ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಸಂಘರ್ಷವಿಲ್ಲದ ಬದುಕೇ ಇಲ್ಲಿಲ್ಲ!

ಇವತ್ತಿನ ಮಕ್ಕಳು, ಹಿಂದೆ ಇವತ್ತಿನ ಮಟ್ಟದ ಸ್ಪರ್ಧೆ ಇರಲಿಲ್ಲ, ಅವತ್ತಿನವರ ಜೀವನ ಸುಲಭವಾಗಿತ್ತು, ಅವರ ಜೀವನ ಹೇಗೂ ಕಳೆದು ಹೋಯ್ತು. ಇವತ್ತು ಬದುಕು ಕಟ್ಟಿಕೊಳ್ಳುವುದು ಬಹಳ ಕಷ್ಟ ಎಂದಾಗ ಕೂಡ ನಾನು ಹೇಳುವುದು ಇದೆ ಮಾತು. ಎಲ್ಲಾ ಕಾಲಘಟ್ಟದಲ್ಲೂ ಅವತ್ತಿಗೆ ಆ ಕಷ್ಟಗಳು, ಪರಿಸ್ಥಿತಿ ವಿಷಮವಾಗೇ ಇದ್ದವು. ಅವರಿಗೆ ಅವತ್ತಿಗೆ ಅದೇ ದೊಡ್ಡ ಸಮಸ್ಯೆ ಎನ್ನಿಸಿರುತ್ತದೆ.

ವಿಶ್ವರಂಗ

ಇವುಗಳನ್ನ ಸುಮ್ಮನೆ ಊಹಿಸಿಕೊಳ್ಳಿ. ನೆಲದಲ್ಲಿ ಉತ್ತದೆ, ಬಿತ್ತದೆ ಹುಲುಸಾಗಿ ಫಸಲು ಬರಲಿ ಎಂದು ಬಯಸುವುದು. ಗುಡುಗು -ಸಿಡಿಲು ಮತ್ತು ಸದ್ದು ಗದ್ದಲವಿಲ್ಲದೆ ಮಳೆಯ ಸಿಹಿ ನೀರು ನಿಮ್ಮ ಮನೆಯ ಟ್ಯಾಂಕ್ ತುಂಬಿಸಲಿ ಎಂದು ಆಶಿಸುವುದು. ಯಾವುದೇ ರೀತಿಯ ಕಷ್ಟ, ನೋವು ಇಲ್ಲದೆ ನೀವು ಬಯಸಿದ್ದೇ ಆಗುವಂತಾಗುವುದು! ಇದ್ಯಾವುದೂ ಸಾಧ್ಯವಿಲ್ಲ. ಊಹಿಸಿಕೊಳ್ಳಿ ಎಂದು ಹೇಳಿದರೂ, ಇದು ಸಾಧ್ಯವಿಲ್ಲದ ಮಾತು ಎನ್ನುವ ಕಾರಣಕ್ಕೆ ಬಹುತೇಕರು ಊಹೆ ಮಾಡಿಕೊಳ್ಳುವ ಗೋಜಿಗೂ ಹೋಗಿರುವುದಿಲ್ಲ ಎನ್ನು ವುದು ಸತ್ಯ. ಇದರರ್ಥ ನೋ ಪೈನ್ ನೋ ಗೈನ್. ಸಂಘರ್ಷ ವಿಲ್ಲದ ಬದುಕೇ ಇಲ್ಲ! ಎಲ್ಲರೂ ಅವರವರ ಮಟ್ಟದಲ್ಲಿ ಸಂಘರ್ಷ ನಡೆಸೇ ಇರುತ್ತಾರೆ. ಸಂಶಯ ಬೇಡ.

ಮೇಲಿನ ಸಾಲುಗಳ ಹುಟ್ಟಿಗೆ ಕಾರಣ ಇತ್ತೀಚಿನ ದಿನಗಳಲ್ಲಿ ಎಲ್ಲಿಗೆ ಹೋಗಲಿ, ಯಾರ ಮಾತನ್ನೇ ಕೇಳಲಿ, ಅಲ್ಲೆ ಕೇಳಿ ಬರುವುದು ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ’ ಎನ್ನುವುದು. ಆವತ್ತಿನ ದಿನಗಳ ಬಗ್ಗೆ ಹೆಮ್ಮೆ, ಹೆಗ್ಗಳಿಕೆ ಜೊತೆಗೆ ಇವತ್ತಿನ ದಿನಗಳ ಬಗ್ಗೆ ಅವಹೇಳನದ ಮಾತುಗಳು, ಇವತ್ತಿಗೆ ಎಲ್ಲವೂ ಸುಲಭ ಎನ್ನುವ ರೀತಿಯ ಮಾತುಗಳು, ಇವತ್ತಿನ ಮಕ್ಕಳ ಬಗ್ಗೆಯಂತೂ ಇನ್ನಿಲ್ಲದ ರೀತಿಯ ನಿಕೃಷ್ಟ ಭಾವನೆಯ ಮಾತು ಗಳನ್ನು ಕೇಳುತ್ತಲೆ ಇರುತ್ತೇನೆ. ಈ ರೀತಿ ಮಾತನಾಡುವವರು ತೀರಾ ಜನ ಸಾಮಾನ್ಯರೇನೂ ಅಲ್ಲ. ಅವರ ಪ್ರೈಮ್ ಟೈಮಿನಲ್ಲಿ ಸಮಾಜದಲ್ಲಿ ಸಾಕಷ್ಟು ಮನ್ನಣೆ ಪಡೆದುಕೊಂಡವರು.

ಅಚ್ಚರಿ ಎನ್ನಿಸುವುದು ಈ ಕಾರಣಕ್ಕೆ ! ನಾವೆ ಸಾಮಾನ್ಯ ಜ್ಞಾನವನ್ನು ಮರೆತು ಮಾತಾಡಲು ಶುರು ಮಾಡು ಬಿಡುತ್ತೇವಲ್ಲ ಎನ್ನುವ ಕಾರಣಕ್ಕೆ ! ಸಾವಿರಾರು ವರ್ಷದ ಹಿಂದೆ ಕೂಡ ಮೇಲಿನ ಸಾಲಿನಲ್ಲಿ ಊಹಿಸಿಕೊಳ್ಳಿ ಎಂದದ್ದು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇವತ್ತಿಗೂ ಇಲ್ಲ. ಮುಂದಿನ ಸಾವಿರ ವರ್ಷ ಕಳೆದರೂ ಆಗುವುದಿಲ್ಲ. ಬದುಕು ಆಯಾ ಕಾಲಘಟ್ಟದಲ್ಲಿ ಒಂದಲ್ಲ ಒಂದು ಸಮಸ್ಯೆಯನ್ನು ನಮ್ಮ ಮುಂದೆ ಇಡುತ್ತದೆ. ಪ್ರತಿ ಜನಾಂಗವೂ ಅದಕ್ಕೆ ಹೇಗೆ ಸಾಧ್ಯವೋ ಅಷ್ಟರಮಟ್ಟಿಗೆ ಆ ಸಮಸ್ಯೆಗಳನ್ನು ಎದುರಿಸುವ, ಪರಿಹರಿಸುವ ಪ್ರಯತ್ನ ಪಡುತ್ತಲೆ ಬಂದಿದೆ.

ಇದನ್ನೂ ಓದಿ: Rangaswamy Mookanahally Column: ಬಂಡವಾಳ ಹೂಡಿದವರಿಗಿಲ್ಲಿ ಬೆಲೆಯಿಲ್ಲ !

ಇವತ್ತಿನ ಮಕ್ಕಳು, ಹಿಂದೆ ಇವತ್ತಿನ ಮಟ್ಟದ ಸ್ಪರ್ಧೆ ಇರಲಿಲ್ಲ, ಅವತ್ತಿನವರ ಜೀವನ ಸುಲಭ ವಾಗಿತ್ತು, ಅವರ ಜೀವನ ಹೇಗೂ ಕಳೆದು ಹೋಯ್ತು. ಇವತ್ತು ಬದುಕು ಕಟ್ಟಿಕೊಳ್ಳುವುದು ಬಹಳ ಕಷ್ಟ ಎಂದಾಗ ಕೂಡ ನಾನು ಹೇಳುವುದು ಇದೆ ಮಾತು. ಎಲ್ಲಾ ಕಾಲಘಟ್ಟದಲ್ಲೂ ಅವತ್ತಿಗೆ ಆ ಕಷ್ಟಗಳು, ಪರಿಸ್ಥಿತಿ ವಿಷಮವಾಗೇ ಇದ್ದವು. ಅವರಿಗೆ ಅವತ್ತಿಗೆ ಅದೇ ದೊಡ್ಡ ಸಮಸ್ಯೆ ಎನ್ನಿಸಿರು ತ್ತದೆ.

ಇವತ್ತಿನ ಮಕ್ಕಳಿಗೆ ಅವಕಾಶ ಹೆಚ್ಚಿದೆ. ಟೆಕ್ನಾಲಜಿ ಬೆಳೆದಿದೆ, ಸಾಕಷ್ಟು ಶ್ರೀಮಂತಿಕೆ ಬಂದಿದೆ. ಹೀಗಾಗಿ ಇವತ್ತಿನ ಮಕ್ಕಳ ಬದುಕು ಸುಲಭ ಎನ್ನುವಾಗ ಕೂಡ ಮತ್ತದೇ ಮಾತು ಹೇಳ ಬಯಸು ತ್ತೇನೆ. ಎಲ್ಲಾ ಕಾಲದಲ್ಲೂ ಒಂದಲ್ಲ ಒಂದು ಸಮಸ್ಯೆ ಮತ್ತು ಅವಕಾಶ ಇದ್ದೇ ಇರುತ್ತದೆ. ನಾವು ಹೇಗೆ ಅವುಗಳಿಗೆ ಸ್ಪಂದಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಬದುಕು ಯಾವ ತಿರುವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ನಿರ್ಧಾರವಾಗುತ್ತದೆ.

ಮೊನ್ನೆ ಹಿರಿಯರೊಬ್ಬರು, ಹಿಂದೆ ನಾವು ಬರೆಯುವುದು ಹೆಮ್ಮೆಯ ವಿಷಯವಾಗಿತ್ತು. ಅದು ಪತ್ರಿಕೆಯಲ್ಲಿ ಪ್ರಕಟವಾದರೆ ಅದೆಷ್ಟು ಖುಷಿ ಸಿಗುತ್ತಿತ್ತು. ಇವತ್ತಿಗೆ ಈ ಸೋಶಿಯಲ್ ಮೀಡಿಯಾ ಬಂದು ಎಲ್ಲರೂ ಬರಹಗಾರರೇ ಆಗಿದ್ದಾರೆ. ಪತ್ರಿಕೆಗಳಿಗೆ ಬರೆಯುವವರು ಕಡಿಮೆಯಾಗಿದ್ದಾರೆ. ಎಲ್ಲರೂ ಅವರಿಗೆ ಅನ್ನಿಸಿದ್ದು ಬರೆದು ತಮ್ಮ ಗೋಡೆಯ ಮೇಲೆ ಅಂಟಿಸಿ ಬಿಡುತ್ತಾರೆ.

71 R

ಹಿಂದೆ ಸಿಗುತ್ತಿದ್ದ ಆ ಆನಂದ ಈಗೆಲ್ಲಿ ಸಿಗಬೇಕು? ಪ್ರಥಮ ಲೇಖನ ಪ್ರಕಟವಾದಾಗಿನ ಖುಷಿ , ಮೊದಲ ಮುಖಪುಟ ಲೇಖನ ಬಂದಾಗಿನ ಖುಷಿ, ಇವೆಲ್ಲ ಇವತ್ತಿನ ತಲೆಮಾರಿನವರಿಗೆ ಲಭ್ಯವಾಗು ತ್ತಿಲ್ಲ ಎನ್ನುವ ಮಾತನ್ನು ಆಡಿದ್ದರು. ಸೋಶಿಯಲ್ ಮೀಡಿಯಾವನ್ನು ಬಹುತೇಕರು ನೋಡು ವುದೇ ಹೀಗೆ. ಆದರೆ ಸೋಶಿಯಲ್ ಮೀಡಿಯಾ ನನ್ನ ಪಾಲಿಗೆ ವರದಾನ. ಗಮನಿಸಿ ನೋಡಿ, ಕೇವಲ ಹದಿನೈದು ಅಥವಾ ಇಪ್ಪತ್ತು ವರ್ಷದ ಹಿಂದೆ ಒಂದು ಲೇಖನ ಬರೆದು ಕಳಿಸಿದರೆ ಅದು ಸ್ವೀಕಾರವಾಯ್ತಾ ಇಲ್ಲವಾ ಎನ್ನುವ ಉತ್ತರ ಕೂಡ ಬರುತ್ತಿರಲಿಲ್ಲ.

ಕೆಲವೊಮ್ಮೆ ನಾವು ಬರೆದ ವಿಚಾರ ಪ್ರಕಟಿಸುವ ವೇಳೆಗೆ ಹಳಸಲಾಗಿ ಬಿಡುತ್ತಿತ್ತು. ಪತ್ರಿಕೆಯಲ್ಲಿ ಬರೆಯುವುದು, ವಾರ ಪತ್ರಿಕೆ, ಮಾಸ ಪತ್ರಿಕೆಯಲ್ಲಿ ಬರೆಯುವುದು ಕೇವಲ ಒಂದು ವರ್ಗದ ಜನಕ್ಕೆ ಮಾತ್ರ ಸಾಧ್ಯವಾಗುತ್ತಿತ್ತು. ಇಲ್ಲವೇ ಪತ್ರಿಕೆಯಲ್ಲಿ ಪರಿಚಯದವರೊಬ್ಬರು ಇರಬೇಕಿತ್ತು. ಸೋಶಿಯಲ್ ಮೀಡಿಯಾ ಈ ಪ್ರಭಾವಲಯವನ್ನು ಒಡೆದು ಹಾಕಿದೆ. ಯಾರ ಬರಹದಲ್ಲಿ ಸತ್ವವಿದೆ, ಜನರಿಗೆ ಇಷ್ಟವಾಗುತ್ತೆ ಅವುಗಳು ಗೆಲ್ಲುತ್ತವೆ. ಇವತ್ತಿಗೆ ಯಾರು ಬೇಕಾದರೂ ಏನು ಬೇಕಾದರೂ ಆಗಬಹುದು ಎನ್ನುವ ಮಟ್ಟಕ್ಕೆ ಅದು ಎಲ್ಲರಿಗೂ ಸಮಾನ ಅವಕಾಶವನ್ನು ಕೊಟ್ಟಿದೆ. ಈಗ ಹೇಳಿ, ನಾವು ಹಿಂದಿನದನ್ನು ನೆನೆದು ಕೂರಬೇಕಾ ಅಥವಾ ಮುನ್ನಡೆಯಬೇಕಾ ?

ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಆವತ್ತಿನ ರೀತಿಯೇ ಚಂದವಿತ್ತು ಎನ್ನುವ ಮಾತನ್ನು ಯಾರೇ ಆಡಿದರೂ ಅದನ್ನು ನಾನು ಒಪ್ಪುವುದಿಲ್ಲ. ಬದಲಾವಣೆಯೇ ಬದುಕು. ಈ ರೀತಿಯ ಮಾತನ್ನು ಆಡಿದವರು ಇವತ್ತಿನ ಬದಲಾವಣೆಯನ್ನು ಒಪ್ಪಿಕೊಳ್ಳಲಾಗದವರು, ಇವತ್ತಿನ ಬದುಕನ್ನು ಅಪ್ಪಿಕೊಳ್ಳಲಾಗದವರು, ನಮ್ಮ ಪ್ರೈಮ್ ಮುಗಿಯಿತು ಎನ್ನುವ ಕಹಿ ಸತ್ಯವನ್ನು ಅರಗಿಸಿಕೊಳ್ಳ ಲಾಗದವರು ಎನ್ನುವುದು ನನ್ನ ಭಾವನೆ. ಆವತ್ತಿನ ಕಾಲ ಚಂದವಾಗಿದ್ದಿದ್ದರೆ ಎಲ್ಲರೂ ಅದ್ಭುತ ಜೀವನ ನಡೆಸಿರಬೇಕಿತ್ತು ಅಲ್ವಾ? ನೀವೇ ಗಮನಿಸಿ ನೋಡಿ. ಆವತ್ತಿನ ದಿನದಲ್ಲೂ ಸೋತವರ ಸಂಖ್ಯೆ, ಗೆದ್ದವರ ಸಂಖ್ಯೆಗಿಂತ ಹೆಚ್ಚಿತ್ತು. ಆವತ್ತಿಗೂ ಮೆಜಾರಿಟಿ ಜನ ಆವರೇಜ್ ಜೀವನವನ್ನು ಅಪ್ಪಿಕೊಂಡವರೇ ಆಗಿದ್ದರು.

ಇವತ್ತು ಎಲ್ಲವೂ ಸುಲಭ, ಅವಕಾಶ ಹೆಚ್ಚಾಗಿದೆ ಎನ್ನುವಾಗ ಕೂಡ ನೋಡಿ, ಮೆಜಾರಿಟಿ ಜನ ಆವರೇಜ್ ಜೀವನವನ್ನೇ ನಡೆಸುತ್ತಿದ್ದಾರೆ. ಯಾವತ್ತಿಗೂ ನಮ್ಮ ಹಣೆಬರಹ ಬದಲಿಸುವುದು ನಮ್ಮ ಕಲಿಕೆ ಮತ್ತು ಕ್ರಿಯೆಗೆ ನಾವು ನೀಡುವ ಪ್ರತಿಕ್ರಿಯೆ ಮಾತ್ರ. ಸಮಯ ಎನ್ನುವುದು ನಾವು ಸೃಷ್ಟಿ ಮಾಡಿಕೊಂಡದ್ದು. ನಾವು ಮಾಡುವ ತಪ್ಪಿಗೆ, ನಾವು ಗೆಲ್ಲದೇ ಇದ್ದಾಗ ನಾವು ಸಮಯವನ್ನು, ಬದಲಾವಣೆಯನ್ನು ದೂಷಿಸಲು ಶುರು ಮಾಡಿ ಬಿಡುತ್ತೇವೆ.

ಇನ್ನು ಇವತ್ತಿನ ಜನಾಂಗವನ್ನು, ಜೆನ್ ಜಿ ಮತ್ತು ಜೆನ್ ಆಲ್ಫಾಗಳನ್ನು ನಾವು ಯಾವ ಮಟ್ಟಿಗೆ ಅಳೆಯಲು, ಅವರಿಗೊಂದು ಹಣೆಪಟ್ಟಿ ಕಟ್ಟಲು ಶುರು ಮಾಡಿದ್ದೇವೆ ಎಂದರೆ ಕೆಲವೊಮ್ಮೆ ಆಶ್ವರ್ಯ ಮತ್ತು ವಿಷಾದ ಎರಡೂ ಉಂಟಾಗುತ್ತದೆ. ಇವತ್ತಿನ ಈ ಮಾಹಿತಿ ಯುಗದಲ್ಲಿ ಅವರು ಹೆಚ್ಚು ತುಲನೆಗೆ ತುತ್ತಾಗಿದ್ದಾರೆ. ಈ ಮೀಡಿಯಾಗಳಿಗೆ ಜೆನ್ ಜಿ ಎನ್ನುವ ಪದ ಬಹಳ ಇಷ್ಟವಾಗಿ ಬಿಟ್ಟಿದೆ. ಹೀಗಾಗಿ ಆ ಪದವನ್ನು ಇನ್ನಿಲ್ಲದಂತೆ ಬಳಸಿ ಅದನ್ನು ಸವೆಸಿ ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸವಕಲಾದ ಪದವೆಂದರೆ ಅದು ಜೆನ್ ಜಿ. ನನ್ನ ಪಾಲಿಗೆ ನನ್ನಪ್ಪನಿಗೆ ಇವತ್ತಿನ ವಿಚಾರ ತಿಳಿಯುವುದಿಲ್ಲ, ಆತ ಸಮಯಕ್ಕೆ ತಕ್ಕಂತೆ ಬದಲಾಗದ ವ್ಯಕ್ತಿ ಎನ್ನುವ ಭಾವನೆಯಿತ್ತು.

ನನ್ನಪ್ಪನಿಗೆ ಆತನ ಅಪ್ಪನ ಬಗ್ಗೆ ಕೂಡ ಹೀಗೆ ಅನ್ನಿಸಿತ್ತು! ಇವತ್ತು ನನ್ನ ಮಗಳಿಗೆ ನನ್ನ ಬಗ್ಗೆ ಹಾಗೆ ಅನ್ನಿಸುತ್ತಿದೆ. ಇದು ಜಗದ ನಿಯಮ. ನೂರಾರು, ಸಾವಿರಾರು ವರ್ಷದಿಂದ ನಡೆದು ಬರುತ್ತಿರು ವುದು. ಎಲ್ಲಾ ಕಾಲದಲ್ಲೂ ಆಜ್ಞಾಧಾರಿ ಮಕ್ಕಳು, ಅಪ್ಪ ಅಮ್ಮನಿಗೆ ಎದುರಾಡುವ ಮಕ್ಕಳು, ಸಮಾಜದ ಕಟ್ಟುಕಟ್ಟಲೆ ಮೀರಿ ಬದುಕನ್ನು ಕಟ್ಟಿಕೊಂಡವರು, ಸಮಾಜದ ಚೌಕಟ್ಟಿನೊಳಗೆ ಬದುಕು ಸವೆಸಿದವರು, ಎಲ್ಲರೂ ಸಿಗುತ್ತಾರೆ.

ನಮಗೆ ಇವತ್ತಿಗೆ ಹೊಸ ಪದ, ಹೊಸ ಆಟಿಕೆ ಸಿಕ್ಕಿಬಿಟ್ಟಿದೆ. ಜೆನ್ ಜಿ ಎನ್ನುವ ಪದ, ಆಟಿಕೆ. ಎಲ್ಲರೂ ಅವರ ಮೂಗಿನ ನೇರಕ್ಕೆ ಈ ಜನಾಂಗವನ್ನು ಬಳಸಿಕೊಂಡು ಹೇಳಿಕೆ ನೀಡಲು ಶುರು ಮಾಡಿದ್ದಾರೆ. ಇವತ್ತಿನ ಮೀಡಿಯಾ ಯಾವುದು ಟ್ರಾಕ್ಷನ್ ನೀಡುತ್ತೆ ಅದನ್ನೇ ಹೆಚ್ಚು ಬಳಸುತ್ತಾರೆ. ಡಿಜಿಟಲ್ ಯುಗದ ಮಹಾತ್ಮೆಯದು. ಹೀಗಾಗಿ ಪದೇಪದೆ ಕಿವಿಗೆ ಬೀಳುವ ಪದಗಳನ್ನು, ಅವುಗಳ ಡೆಫಿನಿಶನ್‌ ಗಳನ್ನು ನಾವು ನಿಜವೆಂದು ನಂಬಲು ಶುರು ಮಾಡುತ್ತೇವೆ. ನಿಜ ಏನೆಂದರೆ ಇವತ್ತಿನ ಈ ಕ್ರಿಯೆ ಹೊಸದೇನೂ ಅಲ್ಲ. ಅದಕ್ಕಿಟ್ಟಿರುವ ಹೆಸರು ಮಾತ್ರ ಹೊಸದು.

ನನ್ನ ಸ್ನೇಹಿತ ನಾಗೇಶ್ ಅವರ ಮಗ ಚಿರಂತನ್ ಭಾರ್ಗವ್ ಐಐಟಿ ಮದ್ರಾಸಿನಲ್ಲಿ ಪ್ರವೇಶ ಪಡೆದು ಕೊಂಡಿದ್ದಾನೆ. ಜೆಇಇ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್ಯಾಂಕಿಂಗ್ 565! ಮತ್ತು ಸಿಇಟಿ ಪರೀಕ್ಷೆ ಯಲ್ಲಿ 52ನೇ ರ್ಯಾಂಕ್‌ ಪಡೆದುಕೊಂಡಿದ್ದ. ಕೇವಲ ಒಂದು ತಿಂಗಳ ಹಿಂದೆ ನಾಗೇಶ್ ದಂಪತಿಗಳು ತಮ್ಮ ಮಗನನ್ನು ಮದ್ರಾಸಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದರು. ಅಲ್ಲಿನ ಐಐಟಿ ಮುಂದೆ ನಿಂತು ಮಗನೊಂದಿಗೆ ಫೋಟೋ ತೆಗೆದುಕೊಂಡು ಅದನ್ನು ನಾಗೇಶ್ ನನಗೆ ವಾಟ್ಸ್ಯಾಪ್ ಮಾಡಿದ್ದರು.

ಚಿರಂತನ್ ಜೊತೆಗೆ ನಾನು ಒಂದೆರಡು ತಾಸು ಮಾತಾಡಿದ್ದೇನೆ. ಐಐಟಿ ಜೆಇಇ ಪರೀಕ್ಷೆ ಸರಿಯಾಗಿ ನಡೆದಿಲ್ಲ, ಪೇಪರ್ ಲೀಕ್ ಇತ್ಯಾದಿ ಎಲ್ಲಾ ಗದ್ದಲಗಳ ನಡುವೆ ಕೂಡ ಈ ಹುಡುಗ ಸಮಾಜವನ್ನು, ವ್ಯವಸ್ಥೆಯನ್ನು ಒಂದು ಬಾರಿ ಕೂಡ ದೂಷಿಸಲಿಲ್ಲ. ನಾವು ಫೋಕಸ್ ಬಿಡಬಾರದು, ಪರಿಶ್ರಮ ನಿಲ್ಲಿಸಬಾರದು ಎನ್ನುವ ಈ ಹುಡುಗನ ಮನಸ್ಥಿತಿ ಅವನಿಗೆ ಗೆಲುವು ತಂದುಕೊಟ್ಟಿತ್ತು. ಅದ್ಯಾವುದೋ ಜಿರಳೆ ಪಾರ್ಟಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಸಭ್ಯವಾಗಿ ವರ್ತಿಸಿದರು ಎನ್ನುವ ಕಾರಣಕ್ಕೆ ಇಡೀ ಜೆನ್ ಜಿ ಸರಿಯಿಲ್ಲ ಎನ್ನುವ ಠರಾವು ಹೊರಡಿಸಲು ನಿಮಗೆ ಅನುಮತಿ ನೀಡಿದ್ದು ಯಾರು?

ವಾರದ ಹಿಂದೆ ನನ್ನ ಇನ್ನೊಬ್ಬ ಸ್ನೇಹಿತ ಕೀರ್ತಿಶ್ ಭಟ್ ಅವನ ಮಗ ದಿಗಂತನನ್ನು ಮೈಸೂರಿನ ಪ್ರಸಿದ್ಧ ಆರ್ಕಿಟೆಕ್ಟ್ ಕಾಲೇಜಿಗೆ ಸೇರಿಸಲು ಬಂದಿದ್ದ. ಕೀರ್ತಿಶ್ ದಂಪತಿಗಳು ಮಗನ ಸಮೇತ ಮನೆಗೆ ಬಂದಿದ್ದರು. ದಿಗಂತನೊಂದಿಗೆ ತಾಸು ಮಾತಾಡಿದೆ. ನಮ್ಮ ಗ್ರಹಿಕೆಯ ಜೆನ್ ಜಿ ಇವನಲ್ಲ ಎನ್ನಿಸಿಬಿಟ್ಟಿತು. ‌

ನಮ್ಮ ಗ್ರಹಿಕೆಗೆ ಆಹಾರ ಒದಗಿಸಿದ್ದು ಯಾರು? ಒಂದು ಪಾಪ್ಯೂಲರ್ ಅಭಿಪ್ರಾಯ ಹುಟ್ಟಿ ಕೊಂಡು ಬಿಟ್ಟರೆ ಅದನ್ನು ತಪ್ಪು ಎಂದು ಹೇಳುವುದು ಎಷ್ಟು ಕಷ್ಟ ಎನ್ನಿಸಿಬಿಟ್ಟಿತು. ಈ ಸಮಾಜ ಅದೆಷ್ಟು ಬೇಗ ಒಂದು ಅಳತೆಗೋಲನ್ನು ಹುಟ್ಟಿ ಹಾಕಿ ಬಿಡುತ್ತದೆ ಅಲ್ವಾ? ಅವರು ಹಾಕುವ ಗೀಟಿನ ಬದಿಗಿದ್ದವರು ಸರಿ. ಇಲ್ಲದವರೆ ಮಹಾಪಾಪಿಗಳು ಎನ್ನುವ ಹಣೆಪಟ್ಟಿಯನ್ನು ಅದೆಷ್ಟು ಬೇಗ ಹಚ್ಚಿ ಬಿಡುತ್ತೇವೆ ಅಲ್ವಾ ಎನ್ನಿಸಿ ಮನಸ್ಸು ಪಿಚ್ಚೆನ್ನಿಸಿತು.

ಭಾರ್ಗವ್ ಮತ್ತು ದಿಗಂತ್ ಇಬ್ಬರನ್ನು ಸಿಂಬಾಲಿಕ್ ಆಗಿ ಉದಾಹರಿಸಿದ್ದೇನೆ ಅಷ್ಟೇ. ಉಳಿದಂತೆ ನಾನು ಜೆನ್ ಜಿ ಬಗ್ಗೆ ವಕಾಲತ್ತು ವಹಿಸುತ್ತಿಲ್ಲ. ನನ್ನ ನಿಲುವು ಮೇಲಿನ ಸಾಲುಗಳಲ್ಲಿ ಹೇಳಿದಂತೆ ಸ್ಥಿರವಾಗಿದೆ. ಎಲ್ಲಾ ಕಾಲದಲ್ಲೂ ಎಲ್ಲಾ ರೀತಿಯ ಜನ ಇರುತ್ತಾರೆ. ಉತ್ತಮರ ಸಂಖ್ಯೆ ಯಾವತ್ತಿಗೂ ಕಡಿಮೆ. ಒಳ್ಳೆಯವರಾಗಿರುವುದು ಶ್ರಮ ಬೇಡುತ್ತೆ. ಅಷ್ಟೆ ಶ್ರಮ ಹಾಕಿದ ಮೇಲೂ ಒಳ್ಳೆಯತನಕ್ಕೆ ಗ್ಲಾಮರ್ ಇಲ್ಲದ ಜಗತ್ತು ಸೃಷ್ಟಿಸಿದ್ದೇವೆ. ಇದು ಕೂಡ ಯಾವತ್ತಿಗೂ ಸತ್ಯ. ಹೀಗಾಗಿ ಉತ್ತಮರ ಸಂಖ್ಯೆ ಎಂದಿಗೂ ಕಡಿಮೆ. ಸಮಾಜದ ಅಳತೆಗೋಲಿಗೆ ಇಷ್ಟೊಂದು ಮಹತ್ವ ನಾವು ಕೊಡಬೇಕಿಲ್ಲ. ಸಮಾಜ ನೀಡುವ ಡೆಫಿನಿಷನ್ ನಾವು ಒಪ್ಪಿಕೊಳ್ಳಬೇಕಿಲ್ಲ ಎನ್ನುವುದು ನನ್ನ ಬದುಕಿನ ರೀತಿ.

ಬದುಕುತ್ತಿಲ್ಲವೇ ನಾನು ಬದುಕುತ್ತಾನೆ ಹಾಗೆ ಅವನು ಎನ್ನುವ ಮನಸ್ಥಿತಿ ನಾವು ಬದಲಾಯಿಸಿ ಕೊಳ್ಳಬೇಕು. ಹೊಸ ತಲೆಮಾರಿನ ಹೊಸ ಪ್ರಯತ್ನಗಳಿಗೆ ನಾವು ಕಿವಿಯಾಗಬೇಕು. ಬೆಂಬಲವಾಗಿ ನಿಲ್ಲಬೇಕು. ಇವತ್ತಿನ ಮಕ್ಕಳ ಮುಂದೆ ಇರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ನಾವು ಏಣಿಯಾಗಬೇಕು. ಹಿಂದಿದ್ದ ಬಡತನ, ಹಸಿವು ಇವತ್ತಿಗಿಲ್ಲ ಎನ್ನುವುದು ಸತ್ಯವಾದರೂ, ಇವತ್ತಿನ ಮಕ್ಕಳ ಮುಂದೆ ಕೂಡ ಬೇರೆ ರೀತಿಯ ಸಂಘರ್ಷವಿದೆ ಎನ್ನುವುದನ್ನು ನಾವು ಮರೆಯಬಾರದು.

ನಮ್ಮ ಮಕ್ಕಳ ಬಗ್ಗೆ ನಾವೇ ತುಚ್ಛವಾಗಿ ಮಾತಾಡುವುದು ಮೊದಲು ನಿಲ್ಲಿಸಬೇಕು. ಪ್ರತಿ ತಲೆಮಾರು ಕೂಡ ಹಿಂದಿನ ತಲೆಮಾರಿಗಿಂತ ಹೆಚ್ಚು ತಿಳುವಳಿಕೆ ಹೊಂದಿದವರಾಗಿzರೆ ಎನ್ನುವುದು ಮರೆಯ ಬಾರದು. ಆ ನಿಟ್ಟಿನಲ್ಲಿ ಇವತ್ತಿನ ಜೆನ್ ಜಿ ಮತ್ತು ಜೆನ್ ಆಲಾ ಭವಿಷ್ಯ ಬರೆಯುವ ಪಯಣಿಗರು. ನಿಮ್ಮ ಮನೆಯಲ್ಲಿ ಜೆನ್ ಜಿ ಅಥಾವ ಆಲ್ಫಾ ಇದ್ದರೆ ಅವರಲ್ಲಿ ನೀವೂ ಒಬ್ಬರಾಗಿ, ಬದುಕು ಸುಂದರ ಎನ್ನಿಸದಿದ್ದರೆ ಆಗ ಹೇಳಿ.

ರಂಗಸ್ವಾಮಿ ಎಂ

View all posts by this author