Vishweshwar Bhat Column: ನಮ್ಮಂತೆ ಅವರೂ ದ್ವೀಪ ನಿರ್ಮಿಸುತ್ತಿದ್ದಾರೆ, ಆದರೆ ಎಷ್ಟು ವ್ಯತ್ಯಾಸ ?
There is no problem that Dubai can't solve ಎಂಬುದು ಅವರ ಪರಮ ಧ್ಯೇಯ ವಾಕ್ಯ. ಜಗತ್ತಿನ ಇತರ ದೇಶಗಳ ನಾಯಕರು ಇಲ್ಲದ ಉಸಾಬರಿಯಲ್ಲಿ ತಲೆ ಕೆಡಿಸಿಕೊಂಡಿದ್ದರೆ, ಮಕ್ತೋಮ್ ಮಾತ್ರ ದುಬೈ ಯನ್ನು ಮತ್ತಷ್ಟು ಅಭಿವೃದ್ಧಿ ಮಾಡುವುದು ಹೇಗೆ, ದುಬೈ ಮಟ್ಟವನ್ನು ಇನ್ನಷ್ಟು ಎತ್ತರಿಸುವುದು ಹೇಗೆ, ಅಲ್ಲಿ ಮತ್ತಷ್ಟು ಅಚ್ಚರಿಗಳನ್ನು ಬಿತ್ತುವುದು ಹೇಗೆ ಎಂಬ ಬಗ್ಗೆ ತಲೆ ಕೆಡಿಸಿಕೊಂಡಿರುತ್ತಾರೆ.


ನೂರೆಂಟು ವಿಶ್ವ
vbhat@me.com
Dubai will never settle for anything less than first place.' ಹೀಗೆಂದು ಹೇಳಿದವರು ಅಲ್ಲಿನ ರೂಲರ್, ಶೇಕ್ ಮಹಮದ್ ಬಿನ್ ರಶೀದ್ ಅಲ್ ಮಕ್ತೋಮ. ದುಬೈಯಲ್ಲಿ ಕಾಣುವ ಪ್ರತಿ ಅಚ್ಚರಿಯ ಹಿಂದೆಯೂ ಈ ವಾಕ್ಯವಿದೆ ಮತ್ತು ಮಕ್ತೋಮ್ ಇದ್ದಾರೆ. ಏನೇ ಮಾಡಿದರೂ ಅದನ್ನು ಇಡೀ ಜಗತ್ತೇ ಮೂಗಿನ ಮೇಲೆ ಬೆರಳಿಟ್ಟು ನೋಡಬೇಕು, ಇಲ್ಲದಿದ್ದರೆ ಏನನ್ನೂ ಮಾಡದೇ ಸುಮ್ಮನಿರುವುದೇ ಲೇಸು ಎಂಬುದು ಅವರ ಸಿದ್ಧಾಂತ. ಅಲ್ಲಿ ಅಸಾಧ್ಯ ಎಂಬ ಮಾತನ್ನು ಕೇಳಲು ಸಾಧ್ಯವೇ ಇಲ್ಲ. ಯಾರಾದರೂ ’ಇದು ನಿಮ್ಮಿಂದ ಸಾಧ್ಯವಾಗದು’ ಎಂದು ಮಕ್ತೋಮ್ ಮುಂದೆ ಹೇಳಿದರೆ, ಅದನ್ನು ಅವರು ಸಾಧ್ಯ ಮಾಡುವ ತನಕ ವಿರಮಿಸುವುದಿಲ್ಲ. ಇದನ್ನು ಒಂದಲ್ಲ, ನೂರಕ್ಕೂ ಹೆಚ್ಚು ಸಲ ಅವರು ಮಾಡಿ ತೋರಿಸಿದ್ದಾರೆ. ’ಕನಸನ್ನು ಕಾಣಲೂ ಗುಂಡಿಗೆ ಬೇಕು’ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ.
There is no problem that Dubai can't solve ಎಂಬುದು ಅವರ ಪರಮ ಧ್ಯೇಯ ವಾಕ್ಯ. ಜಗತ್ತಿನ ಇತರ ದೇಶಗಳ ನಾಯಕರು ಇಲ್ಲದ ಉಸಾಬರಿಯಲ್ಲಿ ತಲೆ ಕೆಡಿಸಿಕೊಂಡಿದ್ದರೆ, ಮಕ್ತೋಮ್ ಮಾತ್ರ ದುಬೈಯನ್ನು ಮತ್ತಷ್ಟು ಅಭಿವೃದ್ಧಿ ಮಾಡುವುದು ಹೇಗೆ, ದುಬೈ ಮಟ್ಟವನ್ನು ಇನ್ನಷ್ಟು ಎತ್ತರಿಸು ವುದು ಹೇಗೆ, ಅಲ್ಲಿ ಮತ್ತಷ್ಟು ಅಚ್ಚರಿಗಳನ್ನು ಬಿತ್ತುವುದು ಹೇಗೆ ಎಂಬ ಬಗ್ಗೆ ತಲೆ ಕೆಡಿಸಿಕೊಂಡಿರು ತ್ತಾರೆ.
ಇದನ್ನೂ ಓದಿ: Vishweshwar Bhat Column: ವಿಶ್ವದ ಅತ್ಯಂತ ಪುರಾತನ ಹೋಟೆಲ್
ದುಬೈಗೆ ಒಂದು ವರ್ಷವಲ್ಲ, ಒಂದು ತಿಂಗಳು ಬಿಟ್ಟು ಹೋಗಿ, ಅಂದು ಗಗನಚುಂಬಿ ಕಟ್ಟಡ ತಲೆಯೆತ್ತಿ ನಿಂತಿರುತ್ತದೆ, ವಿಚಿತ್ರ ಆಕಾರದ ಬಹುಮಹಡಿ ಕಟ್ಟಡ ಆಗಸಕ್ಕೆ ಕತ್ತು ಚಾಚಿರುತ್ತದೆ, ಇಲ್ಲವೇ ಇನ್ನೊಂದು ವಿಸ್ಮಯ ಅರಳಿರುತ್ತದೆ. In Dubai ambition is the only currency that never loses value ಎಂಬ ಮಾತು ನೂರಕ್ಕೆ ನೂರು ಸತ್ಯ. ದುಬೈ ಹಣವಂತರ ದೇಶ ಎನ್ನುವುದು ಸುಳ್ಳು.
ಅದು ಕನಸು ಕಾಣುವವರ, ಕನಸು ನನಸಾಗಿಸುವವರ, ಸಾಧನೆಯ ಮೂಲಕ ಮಾತಾಡುವವರ, ಪಾಸಿಟಿವ್ ಮನೋಭಾವವೊಂದೇ ಗೆಲ್ಲುತ್ತದೆಂದು ನಂಬಿದವರ ದೇಶ. ಬೆಂಗಳೂರಿನಲ್ಲಿ ಹಣವಂತರಿಗೇನೂ ಕೊರತೆಯಿಲ್ಲ. ಆದರೆ ಬೆಂಗಳೂರು ದುಬೈ ಆಗಿಲ್ಲ. ಅದು ಆಗುವುದೂ ಇಲ್ಲ. ಕಾರಣ ಹಣವೊಂದನ್ನೇ ಇಟ್ಟುಕೊಂಡು ಹೊಸತೇನನ್ನೂ, ಅದ್ಭುತವಾದುದೇನನ್ನೂ ಸಾಧಿಸಲು ಸಾಧ್ಯವಿಲ್ಲ. ನಮಗಿನ್ನೂ ಹಳ್ಳ-ಗುಂಡಿಗಳಿಲ್ಲದ, ಉಬ್ಬು-ತಗ್ಗುಗಳಿಲ್ಲದ ಎರಡು ಕಿಮೀ ಉದ್ದದ ರಸ್ತೆಯನ್ನೇ ನೆಟ್ಟಗೆ ನಿರ್ಮಿಸಲು ಸಾಧ್ಯವಾಗಿಲ್ಲ.

ಅಷ್ಟಕ್ಕೂ ದುಬೈಗೂ-ಬೆಂಗಳೂರಿಗೂ ಹೋಲಿಕೆಯೇ ಸರಿ ಅಲ್ಲ, ಬಿಡಿ. ನಾನು ಕಳೆದ ಇಪ್ಪತ್ತು ವರ್ಷಗಳಲ್ಲಿ ದುಬೈಗೆ ಏನಿಲ್ಲವೆಂದರೂ ಐವತ್ತು ಸಲ ಹೋಗಿರಬಹುದು. (ಆದರೂ ರನ್ಯಾ ರಾವ್ ದಾಖಲೆ ಮುರಿಯಲು ಸಾಧ್ಯವಾಗಿಲ್ಲ, ಅದು ಬೇರೆ ಮಾತು) ಪ್ರತಿ ಭೇಟಿಯೂ ನನಗೆ ಹೊಸತು ಎಂಬಂಥ ಅಚ್ಚರಿಯನ್ನು ನೀಡಿರುವುದು ಸುಳ್ಳಲ್ಲ.
ಕೆಲವು ಸಲ ನಾನು ದುಬೈನಲ್ಲಿ ಏನೂ ಮಾಡದೇ, ರೈಲು ಹಳಿ ಪಕ್ಕದಲ್ಲಿ ಕುಳಿತ ಕಪ್ಪೆಯಂತೆ, ಸುಮ್ಮನೆ ಅಲ್ಲಿನ ವಾಹನ, ಜನ, ಕಟ್ಟಡಗಳನ್ನು ನೋಡಿ ಎದ್ದು ಬಂದಿದ್ದೇನೆ. ಹಾಗೆ ಬರುವಾಗ, ನನಗೂ ಆ ಕಪ್ಪೆಗೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಅನಿಸಿದೆ. ಆದರೆ ಪ್ರತಿ ಸಲವೂ ಮನುಷ್ಯ ಪ್ರಯತ್ನದ ಅಸಾಧಾರಣ ಸಾಧ್ಯತೆ, ಆ ಸಾಧ್ಯತೆ ಹೊತ್ತು ತರುವ ಆಶ್ಚರ್ಯಗಳು ನನ್ನನ್ನು ತಬ್ಬಿಬ್ಬುಗೊಳಿಸಿದ್ದು ಸುಳ್ಳಲ್ಲ.
ದುಬೈಯಲ್ಲಿ ಈ ವರ್ಷಕ್ಕೂ, ಹಿಂದಿನ ವರ್ಷಕ್ಕೂ ವ್ಯತ್ಯಾಸವೇನು ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತರ - ಕನಿಷ್ಠ ನೂರು ಬಹುಮಹಡಿ ಕಟ್ಟಡಗಳು! ಹಾಗಂತ ನನಗೆ ಅಲ್ಲಿನ ಕಟ್ಟಡ, ದುಬಾರಿ ವಾಹನ, ಶ್ರೀಮಂತಿಕೆ, ಐಷಾರಾಮಿ ಜೀವನ ಎಂದೂ ಆಕರ್ಷಿಸಿಲ್ಲ. ಆದರೆ ಮನುಷ್ಯ ಪ್ರಯತ್ನಕ್ಕೆ ಎಂದೂ ಸೋಲಿಲ್ಲ ಎಂಬ ಮಾತು ಪ್ರತಿ ಬಾರಿಯೂ ಅಲ್ಲಿ ಗೆಲ್ಲುತ್ತಿರುವುದು ಮಾತ್ರ ವಿಶೇಷವಾಗಿ ಕಂಡಿದೆ. ಕೆಲ ದಿನಗಳ ಹಿಂದೆ ದುಬೈಗೆ ಹೋದಾಗ, ನನ್ನ ಆತ್ಮೀಯ ಸ್ನೇಹಿತರಾದ ಶಶಿಧರ ನಾಗರಾಜಪ್ಪ ಮತ್ತು ನಿಲೇಶ್ ಅವರು, ದುಬೈ ಸಮುದ್ರ ಕಿನಾರೆಯಿಂದ ತುಸು ದೂರದಲ್ಲಿ The World Islands ತಲೆ ಎತ್ತುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದರು.
ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಸುಮಾರು ಮುನ್ನೂರು ಮಾನವ ನಿರ್ಮಿತ ಕೃತಕ ದ್ವೀಪಗಳನ್ನು ದುಬೈ ಸಮುದ್ರದಲ್ಲಿ ನಿರ್ಮಿಸುವುದು. ಆ ಹೊತ್ತಿಗೆ ದುಬೈ ಹೊರವಲಯದಲ್ಲಿ ತಾಳೆ ಮರದ ಗರಿಯ ಆಕಾರದಲ್ಲಿ ‘ಪಾಮ್ ಜುಮೇರಾ’ ಸಮೂಹ ವಸತಿಗೃಹಗಳನ್ನು ನಿರ್ಮಿಸಿ, ಮಕ್ತೋಮ್ ಜಗತ್ತಿನ ಮುಂದೆ ಹೊಸ ಅಚ್ಚರಿಯ ಮರಿ ಮಾಡಿ ಇಟ್ಟಿದ್ದರು. ಇಂದಿಗೂ ಪಾಮ್ ಜುಮೇರಾ ಒಂದು ಸೊಗಸಾದ ನನಸಾದ ಕನಸು!
ಆದರೂ ಸಮುದ್ರದಲ್ಲಿ ಮುನ್ನೂರು ದ್ವೀಪಗಳನ್ನು ನಿರ್ಮಿಸುತ್ತೇವೆ ಎಂದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ದುಬೈ ಸರಕಾರ ಘೋಷಿಸಿದಾಗ, ಅನೇಕರು ಅಚ್ಚರಿಯ ಜತೆಗೆ ನಕಾರಾತ್ಮಕವಾಗಿ ರಾಗ ಎಳೆದಿದ್ದರು. ‘ಅವೆಲ್ಲ ಆಗು-ಹೋಗುವ ವಿಚಾರವೇನ್ರೀ?’ ಎಂದು ಸೊತ್ತಿದ್ದರು.
ಆದರೆ ಈಗ ಆ ಯೋಜನೆ ಒಂದೊಂದಾಗಿ ಸಾಕಾರವಾಗುತ್ತಿದೆ. ಇದು ಮಾನವ ಸೃಷ್ಟಿಯ ಭವ್ಯ ದ್ವೀಪ ಸಮೂಹ ಎಂಬುದರಲ್ಲಿ ಎರಡು ಮಾತಿಲ್ಲ. ‘ದಿ ವರ್ಲ್ಡ್ ಐಲ್ಯಾಂಡ್ಸ್’ ಪ್ರವಾಸೋದ್ಯಮ, ರಿಯಲ್ ಎಸ್ಟೇಟ್ ಹಾಗೂ ವಿಶ್ವಮಟ್ಟದ ಆಧುನಿಕ ವಾಸ್ತು ವಿಜ್ಞಾನದ ಅದ್ಭುತ ತಂತ್ರಗಾರಿಕೆಯ ಪ್ರತಿರೂಪವಾಗಿದೆ. ‘ದಿ ವರ್ಲ್ಡ್ ಐಲ್ಯಾಂಡ್ಸ್’ನ್ನು ನಿಖರವಾಗಿ ಭೂಮಿಯ ನಕ್ಷೆಯಂತೆ ರೂಪಿಸ ಲಾಗಿದೆ.
ಪ್ರತಿ ದ್ವೀಪವು ಭೂಗೋಳದ ವಿಭಿನ್ನ ರಾಷ್ಟ್ರ ಅಥವಾ ಖಂಡವನ್ನು ಪ್ರತಿನಿಧಿಸುತ್ತದೆ. ಇವು ದುಬೈದ ಕರಾವಳಿಯಿಂದ ಸುಮಾರು ಹತ್ತು ಕಿಮೀ ದೂರದಲ್ಲಿದೆ. ದ್ವೀಪಗಳು ಪರ್ಸಿಯನ್ ಕೊಲ್ಲಿಯ ದಡದಿಂದ ಸುತ್ತಲೂ ಆವರಿಸಿದೆ. ಈ ಪ್ರದೇಶ ಒಂಬತ್ತು ಕಿಮೀ ಉದ್ದ ಹಾಗೂ ಆರು ಕಿಮೀ ಅಗಲವಿದೆ. ಇದು ಒಟ್ಟು 55 ಚದರ ಕಿ.ಮೀ ಪ್ರದೇಶವನ್ನು ವ್ಯಾಪಿಸಿದೆ.
ದ್ವೀಪಗಳ ನಿರ್ಮಾಣಕ್ಕಾಗಿ land reclamation (ಭೂಪ್ರಾಪ್ತೀಕರಣ) ವಿಧಾನವನ್ನು ಬಳಸಲಾಗಿದೆ. ಸುಮಾರು 3.3 ಶತಕೋಟಿ ಘನ ಅಡಿಗಳ ಮರಳನ್ನು ಸಮುದ್ರದಿಂದ ತೆಗೆದು ಈ ದ್ವೀಪಗಳನ್ನು ರೂಪಿಸಲು ಬಳಸಲಾಗಿದೆ. ಪ್ರತಿ ದ್ವೀಪದ ಅಳತೆ ಸುಮಾರು 14000 42000 ಚದರ ಮೀಟರುಗಳ ಷ್ಟಿದೆ. ಒಂದು ದ್ವೀಪದಿಂದ ಇನ್ನೊಂದು ದ್ವೀಪ ಸುಮಾರು ನೂರು ಮೀಟರ್ ದೂರದಲ್ಲಿವೆ.
ಈ ದ್ವೀಪಗಳಿಗೆ ಹೋಗಲು ಬೋಟುಗಳು ಅಥವಾ ಹೆಲಿಕಾಪ್ಟರ್ ವ್ಯವಸ್ಥೆ ಒದಗಿಸಲಾಗಿದೆ. ರಸ್ತೆ ಅಥವಾ ಸೇತುವೆಗಳ ಮೂಲಕ ಪ್ರವೇಶವಿಲ್ಲ. ಇದು ಇದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸು ತ್ತದೆ. ಅಲ್ಲಿನ ನಿವಾಸಿಗಳ ಹೊರತಾಗಿ ಬೇರೆ ಯಾರಿಗೂ ಅಲ್ಲಿ ಪ್ರವೇಶವಿಲ್ಲ. ಸಮುದ್ರದ ಜೈವಿಕ ಪರಿಸರವನ್ನು ಕಾಪಾಡಲು ಮತ್ತು ನೈಸರ್ಗಿಕ ಭಾಗಗಳನ್ನು ಸಂರಕ್ಷಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮುದ್ರದಲ್ಲಿ ಬಲವಾದ ಬಂಡೆಗಳನ್ನು ಗೋಡೆಯಂತೆ ನಿಲ್ಲಿಸಿ ಕಡಲ ಅಲೆಗಳ ಬಿರುಸನ್ನು ನಿಯಂತ್ರಿಸಲಾಗಿದೆ. ಈ ತಡೆಗೋಡೆಗಳು ಸುನಾಮಿ ಅಲೆಗಳ ಪರಿಣಾಮವನ್ನು ಕ್ಷೀಣಗೊಳಿಸಬಲ್ಲುದು. ಕೃತಕ ಕೋರಲ್ ರೀಫ್ಸ್ ನಿರ್ಮಾಣದಿಂದ ಜೀವವೈವಿಧ್ಯವನ್ನು ಉತ್ತೇಜಿಸ ಲಾಗಿದೆ.
ಪ್ರತಿಯೊಂದು ದ್ವೀಪವನ್ನು ಅತ್ಯಂತ ಅಚ್ಚುಕಟ್ಟಾಗಿ, ಕರಾರುವಾಕ್ಕಾಗಿ ವಿಂಗಡಿಸಲಾಗಿದೆ. ವಾಸದ ದ್ವೀಪ, ಕೆಲವೊಂದು ರೆಸಾರ್ಟ್, ಇನ್ನು ಕೆಲವು ಹೋಟೆಲ್ ಮತ್ತು ಇನ್ನು ಕೆಲವು ವಾಣಿಜ್ಯ ಉದ್ದೇಶ (ಮಾಲ್, ಅಂಗಡಿ, ಮಲ್ಟಿಪ್ಲೆಕ್ಸ್ ಇತ್ಯಾದಿ) ಗಳಿಗೆ ಬಳಸಲಾಗುತ್ತವೆ. ಪ್ರತಿ ದ್ವೀಪವನ್ನು ಮತ್ತು ಅಲ್ಲಿ ಕಟ್ಟಿದ ಮನೆಗಳನ್ನು ಯಾರು ಬೇಕಾದರೂ ಖರೀದಿಸಬಹುದು. ಕೆಲವು ಖಾಸಗಿ ದ್ವೀಪಗಳು ಈಗಾಗಲೇ ಪ್ರಸಿದ್ಧ ಸೆಲೆಬ್ರಿಟಿಗಳಿಗೆ, ಗಣ್ಯರಿಗೆ ಮಾರಾಟವಾಗಿವೆ.
2003ರಲ್ಲಿ ಘೋಷಿತವಾದ ಈ ಮಹತ್ವಾಕಾಂಕ್ಷೆ ಯೋಜನೆಯ ಕಾಮಗಾರಿ ಗುತ್ತಿಗೆಯನ್ನು ನಕೀಲ್ ಪ್ರಾಪರ್ಟೀಸ್ ಎಂಬ ಸಂಸ್ಥೆ ಕೈಗೊಂಡಿದ್ದು, ಇದು ದುಬೈ ಸರಕಾರದ ಅಂಗಸಂಸ್ಥೆಯಾಗಿದೆ. 2003 ರಿಂದ 2008 ರವರೆಗೆ ಪ್ರಮುಖವಾಗಿ ಭೂ ನಿರ್ಮಾಣದ ಪ್ರಕ್ರಿಯೆ ನಡೆಯಿತು.
2008ರ ಆರ್ಥಿಕ ಹಿನ್ನಡೆಯಿಂದಾಗಿ ಕಾಮಗಾರಿ ವಿಳಂಬವಾಯಿತು. ಅನೇಕ ಖರೀದಿದಾರರು ಹಿಂತಿರುಗಿದರೂ, ಯಾವ ಕಾರಣಕ್ಕೂ ಯೋಜನೆಯನ್ನು ಸ್ಥಗಿತಗೊಳಿಸದಿರಲು ದುಬೈ ಸರಕಾರ ನಿರ್ಧರಿಸಿತು. ಬಹುಪಾಲು ದ್ವೀಪಗಳು ಇನ್ನೂ ಸಂಪೂರ್ಣ ಅಭಿವೃದ್ಧಿಯಾಗಿಲ್ಲ. ಕೆಲವೊಂದು ದ್ವೀಪಗಳಲ್ಲಿ ಪ್ರಸ್ತುತ ರೆಸಾರ್ಟ್‌ಗಳು ಹಾಗೂ ವಿಶ್ರಾಂತಿ ಗೃಹಗಳು ಕಾರ್ಯನಿರ್ವಹಿಸುತ್ತಿವೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸೇವೆಗಳು, ರೆಸ್ಟೋರೆಂಟ್‌ಗಳು, ವಿಗಳು ಕಾರ್ಯಾರಂಭ ಮಾಡಿವೆ.
The Heart of Europe ಎಂಬ ಹೆಸರಿನ ದ್ವೀಪದ ಕಾಮಗಾರಿ ಸಂಪೂರ್ಣ ಮುಗಿದಿದ್ದು ಆ ದ್ವೀಪ ಈಗ ಗಿಜಗುಡುತ್ತಿದೆ. The Heart of Europe ಎಂದರೆ ಯುರೋಪಿನ ಶೈಲಿಯ ನಕ್ಷತ್ರ ದ್ವೀಪಗಳ ಸಮೂಹ. ಅಲ್ಲಿ ಸ್ವಿಟ್ಜರ್‌ಲ್ಯಾಂಡ್, ಆಸ್ಟ್ರಿಯಾ, ಸ್ವೀಡನ್, ಮೊನಾಕೋ, ಜರ್ಮನಿ ಮತ್ತು ಫ್ರಾನ್ಸ್ ಗಳ ಪ್ರಾಕೃ ತಿಕ ಹಿನ್ನೆಲೆಯಲ್ಲಿ ಪ್ರತ್ಯೇಕ ದ್ವೀಪಗಳು ತಲೆ ಎತ್ತಿವೆ.
ಇಲ್ಲಿ ತಾಪಮಾನ ನಿಯಂತ್ರಿತ ಬೀಚ್‌ಗಳು, ಹಿಮದ ಅನುಭವ ನೀಡುವ ವಾತಾವರಣವನ್ನು ಸೃಷ್ಟಿಸಲಾಗಿದೆ. ಯುರೋಪಿಯನ್ ಸಂಸ್ಕೃತಿಯ ಪ್ರತಿಬಿಂಬಿತ ಶೈಲಿಯನ್ನು ಅಲ್ಲಿ ನಿರ್ಮಿಸ ಲಾಗಿದೆ. The Heart of Europe ನಲ್ಲಿ ಒಂದೆಡೆ ಮಳೆ ಬೀಳುವ ರಸ್ತೆ (ರೈನಿಂಗ್ ಸ್ಟ್ರೀಟ್) ಯನ್ನು ನಿರ್ಮಿಸಲಾಗಿದೆ. ಅಲ್ಲಿ ಆಗಾಗ ಮಳೆ ಸುರಿಯುತ್ತಿರುತ್ತದೆ.
ಹಾಗೆಯೇ ಹಿಮ ಸುರಿಯುವ ಬೀದಿಗಳನ್ನೂ ನಿರ್ಮಿಸಲಾಗಿದೆ. ತಾಪಮಾನ ನಿಯಂತ್ರಿತ ವಾತಾ ವರಣದಿಂದ ದುಬ್ನೈ ಬಿಸಿಲು ಪ್ರಭಾವ ಅಲ್ಲಿ ಗಣನೀಯವಾಗಿ ಕಡಿಮೆ. ಮಧುಚಂದ್ರ ದಂಪತಿಗಳಿಗೆ ಮತ್ತು ಐಷಾರಾಮಿ ಪ್ರವಾಸಿಗರಿಗೆಂದೇ ಪ್ರತ್ಯೇಕ ದ್ವೀಪವನ್ನು ಸೃಷ್ಟಿಸಲಾಗಿದೆ. ಶಾಪಿಂಗ್ ಗೆಂದೇ ಮೂರು ದ್ವೀಪವನ್ನು ನಿರ್ಮಿಸಲಾಗಿದೆ.
ಉಳಿದ ಮುನ್ನೂರು ದ್ವೀಪಗಳಲ್ಲಿರುವ ವಾಸಿಗಳು ಆ ದ್ವೀಪಗಳಿಗೆ ಶಾಪಿಂಗ್ ಗೆಂದೇ ಹೋಗ ಬಹುದು. ಇಲ್ಲಿನ ಹೋಟೆಲುಗಳಲ್ಲಿರುವ ರೂಮುಗಳಿಂದ ಹಿಡಿದು, ದ್ವೀಪಗಳಲ್ಲಿರುವ ವಿಗಳು ಮತ್ತು ಮ್ಯಾನ್ಷನ್ ಗಳು ಮಾರಾಟಕ್ಕಿವೆ. ಐದು ಕೋಟಿ ರುಪಾಯಿಯಿಂದ ಮುನ್ನೂರು ಕೋಟಿ ರುಪಾಯಿವರೆಗೆ ಬೇರೆ ಬೇರೆ ವಿಧ-ವೈಖರಿ-ವಿಸ್ತೀರ್ಣ-ಸೌಲಭ್ಯಗಳ ಮನೆಗಳಿವೆ. ಜಗತ್ತಿನ ಪ್ರತಿಷ್ಠಿತ ವ್ಯಕ್ತಿಗಳು, ಶ್ರೀಮಂತರು, ಪ್ರಭಾವಿ ವ್ಯಕ್ತಿಗಳು, ಅತಿ ಗಣ್ಯರು, ಅನೇಕ ದೇಶಗಳ ನಾಯಕರು, ಬಾಲಿವುಡ್-ಹಾಲಿವುಡ್ ಸಿನಿಮಾ ನಟ-ನಟಿಯರು, ಶ್ರೀಮಂತ ಉದ್ಯಮಿಗಳು ಈಗಾಗಲೇ ಈ ದ್ವೀಪಗಳಲ್ಲಿ ಮನೆಗಳನ್ನು ಖರೀದಿಸಿದ್ದಾರೆ.
ಇನ್ನು ಕೆಲವರು ಮುಂಗಡ ಹಣ ಕೊಟ್ಟು ತಮ್ಮ ಕನಸಿನ ಮನೆಗಳನ್ನು ಕಾಯ್ದಿರಿಸಿದ್ದಾರೆ. ಅಂದರೆ ಈ ಮೂಲಕ ದುಬೈಯನ್ನು ಜಗತ್ತಿನ ಶ್ರೇಷ್ಠರ ವಾಸಸ್ಥಾನವನ್ನಾಗಿ ಪರಿವರ್ತಿಸುವುದು ಉದ್ದೇಶ. ಈ ಜಗತ್ತಿನ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳನ್ನು ಒಂದಿಂದು ರೀತಿಯಲ್ಲಿ ದುಬೈಗೆ ಬೆಸೆಯ ಬೇಕೆಂ ಬುದು ಮುಖ್ಯ ಆಶಯ. ಜತೆಗೆ ದೊಡ್ಡ ಪ್ರಮಾಣದ ಬಂಡವಾಳವನ್ನು ಆಕರ್ಷಿಸಿ, ಆ ಹಣದಲ್ಲಿ ತಮ್ಮ ದೇಶವನ್ನು ಅಭಿವೃದ್ಧಿಪಡಿಸುವುದು ಉದ್ದೇಶ.
ಅಂಬಾನಿ, ಅದಾನಿ, ರಿಚರ್ಡ್ ಬ್ರಾನ್ಸನ್, ವಾರನ್ ಬಫೆಟ್, ಬಿಲ್ ಗೇಟ್ಸ್, ಜೆಫ್ ಬೆಜೋಸ್, ಮಾರ್ಕ್ ಜುಕರ್ ಬರ್ಗ್, ಸುಂದರ ಪಿಚಾಯ, ಟಿಮ್ ಕುಕ್, ಶಹರುಖ್ ಖಾನ್, ಜೂನಿಯರ್ ಟ್ರಂಪ್... ಮುಂತಾದವರು ಒಂದೆಡೆ ನೆಲೆಸುವಂತಾದರೆ ಹೇಗಿದ್ದೀತು? ಜಗತ್ತಿನ ಐನೂರು ಶ್ರೀಮಂತರೆಲ್ಲ ಒಂದು ದ್ವೀಪ ಸಮೂಹದಲ್ಲಿ ವಾಸಿಸುವಂತಾದರೆ ಹೇಗಾದೀತು? ಒಂದು ಕ್ಷಣ ಯೋಚಿಸಿ.. ಇವರನ್ನೆಲ್ಲ ಒಂದೆಡೆ ಸೇರಿಸಬೇಕೆಂದರೆ ಸಮುದ್ರದಲ್ಲಿ ಕೃತಕ ದ್ವೀಪವನ್ನು ನಿರ್ಮಿಸಿ, ಅಲ್ಲಿ ಎಲ್ಲೂ ಸಿಗದ ಮೋಜು-ಮಸ್ತಿ-ಮಜಕೂರು, ಸೌಲಭ್ಯಗಳನ್ನು ಒದಗಿಸಬೇಕು.
ಅವರೆಲ್ಲ ಈ ತನಕ ನೋಡದ ಚಮಕ್ ನ್ನು ತೋರಿಸಬೇಕು. ಅಲ್ಲಿಯೇ ಅವರು ಬಿಡಾರ ಹೂಡ ಬೇಕು. ಅದಕ್ಕೆ ಬೇಕಾದ ಎಲ್ಲ ಆಕರ್ಷಣೆಗಳನ್ನು ಅವರ ಕಾಲಬುಡದಲ್ಲಿಡಬೇಕು. ದುಬೈ ಸರಕಾರ ಈಗ ಅದನ್ನೇ ಮಾಡುತ್ತಿದೆ. ಕೆಲವು ಮನೆಗಳನ್ನು ಸಮುದ್ರದ ಮೇಲೆಯೇ (ತೇಲು ಮನೆಗಳು) ನಿರ್ಮಿಸಲಾಗಿದೆ. ಆ ಮನೆಗಳಲ್ಲಿ ಬೆಡ್ ರೂಮ್ ನೀರಿನೊಳಗಿರುವುದು ವಿಶೇಷ.
ಅಲ್ಲಿ ಮಲಗಿದರೆ ಚಲಚರಗಳನ್ನು ನೋಡಬಹುದು. ಭೂಮಿಯ ಮೇಲೆ ನಿರ್ಮಿಸಲಾಗದ ಮನೆಗಳನ್ನು ನೀರಿನೊಳಗೆ ನಿರ್ಮಿಸಿರುವುದು ಸೋಜಿಗವೇ. ಈ ಮನೆಗಳಿಗೆ ನೂರು ವರ್ಷ ಆಯಸ್ಸು. ಸಮುದ್ರದ ಮೇಲೆಯೇ ಅಲ್ಲಲ್ಲಿ ಸ್ಮಾರ್ಟ್ ಪೊಲೀಸ್ ಸ್ಟೇಷನ್ ಗಳು. ಫೋನ್ ಮಾಡಿದ ಕ್ಷಣಾರ್ಧದಲ್ಲಿ ಪೊಲೀಸರು ಹಾಜರ್ ! ನಾವು ಇಲ್ಲಿ ಜಾತಿ ಗಣತಿ, ಹನಿಟ್ರ್ಯಾಪ್ ಬಗ್ಗೆ ತಲೆ ಕೆಡಿಸಿಕೊಂಡಿದ್ದೇವೆ.
ಯಾವ ಜಾತಿಯವರು ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕುತ್ತಾ ಕುಳಿತಿದ್ದೇವೆ. ಒಂದು ಧರ್ಮ ವನ್ನು ಸಾವಿರಾರು ಜಾತಿಗಳಾಗಿ ಒಡೆದು, ವ್ಯಕ್ತಿ-ವ್ಯಕ್ತಿಗಳ ನಡುವೆ ದ್ವೀಪ ನಿರ್ಮಿಸುತ್ತಿದ್ದೇವೆ. ಅವರು ಇಡೀ ಜಗತ್ತಿನ ಅತ್ಯುತ್ತಮ ತಲೆ ( best brain) ಗಳನ್ನೆಲ್ಲ ಒಂದೇ ದ್ವೀಪ ಸಮೂಹ ದಲ್ಲಿ ಸೇರಿಸುತ್ತಿದ್ದಾರೆ.
ಅವರನ್ನೆಲ್ಲ ಒಂದೆಡೆ ಸೇರಿಸಿ, ಹಣ ಮಾಡಿ, ತಮ್ಮ ದೇಶವನ್ನು ವಿಶ್ವದ ನಂಬರ್ ಒನ್ ಮಾಡು ವುದು ಹೇಗೆ ಎಂದು ಯೋಚಿಸುತ್ತಿದ್ದಾರೆ. ಆಧುನಿಕ, ಉತ್ತಮ ಜೀವನಕ್ಕೆ ಏನು ಬೇಕು ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ನಾವು ಜಾತಿ ಹೆಸರಿನಲ್ಲಿ ಶುದ್ಧ ಕಚಡಾಗಳಂತೆ ಇನ್ನೂ ಕಚ್ಚಾಡು ತ್ತಿದ್ದೇವೆ. ಇದರಿಂದ ಇನ್ನಷ್ಟು ಇನ್ನಷ್ಟು ಹಿಂದಕ್ಕೆ ಹೋಗಲು ಸಾಧ್ಯವೇ ಹೊರತು, ಮುಂದಕ್ಕೆ ಹೋಗುವ ಲಕ್ಷಣವಲ್ಲ. ವ್ಯಕ್ತಿಗಳ ನಡುವೆ ದ್ವೀಪ ನಿರ್ಮಿಸುವುದಕ್ಕಿಂತ ವಿಶ್ವವನ್ನೇ ಒಂದು ಸಣ್ಣ ದ್ವೀಪವನ್ನಾಗಿ ಮಾಡುವ ಆಲೋಚನೆಯೇ ಅದ್ಭುತ!