Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...
ಪ್ರತಿಯೊಂದು ಶವಪೆಟ್ಟಿಗೆಯ ಒಳಗೆ ಒಂದು ಗಂಟೆಯನ್ನು ಇಡುತ್ತಿದ್ದರು. ಶವಪೆಟ್ಟಿಗೆಯಲ್ಲಿ ಇರುವವನು ನಿಜಕ್ಕೂ ಸತ್ತಿಲ್ಲದಿದ್ದರೆ, ಅವನು ಗಂಟೆಯನ್ನು ನಿರಂತರವಾಗಿ ಬಾರಿಸುತ್ತಿದ್ದನು. ಆಗ ಸ್ಮಶಾನದಲ್ಲಿ ನಿತ್ಯ ಕಾವಲಿರುವ ಯಾರಾದರೂ ಬಂದು ಅವನನ್ನು ಕಾಪಾಡುತ್ತಿದ್ದರು. ಆಗ ಒಂದು ಪ್ರಶ್ನೆಯು ವೈದ್ಯ ವಿಜ್ಞಾನಿಗಳನ್ನು ಕಾಡಿತು.
-
ಡಾ.ನಾ. ಸೋಮೇಶ್ವರ
Nov 5, 2025 12:07 PM
ಹಿಂದಿರುಗಿ ನೋಡಿದಾಗ
ಬದುಕಿದ್ದಾಗ ಜನರ ಪ್ರೀತಿಗೆ ಪಾತ್ರವಾಗುವ ಈ ದೇಹ, ಸತ್ತ ಕೂಡಲೇ ಪರಕೀಯವಾಗಿ ಬಿಡುತ್ತದೆ. ಅನೇಕರು ಶವವನ್ನು ಮುಟ್ಟುವುದಂತಿರಲಿ, ನೋಡುವುದಕ್ಕೂ ಬಯಸುವು ದಿಲ್ಲ. ನಮ್ಮಲ್ಲಿ ಶವವನ್ನು ಮುಟ್ಟುವುದು ಎಂದರೆ ಅದು ಸೂತಕ. 18ನೆಯ ಶತಮಾನದ ಯುರೋಪಿಯನ್ನರು ಶವವನ್ನು ಅಪವಿತ್ರ ಎಂದು ಪರಿಗಣಿಸುತ್ತಿದ್ದ ಕಾರಣ, ಅವರೂ ಶವವನ್ನು ಮುಟ್ಟುತ್ತಿರಲಿಲ್ಲ.
18ನೆಯ ಶತಮಾನದ ಯುರೋಪ್ ಖಂಡ! ಮಧ್ಯಯುಗದ ಕಗ್ಗತ್ತಲೆಯ ಕರಾಳ ಅಧ್ಯಾಯವು ಮುಗಿದು, ನವೋದಯವಾಗಿ (ರಿನೇಸಾನ್ಸ್) ಎಲ್ಲೆಡೆ ಜ್ಞಾನದ ಬೆಳಕು ಪಸರಿಸುತ್ತಿದ್ದ ಕಾಲ! ನಿಜವಾದ ಅರ್ಥದಲ್ಲಿ ಎಲ್ಲ ಜ್ಞಾನಶಾಖೆಗಳಲ್ಲಿ ಹೊಸ ಹೊಸ ಸಂಶೋಧನೆಗಳು ನಡೆದವು. ಹೊಸ ಹೊಸ ವಿಚಾರಗಳು ಬೆಳಕಿಗೆ ಬಂದವು. ಹೊಸ ಹೊಸ ಯಂತ್ರಗಳ ಅನ್ವೇಷಣೆಯಾದವು.
ವೈದ್ಯವಿಜ್ಞಾನದಲ್ಲಂತೂ ಕ್ರಾಂತಿಕಾರಕ ಸಂಶೋಧನೆಗಳು ನಡೆದವು. ಸೂಕ್ಷ ದರ್ಶಕವು, ಅದೃಶ್ಯ ಲೋಕದ ಅಗೋಚರ ಜೀವಿಗಳನ್ನು ಅನಾವರಣ ಮಾಡಿತು. ಫ್ಲೆಮಿಂಗ್ ಆರಂಭಿಸಿದ ಪ್ರತಿ ಜೈವಿಕಗಳ ನವ ಮನ್ವಂತರದಿಂದಾಗಿ ಸೋಂಕು ರೋಗಗಳನ್ನು ಬಗ್ಗು ಬಡಿಯಲು ಸಾಧ್ಯ ವಾಯಿತು. ಜೆನರ್ ರೂಪಿಸಿದ ಲಸಿಕೆಯ ಕಾರಣ, ಪಿಡುಗುಗಳನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಯಿತು. ಸಿಡುಬನ್ನಂತೂ ಭೂಮಿಯಿಂದಲೇ ನಿವಾರಿಸಿದೆವು.
ಇಷ್ಟೆಲ್ಲ ಸಂಶೋಧನೆಗಳು ಆದರೂ, ಸಾವಿನ ಬಗ್ಗೆ, ಸಾವಿನ ಲಕ್ಷಣಗಳ ಬಗ್ಗೆ, ಸಾವು ಸಂಭವಿಸಿರು ವುದನ್ನು ತೀರ್ಮಾನಿಸುವುದರ ಬಗ್ಗೆ ಅಪಾರ ಗೊಂದಲಗಳಿದ್ದವು. ಅದರಲ್ಲೂ ಸತ್ತವರ ಹಾಗೆ, ಉದಾಹರಣೆಗೆ ಕೋಮಾದಲ್ಲಿ ಇರುವವರ ಬಗ್ಗೆ, ಯಾವ ತೀರ್ಮಾನವನ್ನು ಯಾವ ಯಾವ ಲಕ್ಷಣ ಗಳ ಮೇಲೆ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಗೊಂದಲಗಳಿದ್ದವು.
ಹಾಗಾಗಿ ಅನೇಕ ಜನರನ್ನು, ಅವರು ವಾಸ್ತವದಲ್ಲಿ ಸತ್ತಿಲ್ಲದಿದ್ದರೂ, ಸತ್ತಿದ್ದಾರೆ ಎಂದು ತೀರ್ಮಾ ನಿಸಿ, ಅವರನ್ನು ಶವಪೆಟ್ಟಿಗೆಯಲ್ಲಿ ಇಟ್ಟು ಹೂತುಹಾಕುತ್ತಿದ್ದರು. ಒಂದು ಘಟ್ಟದಲ್ಲಿ ಬದುಕಿರು ವವರನ್ನೇ ಸತ್ತಿದ್ದಾರೆ ಎಂದು ಹೂತು ಹಾಕಿದ ಪ್ರಕರಣಗಳು ವರದಿಯಾದ ಕೂಡಲೇ ಒಂದು ಹೊಸ ಪದ್ಧತಿಯು ಆರಂಭವಾಯಿತು.
ಪ್ರತಿಯೊಂದು ಶವಪೆಟ್ಟಿಗೆಯ ಒಳಗೆ ಒಂದು ಗಂಟೆಯನ್ನು ಇಡುತ್ತಿದ್ದರು. ಶವಪೆಟ್ಟಿಗೆಯಲ್ಲಿ ಇರುವವನು ನಿಜಕ್ಕೂ ಸತ್ತಿಲ್ಲದಿದ್ದರೆ, ಅವನು ಗಂಟೆಯನ್ನು ನಿರಂತರವಾಗಿ ಬಾರಿಸುತ್ತಿದ್ದನು. ಆಗ ಸ್ಮಶಾನದಲ್ಲಿ ನಿತ್ಯ ಕಾವಲಿರುವ ಯಾರಾದರೂ ಬಂದು ಅವನನ್ನು ಕಾಪಾಡುತ್ತಿದ್ದರು. ಆಗ ಒಂದು ಪ್ರಶ್ನೆಯು ವೈದ್ಯ ವಿಜ್ಞಾನಿಗಳನ್ನು ಕಾಡಿತು. ಅದೆಂದರೆ-
ಸತ್ತವರನ್ನು ಮತ್ತೆ ಬದುಕಿಸಲು ಸಾಧ್ಯವೆ?
:ಈ ವಿಚಿತ್ರ ಪ್ರಶ್ನೆಯ ಫಲವಾಗಿ ವೈದ್ಯಲೋಕದ ಮತ್ತೊಂದು ಮಹಾನ್ ನಾಟಕೀಯ ಆವಿಷ್ಕಾರ ವಾಯಿತು. ಅದುವೇ ಸಿಪಿಆರ್! ಸಿ = ಕಾರ್ಡಿಯೋ (ಹೃದಯ) ಪಿ = ಪಲ್ಮನರಿ (ಶ್ವಾಸಕೋಶಗಳ) ಆರ್ = ರಿಸಸಿಟೇಶನ್ (ಪುನಶ್ಚೇತನ). ಕನ್ನಡದಲ್ಲಿಯೂ ಈ ಪ್ರಥಮ ಚಿಕಿತ್ಸೆಯನ್ನು ಸಿಪಿಆರ್ ಎಂದೇ ಕರೆಯುವುದು ಸೂಕ್ತ.
ಸಿಪಿಆರ್ ಎಂದರೆ ಏನು?
ಸ್ಥಗಿತವಾಗಿರುವ ಹೃದಯವನ್ನು ಹಾಗೂ ಉಸಿರಿಲ್ಲದ ಶ್ವಾಸಕೋಶಗಳನ್ನು ಚೇತನಗೊಳಿಸಿ, ಹೃದಯವನ್ನು ಮಿಡಿಯುವಂತೆ ಮಾಡುವುದು ಹಾಗೂ ಶ್ವಾಸಕೋಶಗಳನ್ನು ಮತ್ತೆ ಗಾಳಿಯನ್ನು ಪೂರೈಸುವಂತೆ ಅಣಿಗೊಳಿಸುವುದು. ಇದುವೇ ಸಿಪಿಆರ್‌ನ ಸಾರಾಂಶ! ಸಿಪಿಆರ್ ಅನ್ನು ಒಬ್ಬರು ಕಂಡುಹಿಡಿಯಲಿಲ್ಲ. ಹಲವು ಜನರು ಹಲವು ರೀತಿಯಲ್ಲಿ ಈ ಕಾರ್ಯವಿಧಾನವನ್ನು ರೂಪಿಸಲು ಹಾಗೂ ಸುಧಾರಿಸಲು ಕಾರಣರಾಗಿದ್ದಾರೆ. ಕೆಲವರಂತೂ ಅನಿರೀಕ್ಷಿತವಾಗಿ ತಮಗರಿವಿಲ್ಲದಂತೆಯೇ ಈ ಕಾರ್ಯವಿಧಾನದ ಸುಧಾರಣೆಯಲ್ಲಿ ಭಾಗಿಗಳಾಗಿದ್ದಾರೆ.
ಇವರೆಲ್ಲರೂ ಎಲ್ಲ ‘ಸಾವು’ಗಳು ಸಾವುಗಳಾಗಬಾರದು ಎಂಬ ದಿಟ್ಟ ನಿರ್ಧಾರವನ್ನು ಕೈಗೊಂಡು, ಕುತ್ತಿಗೆಯಲ್ಲಿ ಬಿದ್ದಿರುವ ಯಮನ ಕುಣಿಕೆಯನ್ನು ಕಿತ್ತು ಪಕ್ಕಕ್ಕಿಟ್ಟು, ಮತ್ತೆ ಬದುಕಿಗೆ ತಂದ ಆಧುನಿಕ ‘ಸಾವಿತ್ರಿ’ ಗಳಾಗಿದ್ದಾರೆ.
ಸತ್ತವನು ಉಸಿರಾಡಿದಾಗ: ಬದುಕಿದ್ದಾಗ ಎಲ್ಲ ಜನರ ಪ್ರೀತಿಗೆ ಪಾತ್ರವಾಗುವ ಈ ದೇಹ, ಸತ್ತ ಕೂಡಲೇ ಪರಕೀಯವಾಗಿಬಿಡುತ್ತದೆ. ಅನೇಕ ಜನರು ಶವವನ್ನು ಮುಟ್ಟುವುದಂತಿರಲಿ, ನೋಡುವು ದಕ್ಕೂ ಇಷ್ಟ ಪಡುವುದಿಲ್ಲ. ನಮ್ಮಲ್ಲಿ ಶವವನ್ನು ಮುಟ್ಟುವುದು ಎಂದರೆ ಅದು ಸೂತಕ. 18ನೆಯ ಶತಮಾನದ ಯುರೋಪಿಯನ್ನರು ಶವವನ್ನು ‘ಅಪವಿತ್ರ’ (ಅನ್-ಹೋಲಿ) ಎಂದು ಪರಿಗ ಣಿಸುತ್ತಿದ್ದ ಕಾರಣ, ಅವರೂ ಶವವನ್ನು ಮುಟ್ಟುತ್ತಿರಲಿಲ್ಲ.
ಪ್ಯಾರಿಸ್ ದೇಶದ ಆಮ್‌ಸ್ಟರ್‌ಡ್ಯಾಮ್ ನಗರ. ನದಿ ಹಾಗೂ ಅದರ ಅಸಂಖ್ಯ ಕಾಲುವೆಗಳು ಈ ನಗರದಾದ್ಯಂತ ವ್ಯಾಪಿಸಿವೆ. ಹಾಗಾಗಿ ಅಕಸ್ಮಾತ್ತಾಗಿ ಕಾಲು ಜಾರಿ ನದಿಯಲ್ಲಿ ಬೀಳುವವರ ಸಂಖ್ಯೆ ಯು ಸಾಕಷ್ಟಿತ್ತು. ನೀರಿನಲ್ಲಿ ಮುಳುಗಿದವರನ್ನು ಯಾರಾದರೊಬ್ಬರು ದಡಕ್ಕೆ ಎಳೆದು ಹಾಕು ತ್ತಿದ್ದರು. ಹಾಗೆ ದಡವನ್ನು ಮುಟ್ಟಿದ ಕೆಲವರಲ್ಲಾದರೂ ಪ್ರಜ್ಞೆಯು ಇರುತ್ತಿರಲಿಲ್ಲ.
ಆಗ ಅವರು ಸತ್ತಿದ್ದಾರೋ ಇಲ್ಲ ಬದುಕಿದ್ದಾರೋ ಎಂದು ತೀರ್ಮಾನಿಸುವುದು ಕಷ್ಟವಾಗುತ್ತಿತ್ತು. ಅಕಸ್ಮಾತ್ ಅವರು ಸತ್ತಿರಬಹುದು ಎಂದು ಅನುಮಾನ ಬಂದರೆ, ಯಾರೂ ಆ ಶರೀರವನ್ನು ಮುಟ್ಟಲು ಹೋಗುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜೀನ್ ಬ್ಯಾಪ್ಟಿಸ್ಟ್ ಪಿ ಮ್ಯಾಸ್ಸನ್ ಎಂಬ ಓರ್ವ ಡಚ್ ವೈದ್ಯನು ಒಂದು ದಿಟ್ಟ ಹೆಜ್ಜೆಯನ್ನಿಟ್ಟ.
ಮುಳುಗುತ್ತಿದ್ದವನನ್ನು ನೀರಿನಿಂದ ಹೊರಗೆ ಎಳೆದು ಹಾಕಿದ ಮೇಲೆ, ಅವನಿಗೆ ಪ್ರಜ್ಞೆ ಇರದಿದ್ದರೆ, ತಕ್ಷಣವೇ ಅವನ ಎದೆಯನ್ನು ಒತ್ತಬೇಕೆಂದು ಹಾಗೂ ಬಾಯಿಂದ ಬಾಯಿಗೆ ಉಸಿರನ್ನು ತುಂಬ ಬೇಕು ಎಂದ. ಹಾಗೆಯೇ ಮಾಡಿದ. ಹಾಗೆ ಮಾಡಿದಾಗ, ಕೆಲವು ಸಲ ಅವರಿಗೆ ಪ್ರಜ್ಞೆಯು ಬಂದು, ಉಸಿರನ್ನು ದೀರ್ಘವಾಗಿ ಎಳೆದುಕೊಳ್ಳುತ್ತಾ, ಕೆಮ್ಮುತ್ತಾ ಎದ್ದು ಕುಳಿತುಕೊಳ್ಳುತ್ತಿದ್ದರು.
ನೋಡುಗರ ಪಾಲಿಗೆ ಇದೊಂದು ಪವಾಡವೆನಿಸಿತು. ಈ ಸುದ್ದಿಯು ಕೂಡಲೇ ಜನಪ್ರಿಯವಾಯಿತು. 1740. ಪ್ಯಾರಿಸ್ ಅಕಾಡೆಮಿ ಆಫ್ ಸೈನ್ಸಸ್, ‘ನೀರಿನಲ್ಲಿ ಮುಳುಗಿರುವವರನ್ನು ಬದುಕಿಸಲು ಬಾಯಿಂದ ಬಾಯಿಗೆ ಉಸಿರನ್ನು ತುಂಬಿ ಪುನಃಶ್ಚೇತನವನ್ನು ತುಂಬಬೇಕೆಂದು ಶಿಫಾರಸನ್ನು ಮಾಡುತ್ತಿದ್ದೇವೆ’ ಎಂಬ ದಿಟ್ಟ ಘೋಷಣೆಯನ್ನು ಹೊರಡಿಸಿತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಿಜ್ಞಾನಿಗಳಲ್ಲಿ ನೀರಿನಲ್ಲಿ ಮುಳುಗಿ ಸಾವಿನಂಚಿಗೆ ಹೋಗಿರುವವರನ್ನು ಬದುಕಿಸಲು ಕೆಲವು ಕಾರ್ಯವಿಧಾನಗಳನ್ನು ಅದು ರೂಪಿಸಿತು.
1767ರ ಹೊತ್ತಿಗೆ ‘ಮುಳುಗಿದವರ ಪುನಃ ಶ್ಚೇತನಕ್ಕಾಗಿರುವ ಆಮ್‌ಸ್ಟರ್‌ಡ್ಯಾಮ್ ಮಂಡಳಿ’ಯನ್ನು (ಆಮ್‌ಸ್ಟರ್‌ಡ್ಯಾಮ್ ಸೊಸೈಟಿ ಫಾರ್ ದಿ ರಿಕವರಿ ಆಫ್ ದಿ ಡ್ರೌವ್ನ್‌ಡ್) ಸ್ಥಾಪಿಸಲಾಯಿತು. ಇದರ ಕಾರ್ಯ ವಿಧಾನವು ಇಂದು ನಮಗೆ ಬಹಳ ವಿಚಿತ್ರವಾಗಿ ಕಾಣಿಸ ಬಹುದು. ನದಿ ಹಾಗೂ ಕಾಲುವೆ ಗಳ ಹಾದಿಯುದ್ದಕ್ಕೂ, ಅಲ್ಲಲ್ಲಿ ಪುನಃಶ್ಚೇತನ ಕೇಂದ್ರಗಳನ್ನು ಸ್ಥಾಪಿಸಿದರು.
ಕೇಂದ್ರದಲ್ಲಿ ದೊಡ್ಡ ತಿದಿಗಳಿದ್ದವು. ಆ ತಿದಿಗಳ ಮೂಲಕ ತಂಬಾಕಿನ ಹೊಗೆಯನ್ನು ವ್ಯಕ್ತಿಯ ಗುದನಾಳದ ಮೂಲಕ ಕರುಳಿನೊಳಗೆ ತುಂಬುತ್ತಿದ್ದರು. ತಂಬಾಕಿನ ಹೊಗೆಯು ಮಿದುಳಿನ ಉಸಿರಾಟ ಕೇಂದ್ರವನ್ನು ಚುರುಕುಗೊಳಿಸುತ್ತದೆ ಎಂದು ನಂಬಿದ್ದರು. ಕಂಬಳಿಯನ್ನು ಹೊದೆಸಿ ಮೈಯನ್ನು ಬೆಚ್ಚಗೆ ಇಡಲು ಪ್ರಯತ್ನಿಸುತ್ತಿದ್ದರು ಹಾಗೂ ಎದೆಯನ್ನು ಒತ್ತಿ ಬಾಯಿಂದ ಬಾಯಿಗೆ ಗಾಳಿಯನ್ನು ತುಂಬುತ್ತಿದ್ದರು. ಹೀಗೆ ವಿಜ್ಞಾನ, ಮೌಢ್ಯ ಹಾಗೂ ಅಸಾಧಾರಣ ಧೈರ್ಯವೆಲ್ಲ ಸಮ್ಮಿಳಿತವಾಗಿ ಸಿಪಿಆರ್‌ನ ಆದಿರೂಪವು ಹುಟ್ಟಿಕೊಂಡಿತು.
ಮೃತ ನರ್ತನ: 1780. ಇಟಲಿಯ ವಿಜ್ಞಾನಿ ಲೂಗಿ ಗ್ಯಾಲ್ವನಿ (1737-1798), ನರಗಳು ಹೇಗೆ ಸ್ನಾಯು ಗಳನ್ನು ನಿಯಂತ್ರಿಸುತ್ತವೆ ಎಂಬ ವಿಚಾರವಾಗಿ ಪ್ರಯೋಗಗಳನ್ನು ನಡೆಸುತ್ತಿದ್ದ. ಕಪ್ಪೆಗಳನ್ನು ವಿಚ್ಛೇದಿಸಿ ಪ್ರಯೋಗಗಳನ್ನು ಮಾಡುವಾಗ, ಕೆಲವು ಸಲ ಲೋಹದ ಉಪಕರಣಗಳು ಅನೈಚ್ಛಿಕ ವಾಗಿ ಕಪ್ಪೆಯ ಕಾಲಿಗೆ ತಾಗುತ್ತಿದ್ದವು. ಆಗ ಕಪ್ಪೆಯಕಾಲು ಇದ್ದಲ್ಲಿಯೇ ಎದ್ದು ‘ಕುಣಿಯುತ್ತಿತ್ತು’. ಇದನ್ನು ಗಮನಿಸಿದ ಗ್ಯಾಲ್ವನಿ, ಕಪ್ಪೆಯ ಕಾಲನ್ನು ಲೋಹದ ಕೊಕ್ಕೆಗೆ ಸೇರಿಸಿ, ವಿವಿಧ ಲೋಹ ಗಳಿಂದ ಕಾಲನ್ನು ಮುಟ್ಟಿದಾಗ, ಕಾಲು ತುಡಿಯಲಾರಂಭಿಸಿತು.
ವಿದ್ಯುತ್ತನ್ನು ಹಾಯಿಸಿದಾಗಲೂ ಹೀಗೆ ಕಪ್ಪೆಯ ಕಾಲು ತುಡಿಯುವುದನ್ನು ನೋಡಿ, ಆ ಬಗ್ಗೆ ಒಂದು ವಿಸ್ತೃತವಾದ ಪ್ರಬಂಧವನ್ನೇ ಬರೆದ. ಇಟಲಿಯ ಹಾಗೂ ಯುರೋಪಿನ ಸಾರ್ವಜನಿಕರು ಜೀವವಿಲ್ಲದ ಕಪ್ಪೆಯ ಕಾಲು ಎದ್ದೆದ್ದು ‘ಕುಣಿಯುವುದನ್ನು’ ನೋಡಿ ಆಶ್ಚರ್ಯಚಕಿತರಾದರು. ಲಂಡನ್ನಿನ ‘ರಾಯಲ್ ಕಾಲೇಜ್ ಆಫ್ ಸರ್ಜನ್ಸ್’, ವೈದ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಗ್ಯಾಲ್ವನಿಯ ಪ್ರಯೋಗವನ್ನು ಪುನರಾವರ್ತಿಸಿತು.
ಕಪ್ಪೆಯ ಕಾಲು ಚಲಿಸುವುದನ್ನು ನೋಡಿ ಎಲ್ಲರೂ ಹೌಹಾರಿದರು. ಮೇರಿ ಶೆಲ್ಲಿ ಈ ಘಟನೆಯಿಂದ ಪ್ರೇರಿತಳಾಗಿ ‘ಫ್ರಾಂಕೆನ್ ಸ್ಟೈನ್’ ಕಾದಂಬರಿಯನ್ನು ಬರೆದಳು. ಜೀವ ಎನ್ನುವುದು ‘ವಿದ್ಯುತ್ತಿನ ಲೀಲೆ’ ಎಂದು ಭಾವಿಸಿದರು. ಹಾಗಾಗಿ ವಿದ್ಯುತ್ತನ್ನು ಹಾಯಿಸಿ ಮೃತದೇಹವನ್ನು ಜಾಗೃತ ಗೊಳಿಸಬಹುದು ಎಂಬ ಹೊಸ ನಂಬಿಕೆಯು ಬೆಳೆಯಿತು. ಮುಂದಾನೊಂದು ಕಾಲದಲ್ಲಿ ಇದೇ ನಂಬಿಕೆಯನ್ನು ವಿಜ್ಞಾನಿಗಳು ಕಾರ್ಯರೂಪಕ್ಕೆ ತಂದರು. ಇದೇ ವಿದ್ಯುತ್ತನ್ನು ಬಳಸಿ, ಸಾವಿನ ದವಡೆಯಲ್ಲಿದ್ದ ಜೀವವನ್ನು ಮರಳಿ ದೇಹಕ್ಕೆ ತರುವ ಅದ್ಭುತ ಯಂತ್ರ ‘ತತ್ತರಿಕೆ ನಿವಾರಕ’ (ಡಿಫಿಬ್ರಿಲ್ಲೇಟರ್) ವನ್ನು ರೂಪಿಸಿದರು.
ಸಾವು ಎನ್ನುವುದು ಹಠಾತ್ತನೆ ಸಂಭವಿಸುವುದಿಲ್ಲ. ಸಾವು ಎನ್ನುವುದು ನಿಧಾನವಾಗಿ ನಮ್ಮನ್ನು ಆಕ್ರಮಿಸಿಕೊಳ್ಳುತ್ತಾ ಹೋಗುತ್ತದೆ. ‘ಜೀವ ಹೋಗಿದೆ’ ಎಂದು ವೈದ್ಯರು ತೀರ್ಮಾನಿಸಿದ ಮೇಲೂ ನಮ್ಮ ಶರೀರದಲ್ಲಿರುವ ಜೀವಕೋಶಗಳು ಸಾಕಷ್ಟು ಕಾಲ ಬದುಕಿರುತ್ತವೆ. ಜೀವ ಹೋದ ೪-೬ ನಿಮಿಷಗಳಲ್ಲಿ ಮಿದುಳಿನ ನರ ಕೋಶಗಳು ಸಾಯುತ್ತವೆ.
ಹೃದಯ ಮತ್ತು ಶ್ವಾಸಕೋಶಗಳ ಜೀವಕೋಶಗಳು ೪-೬ ಗಂಟೆಗಳ ಕಾಲ ಬದುಕಿರುತ್ತವೆ. ಯಕೃತ್ತು ೬-೧೨ ಗಂಟೆಗಳವರೆಗೆ ಬದುಕಿದ್ದರೆ, ಮೂತ್ರಪಿಂಡಕೋಶಗಳು ೩೦ ಗಂಟೆಗಳವರೆಗೆ ಬದುಕಿರುತ್ತವೆ. ವೀರ್ಯಾಣುಗಳು ೩೬ ಗಂಟೆಗಳವರೆಗೆ ಬದುಕಿದ್ದರೆ, ಬಿಳಿ ರಕ್ತ ಕಣಗಳು ೭೦ ಗಂಟೆಗಳವರೆಗೆ ಬದುಕಿರಬಲ್ಲವು. ಈ ತಿಳಿವು ಮನುಷ್ಯನಿಗೆ ಬರಲು ಅಪಾರ ಸಮಯವು ಬೇಕಾಯಿತು.
ಹಾಗಾಗಿ ವ್ಯಕ್ತಿಯು ‘ಸತ್ತ’ ಎಂದ ಕೂಡಲೇ, ಅವನ ದೇಹದ ಎಲ್ಲಾ ಜೀವಕೋಶಗಳೂ ಸಾಯು ವುದಿಲ್ಲ, ಸಾಕಷ್ಟು ಬದುಕಿರುತ್ತವೆ, ಹಾಗಾಗಿ ಅವನ್ನು ಪುನಃಶ್ಚೇತನಗೊಳಿಸಬಹುದು ಎಂಬ ತಿಳಿವು ಮನುಷ್ಯನಿಗೆ ದೊರೆತ ಮೇಲೆ, ಅವನು ಸಿಪಿಆರ್ ಕಾರ್ಯವಿಧಾನವನ್ನು ಸುಧಾರಿಸುವ ಬಗ್ಗೆ ಯೋಚಿಸಲಾರಂಭಿಸಿದ.
ಶ್ವಾಸಕೋಶ ಪುನಃಶ್ಚೇತನ: ಆಕ್ಸಿಜನ್ ಅನ್ನು ವಿಲ್ಹೆಮ್ ಶೀಲೆ 1773ರಲ್ಲಿ ಹಾಗೂ ಜೋಸೆಫ್ ಪ್ರೀಸ್ಟ್ಲೆ 1774ರಲ್ಲಿ ಕಂಡುಹಿಡಿದರು. ಆಂಟಾಯ್ನ್ ಲವಾಸಿಯೇರ್, 1777ರಲ್ಲಿ ಈ ಹೊಸ ಅನಿಲಕ್ಕೆ ‘ಆಕ್ಸಿಜನ್’ ಎಂದು ನಾಮಕರಣ ವನ್ನು ಮಾಡಿದ. ಇವರಲ್ಲಿ ಜೋಸೆಫ್ ಪ್ರೀಸ್ಟ್ಲೆ ನಾವು ಬದುಕುವು ದಕ್ಕೆ ಆಕ್ಸಿಜನ್ ಅಗತ್ಯ ಎಂದು ಸಾರಿದ.
1837. ಇಂಗ್ಲಿಷ್ ಸರ್ಜನ್ ‘ಮಾರ್ಷಲ್ ಹಾಲ್’ ಮೊದಲ ಬಾರಿಗೆ ಮೃತ್ಯುಮುಖದಲ್ಲಿ ವ್ಯಕ್ತಿಗೆ ಕೃತಕ ಸಿರಾಟದ ಕಾರ್ಯವಿಧಾನವನ್ನು ರೂಪಿಸಿದ. ಬೆನ್ನಿನ ಮೇಲಿರುವ ಒಬ್ಬ ವ್ಯಕ್ತಿಯನ್ನು ತಕ್ಷಣವೇ ಹೊಟ್ಟೆಯ ಮೇಲೆ ಮಲಗಿಸುವುದು, ತಕ್ಷಣವೇ ಮತ್ತೆ ಹೊರಳಿಸಿ ಬೆನ್ನಿನ ಮೇಲೆ ಮಲಗಿಸುವುದು, ಮತ್ತೆ ಹೊಟ್ಟೆ ಮೇಲೆ...
ಹೀಗೆ ಸತತವಾಗಿ ಪುನರಾವರ್ತಿಸಿದರೆ ಶ್ವಾಸಕೋಶಗಳ ಒಳಗೆ ಗಾಳಿಯು ಪ್ರವೇಶಿಸುತ್ತದೆ ಎನ್ನುವು ದನ್ನು ತೋರಿಸಿಕೊಟ್ಟ. ಆನಂತರ ಹೆನ್ರಿ ಸಿಲ್ವೆಸ್ಟರ್ 1858ರಲ್ಲಿ ಮತ್ತೊಂದು ಸೌಮ್ಯ ಸ್ವರೂಪದ ಕಾರ್ಯವಿಧಾನವನ್ನು ರೂಪಿಸಿದ. ಮೃತ್ಯುಮುಖದಲ್ಲಿರುವ ವ್ಯಕ್ತಿಯನ್ನು ಅವನ ಬೆನ್ನಿನ ಮೇಲೆ ಮಲಗಿಸಬೇಕು. ಅವನ ಎರಡೂ ತೋಳುಗಳನ್ನು ಒಟ್ಟಿಗೆ ಸಾಧ್ಯವಾದಷ್ಟು ಮೇಲಕ್ಕೆ ಎತ್ತಬೇಕು. ನಂತರ ಮೂಲ ಸ್ಥಿತಿಗೆ ತರಬೇಕು. ಮತ್ತೆ ಎರಡೂ ತೋಳುಗಳನ್ನು ಮೇಲಕ್ಕೆ ಎತ್ತಬೇಕು. ಹೀಗೆ ತುಂಬಾ ವೇಗವಾಗಿಯೂ ಅಲ್ಲದೆ, ತುಂಬಾ ನಿಧಾನವಾಗಿಯೂ ಅಲ್ಲದೆ, ನಿಯಂತ್ರಿತವಾಗಿ ತೋಳುಗಳನ್ನು ಮೇಲಕ್ಕೆತ್ತುವ ಹಾಗೂ ಕೆಳಗೆ ಇಳಿಸುವ ಕೆಲಸವನ್ನು ಮಾಡಿದರೆ, ಶ್ವಾಸಕೋಶಗಳ ಒಳಗೆ ಗಾಳಿಯು ತುಂಬುತ್ತದೆ ಎನ್ನುವುದನ್ನು ತೋರಿಸಿಕೊಟ್ಟ. ಇದು ‘ಸಿಲ್ವೆಸ್ಟರ್ ವಿಧಾನ’ ಎಂದು ಜನಪ್ರಿಯವಾಯಿತು. ಆಗ ಕೃತಕ ಉಸಿರಾಟದ ಈ ಪ್ರಥಮ ಚಿಕಿತ್ಸೆಯ ತಂತ್ರವನ್ನು ಮೊದಲು ಸೈನಿಕರಿಗೆ ಕಲಿಸಿದರು.
ಸೈನಿಕರು ಯುದ್ಧದಲ್ಲಿ ಪ್ರಜ್ಞೆ ತಪ್ಪಿದವರಿಗೆ ಈ ಪ್ರಥಮ ಚಿಕಿತ್ಸೆಯನ್ನು ನೀಡುತ್ತಿದ್ದರು. ಅವರಲ್ಲಿ ಕೆಲವರು ಬದುಕುತ್ತಿದ್ದವರು, ಹಲವರು ಸಾಯುತ್ತಿದ್ದರು. ‘ಯಾಕೆ’ ಎಂದು ಅವರಿಗೆ ಅಂದು ತಿಳಿದಿರ ಲಿಲ್ಲ. ಏಕೆಂದರೆ ಅವರು ಶ್ವಾಸಕೋಶಗಳನ್ನು ಮಾತ್ರ ಪುನಃ ಶ್ಚೇತನಗೊಳಿಸುವ ಪ್ರಯತ್ನ ವನ್ನು ಮಾಡುತ್ತಿದ್ದರು. ಹೃದಯದ ತಂಟೆಗೇ ಹೋಗಲಿಲ್ಲ.
ಎದೆಯನ್ನು ಒತ್ತುವಿಕೆ: 1891. ಜರ್ಮನಿಯ ಗಾಟಿಂಜೆನ್. ಒಂಬತ್ತು ವರ್ಷದ ಹುಡುಗ. ಕ್ಲೋರೋ ಫಾರಂ ಬಳಸಿ ಅರಿವಳಿಕೆಯನ್ನು ನೀಡುವಾಗ ಅವನಿಗೆ ಹೃದಯ ಸ್ತಂಭನವು (ಕಾರ್ಡಿಯಾಕ್ ಅರೆಸ್ಟ್) ಆಯಿತು. ಫ್ರಾಂಜ಼್ ಕೋನಿಗ್ ಎಂಬ ಶಸವೈದ್ಯನ ಸಹಾಯಕ ಫ್ರೆಡ್ರಿಕ್ ಮಾಸ್. ಅಂದಿನ ದಿನಗಳಲ್ಲಿ ಹೀಗೆ ಹೃದಯ ಸ್ತಂಭನವಾದರೆ, ಶ್ವಾಸಕೋಶಗಳ ಪುನಃಶ್ಚೇತನಕ್ಕೆ ಆದ್ಯತೆಯನ್ನು ನೀಡುವುದು ಅಂದಿನ ಪ್ರಮಾಣ ಬದ್ಧ ಚಿಕಿತ್ಸೆಯಾಗಿತ್ತು.
ಆದರೆ ಮಾಸ್, ಸ್ಥಗಿತವಾಗಿರುವ ಹೃದಯವನ್ನು ಪುನಃಶ್ಚೇತನಗೊಳಿಸಲು ನಿಶ್ಚಯಿಸಿದ. ಮಾನವನ ಇತಿಹಾಸದಲ್ಲಿ ಹಿಂದೆ ಯಾರೂ ಮಾಡದೇ ಇದ್ದ ಸಾಹಸಕ್ಕೆ ಮುಂದಾಗಿದ್ದ. ಎದೆಯ ಮೇಲೆ ಒತ್ತಡ ಹಾಕಿ, ನಿಯಮಿತವಾಗಿ ಒತ್ತಿದರೆ, ನಿಂತು ಹೋಗಿರುವ ಹೃದಯವು ಮತ್ತೆ ಕಾರ್ಯಾರಂಭ ಮಾಡಿ, ಮಿದುಳಿಗೆ ರಕ್ತವನ್ನು ಪೂರೈಸುತ್ತದೆ ಎನ್ನುವುದು ಅವನ ತರ್ಕ.
ಹಾಗಾಗಿ ಆ ಹುಡುಗನ ಎದೆಗೂಡಿನ ಮೇಲೆ ತನ್ನ ಎರಡೂ ಅಂಗೈಯನ್ನು ಇಟ್ಟುಕೊಂಡು ತಾಳಬದ್ಧವಾಗಿ ಒತ್ತಲಾರಂಭಿಸಿದ. ಆರಂಭದಲ್ಲಿ ನಿಮಿಷಕ್ಕೆ ೩೦-೪೦ ಸಲ ಒತ್ತಿದ. ಮಾಸ್‌ನಲ್ಲಿ ಆತಂಕವು ತುಂಬಿತ್ತು. ಯಾರೂ ಮಾಡದ ಹೊಸ ಪ್ರಯೋಗವನ್ನು ತಾನು ಮಾಡುತ್ತಿದ್ದೇನೆ; ಒಂದು ವೇಳೆ ಇದರಲ್ಲಿ ವಿಫಲನಾದರೆ, ತನ್ನನ್ನು ವೈದ್ಯವೃತ್ತಿಯಿಂದ ಉಚ್ಚಾಟಿಸುವುದು ಖಂಡಿತ ಎಂಬ ಭಯವು ಅವನಲ್ಲಿ ತೀವ್ರವಾಯಿತು.
ಆ ಭಯದಲ್ಲಿ ಎದೆ ಒತ್ತುವುದನ್ನು ೩೦-೪೦ರಿಂದ 120 ವರೆಗೆ ಏರಿಸಿದ. ಬಿಡದೆ ಒಂದು ಗಂಟೆಯ ವರೆಗೆ ಎದೆ ಒತ್ತುವುದನ್ನು ಮುಂದುವರಿಸಿದ. ಅದರ ಫಲವಾಗಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಆ ಹುಡುಗ ಚೇತರಿಸಿಕೊಂಡ. ಸ್ವಸ್ಥನಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ. ಮಾಸ್, ತನ್ನ ಪ್ರಯೋಗದ ಬಗ್ಗೆ ಒಂದು ಪ್ರಬಂಧವನ್ನು ಬರೆದು ಪ್ರಕಟಿಸಿದ. ಆದರೆ ಅವನ ಈ ಹೊಸ ತಿಳಿವು ಜರ್ಮನಿಯಲ್ಲಿ ಮಾತ್ರ ಬಳಕೆಗೆ ಬಂದಿತು.
ಜರ್ಮನಿಯ ಹೊರಗಿನ ದೇಶಗಳ ವೈದ್ಯರು ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಲೇ ಇಲ್ಲ. ಹಾಗಾಗಿ ಅವರು 1950ರಲ್ಲಿ ಮತ್ತೆ ಹೃದಯವನ್ನು ಒತ್ತುವುದರ ಮೂಲಕ ಪುನಃಶ್ಚೇತನಗೊಳಿಸುವ ಕಾರ್ಯವಿಧಾನವನ್ನು ಹೊಸದಾಗಿ ‘ಕಂಡು ಹಿಡಿದರು’.