ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ನೆದರ್ಲ್ಯಾಂಡಿನಲ್ಲೂ ತಪ್ಪಿದಲ್ಲ ಇಲಿಕಾಟ !

ಡೆನ್ಮಾರ್ಕ್‌ಗೆ ಹೋದಾಗ, ಅಲ್ಲಿರುವ ನನ್ನ ದೊಡ್ಡಮ್ಮನ ಮಗ ಅವರ ಮನೆಯಲ್ಲಿ ಇರುವಂತೆ ಒತ್ತಾ ಯಿಸಿದ್ದ. ಅಲ್ಲಿಗೆ ಬರುತ್ತಿದ್ದೇನೆ ಎಂದು ಅವನಿಗೆ ಹೇಳುವುದಕ್ಕೆ ಮುಂಚೆಯೇ ಮಾರಿಯೆಟ್ ಹೋಟೆಲ್ ಬುಕ್ ಮಾಡಿಬಿಟ್ಟಿದ್ದೆ. ಆದರೆ ನೆದರ್ಲ್ಯಾಂಡ್‌ನ ಹೇಗ್ ನಗರದಲ್ಲಿ ವಾಸಿಸುತ್ತಿರುವ ನನ್ನ ತಮ್ಮ ಲಕ್ಷ್ಮೀಕಾಂತನಿಂದ ಬಚಾವ್ ಆಗಲು ಸಾಧ್ಯವಾಗಲಿಲ್ಲ.

ನೆದರ್ಲ್ಯಾಂಡಿನಲ್ಲೂ ತಪ್ಪಿದಲ್ಲ ಇಲಿಕಾಟ !

Profile Ashok Nayak Apr 15, 2025 7:25 AM

ವಿಶ್ವರಂಗ

ವರ್ಷದಲ್ಲಿ ಕನಿಷ್ಠಪಕ್ಷ ಮೂರರಿಂದ ನಾಲ್ಕು ಹೊಸ ದೇಶಗಳಿಗೆ ಹೋಗುವುದು ನನಗೆ ವಾಡಿಕೆ ಯಾಗಿಬಿಟ್ಟಿದೆ. ಈ ವರ್ಷ ಕೂಡ ಮಾರ್ಚ್ ತಿಂಗಳಲ್ಲಿ ಡೆನ್ಮಾರ್ಕ್, ನೆದರ್ಲ್ಯಾಂಡ್ ಮತ್ತು ಸ್ಪೇನ್ ದೇಶಗಳಿಗೆ ಭೇಟಿ ನೀಡುವ ಅವಕಾಶ ನನ್ನದಾಗಿತ್ತು. ಯಾವುದೇ ದೇಶಕ್ಕೆ ಭೇಟಿಕೊಟ್ಟರೂ ಅಲ್ಲಿ ಬಂಧು ಅಥವಾ ಮಿತ್ರರು ಮತ್ತು ಕಳೆದ ಹತ್ತು ವರ್ಷದಿಂದ ನಲ್ಮೆಯ ಓದುಗರು ಸಿಗುತ್ತಾರೆ. ತಮ್ಮ ಮನೆಯಲ್ಲಿ ಉಳಿದುಕೊಳ್ಳಬೇಕು ಎನ್ನುವ ಅವರ ಸಪ್ರೇಮ ಒತ್ತಾಯಕ್ಕೆ ಮಾತ್ರ ನಾನೆಂದೂ ಕಟ್ಟು ಬೀಳುವುದಿಲ್ಲ. ಈ ವಿಚಾರದಲ್ಲಿ ನಾನು ನನ್ನ ನೆಚ್ಚಿನ ಸಂಪಾದಕರಾದ ವಿಶ್ವೇಶ್ವರ ಭಟ್ಟರನ್ನು ಫಾಲೋ ಮಾಡುತ್ತೇನೆ. ಭಟ್ಟರಿಗೂ ಯಾರೊಬ್ಬರ ಮನೆಯಲ್ಲಿ ಉಳಿದುಕೊಳ್ಳುವುದು ಆಗಿಬರುವು ದಿಲ್ಲ ಎನ್ನುವುದನ್ನು ಅವರ ಬರಹಗಳನ್ನು ಓದಿ ಬಲ್ಲೆ. ಅದೇ ನಮ್ಮ ಭೈರಪ್ಪನವರಿಗೆ ಯಾವುದೇ ದೇಶಕ್ಕೆ ಹೋಗಲಿ, ಯಾರಾದರೊಬ್ಬರ ಮನೆಯಲ್ಲಿ ತಂಗುವುದು ಅಭ್ಯಾಸ; ಹೋಟೆಲ್‌ನಲ್ಲಿ ತಂಗುವು ದರಿಂದ ಅಲ್ಲಿನ ಸಾಮಾನ್ಯ ದಿನದ ಸಾಮಾನ್ಯ ಜೀವನ ಹೇಗೆ ಸಾಗುತ್ತದೆ ಎನ್ನುವುದು ತಿಳಿಯುವು ದಿಲ್ಲ ಎನ್ನುವುದು ಭೈರಪ್ಪನವರ ಅಭಿಮತ.

ಈ ಮಾತುಗಳನ್ನು ಹೇಳಲು ಒಂದು ಕಾರಣವಿದೆ. ಈ ಬಾರಿ ಡೆನ್ಮಾರ್ಕ್‌ಗೆ ಹೋದಾಗ, ಅಲ್ಲಿರುವ ನನ್ನ ದೊಡ್ಡಮ್ಮನ ಮಗ ಅವರ ಮನೆಯಲ್ಲಿ ಇರುವಂತೆ ಒತ್ತಾಯಿಸಿದ್ದ. ಅಲ್ಲಿಗೆ ಬರುತ್ತಿದ್ದೇನೆ ಎಂದು ಅವನಿಗೆ ಹೇಳುವುದಕ್ಕೆ ಮುಂಚೆಯೇ ಮಾರಿಯೆಟ್ ಹೋಟೆಲ್ ಬುಕ್ ಮಾಡಿಬಿಟ್ಟಿದ್ದೆ. ಆದರೆ ನೆದರ್ಲ್ಯಾಂಡ್‌ನ ಹೇಗ್ ನಗರದಲ್ಲಿ ವಾಸಿಸುತ್ತಿರುವ ನನ್ನ ತಮ್ಮ ಲಕ್ಷ್ಮೀಕಾಂತನಿಂದ ಬಚಾವ್ ಆಗಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Rangaswamy Mookanahalli Column: ಮಕ್ಕಳನ್ನು ಬೆಳೆಸುವಲ್ಲಿ ಸೋಲುತ್ತಿದ್ದೇವೆಯೇ ?

‘ಮೈಸೂರಿಗೆ ಬಂದಾಗ ನಾನೂ ಹೋಟೆಲ್ ಬುಕ್ ಮಾಡುವೆ’ ಎಂದು ಆತ ಧಮಕಿ ಹಾಕಿದ ಕಾರಣ ವಿಧಿಯಿಲ್ಲದೆ ನಾಲ್ಕು ರಾತ್ರಿ ಅವನ ಮನೆಯಲ್ಲಿ ತಂಗುವ ಸನ್ನಿವೇಶ ಒದಗಿಬಂತು. ಭೈರಪ್ಪನವರ ಮಾತು ಸತ್ಯ ಎನ್ನುವ ಅನುಭವ ಕೂಡ ಆಯ್ತು. ಮಗುವನ್ನು ಅವರು ಬೆಳೆಸುವ ರೀತಿಗೂ ನಾವು ಬೆಳೆಸುವ ರೀತಿಗೂ ಇರುವ ಭಿನ್ನತೆ ತಿಳಿದುಕೊಳ್ಳಲು ಸಹಾಯವಾಯ್ತು. ಅದರ ಜತೆಗೆ, ನೆದರ್ಲ್ಯಾಂಡ್ ನಲ್ಲಿ ಇರುವ ಇಲಿಕಾಟದ ಸಮಸ್ಯೆ ಬಗ್ಗೆ ಕೂಡ ತಿಳಿದುಕೊಂಡು ಅಚ್ಚರಿ ಪಡುವಂತಾಯ್ತು!

ಹೌದು, ಆಮ್‌ಸ್ಟರ್‌ಡ್ಯಾಮ್, ಹೇಗ್ ಮತ್ತಿತರ ಎಲ್ಲಾ ನಗರಗಳಲ್ಲೂ ಇಲಿಕಾಟ ಸಾಮಾನ್ಯ ಎನ್ನುವಂತಾಗಿದೆ. ಡಚ್ಚರು ಎಂದರೆ ಸ್ವಲ್ಪ ಸೀರಿಯಸ್ ಜನ, ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ, ಬಾಯಿಬಿಟ್ಟು ನಕ್ಕು ಮಾತಾಡಿಸದ ಜನ ಎನ್ನುವ ಪ್ರತೀತಿ ಇದೆ. ಹೀಗಾಗಿ ಹೊಸದಾಗಿ ನೆದರ್ಲ್ಯಾಂಡ್‌ಗೆ ವಲಸೆ ಹೋದವರ ಕುರಿತು ಅಲ್ಲಿನ ಜನರೇ, ‘ನಾವು ಯಾರದೇ ಮನೆಯ ಬಾಗಿಲು ತಟ್ಟಿ, ಹಲೋ ನಾನು ನಿಮ್ಮ ನೈಬರ್ ಎಂದು ಹೇಳಿಕೊಳ್ಳುವುದಿಲ್ಲ; ಅದಕ್ಕೇ ಬಾಗಿಲು ತಟ್ಟದೆ ನಿಮ್ಮ ಮನೆಗೆ ಪರಿಚಯ ಮಾಡಿಕೊಳ್ಳಲು ಡಚ್ ಇಲಿಗಳು ಬರುತ್ತವೆ’ ಎನ್ನುವ ಜೋಕ್ ಮಾಡುತ್ತಾರೆ.

ಮ್ಯಾಡ್ರಿಡ್‌ನಲ್ಲಿದ್ದ ನನ್ನ ತಮ್ಮ ಹೇಗ್ ನಗರಕ್ಕೆ ಹೋಗಿ ಎರಡು ವರ್ಷವಾಯ್ತು. ಹೋದ ಮೊದಲ ದಿನಗಳಲ್ಲಿ ಇಲಿಗಳನ್ನು ಕಂಡು ವಿರ್ಜಿನಿಯ ಮತ್ತು ಕಾಂತ ಬೆಚ್ಚಿ ಬಿದ್ದಿದ್ದಾರೆ. ಏಕೆಂದರೆ, ಅರ್ಧ ಜಗತ್ತು ಸುತ್ತಿರುವ ಅವರಿಗೆ ಈ ರೀತಿಯ ಅನುಭವ ಎಂದಿಗೂ ಆಗಿರಲಿಲ್ಲವಂತೆ!

ಮ್ಮ ಮನೆಯಲ್ಲಿ ಇಲಿ ಇದೆ ಎಂದು ಹೇಳಿಕೊಳ್ಳುವುದು ಹೇಗೆ ಎನ್ನುವ ತುಮುಲದಲ್ಲಿ ಒಂದೆರಡು ತಿಂಗಳು ಕಳೆದಿದ್ದಾರೆ. ವಿರ್ಜಿನಿಯ ತನ್ನ ಡಚ್ ಗೆಳತಿಯ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ಓಡಾಡುತ್ತಿದ್ದ ಇಲಿ ಕಣ್ಣಿಗೆ ಬಿದ್ದಿತಂತೆ. ಅದನ್ನು ಕಂಡು ಬೆಚ್ಚಿದ ವಿರ್ಜಿನಿಯ ಇಲಿಯ ಬಗ್ಗೆ ಪ್ರಸ್ತಾಪ ಮಾಡಿದಾಗ ಆ ಡಚ್ ಮಹಿಳೆ, ‘ಇದು ಇಲ್ಲಿ ಅತ್ಯಂತ ಸಾಮಾನ್ಯ’ ಎಂದಳಂತೆ!

ಆಗ ವಿರ್ಜಿನಿಯಳಿಗೆ ಸ್ವಲ್ಪ ಸಮಾಧಾನವಾಯ್ತಂತೆ. ಏಕೆಂದರೆ ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳದಿದ್ದರೆ ಇಲಿ ಬರುತ್ತದೆ ಎನ್ನುವುದು ಸ್ಪೇನ್ ದೇಶದಲ್ಲಿ ಸಾಮಾನ್ಯವಾಗಿ ಹೇಳುವ ಮಾತು. ಆಕೆ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಕೂಡ ಇಲಿ ಬಂದಿತ್ತು, ಏಕೆಂದರೆ ನೆದರ್ಲ್ಯಾಂಡ್‌ ನಲ್ಲಿ ಅದು ಸಾಮಾನ್ಯ. ಇದು ತಿಳಿಯದ ಕಾಂತ ಮತ್ತು ವಿರ್ಜಿನಿಯ ಯಾರಿಗೂ ಹೇಳಿಕೊಳ್ಳಲಾಗದೆ ಒಂದೆರಡು ತಿಂಗಳು ಕಷ್ಟ ಅನುಭವಿಸಿದ್ದರು.

ತೀರಾ ಸಣ್ಣದೂ ಅಲ್ಲದ ದೊಡ್ಡದೂ ಅಲ್ಲದ ಮಧ್ಯಮ ಗಾತ್ರದ ಕಂದುಬಣ್ಣದ ಇಲಿ ನೆದರ್ಲ್ಯಾಂಡ್‌ನಲ್ಲಿ ತೀರಾ ಸಾಮಾನ್ಯ. ಇಂದಿಗೆ ಈ ಇಲಿಯನ್ನು ಡಚ್ಚರು ನಮ್ಮದು ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಬ್ರೌನ್ ರ‍್ಯಾಟ್ ಅಥವಾ ಸಿಟಿ ರ‍್ಯಾಟ್ ಎಂದು ನಾಮಕರಣ ಕೂಡ ಮಾಡಿದ್ದಾರೆ. ಇತಿಹಾಸ ಕೆದಕಿ ನೋಡಿದರೆ ಇದರ ಉಗಮಸ್ಥಾನ ರಷ್ಯಾ ಎನ್ನುವುದು ತಿಳಿಯುತ್ತದೆ. ಎಲ್ಲಿಯ ರಷ್ಯಾ, ಎಲ್ಲಿಯ ನೆದರ್ಲ್ಯಾಂಡ್? ಇಲಿಗೆ ಯಾವ ಸರಹದ್ದು ಎಂದಿರಾ? ಒಟ್ಟಾರೆ ಇವತ್ತಿಗೆ ಈ ಇಲಿ ಡಚ್ ಇಲಿಯಾಗಿದೆ.

ಕೋವಿಡ್‌ನಿಂದಾಗಿ ಜನ ಓಡಾಡದ ಕಾರಣ ಇವು ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡಿವೆ ಎನ್ನುವುದು ನೆದರ್ಲ್ಯಾಂಡ್ ಅಂಕಿ-ಅಂಶ ಹೇಳುವ ಕಥೆ. ಕಳೆದ 4 ವರ್ಷಗಳಲ್ಲಿ ಇವುಗಳ ಕಾಟ ಬಹಳ ಹೆಚ್ಚಾಗಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದ ಡಚ್ಚರು ಹೇಳುವುದು, ‘ಕೋವಿಡ್ ದೊಡ್ಡ ದೇಣಿಗೆ ನೀಡಿದೆ; ಇದರ ಜತೆಗೆ ಹೆಚ್ಚಾಗುತ್ತಿರುವ ಫುಡ್ ವೇಸ್ಟೇಜ್, ಕಡಿಮೆಯಾಗುತ್ತಿರುವ ಚಳಿ ಕೂಡ ಕಾರಣ’ ಅಂತ. ಗ್ಲೋಬಲ್ ವಾರ್ಮಿಂಗ್ ಕಾರಣ ಜಗತ್ತಿನೆಲ್ಲೆಡೆ ವಾತಾವರಣ ಬದಲಾಗು ತ್ತಿರುವುದು ಸತ್ಯ. ವರ್ಷಗಳಲ್ಲಿ ಯುರೋಪ್ ಬದಲಾಗುತ್ತಿರುವುದನ್ನು ಕಣ್ಣಾರೆ ಕಂಡ ಅನುಭವ ನನ್ನದು ಕೂಡ.

ಇಲಿ ಮನೆಯನ್ನು ಹೊಕ್ಕುವುದು ಸಾಮಾನ್ಯ ಎಂಬುದು ಸ್ಥಳೀಯ ಸ್ನೇಹಿತೆಯಿಂದ ತಿಳಿದ ನಂತರ ಇವುಗಳನ್ನು ನಿಯಂತ್ರಿಸಲು ಏನು ಮಾಡಬೇಕು? ಪೆಸ್ಟ್ ಕಂಟ್ರೋಲ್ ಇದೆಯೇ? ಅವಕ್ಕೆ ವಿಷವಿಟ್ಟು ಕೊಲ್ಲಬಹುದೇ? ಇತ್ಯಾದಿ ಅನ್ಯಮಾರ್ಗಗಳ ಬಗ್ಗೆ ವಿಚಾರಿಸಿದಾಗ, ಡಚ್ಚರು ‘ಬದುಕು ಮತ್ತು ಬದುಕಲು ಬಿಡು’ ನೀತಿಯನ್ನು ಇಲಿಗೂ ವಿಸ್ತರಿಸಿದ್ದಾರೆ ಎನ್ನುವುದು ಗೊತ್ತಾಯ್ತು ಎಂದ ನನ್ನ ತಮ್ಮ. ಈ ವಿಚಾರದಲ್ಲಿ ಸ್ಥಳೀಯ ಕಾರ್ಪೊರೇಷನ್‌ಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಅಲ್ಲಿನ ನಿವಾಸಿಗಳು ಬದ್ಧರಾಗಿರಬೇಕು.

ಕೆಲವೊಂದು ನಗರಗಳಲ್ಲಿ ಅವುಗಳನ್ನು ಕೊಲ್ಲುವಂತಿಲ್ಲ. ಅವುಗಳು ಎಲ್ಲಿಂದ ಬರುತ್ತವೋ, ಆ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ಗುರುತಿಸಿ ಅವನ್ನು ಮುಚ್ಚಿ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಕಸವನ್ನು ಕಟ್ಟಿ ಇಡದೆ, ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡಿ ಎನ್ನುತ್ತವೆ ಕೆಲವೊಂದು ನಗರದ ಮುನಿಸಿಪಾಲಿಟಿಗಳು. ಕೆಲವೊಂದು ನಗರದಲ್ಲಿ ವಿಷವಿಟ್ಟು ಕೊಲ್ಲುವ ಅವಕಾಶ ಕೂಡ ಇದೆ.

ಒಟ್ಟಾರೆಯಾಗಿ, ಇಲಿಗಳ ಬಗ್ಗೆ, ಇಲಿಕಾಟದ ಬಗ್ಗೆ ಡಚ್ಚರದು ಮೃದುಧೋರಣೆ ಅಂತಲೇ ಹೇಳಬಹುದು. ಇಲಿ ರೋಗವನ್ನು ಹರಡುತ್ತದೆ ಎನ್ನುವುದು ಕೂಡ ಅದಕ್ಕೆ ತುಂಬಾ ಬ್ಯಾಡ್ ಇಮೇಜ್ ತಂದುಕೊಟ್ಟಿದೆ. ಹಾಗೆ ನೋಡಲು ಹೋದರೆ, ಅವಕ್ಕೆ ಅಪಖ್ಯಾತಿ ತರುವ ಮಟ್ಟದ ರೋಗದ ಹರಡುವಿಕೆಯೇನೂ ಅವುಗಳಿಂದ ನಡೆಯುವುದಿಲ್ಲ ಎಂದು ಅಲ್ಲಿನ ಜೀವವಿಜ್ಞಾನಿಗಳು ಉಲಿಯುತ್ತಾರೆ.

ಆದರೆ ಶಾಲೆ, ಕಾಲೇಜು, ಆಸ್ಪತ್ರೆ, ಆಫೀಸ್‌ಗಳಲ್ಲಿ ವೈರುಗಳನ್ನು ಕಡಿದು, ಸಮಯ ಮತ್ತು ಹಣ ವನ್ನು ಖಂಡಿತ ಅಪವ್ಯಯಗೊಳಿಸಿವೆ ಈ ಇಲಿಗಳು. ಶಾಲೆ-ಕಾಲೇಜಿಗೆ ರಜೆ ಘೋಷಿಸುವ ಮಟ್ಟಕ್ಕೆ ಅವು ಆರ್ಭಟವನ್ನು ಮಾಡಿವೆ. ಈ ಕಂದುಬಣ್ಣದ ಇಲಿಗಳು ಅತಿಕಡಿಮೆ ಅವಧಿಯಲ್ಲಿ ತಮ್ಮ ಸಂತಾನವನ್ನು ಹೆಚ್ಚಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿವೆ.

ಹೀಗಾಗಿ ಇಂದಿಗೆ ನೆದರ್ಲ್ಯಾಂಡ್ ಸಿಕ್ಕಾಪಟ್ಟೆ ಇಲಿಕಾಟಕ್ಕೆ ತುತ್ತಾಗಿದೆ. ಆದರೂ ಯುರೋಪಿಯನ್ನ ರಿಗೆ ತಾವು ವಿಭಿನ್ನರು ಎಂದು ತೋರಿಸಿಕೊಳ್ಳುವ ಚಟ ಬಹಳವಾಗಿಬಿಟ್ಟಿದೆ. ಅದು ಇಲಿ ಇರಬಹುದು ಅಥವಾ ಅಕ್ರಮ ವಲಸಿಗ ಇರಬಹುದು, ಎಲ್ಲರನ್ನೂ ಎಲ್ಲವನ್ನೂ ಬದುಕಲು ಬಿಡು ಎನ್ನುವ ತತ್ವದಲ್ಲಿ ಹಾಕಿ, ಹಾಗೆ ಮಾಡದೆ ಸ್ವಲ್ಪ ಕಠಿಣ ಮನಸ್ಥಿತಿ ಹೊಂದಿದವರಲ್ಲಿ ಅಪರಾಧಿ ಮನೋಭಾವ ಬಿತ್ತುತ್ತಾರೆ. ಇಲಿಗಳಿಂದ ಆಗುತ್ತಿರುವ ಆಸ್ತಿಪಾಸ್ತಿ ಹಾನಿಗಳ ಲೆಕ್ಕಾಚಾರ ಗೊತ್ತಿದ್ದು ಕೂಡ ಈ ಮೃದುಧೋರಣೆ ಸ್ವಲ್ಪ ಜಾಸ್ತಿಯಾಯ್ತು ಎಂದು ಅನ್ನಿಸಿದ್ದು ಮಾತ್ರ ನಿಜ.

ನಾಲ್ಕು ರಾತ್ರಿ ತಮ್ಮನ ಮನೆಯಲ್ಲಿ ಕಳೆದೆವು. ಪ್ರಮಾಣ ಮಾಡಿ ಹೇಳುತ್ತೇನೆ, ನಮಗಂತೂ ಒಂದು ದಿನವೂ ಒಂದು ಸಣ್ಣ ಇಲಿಯೂ ಕಾಣಸಿಗಲಿಲ್ಲ. ಐದನೇ ದಿನ ಮಧ್ಯಾಹ್ನ ಒಂದು ಗಂಟೆಗೆ ಮರಳಿ ಬಾರ್ಸಿಲೋನಾಗೆ ನಮ್ಮ ಫ್ಲೈಟ್ ಇತ್ತು. ಯಾವುದೋ ಮೀಟಿಂಗ್ ಅಂತ ಕಾಂತ ಬಹಳ ಬ್ಯುಸಿ ಇದ್ದ. ಹೀಗಾಗಿ ವಿರ್ಜಿನಿಯ ನಮ್ಮನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಿದಳು. ನಮ್ಮನ್ನೆಲ್ಲಾ ಅಪ್ಪಿ ಮತ್ತೆ ಸಿಕ್ಕೋಣ ಎಂದು ಕೈಬೀಸಿ ಹೋದಳು. ನಾವು ಬರೋಬ್ಬರಿ ಎರಡು ಗಂಟೆ ಮುಂಚೆ ಇದ್ದೆವು.

ಡೊಮೆಸ್ಟಿಕ್ ಪ್ಲೈಟ್ ಆದ ಕಾರಣ ಒಂದು ತಾಸು ಮುಂದಾಗಿ ಇದ್ದರೆ ಸಾಕಾಗಿತ್ತು. ವಿರ್ಜಿನಿಯ ಕೂಡ ಮತ್ತೆಲ್ಲಿಗೋ ಹೋಗುವ ಪ್ರೋಗ್ರಾಮ್ ಹಾಕಿಕೊಂಡಿದ್ದಳು. ಹೀಗಾಗಿ ಸ್ವಲ್ಪ ಮುಂಚೆ ಏರ್‌ಪೋರ್ಟ್ ತಲುಪಿಬಿಟ್ಟಿದ್ದೆವು. ಅದು ಒಂದು ತರಹ ಒಳ್ಳೆಯದೇ ಆಯ್ತು ಎನ್ನಿ. ರಾತ್ರಿ ಮೊಬೈಲ್ ಚಾರ್ಜ್ ಮಾಡಿರಲಿಲ್ಲ, ಹೀಗಾಗಿ ಚಾರ್ಜಿಂಗ್ ಸೆಂಟರ್ ಹತ್ತಿರ ಪ್ಲಗ್ ಮಾಡೋಣ ಎಂದು ಹೋದೆ. ಅದೆಲ್ಲಿ ಅಡಗಿತ್ತೋ ಗೊತ್ತಿಲ್ಲ, ಇಲಿಯೊಂದು ಚಂಗನೆ ಎಗರಿ ಓಡಿಹೋಯ್ತು.

ನೆದರ್ಲ್ಯಾಂಡ್ ನಲ್ಲಿನ ಇಲಿಗಳ ಕಾಟದ ಬಗ್ಗೆ ಕೇಳಿದ್ದೆಲ್ಲಾ ನಿಜ ಎನ್ನುವಂತೆ ಒಂದು ತಾಸಿನಲ್ಲಿ ಏರ್‌ಪೋರ್ಟ್ ತುಂಬೆಲ್ಲಾ ಅತ್ತಿಂದಿತ್ತ ಓಡಾಡುತ್ತಿದ್ದ ಇಲಿರಾಯರು ಸಾಕ್ಷಿ ನುಡಿಯುತ್ತಿದ್ದರು! ಈ ಇಲಿ ಸುಮ್ಮನೆ ಎಂದುಕೊಳ್ಳಬೇಡಿ. ಇಲಿಗಳ ನಿಯಂತ್ರಣ, ಇದರ ಹಾವಳಿ ತಡೆಯುವ ವ್ಯಾಪಾರ ವಿದೆಯಲ್ಲಾ, ಅದು ಜಾಗತಿಕವಾಗಿ ಬರೋಬ್ಬರಿ 21 ಸಾವಿರ ಕೋಟಿ ರುಪಾಯಿ ಪ್ರಮಾಣದ್ದು ಎನ್ನುತ್ತದೆ 2019ರ ಅಂಕಿ-ಅಂಶ.

2027ರ ವೇಳೆಗೆ ಈ ವ್ಯಾಪಾರ 40 ಸಾವಿರ ಕೋಟಿ ರುಪಾಯಿಯನ್ನು ಮೀರಿಸುತ್ತದೆ ಎನ್ನುವ ಅಂದಾಜು ಸಂಖ್ಯೆಯನ್ನು ಕೂಡ ಅದು ನೀಡಿದೆ. ಲೆಕ್ಕಕ್ಕೆ ಸಿಗದ ಕೋಟಿಗಳ ಬಗ್ಗೆ ಮಾತನಾಡು ವುದು ಬೇಡ ಬಿಡಿ, ಈ ಸಂಖ್ಯೆ ಬಹಳ ಸಣ್ಣದು. ಏಕೆಂದರೆ ಅಮೆರಿಕ ಒಂದರಲ್ಲೇ ಇಲಿಕಾಟದಿಂದ ಉಂಟಾಗುವ ನಷ್ಟದ ಅಂದಾಜು ಎರಡು ಲಕ್ಷ ಕೋಟಿ ರುಪಾಯಿಯನ್ನು ಮೀರಿಸುತ್ತದೆ.

ಇದನ್ನು ಜಾಗತಿಕ ಲೆಕ್ಕದಲ್ಲಿ ನೋಡಿದಾಗ, ಸಣ್ಣ ಪುಟ್ಟ ದೇಶಗಳ ವರ್ಷದ ವಹಿವಾಟಿಗಿಂತಲೂ ಹೆಚ್ಚಾಗುತ್ತದೆ. ಈ ಬಾರಿ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ದಿನ ಮನೆಗೆ ಬೀಗ ಹಾಕಿ ಹೋಗಿದ್ದೆವು. ಹೀಗೆ ಬೀಗ ಹಾಕಿ, ನಂತರ ವಾಪಸ್ಸು ಬಂದು ತೆಗೆದಾಗೆಲ್ಲಾ ನನಗೊಂದು ವಿಚಿತ್ರ ರೀತಿಯ ಅನುಭವವಾಗುತ್ತದೆ. ಮನೆಯ ವಾತಾವರಣ, ವಾಸನೆ ಎಲ್ಲವೂ ಬದಲಾಗಿಬಿಟ್ಟಿರುತ್ತದೆ. ಅಲ್ಲದೆ ಮನುಷ್ಯರು ಮನೆಯಲ್ಲಿ ವಾಸಿಸುತ್ತಿಲ್ಲ ಎನ್ನುವುದು ಕ್ರಿಮಿ-ಕೀಟಗಳಿಗೆ, ಜೀವಜಂತುಗಳಿಗೆ ಬಹು ಬೇಗ ಗೊತ್ತಾಗಿಬಿಡುತ್ತದೆ!

‘ಇನ್ಮೇಲೆ ಇದು ನಮ್ಮದೇ ಮನೆ’ ಅಂತ ಅವು ಝಾಂಡಾ ಹೂಡಿಬಿಡುತ್ತವೆ. ನಾವು ಬೀಗ ತೆಗೆದು ಒಳಹೊಕ್ಕಾಗ ಅವಕ್ಕೆ ಇರಿಸುಮುರಿಸು! 23 ದಿನ ಮನೆಯನ್ನು ನಾವು ಬಿಟ್ಟು ಹೋದ ಕಾರಣ ನಮ್ಮ ಗಣಪನ ವಾಹನ ಇಲಿರಾಯರು ಸಾಕಷ್ಟು ಆರ್ಭಟ ನಡೆಸಿದ್ದರು. ಇಲ್ಲಿಯವರೆಗೆ 50000 ರುಪಾಯಿಗೂ ಹೆಚ್ಚು ವೆಚ್ಚ ಮಾಡಿ ಬದುಕನ್ನು ಮೊದಲಿನ ಸ್ಥಿತಿಗೆ ತಂದುಕೊಂಡಿದ್ದೇವೆ.

ಮನೆಯ ‘ಲ್ಯಾನ್’ (ಇಂಟರ್ನೆಟ್ ಕೇಬಲ್, ಪ್ರತಿ ಕೋಣೆಗೂ ಎಳೆದಿರುವ ಲೈನ್), ಸಿಸಿಟಿವಿ, ಸೇಫ್ಟಿ ಅಲಾರ್ಮ್, ಲಿಫ್ಟ್ ವೈರುಗಳು ಹೀಗೆ ಎಲ್ಲವನ್ನೂ ಅವು ಧ್ವಂಸ ಮಾಡಿದ್ದವು. ದಿನಸಿ ಸಾಮಾನುಗಳ ಮೇಲೆ ದಾಳಿಮಾಡಿ ತಿಂದು, ಅಲ್ಲೇ ಹೇತು ಗಬ್ಬೆಬ್ಬಿಸಿದ್ದವು. ಗ್ರೌಂಡ್ ಫ್ಲೋರ್‌ನಲ್ಲಿ ಮನೆ ಕಟ್ಟಿದರೆ ಇಂಥ ಸಮಸ್ಯೆ ಎಂದುಕೊಂಡು, ಗ್ರೌಂಡ್ ಫ್ಲೋರ್ ಪೂರ್ತಿ ಪಾರ್ಕಿಂಗ್‌ಗೆ ಬಿಟ್ಟು, ಮೊದಲ ಮತ್ತು ಎರಡನೇ ಮಹಡಿಯಲ್ಲಿ ವಾಸ ಮಾಡುತ್ತಿದ್ದೇವೆ. ಹೀಗಿದ್ದೂ ಮೂಷಿಕ ರಾಜನ ಆರ್ಭಟಕ್ಕೆ ಬಲಿ ಯಾಗಿದ್ದೇವೆ. ಸಂಕೋಚವಿಲ್ಲದೆ ಪೆಸ್ಟ್ ಕಂಟ್ರೋಲ್‌ನವರನ್ನು ಕರೆದಿದ್ದೇವೆ.