Srivathsa Joshi Column: ಕನ್ನಡ ವಾಙ್ಮಯಕ್ಕೆ ಸೇರಲಿರುವ ಅರ್ಥಪೂರ್ಣ ಪುಸ್ತಕವಿದು !
ಇಂಗ್ಲಿಷ್‌ನಲ್ಲೂ ಈ ಹೋಲಿಕೆಯನ್ನು Be the tongue, not a ladle ಎಂದು ಹಿತೋಪದೇಶ ಸೂಕ್ತಿ ಯಾಗಿ ಬಳಸುವುದಿದೆ. ದಾಸಸಾಹಿತ್ಯದ ಮಟ್ಟಿಗೆ ಪಾಯಸದ ಹಂಡೆಯಲ್ಲಿನ ಸೌಟು ಆಗಿರುವವ ರನ್ನು ಪಾಯಸದ ರುಚಿ ಸವಿಯಬಲ್ಲವರನ್ನಾಗಿಸುವತ್ತ ಸದಾಶಯದ ಪುಟ್ಟದೊಂದು ಪ್ರಯತ್ನ ಮಾಡಿದ್ದಾರೆ ಶಿವಶಂಕರ ಪ್ರಭು ಅವರು ಈ ಕೃತಿಯಲ್ಲಿ.
-
ಶ್ರೀವತ್ಸ ಜೋಶಿ
Nov 2, 2025 7:10 AM
ತಿಳಿರುತೋರಣ
ಅರ್ಥ ಎನ್ನುವುದು ಒಂದರ್ಥದಲ್ಲಿ ರುಚಿ ಇದ್ದಂತೆ. ಅರ್ಥ ಗೊತ್ತಿಲ್ಲದೆ ಒಂದು ಹಾಡನ್ನು ಆಲಿಸು ತ್ತೇವೆ ಅಥವಾ ಹಾಡುತ್ತೇವೆಂದರೆ ನಾವು ಪಾಯಸದ ಹಂಡೆಯಲ್ಲಿನ ಸೌಟು ಆಗಿರುತ್ತೇವೆ. ಪಾಯಸ ದಲ್ಲೇ ಮುಳುಗಿದ್ದರೂ ರುಚಿ ಗೊತ್ತಿರುವುದಿಲ್ಲ. ಒಂದುವೇಳೆ ಹಾಗಲ್ಲದೆ ಅರ್ಥ ಗೊತ್ತಿದ್ದು ಹಾಡನ್ನು ಕೇಳುತ್ತೇವೆ ಅಥವಾ ಹಾಡುತ್ತೇವಾದರೆ ಆಗ ನಾವು ಪಾಯಸದ ರುಚಿ ತಿಳಿದ ನಾಲಿಗೆ ಆಗುತ್ತೇವೆ.
ಹಂಡೆಗಟ್ಟಲೆ ಬೇಕಾಗಿಲ್ಲ, ಪಾಯಸದ ಒಂದೇ ಒಂದು ಹನಿ ನಾಲಿಗೆಯ ಮೇಲೆ ಬಿದ್ದರೂ ಸಾಕು, ಸಿಹಿ ತಿಳಿಯುತ್ತದೆ. ಜೀವನದಲ್ಲಿ ಜ್ಞಾನಾನುಭವಗಳ ವಿಚಾರದಲ್ಲಿ ನಾವು ಸಾಧ್ಯವಾದಷ್ಟೂ ಮಟ್ಟಿಗೆ ನಾಲಿಗೆ ಆಗಲಿಕ್ಕೆ ಯತ್ನಿಸಬೇಕು, ಸೌಟು ಅಲ್ಲ.
ಇದನ್ನು ಮಹಾಭಾರತದಲ್ಲಿ ವೇದವ್ಯಾಸ ಮಹರ್ಷಿಗಳೇ ಹೇಳಿದ್ದಾರೆ: ‘ಚಿರಂ ಹ್ಯಪಿ ಜಡಃ ಶೂರಃ ಪಂಡಿತಂ ಪರ್ಯುಪಾಸ್ಯ ಹ| ನ ಸ ಧರ್ಮಾನ್ವಿಜಾನಾತಿ ದರ್ವೀ ಸೂಪರಸಾನಿವ||’ (ಪ್ರಾಜ್ಞ ರೊಡನೆಯೇ ಜೀವನಪರ್ಯಂತ ಇದ್ದರೂ ಕಲಿಕೆಯ ಆಸಕ್ತಿ ಇಲ್ಲದವನು ತೊವ್ವೆಯಲ್ಲಿರುವ ಸೌಟಿನಂತೆ ಇರುತ್ತಾನೆ) ಮತ್ತು ‘ಮುಹೂರ್ತಮಪಿ ತಂ ಪ್ರಾಜ್ಞಃ ಪಂಡಿತಂ ಪರ್ಯುಪಾಸ್ಯ ಹಿ| ಕ್ಷಿಪ್ರಂ ಧರ್ಮಾನ್ವಿಜಾನಾತಿ ಜಿಹ್ವಾ ಸೂಪರಸಾನಿವ||’ (ಪ್ರಾಜ್ಞರೊಡನೆ ಸ್ವಲ್ಪವೇ ಸಮಯವನ್ನು ಕಳೆದರೂ ಸಾಕು, ಜ್ಞಾನಪಿಪಾಸು ಆಗಿರುವವನು ಕ್ಷಿಪ್ರವಾಗಿ ಕಲಿತುಕೊಳ್ಳುತ್ತಾನೆ, ತೊವ್ವೆಯ ರುಚಿ ನೋಡಿದ ನಾಲಿಗೆಯಂತೆ).
ಇದನ್ನೂ ಓದಿ: Srivathsa Joshi Column: ತೃಣಮಪಿ ನ ಚಲತಿ... ಸೂಕ್ತಿಯ ಹುಲ್ಲು ಸಾಮಾನ್ಯವೇನಲ್ಲ !
ಇಂಗ್ಲಿಷ್‌ನಲ್ಲೂ ಈ ಹೋಲಿಕೆಯನ್ನು Be the tongue, not a ladle ಎಂದು ಹಿತೋಪದೇಶ ಸೂಕ್ತಿ ಯಾಗಿ ಬಳಸುವುದಿದೆ. ದಾಸಸಾಹಿತ್ಯದ ಮಟ್ಟಿಗೆ ಪಾಯಸದ ಹಂಡೆಯಲ್ಲಿನ ಸೌಟು ಆಗಿರುವವ ರನ್ನು ಪಾಯಸದ ರುಚಿ ಸವಿಯಬಲ್ಲವರನ್ನಾಗಿಸುವತ್ತ ಸದಾಶಯದ ಪುಟ್ಟದೊಂದು ಪ್ರಯತ್ನ ಮಾಡಿದ್ದಾರೆ ಶಿವಶಂಕರ ಪ್ರಭು ಅವರು ಈ ಕೃತಿಯಲ್ಲಿ.
ಇದನ್ನೇ ಇನ್ನೊಂದು ದೃಷ್ಟಾಂತದಿಂದ ಹೇಳುವುದಾದರೆ- ಹಲಸಿನ ಹಣ್ಣನ್ನು ಬಿಡಿಸಿ ಅದರ ಮುಳ್ಳು-ಮೇಣ-ಮತ್ತಿತರ ಕಸದಿಂದ ಪ್ರತ್ಯೇಕಿಸಿ ರುಚಿರುಚಿಯಾದ ತೊಳೆಗಳನ್ನು ಸವಿಯಲಿಕ್ಕೆ ಕೊಟ್ಟಿದ್ದಾರೆ. ದಾಸಸಾಹಿತ್ಯ ಎನ್ನುವುದೊಂದು ಮಹಾಸಮುದ್ರ, ಅದರಿಂದ ಐವತ್ತು ಬಿಂದಿಗೆ ಗಳಷ್ಟು ಅಮೃತವನ್ನು ಎತ್ತಿತಂದು ಉಣಬಡಿಸಿದ್ದಾರೆ ಎಂದರೂ ಸರಿಯೇ.
ನಾನಿದನ್ನು ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ. ತೀರಾ ಪರಿಚಿತವಿರುವ, ದಿನವೂ ಹೇಳಿ ಪರಿಪಾಠವಿರುವ ಭಜನೆ ಪದ್ಯಗಳನ್ನೂ ನಾವು ಯಾಂತ್ರೀಕೃತವಾಗಿ ಒಂದೋ ಸರಿಯಾದ ಅರ್ಥ ಗೊತ್ತಿಲ್ಲದೆಯೇ, ಇಲ್ಲವೇ ಉಚ್ಚಾರದಲ್ಲೂ ತಪ್ಪುತಪ್ಪಾಗಿಯೇ ಹಾಡುತ್ತಿರುತ್ತೇವೆ. ಅದೆಷ್ಟು ಸಸಾರವೆಂದರೆ ನಮ್ಮ ಉಚ್ಚರಣೆಯಲ್ಲಿ ತಪ್ಪುಗಳಿವೆ ಎಂದು ಕೂಡ ನಮಗೆ ಗೊತ್ತಿರುವುದಿಲ್ಲ.
ಗಣೇಶನನ್ನು ಕುರಿತಾಗಿ ಇರುವ ಅತಿ ಪ್ರಖ್ಯಾತ ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ...’ ಕೀರ್ತನೆ ಯನ್ನೇ ತೆಗೆದುಕೊಳ್ಳಿ. ಅದು ಶಾರದೆಯನ್ನು ಕುರಿತಾದದ್ದು ಎಂದೇ ತಿಳಿದುಕೊಂಡಿರುವ ಮುಗ್ಧರು ನಮ್ಮಲ್ಲಿ ಅನೇಕರಿದ್ದೇವೆ. ಅಥವಾ ಹೆಚ್ಚೆಂದರೆ ಗಣೇಶಭಜನೆಯ ಆರಂಭದಲ್ಲೇ ಶಾರದೆಯೇಕೆ ಬಂದಳಪ್ಪಾ ಎಂದು ಅಚ್ಚರಿಗೊಳ್ಳುವವರಿದ್ದೇವೆ. ಅದರ ಅನುಪಲ್ಲವಿಯನ್ನು ‘ಕಮ್ಮಗೊಲ್ಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ’ ಎಂದು ತಪ್ಪುತಪ್ಪಾಗಿ ಹಾಡಿ ಅಲ್ಲೊಬ್ಬ ಕಾಲ್ಪನಿಕ ಗೊಲ್ಲನನ್ನು, ಅವನ ವೈರಿಯನ್ನು ತಂದು ನಿಲ್ಲಿಸಿರುತ್ತೇವೆ; ಸುತನಾದವು ಯಾವುದೋ ಗಂಧರ್ವ ಲೋಕದಿಂದ ಕೇಳಿಬರುವ ನಾದವಿರಬಹುದು ಎಂದು ಕಲ್ಪಿಸುತ್ತೇವೆ; ಅಥವಾ- ಹಸನಾದ, ದಿವಿನಾದ, ವೈನಾದ ಮುಂತಾದ ರೀತಿಯಲ್ಲಿ ‘ಸುತನಾದ’ವನ್ನು ಸೊಂಡಿಲಿನ ವಿಶೇಷಣವಾಗಿಸು ತ್ತೇವೆ.
ಅಂತೂ ಗಣನಾಥ ನಮ್ಮ ಹೆಮ್ಮೆ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ನಿಜವಾಗಿ ಆ ಅನುಪಲ್ಲವಿ ಇರುವುದು ‘ಕಮ್ಮಗೋಲನ ವೈರಿಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ’ ಎಂದು! ಕಮ್ಮ ಗೋಲ ಎಂದರೆ ಕಬ್ಬಿನ ಕೋಲನ್ನೇ ಬಿಲ್ಲನ್ನಾಗಿ ಹಿಡಿದಿರುವ ಮನ್ಮಥ; ಆತನ ವೈರಿ ಈಶ್ವರ; ಈಶ್ವರನ ಸುತ ಗಣನಾಥ; ಆನೆಮೊಗದವನಾದ್ದರಿಂದ ಸೊಂಡಿಲು ಉಳ್ಳವನು; ಹೆಮ್ಮೆ ಅಂದರೆ ಹಿರಿದಾದ ಮೈಯುಳ್ಳವನು. ಆಹಾ! ಈಗ ಎಲ್ಲವೂ ಸುಸ್ಪಷ್ಟ. ಎಂಥ ದಿವ್ಯ ಅನುಭೂತಿ!
‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ’ಯಲ್ಲಿ ನಮ್ಮಮ್ಮ ಅಂದರೆ ಲಕ್ಷ್ಮಿ. ಆದ್ದರಿಂದ ಲಕ್ಷ್ಮಿ, ಶಾರದೆ, ಉಮಾಮಹೇಶ್ವರಿ- ಅನುಕ್ರಮವಾಗಿ ತ್ರಿಮೂರ್ತಿಗಳ ಪತ್ನಿಯರು. ಗಣೇಶನು ತ್ರಿಮೂರ್ತಿಗಳ ಮತ್ತು ಅವರ ಪತ್ನಿಯರ ಅಂಶಗಳೆಲ್ಲವನ್ನೂ ಒಳಗೊಂಡವನು, ಅದಕ್ಕಿಂತಲೂ ಮಿಗಿಲಾದವನು ಎಂದು ದಾಸರು ಬಣ್ಣಿಸಿದ ರೀತಿ ಅದು!
‘ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ...’ ಕೀರ್ತನೆಯಲ್ಲಿ ಬರುವ ಹಾಟಕಾಂಬರ ಎಂಬ ಪದ. ಸರಿಯಾಗಿಯೇ ಉಚ್ಚರಿಸಿದರೂ ಅದರ ಅರ್ಥ ನಮ್ಮಲ್ಲನೇಕರಿಗೆ ಗೊತ್ತಿರುವುದಿಲ್ಲ. ಪೀತಾಂಬರದಂಥದ್ದೇ ಏನೋ ಇರಬಹುದು ಎಂದುಕೊಳ್ಳುತ್ತೇವೆಯೇ ಹೊರತು ಅದರಾಚೆಗೆ ನಮ್ಮ ತಿಳಿದುಕೊಳ್ಳುವಿಕೆಯ ಆಸಕ್ತಿ ಚಾಚುವುದಿಲ್ಲ. ಹಾಟಕ ಎಂದರೆ ಬಂಗಾರ. ಬಂಗಾರದ ಬಣ್ಣ ಹಳದಿ. ಪೀತ ಎಂದರೂ ಹಳದಿಯೇ.
ಹಾಟಕಾಂಬರ ಎಂದರೆ ಏನೋ ಇರಬಹುದು ಎಂದುಕೊಂಡು ಹಾಡುವುದಕ್ಕೂ, ಬಂಗಾರ ಬಣ್ಣದ ಉಡುಗೆಯುಳ್ಳವನು ಎಂದು ಅರಿತು ಹಾಡುವುದಕ್ಕೂ ಎಷ್ಟು ವ್ಯತ್ಯಾಸವಿದೆ ನೋಡಿ! ಅದಕ್ಕೇ ಹೇಳಿದ್ದು- ಸೌಟು ಅಲ್ಲ ನಾಲಿಗೆ ಆಗಿರಬೇಕು ಎಂದು. ಅದೇ ರೀತಿ ‘ಎನ್ನ ಪಾಲಿಸೋ ಕರುಣಾಕರ...’ ಕೀರ್ತನೆಯಲ್ಲಿ ಬರುವ ಬಿಸರುಹನಾಭ. ಹಾಗೆಂದರೇನು? ಗೊತ್ತಿಲ್ಲದೆಯೇ ಹಾಡುತ್ತೇವೆ.
ಬಿಸ ಎಂದರೆ ವಿಷ. ವಿಷವೆಂದರೆ ಪ್ರಾಣಕ್ಕೆ ಸಂಚಕಾರ ತರುವ ವಿಷ ಅಲ್ಲ, ಸಂಸ್ಕೃತದಲ್ಲಿ ವಿಷ ಪದಕ್ಕೆ ನೀರು ಎಂಬರ್ಥವೂ ಇದೆ. ರುಹ ಎಂದರೆ ಮೊಳಕೆಯೊಡೆದು ಬೆಳೆದ. ಆದ್ದರಿಂದ ಬಿಸರುಹ ಎಂದರೆ ನೀರಿನಲ್ಲಿ ಬೆಳೆದ ಕಮಲ. ಅಂಥ ಕಮಲವನ್ನು ನಾಭಿಯಲ್ಲಿ(ಹೊಕ್ಕುಳಲ್ಲಿ) ಹೊಂದಿರು ವವನೇ ಬಿಸರುಹನಾಭ!
‘ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ...’ ಕೀರ್ತನೆ ಇರುವುದು ಕಾವೇರಿ ನದೀತೀರದ ಶ್ರೀರಂಗಂನಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯನ್ನು ಕುರಿತು; ಅದರಲ್ಲಿ ಬರುವ ವಿರಜಾ ನದಿ ಯಾವುದು? ಕಾವೇರಿಯದೇ ಇನ್ನೊಂದು ಹೆಸರೇ? ಅಲ್ಲ!
‘ವಿರಜಾ ನದಿ ಎಂದರೆ ಪರಮವೈಕುಂಠ ಲೋಕವನ್ನು ಪ್ರವೇಶಿಸುವ ಮೊದಲು ದಾಟಿ ಹೋಗ ಬೇಕಾದ, ವೈಕುಂಠ ಲೋಕದಲ್ಲಿರುವ ನದಿ. ವೈಕುಂಠದ ಮಹಾದ್ವಾರವಿರುವುದು ಈ ನದಿಯ ತಟದಲ್ಲಿ. ಮೋಕ್ಷ ಪ್ರಾಪ್ತಿಯಾದವರಿಗೆ ಈ ಪುಣ್ಯನದಿಯಲ್ಲಿ ಸ್ನಾನ ಮಾಡುವ ಭಾಗ್ಯ ಲಭಿಸುವು ದೆಂಬ ನಂಬಿಕೆ. ಶ್ರೀಪಾದರಾಜರು ಶ್ರೀರಂಗಂ ಕ್ಷೇತ್ರದಲ್ಲಿ ಹರಿಯುವ ಕಾವೇರಿ ನದಿಯನ್ನು ವಿರಜಾ ನದಿಗೆ ಹೋಲಿಸಿದ್ದಾರೆ. ಅದನ್ನು ಹರಿ ಪಾದೋದಕಕ್ಕೆ ಸಮನಾದ ಕಾವೇರಿ ಎಂದಿದ್ದಾರೆ...’ ಎಂಬ ವಿವರಣೆ.
ದಾಸ ಸಾಹಿತ್ಯದಲ್ಲಿ ಕೆಲವೊಮ್ಮೆ ಇಡೀ ಪದ್ಯವೇ ಒಗಟುಗಳ ಹೆಣಿಗೆಯಂತೆ ಇರುತ್ತದೆ. ವಾಚ್ಯ ಅರ್ಥವೇ ಬೇರೆ, ಧ್ವನ್ಯ ಅರ್ಥವೇ ಬೇರೆ. ಅದನ್ನು ಮುಂಡಿಗೆ ಎನ್ನುತ್ತಾರೆ. ಅಂಥ ಒಗಟುಗಳ ಉತ್ತರ ಕಂಡುಕೊಂಡಾಗಿನ ಅಮಿತಾನಂದ ಮಾತಿನಲ್ಲಿ, ಅಕ್ಷರಗಳಲ್ಲಿ ಹಿಡಿಯಲಾಗದ್ದು. ಮುಂಡಿಗೆಗಳ ವಿಶ್ಲೇಷಣೆಯಂತೂ ಈ ಕೃತಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ಹಲಸಿನ ಹಣ್ಣನ್ನು ಬಿಡಿಸಿ ರುಚಿರುಚಿಯಾದ ತೊಳೆಗಳನ್ನು ಸವಿಯಲಿಕ್ಕೆ ಕೊಟ್ಟಂತೆ ಎಂದು ನಾನು ಹೋಲಿಸುವುದು ಇದಕ್ಕೇ. ಹಾಗಂತ ಇದ್ಯಾವುದನ್ನೂ ಪಾಂಡಿತ್ಯ ಪ್ರದರ್ಶನದ ರೀತಿಯಲ್ಲಿ ಪ್ರಸ್ತುತಪಡಿಸಿದ್ದಲ್ಲ.
‘ಕೆಲವಂ ಬಲ್ಲವರಿಂದ ಕಲಿತು, ಕೆಲವಂ ಶಾಸ್ತ್ರಗಳನ್ನು ಕೇಳುತ್ತ, ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂದ ನೋಡಿ, ಕೆಲವಂ ಸಜ್ಜನ ಸಂಗದಿಂದ ಅರಿತು...’ ರೀತಿಯ ವಿಧೇಯತೆ-ಪ್ರಾಮಾಣಿಕತೆಗಳೇ ಇಲ್ಲಿ ಇರುವುದು. ‘ನಾನಿದನ್ನು ತಿಳಿದುಕೊಂಡೆ, ಬನ್ನಿ ಈ ಅರಿವೆಂಬ ಅಮೃತ ವನ್ನು ನಿಮಗೂ ಹಂಚುತ್ತೇನೆ, ನಿಮಗೂ ಪ್ರಯೋಜನವಾಗಲಿ’ ಎಂಬ ಉದಾತ್ತ ಆಶಯವೇ ಈ ಪುಸ್ತಕದ ಮೂಲ ಧ್ಯೇಯವಾಗಿರುವುದು.
ಅದನ್ನೂ ದಾಸರ ಪದದ ಮೂಲಕವೇ ಹೇಳುವುದಾದರೆ ‘ಮಧುಕರ ವೃತ್ತಿ ಎನ್ನದು ಬಲು ಚೆನ್ನದು’ ಎಂಬಂತೆ, ಜೇನುನೊಣವು ಅಲ್ಲಿಂದ-ಇಲ್ಲಿಂದ ಸಂಗ್ರಹಿಸಿದ ಮಕರಂದವನ್ನು ಮಧುವನ್ನಾ ಗಿಸಿದಂತೆ. ಅದು ಮಧುರವಷ್ಟೇ ಅಲ್ಲ, ಶುದ್ಧ, ಸ್ವಚ್ಛ, ಮತ್ತು ದೀರ್ಘ ಬಾಳಿಕೆಯದು. ಪುಸ್ತಕದ ಶೀರ್ಷಿಕೆಯಲ್ಲಿರುವ ಸೂಕ್ಷ್ಮವನ್ನೂ ನೀವು ಗಮನಿಸಬೇಕು.
ದಾಸರ ‘ಪದ’ಗಳು. ಪದವೆಂದರೆ ಪದ್ಯವೂ ಹೌದು, ಪದ್ಯದ ಪ್ರತಿಯೊಂದು ಪದವೂ ಹೌದು. ಇಲ್ಲಿ ನಿಮಗೆ ಪದಪದದ ವಿಶ್ಲೇಷಣೆಯ ಜತೆಗೆ ಸಂದರ್ಭೋಚಿತವಾಗಿ ಮತ್ತು ಸ್ವಾರಸ್ಯಕರವಾಗಿ, ಆ ಪದ್ಯ ರಚಿಸಿದ ದಾಸರನ್ನು ಕುರಿತಾದ ಕುತೂಹಲಕಾರಿ ಪ್ರಸಂಗಗಳು, ಐತಿಹ್ಯಗಳು, ಪ್ರತೀತಿಗಳ ಚಿಕ್ಕ-ಚೊಕ್ಕ ವಿವರಣೆಯೂ ಸಿಗುತ್ತದೆ.
ಸಾರನ್ನ ಹುಳಿಯನ್ನ ಮೊಸರನ್ನಗಳ ನಿತ್ಯದ ಊಟದ ಜತೆಗೆ ಪಾಯಸವೂ ಸಿಕ್ಕಿದಂತೆ! ಮತ್ತದೇ ಹೋಲಿಕೆ- ಪಾಯಸದಲ್ಲಿ ಮುಳುಗಿದ ಸೌಟು ಆಗಬಾರದು, ಪಾಯಸದ ರುಚಿ ತಿಳಿಯುವ ನಾಲಿಗೆ ಆಗಬೇಕು ಅಷ್ಟೇ. ದಾಸಸಾಹಿತ್ಯವೆಂಬ ಸಿಂಧುವಿನಿಂದ ಎತ್ತಿಕೊಂಡ ಐವತ್ತು ಬಿಂದುಗಳಷ್ಟೇ ಇಲ್ಲಿರುವುದು.
ಶಿವಶಂಕರ ಪ್ರಭು ಅವರ ಅದಮ್ಯ ಉತ್ಸಾಹ, ತಾನು ಅರಿತಿದ್ದನ್ನು ಇತರರೊಡನೆಯೂ ಹಂಚಿ ಕೊಳ್ಳುವ ಜ್ಞಾನದಾಸೋಹ- ಎರಡೂ ಹೀಗೆಯೇ ಮುಂದುವರಿದು ಇನ್ನಷ್ಟು ಬಿಂದುಗಳು, ಬಿಂದಿಗೆಗಳು ಅಮೃತಪಾನ ಒದಗಿಸಲಿ. ಸವಿಯಲು ಸಿದ್ಧರಿರುವ ನಮಗೆ ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಭನ ಪಾದಭಜನೆ ಸುಖವಯ್ಯ... ಆಗಲಿ.
ಭಜನೆಯನ್ನು ಈಗಾಗಲೇ ಜೀವನಶೈಲಿಯಲ್ಲಿ ಅಳವಡಿಸಿಕೊಂಡವರಿಗೆ ಭಜನೆಯ ನಿಜಾರ್ಥ ತಿಳಿಯಲಿ. ಓಹೋ ಇದರೊಳಗೆ ಇಷ್ಟೆಲ್ಲ ಸವಿ ಇದೆಯಂತಾದರೆ ನಾವೂ ಸವಿಯುತ್ತೇವೆ ಎಂದು ಇದುವರೆಗೆ ದಾಸಸಾಹಿತ್ಯದತ್ತ ಹೊರಳಿ ನೋಡದವರೂ ಆಸಕ್ತಿ ಬೆಳೆಸಿಕೊಳ್ಳುವಂತಾಗಲಿ. ಎಲ್ಲಕ್ಕಿಂತ ಮುಖ್ಯವಾಗಿ- ಹಾಡುವ ಬಾಯಿ ಶುದ್ಧವಾದುದನ್ನೇ ಹಾಡಲಿ, ಕೇಳುವ ಕಿವಿ ಶುದ್ಧ ವಾದುದನ್ನೇ ಕೇಳಲಿ, ಓದುವ ಕಣ್ಣು ಶುದ್ಧವಾದುದನ್ನೇ ಓದಲಿ. ಆ ಶುದ್ಧತೆಯು ನಮ್ಮೆಲ್ಲರಲ್ಲಿ ಪರಿಶುದ್ಧತೆಯನ್ನು ಮೂಡಿಸುವುದಕ್ಕೆ ಸೋಪಾನವಾಗಲಿ".
ಮೇಲಿನದು ಒಂದು ಅಪೂರ್ವವಾದ ಮತ್ತು ಅನನ್ಯವೆನಿಸಬಲ್ಲ ಪುಸ್ತಕಕ್ಕೆ ಬರೆದ ಮುನ್ನುಡಿ. ಈ ಪುಸ್ತಕ ಇಂದು (೨ ನವೆಂಬರ್ 2025, ವಿಶ್ವಾವಸು ಸಂವತ್ಸರ ಕಾರ್ತಿಕ ಶುಕ್ಲ ಏಕಾದಶಿಯಂದು) ಲೋಕಾರ್ಪಣೆ ಆಗುತ್ತಿದೆ. ಲೋಕಾರ್ಪಣೆಯೆಂದರೆ ಈಗಿನ ಟಿಪಿಕಲ್ ಪುಸ್ತಕ ಬಿಡುಗಡೆ ಸಮಾರಂಭ ಗಳಂತೆ ಪುಸ್ತಕದ ಹೂರಣವೊಂದನ್ನು ಬಿಟ್ಟು ಮತ್ತೆಲ್ಲ ರಾಜಕೀಯ ಬಣ್ಣದ ಭಾಷಣಗಳು, ಹೊಗಳಿಕೆ, ಒಂದಷ್ಟು ದ್ವೇಷಬಿತ್ತನೆ ಇತ್ಯಾದಿ ಅಲ್ಲ.
ಈ ಪುಸ್ತಕ ಬಿಡುಗಡೆಯಾಗುತ್ತಿರುವುದು ಮುಂಡ್ಕೂರಿನ ಶ್ರೀ ರುಕ್ಮಿಣೀಸತ್ಯಭಾಮಾಸಹಿತ ವಿಠೋಬ ದೇವರ ಪದತಲದಲ್ಲಿ ಪುಸ್ತಕದ ಪ್ರತಿಯನ್ನಿಟ್ಟು ಅರ್ಪಣೆ ಮಾಡಿ, ಆಮೇಲೆ ಅಲ್ಲಿ ಸೇರಿದವರೆಲ್ಲರೂ ಏಕಾದಶಿ ದಿನದ ವಿಶೇಷ ಭಜನೆ ಮಾಡುವುದರ ಮೂಲಕ!
ಅಷ್ಟಾಗಿ, ಮುಂಡ್ಕೂರು ಎಂಬ ಊರಿನ ಹೆಸರನ್ನಾಗಲೀ, ಈ ಪುಸ್ತಕವನ್ನು ಬರೆದಿರುವ ಶಿವಶಂಕರ ಪ್ರಭು ಎಂಬುವರ ಹೆಸರನ್ನಾಗಲೀ ನೀವಿದುವರೆಗೆ ಕೇಳಿರಲಿಕ್ಕೂ ಇಲ್ಲ! ನಿಜ. ಎರಡೂ ವನಸುಮ ಗಳೇ. ಇಂಥ ವನಸುಮಗಳನ್ನು ಲೋಕಕ್ಕೆ ಪರಿಚಯಿಸುವುದು ನನಗೆ ಯಾವತ್ತಿಗೂ ಹೆಮ್ಮೆಯೇ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಒಂದು ಪುಟ್ಟ ಗ್ರಾಮ ಮುಂಡ್ಕೂರು. ಮೂಲತಃ ಅಲ್ಲಿಯವ ರಾದ ಶಿವಶಂಕರ ಪ್ರಭು ಪ್ರಸ್ತುತ ಬೆಂಗಳೂರು ನಿವಾಸಿ. ವಾಣಿಜ್ಯಲೆಕ್ಕಪತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರು.
ನಿವೃತ್ತರಲ್ಲ ಪೂರ್ಣಾವಧಿಯಲ್ಲಿ ಭಜನಸಾಹಿತ್ಯ ಮತ್ತಿತರ ಸದ್ವಿಚಾರಗಳ ಪ್ರಚಾರಕರು. ಸುಮಾರು ನೂರರಷ್ಟು ಮರಾಠಿ ಅಭಂಗಗಳ ಕನ್ನಡ ಅನುವಾದ ಭಾವಾರ್ಥ ವಿವರಣೆಯ 3 ಪುಸ್ತಕಗಳು, ಮಕ್ಕಳಿಗಾಗಿ ೨೫ ನೀತಿಕಥೆಗಳ ಸಂಗ್ರಹ ಪುಸ್ತಕ ಹೀಗೆ ಸಾಹಿತ್ಯಕೃಷಿ ಮಾಡಿದವರು. ನನಗವರು ಅಂಕಣದ ಓದುಗರಾಗಿ ಪರಿಚಯ, ಅದೂ ಏಳೆಂಟು ತಿಂಗಳಿಂದೀಚೆಗಷ್ಟೇ.
ಮುಖತಃ ಭೇಟಿಯಾಗಿಲ್ಲ, ದೂರವಾಣಿಯಲ್ಲಿ ಮಾತಾಡಿದ್ದಿಲ್ಲ, ಬರೀ ಅಕ್ಷರಬಾಂಧವ್ಯ ಮಾತ್ರ. ಆದರೆ ನಮ್ಮಿಬ್ಬರ ಫ್ರೀಕ್ವೆನ್ಸಿ ಮ್ಯಾಚ್ ಆಗುತ್ತದೆಂದು ಬಲುಬೇಗನೇ ಅರಿವಿಗೆ ಬಂತು. ನಿಲುವುಗಳು, ಆಲೋಚನಾವಿಧಾನಗಳಲ್ಲಷ್ಟೇ ಅಲ್ಲ, ಬಾಲ್ಯ ಹೇಗೆ ರೂಪುಗೊಂಡಿತು ಎಂಬುದರಲ್ಲೂ. ಈ ಪುಸ್ತಕದ ಪ್ರಸ್ತಾವನೆಯಲ್ಲಿ ಅವರು ಬರೆದಿರುವ “ಬಾಲ್ಯದಲ್ಲಿ ಹಳ್ಳಿಯ ಮೈದಾನದಲ್ಲಿ ರಸ್ತೆ-ಬೀದಿಗಳಲ್ಲಿ ಆಟವಾಡುತ್ತಿದ್ದೆವು; ಸಾಯಂಕಾಲ ಕತ್ತಲಾವರಿಸುವ ಹೊತ್ತಿಗಷ್ಟೇ ಮನೆ ಸೇರುತ್ತಿದ್ದೆವು. ಕೈಕಾಲು ಮುಖ ತೊಳೆದ ಮೇಲೆ ದೇವರಿಗೆ ದೀಪ ಹಚ್ಚಿ ವಂದಿಸಿ ಬಾಯಿಪಾಠ ಹೇಳಿ, ಭಜನೆ ಹಾಡುತ್ತಿದ್ದೆವು.
ಪ್ರಾಥಮಿಕ ಶಾಲೆಯಲ್ಲಿ ಪ್ರತಿ ಶುಕ್ರವಾರ ಕೊನೆಯ ಅವಧಿ ಭಜನೆಗೇ ಮೀಸಲು. ಮೊದಲೊಂದಿಪೆ ನಿನಗೆ ಗಣನಾಥ...ದಿಂದ ಆರಂಭ. ಚರಿಸುವ ಜಲದಲಿ ಮತ್ಸ್ಯನಿಗೆ... ಮಂಗಲದೊಡನೆ ಮುಕ್ತಾಯ. ವರ್ಷಕ್ಕೊಮ್ಮೆ (ಅಕ್ಟೋಬರ್ ರಜೆಗೆ ಮೊದಲು) ಶಾಲೆಯಲ್ಲಿ ಶಾರದಾಪೂಜೆ, ಆವತ್ತು ವಿಶೇಷ ಭಜನೆ, ಪ್ರಸಾದ ವಿತರಣೆ..." ಮುಂತಾದ ವಿವರಗಳು ಡಿಟ್ಟೋ ನನ್ನ, ಬಹುಶಃ ನಿಮ್ಮಲ್ಲೂ ಕೆಲವರ, ಬಾಲ್ಯದವು ಕೂಡ.
“ದಾಸರೆಲ್ಲರೂ ಅನುಭಾವಿಗಳು, ಜ್ಞಾನಿಗಳು. ಅವರು ಮನೆಯಲ್ಲಿ ಪಟ್ಟಾಗಿ ಕುಳಿತು ಯೋಚಿಸುತ್ತ ಒಂದೊಂದೇ ಸಾಲನ್ನು ಬರೆದು ತಿದ್ದಿತೀಡಿ ರಚಿಸಿ ಪ್ರಕಟಿಸಿದ ಕವಿತೆಗಳಲ್ಲ ಇವು. ಭಕ್ತಿಯ ಉತ್ತುಂಗ ದಲ್ಲಿ ಭಾವತೀವ್ರತೆಗೆ ಒಳಗಾಗಿ, ಭಗವಂತನ ಮೇಲಿನ ಪ್ರೀತಿಯಿಂದ ತಾನಾಗೇ ಸುರಣೆಗೊಂಡ ಮಂತ್ರದಂಥವು. ಅವುಗಳನ್ನು ನಾವು ಹೇಗ್ಹೇಗೋ ತಪ್ಪುತಪ್ಪಾಗಿ ಹಾಡುವುದು ಕೇಳುವುದು ತರವಲ್ಲ. ತಪ್ಪು-ಸರಿ ಏನೆಂದು ತಿಳಿದುಕೊಳ್ಳುವ ಚಿಕ್ಕದೊಂದು ಪ್ರಯತ್ನವನ್ನಾದರೂ ಮಾಡೋಣ" ಎನ್ನುವ ಶಿವಶಂಕರ ಪ್ರಭುಗಳ ಕಳಕಳಿಯೇ ನನಗೆ ಅವರ ಈ ಪುಸ್ತಕದ ಬಗ್ಗೆ ಎಲ್ಲಿಲ್ಲದ ಪ್ರೀತಿಯನ್ನು ಹುಟ್ಟಿಸಿದ್ದು; ಶಂಕರಾಭರಣಂ ಚಿತ್ರದಲ್ಲಿ ‘ಬ್ರೋಚೇವಾರೆವರುರಾ...’ ನ್ನು ಹೇಗ್ಹೇಗೋ ಹಾಡುತ್ತಿದ್ದ ದಾಸುವಿಗೆ “ಆ ಕೀರ್ತನೆಯ ಒಂದೊಂದು ಅಕ್ಷರದ ಹಿಂದೆಯೂ ಆರ್ದ್ರತೆ ತುಂಬಿತುಳುಕುತ್ತದೆ ದಾಸು.
ತಾದಾತ್ಮ್ಯದ ತುತ್ತತುದಿ ತಲುಪಿದ ಮಹಾಮನೀಷಿಯ ಒಡಲಾಳದಿಂದ ಹರಿದ ಅಮೃತತುಲ್ಯ ಗಂಗಾಜಲವದು. ಅದನ್ನು ಅಪಭ್ರಂಶ ಮಾಡಿ ಅಪವಿತ್ರಗೊಳಿಸದಿರು!" ಎಂಬ ಶಂಕರಶಾಸ್ತ್ರಿಗಳ ಬೋಧನೆ ನೆನಪಾದದ್ದು; ಶಾಸ್ತ್ರೀಯ ಸಂಗೀತದಲ್ಲಾಗಲೀ, ಭಾವಗೀತೆ ಭಕ್ತಿಗೀತೆ ಜನಪದಗೀತೆ ಚಿತ್ರಗೀತೆ ಯಾವುದನ್ನೇ ಹಾಡುವುದಿರಲಿ ಸಾಹಿತ್ಯಶುದ್ಧತೆಗೆ ಗಮನವಿತ್ತರೆ ಅದು ಆ ರಚನೆಕಾರರಿಗೆ ನಾವು ಸಲ್ಲಿಸುವ ಶ್ರೇಷ್ಠ ಗೌರವ ಎಂದು- ಶಂಕರ ಶಾನುಭೋಗ್, ಪ್ರಿನ್ಸ್ ರಾಮ ವರ್ಮ ಮುಂತಾದ ನನ್ನ ನೆಚ್ಚಿನ ಕಲಾವಿದರ ಕಳಕಳಿಯ ಮಾತುಗಳೂ ಕಿವಿಗಳಲ್ಲಿ ಮತ್ತೆಮತ್ತೆ ಅನುರಣಿಸಿದ್ದು; ಮುನ್ನುಡಿ ಬರೆಯಲಿಕ್ಕೆ ನಾನೇನೂ ಮಹಾನ್ ವ್ಯಕ್ತಿ ಅಲ್ಲವಾದರೂ ಇಂಥದೊಂದು ಒಳ್ಳೆಯ ಕೆಲಸಕ್ಕೆ ಶುಭಹಾರೈಕೆಯ ಒಂದೆರಡು ಮಾತುಗಳನ್ನು ಬರೆದುಕೊಡಲಿಕ್ಕೆ ಅದೇ ಕಾರಣದಿಂದ ನಾನು ಒಪ್ಪಿಕೊಂಡಿದ್ದು.
ವೈಯುಕ್ತಿಕವಾಗಿ ಇನ್ನೊಂದು ಭಾವನಾತ್ಮಕ ನಂಟೆಂದರೆ ಈ ಪುಸ್ತಕ ಮುದ್ರಿತವಾಗಿರುವುದು ನಮ್ಮ ಕಾರ್ಕಳದ ‘ಪ್ರವೀಣ ಮುದ್ರಣ’ದಲ್ಲಿ! ಆ ಹೆಸರನ್ನು ಕೇಳಿದೊಡನೆಯೇ ನೆನಪುಗಳ ಮೆರವಣಿಗೆ ಹೊರಡುತ್ತದೆ. ದಶಕಗಳ ಹಿಂದೆ ಆ ಪರಿಸರದಲ್ಲಿ ಅದೊಂದೇ ಪ್ರಿಂಟಿಂಗ್ ಪ್ರೆಸ್ ಇದ್ದದ್ದು. ಮದುವೆ-ಮುಂಜಿ ಸಮಾರಂಭಗಳ ಕರೆಯೋಲೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಕರಪತ್ರಗಳು, ಶಾಲೆಯ ವಾರ್ಷಿಕಸಂಚಿಕೆಗಳು ಎಲ್ಲ ಅಲ್ಲೇ ಮುದ್ರಣವಾಗುತ್ತಿದ್ದದ್ದು. ಈಗ ಈ ಮೌಲ್ಯಯುತ ಪುಸ್ತಕ ಅಲ್ಲಿ ಮುದ್ರಣಗೊಂಡಿದೆ ಎನ್ನುವುದು ಹೆಚ್ಚಿನ ಸಂತೋಷ.
ಒಟ್ಟಿನಲ್ಲಿ, ಈ ‘ಕನ್ನಡ ಮಾಸ’ದ ಆರಂಭದಲ್ಲೇ ಕನ್ನಡ ವ್ಮಾಯಕ್ಕೆ ಒಂದು ಅತ್ಯುತ್ತಮ ಕೃತಿಯನ್ನು ಶಿವಶಂಕರ ಪ್ರಭು (ಮೊಬೈಲ್: ೯೯೦೦೫ ೮೩೨೩೩) ಕೊಟ್ಟಿದ್ದಾರೆ. ಇದನ್ನು ನಾವೆಲ್ಲರೂ ಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ನಮ್ಮೂರುಗಳಲ್ಲಿನ ಸಕ್ರಿಯ ಭಜನಾಮಂಡಳಿಗಳ ಸದಸ್ಯರಿಗೂ ತಲುಪಿಸಬೇಕು, ಸಾಧ್ಯವಾದರೆ ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಬೇಕು.
ಪ್ರತಿಗಳನ್ನು ತರಿಸಿಕೊಳ್ಳಲು ಉಡುಪಿಯ ಸೀತಾ ಬುಕ್ ಸೆಂಟರ್‌ನ ಶ್ರೀಮತಿ ಶಾಂಭವಿ ಪ್ರಭು (ಮೊಬೈಲ್: ೯೯೦೧೭ ೨೮೩೭೩) ಅವರನ್ನು ಸಂಪರ್ಕಿಸಬೇಕು. ಅಂಚೆವೆಚ್ಚವೂ ಸೇರಿ ಒಂದು ಪ್ರತಿಯ ಬೆಲೆ ರು.249 ಅಂತೆ. ಅದು ಮುಖಬೆಲೆಯಷ್ಟೇ. ಪುಸ್ತಕದ ನಿಜವಾದ ಮೌಲ್ಯ ಅಮಿತವಾದುದೆಂದು ಅದನ್ನು ಓದಿ ಉಪಯೋಗಿಸಿದಾಗ ನಿಮಗೆ ಅರಿವಾಗುತ್ತದೆ.