ಸ್ವಾಸ್ಥ್ಯವೆಂಬ ಸಂಪದ
ನಾವು ಮಾಡುವ ಪರಿಸರ ನಾಶದಿಂದ ಅಕಾಲದಲ್ಲಿ ಮಳೆ ಬಿಸಿಲು ಕಂಡುಬಂದು, ಋತು ವಿಕೋಪದಿಂದಲೂ ರೋಗಗಳು ಉಂಟಾಗುತ್ತವೆ. ಇವೆಲ್ಲವೂ ಪರಿಣಾಮಜನ್ಯ ವಿಕೃತಿ ಗಳೆನಿಸುತ್ತವೆ. ಬಾಲ್ಯ, ಕೌಮಾರ್ಯಾ, ಯೌವನ, ವೃದ್ಧಾಪ್ಯ, ಮರಣ ಜತೆಗೆ ಹಸಿವೆ, ಬಾಯಾರಿಕೆ ಎಂಬ ಕಾಲಜನ್ಯವಾದ ಸ್ವಾಭಾವಿಕ ಪರಿಣಾಮಗಳು. ಇವಲ್ಲದೆ ದೈವವೆಂಬ ಪೂರ್ವದೇಹಕೃತ ಕರ್ಮಗಳೂ ವ್ಯಾಧಿ ರೂಪದಲ್ಲಿ ಬಾಧಿಸಬಹುದು.
ಸ್ವಾಸ್ಥ್ಯವೆಂಬ ಸ್ವಾತಂತ್ರ ವನ್ನು ಪಡೆಯಲು ಇರುವ ಏಕೈಕ ಮಾರ್ಗವೆಂದರೆ ಸ್ವಾಸ್ಥ್ಯಚಿಂತನೆ! ಸ್ವಾಸ್ಥ್ಯಚಿಂತನೆಯೆಂಬುದು ಬಹಳ ಬೃಹತ್ತಾದ ಚಿಂತನಾ ವಿಚಾರ. ಇದರಲ್ಲಿ ಮೊಟ್ಟ ಮೊದಲನೆ ಯದಾಗಿ ಸ್ವಾಸ್ಥ್ಯ ಎಂದರೇನು ಎಂಬುದರ ತಿಳಿವಳಿಕೆ ಅತ್ಯವಶ್ಯಕ. ಇದು, ‘ಸ್ವಾಸ್ಥ್ಯವೆಂದರೆ ಕೇವಲ ಆರೋಗ್ಯವಲ್ಲ’ ಎಂಬುದನ್ನು ಮನವರಿಕೆ ಮಾಡಿಕೊಳ್ಳುವಿಕೆ.
ಜೀವನದ ಗುರಿ ಮುಟ್ಟಲು ಕೇವಲ ಆರೋಗ್ಯದ ಸ್ಥಿತಿ ಸಾಲದು, ಅದಕ್ಕೆ ಸಮರ್ಥವಾದ ಸ್ವತಂತ್ರ ಪ್ರವೃತ್ತಿಯೂ ಬೇಕು. ವಾಸ್ತವವಾಗಿ ಅರೋಗಾವಸ್ಥೆಯ ಈ ಮುಂದುವರಿದ ಸ್ಥಿತಿಯೇ ಸ್ವಾಸ್ಥ್ಯ. ನಮ್ಮ ಶರೀರ, ಇಂದ್ರಿಯ, ಮನಸ್ಸು ಮತ್ತು ಆತ್ಮಗಳಲ್ಲಿರುವ ಪರಸ್ಪರ ಹೊಂದಾಣಿಕೆ ಮತ್ತು ಸ್ಥಿರತೆಗಳು ಸ್ವಾಸ್ಥ್ಯಲಕ್ಷಣವಾಗುತ್ತದೆ.
ಸ್ವಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಬಾಧೆಯಿಲ್ಲದೆ ಗುರಿ ಸೇರುವ ಸಾಮರ್ಥ್ಯವಿರುವವನಿಗೆ ಸ್ವಸ್ಥ ಎನ್ನಬಹುದು. ಹಾಗಾದರೆ, ಜ್ವರ, ನೆಗಡಿ, ತಲೆನೋವು, ಮಧುಮೇಹ ಮುಂತಾದ ವ್ಯಾಧಿ ಗಳಿಲ್ಲವಾದ ಮಾತ್ರಕ್ಕೆ ಅವನು ಸ್ವಸ್ಥನೇ? ಇಂದ್ರಿಯಗಳೆಲ್ಲವೂ ಚೆನ್ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಅವನು ಸ್ವಸ್ಥನಾಗಿ ಬಿಡುತ್ತಾನಾ? ಕಾಮ, ಕ್ರೋಧಾದಿಗಳಿಲ್ಲದ ಮನಸ್ಸಿದ್ದ ಮಾತ್ರಕ್ಕೆ ಅವನು ಸಂಪೂರ್ಣ ಸ್ವಸ್ಥನೇ? ಆಯುರ್ವೇದದ ಪ್ರಕಾರ, ಆತ್ಮವು ಜನನ-ಮರಣ ಸಂಕೋಲೆಗಳಿಂದ ಮುಕ್ತವಾಗುವವರೆಗೂ ಸ್ವಾಸ್ಥ್ಯದ ಪಯಣ ಅಪೂರ್ಣ!
ಇದನ್ನೂ ಓದಿ: Dr Sadhanashree Column: ಕೃಷ್ಣನ ಬೆಣ್ಣೆ ಕಳ್ಳತನದ ಹಿಂದಿರುವ ಗುಟ್ಟು, ಆಯುರ್ವೇದದಲ್ಲಿ ರಟ್ಟು
ಸ್ನೇಹಿತರೆ, ಇಷ್ಟು ಆಳವಾಗಿದೆ ಸ್ವಾಸ್ಥ್ಯದ ವ್ಯಾಪ್ತಿ! ಕೇವಲ ಶಾರೀರಿಕ ಆರೋಗ್ಯವನ್ನು ಗಮನಿಸಿ ಕೊಂಡು ‘ಐ ಯಾಮ್ ಹೆಲ್ದಿ’ ಎಂದು ಹೇಳುವವರಿಗೆ ಈ ವಿಚಾರದಿಂದ ಸ್ವಾಸ್ಥ್ಯ ಪರಿಕಲ್ಪನೆಯ ಹೊಸದೃಷ್ಟಿ ಸಿಗಲಿ ಎಂಬುದು ಇಲ್ಲಿನ ಆಶಯ! ಹೌದು ಸ್ವಾಸ್ಥ್ಯವೆಂದರೆ ಮೋಕ್ಷಪ್ರಾಪ್ತಿಯವರೆಗೂ ಮುಗಿಯದ ಕಥೆ. ಆದರೆ ಅದರ ಪ್ರಾರಂಭ ಶರೀರ-ಇಂದ್ರಿಯ-ಮನಸ್ಸುಗಳಿಂದಲೇ ಅಲ್ಲವೇ? ಇವುಗಳ ಸ್ವಾಸ್ಥ್ಯ ನಾಶಮಾಡುವ ಮೊದಲ ವೈರಿಯೆಂದರೆ ವ್ಯಾಧಿ!
ಹಲವಾರು ರೋಗಗಳು ನಮ್ಮನ್ನು ಬಾಧಿಸದ ರೀತಿಯಲ್ಲಿ ನಮ್ಮ ಸ್ವಾಸ್ಥ್ಯವನ್ನು ಉಳಿಸಿ ಕೊಳ್ಳುವುದು ಹೇಗೆ? ಯಾವ ಕಾರಣಗಳಿಂದ ನಮ್ಮ ಸ್ವಾಸ್ಥ್ಯ ಅಳಿಯುತ್ತದೆ ಎಂಬ ವಿಷಯದ ಬಗ್ಗೆ ಇಂದಿನ ಲೇಖನದಲ್ಲಿ ಅವಲೋಕಿಸೋಣ. ಆಯುರ್ವೇದದ ಪ್ರಕಾರ ಮುಖ್ಯವಾಗಿ 3 ಕಾರಣಗಳಿಂದ ನಮ್ಮ ಸ್ವಾಸ್ಥ್ಯ ಅಳಿಯುತ್ತದೆ. ಅವೆಂದರೆ, ೧. ಅಸಾತ್ಮೇಂದ್ರಿಯಾರ್ಥ ಸನ್ನಿಕರ್ಷ, ೨. ಪ್ರಜ್ಞಾಪರಾಧ ಮತ್ತು ೩. ಪರಿಣಾಮ
೧. ಅಸಾತ್ಮೇಂದ್ರಿಯಾರ್ಥ ಸನ್ನಿಕರ್ಷ: ‘ಅಸಾತ್ಮ್ಯ’ ಅಂದರೆ ನಮಗೆ ಅಭ್ಯಾಸವಿಲ್ಲದ್ದು ಅಥವಾ ನಮಗೆ ಒಗ್ಗದಿರುವುದು ಎಂದರ್ಥ. ಇಂದ್ರಿಯಗಳೆಂದರೆ ಮುಖ್ಯವಾಗಿ ಕಣ್ಣು, ಕಿವಿ, ಮೂಗು, ಚರ್ಮ, ನಾಲಗೆ ಎಂಬ ಐದು ಜ್ಞಾನೇಂದ್ರಿಯಗಳು. ಕೈ, ಕಾಲು, ಮಾತು, ಗುದ, ಜನನೇಂದ್ರಿಯ ಗಳೆಂಬ ಐದು ಕರ್ಮೇಂದ್ರಿಯಗಳು.
ಈ ಐದು ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳು-
ಇವುಗಳನ್ನು ನಿಯಂತ್ರಿಸುವ ಒಂದು ಮನಸ್ಸು. ಒಟ್ಟು ನಮಗಿರುವುದು 11 ಇಂದ್ರಿಯಗಳು. ನಮ್ಮ ಕಣ್ಣು ಹೊರಗಿನ ಜಗತ್ತಿನ ರೂಪವನ್ನು ನೋಡಿದರೆ, ಕಿವಿ ಹಲವು ರೀತಿಯ ಶಬ್ದಗಳನ್ನು ಆಲಿಸು ತ್ತದೆ. ಮೂಗು ವಾಸನೆಯನ್ನು ತೆಗೆದುಕೊಂಡರೆ, ಚರ್ಮವು ಸ್ಪರ್ಶವನ್ನು ಮತ್ತು ನಾಲಗೆಯು ರಸಗಳನ್ನು ಗ್ರಹಿಸುತ್ತದೆ. ಹೀಗೆ, ಪ್ರತಿಯೊಂದು ಇಂದ್ರಿಯವು ಸಹ ತನ್ನದೇ ಆದ, ತನಗನುಗುಣ ವಾದ ಪದಾರ್ಥಗಳನ್ನು ಗ್ರಹಿಸುತ್ತದೆ. ಈ ಪದಾರ್ಥಗಳಿಗೆ ‘ಅರ್ಥ’ ಎಂದು ಹೇಳಬಹುದು.
ಹಾಗೆಯೇ, ಇಂದ್ರಿಯಗಳು ಈ ಅರ್ಥಗಳನ್ನು ಗ್ರಹಿಸುವ ಅಥವಾ ಪಡೆಯುವ ವಿಧಾನಕ್ಕೆ ಸನ್ನಿಕರ್ಷವೆಂದು ಹೆಸರು. ಇದನ್ನು ಒಂದು ಉದಾಹರಣೆಯೊಂದಿಗೆ ವಿವರಿಸಬೇಕಾದರೆ, ನಮ್ಮ ಕಣ್ಣು ರೂಪವನ್ನು ನೋಡಬೇಕಾದರೆ ಪ್ರಪ್ರಥಮವಾಗಿ ಅದು ಸರಿಯಾಗಿರಬೇಕು ಮತ್ತು ನೋಡಲು ಬಯಸುವ ಪದಾರ್ಥವು ಸರಿಯಾದ ಗಾತ್ರ ಮತ್ತು ಪ್ರಮಾಣದಲ್ಲಿರಬೇಕು, ಅಂತರದಲ್ಲಿರಬೇಕು.
ಇದರ ಜತೆಗೆ, ಬೆಳಕು ಇತ್ಯಾದಿ ಸಹಕಾರಿ ಸಾಧನಗಳು ಅವಶ್ಯಕ. ಇಂಥ ಪರಿಸ್ಥಿತಿಯಲ್ಲಿ ಮಾತ್ರ ನಮ್ಮ ಕಣ್ಣಿಗೆ ರೂಪವನ್ನು ಗ್ರಹಿಸಲು ಸಾಧ್ಯ. ಈ ರೀತಿಯ ಸಂಪರ್ಕವನ್ನು ‘ಇಂದ್ರಿಯಾರ್ಥ ಸನ್ನಿಕರ್ಷ’ ಎನ್ನಲಾಗುತ್ತದೆ. ಈ ಸಮಾವೇಶದಲ್ಲಿ ಯಾವುದೇ ಅಂಶದಲ್ಲಿ ಹೆಚ್ಚು ಕಡಿಮೆ ಆಗಿ ಈ ವಿಧಾನವು ಹೇಗೆ ಹೇಗೋ ನಡೆದರೆ/ಸರಿಯಾದ ರೀತಿಯಲ್ಲಿ ನಡೆಯದಿದ್ದರೆ ಅದನ್ನು ಅಸಾತ್ಮೇಂದ್ರಿ ಯಾರ್ಥ ಸನ್ನಿಕರ್ಷಎಂದು ಕರೆಯಲಾಗುತ್ತದೆ.
ಈ ವಿಧಾನದಿಂದ ನಮ್ಮ ಸ್ವಾಸ್ಥ್ಯದಲ್ಲಿ ಧಕ್ಕೆ ಉಂಟಾಗಿ ರೋಗವು ಚಿಗುರೊಡೆಯುತ್ತದೆ. ಸನ್ನಿಕರ್ಷದಲ್ಲಿ ಕ್ರಮ ತಪ್ಪುವುದು ಸಾಮಾನ್ಯವಾಗಿ ಮೂರು ರೀತಿಯಲ್ಲಿ ನಡೆಯುತ್ತದೆ. ಅವೆಂದರೆ ಅತಿಯೋಗ, ಹೀನಯೋಗ ಮತ್ತು ಮಿಥ್ಯಾಯೋಗ. ಸ್ನೇಹಿತರೇ, ನಮ್ಮ ದೈಹಿಕ ಶಕ್ತಿಯನ್ನು ಗಮನಿಸುವುದಾದರೆ, ಅದರ ಪ್ರಮಾಣ ಪ್ರತಿ ವ್ಯಕ್ತಿಯಲ್ಲೂ ಬದಲಾಗುತ್ತದೆ. ಆದರೂ ಸಾಮಾನ್ಯ ಪ್ರಮಾಣವನ್ನು ಗುರುತಿಸಿ ಈ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಕೆಲಸ ಮಾಡಿದವರಿಗೆ ‘ಸೋಮಾರಿ’ ಎಂದೂ, ಅತಿ ಹೆಚ್ಚು ದುಡಿಯುವವನಿಗೆ ‘ಶ್ರಮಜೀವಿ’ ಎಂದೂ, ಮಾಡಬೇಕಾ ದದ್ದನ್ನು ಮಾಡದೆ ಅಥವಾ ವಿಕೃತ ರೀತಿಯಲ್ಲಿ ಮಾಡಿದರೆ ಅವನಿಗೆ ‘ಅಧಿಕ ಪ್ರಸಂಗಿ’ ಎಂದೂ ಕರೆಯುತ್ತೇವೆ, ಅಲ್ಲವೇ? ಇದೇ ರೀತಿಯಾಗಿ ನಮ್ಮ ಇಂದ್ರಿಯಗಳ ಶಕ್ತಿ ಮತ್ತು ಅವುಗಳ ವಿಷಯ ಗ್ರಹಣ ಶಕ್ತಿಯೂ ಒಂದೇ ರೀತಿಯಲ್ಲಿ ಇರುವುದಿಲ್ಲ.
ಅತ್ಯಂತ ಸಣ್ಣ ಪದಾರ್ಥವನ್ನು ಒಬ್ಬ ವ್ಯಕ್ತಿ ಸುಲಭವಾಗಿ ನೋಡಬಹುದು. ಅಂತೆಯೇ, ಮತ್ತೊಬ್ಬ ನಿಗೆ ಅದು ಬಹಳ ಕಷ್ಟಕರವೆನಿಸಬಹುದು. ಒಬ್ಬನಿಗೆ ಎರಡು ಮೈಲಿ ನಡೆಯುವ ಸಾಮರ್ಥ್ಯವಿರ ಬಹುದು, ಮತ್ತೊಬ್ಬನಿಗೆ ಎರಡು ನಿಮಿಷ ನಡೆಯುವುದರಲ್ಲಿ ಸುಸ್ತಾಗಬಹುದು.
ಒಟ್ಟಾರೆ, ಪ್ರತಿಯೊಬ್ಬ ವ್ಯಕ್ತಿಯು, ಆಯಾ ಇಂದ್ರಿಯಗಳಿಗೆ ದಣಿವಾಗದಷ್ಟು ಕೆಲಸ ಮಾಡುವುದು ಆಯಾ ಇಂದ್ರಿಯಗಳ ಸಮಯೋಗ ಎನ್ನುತ್ತೇವೆ. ಈ ಸಮ ಪ್ರಮಾಣಕ್ಕಿಂತ ಅತಿಯಾಗಿ ಇಂದ್ರಿಯ ಗಳನ್ನು ದುಡಿಸಿಕೊಳ್ಳುವುದು ಅತಿಯೋಗವೆನಿಸಿಕೊಂಡರೆ, ಅತಿ ಕಡಿಮೆ ಪ್ರಮಾಣದಲ್ಲಿ ದುಡಿಸಿಕೊಂಡಾಗ ಅದು ಹೀನಯೋಗವಾಗುತ್ತದೆ.
ಯಾವ ಇಂದ್ರಿಯದಿಂದ ಯಾವ ರೀತಿಯಲ್ಲಿ ಎಷ್ಟು ಕಾರ್ಯ ನಿರ್ವಹಿಸಬೇಕು ಅದಕ್ಕೆ ವ್ಯತಿರಿಕ್ತ ವಾಗಿ ನಡೆದುಕೊಳ್ಳುವುದು ಮಿಥ್ಯಾಯೋಗ. ಉದಾಹರಣೆಗೆ, ಶಬ್ದ ಕೇಳುವುದು ಕಿವಿಯ ಕಾರ್ಯ, ಅಲ್ಲವೇ? ಈ ಶಬ್ದ ಗ್ರಹಣ ಸಾಮರ್ಥ್ಯಕ್ಕೆ ಸರಿಹೊಂದುವ ಪ್ರಮಾಣದ ಶಬ್ದವನ್ನು ಸರಿಯಾದ ಅಂತರದಲ್ಲಿ, ಕಿವಿಗೆ ದಣಿವು ತರದಷ್ಟು ಕೇಳುವುದು ಕಿವಿಯ ಇಂದ್ರಿಯಾರ್ಥ ಸನ್ನಿಕರ್ಷ.
ಸಮಯೋಗವಾಗಿ ಕೇಳಬಹುದಾದ ಶಬ್ದವೇ ಇದ್ದರೂ ಕಿವಿಯು ಬಹಳ ಕಷ್ಟಪಟ್ಟು ಕೇಳಬೇಕಾಗುತ್ತದೆ. ಇದನ್ನು ಅಯೋಗ ಎನ್ನಲಾಗುತ್ತದೆ. ಇದಕ್ಕೆ ವಿರುದ್ಧವಾದದ್ದು ಜೋರಾದ ಶಬ್ದ. ಅತಿಯಾದ ಶಬ್ದವನ್ನು ಕೇಳುವುದು ಕಿವಿಯ ಅತಿಯೋಗವಾದರೆ, ಬೇಸರ ತರುವ ಶಬ್ದವನ್ನು ವಕ್ರ ವಕ್ರವಾಗಿ ಕುಳಿತು ಕೇಳುವುದು/ ಮಲಗಿ ಕೇಳುವುದು ಸರಿ ಇಲ್ಲದ ಮಾಧ್ಯಮಗಳ ಮೂಲಕ ಕೇಳುವುದು- ಇದು ಶ್ರವಣೇಂದ್ರಿಯದ ಮಿಥ್ಯಾಯೋಗ ಎನಿಸಿಕೊಳ್ಳುತ್ತದೆ.
ಒಟ್ಟಾರೆ ಇಂದ್ರಿಯಗಳ ಅತಿಯಾದ ಬಳಕೆ, ಅಲ್ಪಬಳಕೆ ಅಥವಾ ತಪ್ಪಾದ ಬಳಕೆಯಿಂದ ರೋಗಗಳು ಸಂಭವಿಸುತ್ತವೆ. ಇನ್ನು ಜನನೇಂದ್ರಿಯದ ಬಗ್ಗೆ ಹೇಳಬೇಕಾದರೆ, ಸುಖಾನುಭವ ಅದರ ಅರ್ಥ. ಅದರ ಸಂಪೂರ್ಣ ತಡೆ/ನಿಗ್ರಹ ಅದರ ಹೀನಯೋಗ, ಅತಿ ಪ್ರಚೋದನೆ ಅದರ ಅತಿಯೋಗ ಮತ್ತು ಅಕಾಲದಲ್ಲಿ, ಅಕ್ಷೇತ್ರದಲ್ಲಿ ಅಕ್ರಮವಾಗಿ ಪ್ರಚೋದನೆ ಅದರ ಮಿಥ್ಯಾಯೋಗವಾಗುತ್ತದೆ.
೨. ಪ್ರಜ್ಞಾಪರಾಧ : ತಿಳಿಯದೇ, ತಿಳಿದದ್ದನ್ನು ಅಳವಡಿಸಲಾಗದೇ ಹಾಗೂ ತಿಳಿದೂ ಮರೆತು ಮಾಡುವ ತಪ್ಪುಗಳನ್ನು ‘ಪ್ರಜ್ಞಾಪರಾಧ’ವೆಂದು ಕರೆಯಬಹುದು. ಸರಿಯಾದ ತಿಳಿವಳಿಕೆಯೇ ಪ್ರಜ್ಞೆ ಇದರಿಂದ ಮಾಡುವ ತಪ್ಪೇ ಪ್ರeಪರಾಧ. ಉದಾಹರಣೆಗೆ, ಆಯುರ್ವೇದವು ರಾತ್ರಿ ಸಮಯದಲ್ಲಿ ಮೊಸರು ಸೇವಿಸುವುದನ್ನು ನಿಷೇಧಿಸಿದೆ. ಇದು ಹಲವರಿಗೆ ತಿಳಿಯದ ವಿಷಯ. ಹಾಗಾಗಿ ತಿಳಿಯದೆಯೇ ರಾತ್ರಿ ತಿನ್ನುತ್ತೇವೆ. ಇದರಿಂದ ನೆಗಡಿ, ಕೆಮ್ಮು, ಚರ್ಮವ್ಯಾಧಿಗಳು, ಮಧುಮೇಹ ಮುಂತಾದ ರೋಗಗಳು ಪ್ರಾರಂಭವಾಗುತ್ತವೆ.
ಇದು ಸರಿಯಾದ ಜ್ಞಾನವಿಲ್ಲದೆಯೇ ಮಾಡಿದ ತಪ್ಪು. ಕೆಲವೊಮ್ಮೆ ತಿಳಿದೂ ಚಪಲ ತಡೆಯಲಾರದೆ ರಾತ್ರಿ ಮೊಸರು ತಿಂದುಬಿಡುತ್ತೇವೆ. ಇದು ಧಾರಣ ಶಕ್ತಿ ಇಲ್ಲದೆ ಮಾಡಿದ ತಪ್ಪು. ಕೆಲವೊಮ್ಮೆ ಬೇರೆ ಯಾವುದೋ ಕೆಲಸದಲ್ಲಿ ಮಗ್ನರಾಗಿ ಅಥವಾ ಬೇರೆಯವರ ಜತೆ ಹರಟುತ್ತಾ/ಚಿಂತಿಸುತ್ತಾ ಮೊಸರನ್ನು ರಾತ್ರಿ ಸೇವಿಸುತ್ತೇವೆ. ಇದು ಸ್ಮೃತಿ ಭ್ರಷ್ಟರಾಗಿ ಮಾಡುವ ತಪ್ಪು. ಆಗಲೂ ತೊಂದರೆ ತಪ್ಪಿದ್ದಲ್ಲ. ಈ ಪ್ರಜ್ಞಾಪರಾಧದಿಂದ ತ್ರಿದೋಷಗಳೂ ಪ್ರಕೋಪಗೊಳ್ಳಬಹುದು. ಅಂತೆಯೇ ಶಾರೀರಿಕ ವೇಗಗಳನ್ನು ತಡೆಯುವುದು ಅಥವಾ ವಿಕೃತವಾಗಿ ಪ್ರಚೋದಿಸುವುದೂ ಪ್ರeಪರಾಧವೇ. ಆದ್ದರಿಂದ ಸದಾ ಪ್ರಜ್ಞಾವಂತನಾಗಿರುವುದು ಸ್ವಾಸ್ಥ್ಯರಕ್ಷಣೆಗೆ ಬಹಳ ಅವಶ್ಯಕ.
೩. ಪರಿಣಾಮ: ಕಾಲದ ಪರಿಣಾಮಗಳಿಂದ ಕೆಲವು ವ್ಯಾಧಿಗಳು ಉಂಟಾಗುತ್ತವೆ. ಉದಾಹರಣೆಗೆ, ಪ್ರತಿನಿತ್ಯವೂ ಬೆಳಗ್ಗೆ ಕಫ, ಮಧ್ಯಾಹ್ನ ಪಿತ್ತ ಮತ್ತು ರಾತ್ರಿ ವಾತದೋಷದ ವೃದ್ಧಿ ಸಹಜ. ಆ ಕಾಲದಲ್ಲಿ ಸ್ವಲ್ಪವಾದರೂ ಆ ದೋಷಗಳ ವೃದ್ಧಿಲಕ್ಷಣಗಳ ಅನುಭವವಾಗುತ್ತದೆ. ಅದೇ ರೀತಿಯಾಗಿ ಋತುವಿಗೆ ಅನುಗುಣವಾಗಿ ಬೇರೆ ಬೇರೆ ವ್ಯಾಧಿಗಳು ಸಹಜವಾಗಿ ಕಾಣಿಸಿಕೊಳ್ಳಬಹುದು.
ಬೇರೆ ಬೇರೆ ಋತುಗಳಲ್ಲಿ ದೋಷಗಳ ಸ್ಥಿತಿ ಈ ರೀತಿ ಇರುತ್ತದೆ. ಹೇಮಂತದಲ್ಲಿ ಕಫ ಸಂಚಯವಾಗಿ ಪಿತ್ತವು ಪ್ರಶಮನವಾಗುತ್ತದೆ. ಶಿಶಿರದಲ್ಲಿ ಕಫ ಸಂಚಯ, ವಸಂತದಲ್ಲಿ ಕಫ ಪ್ರಕೋಪ, ಗ್ರೀಷ್ಮದಲ್ಲಿ ವಾತ ಸಂಚಯ, ವರ್ಷದಲ್ಲಿ ವಾತ ಪ್ರಕೋಪ ಮತ್ತು ಪಿತ್ತ ಸಂಚಯವಾಗಿ ಶರತ್ ಋತುವಿನಲ್ಲಿ ಪಿತ್ತ ಪ್ರಕೋಪವಾಗುತ್ತದೆ. ಈ ರೀತಿಯಾಗಿ ಋತುವೈಪರೀತ್ಯದಿಂದ ದೋಷಗಳ ಏರುಪೇರಾಗಿ ಅದರಿಂದ ಬೇರೆ ಬೇರೆ ರೀತಿಯ ವ್ಯಾಧಿಗಳು ಕಾಣಿಸಿಕೊಳ್ಳಬಹುದು.
ಇದಲ್ಲದೇ ನಾವು ಮಾಡುವ ಪರಿಸರ ನಾಶದಿಂದ ಅಕಾಲದಲ್ಲಿ ಮಳೆ ಬಿಸಿಲು ಕಂಡುಬಂದು, ಋತು ವಿಕೋಪದಿಂದಲೂ ರೋಗಗಳು ಉಂಟಾಗುತ್ತವೆ. ಇವೆಲ್ಲವೂ ಪರಿಣಾಮಜನ್ಯ ವಿಕೃತಿಗಳೆನಿಸುತ್ತವೆ. ಬಾಲ್ಯ, ಕೌಮಾರ್ಯಾ, ಯೌವನ, ವೃದ್ಧಾಪ್ಯ, ಮರಣ ಜತೆಗೆ ಹಸಿವೆ, ಬಾಯಾರಿಕೆ ಎಂಬ ಕಾಲ ಜನ್ಯವಾದ ಸ್ವಾಭಾವಿಕ ಪರಿಣಾಮಗಳು. ಇವಲ್ಲದೆ ದೈವವೆಂಬ ಪೂರ್ವದೇಹಕೃತ ಕರ್ಮಗಳೂ ವ್ಯಾಧಿ ರೂಪದಲ್ಲಿ ಬಾಧಿಸಬಹುದು.
ಒಟ್ಟಾರೆ ನಮ್ಮ ಶಾಸ್ತ್ರಗಳು ಹೇಳುವಂತೆ ಸ್ವಾಸ್ಥ್ಯ ಪ್ರಾಪ್ತಿಗಾಗಿ ಹೀಗೆ ವರ್ತಿಸಬೇಕಾದದ್ದು ಅನಿವಾರ್ಯ: ಪ್ರಜ್ಞಾಪರಾಧಗಳ ತ್ಯಾಗ, ಇಂದ್ರಿಯಗಳ ಉಪಶಮನ, ಸ್ಮೃತಿ, ದೇಶಕಾಲಗಳ ಜ್ಞಾನ, ತನ್ನನ್ನು ಸರಿಯಾಗಿ ಅರಿತುಕೊಳ್ಳುವುದು, ನಿತ್ಯವೂ ಸದ್ವೃತ್ತಗಳ ಆಚರಣೆ. ಇವು ಬಾಹ್ಯ ಕಾರಣ ಗಳಿಂದ ರೋಗಗಳನ್ನು ತಡೆಯಲು ಮಾರ್ಗಗಳಾಗಿವೆ. ಇದನ್ನು ಮೊದಲಿನಿಂದಲೇ ಆಚರಿಸುತ್ತಾ ಬರಬೇಕು. ಇದರ ಜತೆಗೆ ಆಪ್ತೋಪದೇಶದ ಜ್ಞಾನ, ಗ್ರಹಿಸಿದ ಜ್ಞಾನದ ಸರಿಯಾದ ಆಚರಣೆ- ಇವು ಬಾರದ ರೋಗಗಳನ್ನು ತಡೆಯಲು ಮತ್ತು ಬಂದದ್ದನ್ನು ಶಾಂತಗೊಳಿಸಲು ಇರುವ ಶಾಸ್ತ್ರ ಸಮ್ಮತ ವಾದ ಉಪಾಯಗಳು!!