ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಸರ್ವರೋಗಕ್ಕೂ ಇದೇ ಕಾರಣ: ಆಗಬೇಕು ಇವುಗಳ ನಿಯಂತ್ರಣ

ಸಂಪೂರ್ಣ ಸೃಷ್ಟಿಯು ಪಂಚ ಮಹಾಭೂತಗಳಿಂದ ಕೂಡಿದೆ ಎಂದರೆ ತಪ್ಪಾಗಲಾರದು. ಈ ಜಗತ್ತಿನ ಯಾವ ವಸ್ತುವನ್ನು ನಾವು ಉದಾಹರಣೆಯಾಗಿ ತೆಗೆದುಕೊಂಡರೂ ಅದು ಪಂಚ ಮಹಾಭೂತಗಳಿಂದ ಆಗಿರುವಂಥದ್ದು. ಆ ವಸ್ತುವಿಗೆ ತಕ್ಕಂತೆ ಈ ಪಂಚ ಮಹಾಭೂತಗಳ ಪ್ರಮಾಣ ಏರುಪೇರು ಆಗುತ್ತದೆ. ಉದಾಹರಣೆಗೆ, ಒಂದು ಕಲ್ಲನ್ನು ತೆಗೆದುಕೊಂಡರೆ ಅದು ಐದೂ ಮಹಾಭೂತಗಳಿಂದ ಕೂಡಿದೆ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಆಯುರ್ವೇದದ ಸಿದ್ಧಾಂತವು ಹಂತ ಹಂತದಲ್ಲಿಯೂ ತ್ರಿದೋಷಗಳನ್ನು ಹೇಗೆ ಸದಾ ಸಾಮ್ಯಾವಸ್ಥೆ ಯಲ್ಲಿ ಇಟ್ಟುಕೊಳ್ಳಬಹುದು ಎಂಬ ವಿಷಯವನ್ನು ಪ್ರಸ್ತಾಪಿಸಿದೆ. ದಿನಚರ್ಯೆಯಿರಬಹುದು, ಋತುಚರ್ಯೆಯಾಗಿರಬಹುದು, ಆಹಾರ ವಿಜ್ಞಾನವೇ ಇರಬಹುದು ಅಥವಾ ಯಾವುದೇ ಚಿಕಿತ್ಸೆ ಯೇ ಆಗಿರಬಹುದು, ಅವುಗಳ ಏಕೈಕ ಗುರಿ- ಏರುಪೇರಾಗಿರುವ ದೋಷಗಳನ್ನು ‘ಸಮ ಅವಸ್ಥೆ’ಗೆ ತರುವುದು, ತನ್ಮೂಲಕ ರೋಗ ಶಮನ ಮತ್ತು ಸ್ವಾಸ್ಥ್ಯ ಸಾಧನ.

ಯ ಥಾ ಪಿಂಡೆ, ತಥಾ ಬ್ರಹ್ಮಾಂಡೆ’ ಎಂಬ ವಾಕ್ಯವನ್ನು ಇಂದಿನ ಸಂಚಿಕೆಯ ಮೂಲವಿಷಯವಾಗಿ ಆಯ್ದುಕೊಂಡಿದ್ದೇನೆ. ಈ ಸೂತ್ರವು ಹೇಳುವಂತೆ ಬ್ರಹ್ಮಾಂಡದಂತೆ ಪಿಂಡಾಂಡ. ಅಂದರೆ, ಬ್ರಹ್ಮಾಂಡದಲ್ಲಿರುವ ಸೃಷ್ಟಿಯ ಎಲ್ಲ ರಹಸ್ಯಗಳನ್ನೂ ಈ ಒಂದು ಪುಟ್ಟ ಪಿಂಡಾಂಡದಲ್ಲಿಯೂ ಕಾಣಬಹುದು. ಅಂತೆಯೇ ಪಿಂಡಾಂಡದಲ್ಲಿರುವ ಎಲ್ಲಾ ವಿಷಯಗಳು ಸಹ ಆ ಬ್ರಹ್ಮಾಂಡದ ಪ್ರತಿರೂಪ.

ಸಂಪೂರ್ಣ ಸೃಷ್ಟಿಯು ಪಂಚ ಮಹಾಭೂತಗಳಿಂದ ಕೂಡಿದೆ ಎಂದರೆ ತಪ್ಪಾಗಲಾರದು. ಈ ಜಗತ್ತಿನ ಯಾವ ವಸ್ತುವನ್ನು ನಾವು ಉದಾಹರಣೆಯಾಗಿ ತೆಗೆದುಕೊಂಡರೂ ಅದು ಪಂಚ ಮಹಾಭೂತಗಳಿಂದ ಆಗಿರುವಂಥದ್ದು. ಆ ವಸ್ತುವಿಗೆ ತಕ್ಕಂತೆ ಈ ಪಂಚ ಮಹಾಭೂತಗಳ ಪ್ರಮಾಣ ಏರುಪೇರು ಆಗುತ್ತದೆ. ಉದಾಹರಣೆಗೆ, ಒಂದು ಕಲ್ಲನ್ನು ತೆಗೆದುಕೊಂಡರೆ ಅದು ಐದೂ ಮಹಾಭೂತಗಳಿಂದ ಕೂಡಿದೆ.

ಆದರೆ, ಅದರಲ್ಲಿ ಪೃಥ್ವಿಯ ತತ್ವದ ಪ್ರಮಾಣ ಹೆಚ್ಚಾಗಿರುವುದರಿಂದ ಅದು ಸ್ಥಿರವಾಗಿ/ ಗಟ್ಟಿಯಾಗಿ ಇರುವ ಪದಾರ್ಥವಾಗಿದೆ. ಇದೇ ತತ್ವವನ್ನು ನಾವು ಮಾನವನ ಶರೀರದಲ್ಲಿಯೂ ಗಮನಿಸಬಹುದು. ನಮ್ಮ ಶರೀರವೂ ಪಂಚ ಮಹಾಭೂತಗಳ ಪ್ರತಿರೂಪವೇ ಹೌದು. ಈ ಪಂಚ ಮಹಾಭೂತಗಳು ನಮ್ಮ ಶರೀರದಲ್ಲಿ ಒಂದು ವಿಶಿಷ್ಟ ರೀತಿಯಲ್ಲಿ ಸಂಯೋಜನೆಗೊಂಡಿವೆ. ಈ ಮಹಾಭೂತಗಳು ದೇಹದಲ್ಲಿ ಒಂದು ನಿರ್ದಿಷ್ಟ ರೀತಿಯಲ್ಲಿ ಬೆರೆತು, ಅವುಗಳಿಗೆ ಒಂದು ನಿರ್ದಿಷ್ಟ ಗುಣ ಮತ್ತು ಕರ್ಮಗಳು ಬಂದಾಗ ಅವುಗಳನ್ನೇ ನಮ್ಮ ದೇಹದಲ್ಲಿ ದೋಷಗಳೆಂದು ಕರೆಯಬಹುದು. ಮೂರು ರೀತಿಯ ದೋಷಗಳಿರುವ ಕಾರಣ ಅವುಗಳನ್ನು ತ್ರಿದೋಷಗಳೆಂದು ಸಂಬೋಧಿಸಲಾಗಿದೆ.

ಇದನ್ನೂ ಓದಿ: Dr Sadhanashree Column: ಸ್ವಾಸ್ಥ್ಯದ ಅಳಿವು ಆಗುವುದು ಈ ಮೂರರಿಂದಲೇ !

ಅವುಗಳು ವಾತ, ಪಿತ್ತ ಮತ್ತು ಕಫ.ಪ್ರಪಂಚದಲ್ಲಿನ ವಾಯು ಮತ್ತು ಆಕಾಶ ಮಹಾಭೂತದ ಸಂಯೋಜನೆಯಿಂದ ಅದು ನಮ್ಮ ದೇಹದಲ್ಲಿ ವಾತ ದೋಷವಾಗಿ ಪರಿಣಾಮಗೊಂಡರೆ, ಅಗ್ನಿ ಮತ್ತು ಜಲ ಮಹಾಭೂತದ ಸಂಯೋಜನೆಯಿಂದ ಪಿತ್ತದೋಷದ ಉತ್ಪತ್ತಿಯಾಗುತ್ತದೆ. ಕಫ ದೋಷವು ಪೃಥ್ವಿ ಮತ್ತು ಜಲ ಮಹಾಭೂತದ ಫಲಿತಾಂಶ. ಈ ಮೂರು ದೋಷಗಳು ನಮ್ಮ ದೇಹದಲ್ಲಿ ನಡೆಯುವ ಎಲ್ಲಾ ಕಾರ್ಯಗಳ ಹಿಂದಿರುವ ಸಂಚಾಲಕ ಶಕ್ತಿ.

ಮಾನವನ ವ್ಯಕ್ತಿತ್ವವು ಶರೀರ, ಮನಸ್ಸು, ಇಂದ್ರಿಯ ಮತ್ತು ಆತ್ಮ ಎಂಬ ನಾಲ್ಕರ ಸಂಯೋಗ. ಈ ಸಂಯೋಗವನ್ನು ನಿಯಂತ್ರಿಸುವ ಚಾಲಕ ವರ್ಗವೇ ವಾತ, ಪಿತ್ತ ಮತ್ತು ಕಫ. ಸಂಕ್ಷಿಪ್ತವಾಗಿ ಈ ದೋಷಗಳನ್ನು ನಿಮಗೆ ಪರಿಚಯಿಸಬೇಕೆಂದರೆ, ಬದುಕಿನಲ್ಲಿ ನಡೆಯುವ ಎಲ್ಲಾ ಚಲನೆಗೆ ಸಂಬಂಧಿಸಿದ ಅಂಶಗಳನ್ನು ವಾತ ಎಂದು ಕರೆಯಲಾಗಿದೆ.

ನಾವು ಪ್ರತಿನಿತ್ಯವೂ ಸೇವಿಸುವ ಆಹಾರ ಅಥವಾ ಔಷಧಿಯು ಬಾಯಿಂದ ಶರೀರಕ್ಕೆ ಸೇರುವ ಚಲನೆ ಇರಬಹುದು, ಮುಂದೆ ಇವುಗಳು ಹಲವಾರು ಕ್ರಿಯೆಗಳಿಗೆ ಒಳಪಡುವ ಕ್ರಿಯೆ ಇರಬಹುದು, ಮಲ-ಮೂತ್ರಗಳ ವಿಸರ್ಜನೆ, ದೇಹದ ಅಂಗಾಂಗಗಳಲ್ಲಿ ಚಲನೆ, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿ ಯಗಳಿಗೆ ಸಂಬಂಧಿಸಿದ ಇಂದ್ರಿಯಗಳ ಚಟುವಟಿಕೆ- ಹೀಗೆ ಎಲ್ಲಾ ರೀತಿಯ ಚಲನೆ ಅಥವಾ ಗತಿಗೆ ಸಂಬಂಧಿಸಿದ ಎಲ್ಲವನ್ನೂ ವಾತದೋಷ ಎಂಬ ಹೆಸರಿನಿಂದ ಗುರುತಿಸಲಾಗಿದೆ.

health

ಇನ್ನು, ಪಿತ್ತ ದೋಷದ ಬಗ್ಗೆ ಹೇಳಬೇಕಾದರೆ ಶರೀರದಲ್ಲಿ ನಡೆಯುವ ಎಲ್ಲಾ ಪರಿಪಾಕ ಮತ್ತು ರೂಪಾಂತರಗಳನ್ನು ಪಿತ್ತ ಎಂದು ಗುರುತಿಸಲಾಗಿದೆ. ನಾವು ಸೇವಿಸುವ ಆಹಾರವು ಪಾಕವಾಗಿ, ದೇಹದ ವಿವಿಧ ಅಂಗಗಳಿಗೆ ಸೇರಿ ದೇಹದ ವೃದ್ಧಿಯಾಗುವುದು ಪಿತ್ತದ ಕೆಲಸವೇ. ಈ ಪಿತ್ತದ ಕಾರ್ಯ ವು ವಾತದ ಗತಿಯಿಂದ ಸದಾ ಸಾಗುತ್ತದೆ. ಇಡೀ ಶರೀರಕ್ಕೆ ಒಂದು ನಿರ್ದಿಷ್ಟ ಆಕಾರವನ್ನು ನೀಡಿ, ಎಲ್ಲ ಅಂಗಗಳು ಮತ್ತು ಸಂಧಿಗಳನ್ನು ಬಂಧಿಸಿ ಹಿಡಿದುಕೊಂಡಿರುವ, ಬದುಕೆಂಬ ಸಂಯೋಗ ವನ್ನು ಸದಾ ಕಾಪಾಡುವ ಅಂಶಕ್ಕೆ ಕಫ ಎಂದು ಕರೆಯಲಾಗಿದೆ.

ನಮ್ಮ ದೇಹದಲ್ಲಿ ನಡೆಯುವ ಎಲ್ಲಾ ಪ್ರಾಕೃತಿಕ ಕಾರ್ಯಗಳಿಗೆ ಹೇಗೆ ಈ ತ್ರಿದೋಷಗಳೇ ಕಾರಣ ವೋ, ಅಂತೆಯೇ ದೇಹದ ಎಲ್ಲಾ ವಿಕೃತಿಗಳಿಗೂ ಈ ತ್ರಿದೋಷಗಳೇ ಕಾರಣ. ಆಯುರ್ವೇದ ಶಾಸ್ತ್ರವು ಹೀಗೆನ್ನುತ್ತದೆ: ‘ರೋಗಸ್ತು ದೋಷವೈಷಮ್ಯಂ ದೋಷಸಾಮ್ಯಂ ಅರೋಗತಾ’- ಅಂದರೆ ಆರೋಗ್ಯವು ದೋಷ ಸಾಮ್ಯತೆಯ ಪರಿಣಾಮವಾದರೆ ರೋಗವು ಈ ದೋಷಗಳ ವಿಷಮತೆ ಯಿಂದಲೇ ದೇಹದಲ್ಲಿ ಉತ್ಪತ್ತಿಯಾಗುತ್ತದೆ.

ಆಯುರ್ವೇದದ ಸಿದ್ಧಾಂತವು ಹಂತ ಹಂತದಲ್ಲಿಯೂ ಈ ದೋಷಗಳನ್ನು ಹೇಗೆ ಸದಾ ಸಾಮ್ಯಾ ವಸ್ಥೆಯಲ್ಲಿ ಇಟ್ಟುಕೊಳ್ಳಬಹುದು ಎಂಬ ವಿಷಯವನ್ನು ಪ್ರಸ್ತಾಪಿಸಿದೆ. ದಿನಚರ್ಯೆಯಿರಬಹು, ಋತುಚರ್ಯೆಯಾಗಿರಬಹುದು, ಆಹಾರ ವಿಜ್ಞಾನವೇ ಇರಬಹುದು ಅಥವಾ ಯಾವುದೇ ಚಿಕಿತ್ಸೆಯೇ ಆಗಿರಬಹುದು, ಅವುಗಳ ಏಕೈಕ ಗುರಿ- ಏರುಪೇರಾಗಿರುವ ದೋಷಗಳನ್ನು ‘ಸಮ ಅವಸ್ಥೆ’ಗೆ ತರುವುದು, ತನ್ಮೂಲಕ ರೋಗ ಶಮನ ಮತ್ತು ಸ್ವಾಸ್ಥ್ಯ ಸಾಧನ. ಹಾಗಾಗಿ ಪ್ರತಿದಿನವೂ ನಮ್ಮ ಆರೋಗ್ಯವನ್ನು ನಾವು ಸಮತೋಲನದಲ್ಲಿ ಇಟ್ಟುಕೊಳ್ಳಬೇಕಾದರೆ, ಈ ದೋಷಗಳನ್ನು ಸರಿದೂಗಿಸಿಕೊಂಡು ಹೋಗುವುದೇ ಅದರ ಹಿಂದಿರುವ ಗುಟ್ಟು!

ಈ ದೋಷಗಳು ನಮ್ಮ ಆಹಾರ, ವಿಹಾರ ಮತ್ತು ವಿಚಾರಗಳಲ್ಲಿ ಆಗುವ ವ್ಯತ್ಯಾಸಗಳಿಂದ ವಿಕೃತಿ ಗೊಂಡು ದೇಹದ ಸಮ ಅವಸ್ಥೆಯನ್ನು ಹಾಳು ಮಾಡುತ್ತವೆ. ಹಾಗಾಗಿ, ಇಂದಿನ ಈ ಸಂಚಿಕೆಯಲ್ಲಿ ವಿಶೇಷವಾಗಿ ಈ ತ್ರಿದೋಷಗಳನ್ನು ಹಾಳು ಮಾಡುವ ಕಾರಣಗಳನ್ನು ನೋಡೋಣ. ಇವುಗಳು ಸಾಮಾನ್ಯ ಕಾರಣಗಳಲ್ಲ. ಇವೇ ಸರ್ವರೋಗಗಳಿಗೂ ಕಾರಣ ಎಂಬುದು ಶಾಸ್ತ್ರವಾಕ್ಯ.

ನಮ್ಮ ದೇಹದಲ್ಲಿ ವಾತದೋಷವು ಈ ಕೆಳಕಂಡ ಕಾರಣಗಳಿಂದ ಪ್ರಕುಪಿತಗೊಂಡು ರೋಗಗಳನ್ನು ಉತ್ಪತ್ತಿ ಮಾಡುತ್ತದೆ:

ಆಹಾರದಲ್ಲಿ ಹೆಚ್ಚಾಗಿ ಖಾರ, ಕಹಿ ಮತ್ತು ಕಷಾಯ ರಸಗಳನ್ನು ಸೇವಿಸುವುದು.

ಸ್ವಲ್ಪ ಪ್ರಮಾಣದಲ್ಲಿ (ನಮ್ಮ ಜೀರ್ಣಶಕ್ತಿಗಿಂತ ಕಡಿಮೆ) ಆಹಾರವನ್ನು ಸೇವಿಸುವುದು.

ಯಾವುದೇ ಸ್ನಿಗ್ಧಾಂಶವಿಲ್ಲದ/ಒಳ್ಳೆಯ ಜಿಡ್ಡಿರದ ಆಹಾರವನ್ನು ನಿತ್ಯವೂ ಸೇವಿಸುವುದು.

ಆಹಾರದಲ್ಲಿ ಅತಿಯಾಗಿ ಒಣ ಕಾಳು, ಮೊಳಕೆ ಕಾಳು, ಸೊಪ್ಪು ಮತ್ತು ಒಣ ತರಕಾರಿಗಳನ್ನು ಬಳಸುವುದು.

ಹಸಿವೆಯನ್ನು ತಡೆದು ತಡೆದು ಬಹಳ ಹೊತ್ತಿನ ನಂತರ ಆಹಾರವನ್ನು ಸೇವಿಸುವುದು.

ಅತಿಯಾದ ಶೀತಲ ಪದಾರ್ಥಗಳು ಸಹ ವಾತವನ್ನು ಹೆಚ್ಚು ಮಾಡುತ್ತವೆ.

ದೇಹದಲ್ಲಿನ ನೈಸರ್ಗಿಕ ವೇಗಗಳಾದ ಮಲ, ಮೂತ್ರ, ಹಸಿವು, ನಿದ್ದೆ, ಬಾಯಾರಿಕೆ, ಸೀನು, ಕೆಮ್ಮು, ಹೂಸು ಇತ್ಯಾದಿಗಳನ್ನು ಬಲವಂತವಾಗಿ ತಡೆಯುವುದು ಅಥವಾ ವಿಕೃತವಾಗಿ ಉತ್ತೇಜಿಸುವುದು ಸಹ ವಾತವನ್ನು ಕೆಡಿಸುತ್ತದೆ.

ಸರಿಯಾದ ಸಮಯಕ್ಕೆ ನಿದ್ದೆ ಮಾಡದೆ ರಾತ್ರಿ ಜಾಗರಣೆ ಮಾಡುವುದು.

ದೈಹಿಕ ಸಾಮರ್ಥ್ಯವನ್ನು ಗಮನಿಸದೇ ಅತಿಯಾಗಿ ಶ್ರಮವಾಗುವ ಕೆಲಸ/ವ್ಯಾಯಾಮವನ್ನು ಮಾಡುವುದು.

ಅತಿಯಾದ ಪ್ರಯಾಣ ಅಥವಾ ಓಡಾಟ. ಮಾನಸಿಕ ಕಾರಣಗಳಲ್ಲಿ ಭಯ, ಚಿಂತಾ ಮತ್ತು ಶೋಕಗಳು ವಾತವನ್ನು ಹೆಚ್ಚಿಸುತ್ತವೆ. ಕ್ರಮ ರಹಿತವಾದ ಮೈಥುನ/ಅತಿಯಾದ ಮೈಥುನವು ಸಹ ವಾತಪ್ರಕೋಪಕವೇ.

ಅಂತೆಯೇ, ಪ್ರಾಕೃತಿಕವಾಗಿ ವಾತದೋಷವು ಗ್ರೀಷ್ಮಋತುವಿನಲ್ಲಿ, ದಿನದ ಕೊನೆಯ ಭಾಗದಲ್ಲಿ, ರಾತ್ರಿಯ ಕೊನೆಯ ಭಾಗದಲ್ಲಿ, ಜೀರ್ಣಕ್ರಿಯೆಯ ಕೊನೆಯ ಭಾಗದಲ್ಲಿ ಮತ್ತು ನಮ್ಮ ಜೀವನದ ಕೊನೆಯ ಭಾಗ ಅಂದರೆ ವೃದ್ಧಾಪ್ಯದಲ್ಲಿ ಹೆಚ್ಚಾಗುತ್ತದೆ.

ಈ ಕೆಳಕಂಡ ಕಾರಣಗಳು ದೇಹದಲ್ಲಿರುವ ಪಿತ್ತ ದೋಷವನ್ನು ಹಾಳು ಮಾಡುತ್ತವೆ:

ಖಾರ, ಆಮ್ಲ ಮತ್ತು ಉಪ್ಪು ಹೆಚ್ಚಿರುವ ಪದಾರ್ಥಗಳನ್ನೇ ಸದಾ ಅತಿಯಾಗಿ ಸೇವಿಸುವುದು.

ಸ್ಪರ್ಶಕ್ಕೆ ಉಷ್ಣವಿರುವ ಮತ್ತು ದೇಹದಲ್ಲಿ ಜೀರ್ಣವಾದ ನಂತರ ಉಷ್ಣತೆಯನ್ನು ಹೆಚ್ಚು ಮಾಡುವ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದು ಪಿತ್ತಕಾರಕ.

ಮಾನಸಿಕವಾಗಿ ಸದಾ ಕೋಪದ ಸ್ಥಿತಿಯಲ್ಲಿ ಇರುವುದು ಸಹ ಪಿತ್ತವನ್ನು ಹೆಚ್ಚು ಮಾಡುತ್ತದೆ.

ಪ್ರಾಕೃತಿಕವಾಗಿ ಪಿತ್ತವು ಶರತ್ ಋತುವಿನಲ್ಲಿ ಹೆಚ್ಚಾಗುವುದನ್ನು ಕಾಣಬಹುದು. ಅಂತೆಯೇ, ದಿನದ ಮಧ್ಯೆಯಲ್ಲಿ, ರಾತ್ರಿಯ ಮಧ್ಯೆಯಲ್ಲಿ, ಜೀರ್ಣಕ್ರಿಯೆಯ ಮಧ್ಯೆಯಲ್ಲಿ ಮತ್ತು ನಮ್ಮ ಜೀವನದ ಮಧ್ಯಭಾಗದಲ್ಲಿ ಅಂದರೆ ಯೌವನಾವಸ್ಥೆಯಲ್ಲಿ ಪ್ರಾಕೃತವಾಗಿ ಪಿತ್ತವು ಹೆಚ್ಚಾಗುತ್ತದೆ.

ದೇಹದಲ್ಲಿ ಕಫ ದೋಷವು ಈ ಕೆಳಕಂಡ ಕಾರಣಗಳಿಂದ ಹೆಚ್ಚಾಗುತ್ತದೆ:

ಮಧುರ, ಆಮ್ಲ ಮತ್ತು ಲವಣ ರಸಗಳು ಅಧಿಕವಾಗಿರುವ ಆಹಾರವನ್ನೇ ಸದಾ ಸೇವಿಸುವುದು.

ಅತಿಯಾಗಿ ಸ್ನಿಗ್ಧ ಅಥವಾ ಜಿಡ್ಡಿನಂಶದಿಂದ ಕೂಡಿದ ಆಹಾರವನ್ನು ಸೇವಿಸುವುದು.

ಜೀರ್ಣಕ್ರಿಯೆಗೆ ಜಡವಾದ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳುವ ಆಹಾರವನ್ನೇ ಸೇವಿಸುವುದು.

ದೇಹದ ವಿವಿಧ ರೀತಿಯ ಸ್ರೋತಸ್ಸು/ಮಾರ್ಗಗಳಲ್ಲಿ ತೇವದ ಅಂಶವನ್ನು ಹೆಚ್ಚಾಗಿ ಸ್ರವಿಸುವಂಥ ಆಹಾರಗಳನ್ನು ಸೇವಿಸುವುದು.

ಶೀತಲ ಪದಾರ್ಥಗಳು ಸಹ ಕಫವನ್ನು ಹೆಚ್ಚು ಮಾಡುತ್ತವೆ.

ಕ್ರಮರಹಿತವಾದ ನಿದ್ದೆ ಅಥವಾ ಅತಿಯಾದ ನಿದ್ದೆಯೂ ಕಫ ಕಾರಕ.

ವ್ಯಾಯಾಮ ಮಾಡದೆ, ದೈಹಿಕ ಶ್ರಮವನ್ನು ಪಡೆಯದೆ, ಹೆಚ್ಚಾಗಿ ಕುಳಿತ ಸ್ಥಿತಿಯ ದಿನವನ್ನು ಕಳೆಯುವುದು ಸಹ ದೇಹದಲ್ಲಿ ಕಫದ ವಿಕೃತಿಗೆ ಕಾರಣ.

ಕ್ರಮರಹಿತ ನೀರಿನ ಸೇವನೆಯೂ ಕಫದ ವಿಕೃತಿಗೆ ಕಾರಣವಾಗುತ್ತದೆ.

ದೇಹಕ್ಕೆ ಅತಿಯಾಗಿ ಪೋಷಣೆ ನೀಡುವಂಥ ಆಹಾರವನ್ನೇ ಪದೇಪದೆ ಸೇವಿಸುವುದು.

ಶೋಧನ ಕ್ರಿಯೆಗಳಾದ ವಮನ/ ವಿರೇಚನಾದಿಗಳನ್ನು ಮಾಡಿಸಿಕೊಳ್ಳದೆ ಇರುವುದು.

ಅಂತೆಯೇ, ವಸಂತ ಋತುವಿನಲ್ಲಿ ಪ್ರಾಕೃತಿಕವಾಗಿ ಕಫ ಉಲ್ಬಣವಾಗುತ್ತದೆ. ಜತೆಗೆ ಜೀರ್ಣಕ್ರಿಯೆಯ

ಮೊದಲ ಭಾಗದಲ್ಲಿ, ದಿನದ ಮೊದಲ ಭಾಗದಲ್ಲಿ, ರಾತ್ರಿಯ ಮೊದಲ ಭಾಗದಲ್ಲಿ ಮತ್ತು ನಮ್ಮ ಜೀವನದ ಮೊದಲ ಭಾಗ ಅಂದರೆ ಬಾಲ್ಯಾವಸ್ಥೆಯಲ್ಲಿ ಕಫದೋಷವೂ ಹೆಚ್ಚಾಗಿರುತ್ತದೆ.

ಸರ್ವದೋಷ ವೃದ್ಧಿ ಕಾರಣ- ನಮ್ಮ ಶಾಸ್ತ್ರದಲ್ಲಿ ಹೇಳಿರುವಂತೆ ಕೆಲವು ಕಾರಣಗಳು ದೇಹದ ಮೂರು ದೋಷಗಳನ್ನು ಏಕಕಾಲದಲ್ಲಿ ವೃದ್ಧಿ ಮಾಡಿ ಸಾಮ್ಯತೆಯನ್ನು ಹಾಳು ಮಾಡುತ್ತವೆ. ಉದಾಹರಣೆಗೆ:

ಸಂಕೀರ್ಣವಾದ ಆಹಾರವನ್ನು ಸೇವಿಸುವುದು- ಅಂದರೆ ಹಲವಾರು ಬೇರೆ ಬೇರೆ ಗುಣಗಳುಳ್ಳ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಒಂದೇ ಆಹಾರದಲ್ಲಿ ಸೇವಿಸುವುದು.

ವಿರುದ್ಧ ಆಹಾರಗಳು ಸಹ ಏಕಕಾಲದಲ್ಲಿ ಮೂರು ದೋಷಗಳನ್ನು ಹಾಳುಮಾಡುತ್ತದೆ (ವಿರುದ್ಧ ಆಹಾರಗಳ ಒಂದು ದೊಡ್ಡ ಪಟ್ಟಿಯನ್ನೇ ನಾವು ಹಿಂದಿನ ಸಂಚಿಕೆಗಳಲ್ಲಿ ದೀರ್ಘವಾಗಿ ಚರ್ಚಿಸಿದ್ದೇವೆ).

ಹಿಂದೆ ಸೇವಿಸಿದ ಆಹಾರವು ಇನ್ನೂ ಜೀರ್ಣಗೊಳ್ಳುತ್ತಿರುವಾಗ/ಜೀರ್ಣವಾಗದೆ ಇರುವಾಗ ಮತ್ತೊಮ್ಮೆ ಆಹಾರವನ್ನು ಸೇವಿಸುವುದು.

ಕಾಲದ ಅರಿವಿಲ್ಲದೆ, ಪ್ರಮಾಣದ ಅರಿವಿಲ್ಲದೆ, ನಮ್ಮ ಜೀರ್ಣಶಕ್ತಿಯ ಅರಿವಿಲ್ಲದೆ ಮನಸ್ಸಿಗೆ ಬಂದಂತೆ ಸೇವಿಸುವ ಆಹಾರವು ಸಹ ತ್ರಿದೋಷ ಪ್ರಕೋಪಕ.

ಜತೆಗೆ ಅತಿಯಾದ ಮದ್ಯ ಸೇವನೆ, ಕರಿದ ಪದಾರ್ಥಗಳು, ಕಂದ-ಶಾಕಗಳನ್ನು ಬೇಯಿಸದೇ ಹಾಗೆಯೇ ಸೇವಿಸುವುದು, ಹಳಸಿದ ಆಹಾರ, ಒಣಗಿಸಿದ ಮಾಂಸ, ಶರೀರಕ್ಕೆ ಒಗ್ಗದ ಅಭ್ಯಾಸವಿರದ ಆಹಾರ ಸೇವನೆ- ಇಂಥ ಕಾರಣಗಳಿಂದ ಏಕಕಾಲದಲ್ಲಿ ಮೂರು ದೋಷಗಳು ಹದಗೆಡುವುದನ್ನು ಗಮನಿಸಬಹುದು.

ಇವಿಷ್ಟು ಆಯುರ್ವೇದ ಶಾಸ್ತ್ರದ ಪ್ರಕಾರ ಸರ್ವರೋಗಕ್ಕೂ ಕಾರಣ. ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಬರಬಹುದು- ‘ಅರೆ! ಮಾನವನ ಶರೀರವನ್ನು ಹಾಳು ಮಾಡುವಂಥ ಸಾವಿರಾರು ರೋಗ ಗಳಿವೆ, ಪ್ರತಿಯೊಂದು ರೋಗಕ್ಕೂ ಹಲವಾರು ಕಾರಣಗಳಿವೆ. ಆದರೆ, ಆಯುರ್ವೇದದಲ್ಲಿ ಒಂದೇ ಪುಟದಲ್ಲಿ ಎಲ್ಲ ರೋಗಗಳ ಕಾರಣಗಳನ್ನು ಪಟ್ಟಿ ಮಾಡಿಬಿಟ್ಟಿದ್ದಾರಲ್ಲ.

ಅದು ಹೇಗೆ ಸಾಧ್ಯ?’ ಅಂತ. ಅದೇ ನಮ್ಮ ಶಾಸ್ತ್ರದ ವೈಶಿಷ್ಟ್ಯ ಮತ್ತು ಸೊಬಗು. ಜಗತ್ತಿನ ಎಲ್ಲ ರಹಸ್ಯಗಳನ್ನು ಸೂತ್ರದ ರೂಪದಲ್ಲಿ ಸಂಕ್ಷಿಪ್ತವಾಗಿ ಈ ವೇದಗಳಲ್ಲಿ ಅಡಗಿಸಿಟ್ಟಿದ್ದಾರೆ. ಮೇಲೆ ಪಟ್ಟಿ ಮಾಡಿದ ಕಾರಣಗಳನ್ನೇ ನಾವು ಗಮನಿಸಿದರೆ, ಜಗತ್ತಿನಲ್ಲಿರುವ ಎಲ್ಲಾ ರೋಗಕಾರಕ ಕಾರಣಗಳೂ ಈ ಮೇಲೆ ಹೇಳಿದ ಕಾರಣ ಗಳ ಅಡಿಯ ಬರುತ್ತವೆ.

ಇದರ ಹೊರತಾಗಿ ಬೇರಾವ ಹೊಸ ಕಾರಣಗಳು ನಮಗೆ ಸಿಗಲು ಸಾಧ್ಯವಿಲ್ಲ. ಇದು ಆಪ್ತವಚನದ ವ್ಯಾಪ್ತಿ. ಹಾಗಾಗಿ, ಹೆಚ್ಚು ಯೋಚಿಸದೆ ನಮ್ಮ ದಿನನಿತ್ಯದ ಆಹಾರ -ವಿಹಾರ-ವಿಚಾರಗಳಲ್ಲಿ ಈ ಮೇಲೆ ಹೇಳಿದ ‘ಸರ್ವರೋಗ ಕಾರಣ’ಗಳನ್ನು ತ್ಯಜಿಸಿ, ದೋಷದ ಸಾಮ್ಯತೆಯನ್ನು ಸದಾ ಸಾಧಿಸುವ ಪ್ರಯತ್ನದಲ್ಲಿದ್ದರೆ ಸ್ವಾಸ್ಥ್ಯ ನಮ್ಮ ಸಂಪತ್ತಾಗುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ. ಇದೇ ನಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಏಕೈಕ ಮಾರ್ಗ! ದೋಷಗಳ ಸಾಮ್ಯತೆಯನ್ನು ಪರಿಪಾಲಿಸಿ- ಸ್ವಾಸ್ಥ್ಯವನ್ನು ಬೆಳೆಸಿ!

ಡಾ. ಸಾಧನಾಶ್ರೀ ಪಿ,

View all posts by this author