ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ನೀಲಿ ಬಾನಿನಲ್ಲಿ ಹಾರಿ ಬಂದ ಬೆಳ್ಳಕ್ಕಿ ಸಾಲು

ಒಂದು ಮುಂಜಾನೆ, ಗದ್ದೆ ಕೆಲಸ ಮಾಡುವ ಕಾರ್ಮಿಕರು, ಆರೆಂಟು ಮಂದಿ ಬಹುಬೇಗನೆ ಬಂದಿದ್ದರು- ಅವರ ನಡುವಿನ ಒಬ್ಬನು, ಮೇಸಿಯ ಕೆಲಸವನ್ನು ತಾನೇ ಆವಾಹಿಸಿಕೊಂಡು, ‘ಎಲ್ಲಾ ಬನ್ನಿ, ದರೆ ಹತ್ತಿ, ಹಕ್ಕಲಿಗೆ ಹ್ವಾಪ, ಅಲ್ಲಿ ಮಸ್ತ್ ಮುರಕಲ್ಲು ಇದ್ದೊ’ ಎಂದು ಹೇಳಿದ್ದೇ ತಡ, ಎಲ್ಲರೂ ಮನೆ ಹಿಂದಿನ ಒಂದು ಇಳಿಜಾರಿನ ಗುಡ್ಡದ ದಾರಿಯನ್ನೇರಿ, ಹಕ್ಕಲಿನತ್ತ ನಡೆದರು.

ನೀಲಿ ಬಾನಿನಲ್ಲಿ ಹಾರಿ ಬಂದ ಬೆಳ್ಳಕ್ಕಿ ಸಾಲು

-

ಶಶಾಂಕಣ

ವರ್ಷದ ಹಲವು ತಿಂಗಳುಗಳಲ್ಲಿ, ನಮ್ಮ ಹಳ್ಳಿಮನೆಯ ಮುಂಭಾಗದಲ್ಲಿ ನಿಂತಾಗ ಕಾಣಿಸುವ ಒಂದು ದೃಶ್ಯಕಾವ್ಯವು, ಮನದಲ್ಲಿ ಮೂಡಿಸಿರುವ ಮಧುರ ಭಾವನೆಗಳನ್ನು ಅಕ್ಷರಗಳಲ್ಲಿ ಬಣ್ಣಿಸು ವುದು ತುಸು ಕಷ್ಟವೇ ಎಂದು ಹೇಳಬೇಕು. ಮನೆಯ ಅಂಗಳಕ್ಕೆ ಅಂಟಿಕೊಂಡಂತಿರುವ ಅಗೇಡಿಯ ಆಚೆಬದಿಯ ಅಂಚಿನ ಮೇಲೆ, ಸಾಲಾಗಿ ಕುಳಿತುಕೊಂಡಿರುವ ಬೆಳ್ಳಕ್ಕಿಗಳ ಸಾಲು, ಆ ಬೆಳ್ಳಕ್ಕಿಗಳ ವೈವಿಧ್ಯ- ಇದೇ ಆ ದೃಶ್ಯಕಾವ್ಯ! ಅಗೇಡಿಯಲ್ಲಿ ನೀರು ತುಂಬಿದ ದಿನಗಳಲ್ಲಂತೂ, ಆ ಬಿಳಿ ಹಕ್ಕಿಗಳ ಪ್ರತಿಬಿಂಬವು ನೀರಿನಲ್ಲಿ ಮೂಡಿ, ಆ ಮಧುರಾನುಭವವನ್ನು ಇಮ್ಮಡಿಗೊಳಿಸುವ ಪರಿಯಂತೂ, ಇನ್ನಷ್ಟು ಬೆರಗುಗೊಳಿಸುವಂತಹದ್ದು.

ಬೆಳ್ಳಕ್ಕಿಗಳ ಒಪ್ಪವಾದ, ಓರಣವಾದ ಆ ಸಾಲಿನ ಅಂದವನ್ನು ಇನ್ನಷ್ಟು ವಿವರವಾಗಿ ವರ್ಣಿಸಿ ದಾಗಲೇ, ನಿಮಗೂ ಆ ಒಂದು ಚಿತ್ತಾರವು, ಅದೇಕೆ ದೃಶ್ಯಕಾವ್ಯದ ಅನುಭವವನ್ನು ನೀಡುತ್ತದೆ ಎಂಬುದರ ಸ್ವಲ್ಪವಾದರೂ ಅರಿವಾಗಬಲ್ಲದು. ನಮ್ಮ ಹಳ್ಳಿ ಮನೆಯನ್ನು ಗದ್ದೆಯೊಂದರ ಮೇಲೆ ನಿರ್ಮಿಸಿದ್ದಾರೆ ಎಂಬುದು ಒಂದು ವಾಸ್ತವವೇ, ಹೊರತು ಅದರಲ್ಲಿ ಅತಿಶಯೋಕ್ತಿ ಇಲ್ಲ. ಕೆಲವು ದಶಕಗಳ ಹಿಂದೆ, ಆ ಪುಟ್ಟ ಮನೆಯ ಚಾವಡಿಯ ಭಾಗವನ್ನು ಸ್ಥಳೀಯ ಕೃಷಿಕಾರ್ಮಿಕರು ನಿರ್ಮಿಸುವಾಗ ನಾನು ಅಲ್ಲೇ ನಿಂತು ನೋಡುತ್ತಿದ್ದೆ!

ಒಂದು ಮುಂಜಾನೆ, ಗದ್ದೆ ಕೆಲಸ ಮಾಡುವ ಕಾರ್ಮಿಕರು, ಆರೆಂಟು ಮಂದಿ ಬಹುಬೇಗನೆ ಬಂದಿದ್ದರು- ಅವರ ನಡುವಿನ ಒಬ್ಬನು, ಮೇಸಿಯ ಕೆಲಸವನ್ನು ತಾನೇ ಆವಾಹಿಸಿಕೊಂಡು, ‘ಎಲ್ಲಾ ಬನ್ನಿ, ದರೆ ಹತ್ತಿ, ಹಕ್ಕಲಿಗೆ ಹ್ವಾಪ, ಅಲ್ಲಿ ಮಸ್ತ್ ಮುರಕಲ್ಲು ಇದ್ದೊ’ ಎಂದು ಹೇಳಿದ್ದೇ ತಡ, ಎಲ್ಲರೂ ಮನೆ ಹಿಂದಿನ ಒಂದು ಇಳಿಜಾರಿನ ಗುಡ್ಡದ ದಾರಿಯನ್ನೇರಿ, ಹಕ್ಕಲಿನತ್ತ ನಡೆದರು. ಒಂದರ್ಧಗಂಟೆಯ ಸಮಯದಲ್ಲಿ ನೂರಾರು ದುಂಡುಗಲ್ಲುಗಳನ್ನು ತಂದು ಅಂಗಳದ ಒಂದು ಮೂಲೆಯಲ್ಲಿ ರಾಶಿ ಹಾಕಿದರು. ಅದಾದ ನಂತರ, ಹಳೆಮನೆಯ ಅಂಗಳಕ್ಕೆ ತಾಗಿಕೊಂಡಿದ್ದ ಅಗೇಡಿಯಲ್ಲಿ, ಒಂದೂವರೆ ಅಡಿ ಅಗಲದ ಪಾಯವನ್ನು ತೋಡಿದರು. ಆ ಪಾಯದಲ್ಲಿ ಅರ್ಧ ಅಡಿ ನೀರು!

ಇದನ್ನೂ ಓದಿ: Shashidhara Halady Column: ಹಳ್ಳಿಯಲ್ಲಿ ಪ್ರಕಟಗೊಂಡ ನೂರಾರು ಕನ್ಡಡ ಪುಸ್ತಕ !

ಆ ನೀರು ತುಂಬಿದ ತಳಪಾಯದುದ್ದಕ್ಕೂ, ಹಕ್ಕಲಿನಿಂದ ತಂದಿದ್ದ ಮುರಗಲ್ಲುಗಳನ್ನು ಒಂದೊಂದಾಗಿ ಸಾಲಾಗಿ ಜೋಡಿಸಿದರು; ಅಲ್ಲಿಗೆ ಮನೆಯ ತಳಪಾಯದ ಕೆಲಸ ಮುಗಿಯಿತು. ಅಗೇಡಿಯಲ್ಲೇ ನೀರಿನ ನಡುವೆಯೇ ಆ ಸರಳ ತಳಪಾಯವನ್ನು ನಿರ್ಮಿಸಿದ್ದರಿಂದ, ಅದರ ಮೇಲೆ ಗೋಡೆಯನ್ನು ನಿರ್ಮಿಸಿದ್ದ ರಿಂದ, ಮುಂದಿನ ಮಳೆಗಾಲದಲ್ಲಿ ಚಾವಡಿಯ ಆ ಭಾಗವು ನಿಧಾನ ವಾಗಿ ಆರು ಇಂಚು ಕುಸಿದು ಹೋಗಿದ್ದಂತೂ ನಿಜ! ಸದ್ಯ, ಅದರಿಂದಾಗಿ, ಮನೆಯ ಗೋಡೆಗಳಲ್ಲಿ ಬಿರುಕು ಬಂದರೂ, ಬೀಳಲಿಲ್ಲ! ಗದ್ದೆಯಲ್ಲೇ ನಮ್ಮ ಮನೆಯನ್ನು ಕಟ್ಟಿದ್ದರು ಎಂಬುದನ್ನು ಖಚಿತವಾಗಿ ಹೇಳಲು ಈ ಸನ್ನಿವೇಶದ ವಿವರವನ್ನು ನೀಡಬೇಕಾಯಿತು! ಅದಿರಲಿ.

ಅಗೇಡಿಯ ಉಳಿದ ಅರ್ಧಭಾಗದಲ್ಲಿ, ಎಂದಿನಂತೆ ಬತ್ತದ ಕೃಷಿ ಮುಂದುವರಿಯಿತು. ದೀಪಾವಳಿ ಕಳೆದು, ಮೊದಲ ಬೆಳೆಯ ಕೊಯ್ಲು ನಡೆದು, ಎರಡನೆಯ ಬೆಳೆಗಾಗಿ ಅಗೇಡಿಯ ಉಳುಮೆ ಮಾಡಿ ನೀರು ನಿಲ್ಲಿಸಿದ ಸಂದರ್ಭ; ಒಂದು ಮುಂಜಾನೆ, ನಿದ್ದೆಯಿಂದೆದ್ದು ಹೊರಗೆ ಬಂದು ನೋಡಿದರೆ, 30 ಅಡಿ ದೂರದಲ್ಲಿರುವ ಅಗೇಡಿಯ ಆಚೆ ಭಾಗದ ಅಂಚಿನಲ್ಲಿ, ಸಾಲಾಗಿ ಬೆಳ್ಳಕ್ಕಿಗಳು ಕುಳಿತಿವೆ.

ಒಂದಲ್ಲ, ಎರಡಲ್ಲ, ಹತ್ತಾರು. ಬೆಳಗಿನ ಎಳೆಬಿಸಿಲಿನಲ್ಲಿ ಅವುಗಳ ಪ್ರತಿಬಿಂಬದ ಸಾಲು ಗದ್ದೆಯ ನೀರಿನಲ್ಲೂ ಪ್ರತಿ-ಲನಗೊಂಡು, ಮನೆ ಮುಂದೆ ರಾಶಿರಾಶಿ ಹಕ್ಕಿಗಳ ಚಿತ್ರಗಳನ್ನು ಕಟ್ಟಿಕೊಟ್ಟು, ಆ ಬೆಳಗಿನ ನಿಸರ್ಗ ದೃಶ್ಯಕ್ಕೆ ಮೆರಗನ್ನೇ ತಂದಂತಿತ್ತು! ಅಷ್ಟರಲ್ಲಿ ಕೃಷಿ ಕೆಲಸಕ್ಕೆಂದು ಅದೇ ದಾರಿ ಯಾಗಿ ನಡೆದು ಬಂದ ಕುಯಿರನಾಯಕನ ‘ಬಪ್ಪು ಬರ’ದ ನಡಿಗೆಯ ಹೆಜ್ಜೆ ಸದ್ದಿಗೆ, ಬೆಳ್ಳಕ್ಕಿಗಳೆಲ್ಲಾ ಒಮ್ಮೆಗೇ ಹಾರಿದವು! ಆಗ ಅವುಗಳ ನೋಟವು ‘ದೇವರು ರುಜು ಮಾಡಿದಂತೆ’ ಕಾಣಿಸಿ, ಆ ಮುಂಜಾನೆಯಲ್ಲಿ ಮನದ ತುಂಬಾ ದೈವಿಕ ಎನಿಸುವ ರಸಾನುಭೂತಿ ಯನ್ನೇ ತುಂಬಿತು.

71

ಗದ್ದೆಯ ನೀರಿನಲ್ಲಿ ಪ್ರತಿಬಿಂಬ ಮೂಡಿಸಿದ ಆ ಬೆಳ್ಳಕ್ಕಿ ಸಾಲು, ರೆಕ್ಕೆ ಬೀಸುತ್ತಾ ಬಾನಿನತ್ತ ಸಾಗಿದಾಗ, ಅಲ್ಲೊಂದು ಚಿತ್ರಕಾವ್ಯ ರಚನೆಗೊಂಡಿದ್ದಂತೂ ನಿಜ; ಆದರೆ, ಅಂತಹ ದೃಶ್ಯಗಳು ನಮ್ಮ ಹಳ್ಳಿಯ ಮನೆಯಲ್ಲಿದ್ದವರಿಗೆ ತೀರಾ ಅಪರೂಪವೇನಲ್ಲ!

ವರ್ಷದ ವಿವಿಧ ಋತುಗಳಲ್ಲಿ, ತಮ್ಮ ವೈವಿಧ್ಯಮಯ ದಿನಚರಿಯಿಂದ ಆ ಬೆಳ್ಳಕ್ಕಿಗಳು ನಮ್ಮ ಮನರಂಜಿಸುತ್ತಿದ್ದುದು, ಸ್ವಲ್ಪ ಸಾಮಾನ್ಯ ಎನಿಸುವ ಅನುಭವ ಎಂದೇ ಹೇಳಬಹುದು; ಅದನ್ನು ನೋಡುತ್ತಾ ಅರೆಚಣ ನಿಂತು, ಪ್ರಕೃತಿಯ ನಾನಾ ರೀತಿಯ ಆಟಗಳಲ್ಲಿ ಇದೊಂದು ದೃಶ್ಯ ಹೆಚ್ಚು ಮನಸೆಳೆಯುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಂಡಾಗ ಮಾತ್ರ, ಅದೊಂದು ವಿಶೇಷ ಅನುಭೂತಿಯಾಗಿ ಚಿತ್ರಗಟ್ಟುತ್ತದೆ.

ನಮ್ಮೂರಿನಲ್ಲಿ ಈ ರೀತಿ ಸಾಲಾಗಿ ಕುಳಿತು, ಮನೆಯೆದುರಿನ ವಿಶಾಲ ನೈಸರ್ಗಿಕ ಕ್ಯಾನ್‌ವಾಸ್‌ನಲ್ಲಿ ತಮ್ಮದೇ ರೀತಿಯಲ್ಲಿ ಸುಂದರ ಚಿತ್ರ ಬರೆಯುವ ಬೆಳ್ಳಕ್ಕಿಗಳಲ್ಲಿ ಹಲವು ಪ್ರಭೇದಗಳಿವೆ. ಸಮಾನ ಗಾತ್ರದ, ಅಚ್ಚ ಬಿಳಿ ಬಣ್ಣದ ಬೆಳ್ಳಕ್ಕಿಗಳಲ್ಲಿ, ಸಾಮಾನ್ಯವಾಗಿ ಕಾಣಸಿಗುವಂತಹವು ಕ್ಯಾಟಲ್ ಈಗ್ರೆಟ್ (ಪಶು ಬೆಳ್ಳಕ್ಕಿ) ಮತ್ತು ಲಿಟಲ್ ಈಗ್ರೆಟ್ (ಸಾಮಾನ್ಯ ಕೊಕ್ಕರೆ). ನಮ್ಮ ಹಳ್ಳಿಯವರು ಅವೆಲ್ಲವನ್ನೂ ‘ಕೊಕ್ಕಾನಕ್ಕಿ’ ಎಂಬ ಒಂದೇ ಹೆಸರಿನಲ್ಲಿ ಸಮೀಕರಿಸಿಬಿಟ್ಟಿದ್ದಾರೆ.

ಮೇಲ್ನೋಟಕ್ಕೆ ಅವುಗಳಲ್ಲಿ ಕಾಣಿಸುವ ಒಂದು ಪ್ರಮುಖ ವ್ಯತ್ಯಾಸವೆಂದರೆ, ಪಶು ಬೆಳ್ಳಕ್ಕಿಗಳ ಕೊಕ್ಕು ಹಳದಿ ಮಿಶ್ರಿತ; ಇನ್ನೊಂದು ಕೊಕ್ಕರೆಯ ಕೊಕ್ಕು ಕಪ್ಪು ಬಣ್ಣ. ನಮ್ಮ ಮನೆಯ ಎದುರಿನ ಗದ್ದೆಗಳಲ್ಲಿ ಹೆಚ್ಚಾಗಿ ಕಾಣಿಸುವಂತಹವು ಪಶು ಬೆಳ್ಳಕ್ಕಿಗಳು ಮಾತ್ರ. ಕಪ್ಪು ಬಣ್ಣದ ಕೊಕ್ಕು ಹೊತ್ತ ಕೊಕ್ಕರೆಗಳು ಅಪರೂಪಕ್ಕೆ ಮಾತ್ರ ಕಾಣಿಸುತ್ತವೆ.

ಬಯಲು ಸೀಮೆಯಲ್ಲಿ ಪಶುಗಳ ಸುತ್ತಮುತ್ತ ಓಡಾಡುತ್ತಾ, ಉಳುಮೆ ಮಾಡುವ ಎತ್ತುಗಳ ಜತೆಯಲ್ಲೇ ನೆಲದ ಮೇಲೆ ಕುಪ್ಪಳಿಸುತ್ತಾ, ಆಹಾರ ಹುಡುಕುವ ಅಭ್ಯಾಸದಿಂದಾಗಿ, ಅವುಗಳಿಗೆ ಪಶು ಬೆಳ್ಳಕ್ಕಿ ಎಂಬ ಹೆಸರು. ಆದರೆ, ಗದ್ದೆಗಳಲ್ಲಿ ನೀರು ತುಂಬಿದಾಗ, ಅಗೇಡಿಗೆಂದು ಗದ್ದೆಯನ್ನು ಉತ್ತು, ಹಸನು ಮಾಡಿದಾಗ, ಆ ಕೆಸರು ಗದ್ದೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಕಪ್ಪೆ ಮತ್ತು ಮೀನು ಗಳನ್ನು ಹಿಡಿಯುವುದರಲ್ಲೂ ಈ ಪಶು ಬೆಳ್ಳಕ್ಕಿಗಳು ನಿಸ್ಸೀಮರು.

ಅಚ್ಚ ಬಿಳಿ ಬಣ್ಣದ ಈ ಬೆಳ್ಳಕ್ಕಿಗಳು ದೃಶ್ಯಕಾವ್ಯದಂತಹ ಇನ್ನೊಂದು ಸನ್ನಿವೇಶದಲ್ಲಿ ಭಾಗಿಯಾಗು ವುದು, ಸಂಜೆಯ ಸಮಯದಲ್ಲಿ. ನಮ್ಮೂರಿನಲ್ಲಿ ಮಳೆಗಾಲವೆಂದರೆ, ಮೂರು ನಾಲ್ಕು ತಿಂಗಳುಗಳ ವಿದ್ಯಮಾನ ತಾನೆ!

ಪ್ರತಿ ವರ್ಷ ಮಳೆಗಾಲದಲ್ಲಿ ಹಲವು ವಾರಗಳ ಕಾಲ ಮಳೆ ಸುರಿಯುವ ಸೀಮೆ ನಮ್ಮದು. ಮಳೆಗಾಲ ದಲ್ಲಿ ನಡುನಡುವೆ, ಒಂದೆರಡು ದಿನವೋ, ನಾಲ್ಕೆಂಟು ದಿನವೋ ಹೊಳವಾಗುವು ದುಂಟು. ಆಗ, ಆಗಸದಲ್ಲಿ ದಟ್ಟ ಮೋಡವಿರಲಾರದು; ಅಲ್ಲಲ್ಲಿ ಮೋಡಗಳ ರಾಶಿ, ಕೆಲವೆಡೆ ಬಾನಿನ ದರ್ಶನ. ಅಂತಹ ದಿನಗಳಲ್ಲಿ, ಸಂಜೆಯ ಹೊತ್ತಿನಲ್ಲಿ, ಮೋಡಗಳ ನಡುವಿನಿಂದ ತೂರಿಬರುವ ಸೂರ್ಯನ ಕಿರಣಗಳು, ಒಮ್ಮೆಗೇ, ಗದ್ದೆಯಾಚೆಗಿನ ಹಕ್ಕಲಿನ ಗಿಡಮರಗಳ ಮೇಲೆ ಬಿದ್ದು, ಇಡೀ ದಿನದ ಮೋಡಕವಿದ ವಾತಾವರಣದ ಬೇಸರವನ್ನು ದೂರಮಾಡಿ, ಸುತ್ತಲ ಜಗವನ್ನು ಬೆಳಗುತ್ತವೆ.

ಸಂಜೆಯ ಐದು ಗಂಟೆಯ ನಂತರ, ಈ ರೀತಿ ಮರಗಿಡಗಳ ಮೇಲೆ ಬೀಳುವ ಕಿರಣಗಳು, ತಮ್ಮಲ್ಲಿನ ಇಳಿಬಿಸಿಲಿನ ಬಣ್ಣದ ರಾಶಿಯನ್ನು ಹಸುರಿನ ಮೇಲೆ ಸುರಿಸಿ, ಬೇರೊಂದೇ ಲೋಕ ಎನಿಸುವ ಚಿತ್ರಣವನ್ನು ಕಟ್ಟಿಕೊಡುವ ಪರಿ ಅವರ್ಣನೀಯ. ಸಂಜೆ ಐದರ ನಂತರ ಈ ರೀತಿ ಮೋಡಗಳ ನಡುವೆ ತೂರಿ ಬರುವ ಸೂರ್ಯಕಿರಣಗಳನ್ನು, ನಮ್ಮ ಹಳ್ಳಿಯ ಜನರು ‘ನೇಸರ ಬಿಸಿಲು’ ಎಂದೇ ಹೆಸರಿಸಿದ್ದಾರೆ. ವ್ಯಾಕರಣದ ದೃಷ್ಟಿಯಲ್ಲಿ ಅದೊಂದು ದ್ವಿರುಕ್ತಿ ಎನಿಸಿದರೂ, ಮನೆಯ ಎದುರಿನ ಆ ಚಂದದ ದೃಶ್ಯವನ್ನು ನೋಡುತ್ತಿದ್ದ ನಮಗೆಲ್ಲಾ, ಅದೊಂದು ‘ದೃಶ್ಯಕಾವ್ಯ’ವೇ ಸರಿ.

‘ನೇಸರ ಬಿಸಿಲಿ’ನ ಕಿರಣಗಳಲ್ಲಿ ಹಸುರು ಮರಗಳು ಸ್ನಾನ ಮಾಡುತ್ತಿರುವ ಆ ಸಂಜೆಯ ಬಾನಿನಲ್ಲಿ, ಒಮ್ಮೆಗೇ ಬೆಳ್ಳಕ್ಕಿಗಳ ಸಾಲೊಂದು ಹಾರಿ ಬಂದು, ಉತ್ತರದಿಂದ ಪೂರ್ವಕ್ಕೆ ತಿರುಗಿಕೊಂಡು, ಬಯಲಿನುದ್ದಕ್ಕೂ ಹಾರಿಹೋಗುವ ದೃಶ್ಯವಂತೂ, ಇನ್ನೂ ಅಂದ. ‘ಹಕ್ಕಿ ಹಾರುತಿದೆ ನೋಡಿ ದಿರಾ..’ ಎಂಬ ಕವಿವಾಣಿ ನೆನಪಾಗುವ ಆ ಹೊತ್ತಿನಲ್ಲಿ, ನನಗನಿಸುತ್ತಿದ್ದುದು ‘ನೇಸರ ಬಿಸಿನಲಿ ಸಾಗಿದೆ ನೋಡಿ, ಬೆಳ್ಳಕ್ಕಿಗಳ ಶಿಸ್ತಿನ ಸಾಲು..!’

ವರ್ಷದ ವಿವಿಧ ತಿಂಗಳುಗಳಲ್ಲಿ ಈ ಬೆಳ್ಳಕ್ಕಿಗಳ ದಿನಚರಿಯು ಬೇರೆ ಬೇರೆ ತೆರ ಎಂದು ಹೇಳಿದೆ ನಲ್ಲಾ, ಅದನ್ನು ಸ್ಪಷ್ಟವಾಗಿ ಗುರುತಿಸಲು, ಮಳೆಗಾಲ ಕಳೆದು ಬೇಸಗೆ ಬರಬೇಕು. ಎರಡನೆಯ ಬೆಳೆ ಕೊಯ್ಲು ಆಗಿ, ಶಿವರಾತ್ರಿಯ ನಂತರ ನಮ್ಮ ಗದ್ದೆಗಳು ಖಾಲಿಯಾಗಿರುತ್ತವೆ; ಕೆಲವರು ಉದ್ದು, ಹೆಸರುಕಾಳು ಮೊದಲಾದ ಧಾನ್ಯಗಳನ್ನು ಆಗ ಬಿತ್ತುವುದುಂಟು. ಅದಕ್ಕಾಗಿ ಗದ್ದೆಯನ್ನು ಉಳು ವಾಗ, ಪಶು ಬೆಳ್ಳಕ್ಕಿಗಳು, ತಮ್ಮ ನಾಮಧೇಯಕ್ಕನುಗುಣವಾಗಿ, ಉಳುಮೆ ಮಾಡುವ ಹೋರಿಗಳ ಹಿಂದೆಯೇ ಸಾಗುತ್ತವೆ.

ಹೋರಿಗಳು ನೊಗ ಹೊತ್ತು ಮುಂದೆ ಮುಂದೆ ಸಾಗಿದಂತೆಲ್ಲಾ, ನೆಲದ ಮೇಲೆ ಕುಳಿತಿದ್ದ ಮಿಡತೆ ಮತ್ತಿತರ ಕೀಟಗಳು ಹಾರುತ್ತವೆ; ಅವನ್ನು ಗುರುತಿಸಿ, ಹಿಡಿದು ತಿನ್ನುವುದು ಈ ಬೆಳ್ಳಕ್ಕಿಗಳ ಆ ಋತು ವಿನ ದಿನಚರಿ. ಉಳುಮೆ ಮಾಡಿದ ನಂತರವೂ, ಹಗಲಿಡೀ ಗದ್ದೆಗಳಲ್ಲಿ ಅತ್ತಿತ್ತ ಓಡಾಡುತ್ತಾ, ನೆಲದಲ್ಲಿರುವ ಚಾರಟೆ, ಎರೆಹುಳ ಮತ್ತಿತರ ಕೀಟಗಳನ್ನು ಕೊಕ್ಕಿನಿಂದ ಹಿಡಿದು ಹೊಟ್ಟೆಗಿಳಿಸಿ, ಸಂಜೆಯಾಗುತ್ತಿದ್ದಂತೆ, ಗುಂಪಾಗಿ ಹೊರಟು, ಅದಾವುದೋ ದೂರದ ಮರದ ಮೇಲೆ ಕುಳಿತು ರಾತ್ರಿಯ ನಿದ್ದೆಗೆ ಸಿದ್ಧವಾಗುತ್ತವೆ.

ಈಚಿನ ವರ್ಷಗಳಲ್ಲಿ, ಈ ಕೊಕ್ಕರೆಗಳ ಜತೆಯಲ್ಲೇ, ಗದ್ದೆಯಲ್ಲಿ ಕಾಣಿಸುವ ಹಕ್ಕಿಗಳೆಂದರೆ ನವಿಲು ಗಳು! ಕೆಲವು ದಶಕಗಳ ಹಿಂದೆ ನಮ್ಮ ಹಳ್ಳಿಯಲ್ಲಿ ನವಿಲುಗಳಿರಲಿಲ್ಲ; ದೂರದ ಅದಾವುದೋ ಹಳ್ಳಿಗಳಲ್ಲಿ ಅವು ಆಗಾಗ ಕಾಣಿಸುತ್ತಿವೆ ಎಂಬ ಸುದ್ದಿಯೇ ನಮಗೆ ಬೆರಗನ್ನು ತರುತ್ತಿತ್ತು. ಆದರೆ, ಈಚಿನ ಒಂದೆರಡು ದಶಕಗಳಲ್ಲಿ, ಮನೆ ಎದುರು ನವಿಲುಗಳ ಓಡಾಟ, ಒಮ್ಮೊಮ್ಮೆ ಅವುಗಳ ನರ್ತನ, ತಾಯಿ ನವಿಲು ನಾಲ್ಕಾರು ಮರಿನವಿಲುಗಳನ್ನು ಕಟ್ಟಿಕೊಂಡು ಗದ್ದೆಯುದ್ದಕ್ಕೂ ಓಡಾಡು ವುದು ಎಲ್ಲಾ ಮಾಮೂಲು ಎನಿಸಿದೆ. ಕೊಯ್ಲು ಆದ ನಂತರ, ಗದ್ದೆಯುದ್ದಕ್ಕೂ ಓಡಾಡುವ ಬಿಳಿ ಕೊಕ್ಕರೆಗಳ ಜತೆಯಲ್ಲೇ, ಒಂದೆರಡು ನವಿಲುಗಳು ಹೆಜ್ಜೆ ಹಾಕುತ್ತಾ, ಕ್ರಿಮಿ ಕೀಟಗಳನ್ನು ಹಿಡಿಯುತ್ತಾ ಇರುತ್ತವೆ.

ಮುಂಗಾರಿನ ದಿನಗಳಲ್ಲಿ, ಮೋಡ ಕವಿದ ವಾತಾವರಣವಿದ್ದಾಗ, ಗದ್ದೆಯ ಒಂದು ಮೂಲೆಯಲ್ಲಿ ಗಂಡು ನವಿಲೊಂದು ಗರಿ ಬಿಚ್ಚಿ ನರ್ತನ ಮಾಡುವುದೂ ಇದೆ. ಬಿಳಿ ಬಣ್ಣದ ಕೊಕ್ಕರೆಗಳು ಮತ್ತು ವಿವಿಧ ಬಣ್ಣದ ಗರಿಗಳನ್ನುಹೊಂದಿರುವ ನವಿಲುಗಳು ಮನೆ ಎದುರಿನ ಗದ್ದೆಯಲ್ಲಿ ಓಡಾಡುತ್ತಾ ತಮ್ಮ ಪಾಡಿಗೆ ತಾವು ಆಹಾರ ಹುಡುಕುತ್ತಾ ಇದ್ದಾಗ, ಗದ್ದೆಯಂಚಿನಲ್ಲಿ ನಿಂತು ಅವುಗಳನ್ನು ನೋಡುವುದೆಂದರೆ ನಮಗೆಲ್ಲಾ ಒಂದು ವಿಶಿಷ್ಟ ಅನುಭವ.

ಆದರೆ ನಮ್ಮ ಹಳ್ಳಿಯ ಕೃಷಿಕರ ದೃಷ್ಟಿಯಲ್ಲಿ, ನಮ್ಮೂರಿಗೆ ನವಿಲುಗಳ ಆಗಮನ ಅಷ್ಟೊಂದು ಒಳ್ಳೆಯ ಬೆಳವಣಿಗೆಯೇನಲ್ಲ; ಏಕೆಂದರೆ, ಅವು ಬತ್ತದ ತೆನೆಯನ್ನು, ಧಾನ್ಯದ ಕಾಳುಗಳನ್ನು ತಿನ್ನುತ್ತವೆ ಮತ್ತು ಕೃಷಿಗೆ ಅವು ಒಂದು ತೊಡಕೇ ಸರಿ ಎಂಬುದು ಅವರ ಮನೋಗತ. ಬದಲಾದ ವಾತಾವರಣ ಮತ್ತು ಕಾಡಿನ ನಾಶವೇ, ನಮ್ಮ ಹಳ್ಳಿಗೆ ನವಿಲುಗಳು ಬರಲು ಕಾರಣ ಎಂದು ಹಲವರು ಅಂದುಕೊಂಡಿದ್ದಾರೆ.

ಅದೇನೇ ಇದ್ದರೂ, ಬಿಳಿಕೊಕ್ಕರೆಗಳು ನೀಲ ಬಾನಿನಲ್ಲಿ ಸಾಲಾಗಿ ಹಾರುವಾಗ ನಿರ್ಮಿಸುವ ಆ ಚಂದದ ದೃಶ್ಯ, ಮನೆಗೆ ಅನತಿ ದೂರದಲ್ಲೇ ತನ್ನೆಲ್ಲಾ ಗರಿಗಳನ್ನು ಬಿಚ್ಚಿ ನರ್ತಿಸುವ ನವಿಲಿನ ಆಟ, ಅವುಗಳನ್ನು ನೋಡಲು ದೊರೆಯುವ ಅವಕಾಶ- ಇಂತಹ ವಿದ್ಯಮಾನಗಳು ಪ್ರಕೃತಿಯು ನಮಗೆ ನೀಡುವ ಅಪರೂಪದ ಅನುಭವ ಎಂದೇ ಹೇಳಬಹುದು.

(ಕೆಲವು ಪದಗಳ ಅರ್ಥ- ಚಾವಡಿ: ಮನೆಯ ಪ್ರಧಾನ ಭಾಗ. ಅಗೇಡಿ: ಬತ್ತದ ಸಸಿಗಳನ್ನು ಮಡಿಮಾಡುವ ಗದ್ದೆ. ಹಕ್ಕಲು: ಹದವಾಗಿ ಗಿಡಮರಗಳು ಬೆಳೆದಿರುವ ಜಾಗ. ಮುರಕಲ್ಲು: ಜಂಬಿಟ್ಟಿಗೆ ಕಲ್ಲು. ಹೊಳ: ಮಳೆಗಾಲದಲ್ಲಿ ಮಳೆ ಇಲ್ಲದ ಕೆಲವು ದಿನಗಳು. ಚಾರಟೆ: ಸಹಸ್ರಪದಿ)