ಸಂಪಾದಕರ ಸದ್ಯಶೋಧನೆ
ಕೆಲವರು ಅದೃಷ್ಟ ಮಾಡಿ ಹುಟ್ಟಿರುತ್ತಾರೆ. ಅದೃಷ್ಟವೇ ಅವರನ್ನು ಹುಡುಕಿಕೊಂಡು ಹೋಗಿ, ಮಲಗಿದ್ದವರನ್ನು ಎಬ್ಬಿಸಿ, ಕೈಹಿಡಿದು ತಂದು ಸಿಂಹಾಸನದ ಮೇಲೆ ಕುಳ್ಳಿರಿಸುತ್ತದೆ. ನೀವು ಗೆರಾಲ್ಡ್ ಫೋರ್ಡ್ ಹೆಸರನ್ನು ಕೇಳಿರಬಹುದು. ಇವರು ಅಮೆರಿಕದ 38ನೇ (1974ರಿಂದ 1977ರವರೆಗೆ) ಅಧ್ಯಕ್ಷ ರಾಗಿದ್ದರು. ಇವರು ಅದೆಂಥ ಅದೃಷ್ಟಶಾಲಿ ಎಂದರೆ, ಇವರು ಅಧ್ಯಕ್ಷರಾಗುವ ಮೊದಲು ಉಪಾ ಧ್ಯಕ್ಷರಾಗಿದ್ದರು. ಆ ಎರಡೂ ಹುದ್ದೆಗಳು, ಅಂದರೆ ಉಪಾಧ್ಯಕ್ಷ ಮತ್ತು ಅಧ್ಯಕ್ಷ ಹುದ್ದೆಗಳು ಇವರನ್ನು ಹುಡುಕಿಕೊಂಡು ಬಂದವು.
ಇವರು ಚುನಾವಣೆಯನ್ನು ಸೆಣಸದೇ, ಜನರಿಂದ ಆಯ್ಕೆ ಆಗದೇ, ಅಮೆರಿಕದ ಉಪಾಧ್ಯಕ್ಷರೂ ಆದರು, ಆನಂತರ ಪುನಃ ಚುನಾವಣೆಗೆ ನಿಲ್ಲದೇ ಅಧ್ಯಕ್ಷರೂ ಆದರು. ಅಮೆರಿಕದ ಇತಿಹಾಸದಲ್ಲೇ, ಚುನಾವಣೆಗೆ ನಿಲ್ಲದೇ, ಜನರಿಂದ ಆಯ್ಕೆ ಆಗದೇ, ಉಪಾಧ್ಯಕ್ಷರಾದವರು, ಅಧ್ಯಕ್ಷರಾದವರೆಂದರೆ ಅವರೊಬ್ಬರೇ!
ಇದನ್ನೂ ಓದಿ: Vishweshwar Bhat Column: ಸೀಟ್ ಬೆಲ್ಟ್ ಏಕೆ ಕಟ್ಟಿಕೊಳ್ಳಬೇಕು ?
ಅದ್ಯಾವ ಗಳಿಗೆಯಲ್ಲಿ ಅವರ ತಾಯಿ ಈ ಪುಣ್ಯಾತ್ಮನನ್ನು ಹೆತ್ತಳೋ ಏನೋ? ಅದೃಷ್ಟ ಅಂದರೆ ಇದು! ರಿಚರ್ಡ್ ನಿಕ್ಸನ್ ಅಧ್ಯಕ್ಷರಾಗಿದ್ದಾಗ, ಅವರಿಗೆ ಸ್ಪೈರೋ ಅಗ್ನೆವ್ ಎಂಬುವವರು ಉಪಾ ಧ್ಯಕ್ಷರಾದ್ದರು. 1973ರಲ್ಲಿ ಅಗ್ನೆವ್ ಅವರು ಮೇರಿಲ್ಯಾಂಡ್ ಗವರ್ನರ್ ಅವರಿಂದ 30000 ಡಾಲರ್ ಲಂಚ ಸ್ವೀಕರಿಸಿದ ಆಪಾದನೆ ಕೇಳಿ ಬಂದಾಗ ಬೇರೆ ದಾರಿಯಿಲ್ಲದೇ ರಾಜೀನಾಮೆ ನೀಡುತ್ತಾರೆ.
ಈ ಸಂದರ್ಭದಲ್ಲಿ ನಿಕ್ಸನ್, ಅಗ್ನೆವ್ ಅವರ ಉತ್ತರಾಧಿಕಾರಿಯಾಗಿ ಯಾರನ್ನು ಆಯ್ಕೆ ಮಾಡ ಬೇಕೆಂದು ಹಿರಿಯ ನಾಯಕರ ಜತೆ ಸಮಾಲೋಚಿಸಿದಾಗ, ಸರ್ವಸಮ್ಮತವಾಗಿ ಮೂಡಿಬಂದ ಹೆಸರೆಂದರೆ ಗೆರಾಲ್ಡ್ ಫೋರ್ಡ್ ಅವರದು. ಈ ವಿಷಯವನ್ನು ಫೋರ್ಡ್‌ಗೆ ತಿಳಿಸಿದಾಗ ಅವರು ಒಪ್ಪಿಗೆ ಸೂಚಿಸುತ್ತಾರೆ. ಆ ಸಂದರ್ಭದಲ್ಲಿ ಫೋರ್ಡ್, “ನನ್ನ ಜೀವನದ ಆಸೆ ಈಡೇರಿತು. ನನ್ನ ರಾಜಕೀಯ ಜೀವನಕ್ಕೆ ಇದಕ್ಕಿಂತ ಉತ್ತಮ ಅಂತ್ಯ ಇಲ್ಲ" ಎಂಬ ಸಂತೃಪ್ತಿಯ ಮಾತುಗಳನ್ನು ತಮ್ಮ ಪತ್ನಿಗೆ ಹೇಳುತ್ತಾರೆ.
೨೫ನೇ ತಿದ್ದುಪಡಿ ಮೂಲಕ ಫೋರ್ಡ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಬಹುದು ಎಂಬ ಪ್ರಸ್ತಾವನೆಯನ್ನು ಸೆನೆಟ್ ಮುಂದಿಟ್ಟು, ಸದನದಲ್ಲಿ ಬಹುಮತದ ಸದಸ್ಯರ ಒಪ್ಪಿಗೆ ಪಡೆದ ನಂತರ, ಅವರು ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆ ಸಂದರ್ಭದಲ್ಲಿ ಅವರು ವರ್ಜಿನಿಯಾದಲ್ಲಿ ವಾಸಿಸುತ್ತಿರುತ್ತಾರೆ. ವಾಷಿಂಗ್ಟನ್‌ನಲ್ಲಿರುವ ಉಪಾಧ್ಯಕ್ಷರ ಮನೆಯನ್ನು ತಮಗೆ ಬೇಕಾದಂತೆ ಬದಲಿಸಲು ಸೂಚಿಸಿ, ಸರಕಾರಿ ಗೆಸ್ಟ್ ಹೌಸಿನಲ್ಲಿ ವಾಸಿಸುತ್ತಾರೆ.
ಫೋರ್ಡ್ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ವಾಟರ್‌ಗೇಟ್ ಹಗರಣ ಬಯಲಾಗಿ ಅಮೆರಿಕದ ರಾಜಕಾರಣದಲ್ಲಿ ದೊಡ್ಡ ಕೋಲಾಹಲವೇ ಉಂಟಾಗುತ್ತದೆ. ದಿನದಿಂದ ದಿನಕ್ಕೆ ಈ ಹಗರಣಕ್ಕೆ ಸಂಬಂಧಿಸಿದ ಹೊಸ ಹೊಸ ದಾಖಲೆಗಳು ಬಹಿರಂಗವಾಗಿ, ನಿಕ್ಸನ್ ಕುರ್ಚಿ ಅಲುಗಾ ಡಲು ಆರಂಭವಾಗುತ್ತದೆ. ಅಧ್ಯಕ್ಷ ಹುದ್ದೆ ಉಳಿಸಿಕೊಳ್ಳಲು ಬಹಳ ಕಸರತ್ತು ನಡೆಸಿದರೂ, ರಾಜೀ ನಾಮೆ ನೀಡುವುದು ಅನಿವಾರ್ಯ ಎಂಬುದು ನಿಕ್ಸನ್‌ಗೆ ಖಾತ್ರಿ ಆಗುತ್ತದೆ. ಈ ಸಂದರ್ಭದಲ್ಲಿ ಚೀಫ್ ಆಫ್ ಸ್ಟಾಫ್, ಫೋರ್ಡ್ ಅವರನ್ನು ಸಂಪರ್ಕಿಸಿ, “ಅಧ್ಯಕ್ಷರು ರಾಜೀನಾಮೆ ನೀಡಬೇಕಾಗ ಬಹುದು, ಯಾವುದಕ್ಕೂ ನೀವು ಆ ಹುದ್ದೆಯನ್ನು ನಿಭಾಯಿಸುವುದಕ್ಕೆ ಸಿದ್ಧರಾಗಿರಿ" ಎಂದು ಸೂಚಿಸುತ್ತಾರೆ.
ಅದಾಗಿ ಒಂದು ವಾರಕ್ಕೆ ನಿಕ್ಸನ್ ರಾಜೀನಾಮೆ ನೀಡುತ್ತಾರೆ. ಅದೇ ದಿನ ಫೋರ್ಡ್ ಅಧ್ಯಕ್ಷರಾಗಿ ಅಧಿಕಾರದ ಪ್ರಮಾಣ ಸ್ವೀಕರಿಸುತ್ತಾರೆ. ಉಪಾಧ್ಯಕ್ಷರಾದರೂ ತಮ್ಮ ಅಧಿಕೃತ ನಿವಾಸದಲ್ಲಿ ಒಂದೂ ದಿನ ಉಳಿಯದೇ, ಅಧ್ಯಕ್ಷರಾಗಿ ಫೋರ್ಡ್ ವೈಟ್ ಹೌಸಿಗೆ ಹೋಗುತ್ತಾರೆ. ಅಮೆರಿಕದ ಅಧ್ಯಕ್ಷರಾಗಲು ಎಲ್ಲರೂ ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ. ಆದರೆ ಫೋರ್ಡ್‌ಗೆ ಮಾತ್ರ ಎರಡೂ ಹುದ್ದೆ ಅನಾಯಾ ಸವಾಗಿ ಬಂದಿದ್ದು ಅದೃಷ್ಟದಲ್ಲಿ ಅದೃಷ್ಟ!