ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ಈ ಮರಗಳು ನಮ್ಮೂರಿನ ಮಕ್ಕಳ ಸ್ನೇಹಿತರು !

ನಮ್ಮ ಮನೆಯ ಸುತ್ತಮುತ್ತ ನನಗಿದ್ದ ಸಹಪಾಠಿಗಳು ಕೇವಲ ಬೆರಳೆಣಿಕೆಯಷ್ಟು. ಮಲೆನಾಡಿನ ಸೆರಗಿನಲ್ಲಿದ್ದ ನಮ್ಮೂರಿನಲ್ಲಿ ಒಂದು ಮನೆಗೂ ಇನ್ನೊಂದು ಮನೆಗೂ ಸಾಕಷ್ಟು ಅಂತರ ತಾನೆ! ಕೆಲವು ಮನೆಗಳೇ ಒಂದು ಹಳ್ಳಿಯಾಗಿಯೂ ಗುರುತಿಸಿಕೊಂಡಿದ್ದವು; ದೂರದಲ್ಲಿದ್ದವು. ಹೀಗಾಗಿ, ಮೂರ‍್ನಾಲ್ಕು ಕಿ.ಮೀ. ಸುತ್ತಳತೆಯ ನಮ್ಮೂರಿನಲ್ಲಿ ನನಗೆ ಗೆಳೆಯರಾಗಿ ದೊರೆಯುತ್ತಿದ್ದ ಸಹಪಾಠಿಗಳು ಬೆರಳೆಣಿಕೆ ಯಷ್ಟು ಮಾತ್ರ.

ಶಶಾಂಕಣ

ಹಳ್ಳಿ ಎಂದರೆ ಅಷ್ಟೇ ತಾನೆ! ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ಮರಗಳನ್ನು ಬೆಳೆಸುತ್ತಾರೆ ಅಥವಾ ಅವೇ ಬೆಳೆಯುತ್ತವೆ. ಬಯಲು ಸೀಮೆಯ ಕೃಷಿಕರು ಅಲ್ಲಲ್ಲಿ ಸಾಧ್ಯವಾದಷ್ಟು ಮರಗಳನ್ನು ಬೆಳೆಸುತ್ತಾರೆ; ಮಾವು, ಬೇವು, ಆಲ, ಬೇಲ, ಹೊಂಗೆ ಇತ್ಯಾದಿ ಮರಗಳು ಬಯಲುಸೀಮೆಯಲ್ಲಿ ಜಾಸ್ತಿ. ಆದರೆ, ಮಲೆನಾಡಿನ ಅಂಚಿನಲ್ಲಿರುವ ನಮ್ಮ ಹಳ್ಳಿಯಲ್ಲಿ, ಆ ರೀತಿ ಮರಗಳನ್ನು ಬೆಳೆಸಬೇಕಾದ ಅನಿವಾರ್ಯತೆ ಇಲ್ಲ; ಅವು ತಾನಾಗಿಯೇ ಬೆಳೆಯುತ್ತವೆ!

ಎಷ್ಟರ ಮಟ್ಟಿಗೆ ಎಂದರೆ, ಮನೆಯನ್ನೇ ಕವಚಿಕೊಳ್ಳುವಷ್ಟು! ನಮ್ಮ ಹಳ್ಳಿಯ ಮನೆಯ ಸುತ್ತಲೂ ನಾನಾ ರೀತಿಯ ಮರಗಳಿದ್ದವು. ಅತ್ತ ನೋಡಿದರೂ ಮರ, ಇತ್ತ ನೋಡಿದರೂ ಮರ; ಮನೆ ಎದುರಿ ನಲ್ಲಿ ಮಾವಿನ ಮರ, ಅಲ್ಲೇ ಆಚೆ ಪೇರಳೆ ಮರ, ಎಡ ಭಾಗದಲ್ಲಿ ಅಡಕೆ ಮರ, ಇನ್ನಷ್ಟು ದೂರ ದಲ್ಲಿ ಹಲಸಿನ ಮರ, ಅಮಟೆ ಮರ, ಹೆಬ್ಬಲಸಿನ ಮರ, ದೀವಿ ಹಲಸಿನ ಮರ, ಹುಣಸೆ ಮರ, ಕಾಟುಮಾವಿನ- ಎಲ್ಲವೂ ಮನೆ ಎದುರು ನಿಂತು ದಿಟ್ಟಿ ಹಾಯಿಸಿದರೆ ಕಾಣಿಸುವಷ್ಟು ಹತ್ತಿರದಲ್ಲಿ! ಇದರ ಜತೆ ಮನೆಯ ಮೇಲೂ ಚಾಚಿಕೊಂಡ ಒಂದೆರಡು ತೆಂಗಿನ ಮರಗಳು!

ನಮ್ಮ ಮನೆಯ ಸುತ್ತಮುತ್ತ ನನಗಿದ್ದ ಸಹಪಾಠಿಗಳು ಕೇವಲ ಬೆರಳೆಣಿಕೆಯಷ್ಟು. ಮಲೆನಾಡಿನ ಸೆರಗಿನಲ್ಲಿದ್ದ ನಮ್ಮೂರಿನಲ್ಲಿ ಒಂದು ಮನೆಗೂ ಇನ್ನೊಂದು ಮನೆಗೂ ಸಾಕಷ್ಟು ಅಂತರ ತಾನೆ! ಕೆಲವು ಮನೆಗಳೇ ಒಂದು ಹಳ್ಳಿಯಾಗಿಯೂ ಗುರುತಿಸಿಕೊಂಡಿದ್ದವು; ದೂರದ ಲ್ಲಿದ್ದವು. ಹೀಗಾಗಿ, ಮೂರ‍್ನಾಲ್ಕು ಕಿ.ಮೀ. ಸುತ್ತಳತೆಯ ನಮ್ಮೂರಿನಲ್ಲಿ ನನಗೆ ಗೆಳೆಯರಾಗಿ ದೊರೆಯುತ್ತಿದ್ದ ಸಹಪಾಠಿಗಳು ಬೆರಳೆಣಿಕೆಯಷ್ಟು ಮಾತ್ರ.

ಇದನ್ನೂ ಓದಿ: Shashidhara Halady Column: ನೀಲಿ ಬಾನಿನಲ್ಲಿ ಹಾರಿ ಬಂದ ಬೆಳ್ಳಕ್ಕಿ ಸಾಲು

ನಮ್ಮ ಮನೆಯ ಸುತ್ತ ಮುತ್ತ ಇದ್ದ ಇಂತಹ ಸಹಪಾಠಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಮರಗಳು! ನಮ್ಮ ಮನೆಯ ಸುತ್ತ ಹರಡಿದ್ದ ಮರಗಳು, ಹೂವಿನ ಗಿಡಗಳು, ಕೆಲವು ಬಳ್ಳಿಗಳು, ಮರಸಣಿಗೆ ಗಿಡದಂತಹ ಗಡ್ಡೆಯ ಗಿಡಗಳು ನನ್ನ ಗೆಳೆಯರಾಗಿದ್ದರು! ಹೇಗೆಂದು ಕೇಳುತ್ತೀರಾ? ದೀರ್ಘ ಕಾಲದ ಒಡನಾಟದ ಮೂಲಕ, ದಿನ ನಿತ್ಯ ಬೆಳಗಾಗೆದ್ದ ಕೂಡಲೆ ದೃಷ್ಟಿಗೆ ಬೀಳುವ ಈ ಮರಗಿಡಗಳೇ ನನ್ನ ಗೆಳೆಯರು. ಅದು ಅಚ್ಚರಿಯೂ ಅಲ್ಲ, ಅತಿಶಯೋಕ್ತಿಯೂ ಅಲ್ಲ.

ಆ ಮರಗಳಲ್ಲಿ ಅದೆಷ್ಟು ವೈವಿಧ್ಯ! ಕೆಲವು ಕುಳ್ಳ, ಕೆಲವು ಎತ್ತರ, ಕೆಲವು ದಪ್ಪ, ಕೆಲವು ಸಪೂರ, ಕೆಲವುಗಳ ತುಂಬಾ ದಟ್ಟ ಹಸಿರೆಲೆ, ಅದೆಷ್ಟು ದಟ್ಟವೆಂದರೆ ಅಂತಹ ಮರಗಳಲ್ಲಿ ಯಾರಾದರೂ ಅಡಗಿ ಕುಳಿತರೆ ಕಾಣದೇ ಇರುವಷ್ಟು! ಆದ್ದರಿಂದಲೇ ಇರಬೇಕು, ಅಂತಹ ಕೆಲವು ದಟ್ಟ ಎಲೆಗಳ ಬೃಹತ್ ಮರಗಳಲ್ಲಿ ಭೂತಗಳು ವಾಸಿಸುತ್ತಿದ್ದವು ಎಂದು ನಮ್ಮೂರಿನವರು ಹೆದರುತ್ತಿದ್ದರು.

ಇನ್ನು ಕೆಲವು ಮರಗಳ ಎಲೆಗಳು ವಿರಳ, ತೆಳು. ಕೆಲವು ಮರ ಬೋಳು, ಬೋಳು, ನೆಟ್ಟಗೆ ಏಕಾಂಗಿ ಯಾಗಿ ಬೆಳೆದು ನಿಂತಿರುತ್ತಿದ್ದವು. ಇನ್ನೂ ಕೆಲವು ಮರಗಳು ವಿಶಾಲವಾಗಿ ಹರಡಿಕೊಂಡು, ರೆಂಬೆ ಕೊಂಬೆಗಳನ್ನು ಬಾನಿನುದ್ದಕ್ಕೂ ಚಾಚಿರುತ್ತವೆ. ಮಾತ್ರವಲ್ಲ, ತಮ್ಮ ಮಡಿಲಿನಲ್ಲಿ ಹಾವಸೆ, ಬಂದಳಿಕೆ, ಅಪ್ಪುಬಳ್ಳಿ, ಮರಕೆಸದಂತಹ ಪುಟಾಣಿ ಗಿಡಗಳಿಗೆ ಆಶ್ರಯ ನೀಡುತ್ತವೆ. ಹಕ್ಕಿ, ಪ್ರಾಣಿಗಳೂ ಅಷ್ಟೆ - ಕೆಲವು ಮರಗಳನ್ನು ಹುಡುಕಿಕೊಂಡು, ಹೋಗಿ ಅಲ್ಲೇ ಬೀಡುಬಿಟ್ಟು, ಅಲ್ಲೇ ಗೂಡು ಕಟ್ಟಿ, ಮರಗಳು ನೀಡುವ ಹಣ್ಣು, ಮಕರಂ ದಗಳನ್ನು ಸೇವಿಸಿ, ಆ ಮರದ ಆತಿಥ್ಯ ಪಡೆಯುವಲ್ಲಿ ಖುಷಿ ಕಾಣುತ್ತಿದ್ದವು.

71

ನಮ್ಮ ಮನೆಯ ಸುತ್ತಲಿದ್ದ ಮರಗಳಿಗೂ, ಮಾನವರಿಗೂ ಒಂದು ಸಾಮ್ಯತೆಯನ್ನು ನಾನು ಕಂಡಿ ದ್ದೇನೆ. ಮನುಷ್ಯರಲ್ಲೂ ಕೆಲವು ಬಗೆ: ಸದಾಕಾಲ ಗೆಳೆಯರ ಗುಂಪನ್ನು ಕಟ್ಟಿಕೊಂಡು, ಅವರಿಗೆ ಸಹಾಯ ಮಾಡು ತ್ತಾ, ಕೆಲವರಿಗೆ ಆಹಾರ, ಪಾನೀಯ ನೀಡುತ್ತಾ, ಪರರ ಹಿತವೂ ಎನ್ನ ಹಿತ ಎಂದುಕೊಂಡು ದಿನಚರಿ ನಡೆಸುವವರಿದ್ದಾರೆ. ಮರಗಳೂ ಇಂತಹ ಸಹಾಯ ಮಾಡುವ ಗುಣ ಹೊಂದಿವೆ. ಮನುಷ್ಯರಲ್ಲಿ ಇನ್ನು ಕೆಲವರು, ತಮ್ಮ ಪಾಡಿಗೆ ತಾವು ಇರುವವರು: ಏಕಾಂಗಿ ಬದುಕು ಎನ್ನಬಹುದು; ಇದೇ ರೀತಿಯ ಕೆಲವು ಮರಗಳೂ ಇವೆ!

ಯಾವ ಹಕ್ಕಿ ಪಕ್ಷಿಗೂ ಆತಿಥ್ಯ ನೀಡದೇ ಇರುವಂತಹವು, ನೆರಳನ್ನೂ ಕೊಡದಂತಹವು, ಯಾವ ಪ್ರಾಣಿಗೂ ಆಶ್ರಯ ನೀಡದೇ ಇರುವಂತಹವು- ಅಕೇಶಿಯಾದಂತಹ ಬರಡು ಮರಗಳು. ದೀರ್ಘ ಕಾಲ ನಮ್ಮ ಮನೆಯ ಸುತ್ತಲೂ ಬೆಳೆದುಕೊಂಡಿದ್ದ ಹಲವು ಮರಗಳು ನನಗೆ ನಾನಾ ರೀತಿಯ ಸಹಾಯ ಮಾಡುತ್ತಿದ್ದವು! ಹಲವು ಬಾರಿ ನೇರ ಮತ್ತು ಪರೋಕ್ಷ ಸಹಾಯ ನೀಡಿ, ಸಿಹಿಹಣ್ಣು ಗಳನ್ನು ತಿನ್ನಲು ಕೊಟ್ಟು, ಸುವಾಸಿತ ಹೂವು ಗಳನ್ನು ನೀಡಿ, ಗುಡುಗು ಮಳೆ ಬಂದಾಗ ರಕ್ಷಣೆ ನೀಡಿದ ಆ ಮರಗಳು, ನನ್ನ ಬಾಲ್ಯಸ್ನೇಹಿತರಾಗಿ ಪರಿವರ್ತನೆಗೊಂಡದ್ದು, ನಿಸರ್ಗ ಸಹಜ ಕ್ರಿಯೆಯೇ ಇರಬೇಕು.

ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ಕೆಲವು ಮರಗಳ ಸವಿನೆನಪನ್ನು ಮರೆಯುವಂತೆಯೇ ಇಲ್ಲ. ನಾನಾಗ ಮೂರನೆಯ ತರಗತಿಯಲ್ಲಿದ್ದೆ. ಎಂದಿನಂತೆ ಸ್ಲೇಟು, ಬಳಪ ಮತ್ತು ಆ ತರಗತಿಗೆ ಆಗ ಇದ್ದ ಏಕೈಕ ಪಠ್ಯಪುಸ್ತಕವನ್ನು ಪುಟ್ಟ ಬಟ್ಟೆಯ ಚೀಲಕ್ಕೆ ತುಂಬಿಕೊಂ ಡು, ಗದ್ದೆಯ ಅಂಚಿನಲ್ಲಿ ಸಾಗಿ, ಒಂದು -ಫರ್ಲಾಂಗು ದೂರದ ಮುಡಾರಿ ತಲುಪಿದಾಗ ಒಂದು ಪುಟ್ಟ ವಿರಾಮ. ಮುಡಾರಿ ಮನೆಯಿಂದ ಇಬ್ಬರು ಅಥವಾ ಮೂವರು ಮಕ್ಕಳೊಡಗೂಡಿ, ಆ ಮನೆಯ ಹಿಂಭಾಗದ ಹಾಡಿಯ ನಡುವೆ ಸಾಗುತ್ತಿತ್ತು ನಮ್ಮ ದಾರಿ. ಆ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಮರಗಳು, ಗಿಡಗಳು, ಬಳ್ಳಿಗಳು.

ಅವುಗಳ ಸಂಖ್ಯೆ ಅಕ್ಷರಶಃ ನೂರಾರು. ಒಂದು ದಿನ ಶಾಲೆಯಿಂದ ವಾಪಸಾಗುವಾಗ, ಆ ಮರಗಳ ಪೈಕಿ ಒಂದು ಮಧ್ಯಮ ಗಾತ್ರದ ಒಂದನ್ನು ಏರಿದ ಸಹಪಾಠಿಯು, ಕೆಂಪನೆಯ ಹಣ್ಣುಗಳನ್ನು ಕಿತ್ತು ಕೆಳಗೆಸೆದ. ನಾವೆಲ್ಲರೂ ಆರಿಸಿಕೊಂಡೆವು. ಅದೇಕೋ ಆ ವರೆಗೆ ಆ ರೀತಿಯ ಹಣ್ಣುಗಳನ್ನೇ ನೋಡಿರದ ನನಗೆ, ಅವುಗಳನ್ನು ಬಿಡಿಸಿದಾಗ ಬಹು ಅಚ್ಚರಿ!

ಕೆಂಪನೆಯ ಆ ಹಣ್ಣಿನೊಳಗೆ ಗುಲಾಬಿ ಬಣ್ಣದ ನಾಲ್ಕಾರು ತೊಳೆಗಳು. ಬಾಯಲ್ಲಿಟ್ಟರೆ ರುಚಿಕರ, ಹುಳಿ ಮಿಶ್ರಿತ ಸಿಹಿ; ಮಾಂಸಲ ಭಾಗವನ್ನು ತಿಂದು ಬೀಜವನ್ನು ಉಗಿಯಬೇಕು. ಆ ಅದ್ಭುತ ರುಚಿಯನ್ನು ಸವಿದ ನನಗೆ, ಆ ಮರವೊಂದು ವಿಸ್ಮಯ ಎನಿಸಿತು. ಆ ಮರವನ್ನು ನಮ್ಮೂರಿನಲ್ಲಿ ಮುರಿನ ಮರ (ಪುನರ್ಪುಳಿ) ಎನ್ನುತ್ತಿದ್ದರು. ಮುರಿನ ಹಣ್ಣು ಮನುಷ್ಯರಿಗೆ ಸಹಾಯವನ್ನೂ ಮಾಡುತ್ತದೆ!

ಹಣ್ಣಿನ ತೊಗಟೆಯನ್ನು ಒಣಗಿಸಿಟ್ಟುಕೊಂಡು, ಮಳೆಗಾಲ ದಲ್ಲೂ ಚಳಿಗಾಲದಲ್ಲೂ ಸಾರು, ತಂಬುಳಿ, ಪಾನಕ, ಗೊಜ್ಜು ತಯಾರಿಸಬಹುದು! ಮುರಿನ ಹಣ್ಣಿನ ಆ ಸಿಪ್ಪೆಯಲ್ಲಿ ನಾನಾ ರೀತಿಯ ಔಷಽಯ ಗುಣಗಳೂ ಇವೆಯಂತೆ! ಮುಖ್ಯವಾಗಿ, ನಮ್ಮ ಹಳ್ಳಿಯವರನ್ನು ಕಾಡುವ ‘ಪಿತ್ತ ಪ್ರಕೋಪ’ಕ್ಕೆ ಅದರ ತಿಳಿ ಸಾರು ಉತ್ತಮ ಔಷಧ ಎನ್ನುತ್ತಿದ್ದರು. ತಿಳಿಸಾರು ಮಾಡಲು ಹಣ್ಣಿನ ತೊಗಟೆ ನೀಡುವ ಪುನರ್ಪುಳಿ ಮರದ ಹತ್ತಿರವೇ, ಬೃಹದಾಕಾರದ ಇನ್ನೊಂದು ಮರವಿತ್ತು.

ಊಟಕ್ಕೆ ನಂಜಿಕೊಳ್ಳಲು, ಹಪ್ಪಳ ಕರಿಯಲು, ಬೋಂಡಾ ಮಾಡಲು, ಹಲಸಿನ ಹಣ್ಣಿನ ಮುಳಕ ಮಾಡಲು ಅಗತ್ಯವಿರುವ ಎಣ್ಣೆಯನ್ನು ಈ ಮರದ ಕಾಯಿಯಿಂದ ತಯಾರಿಸುತ್ತಿದ್ದರು. ಅಂದಿನ ದಿನಗಳಲ್ಲಿ, ಅಂದರೆ ಇಪ್ಪತ್ತನೆಯ ಶತಮಾನದ ಮೊದಲರ್ಧದಲ್ಲಿ, ನಮ್ಮೂರಲ್ಲಿ 1975ರ ತನಕವೂ ಅಡುಗೆಗೆ ಬೇಕಾದ ಎಣ್ಣೆಯನ್ನು ನಮಗೆಲ್ಲಾ ನೀಡುತ್ತಿದ್ದ ಗೆಳೆಯ ಎಂದರೆ, ಇದೇ ದೂಪದ ಮರ. ಪ್ರತಿ ಮಳೆಗಾಲದಲ್ಲಿ ದೂಪದ ಮರ (ವಟೇರಿಯಾ ಇಂಡಿಕಾ) ಕೆಳಗೆ ಬೀಳಿಸುತ್ತಿದ್ದ ಸಾವಿರಾರು ಕಾಯಿಗಳನ್ನು ಹೆಕ್ಕಿತಂದು, ಬಿಡಿಸಿ, ತಿರುಳನ್ನು ಚೆನ್ನಾಗಿ ಅರೆದು, ಬೇಯಿಸಿ ಮೇಲೆ ತೇಲುವ ಎಣ್ಣೆಯನ್ನು ಸಂಗ್ರಹಿಸಿ, ವರ್ಷಪೂರ್ತಿ ಉಪಯೋಗಿಸಬಹುದಿತ್ತು!

ದೂಪದ ಎಣ್ಣೆಯು ಕ್ರಿಕೆಟ್ ಬಾಲ್ ರೀತಿ ಕಾಣಿಸುವ, ನೆಲದ ಮೇಲೆ ಉರುಳಿಸಿ ಬಿಡಬಹು ದಾದಂತಹ ಬಿಳಿ ಉಂಡೆ. ಆದರೆ, 1980ರ ದಶಕದ ನಂತರ, ಈ ಸ್ನೇಹಜೀವಿ ಮರದ ಕಾಯಿಗಳಿಂದ ಎಣ್ಣೆ ಉಂಡೆಗಳನ್ನು ತಯಾರಿಸುವ ಪದ್ಧತಿ ನಮ್ಮೂರಿನಲ್ಲಿ ನಿಂತುಹೋಯಿತು. ಅಂಗಡಿಗಳಲ್ಲಿ ಸಿಗುವ ಕಡಿಮೆ ಬೆಲೆಯ ಪಾಮ್ ಆಯಿಲ್ ಅಥವಾ ಪಾಮ್‌ಆಯಿಲ್ ಮಿಶ್ರಿತ ಕಡಲೆಕಾಯಿ ಎಣ್ಣೆಯನ್ನು ದುಡ್ಡುಕೊಟ್ಟು ತರುವುದೇ ಹೆಚ್ಚು ಸುಲಭ ಎಂದು ಎಲ್ಲರೂ ನಿರ್ಧರಿಸಿದ್ದರಿಂದ, ದೂಪದ ಎಣ್ಣೆ ಮಾಡುವ ಪದ್ಧತಿಯೇ ಮರೆಯಾಗಿದೆ.

ಮನೆ ಎದುರಿನ ಹಾಡಿಯಲ್ಲಿದ್ದ ಬೃಹದಾ ಕಾರದ ದೂಪದ ಮರಗಳ ಸಂಖ್ಯೆಯೂ ಈಗ ಕಡಿಮೆ ಯಾಗಿದೆ. ನಮ್ಮ ಮನೆಗೆ ತಾಗಿಕೊಂಡಂತೆ ಬೆಳೆದುನಿಂತಿದ್ದ ಕೆಲವು ಮರಗಳ ವಿಚಾರ ಸ್ವಾರಸ್ಯಕರ. ಹೂವು ನೀಡುವ ಬಾಗಾಳು ಮರ, ಉಪ್ಪಿನ ಕಾಯಿ ಮಾಡಲು, ಸಾಂಬಾರಿಗೆ ಹಾಕಲು ಕಾಯಿ ಕೊಡುವ ಅಮಟೆಕಾಯಿ ಮರ, ರುಚಿಕರ ಹಣ್ಣು ನೀಡುವ ಹೆಬ್ಬಲಸಿನ ಮರ, ಹುಣಸೆ ಬದಲಿಗೆ ಹುಳಿಗಾಗಿ ಉಪಯೋಗಿಸಬಲ್ಲ ಕಾಯಿ ನೀಡುವ ಬಿಂಬಲಿಕಾಯಿ ಮರ, ಮಾವಿನ ಮರ, ಹಲಸಿನ ಮರ, ದಾಸವಾಳದ ಪುಟ್ಟ ಮರ (ನಿಜ, ಮರದ ರೀತಿ ಬೆಳೆದ ಬಿಳಿ ದಾಸವಾಳದ ಗಿಡ), ಹಂಗಾರು ಮರ, ಇವೆಲ್ಲವೂ ನಮ್ಮ ಮನೆಯ ಸುತ್ತಲೂ ಸುಮಾರು 50 ಮೀಟರ್ ಅಂತರದಲ್ಲಿ ಬೆಳೆದು ನಿಂತಿದ್ದವು. ಇವುಗಳ ನಡುವೆ ಸ್ಥಾನ ಪಡೆದಿರುವ ದಾಸವಾಳ ಮತ್ತು ಹಂಗಾರದ ಕುರಿತು ಕೆಲವು ಸಾಲು ಬರೆಯಲೇ ಬೇಕು.

ನಮ್ಮ ಮನೆ ಅಂಗಳದಾಚೆ ಇರುವ ಹಟ್ಟಿಯ ಹಿಂಭಾಗದಲ್ಲಿ, ಎರಡು ಅಡಿ ಅಗಲವಿರುವ ಪುಟ್ಟ ತೋಡು ಒಂದಿದೆ. ತೋಟದಾಚೆಯಿರುವ ಅಗೇಡಿಯಲ್ಲಿ ಸುಗ್ಗಿಯ ಕಾಲದಲ್ಲಿ ಬತ್ತ ಬೆಳೆಯಲು ನೀರು ಸಾಗಿಸುವ ಕಾಲುವೆ ಅದು. ಆ ನೀರಿನ ತೊರೆಗೆ ತಾಗಿಕೊಂಡಂತೆ, ಎರಡು ದಾಸವಾಳ ಗಿಡಗಳು ಬೆಳೆದಿದ್ದವು. ಅವುಗಳನ್ನು ಗಿಡ ಎಂದು ಕರೆಯಲಾಗದಷ್ಟು ಎತ್ತರವಾಗಿ ಬೆಳೆದಿದ್ದವು. ಆ ಎರಡು ದಾಸವಾಳದ ಮರಗಳು ಅಲ್ಲಿ ತಲೆ ಎತ್ತಿ ನಿಂತಿದ್ದು, ಕೇವಲ ಹೂಗಿಡಗಳ ರೂಪದಲ್ಲಿ ಮಾತ್ರವಲ್ಲ, ಬದಲಿಗೆ ಆಹಾರಕ್ಕೆ ಎಲೆಗಳನ್ನು ಒದಗಿಸುವ ಮರಗಳ ರೀತಿ!

ಆ ಎರಡು ದಾಸವಾಳ ಗಿಡಗಳ ಎಲೆಗಳಿಗೆ ನಮ್ಮ ಹಳ್ಳಿಯಲ್ಲಿ ಎಲ್ಲಿಲ್ಲದ ಬೇಡಿಕೆ! ಆ ಎಲೆಗಳನ್ನು ಅಕ್ಕಿ ಹಿಟ್ಟಿನ ಜತೆ ಮಿಶ್ರಣಮಾಡಿ, ಅರೆದು ಸೆಕೆಹಿಟ್ಟು (ಇಡ್ಲಿಯ ಹಳ್ಳಿರೂಪ) ಮಾಡಿ ತಿಂದರೆ, ಆರೋಗ್ಯಕ್ಕೆ ಉತ್ತಮ. ನಮ್ಮ ತೋಟದಲ್ಲಿದ್ದ ಆ ಎರಡು ದಾಸವಾಳದ ಪುಟಾಣಿ ಮರಗಳು ‘ಬಿಳಿ ದಾಸವಾಳ’ ಪ್ರಭೇದದವು. ಪ್ರತಿ ದಿನ ಹತ್ತಾರು ಬಿಳಿ ಹೂವುಗಳನ್ನು ಬಿಡುತ್ತಿದ್ದು, ಅವುಗಳನ್ನು ಕೊಯ್ದು ದೇವರ ಪೂಜೆಗೆ ಬಳಸುತ್ತಿದ್ದ ಪದ್ಧತಿ ಇದ್ದದ್ದೇ. ಅದರ ಜತೆ, ಆ ದಾಸವಾಳದ ಎಲೆಗಳಲ್ಲಿದ್ದ ಔಷಽಯ ಗುಣಗಳಿಂದಾಗಿ, ಆಹಾರದ ಜತೆ ಅವುಗಳನ್ನು ಬೇಯಿಸಿ ತಿನ್ನುವ ಪರಿಪಾಠ ಸಣ್ಣ ಮಟ್ಟದ ವಿಸ್ಮಯವೇ ಸರಿ.

ಕೆಂಪು ಹೂ ಬಿಡುವ ದಾಸವಾಳದ ಎಲೆಯು, ಈ ರೀತಿ ಇಡ್ಲಿಯಲ್ಲಿ ಬೆರೆಸಲು ಅಷ್ಟೊಂದು ರುಚಿಕರ ಅಲ್ಲ ಎಂಬುದು ನಮ್ಮೂರಿನವರ ಅನುಭವ. ಇದೇ ರೀತಿ ಔಷಽಯ ಸಸ್ಯವಾಗಿ, ನಮ್ಮ ಮನೆಯವರ ಗೆಳೆಯ ನಾಗಿದ್ದು ಎಂದರೆ ಹಂಗಾರ ಮರ. ಮೈತುಂಬಾ ಮುಳ್ಳು ಹೊಂದಿದ್ದ, ಆ ಮೆದುಮರದ ತೊಗಟೆಯು ಜ್ವರ ಕಡಿಮೆ ಮಾಡುವಲ್ಲಿ ರಾಮಬಾಣ. ಆಗಿನ್ನೂ ನಮ್ಮ ಹಳ್ಳಿಯಲ್ಲಿ ಕ್ಲಿನಿಕ್ ಅಥವಾ ಆಸ್ಪತ್ರೆ ಇರಲಿಲ್ಲ. ಸುತ್ತಮುತ್ತ ಯಾರಿಗೇ ಮೂರು ಸೊರ ಸೊರವಾದರೆ, ಮೈ ಬೆಚ್ಚಗಾಗಿ ಜ್ವರ ಬಂದರೆ, ಅದೇ ಸಂಜೆ ಹಂಗಾರ ಮರದ ಎರಡಿಂಚು ತೊಗಟೆಯನ್ನು ಕೆತ್ತಿ, ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಸುವ ಪರಿಪಾಠ. ಹಂಗಾರ ಕೆತ್ತೆ ಕಷಾಯಕ್ಕೆ ಮೆಣಸಿನ ಕಾಳನ್ನು ಪುಡಿಮಾಡಿ ಕುದಿಸಿದರಂತೂ, ಹೆಚ್ಚಿನ ಜ್ವರಗಳು ಓಡಿಹೋಗುತ್ತಿದ್ದವು.

ಹಂಗಾರು ಮರವು ಮಕ್ಕಳ ಜತೆ ಬೇರೊಂದು ರೀತಿಯಲ್ಲಿ ಸ್ನೇಹಿತ- ಅರ್ಧ ಸೆಂಟಿಮೀಟರ್ ಉದ್ದನೆಯ ಅದರ ಕೆಂಪನೆಯ ಬೀಜಗಳು ಚೆನ್ನೆಮಣೆ ಆಡಲು ಚಂದವಾದ್ದರಿಂದ, ಸದಾಕಾಲ ಮಕ್ಕಳ ಜೇಬಿನಲ್ಲಿ ಅವುಗಳ ರಾಶಿ! ಮಕ್ಕಳಿಗೆ ತುಂಬಾ ಇಷ್ಟವಾಗುವ ಇನ್ನೊಂದು ಮರವೆಂದರೆ, ತೋಟದಿಂದಾಚೆ ಇದ್ದ ಹಕ್ಕಲಿನಲ್ಲಿದ್ದ ಗೋಯ್ ಮರ (ಗೋಡಂಬಿ) ಅವುಗಳ ಪೈಕಿ ಒಂದು ಮರದಲ್ಲಿ ಪ್ರತಿ ವರ್ಷ ಸಾವಿರಾರು ಬೀಜಗಳಾಗುತ್ತಿದ್ದವು.

ಒಗರು ರುಚಿಯ ಗೋಡಂಬಿ ಹಣ್ಣನ್ನು ತಿನ್ನುವುದು ಒಂದು ಸುಖವಾದರೆ, ಅದರ ಬೀಜವನ್ನು ಸಂಗ್ರಹಿಸಿ, ಚೆನ್ನಾಗಿ ಒಣಗಿಸಿ, ಸುಟ್ಟು ಗೋಯ್ ಅಡ (ತಿರುಳು) ತಿನ್ನುವುದು ಇನ್ನೊಂದು ಸುಖ. ಗೋಡಂಬಿಯ ಎಳೆಯ ಬೀಜಗಳನ್ನು ಸೊಲಿದು, ಪಲ್ಯ ಮಾಡುತ್ತಿದ್ದುದೂ ಇದೆ. ಆದರೆ, ಬೀಜದ ಸಿಪ್ಪೆ ಸುಲಿಯುವಾಗ, ಎಚ್ಚರ ವಹಿಸಿದಿದ್ದರೆ, ಕೈ ಮತ್ತು ಸೊನೆ ತಾಗಿದ ಚರ್ಮ ಸುಟ್ಟು ಹೋದೀತು! ಗೋಡಂಬಿ ಬೀಜಗಳನ್ನು ಉಪಯೋಗಿಸಿ, ಬಯಲಿನಲ್ಲಿ ಆಟವಾಡುವ ಪದ್ಧತಿಯೂ ಇತ್ತು! ಅದಕ್ಕೆಂದೇ, ದೊಡ್ಡ ಗಾತ್ರದ ಸಿಪ್ಪೆಸಹಿತ ಗೋಡಂಬಿ ಬೀಜಗಳನ್ನು ಮಕ್ಕಳು ಸಂಗ್ರಹಿಸುತ್ತಿದ್ದರು! ಮನೆಯಿಂದ ಸಾಮಾನ್ಯವಾಗಿ ತುಸು ದೂರ ದಲ್ಲಿರುತ್ತಿದ್ದ ಹುಣಸೇ ಮರವಂತೂ ಮಕ್ಕಳ ಸ್ನೇಹಿತ! ಹುಣಸೆ ಕಾಯಿಗೆ ಉಪ್ಪು ಬೆರೆಸಿ ತಿಂದರೆ ಸಿಗುವ ರುಚಿಗೆ ಬೇರೆ ಸಾಟಿಯುಂಟೆ! ನಮ್ಮೂರಿನ ಇಂತಹ ಹಲವು ಮರಗಳು ಮಕ್ಕಳ ಸ್ನೇಹಿತರು.

ಶಶಿಧರ ಹಾಲಾಡಿ

View all posts by this author