ಇದೇ ಅಂತರಂಗ ಸುದ್ದಿ
ಜೇಮ್ಸ್ ಜಾಯ್ಸ್ ಅವರ ‘ಯುಲಿಸಿಸ್’ ಕಾದಂಬರಿಯ ದುಬಾರಿ ತಿದ್ದುಪಡಿ ಇತಿಹಾಸವು ಮುದ್ರಣ ಕಲೆಯ ಸೂಕ್ಷ್ಮತೆ ಮತ್ತು ಸಾಹಿತ್ಯ ಸಂರಕ್ಷಣೆಯ ಸಂಕೀರ್ಣತೆಯನ್ನು ಎತ್ತಿ ಹಿಡಿಯುತ್ತದೆ. ಕೈಬರಹದಿಂದ ಮುದ್ರಣಕ್ಕೆ ಪರಿವರ್ತನೆಯಾಗುವಾಗ ಉಂಟಾಗುವ ಸಣ್ಣ ಸಣ್ಣ ತಪ್ಪುಗಳು ಒಂದು ಮಹಾನ್ ಕೃತಿಯ ಮೂಲ ಆಶಯವನ್ನೇ ಹೇಗೆ ತಿರುಚಬಲ್ಲವು ಎಂಬುದಕ್ಕೆ ಇದು ಜ್ವಲಂತ ಉದಾಹರಣೆ.
ಜೇಮ್ಸ್ ಜಾಯ್ಸ್ ಅವರ ‘ಯುಲಿಸಿಸ್’ ಜಗತ್ತಿನ ಆಧುನಿಕತಾವಾದಿ ಸಾಹಿತ್ಯದ ಅತ್ಯಂತ ಮಹತ್ವದ ಕಾದಂಬರಿಗಳಲ್ಲಿ ಅಗ್ರಪಂಕ್ತಿಯಲ್ಲಿದೆ. 1922ರಲ್ಲಿ ಪ್ರಕಟವಾದ ಈ ಕೃತಿಯು ಭಾಷೆ, ಶೈಲಿ ಮತ್ತು ನಿರೂಪಣಾ ತಂತ್ರಗಳಲ್ಲಿ ಮಾಡಿದ ಕ್ರಾಂತಿಕಾರಿ ಪ್ರಯೋಗಗಳಿಗೆ ವಿಶ್ವ ಪ್ರಸಿದ್ಧ. ಆದರೆ ಈ ಅದ್ಭುತ ಕೃತಿಯ ರಚನೆ ಮತ್ತು ಮುದ್ರಣದ ಇತಿಹಾಸವು ಸಾಹಿತ್ಯ ಲೋಕದ ಅತ್ಯಂತ ದುಬಾರಿ ಪ್ರಮಾದಗಳ ಸರಣಿಯನ್ನು ಒಳಗೊಂಡಿದೆ ಅಂದರೆ ಆಶ್ಚರ್ಯವಾದೀತು.
ಜಾಯ್ಸ್ ಅವರ ಸಂಕೀರ್ಣ ಹಸ್ತಪ್ರತಿಯನ್ನು ಮುದ್ರಣ ರೂಪಕ್ಕೆ ತರುವಾಗ ಉಂಟಾದ ಅಕ್ಷರ ದೋಷಗಳು ಮತ್ತು ನಂತರ ಅವುಗಳನ್ನು ತಿದ್ದಲು ತಗುಲಿದ ಅಗಾಧ ಶ್ರಮ ಹಾಗೂ ವೆಚ್ಚವು ಪುಸ್ತಕ ಪ್ರಕಾಶನ ಇತಿಹಾಸದ ಒಂದು ಕೌತುಕಮಯ ಅಧ್ಯಾಯ. ಜೇಮ್ಸ್ ಜಾಯ್ಸ್ ಈ ಕಾದಂಬರಿಯನ್ನು ಸಂಪೂರ್ಣವಾಗಿ ತಮ್ಮ ಕೈಬರಹದ ಬರೆದರು. ಅವರ ಬರವಣಿಗೆಯ ಹಸ್ತಪ್ರತಿಗಳು ಗೊಂದಲ ಮಯವಾಗಿದ್ದವು. ಪುಟಗಳ ಅಂಚುಗಳಲ್ಲಿ, ಸಾಲುಗಳ ನಡುವೆ ಮತ್ತು ಪುಟ್ಟ ಚೀಟಿಗಳಲ್ಲಿ ಅವರು ತಿದ್ದುಪಡಿಗಳನ್ನು, ಹೊಸ ವಾಕ್ಯಗಳನ್ನು ಮತ್ತು ಸಂಕೀರ್ಣ ವ್ಯಾಕರಣ ಪ್ರಯೋಗಗಳನ್ನು ಸೇರಿಸುತ್ತಿದ್ದರು. ಆ ಕಾಲದಲ್ಲಿ ಜಾಯ್ಸ್ ಅವರ ಕಣ್ಣಿನ ದೃಷ್ಟಿ ತೀವ್ರವಾಗಿ ಕ್ಷೀಣಿಸುತ್ತಿತ್ತು, ಹೀಗಾಗಿ ಅವರ ಅಕ್ಷರಗಳು ಹಲವೆಡೆ ಅಸ್ಪಷ್ಟವಾಗಿದ್ದವು. ಈ ಸಂಕೀರ್ಣ ಕೈಬರಹವನ್ನು ಮುದ್ರಣಾಲಯಕ್ಕೆ ಕಳುಹಿಸುವ ಮುನ್ನ ಟೈಪ್ ಮಾಡಲು ಹಲವು ವೃತ್ತಿಪರ ಬೆರಳಚ್ಚುಗಾರರನ್ನು (typists) ನಿಯೋಜಿಸಲಾಯಿತು. ಹಲವಾರು ಬೆರಳಚ್ಚುಗಾರರು ಜಾಯ್ಸ್ ಅವರ ಸಂಕೀರ್ಣ ಭಾಷಾ ಶೈಲಿಯನ್ನು ಅರ್ಥಮಾಡಿಕೊಳ್ಳಲು ಹೆಣಗಾಡಿದರು.
ಇದನ್ನೂ ಓದಿ: Vishweshwar Bhat: ವಿಶ್ವವಾಣಿ ಕ್ಲಬ್ಹೌಸ್ ಮಹತ್ವದ ಸಾಧನೆ: ವಿಶ್ವೇಶ್ವರ ಭಟ್
ಜಾಯ್ಸ್ ಅವರು ಸಾಂಪ್ರದಾಯಿಕ ವ್ಯಾಕರಣ ಮತ್ತು ವಿರಾಮಚಿಹ್ನೆಗಳ ಗಡಿಗಳನ್ನು ಮುರಿದು ಬರೆಯುತ್ತಿದ್ದ ಕಾರಣ, ಬೆರಳಚ್ಚುಗಾರರಿಗೆ ಯಾವುದು ಉದ್ದೇಶಪೂರ್ವಕ ಪ್ರಯೋಗ, ಯಾವುದು ನಿಜವಾದ ಬರಹ ಎಂಬುದು ತಿಳಿಯಲಿಲ್ಲ. ಅನೇಕ ಸಂದರ್ಭಗಳಲ್ಲಿ, ಟೈಪಿಸ್ಟ್ಗಳು ತಮ್ಮದೇ ಆದ ವಿವೇಚನೆ ಬಳಸಿ ಹೆಚ್ಚುವರಿ ವಿರಾಮಚಿಹ್ನೆಗಳನ್ನು, ಅಲ್ಪವಿರಾಮ, ಪೂರ್ಣವಿರಾಮಗಳನ್ನು ಸೇರಿಸಿದರು. ಇನ್ನು ಕೆಲವರು ಜಾಯ್ಸ್ ಹಸ್ತಪ್ರತಿಯ ಅಂಚಿನಲ್ಲಿ ಸೇರಿಸಿದ್ದ ನೂರಾರು ಹೊಸ ಸಾಲುಗಳನ್ನು ಓದಲಾಗದೇ ಕೈಬಿಟ್ಟರು ಅಥವಾ ತಪ್ಪಾಗಿ ಟೈಪ್ ಮಾಡಿದರು.
ಹೀಗಾಗಿ ಬೆರಳಚ್ಚು ಹಂತದ ಸಾವಿರಾರು ದೋಷಗಳು ಹಸ್ತಪ್ರತಿಯ ಒಳಗೆ ನುಸುಳಿದವು. ದೋಷಗಳ ಸರಮಾಲೆ ಅಲ್ಲಿಗೇ ನಿಲ್ಲಲಿಲ್ಲ. ಪುಸ್ತಕವನ್ನು ಫ್ರಾನ್ಸ್ನ ಡಿಜಾನ್ ನಗರದ ದರಂಟಿ ಯೆರ್’ ಮುದ್ರಣಾಲಯದಲ್ಲಿ ಮುದ್ರಿಸಲು ನೀಡಲಾಯಿತು. ಅಲ್ಲಿನ ಕಂಪೋಸಿಟರ್ಗಳು ಮತ್ತು ಮುದ್ರಣ ಕಾರ್ಮಿಕರಿಗೆ ಇಂಗ್ಲಿಷ್ ಭಾಷೆಯ ಪ್ರಾಥಮಿಕ ಜ್ಞಾನವೂ ಇರಲಿಲ್ಲ. ಫ್ರೆಂಚ್ ಭಾಷಿಕರಾಗಿದ್ದ ಅವರಿಗೆ ಇಂಗ್ಲಿಷ್ ಅಕ್ಷರಗಳು ಮತ್ತು ಜಾಯ್ಸ್ ಅವರ ಅಪರೂಪದ ಶಬ್ದಪ್ರಯೋಗಗಳು ಪರಕೀಯವಾಗಿದ್ದವು.
ಇದನ್ನೂ ಓದಿ: Vishweshwar Bhat Column: ಯಾರನ್ನೂ ನಂಬದ ಇಸ್ರೇಲ್
ಪರಿಣಾಮ, ಅಕ್ಷರಗಳು ಅದಲು-ಬದಲಾದವು, ಪದಗಳು ಛಿದ್ರಗೊಂಡವು ಮತ್ತು ಹೊಸ ರೀತಿಯ ತಪ್ಪುಗಳು ಪುಸ್ತಕದ ಪ್ರೂಫ್ ಪುಟಗಳಲ್ಲಿ ಸೇರ್ಪಡೆಗೊಂಡವು. ಜಾಯ್ಸ್ ಮುದ್ರಣಾಲಯದಿಂದ ಬರುತ್ತಿದ್ದ ಪ್ರೂಫ್ ಶೀಟ್ಗಳನ್ನು ಪರಿಶೀಲಿಸುವಾಗ ತಪ್ಪುಗಳನ್ನು ಸರಿಪಡಿಸುವುದರ ಜತೆಗೆ, ತಮ್ಮ ಸೃಜನಶೀಲ ಹಂಬಲದಿಂದ ಹೊಸ ಹೊಸ ಭಾಗಗಳನ್ನು ಪುನಃ ಸೇರಿಸುತ್ತಾ ಹೋದರು. ಅವರು ಪ್ರೂಫ್ ಪುಟಗಳ ಸುಮಾರು ಮೂರನೇ ಒಂದು ಭಾಗದಷ್ಟು ಹೊಸ ವಿಷಯವನ್ನು ಕೈಬರಹದಲ್ಲಿ ಬರೆದು ಸೇರಿಸಿದರು.
ಈಗಾಗಲೇ ಗೊಂದಲದಲ್ಲಿದ್ದ ಮುದ್ರಕರಿಗೆ ಇದು ಮತ್ತಷ್ಟು ಸಂಕಷ್ಟ ತಂದೊಡ್ಡಿತು. ಜಾಯ್ಸ್ ಅವರ 40ನೇ ಜನ್ಮದಿನದ ಸಂದರ್ಭದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಬೇಕೆಂಬ ಒತ್ತಡದಲ್ಲಿದ್ದ ಪ್ರಕಾಶಕಿ ಸಿಲ್ವಿಯಾ ಬೀಚ್, ಪ್ರಮಾದಗಳ ನಡುವೆಯೇ ಮೊದಲ ಆವೃತ್ತಿಯನ್ನು ಹೊರತರಲು ಒಪ್ಪಿಗೆ ನೀಡಬೇಕಾಯಿತು.
1922ರಲ್ಲಿ ಮೊದಲ ಆವೃತ್ತಿಯು ಬೆಳಕು ಕಂಡಾಗ, ಅದರಲ್ಲಿ ಐದು ಸಾವಿರಕ್ಕೂ ಹೆಚ್ಚು ಗಂಭೀರ ಮುದ್ರಣ ದೋಷಗಳಿದ್ದವು. ಇವುಗಳಲ್ಲಿ ಅಕ್ಷರ ತಪ್ಪುಗಳು, ಅತಿಯಾದ ವಿರಾಮಚಿಹ್ನೆಗಳು ಮತ್ತು ಜಾಯ್ಸ್ ಎಂದೂ ಬರೆಯದ ನೂರಾರು ಪದಗಳು ಸೇರಿದ್ದವು. ವಿಪರ್ಯಾಸವೆಂದರೆ, ಮುಂದಿನ ದಶಕಗಳಲ್ಲಿ ಪ್ರಕಟವಾದ ಹಲವು ಆವೃತ್ತಿಗಳು ಈ ಹಿಂದಿನ ತಪ್ಪುಗಳನ್ನು ತಿದ್ದುವ ಬದಲು ಹೊಸ ತಪ್ಪುಗಳನ್ನು ಸೇರಿಸುತ್ತಾ ಹೋದವು.
ಜಾಯ್ಸ್ ಅವರ ನಿಧನದ ನಂತರವೂ ವಿಶ್ವದ ವಿದ್ವಾಂಸರು, ವಿಮರ್ಶಕರು ಮತ್ತು ಓದುಗರು ಮೂಲ ಬರಹಗಾರನ ಉದ್ದೇಶವೇನೆಂದು ತಿಳಿಯದೇ ಈ ವಿಕೃತ ಪಠ್ಯವನ್ನೇ ಓದಿ ವಿಶ್ಲೇಷಿಸು ತ್ತಿದ್ದರು. ಈ ಅಗಾಧ ಪ್ರಮಾದಗಳ ಸರಣಿಯನ್ನು ಸರಿಪಡಿಸಲು 1970ರ ದಶಕದ ಕೊನೆಯಲ್ಲಿ ಜರ್ಮನ್ ಸಾಹಿತ್ಯ ವಿದ್ವಾಂಸ ಮತ್ತು ಪಠ್ಯ ವಿಮರ್ಶಕ ಹ್ಯಾನ್ಸ್ ವಾಲ್ಟರ್ ಗ್ಯಾಬ್ಲರ್ ನೇತೃತ್ವದಲ್ಲಿ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.
ಜಾಯ್ಸ್ ಅವರ ಮೂಲ ಕರಡು ಪ್ರತಿಗಳು, ಹಸ್ತಪ್ರತಿಗಳು, ಟೈಪ್ಸ್ಕ್ರಿಪ್ಟ್ಗಳು ಮತ್ತು ಪ್ರೂಫ್ ಶೀಟ್ಗಳನ್ನು ಮೂಲಾಧಾರವಾಗಿಟ್ಟುಕೊಂಡು ‘ಯುಲಿಸಿಸ್’ ಕೃತಿಗೆ ಶುದ್ಧ ಮತ್ತು ನಿಖರ ರೂಪ ವನ್ನು ನೀಡುವುದು ಈ ವಿದ್ವತ್ಪೂರ್ಣ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಇದು ಸಾಹಿತ್ಯ ಇತಿಹಾಸದ ಅತ್ಯಂತ ಸಂಕೀರ್ಣವಾದ ಸಂಶೋಧನಾ ಕಾರ್ಯಗಳಲ್ಲಿ ಒಂದಾಯಿತು.
ಗ್ಯಾಬ್ಲರ್ ಮತ್ತು ಅವರ ವಿದ್ವಾಂಸರ ತಂಡವು ಜಾಯ್ಸ್ ಅವರ ಬರವಣಿಗೆಯ ಹಂತ ಹಂತದ ಬೆಳವಣಿಗೆಯನ್ನು ಮರುಸೃಷ್ಟಿಸಲು ಕಂಪ್ಯೂಟರ್ ತಂತ್ರಜ್ಞಾನವನ್ನು ಆಶ್ರಯಿಸಿತು. ಜಾಯ್ಸ್ ಬರೆದ ಪ್ರತಿಯೊಂದು ಸಾಲನ್ನು, ಟೈಪಿಸ್ಟ್ಗಳು ಮಾಡಿದ ಪ್ರತಿಯೊಂದು ಬದಲಾವಣೆಯನ್ನು ಮತ್ತು ಮುದ್ರಕರು ಮಾಡಿದ ಪ್ರತಿಯೊಂದು ತಪ್ಪನ್ನು ತಜ್ಞರು ಸಾಲು-ಸಾಲಾಗಿ ಹೋಲಿಕೆ ಮಾಡಿದರು. ಈ ಆಳವಾದ ಸಂಶೋಧನೆಯು ಜಾಯ್ಸ ಅವರ ಮೂಲ ಶೈಲಿಯನ್ನು ಮರು ಪಡೆಯಲು ಅಗತ್ಯವಾಗಿದ್ದರೂ, ಇದಕ್ಕೆ ಅಪಾರ ಸಮಯ, ಅಂತಾರಾಷ್ಟ್ರೀಯ ಪ್ರಯಾಣ, ಅಪರೂಪದ ಆರ್ಕೈವ್ ದಾಖಲೆಗಳ ಪರಿಶೀಲನೆ ಮತ್ತು ತಾಂತ್ರಿಕ ಬೆಂಬಲ ಬೇಕಾಯಿತು.
ಈ ಬೃಹತ್ ಸಂಶೋಧನೆ ಮತ್ತು ತಿದ್ದುಪಡಿ ಕಾರ್ಯಕ್ಕೆ ತಗುಲಿದ ಒಟ್ಟು ವೆಚ್ಚ ಬರೋಬ್ಬರಿ ಮೂರು ಲಕ್ಷ ಡಾಲರ್ಗಳು (ಆ ಕಾಲದ ಹಣದುಬ್ಬರ ಮತ್ತು ಮೌಲ್ಯವನ್ನು ಲೆಕ್ಕಿಸಿದರೆ ಇದು ಅತ್ಯಂತ ಭಾರಿ ಮೊತ್ತ). ವಿವಿಧ ಪ್ರತಿಷ್ಠಾನಗಳು, ಅನುದಾನಗಳು ಮತ್ತು ಜರ್ಮನ್ ಸಂಶೋಧನಾ ಸಂಸ್ಥೆಗಳ ಧನಸಹಾಯದೊಂದಿಗೆ ಈ ಕಾರ್ಯ ಪೂರ್ಣಗೊಂಡಿತು.
ಬೆರಳಚ್ಚುಗಾರರ ಅಜಾಗರೂಕತೆ, ಮುದ್ರಕರ ಭಾಷಾ ಅಜ್ಞಾನ ಮತ್ತು ಅತಿಯಾದ ವಿರಾಮ ಚಿಹ್ನೆಗಳಂಥ ಸರಳ ತಪ್ಪುಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಅಷ್ಟೊಂದು ಬೃಹತ್ ಮೊತ್ತ ವೆಚ್ಚವಾಗಿದ್ದು ಸಾಹಿತ್ಯ ಇತಿಹಾಸದ ಅತ್ಯಂತ ದುಬಾರಿ ’ಎರ್ರಾಟಾ’ (ದೋಷ ತಿದ್ದುಪಡಿ) ಎಂದು ದಾಖಲಾಯಿತು.
ಸುಮಾರು ಏಳು ವರ್ಷಗಳ ಸುದೀರ್ಘ ಪರಿಶ್ರಮದ ನಂತರ, 1984ರಲ್ಲಿ ‘ಯುಲಿಸಿಸ್: ಎ ಕ್ರಿಟಿಕಲ್ ಅಂಡ್ ಸಿಂಪ್ಲಿಫೈಡ್ ಎಡಿಷನ್’ (Ulysses: A Critical and Synoptic Edition) ಮೂರು ಸಂಪುಟಗಳಲ್ಲಿ ಪ್ರಕಟ ವಾಯಿತು. ಗ್ಯಾಬ್ಲರ್ ಆವೃತ್ತಿಯು ಸುಮಾರು 5000ಕ್ಕೂ ಹೆಚ್ಚು ದೋಷಗಳನ್ನು ಸರಿಪಡಿಸಿ, ಜಾಯ್ಸ್ ಅವರ ಮೂಲ ಶೈಲಿಗೆ ನ್ಯಾಯ ಒದಗಿಸಿತು ಎಂದು ಜಗತ್ತಿನಾದ್ಯಂತ ಪ್ರಶಂಸೆ ಕೇಳಿಬಂದಿತು.
ಅಳಿಸಿಹೋಗಿದ್ದ ಪ್ರಮುಖ ವಾಕ್ಯಗಳು ಮರಳಿ ಬಂದವು. ಅನಗತ್ಯವಾಗಿ ತುರುಕಲಾಗಿದ್ದ ವಿರಾಮ ಚಿಹ್ನೆಗಳನ್ನು ಕಿತ್ತು ಹಾಕಿ, ಜಾಯ್ಸ್ ಅವರ ನೈಜ ಆಲೋಚನಾ ಸರಣಿ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಲಾಯಿತು. ಆದರೆ ಈ ಹೊಸ ಆವೃತ್ತಿಯು ಸಾಹಿತ್ಯ ಲೋಕದಲ್ಲಿ ಮತ್ತೊಂದು ದೊಡ್ಡ ವಿವಾದಕ್ಕೂ ನಾಂದಿ ಹಾಡಿತು. ಜಾನ್ ಕಿಡ್ ಅವರಂಥ ಪ್ರಮುಖ ಜಾಯ್ಸ್ ವಿದ್ವಾಂಸರು ಗ್ಯಾಬ್ಲರ್ ಅವರ ಸಂಪಾದನಾ ವಿಧಾನವನ್ನು ತೀವ್ರವಾಗಿ ಟೀಕಿಸಿದರು.
ಗ್ಯಾಬ್ಲರ್ ತಪ್ಪುಗಳನ್ನು ಸರಿಪಡಿಸುವ ಭರದಲ್ಲಿ ಜಾಯ್ಸ್ ಸ್ವತಃ ಪ್ರೂಫ್ ಹಂತದಲ್ಲಿ ತಮಗೆ ಬೇಕೆಂದೇ ಮಾಡಿದ ಕೆಲವು ಸೃಜನಶೀಲ ಬದಲಾವಣೆಗಳನ್ನು ಕೈಬಿಟ್ಟಿದ್ದಾರೆ ಮತ್ತು ಹೊಸ ದೋಷಗಳನ್ನು ಸೇರಿಸಿದ್ದಾರೆ ಎಂದು ಆರೋಪಿಸಿದರು. ಈ ವಾಗ್ವಾದವು ‘ಜಾಯ್ಸ್ ಕದನ’ (The Joyce Wars) ಎಂದೇ ಪ್ರಸಿದ್ಧವಾಯಿತು. ಇದು ಸಾಹಿತ್ಯ ಪಠ್ಯವೊಂದನ್ನು ಪುನರ್ನಿರ್ಮಿಸುವುದು ಎಷ್ಟು ಸೂಕ್ಷ್ಮ ಮತ್ತು ಸವಾಲಿನ ಕೆಲಸ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿತು.
‘ಯುಲಿಸಿಸ್’ ಕಾದಂಬರಿಯ ಈ ದುಬಾರಿ ತಿದ್ದುಪಡಿಯ ಇತಿಹಾಸವು ಮುದ್ರಣ ಕಲೆಯ ಸೂಕ್ಷ್ಮತೆ ಮತ್ತು ಸಾಹಿತ್ಯ ಸಂರಕ್ಷಣೆಯ ಸಂಕೀರ್ಣತೆಯನ್ನು ಎತ್ತಿಹಿಡಿಯುತ್ತದೆ. ಕೈಬರಹದಿಂದ ಮುದ್ರಣಕ್ಕೆ ಪರಿವರ್ತನೆ ಯಾಗುವಾಗ ಉಂಟಾಗುವ ಸಣ್ಣ ಸಣ್ಣ ತಪ್ಪುಗಳು ಒಂದು ಮಹಾನ್ ಕೃತಿಯ ಮೂಲ ಆಶಯವನ್ನೇ ಹೇಗೆ ತಿರುಚಬಲ್ಲವು ಎಂಬುದಕ್ಕೆ ಇದು ಜ್ವಲಂತ ಉದಾಹರಣೆ.
ಮುದ್ರಣ ಲೋಕದ ಅಜಾಗರೂಕತೆಯಿಂದ ನುಸುಳಿದ ಅಕ್ಷರ ಹಾಗೂ ವಿರಾಮಚಿಹ್ನೆಗಳ ದೋಷ ಗಳನ್ನು ಕಳೆಯಲು ದಶಕಗಳ ಕಾಲ ನಡೆದ ಸಂಶೋಧನೆ ಮತ್ತು ಖರ್ಚಾದ ಲಕ್ಷಾಂತರ ಡಾಲರ್ ಗಳು, ಮಾನವೀಯ ಸೃಜನಶೀಲತೆಯನ್ನು ಅದರ ಮೂಲ ರೂಪದ ಉಳಿಸಿಕೊಳ್ಳಲು ಸಾಹಿತ್ಯ ಜಗತ್ತು ತೋರುವ ಬದ್ಧತೆಯ ಪ್ರತೀಕವಾಗಿದೆ.
ಒಂದು ವಾಕ್ಯ ಮತ್ತು ಸಂದೇಶ
ಈ ವಾಕ್ಯವನ್ನು ಗಮನಿಸಿ - ’You can't change the people around you, but you can change the people around you.' (ನಿಮ್ಮ ಸುತ್ತಲಿರುವ ಜನರನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಸುತ್ತಲಿರುವ ಜನರನ್ನು ನೀವು ಬದಲಾಯಿಸಿಕೊಳ್ಳಬಹುದು.) ಮೇಲ್ನೋಟಕ್ಕೆ ಒಂದೇ ವಾಕ್ಯವನ್ನು ಪುನರಾವರ್ತಿಸಿದಂತೆ ಕಂಡರೂ, ಇದರ ಆಳದಲ್ಲಿ ಮಾನಸಿಕ ಸ್ವಾತಂತ್ರ್ಯ ಮತ್ತು ಜೀವನದ ದಿಕ್ಕನ್ನು ನಿರ್ಧರಿಸುವ ಅದ್ಭುತ ತತ್ತ್ವಶಾಸ್ತ್ರ ಅಡಗಿದೆ. ಮೊದಲಾರ್ಧವು ಬೇರೆಯವರ ನಡೆವಳಿಕೆಯನ್ನು ತಿದ್ದುವ ನಮ್ಮ ಮಿತಿಯನ್ನು ಹೇಳಿದರೆ, ದ್ವಿತೀಯಾರ್ಧವು ನಮ್ಮ ಸುತ್ತ ಯಾರಿರಬೇಕೆಂದು ನಿರ್ಧರಿಸುವ ನಮ್ಮ ಸ್ವಂತ ಹಕ್ಕನ್ನು ಎತ್ತಿ ತೋರಿಸುತ್ತದೆ.
ಜೀವನದಲ್ಲಿ ಅನಗತ್ಯ ಒತ್ತಡದಿಂದ ಮುಕ್ತಿ ಪಡೆದು, ಆರೋಗ್ಯಕರ ಸಮಾಜವನ್ನು ಕಟ್ಟಿಕೊಳ್ಳಲು ಈ ಮಾತು ಮಾರ್ಗದರ್ಶಿಯಾಗಿದೆ ಎನ್ನಬಹುದು. ಮೊದಲ ಹಂತದಲ್ಲಿ ವಾಕ್ಯ ಹೇಳುವುದು - ನೀವು ಇತರರನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಬಾಲ್ಯ, ನಂಬಿಕೆ, ಮೌಲ್ಯಗಳು, ಸಂಸ್ಕಾರ ಮತ್ತು ಅನುಭ ವಗಳಿಂದ ರೂಪುಗೊಂಡಿರುತ್ತಾನೆ. ಅವರ ಆಲೋಚನಾ ಕ್ರಮ, ಮಾತನಾಡುವ ರೀತಿ ಅಥವಾ ಸ್ವಭಾವವನ್ನು ನಮ್ಮ ಇಷ್ಟದಂತೆ ತಿದ್ದಲು ಹೊರಡುವುದು ಬಂಡೆಗೆ ತಲೆ ಚಚ್ಚಿಕೊಂಡಂತೆ.
ನಾವೆಷ್ಟೇ ಪ್ರೀತಿಯಿಂದ, ಕಾಳಜಿಯಿಂದ ಅಥವಾ ಉಪದೇಶದ ಮೂಲಕ ಇನ್ನೊಬ್ಬರನ್ನು ಸುಧಾರಿಸಲು ಯತ್ನಿಸಿದರೂ, ಆ ವ್ಯಕ್ತಿಗೆ ಸ್ವತಃ ಬದಲಾಗುವ ಆಸಕ್ತಿ ಇಲ್ಲದಿದ್ದರೆ ನಮ್ಮ ಎಲ್ಲ ಶ್ರಮವೂ ವ್ಯರ್ಥ. ಈ ವಾಸ್ತವವನ್ನು ಒಪ್ಪಿಕೊಳ್ಳದಿರುವುದೇ ನಮ್ಮ ಬಹುತೇಕ ಮಾನಸಿಕ ನೋವು ಮತ್ತು ಸಂಬಂಧಗಳ ಬಿರುಕಿಗೆ ಮೂಲ ಕಾರಣ. ಬೇರೆಯವರನ್ನು ಬದಲಾಯಿಸಲು ನಿರಂತರವಾಗಿ ಪ್ರಯತ್ನಿಸುವುದು ನಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಹೀರಿಬಿಡುತ್ತದೆ.
ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಕುಟುಂಬಸ್ಥರ ನಕಾರಾತ್ಮಕ ವರ್ತನೆಗಳನ್ನು ತಿದ್ದಲು ಹೋದಾಗ ಘರ್ಷಣೆ, ವಾದ-ವಿವಾದ ಮತ್ತು ಅಸಮಾಧಾನಗಳು ಹುಟ್ಟಿಕೊಳ್ಳುತ್ತವೆ. ‘ಅವರು ನನ್ನ ಮಾತು ಕೇಳುತ್ತಿಲ್ಲ’, ‘ಅವರಿಗೆ ನನ್ನ ಕಾಳಜಿ ಅರ್ಥವಾಗುತ್ತಿಲ್ಲ’ ಎಂಬ ನಿರಾಶೆ ನಮ್ಮನ್ನು ಖಿನ್ನತೆಗೆ ತಳ್ಳುತ್ತದೆ. ಇನ್ನೊಬ್ಬರ ಜೀವನದ ರಿಮೋಟ್ ಕಂಟ್ರೋಲ್ ನಮ್ಮ ಕೈಯಲ್ಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಹಂಕಾರವನ್ನು ತ್ಯಜಿಸಿ ವಾಸ್ತವಕ್ಕೆ ತೆರೆದುಕೊಳ್ಳುವ ಮೊದಲ ಹೆಜ್ಜೆ.
ಇನ್ನು ವಾಕ್ಯದ ಎರಡನೇ ಭಾಗವನ್ನು ನೋಡೋಣ - ನಿಮ್ಮ ಸುತ್ತಲಿರುವ ಜನರನ್ನು ನೀವು ಬದಲಾಯಿಸಬಹುದು. ಅಂದರೆ, ಬೇರೆಯವರ ಸ್ವಭಾವವನ್ನು ತಿದ್ದುವ ವ್ಯರ್ಥ ಸಾಹಸ ಮಾಡುವ ಬದಲು, ನಿಮ್ಮ ಆಪ್ತ ವಲಯದಲ್ಲಿ ಯಾರು ಇರಬೇಕು ಮತ್ತು ಯಾರು ಇರಬಾರದು ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದು ನಮ್ಮ ವೈಯಕ್ತಿಕ ಗಡಿಗಳನ್ನು ಗುರುತಿಸುವ ಪ್ರಕ್ರಿಯೆ. ಯಾರೊಂದಿಗೆ ಸಮಯ ಕಳೆಯಬೇಕು, ಯಾರ ಮಾತುಗಳಿಗೆ ಪ್ರಾಮುಖ್ಯ ನೀಡಬೇಕು ಮತ್ತು ಯಾರಿಂದ ಅಂತರ ಕಾಯ್ದುಕೊಳ್ಳಬೇಕು ಎಂಬ ಸಂಪೂರ್ಣ ಸ್ವಾತಂತ್ರ್ಯ ನಮಗಿದೆ.
‘ನಾವು ದಿನನಿತ್ಯ ಅತಿ ಹೆಚ್ಚು ಸಮಯ ಕಳೆಯುವ ಐದು ಜನರ ಸರಾಸರಿ ರೂಪವೇ ನಾವಾಗಿರು ತ್ತೇವೆ’ ಎಂಬ ಮಾತಿದೆ. ನಮ್ಮ ಸುತ್ತಲಿರುವವರ ಶಕ್ತಿ, ಮಾತುಗಳು, ಆಲೋಚನೆಗಳು ನಮ್ಮ ಮೇಲೆ ಅಪ್ರeಪೂರ್ವಕವಾಗಿ ಪ್ರಭಾವ ಬೀರುತ್ತವೆ. ಸದಾ ದೂರು ಹೇಳುವವರು, ಅಸೂಯೆ ಪಡುವವರು, ಇತರರ ಬೆನ್ನ ಹಿಂದೆ ಮಾತನಾಡುವವರು ಮತ್ತು ನಿಮ್ಮ ಕನಸುಗಳನ್ನು ಕೀಳಾಗಿ ಕಾಣುವವರ ಮಧ್ಯೆ ನೀವು ಬದುಕುತ್ತಿದ್ದರೆ, ನೀವು ಎಷ್ಟೇ ಸಕಾರಾತ್ಮಕವಾಗಿರಲು ಯತ್ನಿಸಿದರೂ ಕ್ರಮೇಣ ಅವರ ಪ್ರಭಾವಕ್ಕೆ ಒಳಗಾಗುತ್ತೀರಿ. ಅಂಥ ವಾತಾವರಣವು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ವಿಷಕಾರಿ ಅಥವಾ ನಕಾರಾತ್ಮಕ ಜನರಿಂದ ದೂರ ಸರಿಯುವುದು ಸ್ವಾರ್ಥವಲ್ಲ, ಅದು ಆತ್ಮರಕ್ಷಣೆ. ಕೆಲವೊಮ್ಮೆ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಳ್ಳಲು ಸಾಧ್ಯವಾಗದಿದ್ದರೂ (ಉದಾಹರಣೆಗೆ ಹತ್ತಿರದ ಸಂಬಂಧಿಕರು ಅಥವಾ ಆಫೀಸ್ ಸಹೋದ್ಯೋಗಿಗಳು), ಅವರೊಂದಿಗೆ ಕೇವಲ ಔಪಚಾರಿಕ ಅಂತರವನ್ನು ಕಾಯ್ದುಕೊಳ್ಳುವುದು ಸಾಧ್ಯ. ಅವರ ಕೆಟ್ಟ ಮಾತುಗಳು ಅಥವಾ ವರ್ತನೆಗಳು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಕದಡದಂತೆ ಮಾನಸಿಕ ರಕ್ಷಣಾ ಕವಚವನ್ನು ನಿರ್ಮಿಸಿಕೊಳ್ಳುವುದೇ ಇಲ್ಲಿ ಮುಖ್ಯ.
ಯಾರಿಗೆ ನಿಮ್ಮ ಜೀವನದಲ್ಲಿ ಎಷ್ಟು ಪ್ರವೇಶಾವಕಾಶ ನೀಡಬೇಕು ಎಂಬ ಬೀಗದ ಕೈ ಸದಾ ನಿಮ್ಮ ಬಳಿಯೇ ಇರಬೇಕು. ನಿಮ್ಮ ಸುತ್ತಮುತ್ತಲಿನ ಜನರನ್ನು ಬದಲಾಯಿಸಿಕೊಳ್ಳುವುದು ಎಂದರೆ ಉತ್ತಮ ಸಂಗಾತಿಗಳನ್ನು ಹುಡುಕಿಕೊಳ್ಳುವುದು. ನಿಮ್ಮನ್ನು ಪ್ರೋತ್ಸಾಹಿಸುವ, ಕಷ್ಟದ ಸಮಯ ದಲ್ಲಿ ಬೆಂಬಲವಾಗಿ ನಿಲ್ಲುವ, ಹೊಸ ವಿಷಯಗಳನ್ನು ಕಲಿಯಲು ಪ್ರೇರೇಪಿಸುವ ಮತ್ತು ನಿಮ್ಮ ಗೆಲುವನ್ನು ಸಂಭ್ರಮಿಸುವ ಜನರೊಂದಿಗೆ ಸ್ನೇಹ ಬೆಳೆಸುವುದು ಜಾಣತನ.
ಸಕಾರಾತ್ಮಕ ಚಿಂತನೆ, ಕರುಣೆ, ಸತ್ಯಸಂಧತೆ ಮತ್ತು ದೊಡ್ಡ ಕನಸುಗಳನ್ನು ಹೊಂದಿರುವ ವ್ಯಕ್ತಿಗಳ ಸಹವಾಸವು ನಿಮ್ಮ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅಂಥ ವಾತಾವರಣ ದಲ್ಲಿ ನಿಮ್ಮ ನೈಜ ಸಾಮರ್ಥ್ಯ ಅರಳಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನಾವು ಕಲಿಯಬೇಕಾದ ಅತ್ಯಂತ ಮಹತ್ವದ ಪಾಠವೆಂದರೆ ನಿಯಂತ್ರಣದ ಅರಿವು. ಜಗತ್ತಿನಲ್ಲಿ ಎರಡು ರೀತಿಯ ವಿಷಯಗಳಿವೆ - ಒಂದು ನಮ್ಮ ನಿಯಂತ್ರಣದಲ್ಲಿರುವಂಥದ್ದು, ಇನ್ನೊಂದು ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವಂಥದ್ದು. ಇತರರ ನಡೆವಳಿಕೆ, ಮಾತು ಮತ್ತು ಭಾವನೆಗಳು ನಮ್ಮ ಹಿಡಿತದಲ್ಲಿಲ್ಲ. ಆದರೆ ನಮ್ಮ ಆಯ್ಕೆಗಳು, ನಮ್ಮ ಪ್ರತಿಕ್ರಿಯೆಗಳು ಮತ್ತು ನಮ್ಮ ಸಹವಾಸ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ.
ನಮ್ಮ ಹಿಡಿತದಲ್ಲಿಲ್ಲದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಿ, ನಮ್ಮ ನಿಯಂತ್ರಣ ದಲ್ಲಿರುವ ಆಯ್ಕೆಗಳತ್ತ ಗಮನ ಹರಿಸಿದಾಗ ಜೀವನದಲ್ಲಿ ನಿಜವಾದ ಶಾಂತಿ ದೊರೆಯುತ್ತದೆ. ಈ ಮಾತು ಕೇವಲ ಸ್ನೇಹ ಅಥವಾ ಸಂಬಂಧಗಳಿಗೆ ಮಾತ್ರವಲ್ಲ, ಇಡೀ ಜೀವನದ ದೃಷ್ಟಿಕೋನಕ್ಕೆ ಅನ್ವಯಿಸುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಬ್ಬ ಕೆಟ್ಟದ್ದನ್ನು ಸರಿಪಡಿಸಲು ನಾವು ಹುಟ್ಟಿಲ್ಲ. ಆದರೆ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಬೇರೆಯವರನ್ನು ಬದಲಾಯಿಸಲು ಪ್ರಯತ್ನಿಸಿ ನಮ್ಮ ಅಮೂಲ್ಯ ಸಮಯ ಮತ್ತು ನೆಮ್ಮದಿಯನ್ನು ಹಾಳುಮಾಡಿಕೊಳ್ಳಬಾರದು. ಬದಲಿಗೆ, ನಮ್ಮ ಬೆಳವಣಿಗೆಗೆ ಪೂರಕವಾದ, ನಮ್ಮ ಮೌಲ್ಯಗಳನ್ನು ಗೌರವಿಸುವ ಮತ್ತು ನಮಗೆ ನೆಮ್ಮದಿ ನೀಡುವ ಸುಂದರ ವ್ಯಕ್ತಿಗಳ ಸಣ್ಣ ಜಗತ್ತನ್ನು ನಮ್ಮ ಸುತ್ತ ನಿರ್ಮಿಸಿಕೊಳ್ಳಬಹುದು.
ಎಂಜಿನಿಯರುಗಳ ಕೆಲಸ
ಇದು ನಾನು ಇತ್ತೀಚೆಗೆ ‘ಲಿಂಕ್ಡಿನ್’ನಲ್ಲಿ ಓದಿದ್ದು. ದೊಡ್ಡ ದೊಡ್ಡ ಪರ್ವತ ಮತ್ತು ಬೆಟ್ಟ-ಗುಡ್ಡಗಳ ಮೇಲೆ ದಾರಿಗಳನ್ನು ಹೇಗೆ ಮಾಡುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿದ್ದು. ಒಂದು ಪ್ರತಿಷ್ಠಿತ ವಿದೇಶಿ ನಿರ್ಮಾಣ ಕಂಪನಿಗೆ ದೇಶವೊಂದರ ಗುಡ್ಡಗಾಡು ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸುವ ಗುತ್ತಿಗೆ ಸಿಕ್ಕಿತು. ಆ ಕಂಪನಿಯ ಎಂಜಿನಿಯರುಗಳು ನಕ್ಷೆಗಳನ್ನು ಸಿದ್ಧಪಡಿಸಲು ಮತ್ತು ಸಮೀಕ್ಷೆ (ಸರ್ವೆ) ನಡೆಸಲು ಪ್ರಾರಂಭಿಸಿದರು. ಈ ಸಮೀಕ್ಷೆ ಕಾರ್ಯ ಭರದಿಂದ ಸಾಗುತ್ತಿರುವುದನ್ನು ಸ್ಥಳೀಯ ಗುತ್ತಿಗೆದಾರನೊಬ್ಬ ಕುತೂಹಲದಿಂದ ಗಮನಿಸುತ್ತಿದ್ದ.
ಅವನಿಗೆ ಇದು ಅತೀವ ಆಶ್ಚರ್ಯವನ್ನು ಹುಟ್ಟಿಸಿತು. ಅವನು ವಿದೇಶಿ ನಿರ್ಮಾಣ ಕಂಪನಿಯ ಮುಖ್ಯ ಎಂಜಿನಿಯರ್ ಬಳಿ ಹೋಗಿ ಕೇಳಿದ - ‘ಬೆಟ್ಟಗಳಲ್ಲಿ ರಸ್ತೆ ನಿರ್ಮಿಸಲು ನಿಮಗೆ ನಕ್ಷೆಗಳನ್ನು ತಯಾರಿಸುವ ಅಗತ್ಯವೇನಿದೆ?’ ಅದಕ್ಕೆ ಆತ, ‘ಓಹ್, ಇದು ನಮಗೆ ಸಾಧ್ಯವಾದಷ್ಟು ಉತ್ತಮವಾದ ಮಾರ್ಗವನ್ನು ಗುರುತಿಸಲು ಸಹಾಯ ಮಾಡುತ್ತದೆ ಹಾಗೂ ನಾವು ರಸ್ತೆಗಳನ್ನು ನಿರ್ಮಿಸುವ ಕ್ರಮವೇ ಹಾಗೆ’ ಎಂದು ಹೇಳಿದ.
‘ಅದ್ಸರಿ, ನೀವು ಹೇಗೆ ಬೆಟ್ಟ-ಗುಡ್ಡಗಳಲ್ಲಿ ರಸ್ತೆಯನ್ನು ನಿರ್ಮಿಸುತ್ತೀರಿ?’ ಇಂದು ಮುಖ್ಯ ಎಂಜಿನಿಯರ್ ಕೇಳಿದ. ಆಗ ಸ್ಥಳೀಯ ಗುತ್ತಿಗೆದಾರ ವಿವರಿಸಿದ - ‘ನಾವು ಸರಳವಾಗಿ, ಒಂದು ಕತ್ತೆಯ ಮೇಲೆ ಸುಣ್ಣದ ಚೀಲವನ್ನು ಹೊರಿಸಿ, ಆ ಚೀಲಕ್ಕೆ ಸಣ್ಣ ರಂಧ್ರ ಮಾಡುತ್ತೇವೆ. ನಂತರ ಆ ಕತ್ತೆಯನ್ನು ಬೆಟ್ಟದ ಕಡೆಗೆ ಬಿಡುತ್ತೇವೆ. ಕತ್ತೆಯು ಕಷ್ಟವಿಲ್ಲದ ಸರಳ ಹಾದಿಯನ್ನು ಆಯ್ದು ಕೊಂಡು ಬೆಟ್ಟವನ್ನು ಏರುತ್ತಾ ಸಾಗಿದಂತೆ, ರಂಧ್ರದಿಂದ ಸುಣ್ಣವು ಉದುರುತ್ತಾ ದಾರಿಯುದ್ದಕ್ಕೂ ಒಂದು ಗುರುತನ್ನು ಬಿಡುತ್ತದೆ. ಆ ಸುಣ್ಣದ ಗುರುತನ್ನು ನೋಡಿ ನಮಗೆ ತಿಳಿಯುತ್ತದೆ ಇದೇ ಅತ್ಯುತ್ತಮ ಮಾರ್ಗವೆಂದು. ಆಮೇಲೆ ನಾವು ಅದೇ ಹಾದಿಯಲ್ಲಿ ರಸ್ತೆ ನಿರ್ಮಿಸಲು ಪ್ರಾರಂಭಿ ಸುತ್ತೇವೆ.’ ಇದನ್ನು ಕೇಳಿ ವಿದೇಶಿ ಕಂಪನಿಯ ಮುಖ್ಯ ಎಂಜಿನಿಯರ್ಗೆ ಸೋಜಿಗವೆನಿಸಿತು.
ಆತನಿಗೆ ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂದು ಅನಿಸಿತು. ‘ಹಾಗಾದರೆ ನಿಮ್ಮ ದೇಶದಲ್ಲಿ ಇಂಜಿನಿಯರ್ಗಳು ರಸ್ತೆ ನಕ್ಷೆಗಳನ್ನು ವಿನ್ಯಾಸಗೊಳಿಸುವುದಿಲ್ಲವೇ?’ ಎಂದು ಕೇಳಿದ. ಅದಕ್ಕೆ ಸ್ಥಳೀಯ ಗುತ್ತಿಗೆದಾರ ನಿರ್ಭಾವುಕನಾಗಿ ಹೇಳಿದ - ‘ಕತ್ತೆಗಳು ಸಿಗದ ಜಾಗಗಳಲ್ಲಿ, ಇಂಜಿನಿಯರ್ಗಳು ಆ ಕೆಲಸ ಮಾಡುತ್ತಾರೆ!’