Rangaswamy Mookanahally Column: ಬಂಡವಾಳ ಹೂಡಿದವರಿಗಿಲ್ಲಿ ಬೆಲೆಯಿಲ್ಲ !
ಹತ್ತನೇ ತರಗತಿ ಕೂಡ ಪಾಸಾಗದ ಹುಡುಗರು ಲಕ್ಷಾಂತರ ಬಂಡವಾಳ ಹೂಡಿದವರ ಹಣೆಬರಹ ವನ್ನು ಬರೆಯುತ್ತಾರೆ. ಮೊದಲೇ ಹೇಳಿದಂತೆ ಮೇಲ್ನೋಟದ ಹೋಟೆಲ್ ಉದ್ಯಮ ಕಂಡು ಕೈ ಖಾಲಿ ಮಾಡಿ ಕೊಂಡವರ ಕಥೆ ಬಹಳಷ್ಟಿದೆ. ಮಾಲೀಕರಾದವರು ಒಂದು ತಾಸು ಅತ್ತಿತ್ತ ಅಲುಗಾಡಿದರೂ ಸಾಕು, ಹಳೆ ಬಿಲ್ಲುಗಳು ಮತ್ತೆ ಮತ್ತೆ ಪುನರಾವರ್ತನೆ ಆಗುತ್ತವೆ. ನಿಖರವಾಗಿ ಎಷ್ಟು ಉತ್ಪಾದಿಸಿದೆವು ಎಷ್ಟು ಮಾರಾಟವಾಯ್ತು ಎಂದು ಲೆಕ್ಕ ಇಡುವುದು ಹೋಟೆಲ್ ಇಂಡಸ್ಟ್ರಿಯಲ್ಲಿ ಸುಲಭವಲ್ಲ!
-
ವಿಶ್ವರಂಗ
ಭಾರತಕ್ಕೆ ವರ್ಷದಲ್ಲಿ ಮೂರು ಬಾರಿಯಾದರೂ ಭೇಟಿ ನೀಡುವುದು ಎರಡು ಸಾವಿರದ ಇಸವಿ ಯಿಂದ ಎರಡು ಸಾವಿರದ ಹದಿನೆಂಟನೇ ಇಸವಿಯವರೆಗೆ ಅಲಿಖಿತ ನಿಯಮವಾಗಿತ್ತು. ತಿಂಗಳು ಅಥವಾ ಅದಕ್ಕಿಂತ ಕಡಿಮೆ ಸಮಯಕ್ಕೆ ಭಾರತಕ್ಕೆ ಭೇಟಿ ನೀಡಿದಾಗೆ ಸಮಯ ಸಾಲದು ಎನ್ನುವ ಮನೋಭಾವ ಉಂಟಾಗುತ್ತಿತ್ತು. ಗೆಳೆಯರ ಜೊತೆ ಇಲ್ಲಿನ ಬದಲಾವಣೆಗಳನ್ನು ಕುರಿತು ಮಾತಾಡು ತ್ತಿದ್ದೆ. ಆರು ತಿಂಗಳಲ್ಲಿ ಇಲ್ಲಿನ ಚಿತ್ರಣಗಳು ಬದಲಾಗಿರುತ್ತಿದ್ದವು.
ಯೂರೋಪಿನಲ್ಲಿ ವರ್ಷಗಳು ಕಳೆದರೂ ಯಾವ ಬದಲಾವಣೆ ಕೂಡ ಆಗುತ್ತಿರಲಿಲ್ಲ. ನೀವು ನಂಬುವುದಿಲ್ಲ, ಹತ್ತಾರು ವರ್ಷದಲ್ಲಿ ಕೆಲವೇ ಕೆಲವು ಯುರೋ ಸೆಂಟುಗಳು ಬೆಲೆಯಲ್ಲಿ ಏರಿಕೆ ಯಾದರೆ ಅದು ಹೆಚ್ಚು ಎನ್ನುವಂತೆ ಜನ ಮಾತಾಡಿಕೊಳ್ಳುತ್ತಿದ್ದರು. ಅಲ್ಲಿನ ವೇತನವೂ ಅಷ್ಟೇ ವರ್ಷಕ್ಕೆ ಎರಡು ಅಥವಾ ಮೂರು ಪ್ರತಿಶತ ಏರಿಕೆ ಕಂಡರೆ ಹೆಚ್ಚು!
ಕೆಲವು ವರ್ಷಗಳು ಅದೂ ಇಲ್ಲ. ಕಾರಣ ಹಣದುಬ್ಬರ ಎನ್ನುವುದು ಅಷ್ಟು ನಿಯಂತ್ರಣದಲ್ಲಿತ್ತು. ಕರೋನೋತ್ತರ ಅಲ್ಲಿನ ಬದುಕು ಕೂಡ ಮೂರಾಬಟ್ಟೆಯಾಗಿದೆ ಎನ್ನುವುದು ಕೂಡ ಅಷ್ಟೇ ಸತ್ಯ. ಇರಲಿ. ಹೀಗೆ ಭಾರತಕ್ಕೆ ರಜಕ್ಕೆ ಬಂದಾಗೆ ಇಲ್ಲಿನ ಮಿತ್ರರು ಸಮಾಜ ಅಭಿವೃದ್ಧಿ ಹೊಂದುತ್ತಾ ಹೇಗೆ ನೈತಿಕತೆ ಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದರ ಬಗ್ಗೆ ಚರ್ಚೆಯಾಗುತ್ತಿತ್ತು.
ನನಗೆ - ಹ್ಯಾಂಡ್ ಅನುಭವವಿರದ ಕಾರಣ ಅವರು ಹೇಳಿದ್ದು ನನ್ನ ಪಾಲಿಗೆ ಕಥೆಯಂತೆ ಕೇಳಿಸುತ್ತಿತ್ತು. ರಜಕ್ಕೆ ಬಂದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ ಅಲ್ಲವೇ? ಹೀಗೆ ಒಮ್ಮೆ ನನ್ನ ತೀರಾ ಪರಿಚಯದವರು ಶುರು ಮಾಡಿದ್ದ ಆಯುರ್ವೇದ ಸೆಂಟರಿನಲ್ಲಿ ಅಭ್ಯಂಜನ ಸಹಿತ ಅನೇಕ ಕ್ರಿಯೆಗಳನ್ನು ಮಾಡಿಸಿಕೊಳ್ಳಲು ಹೋಗಿದ್ದೆ. ಅದೊಂದು ದೊಡ್ಡ ಘಟಕ. ಎರಡು ಅಥವಾ ಮೂರು ಸಾವಿರ ಚದರ ಅಡಿಯ ಶುಚಿಯಾದ ಸೆಂಟರ್. ಹತ್ತಾರು ಕೆಲಸಗಾರರು ಅಲ್ಲಿದ್ದರು. ಈ ಉದ್ದಿಮೆ ಶುರುಮಾಡಿದ್ದ ನನ್ನ ಪರಿಚಯಸ್ಥ ದಂಪತಿಗಳು ಆಯುರ್ವೇದ ವೈದ್ಯರು.
ಇದನ್ನೂ ಓದಿ: Rangaswamy Mookanahally Column: ಬೆಕ್ಕಿನ ಕೊರಳಿಗೆ ಗಂಟು ಕಟ್ಟುವವರಾರು ?
ದೇಹಕ್ಕೆ ಘಮ್ಮೆನಿಸುವ ತೈಲವನ್ನು ಹಾಕಿ ಮಸಾಜ್ ಮಾಡುತ್ತಿದ್ದರು. ಅದು ದೇಹಕ್ಕೆ ಹಿತವೆನ್ನಿಸು ತ್ತಿತ್ತು. ಮಸಾಜ್ ಮಾಡುವ ವ್ಯಕ್ತಿ ಹದಿನೈದು ನಿಮಿಷದ ನಂತರ ‘ಸಾರ್, ಇದು ನನ್ನ ಕಾರ್ಡ್, ನೀವು ಫೋನ್ ಮಾಡಿ ಸಾಕು. ನಿಮ್ಮ ಮನೆಗೆ ಬಂದು ಮಸಾಜ್ ಮಾಡುತ್ತೇನೆ. ಇಲ್ಲಿ ಸಿಕ್ಕ ಸೇವೆಯ ಗುಣಮಟ್ಟವನ್ನೇ ನೀಡುತ್ತೇನೆ, ಬಟ್ ಇದರ ಅರ್ಧ ದುಡ್ಡಿಗೆ!’ ಎನ್ನುವ ಆಮಿಷವನ್ನು ಒಡ್ಡಿದ್ದರು.
ನಾನು ಹೆಚ್ಚು ಮಾತಾಡದೆ ಆತನ ಕಾರ್ಡ್ ಇಟ್ಟುಕೊಂಡು ಸುಮ್ಮನಾದೆ. ಒಂದೆರಡು ದಿನದ ನಂತರ ಆ ದಂಪತಿಗಳೊಂದಿಗೆ ಹೋಟೆಲಿನಲ್ಲಿ ಕುಳಿತು ಮಾತಾಡುತ್ತಾ ನಡೆದ ಘಟನೆ ವಿವರಿಸಿದೆ. ಅವರಿಗೆ ಆಶ್ಚರ್ಯವಾಗಲೇ ಇಲ್ಲ ಎನ್ನುವುದು ನನಗೆ ಆಶ್ಚರ್ಯವಾಯ್ತು! ಎಷ್ಟು ಜನರನ್ನು ನಾವು ಕೆಲಸದಿಂದ ತೆಗೆಯೋಣ? ಮುಕ್ಕಾಲು ಪಾಲು ಜನ ಕೆಲಸಗಾರರು ನಮ್ಮ ಫೀಲ್ಡ್ʼನಲ್ಲಿ ಇರುವುದೇ ಹೀಗೆ ಎಂದರು. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ಲಾಭ ಅಥವಾ ನಷ್ಟದ ಹೊಣೆಯನ್ನು ಹೊತ್ತು, ಮಾಸಿಕ ಲಕ್ಷ ರೂಪಾಯಿಗೂ ಹೆಚ್ಚಿನ ಬಾಡಿಗೆ ತೆತ್ತು, ಕೆಲಸಗಾರರ ವೇತನ ನೀಡಿ ಉಳಿದರೆ ಉಂಟು, ಇಲ್ಲವಾದಲ್ಲಿ ಮುಂದಿನ ತಿಂಗಳು ಒಳ್ಳೆಯದಾಗುತ್ತೆ ಎನ್ನುವ ಭರವಸೆಯಲ್ಲಿ ಬದುಕುವ ಅವರನ್ನು ಕಂಡು ಕರುಳು ಚುರ್ ಎಂದಿತು.
ಬಂಡವಾಳ ಹೂಡಿ, ಉದ್ದಿಮೆಯ ಜೊತೆಗೆ ಬರುವ ಎಲ್ಲಾ ಅಪಾಯಗಳನ್ನು ಎದುರಿಸಲು ಸಿದ್ಧರಾಗಿರುವ ಜೊತೆಗೆ ವೇತನ ನೀಡಿ ಕೂಡ ಕೆಲಸಗಾರರ ಮರ್ಜಿ ಮೇಲೆ ಬದುಕು ನಿಂತಿರುತ್ತೆ. ಏನು ಮಾಡುವುದು ನಮ್ಮ ಫೀಲ್ಡ್ ಇರುವುದೇ ಹೀಗೆ ಎಂದು ನಿಟ್ಟುಸಿರು ಬಿಟ್ಟರವರು. ನನ್ನಮ್ಮನ ಎರಡೂ ಕಾಲಿನ ಚಿಪ್ಪು ರಿಪ್ಲೇಸ್ ಮಾಡಿ ಅದ್ಯಾವುದೂ ಲೋಹವನ್ನು ಅಳವಡಿಸಿದ್ದರು. ಎರಡು ಅಥವಾ ಮೂರು ತಿಂಗಳು ಫಿಸಿಯೋಥೆರೆಪಿ ಕಡ್ಡಾಯ ಎಂದಿದ್ದರು. ಅವರ ಆಸ್ಪತ್ರೆಯಿಂದ ಒಬ್ಬರನ್ನು ವಾರದಲ್ಲಿ ಮೂರು ದಿನ ಕಳಿಸುತ್ತಿದ್ದರು. ಮಿಕ್ಕ ದಿನ ಅವರು ಹೇಳಿಕೊಟ್ಟಿದ್ದನ್ನು ಮನೆಯಲ್ಲಿ ಸ್ವತಃ ಮಾಡಲು ಆಜ್ಞಾಪಿಸಿದ್ದರು. ಆಸ್ಪತ್ರೆಯವರು ಅಂದಿಗೆ ಗಂಟೆಗೆ ಎಂಟು ನೂರು ರೂಪಾಯಿ ಶುಲ್ಕ ವಿಧಿಸಿದ್ದರು. ಮೊದಲ ದಿನವೇ ಯಾವುದೇ ಸಂಕೋಚವಿಲ್ಲದೆ, ‘ಈ ವಾರ ಮೂರು ಕ್ಲಾಸು ತೆಗೆದುಕೊಳ್ಳಿ ಸಾಕು.
ಮುಂದಿನ ವಾರದಿಂದ ಸಂಜೆಯ ಮೇಲೆ ಬರುತ್ತೇನೆ, ಗಂಟೆಗೆ ನಾಲ್ಕುನೂರು ರೂಪಾಯಿ ಕೊಟ್ಟರೆ ಸಾಕು’ ಎನ್ನುವ ಆಫರ್ ನೀಡಿದ್ದನಾತ! ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ ಆಸ್ಪತ್ರೆ ಯವರ ಪಾಡೇನು? ವ್ಯವಸ್ಥೆಯ ಒಳಗಿದ್ದು ಇನ್ನೊಂದು ಪರ್ಯಾಯ ವ್ಯವಸ್ಥೆ ಸೃಷ್ಟಿಸಿಕೊಳ್ಳುವ ನಮ್ಮ ಜನರನ್ನು ಕಂಡು ಬೇಸರ ಮೂಡಿತು. ಬಂಡವಾಳ ಹೂಡಿದವರು ಗೆದ್ದರೆ, ಹಣ ಮಾಡಿ ಕೊಂಡರೆ ಅವರನ್ನು ‘ಲೂಟಿಕೋರ’ ಎನ್ನುವಂತೆ ನಮ್ಮ ಸಮಾಜ ನೋಡುತ್ತದೆ. ಅಪಾಯ ತೆಗೆದುಕೊಳ್ಳಲು ಧೈರ್ಯವಿಲ್ಲದೆ ವೇತನಕ್ಕೆ ಕೆಲಸ ಮಾಡುತ್ತಾ, ಪರ್ಯಾಯ ವ್ಯವಸ್ಥೆ ಸೃಷ್ಟಿಸಿ ಕೊಂಡು ಹಣ ಮಾಡಿಕೊಳ್ಳುವವರನ್ನು ಯಾರೂ ಲೂಟಿಕೋರ ಎನ್ನುವುದಿಲ್ಲ!
ಇವತ್ತಿಗಿದು ಅತಿ ಸಾಮಾನ್ಯ. ನನ್ನ ಸ್ನೇಹಿತರೊಬ್ಬರು ಕೋಟ್ಯಂತರ ಹಣ ಹೂಡಿಕೆ ಮಾಡಿ ಹೋಟೆಲ್ ತೆರೆದಿದ್ದರು. ತಿಂಗಳ ಆರಂಭದಲ್ಲಿ ನಿದ್ದೆಯೇ ಬರುವುದಿಲ್ಲ ಎನ್ನುತ್ತಿದ್ದರು. ಏಕೆ? ಏನಾಯ್ತು? ಎನ್ನುವ ನನ್ನ ಪ್ರಶ್ನೆಗೆ ಉತ್ತರ ಇಲ್ಲಿನ ವ್ಯವಸ್ಥೆಯ ಬಗ್ಗೆ ಇನ್ನಷ್ಟು ಬೇಸರ ಮೂಡಿಸಿತ್ತು. ಐದು ಅಥವಾ ಆರನೇ ತಾರೀಕಿನಲ್ಲಿ ವೇತನ ನೀಡಬೇಕು. ಲಾಭ ಅಥವಾ ನಷ್ಟ ಅದನ್ನು ಯಾರೂ ಕೇಳುವುದಿಲ್ಲ. ಅದೇ ಸಮಯದಲ್ಲಿ ಬಾಡಿಗೆ, ಕರೆಂಟು, ನೀರು ಇತ್ಯಾದಿ ಖರ್ಚು ಗಳು ಸಿದ್ಧವಾಗಿರುತ್ತವೆ. ವಾರಕ್ಕೊಮ್ಮೆ ಗ್ಯಾಸಿನವನು ಬಂದು ನಿಲ್ಲುತ್ತಾನೆ. ಹದಿನೈದರ ವರೆಗೆ ಪಿಎಫ್, ಇಎಸ್‌ಐ ಕಟ್ಟಬೇಕು.
ಇಪ್ಪತ್ತಕ್ಕೆ ಜಿಎಸ್‌ಟಿ! ಕೊನೆಯ ಐದಾರು ದಿನದ ವ್ಯಾಪಾರವೇ ನಮ್ಮ ಲಾಭ. ಅದನ್ನು ಕೂಡ ನಾವು ತೆಗೆದುಕೊಳ್ಳಲು ಆಗುವುದಿಲ್ಲ. ರೊಟೇಷನ್ ಆಗುತ್ತಿರುತ್ತದೆ ಅಷ್ಟೇ ಎಂದಿದ್ದರವರು. ಇದೆಲ್ಲವನ್ನೂ ನೀವು ಲೆಕ್ಕ ಹಾಕಿ ನಂತರವೇ ಪದಾರ್ಥದ ಬೆಲೆಯನ್ನು ನಿರ್ಧರಿಸುತ್ತೀರಾ ಅಲ್ಲವೇ? ಹೀಗಾಗಿ ಇದರ ಬಗ್ಗೆ ಗೊಣಗಾಟವೇಕೆ? ಎನ್ನುವ ಪ್ರಶ್ನೆಯನ್ನು ಅವರಿಗೆ ಕೇಳಿದ್ದೆ. ಅಡುಗೆ ಭಟ್ಟ , ಕಾಫಿ ಮೇಕರ್ ಮತ್ತು ದೋಸೆ ಭಟ್ಟರ ನಿರಂತರ ಬ್ಲಾಕ್‌ಮೇಲ್ ಕಥೆ ಬೆಚ್ಚಿ ಬೀಳಿಸಿತು.
ಸದಾ ಅಡ್ವಾ, ವೇತನ ಹೆಚ್ಚಳಕ್ಕೆ ನಿಲ್ಲದ ಬೇಡಿಕೆ. ಹೆಚ್ಚಿಸದಿದ್ದರೆ ಮರುದಿನ ಯಾವ ಸೂಚನೆ ಯನ್ನು ನೀಡದೆ ಕೆಲಸಕ್ಕೆ ಗೈರಾಗುವುದು, ಅಡುಗೆ ಕೆಡಿಸುವುದು, ಐದಾರು ಹುಡುಗರ ಜೊತೆ ಗ್ಯಾಂಗ್ ಅಪ್ ಆಗಿ ಒಟ್ಟಿಗೆ ಕೆಲಸ ಬಿಡುವುದು ಈ ಇಂಡಸ್ಟ್ರಿಯಲ್ಲಿ ಸಾಮಾನ್ಯ ಎನ್ನುವ ಅವರ ಗೋಳು ಅಚ್ಚರಿ ತರಿಸಿತ್ತು.
ಕೆಲಸಗಾರರ ಕೊರತೆ ಎನ್ನುವುದು ಹೋಟೆಲ್ ಮಾಲೀಕರ ನಿಲ್ಲದ ನೋವು. ಹೋಟೆಲ್ ಉದ್ಯಮದ ಆಳ ಅರಿವು ಇದ್ದವರು ಹೇಗೋ ಬಚಾವಾಗುತ್ತಾರೆ. ಹೋಟೆಲ್ ಇಂಡಸ್ಟ್ರಿಯಲ್ಲಿ ಬಹಳ ಲಾಭವಿದೆ ಎನ್ನುವ ಕನಸು ಹೊತ್ತು, ನಾನು ‘ಫ್ರೆಡ್ಡಿ’ ಹೀಗಾಗಿ ಹೋಟೆಲ್ ತೆಗೆದೆ ಎನ್ನುವ ಕಾರ್ಪೊರೇಟ್ ಕೆಲಸ ಬಿಟ್ಟು ಐದಾರು ತಿಂಗಳಲ್ಲಿ ಮಣ್ಣು ಮುಕ್ಕಿದ, ಸಾಲಗಾರರಾಗಿ ಬದಲಾದ ‘ಟೆಕ್ಕಿ’ಗಳ ಕಥೆ ಬರೆಯುತ್ತಾ ಹೋದರೆ ಅದೇ ಇನ್ನೊಂದು ಪುಸ್ತಕವಾದೀತು.
ಹತ್ತನೇ ತರಗತಿ ಕೂಡ ಪಾಸಾಗದ ಹುಡುಗರು ಲಕ್ಷಾಂತರ ಬಂಡವಾಳ ಹೂಡಿದವರ ಹಣೆಬರಹ ವನ್ನು ಬರೆಯುತ್ತಾರೆ. ಮೊದಲೇ ಹೇಳಿದಂತೆ ಮೇಲ್ನೋಟದ ಹೋಟೆಲ್ ಉದ್ಯಮ ಕಂಡು ಕೈ ಖಾಲಿ ಮಾಡಿ ಕೊಂಡವರ ಕಥೆ ಬಹಳಷ್ಟಿದೆ. ಮಾಲೀಕರಾದವರು ಒಂದು ತಾಸು ಅತ್ತಿತ್ತ ಅಲುಗಾಡಿದರೂ ಸಾಕು, ಹಳೆ ಬಿಲ್ಲುಗಳು ಮತ್ತೆ ಮತ್ತೆ ಪುನರಾವರ್ತನೆ ಆಗುತ್ತವೆ. ನಿಖರವಾಗಿ ಎಷ್ಟು ಉತ್ಪಾದಿಸಿದೆವು ಎಷ್ಟು ಮಾರಾಟವಾಯ್ತು ಎಂದು ಲೆಕ್ಕ ಇಡುವುದು ಹೋಟೆಲ್ ಇಂಡಸ್ಟ್ರಿಯಲ್ಲಿ ಸುಲಭವಲ್ಲ!
ಇನ್ನು ವಸ್ತುಗಳ ಖರೀದಿಯಲ್ಲಿ, ಗ್ಯಾಸಿನ ಬಳಕೆಯಲ್ಲಿ ಸೋರಿಕೆ ತಡೆಯುವುದು ಅಸಾಧ್ಯ. ಮೇಲೆ ಹೇಳಿದ ಘಟನೆಗಳು ಘಟಿಸಿ ಎಂಟ್ಹತ್ತು ವರ್ಷಗಳಾಗಿವೆ. ನಾನೂ ಭಾರತಕ್ಕೆ ವಾಪಸ್ಸು ಬಂದು ದಶಕವಾಗುತ್ತಿದೆ. ಇವತ್ತಿಗೆ ಭಾರತ ಬದಲಾಗಿದೆ. ಜಾಗತಿಕ ಮಟ್ಟದಲ್ಲಿ ತನ್ನದೇ ಸ್ಥಾನ ಪಡೆದು ಕೊಳ್ಳುತ್ತಿದೆ. ಕಳೆದ ಹನ್ನೆರಡು ವರ್ಷದಲ್ಲಿ ಭಾರತದ ಜಿಡಿಪಿ ದ್ವಿಗುಣವಾಗಿದೆ.
ಭಾರತದ ಯಶೋಗಾಥೆ ಇವತ್ತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ. ಈ ಹತ್ತು ವರ್ಷದಲ್ಲಿ ಇಲ್ಲಿನ ಬದುಕು ನನಗೂ ಸಾಕಷ್ಟು ಕೆರೆಯ ನೀರನ್ನು ಕುಡಿಸಿದೆ. ಬಹಳಷ್ಟು - ಹ್ಯಾಂಡ್ ಅನುಭವವನ್ನು ಕೂಡ ಧಾರೆಯೆರೆದಿದೆ. ನನ್ನ ಇನ್ನೊಬ್ಬರು ಉತ್ತಮ ಸ್ನೇಹಿತರು ಸ್ಟಾಕ್ ಮಾರ್ಕೆಟ್ ಬಗ್ಗೆ ಶಿಕ್ಷಣ ನೀಡುವ ಸಂಸ್ಥೆಯನ್ನು ಹೊಂದಿದ್ದಾರೆ.
ಕರ್ನಾಟಕದಲ್ಲಿ ಬರೋಬ್ಬರಿ 14 ಬ್ರಾಂಚುಗಳನ್ನು ಅವರು ಹೊಂದಿದ್ದಾರೆ. ಅವರ ಒಂದು ಬ್ರಾಂಚಿನಲ್ಲಿ ಪ್ರಥಮ ಒಂದೆರಡು ತಿಂಗಳು ಒಳ್ಳೆಯ ಅಡ್ಮಿಷನ್ ಆಗಿತ್ತು. ಆ ನಂತರ ನಿಧಾನವಾಗಿ ಕಡಿಮೆಯಾಗುತ್ತ, ಸೊನ್ನೆಗೂ ಬಂದು ನಿಂತಿತು. ನನ್ನ ಸ್ನೇಹಿತರಿಗೆ ಆಶ್ಚರ್ಯ. ಈ ನಗರದಲ್ಲಿ ವ್ಯಾಪಾರ ಹೆಚ್ಚಾಗುತ್ತದೆ ಎಂದುಕೊಂಡಿದ್ದೆ, ಹೀಗೇಕಾಯ್ತು? ನನ್ನ ಊಹೆ ಹೇಗೆ ತಪ್ಪಾಯ್ತು? ಎನ್ನುವ ಚಿಂತೆ.
ಅದೇನಾಗಿದೆ ನೋಡೋಣ ಎಂದು ಕೊಂಡು ಅಲ್ಲಿನ ಬ್ರಾಂಚ್ ಮುಖ್ಯಸ್ಥನಿಗೂ ಹೇಳದೆ ಅಲ್ಲಿಗೆ ಹೋಗಿದ್ದಾರೆ. ಮುಂದಿನ ವಿಚಾರ ಮಾತ್ರ ಮೇಲೆ ಹೇಳಿದ ಅಂಶಗಳ ಡಿಟ್ಟೋ ಕಾಪಿ! ಆ ಬ್ರಾಂಚ್ ಮುಖ್ಯಸ್ಥ ಬ್ರಾಂಚಿಗೆ ಬರುವ ವಿದ್ಯಾರ್ಥಿಗಳಿಗೆ ಇಲ್ಲಿ ಫೀಸ್ ಇಷ್ಟು. ಇಷ್ಟು ಕಟ್ಟಿದ ನಂತರವೂ ಇದನ್ನು ಕಲಿಸುವುದು ನಾನೇ, ಅಥವಾ ನನಗಿಂತ ಕಡಿಮೆ ಅನುಭವವಿರುವವರು, ಈ ಫೀಸಿನ ಅರ್ಧ ಕೊಡಿ ಸಾಕು ಸಂಜೆ ವೇಳೆಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತೇನೆ ಎನ್ನುವ ಪರ್ಯಾಯ ವ್ಯವಸ್ಥೆ ಕಟ್ಟಿಕೊಂಡಿದ್ದರು!
ಯಾವ ಮಟ್ಟಿಗೆ ಎಂದರೆ ಇಲ್ಲಿ ಅಡ್ಮಿಷನ್ ಪಡೆಯಬೇಕಾದ ನೂರಾರು ವಿದ್ಯಾರ್ಥಿಗಳಿಗೆ ಅವರೇ ಅವರ ಮನೆಯ ಕಾರಿನ ಶೆಡ್ಡಿನಲ್ಲಿ ಪಾಠ ಮಾಡುವ ಮಟ್ಟಕ್ಕೆ! ಜೇನು ಹಿಂಡಿದ ಮೇಲೆ ಕೈ ನೆಕ್ಕುವುದು ಬಿಡಿ, ಈ ಮಹಾಶಯ ಜೇನು ಗೂಡಿಗೇ ಕೈ ಹಾಕಿದ್ದರು. ಸಣ್ಣ ಉದ್ದಿಮೆದಾರರಿಗೆ ಬೇಕಾದ ಯಾವ ಸೌಲಭ್ಯವೂ ನಮ್ಮಲ್ಲಿಲ್ಲ. ಸರಕಾರಕ್ಕೆ ಅವರಿಂದ ತೆರಿಗೆ ವಸೂಲಾದರೆ ಸಾಕು. ಅಲ್ಲಿ ಕೆಲಸ ಮಾಡುವವರಿಗೆ ವೇತನ ಸಿಕ್ಕರೆ ಸಾಕು. ಬಂಡವಾಳ ಹೂಡಿ ಸಣ್ಣ ಉದ್ದಿಮೆ ಶುರು ಮಾಡಿದ ವ್ಯಕ್ತಿಯ ಬಗ್ಗೆ, ಆತನ ಧೈರ್ಯದ ಬಗ್ಗೆ, ಸಮಾಜಕ್ಕೆ ಆತ ನೀಡುತ್ತಿರುವ ಸೇವೆಯ ಬಗ್ಗೆ ಯಾರೂ ಮಾತಾಡು ವುದಿಲ್ಲ.
ಭಾರತದ ಆರ್ಥಿಕತೆಯ ನಲವತ್ತು ಪ್ರತಿಶತ ದೇಣಿಗೆ ನೀಡುವ ಸಣ್ಣ ಉದ್ದಿಮೆದಾರರ ಪರಿಸ್ಥಿತಿ ಬಗ್ಗೆ ಯಾರೂ ಮಾತಾಡುವುದಿಲ್ಲ. ಆತನ ವ್ಯಾಪಾರ ವೃದ್ಧಿಯಾದರೆ ಅದಕ್ಕೆ ತಕ್ಕಂತೆ ತೆರಿಗೆ ವಸೂಲಿ ಮಾಡುವ ಸರಕಾರ, ಆತನ ವ್ಯಾಪಾರ ಕುಸಿದಾಗ ಸಹಾಯಕ್ಕೆ ಬರುವುದಿಲ್ಲ. ಸಮಾಜವು ಗೆದ್ದವ ರನ್ನು ಮಾತ್ರ ಪೂಜಿಸುತ್ತದೆ. ಸೋತರೆ ‘ಯಾಕೆ ಬೇಕಿತ್ತು ಇಲ್ಲದ ಉಸಾಬರಿ’ ಎನ್ನುವ ದೊಡ್ಡ ವರ್ಗ ಒಂದು ಕಡೆ, ‘ಅಂಬಾನಿ ಆಗುತ್ತೇನೆ ಎಂದು ವ್ಯಾಪಾರ ಮಾಡಲು ಹೋಗಿದ್ದ ನೋಡು’ ಎಂದು ಕಿಚಾಯಿಸುವ ಇನ್ನೊಂದು ವರ್ಗ ಇನ್ನೊಂದು ಕಡೆ. ಗೆದ್ದರೆ ‘ಅವನಿಗೇನು ಲೂಟಿ ಹೊಡೆಯು ತ್ತಿದ್ದಾನೆ’ ಎನ್ನುವ ಖಾಯಂ ಡೈಲಾಗ್ ಇದ್ದೇ ಇರುತ್ತದೆ.
ಒಟ್ಟಾರೆ ಗೆದ್ದರೂ, ಸೋತರೂ ಬಂಡವಾಳ ಹೂಡಿವರಿಗೆ ಇಲ್ಲಿ, ಅಂದರೆ ಭಾರತದಲ್ಲಿ ಬೆಲೆಯಿಲ್ಲ! ಇದು ಕೇವಲ ಮೇಲೆ ಹೇಳಿದ ವ್ಯಾಪಾರಗಳಿಗೆ ಮಾತ್ರ ಸೀಮಿತವಲ್ಲ. ಇದು ಸರ್ವಾಂತರ್ಯಾಮಿ. ಇದಿಲ್ಲದ ಉದ್ಯಮವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದೇವೆ. ಇನ್ನೊಂದು ತಾಜಾ ಉದಾಹರಣೆ ಕೊಟ್ಟು ಮುಗಿಸುವೆ. ಕೆಲವು ದಿನಗಳ ಹಿಂದೆ ಭಾರತದ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ ಟಾಕ್ಸಿಕ್ ಚಿತ್ರ ಬಿಡುಗಡೆ ಯಾಯ್ತು.
ಚಿತ್ರದ ಗೆಲುವು, ಸೋಲಿನ ಬಗ್ಗೆ ಯಾವುದೇ ತಕರಾರಿಲ್ಲ. ಅದು ಸಹಜ. ಆದರೆ ನಾಲ್ಕು ನೂರು ಕೋಟಿ ರೂಪಾಯಿ ಬಂಡವಾಳ ಹೂಡಿ, ನೂರಾರು ಟೆಕ್ನಿಷಿಯನ್ಸ್, ಆರ್ಟಿಸ್ಟ್ʼಗಳು ಹಗಲು ರಾತ್ರಿ ಎನ್ನದೆ ಶ್ರಮಿಸಿ ಹೊಸ ಪ್ರಯತ್ನವನ್ನು ಮಾಡಿ ಅದನ್ನು ಪ್ರೇಕ್ಷಕರ ಮುಂದಿಟ್ಟರೆ ಮೊದಲ ದಿನವೇ ಸೋಶಿಯಲ್ ಮೀಡಿಯಾದಲ್ಲಿ ಇಡೀ ಸಿನೆಮಾವನ್ನು ಹರಿದಾಡಲು ಬಿಟ್ಟಿದ್ದರು !
ಪೈರೆಸಿ ಎನ್ನುವುದು ಬಹು ದೊಡ್ಡ ಪಿಡುಗಾಗಿದೆ. ಪ್ರಮಾಣ ಮಾಡಿ ಹೇಳುತ್ತೇನೆ, ಅಪಾಯವನ್ನು ಎದುರಿಸುವ ಮನಸ್ಥಿತಿ, ಜವಾಬ್ದಾರಿ ಹೊತ್ತು ಬಂಡವಾಳ ಹೂಡುವವರಿಗೆ ಜಗತ್ತಿನಲ್ಲಿ ಎಂದಿಗೂ ಬೆಲೆಯಿಲ್ಲ. ಎಲ್ಲವನ್ನೂ ಮೀರಿ ಬೆಳೆದ ಕೆಲವರಿಗೆ ಮಾತ್ರ ಇದು ಅಪವಾದ. ಉಳಿದಂತೆ ಭಾರತ ದಲ್ಲಿ ನಾವು ಅವರನ್ನೂ ಬಿಡುವುದಿಲ್ಲ. ಅಪಾಯ ಎದುರಿಸುವ ಕ್ಷಮತೆ ಇಲ್ಲದ ದೊಡ್ಡ ವರ್ಗದ ಮುಂದೆ ಸ್ವ ಉದ್ಯೋಗ, ಸಣ್ಣ ಉದ್ದಿಮೆದಾರರು ಮಂಡಿ ಊರುವ ವ್ಯವಸ್ಥೆ ಬದಲಾದರೆ, ಭಾರತ ಭವ್ಯವಾಗುವುದರಲ್ಲಿ ಸಂದೇಹವಿಲ್ಲ.