇಂದು ಬಿಎ ಮತ್ತು ಬಿಕಾಂ ಪದವಿಗಳಲ್ಲಿ ಪ್ರಥಮ ದರ್ಜೆ ಪಡೆದ ಲಕ್ಷಾಂತರ ಪದವೀಧರರಿದ್ದಾರೆ. ಆದರೆ ಅವರ ಕೆಲಸಕ್ಕೆ ತಕ್ಕ ಕೌಶಲ್ಯಗಳಿಲ್ಲ. ಇನ್ನು SSLC, PUC ಯಲ್ಲಿ ಶೇ.98ರಷ್ಟು ತೆಗೆದ ವಿದ್ಯಾರ್ಥಿಗಳು NEET, CET, KPSC ಮತ್ತು UPSC ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕಾಡೆ ಮಲಗುತ್ತಾರೆ.
ಕಾರಣ, ಅಲ್ಲಿ ಗ್ರಹಿಕೆಗೆ ತರಬೇತಿ ಇಲ್ಲ. ಅದರಲ್ಲಿ ಇವರೆಲ್ಲ ಬಿಗ್ ಜೀರೋ. ಹೀಗಾದಾಗ ಸಹಜವಾಗಿ ಉದ್ಯೋಗ ಸೃಷ್ಟಿಯಲ್ಲಿ ಬಿಕ್ಕಟ್ಟುಗಳು ಉಂಟಾಗುತ್ತದೆ; ಕಂಪನಿಗಳು ನಾವು ಶೇ.95ರಷ್ಟು ನೋಡಲ್ಲ, ನಮಗೆ ಸ್ಕಿಲ್ ಬೇಕು ಅಂತ ಮತ್ತೆ ಪ್ರತ್ಯೇಕ ಪರೀಕ್ಷೆ ಮಾಡುತ್ತವೆ. ಒಂದು ವರದಿಯ ಪ್ರಕಾರ 14-18 ವಯಸ್ಸಿನ ಶೇ.25ರಷ್ಟು ಮಕ್ಕಳಿಗೆ 2ನೇ ತರಗತಿಯ ಪಠ್ಯ ಓದಲು ಬರಲ್ಲ, ಆದ್ರೆ ಅವರಿಗೆ 10ನೇ ತರಗತಿಯಲ್ಲಿ ಶೇ.85-90ರಷ್ಟಿದೆ.
ಮತ್ತೊಂದೆಡೆ ಶೇ.90ರಷ್ಟು ಕಡಿಮೆ ಆಯ್ತು ಅಂತ ಅನೇಕ ಮಕ್ಕಳು ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂದು ಎಲ್ಲರೂ ಹೀಗೆ ಕೇವಲ ಅಂಕಗಳ ಹಿಂದೆ ಓಡುತ್ತಿದ್ದರ ಪರಿಣಾಮವಾಗಿ ಪ್ರಶ್ನೆ ಕೇಳುವ ಮತ್ತು ಹೊಸದನ್ನು ಕಂಡುಹಿಡಿಯುವ ಧೈರ್ಯ ಯಾರಿಗೆ ತಾನೆ ಬರುತ್ತದೆ ಹೇಳಿ!
ಹೀಗಾವುದರಿಂದ ಸಂಶೋಧನೆ, ನಾವೀನ್ಯತೆಗೆ ಬಹಳ ದೊಡ್ಡ ಪೆಟ್ಟು ಬೀಳುತ್ತಿದೆ. ಇನ್ನು ಪರಿಹಾರ ಗಳೆಂದರೆ ಮೌಲ್ಯಮಾಪನ ಸುಧಾರಣೆಯಾಗಬೇಕು. ಅಂಕದ ಜತೆಗೆ ಕೌಶಲ್ಯ ಆಧಾರಿತ ಗ್ರೇಡಿಂಗ್ ನೀಡುವುದು. ಪ್ರಾಜೆP, ವಾಚಿಕ ಪರೀಕ್ಷೆ ನಡೆಸುವುದು ಮತ್ತು ಆಂತರಿಕ ಅಂಕ ಕಡಿತಗೊಳಿಸಿ ಬೋರ್ಡ್ ಪರೀಕ್ಷೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಮಗುವಿನ ಆಸಕ್ತಿ, ಕೌಶಲ್ಯ ಗುರುತಿಸಿ ಪ್ರೋತ್ಸಾಹಿಸಬೇಕು. ಮುಖ್ಯವಾಗಿ ಪ್ರಶ್ನೆಪತ್ರಿಕೆಗಳಲ್ಲಿ ಬದಲಾವಣೆ ತರಬೇಕಿದೆ. ನೆನಪಿನ ಶಕ್ತಿ ಶೇ.20 ರಷ್ಟು ಅನ್ವಯ, ವಿಶ್ಲೇಷಣೆ, ಸೃಜನಶೀಲತೆಗೆ ಶೇ.80ರಷ್ಟು ಒತ್ತು ನೀಡಬೇಕು.
ಉದಾಹರಣೆಗೆ ಈ ಪಾಠವನ್ನು ನಿಜ ಜೀವನದಲ್ಲಿ ಹೇಗೆ ಬಳಸುವೆ? ಎಂಬ ಈ ತರಹದ ಪ್ರಶ್ನೆಗಳಿಗೆ ಆದ್ಯತೆ ನೀಡಬೇಕು. ಮುಖ್ಯವಾಗಿ ಶಿಕ್ಷಕರಿಗೆ ಮೊದಲಿನಂತೆ ವಿದ್ಯಾರ್ಥಿಗಳನ್ನು ಗಧರಿಸಿ ಬೆದರಿಸುವ ಮತ್ತು ಅಗತ್ಯವೆನಿಸಿದರೆ ನಾಲ್ಕು ತಳಿಸುವ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಬೇಕು. ಮತ್ತು ಮೌಲ್ಯ ಮಾಪನದಲ್ಲಿ ಕಡ್ಡಾಯವಾಗಿ ಅಂಕಗಳನ್ನು ಕೊಡಲೇಬೇಕೆನ್ನುವ, ಯಾರನ್ನೂ ಫೇಲ್ ಮಾಡ ಬಾರದೆಂಬ ಒತ್ತಡವನ್ನು ತೆಗೆಯಬೇಕು.
ಇವೆಲ್ಲದರ ಜತೆಗೆ ಪೋಷಕರ ಮನಸ್ಥಿತಿಯೂ ಬದಲಾಗಬೇಕಿದೆ. ಮಕ್ಕಳ ಪರೀಕ್ಷೆಯ ಫಲಿತಾಂಶ ಬಂದಾಗ ‘ಎಷ್ಟು ಪರ್ಸೆಂಟ್?’ ಅಂತ ಕೇಳುವುದರ ಬದಲಿಗೆ ‘ಹೊಸದೇನು ಕಲಿತೆ ಮಗು ಅಂತ ಕೇಳಿ. ಎಷ್ಟು ಅಂಕ ಅಂತಲ್ಲ. ನಿಮ್ಮ ಈ ಒಂದು ಪ್ರಶ್ನೆ ಇಡೀ ಶಿಕ್ಷಣ ವ್ಯವಸ್ಥೆಯ ದಿಕ್ಕೇ ಬದಲಾಗು ತ್ತದೆ’. ಹೀಗಾದಾಗ ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಗಟ್ಟಿತನ ಬೆಳೆಯುತ್ತದೆ. ಏಕೆಂದರೆ ಬದಲಾವಣೆ ಬೋರ್ಡ್ ರೂಮ್‌ನಲ್ಲಿ ಅಲ್ಲ, ಮನೆಯ ಹಾಲ್‌ನಲ್ಲಿ ಶುರುವಾಗಬೇಕು.
ಶಿಕ್ಷಣವು ಮನುಷ್ಯನ ಒಳಗಡೆ ಅವಿತಿರುವ ಪರಿಪೂರ್ಣತೆಯ ಅಭಿವ್ಯಕ್ತಿಯೇ ಆಗಿದೆ. ನಾವು ಅಂಕದ ಹಿಂದೆ ಬಿದ್ದು ಆ ಪರಿಪೂರ್ಣತೆಯನ್ನೇ ಹುದುಗಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳೋಣ. ನಾಳಿನ ಭಾರತವನ್ನು ಕಟ್ಟಬೇಕಾದರೆ ನಮಗೆ ಬೇಕಾಗಿರುವುದು ಶೇ.90ರಷ್ಟು ಅಂಕವಂತರಲ್ಲ ಬದಲಿಗೆ ಶೇ.100ರಷ್ಟು ಪ್ರಾಮಾಣಿಕ, ಕೌಶಲ್ಯವಂತ ಮನುಷ್ಯರು.
ಹಾಗಾಗಿ ಅವರನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಂಕದ ಹಣದುಬ್ಬರಕ್ಕೆ ಪರಿಹಾರ ಒಂದೇ, ಅದು ‘ಮೌಲ್ಯಮಾಪನದ ಪ್ರಾಮಾಣಿಕತೆ’. ಫೇಲಾಗುವ ಧೈರ್ಯವನ್ನು ಮಕ್ಕಳಿಗೆ, ಫೇಲ್ ಮಾಡುವ ಧೈರ್ಯವನ್ನು ಶಿಕ್ಷಕರಿಗೆ, ಮಗು ಫೇಲಾದರೆ ಒಪ್ಪಿಕೊಳ್ಳುವ ವಿಶಾಲತೆ ಯನ್ನು ಪೋಷಕರಿಗೆ ಕೊಡೋಣ. ಆಗ ಮಾತ್ರ ಪಾಸಾದ ಪ್ರತಿ ಮಕ್ಕಳೂ ನಿಜವಾಗಿ ‘ಪಾಸ್’ ಆಗುತ್ತವೆ.
ಈ ವ್ಯವಸ್ಥೆಯನ್ನು ಸರಕಾರ ಬದಲಾಯಿಸಲಿ ಅಂತ ಕಾಯುವುದು ಬೇಡ. ಈ ಬದಲಾವಣೆಯು ನಮ್ಮಿಂದ ಹಾಗೂ ನಿಮ್ಮಿಂದಲೇ ಶುರುವಾಗಲಿ. ಇವತ್ತಿಂದ ನಿಮ್ಮ ಮಗುವನ್ನು ‘ನೀನು - ಬರಬೇಕು’ ಅಂತ ಒತ್ತಾಯಿಸುವ ಬದಲು ‘ನೀನು ಬೆ ಆಗು’ ಅಂತ ಹಾರೈಸಿ. ಆಗ ಆ ಮಗು ಜೀವನದಲ್ಲಿ - ಬರುತ್ತೆ. ಅದೇ ನಿಜವಾದ ಶಿಕ್ಷಣ, ಅದೇ ನೈಜ ರಾಷ್ಟ್ರ ನಿರ್ಮಾಣ. ವಿಕಸಿತ ಭಾರತ 2047ರ ಕನಸು ನನಸಾಗುವುದು ಅರಿವಿನಿಂದ ಹೊರತು ಅಂಕಪಟ್ಟಿಯಿಂದಲ್ಲ ಎಂಬ ಸತ್ಯವನ್ನು ಈಗಲಾದರೂ ಅರಿಯೋಣ.