ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಈ ದೇಶ ಭಾಷೆಗಳ ಮಹಾಸಂಗಮ

ಪಪುವಾ ನ್ಯೂಗಿನಿಯಾ ದೇಶವು ಭಾಷಾವಿಜ್ಞಾನಿಗಳ ಪಾಲಿಗೆ ಒಂದು ಜೀವಂತ ಪ್ರಯೋಗಾ ಲಯ. ಇಲ್ಲಿನ ಜನಸಂಖ್ಯೆ ಕಡಿಮೆಯಿದ್ದರೂ, ಪ್ರತಿ 10000 ಜನರಿಗೆ ಒಂದು ಭಾಷೆ ಎಂಬಷ್ಟು ವೈವಿಧ್ಯತೆ ಇಲ್ಲಿದೆ. ಇದಕ್ಕೆ ಮುಖ್ಯವಾದ ಕಾರಣಗಳನ್ನು ನಾವು ಭೌಗೋಳಿಕ, ಸಾಮಾಜಿಕ ಮತ್ತು ಐತಿಹಾಸಿಕ ನೆಲೆಗಟ್ಟಿನಲ್ಲಿ ನೋಡಬಹುದು.

ಸಂಪಾದಕರ ಸದ್ಯಶೋಧನೆ

ಜಗತ್ತಿನಲ್ಲಿಯೇ ಅತಿ ಹೆಚ್ಚು ಭಾಷೆಗಳಿರುವ ದೇಶ ಅಂದ್ರೆ ಭಾರತ. ನೂರಾ ನಲವತ್ತು ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಮೂರು ಸಾವಿರಕ್ಕೂ ಅಧಿಕ ಭಾಷೆಗಳಿವೆ. ಆದರೆ ಅಧಿಕೃತ ಭಾಷೆಗಳ ಸಂಖ್ಯೆ ಇಪ್ಪತ್ತೆರಡು. ಆದರೆ ಎಪ್ಪತ್ತಾರು ಲಕ್ಷ ಜನಸಂಖ್ಯೆ ಇರುವ ಪಪುವಾ ನ್ಯೂಗಿನಿಯಲ್ಲಿ ಸುಮಾರು 850 ಭಾಷೆಗಳಿವೆ.

ಪಪುವಾ ನ್ಯೂಗಿನಿಯಾದ ಈ ಭಾಷಾ ವೈವಿಧ್ಯ ಜಗತ್ತಿನ ಒಂದು ಅದ್ಭುತವೇ ಸರಿ. ಒಂದು ಸಣ್ಣ ದ್ವೀಪ ರಾಷ್ಟ್ರದಲ್ಲಿ ಇಷ್ಟೊಂದು ಭಾಷೆಗಳು ಹೇಗೆ ಹುಟ್ಟಿಕೊಂಡವು ಮತ್ತು ಇಂದಿಗೂ ಹೇಗೆ ಉಳಿದಿವೆ ಎಂಬುದು ಕುತೂಹಲದ ಸಂಗತಿಯೇ.

ಪಪುವಾ ನ್ಯೂಗಿನಿಯಾ ದೇಶವು ಭಾಷಾವಿಜ್ಞಾನಿಗಳ ಪಾಲಿಗೆ ಒಂದು ಜೀವಂತ ಪ್ರಯೋಗಾ ಲಯ. ಇಲ್ಲಿನ ಜನಸಂಖ್ಯೆ ಕಡಿಮೆಯಿದ್ದರೂ, ಪ್ರತಿ 10000 ಜನರಿಗೆ ಒಂದು ಭಾಷೆ ಎಂಬಷ್ಟು ವೈವಿಧ್ಯತೆ ಇಲ್ಲಿದೆ. ಇದಕ್ಕೆ ಮುಖ್ಯವಾದ ಕಾರಣಗಳನ್ನು ನಾವು ಭೌಗೋಳಿಕ, ಸಾಮಾಜಿಕ ಮತ್ತು ಐತಿಹಾಸಿಕ ನೆಲೆಗಟ್ಟಿನಲ್ಲಿ ನೋಡಬಹುದು.

ಇದನ್ನೂ ಓದಿ: Vishweshwar Bhat Column: ಯುದ್ಧದ ವಿಷಯ ಬಂದರೆ ಇಸ್ರೇಲ್‌ ಏಕೆ ಮುಂಗಾಲಪುಟಕಿ ?

ಭಾಷಾ ವೈವಿಧ್ಯಕ್ಕೆ ಪ್ರಮುಖ ಕಾರಣವೆಂದರೆ ಈ ದೇಶದ ಭೂವೈಜ್ಞಾನಿಕ ರಚನೆ. ಪಪುವಾ ನ್ಯೂಗಿನಿಯಾದ ಮಧ್ಯಭಾಗದಲ್ಲಿ ಎತ್ತರದ ಪರ್ವತ ಶ್ರೇಣಿಗಳಿವೆ. ಇವು ಅದೆಷ್ಟು ಕಡಿದಾಗಿವೆ ಎಂದರೆ, ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ಹೋಗುವುದು ಅಂದು ಅಸಾಧ್ಯವಾಗಿತ್ತು.

ಇಲ್ಲಿನ ಕಾಡುಗಳು ಅತೀ ದಟ್ಟವಾಗಿದ್ದು, ಸುಲಭವಾಗಿ ಸಂಚರಿಸಲು ದಾರಿಗಳಿರಲಿಲ್ಲ. ದೊಡ್ಡ ನದಿಗಳು ಮತ್ತು ಜೌಗು ಪ್ರದೇಶಗಳು ಜನಸಮೂಹವನ್ನು ಬೇರ್ಪಡಿಸಿದವು. ಈ ಭೌಗೋಳಿಕ ಅಡೆತಡೆಗಳಿಂದಾಗಿ, ಒಂದೇ ಪ್ರದೇಶದಲ್ಲಿ ವಾಸಿಸುವ ಗುಂಪುಗಳು ಸಾವಿರಾರು ವರ್ಷಗಳ ಕಾಲ ಪರಸ್ಪರ ಭೇಟಿಯಾಗದೇ ಪ್ರತ್ಯೇಕವಾಗಿಯೇ ಉಳಿದವು.

ಹೀಗೆ ಪ್ರತ್ಯೇಕಗೊಂಡ ಗುಂಪುಗಳು ಕಾಲಕ್ರಮೇಣ ತಮ್ಮದೇ ಆದ ವಿಭಿನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡವು. ಮಾನವರು ಪಪುವಾ ನ್ಯೂಗಿನಿಯಾಕ್ಕೆ ಸುಮಾರು 40000 ದಿಂದ 50000 ವರ್ಷಗಳ ಹಿಂದೆಯೇ ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ.

ಇಷ್ಟು ದೀರ್ಘಕಾಲದವರೆಗೆ ಮಾನವ ಸಮೂಹಗಳು ಪ್ರತ್ಯೇಕವಾಗಿ ನೆಲೆಸಿದ್ದರಿಂದ, ಮೂಲ ಭಾಷೆಗಳು ಅನೇಕ ಕವಲುಗಳಾಗಿ ಒಡೆದು ಹೊಸ ಭಾಷೆಗಳಾಗಿ ರೂಪಾಂತರ ಗೊಂಡವು. ಇದನ್ನು ಭಾಷಾ ವಿಜ್ಞಾನದಲ್ಲಿ ‘ಭಾಷಾ ವಿಕಸನ’ ಎನ್ನಲಾಗುತ್ತದೆ.

ಇಲ್ಲಿನ ಜನರು ಸಣ್ಣ ಸಣ್ಣ ಬುಡಕಟ್ಟುಗಳಾಗಿ ವಾಸಿಸುತ್ತಿದ್ದರು. ಪ್ರತಿಯೊಂದು ಬುಡಕಟ್ಟು ಕೂಡ ತನ್ನದೇ ಆದ ಗುರುತನ್ನು ಹೊಂದಿರಲು ಇಷ್ಟಪಡುತ್ತಿತ್ತು. ಇಲ್ಲಿನ ಸಂಸ್ಕೃತಿಯಲ್ಲಿ ತಮ್ಮ ಬುಡಕಟ್ಟು ಮತ್ತು ಭಾಷೆಯೇ ಶ್ರೇಷ್ಠ ಎಂಬ ಭಾವನೆ ಇತ್ತು. ಅಕ್ಕಪಕ್ಕದ ಕಣಿವೆಗಳ ಜನರ ನಡುವೆ ಆಗಾಗ ಯುದ್ಧಗಳು ನಡೆಯುತ್ತಿದ್ದವು.

ಇದರಿಂದಾಗಿ ಅವರು ಪರಸ್ಪರ ಬೆರೆಯಲು ಹಿಂಜರಿಯುತ್ತಿದ್ದರು. ಸಂಪರ್ಕವಿಲ್ಲದಿzಗ ಭಾಷೆಯೂ ಒಂದಾಗಲಿಲ್ಲ. ಪಪುವಾ ನ್ಯೂ ಗಿನಿಯಾದಲ್ಲಿ ಜನರು ಹಸಿರು ಕಣಿವೆಗಳಲ್ಲಿ ಕೃಷಿ ಮಾಡಿಕೊಂಡು ಸ್ವಾವಲಂಬಿಗಳಾಗಿದ್ದರು. ಆಹಾರಕ್ಕಾಗಿ ಅವರು ದೂರದ ಪ್ರದೇಶ ಗಳಿಗೆ ವಲಸೆ ಹೋಗುವ ಅಗತ್ಯವಿರಲಿಲ್ಲ.

ವಲಸೆ ಕಡಿಮೆ ಇದ್ದಷ್ಟೂ, ಬೇರೆ ಭಾಷೆಗಳೊಂದಿಗೆ ಬೆರೆಯುವ ಅವಕಾಶವೂ ಕಡಿಮೆ ಇರುತ್ತದೆ. ಇದು ಅವರವರ ಪ್ರಾದೇಶಿಕ ಭಾಷೆಗಳು ಅಳಿಯದಂತೆ ಉಳಿಯಲು ಸಹಾಯ ಮಾಡಿತು. ಆ ದೇಶದಲ್ಲಿರುವ ಭಾಷೆಗಳನ್ನು ಮುಖ್ಯವಾಗಿ ಎರಡು ವರ್ಗಗಳಾಗಿ ವಿಂಗಡಿಸ ಬಹುದು.

ಮೊದಲನೆಯದು, ಪಪುವನ್ ಭಾಷೆಗಳು. ಇವು ಅತ್ಯಂತ ಪುರಾತನ ಭಾಷೆಗಳು. ಇವುಗಳ ಮೂಲ ಸಾವಿರಾರು ವರ್ಷಗಳ ಹಿಂದಿನದು ಹಾಗೂ ಎರಡನೆಯದು, ಆಸ್ಟ್ರೋನೇಷಿಯನ್ ಭಾಷೆಗಳು. ಇವು ಸುಮಾರು 3500 ವರ್ಷಗಳ ಹಿಂದೆ ವಲಸೆ ಬಂದವರಿಂದ ಪರಿಚಯಿತ ವಾದವು.

ಇವು ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇಷ್ಟೊಂದು ಭಾಷೆಗಳಿರುವ ದೇಶದಲ್ಲಿ ಒಬ್ಬರಿಗೊಬ್ಬರು ಸಂವಹನ ನಡೆಸುವುದು ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ಇದಕ್ಕಾಗಿ ‘ಟೋಕ್ ಪಿಸಿನ್’ ಎಂಬ ಲಿಂಗುವಾ ಫ್ರಾಂಕಾ ಅಥವಾ ಸಂಪರ್ಕ ಭಾಷೆ ಹುಟ್ಟಿಕೊಂಡಿತು. ಇದು ಇಂಗ್ಲಿಷ್ ಆಧಾರಿತ ‘ಪಿಡ್ಜಿನ್’ ಭಾಷೆಯಾಗಿದ್ದು, ಇಂದು ದೇಶದ ಬಹುತೇಕ ಜನರು ಇದನ್ನು ಬಳಸುತ್ತಾರೆ.

ಇದು ವಿವಿಧ ಬುಡಕಟ್ಟುಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ. ಪಪುವಾ ನ್ಯೂ ಗಿನಿಯಾದ ಭಾಷಾ ವೈವಿಧ್ಯತೆಯು ಮಾನವ ಇತಿಹಾಸದ ಒಂದು ಅಮೂಲ್ಯ ಆಸ್ತಿ. ಪ್ರಕೃತಿಯ ಅಡೆತಡೆಗಳು ಮತ್ತು ಜನರ ಪ್ರತ್ಯೇಕತೆಯ ಮನೋಭಾವವು ಇಲ್ಲಿನ ವೈವಿಧ್ಯ ವನ್ನು ಕಾಪಾಡಿವೆ. ಇಂದು ಜಾಗತೀಕರಣದಿಂದಾಗಿ ಕೆಲವು ಭಾಷೆಗಳು ಅಳಿವಿನ ಅಂಚಿ ನಲ್ಲಿದ್ದರೂ, ಈ ದೇಶವು ಇಂದಿಗೂ ಭಾಷೆಗಳ ‘ಮಹಾ ಸಂಗಮ’ವಾಗಿಯೇ ಉಳಿದಿದೆ.

ವಿಶ್ವೇಶ್ವರ ಭಟ್‌

View all posts by this author