ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Prof R G Hegde Column: ಓದುವವರಿಲ್ಲ ಎಂದು ಕೊರಗುವವರು ಇವರತ್ತ ನೋಡಬೇಕು

ಕನ್ನಡ ಪತ್ರಿಕೋದ್ಯಮವನ್ನು ಹಳೆಯ ಜಾಡಿನಿಂದ, ಗೂಡಿನಿಂದ ಹೊರ ತಂದು ಅದಕ್ಕೊಂದು ಹೊಸ ಜೀವ, ಹೊಸತನ ತಂದವರು ಅವರು. ಕನ್ನಡ ಪತ್ರಿಕೆಗಳನ್ನು ಜನಪ್ರಿಯವಾಗಿಸಿದವರು ಮತ್ತು ಜನಪರವಾಗಿಸಿದವರು ಅವರು. ‘ತಲೆ ಬರಹ’ ಗಳನ್ನು ಬರೆಯುವ ರೀತಿಯಲ್ಲಂತೂ ಮೂಲಭೂತ ಬದಲಾವಣೆ ತಂದವರು ಭಟ್. ‌

ಪ್ರೊ.ಆರ್.ಜಿ.ಹೆಗಡೆ

ಇಲ್ಲಿ ಹೇಳುತ್ತಿರುವ ಮಾತುಗಳಿಗೆ (ಬೇಕೇ ಬೇಕಾದರೆ) ಒಂದು ಹಿನ್ನೆಲೆ ಇದೆ. ವಿಶ್ವೇಶ್ವರ ಭಟ್ ಅವರಿಗೆ ಮೊನ್ನೆ ಅವರ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ಒಂದು ಒಂದು ಬೃಹತ್ ಸನ್ಮಾನ ನಡೆಯಿತು. ಸನ್ಮಾನದಲ್ಲಿ ಅವರ ವ್ಯಕ್ತಿತ್ವದ ಬಹು ಆಯಾಮಗಳ ಕುರಿತು, ಸಾಧನೆಗಳ ಕುರಿತು ಅಭಿಮಾನದ ಮಾತುಗಳ ಹೊಳೆಯೇ ಹರಿಯಿತು. ಆ ಹೊಳೆಗೆ ನನ್ನ ನಾಲ್ಕು ಮಾತುಗಳ ಕಿರುತೊರೆಯನ್ನು ಸೇರಿಸಲು ಈ ಲೇಖನ.

ಭಟ್ಟರಿಗೆ ಅಭಿನಂದನೆ ಹೇಳಲು ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದು ಮತ್ತು ಬಹಳ ಸರಳವಾದ ಕಾರಣವೆಂದರೆ ಅವರು ಮೂರೂರು ಎನ್ನುವ ಹಳ್ಳಿಯಲ್ಲಿ ಸಾಧಾರಣ ಕುಟುಂಬವೊಂದರಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದು ಅಸಾಧಾರಣ ಎತ್ತರಕ್ಕೆ ಏರಿದವರು.

ನಿಜಕ್ಕೂ ಸಂತೋಷಪಟ್ಟುಕೊಳ್ಳಬಹುದಾದ, (ಬೇಡವಾದವರು ಅಸೂಯೆ ಪಟ್ಟುಕೊಳ್ಳ ಬಹುದಾದ) ಸಾಧನೆ ಅವರದು. ಅವರು ಎಂತಹ ಹಿನ್ನೆಲೆಯಿಂದ ಬಂದವರು ಎನ್ನುವುದರ ಕುರಿತು ಚೂರು ಹೇಳಿಕೊಳ್ಳಬೇಕು. ಸುಮಾರು ಐವತ್ತು ವರ್ಷಗಳ ಹಿಂದಿನ ಕಥೆ.

ಇದನ್ನೂ ಓದಿ: Prof R G Hegde Column: ನದಿ ನೀರು ತಿರುವಿನ ಯೋಜನೆಗಳು ಸಲ್ಲ

ಮೂರೂರು ಹಳ್ಳಿ ಕುಮಟದಿಂದ ಎಂಟು ಹತ್ತು ಕಿಲೋಮೀಟರ್ ಹೊರಗಿರುವ ಕರಾವಳಿ ಯ ಹಳ್ಳಿ. ಅಲ್ಲಿ ಆಗ ಸುಮಾರು ಆರು ತಿಂಗಳು ಎಡೆಬಿಡದೆ ಮಳೆ ಸುರಿಯುತ್ತಿತ್ತು. ಮಳೆಗಾಲಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ಹೋಗಿ ರಾತ್ರಿ ಚಿಮಣಿ ಬುರುಡೆಯ ಬೆಳಕಿನಲ್ಲಿಯೇ ವ್ಯವಹಾರ ನಡೆಸಬೇಕು.

ಜೋರಾದ ಗಾಳಿ ಬಂದರೆ ಚಿಮಣಿ ಬುರುಡೆ ಆರಿ ಹೋಗುತ್ತಿತ್ತು. ತಡರಾತ್ರಿ ಕುಳಿತು ಓದಲು ವಿದ್ಯಾರ್ಥಿಗಳಿಗೆ ಮನೆಯವರು ಬಿಡುತ್ತಿರಲಿಲ್ಲ. ಏಕೆಂದರೆ ಚಿಮಣಿ ಎಣ್ಣೆ ಖರ್ಚಾಗುತ್ತದೆ. ಚಿಮಣಿ ಎಣ್ಣೆ ಸಿಗುತ್ತಿರಲಿಲ್ಲ. ಆಗ ಅದಕ್ಕೆಲ್ಲ ಕಂಟ್ರೋಲ್ ಇರುತ್ತಿತ್ತು. ಸಿಕ್ಕರೂ ತರುವು ದಕ್ಕೆ ದುಡ್ಡಿಲ್ಲ. ಮತ್ತೆ ಚಿಮಿಣಿ ಬುರುಡೆ ಯಾಕೆಂದರೆ ಲ್ಯಾಂಪ್ ಅಥವಾ ಲಾಟೀನ್‌ನ ನಳಿಗೆಗಳು ಪದೇ ಪದೇ ಒಡೆದು ಹೋಗುತ್ತಿದ್ದವು.

ಅವನ್ನು ತರಲು ದುಡ್ಡಿಲ್ಲ. ಕುಮಟಾಕ್ಕೆ ಹೋಗಲು ಇಡೀ ದಿನ ಸೇರಿ ಎರಡು ಮೂರು ಬಸ್‌ ಗಳಿದ್ದವು. ಕುಮಟಾದಿಂದ ಬಂದು ಹೋಗುತ್ತಿದ್ದವು. ಮಳೆಗಾಲವಾದರೆ ದಾರಿಯಲ್ಲಿ ನೀರು ನಿಂತು ಕೆಲವೊಮ್ಮೆ ಅವು ಬರುತ್ತಿರಲಿಲ್ಲ. ಕೆಲವು ಸಲ ಕೆಟ್ಟ ನಿಂತು ಬರುತ್ತಿರಲಿಲ್ಲ. ಹಾಗಾಗಿ ಬಸ್ ಸಂಚಾರ ಹೀಗೇ ಎಂದು ಇರಲಿಲ್ಲ.

ಊರಲ್ಲಿ ಇಬ್ಬರು ಮೂವರು ಶ್ರೀಮಂತರ ಮನೆಗಳಲ್ಲಿ ರೇಡಿಯೋಗಳಿದ್ದವು. ಆದರೆ ಆ ರೇಡಿಯೋಗಳನ್ನು ಹಚ್ಚುವುದು ಇಲ್ಲ. ಏಕೆಂದರೆ ಅವು ಗಾಳಿ ಮಳೆಗೆ ಗೊರಗೊರ ಗುಡು ತ್ತಿದ್ದವು. ಸುಟ್ಟು ಹೋದರೆ ಎಂದು ಜನ ಹೆದರುತ್ತಿದ್ದರು. ಇನ್ನೂ ಒಂದು ಕಾರಣವೆಂದರೆ ಪದೇಪದೇ ರೇಡಿಯೋ ಹಚ್ಚಿದರೆ ಬ್ಯಾಟರಿ ಸೆಲ್ಲು ಖರ್ಚಾಗುತ್ತದೆ. ಅದನ್ನು ತರಲು ದುಡ್ಡಿಲ್ಲ.

ವಿಶ್ವೇಶ್ವರ ಭಟ್ರ ಮನೆಯಲ್ಲಿ ಮೊದಲು ರೇಡಿಯೋ ಇರಲಿಲ್ಲ ಎಂದು ನನ್ನ ನೆನಪು. ಆಮೇಲೆ ಭಟ್ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಬಂದಿತ್ತು ಅನಿಸುತ್ತದೆ. ಏಕೆಂದರೆ ತಮ್ಮ ಅಂಗಡಿಯಲ್ಲಿ ಕುಳಿತು ಅವರು ಕ್ರಿಕೆಟ್ ಕಾಮೆಂಟರಿ ಕೇಳುತ್ತಿದ್ದುದನ್ನು ನೋಡಿ ದ್ದೇನೆ.

Screenshot_10

ಬಸ್ ಬಂದರೆ ಮೂರು ನಾಲ್ಕು ಮನೆಗಳಿಗೆ ನ್ಯೂಸ್ ಪೇಪರ್ ಬರುತ್ತಿತ್ತು. ನನ್ನ ನೆನಪಿ ನಲ್ಲಿರುವಂತೆ ವಿಶ್ವೇಶ್ವರ ಭಟ್ ಕುಟುಂಬಕ್ಕೆ ಕೃಷಿ ಜಮೀನು ಇರಲಿಲ್ಲ. ತಂದೆ ಒಂದು ಅಂಗಡಿ ಮತ್ತು ಕೊಬ್ಬರಿ ಎಣ್ಣೆಯ ಗಾಣ ನಡೆಸುತ್ತಿದ್ದರು. ಅದರ ಮೇಲೆ ಕುಟುಂಬ ಸಾಗಬೇಕು. ಅವರ ತಂದೆ ಬಸ್ಸಿಂದಿಳಿದು ಎರಡೂ ಕೈಗಳಲ್ಲಿ ಭಾರವಾದ ಚೀಲಗಳನ್ನು ಹಿಡಿದು ತಮ್ಮ ಅಂಗಡಿ ಕಡೆ ಹೆಜ್ಜೆ ಹಾಕುತ್ತಿದ್ದುದು ನನಗೆ ನೆನಪಿದೆ.

ಆರೆಂಟು ಮಕ್ಕಳ ದೊಡ್ಡ ಕುಟುಂಬ ಅವರದು. ವಿಶ್ವೇಶ್ವರ ಭಟ್ ಬಡ ಕುಟುಂಬದಿಂದ ಬಂದವರು ಎಂದು ಹೇಳುವಂತೆ ಇಲ್ಲ. ಏಕೆಂದರೆ ಅವರಿಗೆ ಬಹುಶಃ ಊಟ ತಿಂಡಿಗೆ, ಕಾಲೇಜ್ ಫೀಸ್ ಕಟ್ಟಲು ಸಮಸ್ಯೆ ಇರಲಿಲ್ಲ. ಆದರೆ ಅದಕ್ಕಿಂತ ಮುಂದೆ ಕೇಳುವಂತೆ ಇರಲಿಲ್ಲ ಅನಿಸುತ್ತದೆ.

ವಿಶ್ವೇಶ್ವರ ಭಟ್ಟರು ಕನ್ನಡ ಮಾಧ್ಯಮದಲ್ಲಿ ಕಲಿತವರು. ಸಾಧಾರಣ ಶಾಲೆಗಳಲ್ಲಿ. ನಂತರ ‘ಸಾಧಾರಣ’ ಕಾಲೇಜುಗಳಲ್ಲಿ. ದೊಡ್ಡ ದೊಡ್ಡ ಹೆಸರಿನ, ಭಾರಿ ಖರ್ಚು ತಗಲುವ ‘ಕೆಂಪು ಇಟ್ಟಿಗೆಗಳ’ ವಿಶ್ವವಿದ್ಯಾಲಯಗಳಲ್ಲಿ ಕಲಿತವರಲ್ಲ. ಕರ್ನಾಟಕ ಕಾಲೇಜ್ ಧಾರವಾಡದಲ್ಲಿ ತಮ್ಮ ಬಿಎಸ್ಸಿಯನ್ನು ಭೂಗರ್ಭಶಾಸದಲ್ಲಿ ಮಾಡಿದವರು ಅವರು ಎಂದು ನೆನಪು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅದೇ ವಿಷಯದ ವಿದ್ಯಾರ್ಥಿಯಾಗಿ ಸೇರಿಕೊಂಡರು.

ನಂತರ ಅದನ್ನು ಬಿಟ್ಟು ಪತ್ರಿಕೋದ್ಯಮ ಕೋರ್ಸ್ ಸೇರಿಕೊಂಡರು ಅನಿಸುತ್ತದೆ. ಅಂದರೆ ವಿಶ್ವೇಶ್ವರ ಸಾಧಾರಣವೆನಿಸುವ ಹಿನ್ನೆಲೆಯಿಂದ ಬಂದವರು. ‘ಕೈ ಹಿಡಿದು ನಡೆಸಿ’ ಮುಂದೆ ತರುವ ರೀತಿಯ ದೊಡ್ಡ ಹಿನ್ನೆಲೆ ಏನೂ ಅವರಿಗಿರಲಿಲ್ಲ.

ಹೀಗೆ ಸಾಧಾರಣ ಹಳ್ಳಿಯಿಂದ ಕನ್ನಡ ಮಾಧ್ಯಮದಲ್ಲಿ ಕಲಿತ ವ್ಯಕ್ತಿ ಒಬ್ಬರು ಅಸಾಧಾರಣ ಮಟ್ಟವನ್ನೇರಿದ್ದು, ತಮ್ಮ ಮೂವತ್ತರ ಹರಯದಲ್ಲಿಯೇ ವಿಜಯ ಕರ್ನಾಟಕದಂತಹ ಪತ್ರಿಕೆಯ ಎಡಿಟರ್ ಆಗಿದ್ದು ನಿಜಕ್ಕೂ ಅಸಾಧಾರಣ ಸಂಗತಿ. ನಂತರವಂತೂ ಬಿಡಿ.

ಅವರ ಸಾಧನೆಯ ಕುರಿತು ಹೇಳಲು ಇಂತಹ ಬರಹಗಳು ಸಾಲುವುದಿಲ್ಲ. ಪುಸ್ತಕಗಳ ಸರಣಿಗಳೇ ಬೇಕು. ನೂರರಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ನಿರಂತರ ಲೇಖನಗಳನ್ನು ಬರೆದಿzರೆ. ತಮ್ಮ ಸ್ವಂತ ದಿನ ಪತ್ರಿಕೆ ನಡೆಸುತ್ತಿದ್ದಾರೆ. ಅದು ಹುಡುಗಾಟದ ಕೆಲಸವಲ್ಲ. ಭಾರಿ ಬಂಡವಾಳ ತಾಗುವ ಕೆಲಸ ಅದು. ಭಟ್ ಅವರೇ ಒಮ್ಮೆ ಬರೆದಂತೆ ಎಷ್ಟು ದುಡ್ಡು ಹಾಕಿದರೂ ನುಂಗಿಕೊಂಡು ಹೋಗುವ ಉದ್ಯಮ ಅದು.

ಹೀಗಾಗಿ ವಿಶ್ವೇಶ್ವರ ಭಟ್ ಅವರ ವೈಯಕ್ತಿಕ ಸಾಧನೆ ಅನುಪಮವಾದದ್ದು ಮತ್ತು ನಮ್ಮ ಹಳ್ಳಿಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಮಾದರಿಯಾದುದು. ನಿಜವಾದ ಸಾಧಕ ವಿಶ್ವೇಶ್ವರ ಭಟ್. ಅದರಲ್ಲಿ ಮಾತಿಲ್ಲ. ಆದರೆ ನನಗೆ ನಿಜವಾಗಿಯೂ ಹೇಳಬೇಕಿರುವ ವಿಷಯ ಇದಲ್ಲ. ಇದು ಅವರ ಸಾಧನೆಯ ಒಂದು ಭಾಗ ಅಷ್ಟೇ. ಅವರ ಸಾರ್ವಜನಿಕ ವಾದ, ಇಡೀ ನಾಡಿಗೆ ಸಲ್ಲುವ, ಕರ್ನಾಟಕದ, ಕನ್ನಡದ ಇತಿಹಾಸದಲ್ಲಿ ದಾಖಲಾಗಬೇಕಾದ ಕೊಡುಗೆ ಬೇರೆಯೇ ಇದೆ. ಮತ್ತು ಅದಕ್ಕೆ ಹಲವು ಮುಖಗಳಿವೆ.

ಕನ್ನಡ ಪತ್ರಿಕೋದ್ಯಮವನ್ನು ಹಳೆಯ ಜಾಡಿನಿಂದ, ಗೂಡಿನಿಂದ ಹೊರ ತಂದು ಅದಕ್ಕೊಂದು ಹೊಸ ಜೀವ, ಹೊಸತನ ತಂದವರು ಅವರು. ಕನ್ನಡ ಪತ್ರಿಕೆಗಳನ್ನು ಜನಪ್ರಿಯವಾಗಿಸಿದವರು ಮತ್ತು ಜನಪರವಾಗಿಸಿದವರು ಅವರು. ‘ತಲೆ ಬರಹ’ ಗಳನ್ನು ಬರೆಯುವ ರೀತಿಯಲ್ಲಂತೂ ಮೂಲಭೂತ ಬದಲಾವಣೆ ತಂದವರು ಭಟ್. ‌

ಗಂಭೀರ ಬರಹಗಳನ್ನೂ ಸರಳವಾಗಿ ಬರೆದು ಸಾಮಾನ್ಯ ಜನತೆ ಮತ್ತು ‘ಜ್ಞಾನ’ದ ನಡುವೆ ಬಂಧವನ್ನು ಬೆಳೆಸಿದವರು. ಅಂದರೆ ಜನ ಓದಬಲ್ಲಂತೆ ಬರೆದವರು ಅವರು. ಇನ್ನೂ ಸ್ಪಷ್ಟವಾಗಿ, ಸರಳವಾಗಿ ಹೇಳಬೇಕೆಂದರೆ ವಿದ್ವಾಂಸರ, ವಿಮರ್ಶಕರ,‘ದೊಡ್ಡ ಜನರ’ ಜಗತ್ತಿನಿಂದ ಜ್ಞಾನವನ್ನು, ಕನ್ನಡವನ್ನು ಹೊರ ತಂದು ಜನರಿಗೆ ಸುಲಭವಾಗಿ ತಲುಪಿಸಿ ದವರು ಅವರು.

ತಮ್ಮ ನೂರಾರು ‘ವಿದ್ವತ್ಪೂರ್ಣ’ ಪುಸ್ತಕಗಳನ್ನು ಕೂಡ ಸರಳ ಕನ್ನಡ ಭಾಷೆಯಲ್ಲಿ ಬರೆದವರು. ವಿಷಯದ ಕಡೆ ಜನರ ಲಕ್ಷ ಸೆಳೆದು, ನಗಿಸಿ, ಕಚುಗುಳಿಯಿಡಿಸಿ ಓದಿಸಿದವರು. ಉದಾಹರಣೆಗೆ, ವಿಶ್ವೇಶ್ವರ ಭಟ್ ಜೇನು ಹುಳುಗಳ ಕುರಿತು ಬರೆದಿದ್ದಾರೆ. ಹಾರ್ನ್‌ಬಿಲ್ (ಮುಂಗಟ್ಟೆ ಹಕ್ಕಿ) ಬಗ್ಗೆ ಕಾದಿಟ್ಟುಕೊಳ್ಳುವಂತೆ ಬರೆದಿದ್ದಾರೆ.

ವಿಮಾನ ಮತ್ತು ವಿಮಾನ ಯಾನದ ವೈಜ್ಞಾನಿಕ ಲೋಕವನ್ನು ತೆರೆದಿಟ್ಟಿದ್ದಾರೆ. ‘ವಿಸ್ಕಿ’, ‘ಬ್ರಾ’ ಕುರಿತು ಕೂಡ ಬರೆದಿzರೆ. ಹಾಗೆಯೇ ‘ಗಂಭೀರ’ ವಿಷಯಗಳ ಕುರಿತು ಬರೆದಿದ್ದಾರೆ. ಯಕ್ಷಗಾನದ ಕುರಿತು ಅವರ ಇತ್ತೀಚಿನ ಬರಹವಂತೂ ಕಾಪಿಟ್ಟುಕೊಳ್ಳುವಂತಹುದು. ‘ಕಾರಂತರ ಸುಳಿಯಲ್ಲಿ’ ಅಂತಹ ಮಹತ್ವದ ‘ಗಂಭೀರ’ ಪುಸ್ತಕವನ್ನು ಕನ್ನಡಕ್ಕೆ ತಂದಿ ದ್ದಾರೆ.

ಯಾವ ವಿಷಯದ ಕುರಿತು ಬರೆದರೂ ಸರಳವಾಗಿ ಜನರಿಗೆ ತಿಳಿಯುವಂತೆ, ಮಧ್ಯದಲ್ಲಿ ಒಂದು ಕಠಿಣ ಶಬ್ದ ಬರದಂತೆ, ವಾಕ್ಯಗಳನ್ನು ಸುತ್ತು ಬಳಸದೆ, ತಮ್ಮ ಜ್ಞಾನ ಪ್ರದರ್ಶನ ವನ್ನೇ ಉದ್ದೇಶವನ್ನಾಗಿ ಇಟ್ಟುಕೊಳ್ಳದೆ ಕನ್ನಡದ ಜನಸಾಮಾನ್ಯರಿಗಾಗಿ ಬರೆದಿದ್ದಾರೆ.

ಕನ್ನಡವನ್ನು ಅಥವಾ ಯಾವುದೇ ಭಾಷೆಯನ್ನು ಹೇಗೆ ಬರೆಯಬೇಕು ಎನ್ನುವುದಕ್ಕೆ ವಿಶ್ವೇಶ್ವರ ಭಟ್ ಮಾದರಿ. ಹೀಗಾಗಿ ಕನ್ನಡವನ್ನು ಜನಪರ ಮಾಡಿದ್ದಕ್ಕಾಗಿ ವಿಶ್ವೇಶ್ವರ ಭಟ್ ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆ.

ಹೀಗೆ ಬರೆದ ವಿಶ್ವೇಶ್ವರ ಕನ್ನಡವನ್ನು ‘ವಿದ್ವಾಂಸರ’ ಅಥವಾ ತಾವು ವಿದ್ವಾಂಸರೆಂದು ಭಾವಿಸಿಕೊಂಡವರ ಸುಳಿಯಿಂದ ಹೊರ ತಂದಿದ್ದಾರೆ. ಹಾಗೆಂದರೇನೆಂಬುದನ್ನು ಹೇಳಿ ಕೊಳ್ಳಬೇಕು. ‘ವಿದ್ವಾಂಸರ’ ಮನೋಭೂಮಿಕೆಯ ಕುರಿತು ಚೂರು ಹೇಳಬೇಕು. ನಮ್ಮ ಭಾಷೆಗಳ ‘ಪಂಡಿತರಿಗೆ’ ಕೆಲವು ತೆವಲುಗಳಿವೆ.

ಸಾಧಾರಣವಾಗಿ ಅವರ ಅಭಿಪ್ರಾಯಗಳಲ್ಲಿ ಅಂಕಣ ಬರಹಗಳು ಬರಹಗಳಲ್ಲ. ಜನಪ್ರಿಯ ಬರಹಗಳು ಬರಹಗಳಲ್ಲ. ಅಥವಾ ಅವು ‘ಗಂಭೀರವಾದ’ ಬರಹಗಳಲ್ಲ. ದೊಡ್ಡ ದೊಡ್ಡ ಸ್ಕಾಲರ್‌ಗಳು ಸಾಮಾನ್ಯವಾಗಿ ‘ವಿಸ್ಕಿ’ ಅಥವಾ ‘ಬ್ರಾ’ ಕುರಿತು ಬರೆಯಕೂಡದು ಅಥವಾ ಬರೆಯುವುದಿಲ್ಲ. ಅಥವಾ ಅಂತಹ ವಿಷಯಗಳ ಕುರಿತು ಬರೆದರೆ ಅವರು ವಿದ್ವಾಂಸರಲ್ಲ.

ವಿದ್ವಾಂಸರು ಹೇಗೆ ಬರೆಯಬೇಕೆಂದರೆ ಅದರ ಅರ್ಥವೇನೆಂಬುದು ಯಾರಿಗೂ ತಿಳಿಯ ಕೂಡದು. ತಿಳಿದರೆ ಅದು ಶ್ರೇಷ್ಠ ಬರಹವಲ್ಲ. ಇಲ್ಲಿ ಒಂದು ಜೋಕ್ ಹೇಳಿಕೊಳ್ಳುತ್ತೇನೆ. ನಮ್ಮ ಇಂಗ್ಲಿಷ್ ಪ್ರೊ-ಸರ್ ಒಬ್ಬರಿಗೆ ಕಠಿಣ ಶಬ್ದಗಳನ್ನು ಬಳಸಿ ಮಾತನಾಡುವ ತೆವಲಿತ್ತು. ಅವರಿಗೆ ಸರಳ ಇಂಗ್ಲಿಷ್ ಶಬ್ದಗಳ ಅರ್ಥ ಕೇಳಿದರೆ ಅದಕ್ಕಿಂತ ಕಠಿಣವಾದ ಶಬ್ದವನ್ನು ಅದರ ಅರ್ಥ ವಿವರಿಸಲು ಹೇಳುತ್ತಿದ್ದರು.

ನಮಗೆಲ್ಲ ಗೊಂದಲವೋ ಗೊಂದಲ. ಈ ಇಂಗ್ಲಿಷ್ ಕಲಿಯಲು ನಮಗೆ ಸಾಧ್ಯವಿಲ್ಲ ಎಂದು ನಾವು ಭಾವಿಸಿಯೇ ಬಿಟ್ಟಿದ್ದೆವು. ಅದು ಹೋಗಲಿ. ನಾನು ಮೇಲೆ ಹೇಳಿದ ವಿದ್ವತ್ಪೂರ್ಣ ಬರವಣಿಗೆಗೆ ಉದಾಹರಣೆಯಾಗಿ ಇಲ್ಲಿ ಒಂದೆರಡು ಮಾದರಿ ವಾಕ್ಯಗಳನ್ನು ನೀಡುತ್ತಿದ್ದೇನೆ: ‘ಈ ಮೂರು ಹಿರಿ ಜೀವಗಳ ಹೆಸರಲ್ಲಿ ಸಂಶೋಧನೆ, ಸೃಜನಶೀಲತೆ ಮತ್ತು ವಿಮರ್ಶೆಗಳ ಘನತೆಯಡಗಿದೆ’.

ಇನ್ನೊಂದು ಬರಹ ಗಮನಿಸಿ: ‘ಲೋಕವನ್ನು ಪ್ರವೇಶಿಸುವ ದಾರಿಗಳು ನಮ್ಮೊಳಗಿಂದಲೇ ಆರಂಭವಾಗುತ್ತವೆ. ಅನಂತವಾಗಿ ಬೆಳೆಯುತ್ತವೆ. ನೋಟವನ್ನು ನೋಟ ಕ್ರಮವಾಗಿಸುವ ರೂಪಿಸಿಕೊಳ್ಳುವ ವಿಮರ್ಶೆಯ ದಾರಿ ವ್ಯಕ್ತಿ ಸಂವೇದನೆಯ ಹಾಗೂ ಸಾಂಸ್ಕೃತಿಕ ವಿಮರ್ಶೆ ಯ ಹದವರಿತ ಕೂಡು ದಾರಿ’. ವಿದ್ವಾಂಸರ ಬರವಣಿಗೆಯ ಪದ್ಧತಿಗೆ ಇನ್ನೊಂದು ಆಯಾಮವಿದೆ. ಅದೇನೆಂದರೆ ಮಾತು ಮಾತಿಗೂ ನೀಚೆ ಹೇಳಿದ ಹಾಗೆ, ಹೈಡೆಗ್ಗರ್ ಹೇಳಿದ ಹಾಗೆ, ಭವಭೂತಿ ಹೇಳಿದ ಹಾಗೆ, ಸಿಮಾನ್ ಡೀ ಬ್ಯೂವೇ ಹೇಳಿದ ಹಾಗೆ ಎಂದು ಉದ್ಧರಣ ಗಳನ್ನು ತರುವುದು. ಅವರೆಲ್ಲ ಯಾರೋ ಏನೋ!

ಸಾಮಾನ್ಯ ಓದುಗ ಬೇಸ್ತು ಬೀಳಬೇಕು. ಹಾಗೆಯೇ ‘ಅವರ’ ಚಾಳಿಯೆಂದರೆ ರನ್ನನ ಗದಾ ಯುದ್ಧದಲ್ಲಿ ಬರುವಂತೆ, ಆದಿಪುರಾಣದಲ್ಲಿ ಬರುವಂತೆ, ಗರುಡ ಪುರಾಣದಲ್ಲಿ, ಶಾಂತಿ ಪರ್ವದಲ್ಲಿ ಬರುವಂತೆ ಇತ್ಯಾದಿ ಅಡ್ಡ ರೆಫರೆನ್ಸ್‌ಗಳನ್ನು ನೀಡಿ ನಮ್ಮ ಬೆವರಿಳಿಸುವುದು. ಓದದಂತೆ ನಮ್ಮನ್ನು ಬೆದರಿಸುವುದು. ಓದುಗನಲ್ಲಿ ಕೀಳರಿಮೆಯ ಭಾವನೆ ಹುಟ್ಟಿಸುವುದು.

ವಿದ್ವಾಸರ ಅಪ್ಪಣೆ ಎಂದರೆ ಇಂತಹ ಬರಹಗಳಲ್ಲದವು ಶ್ರೇಷ್ಠತೆಯ ಬರಹಗಳಲ್ಲ. ಹಾಗೆಯೇ ‘ವಿದ್ವಾಂಸರ’ ಬರಹಗಳಿಗೆ ಕೆಲವು ನುಡಿಕಟ್ಟುಗಳೂ ಇವೆ. ಉದಾಹರಣೆಗೆ, ಈ ಮಾತುಗಳನ್ನು ನಾನು ಕೆಂಪುಮಸಿಯಲ್ಲಿ ಅಂಡರ್ ಲೈನ್ ಮಾಡುತ್ತ ಬರೆಯುತ್ತಿದ್ದೇನೆ.

ಅಂದರೆ ಇವು ಮಹತ್ವದ ಮಾತುಗಳು ಎಂದು ಎಂದು ನಾವು ಭಾವಿಸಿಕೊಳ್ಳಬೇಕು. ಹಾಗೆಯೇ ‘ವಿದ್ವಾಂಸರು’ ಸೂಕ್ಷ್ಮವಾಗಿ ಹೇಳುವುದೆಂದರೆ ಸರಳವಾಗಿ ಬರೆಯುವವರ ಪುಸ್ತಕಗಳು ಪುಸ್ತಕಗಳಲ್ಲ. ಬಹುಶಃ ಮುಂದೆ ಹೋಗಿ ‘ಅವರು’ ಸೂಚ್ಯವಾಗಿ ಹೇಳುವು ದೆಂದರೆ ಹಾಗೆಲ್ಲ ಎಲ್ಲ ವಿಷಯಗಳ ಕುರಿತು ಬರೆಯುವುದೇ ಶ್ರೇಷ್ಠತೆಯಲ್ಲ. (ಬರೆಯ ದಿರುವುದೇ ಶ್ರೇಷ್ಠತೆ) ಬರೆದರೆ ತಾವು ಹೇಳುವ ರೀತಿಗಳಲ್ಲಿ ಮಾತ್ರ ಬರೆಯಬೇಕು.

ವಿಶ್ವೇಶ್ವರ ಭಟ್ಟರು ಕನ್ನಡಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರೆ, ಜನರು ಆಡುವ ಮಾತನ್ನು ಅಥವಾ ಜನರಿಗೆ ಅರ್ಥವಾಗಬಹುದಾದ ಮಾತನ್ನು ನೇರವಾಗಿ ಬರೆಯುವುದು. ಜನರಿಗೆ ಅರ್ಥವಾಗುವಂತೆ ಬರೆಯುವುದನ್ನೇ ಉದ್ದೇಶವಾಗಿಟ್ಟುಕೊಳ್ಳುವುದು. ಈ ಮೂಲಕ ಕನ್ನಡ ನಾಡಿನಲ್ಲಿ ಅಪಾರ ಓದುಗರನ್ನು ಸೃಷ್ಟಿಸಿರುವವರು ವಿಶ್ವೇಶ್ವರ ಭಟ್. ಪುಸ್ತಕಗಳನ್ನು ಓದುವವರಿಲ್ಲ ಎಂದು ಕೊರಗುವವರು ಬಹುಶಃ ಭಟ್ಟರ ಕಡೆ ನೋಡಬೇಕು.