ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಅತ್ಯಂತ ದಿಟ್ಟತನವನ್ನು ಪ್ರದರ್ಶಿಸಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿ ದ್ದಾರೆ. 2024-25ರ ಮುಂಗಡ ಪತ್ರದಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯು 12 ಲಕ್ಷ ರು.ಗಳಿಗೆ ಹೆಚ್ಚಳವಾಯಿತು. 2026ರಿಂದ ಅನ್ವಯವಾಗುವ ಹಾಗೆ ನೂತನ ಆದಾಯ ತೆರಿಗೆ ಕಾಯಿದೆಯನ್ನು ಜಾರಿಗೆ ತರಲಾಗಿದೆ.
“ಜಿಎಸ್‌ಟಿ-2 ಸುಧಾರಣೆಯನ್ನು ಜಾರಿಗೆ ತರಲು ಸರಕಾರವು 8 ವರ್ಷ ತಡ ಮಾಡಿದೆ"- ಇದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ‘ಜಿಎಸ್‌ಟಿ-2’ ಘೋಷಣೆ ಮಾಡಿದ ತರುವಾಯ ನೀಡಿದ ಪ್ರತಿಕ್ರಿಯೆ. ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದವರು, ಆರ್ಥಿಕ ವಿಚಾರಗಳಲ್ಲಿ ಪರಿಣತಿಯನ್ನು ಪಡೆದವರು. ಮತ್ತೊಂದೆಡೆ, ಕಾಂಗ್ರೆಸ್ ನಾಯಕ ಮತ್ತು ಹಿರಿಯ ನ್ಯಾಯವಾದಿ ಅಭಿಷೇಕ್ ಮನುಸಿಂ ಅವರು, “ಸರಕಾರವು ವಾಸ್ತವದಲ್ಲಿ, ರಾಹುಲ್ ಗಾಂಧಿಯವರು ಒತ್ತಡ ಹೇರಿದಾಗ ಮಾತ್ರವೇ ಕಾರ್ಯಪ್ರವೃತ್ತವಾಗುತ್ತದೆ.
ಇಂದಿನ ಜಿಎಸ್‌ಟಿ ಕಡಿತಗಳಿಗೆ ರಾಹುಲ್ ಅವರ ನಿರಂತರ ಪರಿಶ್ರಮ ಕಾರಣ" ಎಂದರೆ, ಸಿದ್ದರಾಮಯ್ಯನವರು, “ಇದನ್ನು ಮೊದಲೇ ಮಾಡಿದ್ದಿದ್ದರೆ ಜನರು ಪಡಬಾರದ ಕಷ್ಟ ಪಡಬೇಕಾದ ಪರಿಸ್ಥಿತಿ ಇರುತ್ತಿರಲಿಲ್ಲ" ಎಂದು ಟೀಕೆ ಮಾಡಿದರು. ಹೀಗೆ ಕಾಂಗ್ರೆಸ್ ನಾಯಕರು ವಾಸ್ತವಿಕತೆಯಿಂದ ದೂರವಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಮೋದಿ ಸರಕಾರವು ಕೈಗೊಂಡ ಐತಿಹಾಸಿಕ ಸುಧಾರಣೆಯನ್ನು ಹೇಗೆ ಸ್ವೀಕರಿಸಬೇಕು ಎಂಬುದರ ಬಗ್ಗೆ ಇವರಿಗೆ ಗೊಂದಲವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜಿಎಸ್‌ಟಿ ಜಾರಿಗೆ ಬರುವ ಮುನ್ನ 17 ವಿವಿಧ ತೆರಿಗೆಗಳು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದವು.
ಇದನ್ನೂ ಓದಿ: Prakash Shesharaghavachar Column: ಸದನ ನಡೆಯದಿದ್ದರೆ ವಿರೋಧ ಪಕ್ಷಗಳಿಗೇ ನಷ್ಟ
ದೈನಂದಿನ ಬಳಕೆಯ ವಸ್ತುಗಳಾದ ಸೋಪು, ಟೂತ್‌ಪೇಸ್ಟ್, ತಲೆಗೆ ಹಚ್ಚುವ ಎಣ್ಣೆ ಮತ್ತು ಸ್ಕೂಲ್ ಬ್ಯಾಗ್ ಮುಂತಾದ ವಸ್ತುಗಳಿಗೆ ಶೇ.27ರಷ್ಟು ಮಾರಾಟ ತೆರಿಗೆಯನ್ನು ಕೊಡಬೇಕಾಗಿತ್ತು. 2017ರಲ್ಲಿ ಜಿಎಸ್‌ಟಿ ಜಾರಿಯಾದ ನಂತರ, ಈ ಎಲ್ಲಾ ಪದಾರ್ಥಗಳ ಮೇಲಿನ ತೆರಿಗೆಯು ಶೇ.18ಕ್ಕೆ ಇಳಿಯಿತು. ಇಷ್ಟಾಗಿಯೂ, ಕಾಂಗ್ರೆಸ್ಸಿಗರ ತರ್ಕ ಹೇಗಿದೆ ಯೆಂದರೆ, ಹಿಂದೆ ಇದ್ದ ಶೇ.27ರಷ್ಟು ತೆರಿಗೆಯು ‘ಸುಖದ ಸೋಪಾನ’, ಆದರೆ ಜಿಎಸ್‌ಟಿ ಜಾರಿಯ ನಂತರದ ಶೇ.18ರಷ್ಟು ತೆರಿಗೆ ‘ಪಡಬಾರದ ಕಷ್ಟ’! ಇಂಥ ಅಭಿಪ್ರಾಯಕ್ಕೆ ಏನನ್ನುವುದು? ರಾಹುಲ್ ಗಾಂಧಿಯವರು 2017ರಲ್ಲಿ ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಅಪಹಾಸ್ಯ ಮಾಡಿದ್ದರು,
ಶೇ.18ರ ಒಂದೇ ಸ್ಲ್ಯಾಬ್ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ತದನಂತರದ 8 ವರ್ಷದ ಅವಧಿಯಲ್ಲಿ ಅವರು ಜಿಎಸ್‌ಟಿಯ ಕುರಿತು ಒಮ್ಮೆಯೂ ಯಾವುದೇ ಸಲಹೆ ನೀಡಿಲ್ಲ. ಪಾಪ ಕಾಂಗ್ರೆಸ್ಸಿಗರು ಕೇಂದ್ರ ಸರಕಾರದ ನಿರ್ಧಾರಕ್ಕೆ ಅನಿವಾರ್ಯವಾಗಿ ರಾಹುಲರ ಹೆಸರನ್ನು ಜೋಡಿಸಬೇಕಾಗಿ ಬಂದಿದೆ.
ಸೆಪ್ಟೆಂಬರ್ 3ರ ರಾತ್ರಿ 10 ಗಂಟೆಗೆ, ಪರಿಷ್ಕರಿಸಿದ ನೂತನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ವಿತ್ತ ಸಚಿವೆಯು ಘೋಷಿಸಿ ವಾರ ಕಳೆದಿದೆ. ಆದರೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ದಿವ್ಯಮೌನಕ್ಕೆ ಶರಣಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, “ಜಿಎಸ್‌ಟಿ ಸರಳೀಕರಣಕ್ಕೆ ಕಾಂಗ್ರೆಸ್ ಒತ್ತಾಯಿಸುತ್ತಿತ್ತು, ನಾವು ಇದನ್ನು ಗಬ್ಬರ್ ಸಿಂಗ್ ತೆರಿಗೆ ಎಂದು ಕರೆಯುತ್ತಿದ್ದೆವು" ಎಂದು ಅದೇ ಹಳೆಯ ರಾಗವನ್ನೇ ಹಾಡಿದ್ದಾರೆ. ದರ ಇಳಿಕೆಯನ್ನು ಸ್ವಾಗತಿಸಲಾಗದೆ, ವಿರೋಧಿಸಲು ಸಾಧ್ಯವಾಗದೆ, ಗಂಟಲಲ್ಲಿ ಕಡುಬು ಸಿಕ್ಕಿಸಿಕೊಂಡವರ ಹಾಗಿದೆ ಇವರ ಪ್ರತಿಕ್ರಿಯೆ.
“ಕಳೆದ 7 ವರ್ಷಗಳಲ್ಲಿ ಅತಿಹೆಚ್ಚಿನ ತೆರಿಗೆ ಸಂಗ್ರಹಿಸಿ, ಜನರ ಹಣವನ್ನು ‘ಲೂಟಿ’ಮಾಡಿ, ಈಗ ತೆರಿಗೆ ಇಳಿಸಿ, ಅದನ್ನು ಸಾಧನೆಯೆಂದು ಬಿಂಬಿಸುತ್ತಿದ್ದಾರೆ" ಎಂಬುದು ಕಾಂಗ್ರೆಸ್ ನಾಯಕರ ಮತ್ತೊಂದು ಟೀಕೆ. ಜಿಎಸ್‌ಟಿ ಜಾರಿಯಾದಾಗ, 2014ರ ಮೊದಲು ಇದ್ದ ತೆರಿಗೆ ಪ್ರಮಾಣಕ್ಕೆ ಸಮನಾಗಿ ವಿವಿಧ ವಸ್ತುಗಳ ಮೇಲೆ ತೆರಿಗೆಯನ್ನು ನಿಗದಿ ಮಾಡಲಾಗಿತ್ತು.
ಉದಾಹರಣೆಗೆ, ಯುಪಿಎ ಸರಕಾರದ ಆಳ್ವಿಕೆಯ ಅವಧಿಯಲ್ಲಿ ಸಿಮೆಂಟ್ ಮೇಲೆ ಶೇ.31ರಷ್ಟು ತೆರಿಗೆಯಿತ್ತು. ಜಿಎಸ್‌ಟಿ ಬಂದ ತರುವಾಯ ಅದರ ಪ್ರಮಾಣವು ಶೇ.28ಕ್ಕೆ ನಿಗದಿಯಾಗಿತ್ತು. ಇದೀಗ ಸಿಮೆಂಟ್ ಮೇಲಿನ ತೆರಿಗೆ ಪ್ರಮಾಣವನ್ನು ಶೇ.18ಕ್ಕೆ ಇಳಿಸಲಾಗಿದೆ. ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಆದಾಯ ತೆರಿಗೆಯ ಸ್ವರೂಪ ಹೇಗಿತ್ತು ಗೊತ್ತಲ್ಲವೇ- ಒಂದು ಲಕ್ಷ ರುಪಾಯಿ ಯನ್ನು ಸಂಪಾದಿಸಿದರೆ ಭಾರಿ ತೆರಿಗೆಯನ್ನೇ (ಬರೋಬ್ಬರಿ 97000 ರುಪಾಯಿಯಷ್ಟು!) ನೀಡಬೇಕಾಗಿತ್ತು.
ಇಂದು 12 ಲಕ್ಷ ರುಪಾಯಿ ಸಂಪಾದಿಸಿದರೂ ಒಂದು ಪೈಸೆ ಆದಾಯ ತೆರಿಗೆಯನ್ನೂ ನೀಡಬೇಕಾ ಗಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ವಿಧಿಸಲಾಗುತ್ತಿದ್ದ ತೆರಿಗೆಯ ಪ್ರಮಾಣವನ್ನು ಕಾಂಗ್ರೆಸ್ ನಾಯಕರು ಒಮ್ಮೆ ತಿರುವಿ ನೋಡಿದರೆ, ‘ಲೂಟಿ’ ಹೇಗಿರುತ್ತದೆ ಎಂಬುದು ಅವರಿಗೆ ಅರಿವಾಗುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಅತ್ಯಂತ ದಿಟ್ಟತನವನ್ನು ಪ್ರದರ್ಶಿಸಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ.
2024-25ರ ಮುಂಗಡ ಪತ್ರದಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯು 12 ಲಕ್ಷ ರು.ಗಳಿಗೆ ಹೆಚ್ಚಳ ವಾಯಿತು. 2026ರಿಂದ ಅನ್ವಯವಾಗುವ ಹಾಗೆ ನೂತನ ಆದಾಯ ತೆರಿಗೆ ಕಾಯಿದೆಯನ್ನು ಜಾರಿಗೆ ತರಲಾಗಿದೆ, ಆ ಕಾಯಿದೆಯನ್ನು ಸರಳೀಕರಣಗೊಳಿಸಿ, ಸಮಯಬಾಹಿರವಾಗಿರುವ ಹಲವಾರು ಕಾಯಿದೆಗಳನ್ನು ತೆಗೆದುಹಾಕಲಾಗಿದೆ.
ಇದೀಗ ‘ಜಿಎಸ್‌ಟಿ-2’ ಮೂಲಕ ತೆರಿಗೆ ಪ್ರಮಾಣವನ್ನು ಕೇವಲ ಶೇ.5 ಮತ್ತು ಶೇ.18ರ ಪ್ರಮಾಣಗಳಿಗೆ ಸೀಮಿತಗೊಳಿಸಿ, ಶೇ.28ರ ತೆರಿಗೆ ಪ್ರಮಾಣವನ್ನು ರದ್ದುಪಡಿಸಲಾಗಿದೆ. ಜಿಎಸ್‌ಟಿ ಜಾರಿಗೆ ಬಂದ 8 ವರ್ಷಗಳ ತರುವಾಯ ಕೈಗೊಂಡಿರುವ 2ನೇ ಹಂತದ ಸುಧಾರಣೆಯನ್ನು ‘ಐತಿಹಾಸಿಕ ಕ್ರಾಂತಿ’ ಎಂದು ಬಣ್ಣಿಸಬಹುದು.
ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನೀಡಿದ್ದ ‘ಜಿಎಸ್‌ಟಿ ಸುಧಾರಣೆಯ ವಾಗ್ದಾನ’ವನ್ನು ಈಡೇರಿಸಿದ್ದಾರೆ. ಕಳೆದ ಅನೇಕ ತಿಂಗಳಿಂದ ಎಲ್ಲರ ಬೇಡಿಕೆ ಯಾಗಿದ್ದ, ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವವಿಮೆಯ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೂನ್ಯಕ್ಕೆ ಇಳಿಸಿ ಜನರ ಭಾವನೆಗೆ ಸ್ಪಂದಿಸಿ ದ್ದಾರೆ. ಕೃಷಿ ಉಪಕರಣಗಳು ಹಾಗೂ ಹೈನು ಪದಾರ್ಥಗಳ ಮೇಲಿನ ತೆರಿಗೆ ಪ್ರಮಾಣವನ್ನೂ ಇಳಿಸಲಾಗಿದೆ.
ಜೀವ ರಕ್ಷಕ ಕ್ಯಾನ್ಸರ್ ಔಷಧಿಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ. ಗೃಹೋಪ ಯೋಗಿ ದಿನಬಳಕೆ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.5ರ ಪ್ರಮಾಣಕ್ಕೆ ಇಳಿಸಲಾಗಿದೆ. ಕಾರು ಮತ್ತು ದ್ವಿಚಕ್ರ ವಾಹನಗಳ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ತರಲಾಗಿದೆ. ಈಗಾಗಲೇ ಹಲವಾರು ಕಾರು ತಯಾರಕರು ಕಾರಿನ ಮಾರಾಟ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಿದ್ದಾರೆ.
ಮೋದಿ ಸರಕಾರವು ಮಧ್ಯಮ ವರ್ಗದವರನ್ನು ಕಡೆಗಣಿಸುತ್ತಿದೆ ಎಂಬ ಆರೋಪವನ್ನು ಸುಳ್ಳು ಮಾಡಿ, ತಮ್ಮ ಸರಕಾರವು ‘ಮಧ್ಯಮವರ್ಗ-ಸ್ನೇಹಿ’ ಎಂಬುದನ್ನು ಅವರು ಕೃತಿಯಲ್ಲಿ ಸಾಬೀತು ಪಡಿಸಿದ್ದಾರೆ. ‘ಜಿಎಸ್‌ಟಿ-2’ರ ಪ್ರಯೋಜನವು ಪ್ರತಿಯೊಂದು ವರ್ಗದ ಜನರಿಗೂ ದೊರೆಯಲಿದೆ. ಮಾರಾಟ ಮತ್ತು ಆದಾಯ ತೆರಿಗೆಯಲ್ಲಿ ನೀಡಿರುವ ವಿನಾಯಿತಿಗಳು ಜನಸಾಮಾನ್ಯರ ‘ಖರೀದಿ ಸಾಮರ್ಥ್ಯ’ಕ್ಕೆ ಮತ್ತಷ್ಟು ಬಲ ತುಂಬಲಿವೆ.
ಅಗತ್ಯ ವಸ್ತುಗಳ ಖರೀದಿಯಲ್ಲಿ ಆಗುವ ಉಳಿತಾಯದಿಂದಾಗಿ ಜನಸಾಮಾನ್ಯರು ಹೆಚ್ಚು ಹಣವನ್ನು ಉಳಿಸುವ ಕಡೆಗೂ ಗಮನ ಹರಿಸ ಬಹುದಾಗಿದೆ. 2014ರ ವರ್ಷಕ್ಕೆ ಮುನ್ನ, ಮಾರಾಟ ತೆರಿಗೆ ಪ್ರಮಾಣದಲ್ಲಿ ಕಡಿಮೆಯಾಗುವ ಯೋಚನೆಯನ್ನು ಕೂಡ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹತ್ತು ವರ್ಷಗಳ ನಂತರ ಮನಮೋಹನ್ ಸಿಂಗ್ ಆಡಳಿತವು ಸಾಲು ಸಾಲು ಭ್ರಷ್ಟಾಚಾರ/ಹಗರಣ ಗಳಿಂದಾಗಿ ಕುಖ್ಯಾತಿ ಪಡೆದಿತ್ತು.
ಭಯೋತ್ಪಾದಕರ ದಾಳಿ, ನಕ್ಸಲರ ಹಿಂಸಾಚಾರ, ಭದ್ರತಾ ಪಡೆ ಸಿಬ್ಬಂದಿಗಳ ಹತ್ಯೆ ಮುಂತಾದ ದುರ್ಘಟನೆಗಳು ಸುದ್ದಿಯಾಗುತ್ತಿದ್ದವು. ಅನುತ್ಪಾದಕ ಬ್ಯಾಂಕ್ ಸಾಲಗಳು ಮಿತಿಮೀರಿ, ಬ್ಯಾಂಕಿಂಗ್ ವ್ಯವಸ್ಥೆಯು ಕುಸಿಯುವ ಪರಿಸ್ಥಿತಿಗೆ ಬಂದು ಮುಟ್ಟಿತ್ತು. ಕುಸಿಯುತ್ತಿದ್ದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಭಾರತವು ವಿಶ್ವದ ಐದು ದುರ್ಬಲ ಆರ್ಥಿಕ ದೇಶಗಳಲ್ಲಿ ಒಂದು ಎಂಬ ಅಪಖ್ಯಾತಿಗೆ ತುತ್ತಾಗಿತ್ತು.
ಬಿಜೆಪಿಗೆ ಸ್ವಂತ ಬಲದ ಮೇಲೆ ಅಧಿಕಾರವಿಲ್ಲ, ಹೀಗಾಗಿ ಕೇವಲ ‘ರಾಜಿ-ರಾಜಕೀಯ’ದ ಅನಿವಾ ರ್ಯತೆಯಿಂದ ಯಾವುದೇ ‘ಬಿಗ್ ಟಿಕೆಟ್’ ಸುಧಾರಣೆಯು ಅಸಾಧ್ಯ ಎಂದು ಲೆಕ್ಕಾಚಾರ ಹಾಕಿದ್ದ ರಾಜಕೀಯ ಪಂಡಿತರಿಗೆ ಈಗ ಆಘಾತವಾಗಿದೆ. ಏಕೆಂದರೆ, ಪೂರ್ಣ ಬಹುಮತ ಇದ್ದಾಗಲೂ ಕೈಗೊಳ್ಳದ ಆರ್ಥಿಕ ಸುಧಾರಣೆಯನ್ನು ಈಗ ಮೋದಿ ಸರಕಾರವು ಕೈಗೊಂಡು ಎಲ್ಲರನ್ನೂ ಚಕಿತಗೊಳಿಸಿದೆ.
ಮೋದಿಯವರ 11 ವರ್ಷದ ಆಳ್ವಿಕೆಯು ಎಲ್ಲ ನಕಾರಾತ್ಮಕತೆಗಳನ್ನು ಅಳಿಸಿ, ಭಾರತವನ್ನು ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ನಿಲ್ಲಿಸಿದೆ. ಈ ಸರಕಾರವು ಯಾವುದೇ ಹಗರಣಕ್ಕೆ ಆಸ್ಪದ ನೀಡಿಲ್ಲ. ಇಂದು ಬೆಲೆ ಇಳಿಕೆಯು ಪ್ರಧಾನವಾಗಿ ಸುದ್ದಿ ಮಾಡುತ್ತಿದೆ. ‘ಆಪರೇಷನ್ ಸಿಂದೂರ’ ಕಾರ್ಯಾ ಚರಣೆಯ ಮೂಲಕ ನಮ್ಮ ರಕ್ಷಣಾಬಲದ ಪ್ರಾಬಲ್ಯವನ್ನು ಜಗತ್ತಿಗೇ ತೋರಿಸಲಾಗಿದೆ.
ಮಾತ್ರವಲ್ಲದೆ, ಪ್ರತಿಯೊಂದು ರಂಗದಲ್ಲೂ ಭಾರತವು ಆತ್ಮನಿರ್ಭರತೆಯತ್ತ ದಾಪುಗಾಲು ಹಾಕುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ರವರ ಅತಿರೇಕದ ಸುಂಕದ ಒತ್ತಡಕ್ಕೆ ಜಗ್ಗದೆ-ಬಗ್ಗದೆ, ದೇಶದ ಹಿತಾಸಕ್ತಿಯನ್ನು ಕಾಪಾಡುವ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡು, ಟ್ರಂಪ್ ಅವರಿಗೆ ಪ್ರತಿಯಾಗಿ ಟಕ್ಕರ್ ಕೊಡಲು ಮೋದಿಯವರು ಹಿಂಜರಿಯಲಿಲ್ಲ.
‘ಅಚ್ಛೇ ದಿನ್ ಆಯೇಗಾ’ ಎಂದು ಮೋದಿಯವರು 2014ರಲ್ಲಿ ಹೇಳಿದ್ದರು, ಜನರಿಗೆ ಇಂದು ಅದರ ಅನುಭವವಾಗುತ್ತಿದೆ. ‘ರಾಜಕಾರಣಿಗಳು ಆಶ್ವಾಸನೆಯನ್ನು ನೀಡುವುದು ಈಡೇರಿಸಲು ಅಲ್ಲ’ ಎಂಬ ಸ್ಥಾಪಿತ ಗ್ರಹಿಕೆಯನ್ನು ಸುಳ್ಳುಮಾಡಿ, ‘ಮೋದಿಯವರು ಅಧಿಕಾರದಲ್ಲಿದ್ದರೆ ಎಲ್ಲವೂ ಸಾಧ್ಯ’ ಎಂಬುದನ್ನು ರುಜುವಾತುಪಡಿಸುತ್ತಿದ್ದಾರೆ.
‘ಮೋದಿಯುಗ’ದಲ್ಲಿ ಸರಕಾರವನ್ನು ಹಣಿಯಲು ವಿರೋಧ ಪಕ್ಷಗಳವರಿಗೆ ಇಂದು ವಿಷಯದ ಕೊರತೆಯುಂಟಾಗಿದೆ. ಹೀಗಾಗಿ ಚುನಾವಣಾ ಆಯೋಗವು ಬಿಹಾರದಲ್ಲಿ ಕೈಗೊಂಡಿರುವ ‘ಮತದಾರರ ಪಟ್ಟಿಯ ಪರಿಷ್ಕರಣೆ’ ಪ್ರಕ್ರಿಯೆಯನ್ನು ಅವರು ವಿರೋಧಿಸುತ್ತಾರೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಮಸಿಬಳಿದು ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ.
ಜನರಲ್ಲಿ ವಿಶ್ವಾಸವನ್ನು ತುಂಬದ ‘ಮತಾಧಿಕಾರ ಯಾತ್ರೆ’ಯನ್ನು ಮಾಡಿ ತಮ್ಮ ಹತಾಶೆಯನ್ನು ಶಮನ ಮಾಡಿಕೊಳ್ಳುವ ಕಸರತ್ತು ಮಾಡುತ್ತಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಜನಪರ ಹೋರಾಟವೆಂಬುದು ವಿರೋಧ ಪಕ್ಷಗಳಿಗೆ ಕೈಗೆಟುಕದ ವಸ್ತುವಾಗಿರುವುದು ಕಟುಸತ್ಯ. ನರೇಂದ್ರ ಮೋದಿಯವರ ‘ವಿಕಸಿತ ಭಾರತ’ ಪರಿಕಲ್ಪನೆಯು ಕೇವಲ ರಾಜಕೀಯ ಘೋಷಣೆಯಾಗಿಲ್ಲ.
2047ಕ್ಕೆ ಅದನ್ನು ನನಸು ಮಾಡಲೆಂದು, ದೂರದೃಷ್ಟಿಯ ಯೋಜನೆಗಳ ಮೂಲಕ ಅದನ್ನು ಸಾಧಿಸಲೆಂದು ಅವರು ಗಟ್ಟಿಯಾದ ಅಡಿಪಾಯವನ್ನು ಹಾಕುತ್ತಿದ್ದಾರೆ.
(ಲೇಖಕರು ಬಿಜೆಪಿಯ ವಕ್ತಾರರು)