ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janamejaya Umarji Column: ಇದು ಸು ಫ್ರಂ ಕೋ ಎಂಬ ಧರ್ಮಸ್ಥಳ ಪ್ರಹಸನ

‘ಬುರುಡೆ ರಹಸ್ಯ ಒಂದು ಬುರುಡೆ’ ಎನ್ನುವ ಸಾರ್ವಜನಿಕ ಅಭಿಪ್ರಾಯ ರೂಪಿತವಾಗುವ ಹೊತ್ತಿಗೆ ಸುಜಾತಾ ಭಟ್ ಬಂದರು. ಇದು ಧಾರಾವಾಹಿಯ ಮೂಲಕಥೆಯಲ್ಲ, ಸೇರಿಕೊಂಡ ಅಡ್ಡಕಥೆ. ಇದು ನಿಜವಾಗಿಯೂ ಸಹಜವೇ? ಅಥವಾ ಯೋಜಿತವೇ? ಪ್ರೇಕ್ಷಕರ ನಾಡಿಮಿಡಿತ ನೋಡಿ ಸೇರಿಸಿಕೊಂಡಿದ್ದೇ? ಇಂಥ ಸಂದರ್ಭಗಳಲ್ಲಿ ‘ವ್ಯಕ್ತಿಗತ ಧ್ವನಿ’ ಕೊಟ್ಟರೆ ಕಥೆ ಹೆಚ್ಚು ಭಾವನಾತ್ಮಕ ವಾಗಿ ಮಾರಾಟವಾಗುತ್ತದೆ ಎಂಬುದು ಜೀವಪರ ಕಥೆಗಾರರ ವಿಚಾರ.

ಜಗನ್ನಾಟಕ

ಜನಮೇಜಯ ಉಮರ್ಜಿ

ಭಾರತೀಯ ಸಾಮಾಜಿಕ ಮಾಧ್ಯಮದ ರಿಯಾಲಿಟಿ ಶೋಗಳಿಗೆ ಹೊಸ ಎಂಟ್ರಿ ಬಂದಿದೆ. ಅದುವೇ ‘ಸು ಫ್ರಮ್ ಕೋ’. ನಾಯಕಿ- ಸುಜಾತಾ ಭಟ್. ವೇದಿಕೆ- ಧರ್ಮಸ್ಥಳ ವಿವಾದ. ನಿರ್ದೇಶಕರು- ಒಮ್ಮೊಮ್ಮೆ ಸಾರ್ವಜನಿಕವಾಗಿ, ಬಹಳ ಸಾರಿ ಗುಪ್ತವಾಗಿ ಸಭೆ ನಡೆಸುವ ಅಜ್ಞಾತ ಎಡಪಂಥೀಯ ಮೀಟಿಂಗ್ ಮಾಸ್ಟರ್‌ಗಳು ಹಾಗೂ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹುಸಿ ಹೋರಾಟ ಮಾಡುತ್ತಿರುವವರು. ಪ್ರೇಕ್ಷಕರು- ಮಾಧ್ಯಮ ಮತ್ತು ದೇಶದ ಜನತೆ. ಸಾಕ್ಷಿ ಇಲ್ಲ ಪುರಾವೆ ಇಲ್ಲ, ಆದರೆ ಪ್ರಚಾರ ಅಪಾರ. “ನಾನು ನೂರಾರು ಹೆಣ್ಣುಮಕ್ಕಳ ಶವಗಳನ್ನು ಧರ್ಮಸ್ಥಳದ ಸುತ್ತಮುತ್ತ ಹೂತಿದ್ದೇನೆ" ಎಂದು ಬುರುಡೆ ಹಿಡಕೊಂಡು ಒಬ್ಬ ಬಂದ. ಆತನಿಗೆ ಹೆಸರಿಲ್ಲ, ಮುಸುಕುಧಾರಿ. ಆತ ತೋರಿಸಿದ ಭೂಮಿ ಅಗೆಯಲಾಯಿತು. ಗುಡ್ಡ ಅಗೆದ ಮೇಲೂ ಹೇಳಿಕೊಳ್ಳುವಂಥದು ಇಲ್ಲಿಯವರೆಗೆ ಏನೂ ಸಿಕ್ಕಿಲ್ಲ.

ಇದಕ್ಕಿಂತ ಮೊದಲು ಯುಟ್ಯೂಬಿನಲ್ಲಿ ಪ್ರೊಮೋ ವಿಡಿಯೋಗಳ ಪ್ರವಾಹ ಬಂತು. ಅವುಗಳಲ್ಲಿ ಕಲ್ಕಿಯ ಬುದ್ಧಿಯೂ, ಕೃತಕ ಬುದ್ಧಿಮತ್ತೆಯೂ ಇತ್ತು. ಮಾಧ್ಯಮಗಳಲ್ಲಿ ಭೂಮಿ ಬಾನು ಒಂದಾಗುವಂತೆ ಸzಯಿತು. ಲಕ್ಷಾಂತರ ಜನ ನೋಡಿದರು.

‘ಬುರುಡೆ ರಹಸ್ಯ ಒಂದು ಬುರುಡೆ’ ಎನ್ನುವ ಸಾರ್ವಜನಿಕ ಅಭಿಪ್ರಾಯ ರೂಪಿತವಾಗುವ ಹೊತ್ತಿಗೆ ಸುಜಾತಾ ಭಟ್ ಬಂದರು. ಇದು ಧಾರಾವಾಹಿಯ ಮೂಲಕಥೆಯಲ್ಲ, ಸೇರಿಕೊಂಡ ಅಡ್ಡಕಥೆ. ಇದು ನಿಜವಾಗಿಯೂ ಸಹಜವೇ? ಅಥವಾ ಯೋಜಿತವೇ? ಪ್ರೇಕ್ಷಕರ ನಾಡಿಮಿಡಿತ ನೋಡಿ ಸೇರಿಸಿಕೊಂಡಿದ್ದೇ? ಇಂಥ ಸಂದರ್ಭಗಳಲ್ಲಿ ‘ವ್ಯಕ್ತಿಗತ ಧ್ವನಿ’ ಕೊಟ್ಟರೆ ಕಥೆ ಹೆಚ್ಚು ಭಾವನಾತ್ಮಕ ವಾಗಿ ಮಾರಾಟವಾಗುತ್ತದೆ ಎಂಬುದು ಜೀವಪರ ಕಥೆಗಾರರ ವಿಚಾರ.

ಇದನ್ನೂ ಓದಿ: Janamejaya Umarji Column: ವಚನಗಳ ಸಂಖ್ಯೆ ಕಿರಿದಾಗುತ್ತಿದೆಯೇ ? ಇದು ಆತಂಕಕಾರಿ ಬೆಳವಣಿಗೆಯೇ ?

“ಕೋಲ್ಕೋತ್ತಾದ ಸಿಬಿಐನಲ್ಲಿ ಸ್ಟೆನೋ ಆಗಿದ್ದೇ ಎಂದು ಹೇಳಿಕೊಂಡು, ಮಣಿಪಾಲದಲ್ಲಿ ಮೆಡಿಕಲ್ ಕಲಿಯಲು ಬಂದ ಮಗಳು, ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ. ನಾನು ನ್ಯಾಯ ಕೇಳಿದೆ ಸಿಕ್ಕಿಲ್ಲ" ಎಂದರು. “ಧರ್ಮಸ್ಥಳದಲ್ಲಿ ನನ್ನ ತಲೆಗೆ ಹೊಡೆತ ಬಿತ್ತು. ಎಚ್ಚರವಾದಾಗ ಬೆಂಗಳೂರಿನಲ್ಲಿz. ನನಗೆ ನನ್ನ ಮಗಳ ಅಸ್ಥಿ ಹುಡುಕಿ ಕೊಡಿ ನಾನು ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡುತ್ತೇನೆ" ಎಂದು ದೂರು ಕೊಟ್ಟರು.

ಆ ಮಹಿಳೆಗೆ ಅಷ್ಟೇ ಅಲ್ಲ, ನ್ಯಾಯ ಕೇಳಿಕೊಂಡು ಬಂದ ಎಲ್ಲರಿಗೂ ನ್ಯಾಯ ಸಿಗಬೇಕು. ಅಣ್ಣಪ್ಪ ಸ್ವಾಮಿಯೇ ಧರ್ಮದೇವತೆ. ಶತಮಾನಗಳ ಹಿಂದೆ ವೈಷ್ಣವ ವಾದಿರಾಜರು ಪ್ರತಿಷ್ಠಾಪಿಸಿದ, ಜೈನ ಹೆಗ್ಗಡೆಯವರು ನಡೆಸಿಕೊಂಡು ಹೋಗುವ ರಾಜ್ಯದ ಜನಪ್ರಿಯ ಶೈವಕ್ಷೇತ್ರ. ಸೇವೆ, ಧರ್ಮ ಮತ್ತು ಸಾಮರಸ್ಯದ ಪ್ರತೀಕವಾಗಿ ನಿಂತಿರುವ ಧರ್ಮಸ್ಥಳವನ್ನು ಎಡಪಂಥೀಯರು ಗುರಿಯಾಗಿಸಿ ಕೊಳ್ಳುವುದರಲ್ಲಿ ಕಾರಣವಿದೆ.

ಜಾತಿ, ವರ್ಗ, ಲಿಂಗ ಆಧರಿಸಿ ಹಿಂದೂ ಸಮಾಜವನ್ನು ವಿಭಜಿಸುವ ಶಕ್ತಿಗಳಿಗೆ ಶಬರಿಮಲೆ, ಧರ್ಮಸ್ಥಳಗಳಂಥ ಕ್ಷೇತ್ರಗಳು ಸವಾಲಾಗಿವೆ. ಲಕ್ಷಾಂತರ ಜನರು ಪ್ರತಿ ವರ್ಷ ಇಲ್ಲಿ ಸೇರುತ್ತಾರೆ. ಬಂದವರು ಜಾತಿ ಭೇದ ಮರೆತು ಒಂದಾಗುತ್ತಾರೆ. ಸ್ರೀಸಹಾಯ ಗುಂಪುಗಳು ಹಳ್ಳಿ ಹಳ್ಳಿ ತಲುಪಿ ಮಹಿಳೆಯರಿಗೆ ಸಹಾಯಕವಾಗಿವೆ. ನೂರಾರು ಶಿಕ್ಷಣ ಸಂಸ್ಥೆಗಳು eನದ ಜ್ಯೋತಿ ಹೊತ್ತಿಸಿವೆ.

ಸಮಾಜವಾದಿ ಸರಕಾರವು ‘ಶಕ್ತಿ’ ಯೋಜನೆಯನ್ನು ಗ್ಯಾರಂಟಿ ಯೋಜನೆ ಮಾಡಿದ್ದೇ ತಡ, ನಾಡಿನ ಮಹಿಳೆಯರು ಧಾವಿಸಿದ್ದೇ ಧರ್ಮಸ್ಥಳ ಪುಣ್ಯಕ್ಷೇತ್ರ ದರ್ಶನಕ್ಕೆ. ಹೀಗಾಗಿ ಎಡಪಂಥೀಯರ ಅವಕಾಶಗಳನ್ನು ಇದು ಶೂನ್ಯ ಮಾಡುತ್ತಿದೆ. ಧರ್ಮಸ್ಥಳದಲ್ಲಿ ಭಕ್ತಿ ಮತ್ತು ಸೇವೆಯ ಮೂಲಕ ಅಚಲವಾಗಿ ನಿಂತಿರುವ ಹಿಂದೂ ಧಾರ್ಮಿಕ ಪ್ರತಿಷ್ಠೆಯನ್ನು ಕುಂದಿಸಿ, ಗೊಂದಲ ಎಬ್ಬಿಸಿ ನಂಬಿಕೆಗೆ ಘಾಸಿ ಮಾಡುವ ದುರಾಲೋಚನೆಗೆ ಈ ಪ್ರಕರಣ ಸಾಕ್ಷಿಯಾಗಿದೆ.

ಈ ನಡುವೆ ಮತ್ತೆ ವಿಡಿಯೋ ಮಾಡಲು ಗ್ರಾಮಕ್ಕೆ ಬಂದ ಯುಟ್ಯೂಬರ್ ಅನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದನ್ನು ಸಿಂಪತಿಯಾಗಿ ಪರಿವರ್ತಿಸಿಕೊಳ್ಳುವ ಸನ್ನಿವೇಶವೂ ಎದುರಾ ಯಿತು, ಆದರೆ ಟಿಆರ್‌ಪಿ ಗಿಟ್ಟಲಿಲ್ಲ. ಹೀಗಾಗಿ ಸುಜಾತ ಭಟ್ಟರ ಹೇಳಿಕೆಗಳು, ಅದರ ಹಿನ್ನೆಲೆ ಹುಡುಕುತ್ತಾ ಹೊರಡುವ ಕಥೆಗಳು ಮಾಧ್ಯಮದಲ್ಲಿ ಮುನ್ನೆಲೆಗೆ ಬಂದವು. ಅವರು ಭೂತಲವನ್ನು ಸ್ಪರ್ಶಿಸಿ ನಮಸ್ಕಾರ ಮಾಡಿದ ದೃಶ್ಯ ಕಣ್ಣಿಗೆ ಕಟ್ಟುವಂತಿತ್ತು.

ಆಕೆಯ ನೋವು ನಿಜವೇ ಆಗಿದ್ದರೆ ಅವರಿಗೆ ವಿಶೇಷ ತನಿಖಾ ದಳವಿದೆ. ಆದರೆ ಅವರು ಹೇಳುವ ಕಥೆಗಳು ಅವು ಪಡೆದುಕೊಳ್ಳುವ ತಿರುವುಗಳು ಒಮ್ಮೊಮ್ಮೆ ಹಿಂದಕ್ಕೆ ಹೋಗುವುದರ ಜತೆಗೆ ರಹಸ್ಯಕಾರಿ ಮತ್ತು ರೋಚಕಾಗಿವೆ. ಅವರ ಹೇಳಿಕೆಗಳು WhatsApp forward ಗಳಂತೆ, ಪ್ರತಿ ಗಂಟೆಗೆ ಹೊಸದೊಂದು version. ಬೆಳಗ್ಗೆ- “ನನಗೆ ಯಾರ ಮೇಲೆಯೂ ವೈಯಕ್ತಿಕ ದ್ವೇಷವಿಲ್ಲ".

ಮಧ್ಯಾಹ್ನ- “ಇದು ಜನರ ಹಕ್ಕಿನ ಹೋರಾಟ". ಸಂಜೆ- “ನನಗೆ ಬೆದರಿಕೆ ಬಂದಿದೆ". ರಾತ್ರಿ- “ನನ್ನ ಮಾತುಗಳನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ". ಒಂದೇ ದಿನದಲ್ಲಿ ನಾಲ್ಕು ಹೇಳಿಕೆಗಳನ್ನು ಬದಲಿಸುವುದನ್ನು ನೋಡಿದರೆ ಯಾವ ವೆಬ್‌ಸೀರೀಸ್‌ಗೂ ಕಮ್ಮಿ ಇಲ್ಲ. ವೀಕ್ಷಕರಿಗೆ ಯಾವ ಭಾವನೆ ಬೇಕೋ ಅದಕ್ಕೆ ಅನುಗುಣವಾಗಿ ಬದಲಾವಣೆ.

ಒಮ್ಮೆ ಧೈರ್ಯಶಾಲಿ ಕ್ರಾಂತಿಕಾರಿಣಿ, ಇನ್ನೊಮ್ಮೆ ವ್ಯವಸ್ಥೆಯ ಬಲಿಪಶು, ಮತ್ತೊಮ್ಮೆ ಶ್ರೀಸಾಮಾನ್ಯ. ಹೇಳಿಕೆ ಬದಲಾದರೂ ಕಾನಿಡೆನ್ಸ್‌ನಲ್ಲಿ ಬದಲಾವಣೆಯಿಲ್ಲ. ನಿರ್ದೇಶಕರ ಕಲ್ಪನೆಯಂತೆ ನಿರ್ವಿಕಾರವಾಗಿ ಎಲ್ಲವೂ. ಇದು ಚಟುವಟಿಕೆಯೇ ಅಥವಾ ಮಾಧ್ಯಮ ತಾಲಿಮೇ ಎಂದು ಸಂಶಯ ಮೂಡುತ್ತದೆ.

ಮದುವೆಯ ಕುರಿತಾದ ಸುಜಾತಾ ಅವರ ಮಾತುಗಳೇ ಇನ್ನೊಂದು ಧಾರಾವಾಹಿಯಾಗಬಲ್ಲದು. ಒಂದು ಸಂದರ್ಶನದಲ್ಲಿ “ಮದುವೆ ಶುದ್ಧ ವೈಯಕ್ತಿಕ" ಎಂದರೆ, ಇನ್ನೊಂದರಲ್ಲಿ “ಇದು ಸಮಾಜದ ಪ್ರತಿಬಿಂಬ" ಎಂದರು. ಜನರಿಗೆ ವೈಯಕ್ತಿಕ ಬದುಕಿನ ವಿವರ ಬೇಕು, ಮಾಧ್ಯಮಗಳಿಗೆ ಸಾಮಾಜಿಕ ಚರ್ಚೆ ಬೇಕು. ಸುಜಾತಾ ಎರಡನ್ನೂ ಒಟ್ಟಿಗೆ ನಿಭಾಯಿಸಿದ್ದಾರೆ.

ಹೀಗಾಗಿ ಇವರು ಸಂಚಿನ ಭಾಗವಾ ಅಥವಾ ವ್ಯವಸ್ಥೆಯ ಬಲಿಪಶುವಾ? ಅನ್ನೋ ಗೊಂದಲ ಪ್ರೇಕ್ಷಕರಿಗೆ ಇನ್ನೂ ಬಗೆಹರಿದಿಲ್ಲ. ಅನನ್ಯಾ ಭಟ್ ಬಗ್ಗೆ ಯಾವ ದಾಖಲೆಗಳೂ ಸಾಕ್ಷಿಗಳೂ ಸಿಕ್ಕಿಲ್ಲ. ಈ ಪ್ರಹಸನದಲ್ಲಿ ನೀಡಿದ ಅನನ್ಯಾ ಭಟ್ ಅವರ ಭಾವಚಿತ್ರ ಇನ್ಯಾರಿಗೋ ಹೋಲಿಕೆ ಆಯಿತು ಎಂಬ ಸುದ್ದಿಗಳು ಬರುತ್ತಿವೆ. ಈಕೆಯ ಪ್ರವೇಶವೂ ಒಂದು ಕಥಾತಂತ್ರವೆನಿಸುತ್ತದೆ. ಈ ಪಾತ್ರವೇ ಇಡಿ ಧಾರಾವಾಹಿಯಲ್ಲಿ ನಿರ್ದೇಶಕರಿಗೆ ಒಂದಿಷ್ಟು ಕೈ ಹಿಡಿದಿದೆ. ಒಮ್ಮೆ ವಿಡಿಯೋದಲ್ಲಿ ತಪ್ಪೊಪ್ಪಿಗೆ ಇನ್ನೊಮ್ಮೆ ಅದರ ನಿರಾಕರಣೆ, ಒಟ್ಟಿನಲ್ಲಿ ಸುಜಾತಾ ಅವರದು ‘ಧಡಂ ಧುಡಕಿ’ ಆಟವೆನಿಸುತ್ತದೆ.

ವಿಶೇಷ ತನಿಖಾ ತಂಡವಿದೆ, ನ್ಯಾಯಾಲಯವಿದೆ; ಸೋಕ್ಷವೋ ಮೋಕ್ಷವೋ ಒಂದಾಗುತ್ತದೆ. ಅದನ್ನು ನಾವು ನಿರ್ಣಯಿಸುವುದು ತಪ್ಪಾಗುತ್ತದೆ. ಆದರೆ ಇದರ ಹಿಂದಿರುವ ಕಾಣದ ಕೈಗಳ ಪತ್ತೆ ತನಿಖೆಯ ವ್ಯಾಪ್ತಿಗೆ ಬರುವುದಿಲ್ಲ. ಕಾಣದ ಕೈಗಳ ಉದ್ದೇಶವು ಹಿಂದೂ ಧಾರ್ಮಿಕ ಕೇಂದ್ರದ ಹೆಸರು ಕೆಡಿಸುವುದೇ ಆಗಿದೆ. ಇದರ ಹಿಂದೆ ತಥಾಕಥಿತ ಜಾತ್ಯತೀತ ಸೋಗಲಾಡಿಗಳು ಹಾಗೂ ಖತರ್‌ನಾಕ್ ಕಮ್ಯುನಿಸ್ಟ್ ಗುಂಪುಗಳಿವೆ ಎಂಬ ಸುದ್ದಿ ಹರಿದಾಡುತ್ತಿದೆ. ‌

ಪ್ರಕರಣ ಒಂದು ಹಂತಕ್ಕೆ ಬಂದ ನಂತರ ಅವರು ಸಭೆ ಸೇರಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಇದರ ನಡುವೆ “ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಮತ್ತು ಪ್ರಸ್ತುತ ತಮಿಳುನಾಡಿನ ಸಂಸದ ರೊಬ್ಬರು ಇದರ ಹಿಂದಿದ್ದಾರೆ, ಅವರೇ ಸರಕಾರಕ್ಕೆ ಎಲ್ಲಿಂದ ಹೇಳಿಸಬೇಕೋ ಅಲ್ಲಿಂದ ಹೇಳಿಸಿ ದ್ದಾರೆ" ಎಂದು ಜನಾರ್ದನ ರೆಡ್ಡಿಯವರು ಹೇಳಿರುವುದು ಮತ್ತು ರಾಜ್ಯದ ಉಪಮುಖ್ಯ ಮಂತ್ರಿಗಳು “ಸಂಚು ಯಾರು ಮಾಡಿದ್ದಾರೆ ಮತ್ತು ಅವರನ್ನು ಹೇಗೆ ಬಲಿಹಾಕುವುದು ನಮಗೆ ಗೊತ್ತು" ಎಂದು ಸದನದ ಹೇಳಿದ್ದು, ಈ ಎರಡೂ ಹೇಳಿಕೆಗಳು ಅತಿ ಮಹತ್ವ ಪಡೆದುಕೊಂಡಿರುವು ದಷ್ಟೇ ಅಲ್ಲದೆ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿವೆ.

ವಿಶೇಷ ತನಿಖಾ ದಳದ ಮುಖ್ಯಸ್ಥರು ಯಾರಿರಬೇಕು ಎಂಬಲ್ಲಿಯವರೆಗೂ ಪ್ರಭಾವ ಬೀರಿದ ತಮಗೆ ಹಿನ್ನಡೆ ಹೇಗಾಯಿತು? ಇಲ್ಲಿಯವರೆಗೆ ಆದ ಬೆಳವಣಿಗೆಗಳು ಏನು? ಮುಂದಿನ ದಾರಿ ಏನು? ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಸಭೆಯಲ್ಲಿ ಚರ್ಚೆ ನಡೆದಿರಬಹುದು. ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಇವರು ನಡೆಸಿದ ಆಟ ಇದು ಎಂಬುದು ಯಾರಿ ಗಾದರೂ ಸಂಶಯ ತರುತ್ತದೆ. ಅನುಮಾನ ಹುಟ್ಟಿಸುವುದು, ನೈತಿಕತೆಯ ಕಗ್ಗೊಲೆ ಎನ್ನುವುದು, ಅದಕ್ಕೆ ಸಮಾಜೋ-ರಾಜಕೀಯದ ದಿಕ್ಕು ಕೊಡುವುದು, ದೇಶಿ ಮತ್ತು ವಿದೇಶಿ ಮಾಧ್ಯಮಗಳನ್ನು ಬಳಸಿಕೊಂಡು ದೊಡ್ಡ ಸುದ್ದಿ ಮಾಡುವುದು, ಬಿಟ್ಟೂ ಬಿಡದೆ ಪ್ರಚಾರ ಮಾಡುವುದು ಇದೆ ಹಳೆಯ ‘ಗೊಬೆಲ್ಸ್ ಕಾರ್ಯತಂತ್ರ’. ಇಲ್ಲಿಯೂ ಹಾಗೇ ಆಗಿದೆ.

ಸಂದರ್ಶನ, ಛಾಯಾಚಿತ್ರ, ವಿಡಿಯೋ, ಟ್ವೀಟ್ ಹೀಗೆ ಪ್ರಚಾರಕ್ಕೆ ಬೇಕಾದ ಸರಕೆಲ್ಲ ಒಂದೇ ದಿನದಲ್ಲಿ ಲಭ್ಯ. ಧಾರಾವಾಹಿ ಇಲ್ಲಿಗೇ ಮುಗಿದಿಲ್ಲ. ಇಂದು ಅನ್ಯಾಯ, ನಾಳೆ ಬೆದರಿಕೆ, ನಾಡಿದ್ದು ಹೊಸ ದಾವೆ- ಇದು ಮುಂದುವರಿಯುತ್ತದೆ. ಜನರು ಮತ್ತು ಮಾಧ್ಯಮಗಳು ಮೂಕಪ್ರೇಕ್ಷಕರು ಮಾತ್ರ. ಇದು ಸತ್ಯಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ, ಬದಲಾಗಿ ಸೂಕ್ಷ್ಮವಾಗಿ ರೂಪಿಸಿದ ತಂತ್ರಗಳ ಆಟ. ಸಮಾಧಿಯ ಯಾವುದೇ ಪುರಾವೆ ಸಿಕ್ಕಿಲ್ಲ, ಕಳೇಬರಗಳು ಸಿಕ್ಕಿಲ್ಲ. ಆದರೆ ಪ್ರಚಾರದ ಅಲೆ ಗಗನಕ್ಕೇರಿದೆ.

ಮುಖವಾಡ ಧರಿಸಿದ ಅನಾಮಧೇಯ ವ್ಯಕ್ತಿ, ಅದನ್ನು ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತಿಹಿಡಿದ ಮಾಧ್ಯಮಗಳು, ಕೈಕೊಟ್ಟ ಯುಟ್ಯೂಬರ್ ಸಿಂಪತಿ, ನಡುವೆ ಬಂದ ಸುಜಾತಾ ಭಟ್ ಇವೆಲ್ಲ ಸೇರಿ ಒಂದೇ ಜಾಡಿಗೆ ಬಿಗಿದ ಕೃತಕ ಕಥಾವಸ್ತುವನ್ನು ಕಟ್ಟಿಕೊಟ್ಟಿವೆ. ಶತಮಾನಗಳಿಂದ ಧರ್ಮ, ಸೇವೆ, ಸಾಮರಸ್ಯ ಮತ್ತು ಸಮಾಜಮುಖಿ ಕಾರ್ಯಗಳ ಪ್ರತಿರೂಪವಾಗಿ ನಿಂತಿರುವ ಧರ್ಮ ಸ್ಥಳವನ್ನು ಕುಂದಿಸಲು ತನ್ಮೂಲಕ ಹಿಂದೂ ಶಕ್ತಿಕೇಂದ್ರವನ್ನು ಶಿಥಿಲಗೊಳಿಸಲು ಇಂಥ ಸುಳ್ಳು ಪ್ರಚಾರ ಅವಶ್ಯಕವೆಂದು ಎಡಪಂಥೀಯ-ವೈಮನಸ್ಯ ಶಕ್ತಿಗಳು ಕಂಡುಕೊಂಡಿರುವುದೇ ಇದರ ನಿಜಸ್ವರೂಪ. ಸುಳ್ಳಿನ ಪ್ರಚಾರ ಎಷ್ಟೇ ಗಟ್ಟಿಯಾಗಿದ್ದರೂ, ಸತ್ಯದ ಬಲವೇ ಶಾಶ್ವತ. ಆ ಸತ್ಯವೇ ಧರ್ಮವನ್ನು ರಕ್ಷಿಸುತ್ತದೆ...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

(ಸೂಚನೆ: ಅನಿವಾರ್ಯ ಕಾರಣಗಳಿಂದ ಇಂದು

‘ರಸದೌತಣ’ ಅಂಕಣ ಪ್ರಕಟವಾಗಿಲ್ಲ)