ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prof R G Hegde Column: ನದಿ ನೀರು ತಿರುವಿನ ಯೋಜನೆಗಳು ಸಲ್ಲ

ಉತ್ತರ ಕನ್ನಡ ಜಿಲ್ಲೆಯ ನದಿಗಳಲ್ಲಿ ಇಲ್ಲಿ ಸಾಕುಸಾಕಾಗಿ ಹೋಗಿ ಬೇರೆಡೆ ತಿರುಗಿಸಿ ಒಯ್ಯಬಹುದಾದಷ್ಟು ಯಥೇಚ್ಛ ಪ್ರಮಾಣದ ನೀರಿನ ಶಾಶ್ವತ ಹರಿವಿದೆಯೆಂದು ಯಾರು, ಯಾರಿಗೆ, ಯಾವ ಅಂಕಿ-ಅಂಶ ಆಧರಿಸಿ ಹೇಳಿದರು ಎನ್ನುವುದು ಅರ್ಥವಾಗುತ್ತಿಲ್ಲ. ಜಿಲ್ಲೆಯಲ್ಲಿ ಸಾಧಾರಣವಾಗಿ ಒಳ್ಳೆಯ ಮಳೆಯಾಗು ವುದು ನಿಜ.

Prof R G Hegde Column: ನದಿ ನೀರು ತಿರುವಿನ ಯೋಜನೆಗಳು ಸಲ್ಲ

-

Ashok Nayak
Ashok Nayak Jan 20, 2026 10:01 AM

ಕಳಕಳಿ

ಪ್ರೊ.ಆರ್.ಜಿ.ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಗೋಳು ಮುಗಿಯುವಂತಿಲ್ಲ! ಬರಬೇಕಾಗಿದ್ದ ಮತ್ತು ಬಂದೇ ಬಿಟ್ಟಿತು ಎಂದು ನಾವೆಲ್ಲ ಅಂದುಕೊಂಡಿದ್ದ ವಿಶ್ವವಿದ್ಯಾಲಯ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಬರಲೇ ಇಲ್ಲ. ಹುಬ್ಬಳ್ಳಿ ಅಂಕೋಲಾ, ತಾಳಗುಪ್ಪಾ, ಖಾನಾಪುರ ರೈಲ್ವೆ ಕಥೆ, ವಿಮಾನ ನಿಲ್ದಾಣ ಏನಾ ಯಿತು ಅರ್ಥವಾಗುತ್ತಿಲ್ಲ. ಹೀಗೆ ಬರಬೇಕಾದ ಯೋಜನೆಗಳು ಬಾರದೆ ಮೌನವಾಗಿ ಮುಸುಕು ಹಾಕಿಕೊಂಡು ಕುಳಿತಿವೆ.

ವ್ಯಂಗ್ಯವೆಂದರೆ ಬೇಡವಾಗಿದ್ದ, ಮುಖ್ಯವಾಗಿ ಇಲ್ಲಿಯ ನದಿ ನೀರಿನ ಕುರಿತಾದ ಯೋಜನೆಗಳು ಯಥೇಚ್ಛವಾಗಿ, ಒಂದರ ಹಿಂದೊಂದು ಬರಲಾರಂಭಿಸಿವೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಬೇಡ್ತಿ ಮತ್ತು ವರದಾ ನದಿಗಳನ್ನು ತಿರುಗಿಸುವ ಯೋಜನೆ, ಅಘನಾಶಿನಿಗೊಂದು ಅಣೆಕಟ್ಟು ಕಟ್ಟಿ ಅದರ ನೀರನ್ನು ಪೂರ್ವಕ್ಕೆ ತಿರುಗಿಸುವ ಯೋಜನೆ ಇತ್ಯಾದಿಗಳು ಗಡಿಬಿಡಿಯಲ್ಲಿ ಬಂದು ಬಂದು ನಿಂತಂತಿವೆ.

ಅವು ಯಾವ ಹಂತದಲ್ಲಿವೆ? ಅವುಗಳ ಯೋಜನಾ ವಿವರವೇನು? ಇತ್ಯಾದಿ ಪೂರ್ತಿ ವಿವರಗಳು ಬಹಿರಂಗದಲ್ಲಿ ಇಲ್ಲ ಎನಿಸುತ್ತದೆ. ಕೆಲವು ಪತ್ರಿಕಾ ವರದಿಗಳ ಪ್ರಕಾರ ಬೇಡ್ತಿ, ವರದಾ ಮತ್ತು ಅಘನಾಶಿನಿ ತಿರುವಿನ ಯೋಜನೆ 10,000 ಕೋಟಿ ರುಪಾಯಿ ಅಂದಾಜು ಖರ್ಚಿನದು ಮತ್ತು ಅದರಲ್ಲಿ 9,000 ಕೋಟಿ ರುಪಾಯಿಗಳನ್ನು ಕೇಂದ್ರ ಸರಕಾರ ಅನುದಾನವಾಗಿ ನೀಡಲಿದೆ.

ಮಿಕ್ಕ ಪಾಲು ರಾಜ್ಯದ್ದು. ಈ ನದಿಗಳ ನೀರನ್ನು ತಿರುಗಿಸಿ ಬಯಲುಸೀಮೆಯ ಕೆಲವು ಜಿಲ್ಲೆಗಳ ಕಡೆಗೆ ಮತ್ತು ಬೆಂಗಳೂರಿಗೆ ಒಯ್ಯಲಾಗುತ್ತದೆ. ಈ ಯೋಜನೆಗಳನ್ನು ವಿರೋಧಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಯಾಕೆ ವಿರೋಧಿಸಬೇಕು?: ಇಲ್ಲಿ ಕುತೂಹಲದ ಕೆಲವು ವಿಷಯಗಳಿವೆ.

ಇದನ್ನೂ ಓದಿ: Naveen Sagar Column: ಪ್ಲೀಸ್‌ ಗೆಟ್‌ ವೆಲ್‌ ಸೂನ್‌ ರೆಹಮಾನ್

ಒಂದನೆಯದು, ಉತ್ತರ ಕನ್ನಡ ಜಿಲ್ಲೆಯ ನದಿಗಳಲ್ಲಿ ಇಲ್ಲಿ ಸಾಕುಸಾಕಾಗಿ ಹೋಗಿ ಬೇರೆಡೆ ತಿರುಗಿಸಿ ಒಯ್ಯಬಹುದಾದಷ್ಟು ಯಥೇಚ್ಛ ಪ್ರಮಾಣದ ನೀರಿನ ಶಾಶ್ವತ ಹರಿವಿದೆಯೆಂದು ಯಾರು, ಯಾರಿಗೆ, ಯಾವ ಅಂಕಿ-ಅಂಶ ಆಧರಿಸಿ ಹೇಳಿದರು ಎನ್ನುವುದು ಅರ್ಥವಾಗುತ್ತಿಲ್ಲ. ಜಿಲ್ಲೆಯಲ್ಲಿ ಸಾಧಾರಣ ವಾಗಿ ಒಳ್ಳೆಯ ಮಳೆಯಾಗುವುದು ನಿಜ.

ಕೆಲ ವರ್ಷ ಭಾರಿ ಮಳೆ ಅಂದರೆ ಐದಾರು ತಿಂಗಳು ಮಳೆಯಾಗುವುದೂ ನಿಜ. ಅಂಥ ವೇಳೆ ನದಿಗಳು ತುಂಬಿ ಹರಿದು ಎಲ್ಲೆಲ್ಲೂ ನೀರು ಕಾಣಿಸುವುದು ನಿಜ. ನದಿ ತಿರುವಿನ ಯೋಜನೆಗಳನ್ನು ನಿರ್ಮಿಸಿದ ‘ಬುದ್ಧಿವಂತರು’ ಬಹುಶಃ ಇಂಥ ಸಮಯದಲ್ಲಿ ಜಿಲ್ಲೆಯನ್ನು ನೋಡಿ, ಉತ್ತರ ಕನ್ನಡದಲ್ಲಿ ಹೇರಳ ವಾಗಿ ನೀರಿದೆ ಎಂದು ಭಾವಿಸಿದಂತಿದೆ, ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂದು ಅವರಿಗೆ ಆಗ ಅನಿಸಿದ್ದಲ್ಲಿ ತಪ್ಪೇನಿಲ್ಲ.

ಹಾಗೆಯೇ ಅಂಥ ಬುದ್ಧಿವಂತರಲ್ಲಿ ಕೆಲವರು ಜಿಲ್ಲೆಯ ಅಂಚಿನಲ್ಲಿ ಕಾಣುವ ಸಮುದ್ರದ ನೀರನ್ನೂ ‘ನದಿನೀರು’ ಎಂದೇ ಲೆಕ್ಕ ಹಾಕಿದಂತಿದೆ, ಅದೇ ಲೆಕ್ಕಾಚಾರದಲ್ಲೇ ಯೋಜನೆಗಳನ್ನು ನಿರ್ಮಿಸಿ ದಂತಿದೆ. ವಾಸ್ತವವೆಂದರೆ, ಉತ್ತರ ಕನ್ನಡದ ತಲೆಯ ಮೇಲಿರುವ ಅಣೆಕಟ್ಟುಗಳು (ಉದಾಹರಣೆಗೆ ಕಾಳಿ, ಶರಾವತಿ) ಪ್ರತಿವರ್ಷ ತುಂಬುವುದಿಲ್ಲ ಅಥವಾ ಅಣೆಕಟ್ಟು ಇಲ್ಲದ ಅಘನಾಶಿನಿ, ಗಂಗಾವಳಿ ನದಿಗಳಿಗೆ ಪ್ರತಿವರ್ಷವೂ ‘ಭಾರಿ ನೆರೆ’ ಬರುವುದಿಲ್ಲ.

ಬರೀ ಕೆಂಪುನೀರು ಬಂದು ಹೋಗುವ ವರ್ಷಗಳೂ ಇವೆ. ಅಂದರೆ ಇವು ಮಳೆಯಾಧಾರಿತ ಹರಿವಿನ ನದಿಗಳೇ ವಿನಾ, ಹಿಮಾಲಯದ ನದಿಗಳಂತೆ ಸಾರ್ವಕಾಲಿಕ ಹರಿವಿನವು ಅಲ್ಲ. ಹಾಗಾಗಿ ಕಾಗದದ ಮೇಲೆ ಮಾಡುವ ‘ಸರಾಸರಿ ಹರಿವಿನ ಲೆಕ್ಕ’ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಹಾಗೆ ಲೆಕ್ಕಿಸಿ, ‘ಇಂತಿಷ್ಟು ನೀರನ್ನು ತಿರುಗಿಸಬಹುದು’ ಅಂತ ಯಾವ ‘ಬುದ್ಧಿವಂತರು’ ಲೆಕ್ಕ ಮಾಡಿದರೋ ಗೊತ್ತಿಲ್ಲ.

ಜಿಲ್ಲೆಗೆ ಕುಡಿಯುವ ನೀರು, ಕೃಷಿ ನೀರಿನ ಅಗತ್ಯತೆಯನ್ನು ಪೂರೈಸುವ ಯೋಜನೆಗಳು ಈಗಾಗಲೇ ಜಾರಿಯಾಗಿದ್ದಿದ್ದರೆ ಹೆಚ್ಚಿನ ನೀರನ್ನು ಬೇಕಾದಲ್ಲಿಗೆ ಕೊಂಡೊಯ್ಯಲು ಯಾರದೇನೂ ತಕರಾರು ಇರುತ್ತಿರಲಿಲ್ಲ. ಏಕೆಂದರೆ ಕುಡಿಯುವ ನೀರಿನ ವಿಷಯದಲ್ಲಿ ಹಾಗೆ ತಕರಾರು ಕೂಡದು. ಆದರೆ ಸಮಸ್ಯೆಯೆಂದರೆ, 6 ತಿಂಗಳು ಮಳೆ ಸುರಿದರೂ ಜಿಲ್ಲೆಯ ದೊಡ್ಡ ಭಾಗದಲ್ಲಿ ಮುಂದಿನ 6 ತಿಂಗಳು ಬಾವಿಯಲ್ಲಿ ಕೊಡ ಕಂತುವುದಿಲ್ಲ.

ಅಂದರೆ ಕನಿಷ್ಠ ಪ್ರಮಾಣದಲ್ಲಿ ಕೂಡ ನೀರಿನ ಪೂರೈಕೆ ಇರುವುದಿಲ್ಲ. ಉದಾಹರಣೆಗೆ ಶಿರಸಿ, ಯಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ, ಕಾರವಾರ, ಭಟ್ಕಳ ನಗರಗಳಲ್ಲಿ ಬಾವಿಗಳಲ್ಲಿ ಸಾಕಷ್ಟು ನೀರುರುವುದಿಲ್ಲ. ಇಲ್ಲೆಲ್ಲಾ ಬೇಸಗೆಯಲ್ಲಿ ಆಗಾಗ ಖಾಲಿ ಕೊಡದ ಪ್ರದರ್ಶನಗಳಾಗುವು ದುಂಟು. ಹಾಗೆಯೇ ಕಾರವಾರದಿಂದ ಭಟ್ಕಳದ ತನಕದ ಸಮುದ್ರ ತಟದ ನೂರಾರು ಹಳ್ಳಿಗಳಲ್ಲಿ ನೀರಿನ ತೀವ್ರ ತುಟಾಗ್ರತೆಯಾಗುತ್ತದೆ. ಎದುರಿಗೆ ಭೋರ್ಗರೆವ ಸಮುದ್ರವಿದ್ದರೂ ಕುಡಿಯಲು ನೀರಿಲ್ಲ! ಕೃಷಿಗೆ ನೀರಿನ ಪೂರೈಕೆಯನ್ನಂತೂ ಕೇಳುವುದೇ ಬೇಡ!

ಹೆಚ್ಚು ಕಡಿಮೆ ಶಿವರಾತ್ರಿ ನಂತರ ಇಡೀ ಘಟ್ಟದ ಕೆಳಗಿನ ಭಾಗ ಹಾಗೂ ಮುಂಡಗೋಡ, ಹಳಿ ಯಾಳ, ಜೋಯಿಡಾ ತಾಲೂಕಿನ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಘಟ್ಟದ ಕೆಳಗಿನ ದೊಡ್ಡ ಬೆಲ್ಟ್ ಅದ ಬಡಾಳದಿಂದ ಹಿಡಿದು ಹೊನ್ನಾವರ ಮುಖವಾಗಿ ಹೊರಟರೆ ಸಿಗುವ ದಿವಳ್ಳಿ, ಕಡ್ನೀರು, ಮೂರೂರು, ಹಟ್ಟೀಕೇರಿ ಹೊಸಾಡ, ವಡಗರೆ, ತಲಗೆರೆ, ಚಂದಾವರ, ಕೋನಳ್ಳಿ ಊರುಕೇರಿ ಹಿಡಿದು ಹೊನ್ನಾವರ ಹಾಗೆಯೇ ಮುಂದುವರಿದು ಭಟ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿಯ ಎಡ ಭಾಗದ ಪ್ರದೇಶಗಳು ನೀರಿಲ್ಲದೆ ಒಣಗುತ್ತವೆ.

ಬಲಭಾಗದಲ್ಲಿಯಂತೂ ಸಮುದ್ರ ಬಂದುಬಿಡುತ್ತದೆ. ಅಲ್ಲಿ ಉಪ್ಪುನೀರು ಮಾತ್ರ. ಬಹುಶಃ ಹಳಿಯಾಳ ತಾಲೂಕಿನ ಕೆಲ ಭಾಗಗಳನ್ನು ಬಿಟ್ಟರೆ ಕೃಷಿಗಾಗಿ ಕಾಲುವೆ, ಬಾಂದಾರ, ಕಿರು ಅಣೆಕಟ್ಟೆ ಅಥವಾ ಬೃಹತ್ ಪೈಪ್‌ಗಳ ಮೂಲಕ ನೀರಾವರಿಗೆ ಅನುವು ಮಾಡಿಕೊಡುವ ಯಾವುದೇ ಸರಕಾರಿ ಯೋಜನೆ ನೆನಪಾಗುತ್ತಿಲ್ಲ. ಹೆಚ್ಚು ಕಡಿಮೆ ಉತ್ತರ ಕನ್ನಡದ ಕೃಷಿ ಮಳೆ ಆಧಾರಿತವಾದದ್ದು.

ಇಲ್ಲವಾದರೆ ರೈತರೇ ಸಣ್ಣ ಸಣ್ಣ ಹಳ್ಳ, ಹೊಳೆ, ಬಾವಿ ಅಥವಾ ಬೋರ್ʼವೆಲ್‌ಗಳಿಂದ ಪಡೆದು ಕೊಂಡ ನೀರು (ಕೆಲವೊಮ್ಮೆ ನೀರಿನ ತುಟಾಗ್ರತೆ ಯಾವ ಮಟ್ಟಕ್ಕೆ ಹೋಗುತ್ತದೆಂದರೆ, ಇಂಥ ಪಂಪ್‌ಗಳ ಬಳಕೆಯನ್ನು ನಿಷೇಧಿಸಲಾಗುತ್ತದೆ). ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಲಭ್ಯ ವಿರುವ ನೀರನ್ನು ಹೊರಗೆ ತೆಗೆದುಕೊಂಡು ಹೋಗುವ ಮೊದಲು, ಇಲ್ಲಿನ ಕೃಷಿ ಅಗತ್ಯಗಳಿಗೆ ಬೇಕಾದ ನೀರನ್ನು ಮೊದಲು ಗುರುತಿಸಿಕೊಳ್ಳಬೇಕು; ಹಾಗೆ ಮಾಡದೆ ಹೊರಗೆ ತೆಗೆದುಕೊಂಡು ಹೋಗುವುದು ಯಾವ ರೀತಿಯಲ್ಲಿ ನ್ಯಾಯದ ಯೋಜನೆಯಾಗುತ್ತದೆ? ಜಿಲ್ಲೆಯ ಕೃಷಿಗೆ ನೀರೊದಗಿಸುವ ಜವಾ ಬ್ದಾರಿ ಸರಕಾರಗಳಿಗೆ ಇಲ್ಲವೇ? ಜಿಲ್ಲೆಯ ಕೃಷಿಕರು ಎದ್ದೇಳಬೇಕು.

ಜಿಲ್ಲೆಗೆ ಒಂದು, ಸಮಗ್ರ ಕೃಷಿ ಮತ್ತು ಕುಡಿಯುವ ನೀರಿನ ಸಮಗ್ರ ಯೋಜನೆಯ ಅಗತ್ಯವಿದೆ. ಮೇಲ್ಗಡೆ ಎತ್ತರದಲ್ಲಿರುವ ಕಾಳಿ ಅಥವಾ ಲಿಂಗನಮಕ್ಕಿ ಅಣೆಕಟ್ಟಿನಿಂದ ಜಿಲ್ಲೆಗೆ ನೀರು ಹರಿಸಿ ಇಂಥ ಯೋಜನೆಯನ್ನು ಜಾರಿಗೆ ತರಬೇಕೆಂಬ ಜನರ ಬೇಡಿಕೆ ಇನ್ನೂ ಈಡೇರಿಲ್ಲ. ಹೀಗಿರುವಾಗ, ಇಲ್ಲಿನ ನದಿಗಳ ನೀರು ತಿರುಗಿಸಿ ಬೇರೆಡೆ ಒಯ್ಯುವ ಯೋಜನೆ ಹೇಗೆ ತಾರ್ಕಿಕವಾಗುತ್ತದೆ? ಇಲ್ಲಿನ ಕಥೆ ಏನು? ಪ್ರಸ್ತುತದ ಯೋಜನಾ ವರದಿ ಸಿದ್ಧಪಡಿಸಿದ ವ್ಯಕ್ತಿಗಳು ಮುಂದೆ ಬಂದು ಈ ವಿವರಗಳನ್ನು ನೀಡಬೇಕು.

ನಮ್ಮ ಬೇಡಿಕೆ ಸರಳವಾದುದು- ಮೊದಲು ಜಿಲ್ಲೆಯ ನೀರಿನ ಅಗತ್ಯತೆಗಳನ್ನು ಪೂರೈಸುವ ಯೋಜನೆಗಳು ಬರಲಿ; ಮುಂದಿನ ವಿಷಯ ಮುಂದೆ ನೋಡೋಣ. ಉತ್ತರ ಕನ್ನಡವನ್ನು ಬಲ್ಲವರಿಗೆ ಇವೆಲ್ಲ ವಿಷಯಗಳು ತಿಳಿದಿವೆ; ಆದರೆ ಹೊರಗಿನ ಬುದ್ಧಿವಂತರ ಅವಗಾಹನೆಗಾಗಿ ಹೇಳುತ್ತಿದ್ದೇನೆ- ಸಮುದ್ರವನ್ನು ಸೇರುವ ಮೊದಲು ಇಲ್ಲಿನ ನದಿಗಳು ಸುಮಾರು 50 ಕಿ.ಮೀ.ನಷ್ಟು ದೂರವನ್ನು ಸಮುದ್ರದ ಪಾತಳಿಯಲ್ಲಿ ಅಥವಾ ತುಸುವೇ ಇಳಿಜಾರಿನಲ್ಲಿ ಕ್ರಮಿಸುತ್ತವೆ.

ಹೀಗೆ ಕೆಳಮುಖವಾಗಿ ಹರಿಯುವ ನೀರಿನ ಒತ್ತಡವು ಸಮುದ್ರದ ನೀರನ್ನು ಒಳಗೆ ಬಾರದಂತೆ ತಡೆಯುತ್ತದೆ. ಹೀಗೆ ಒಂದು ಪ್ರಮಾಣದ ಕನಿಷ್ಠ ಒತ್ತಡದಲ್ಲಿ ನದಿಗಳು ಹರಿದು ಸಮುದ್ರ ಸೇರಲೇ ಬೇಕು; ಇಲ್ಲವಾದರೆ ಸಮುದ್ರ ಒತ್ತಿಕೊಂಡು ಮೇಲೆ ಮೇಲೆ ಬಂದು ಬಿಡುತ್ತದೆ. ಮೇಲೆ ಬಂದಂತೆ, ಅದು ಎಷ್ಟು ಮೇಲೆ ಬರುತ್ತದೆಯೋ ಅಷ್ಟು ದೂರದ ತನಕ ಬಾವಿ, ಕೆರೆ ಇತ್ಯಾದಿ ಸಿಹಿನೀರಿನ ಮೂಲಗಳಲ್ಲಿ ಉಪ್ಪುನೀರು ತುಂಬಿಕೊಳ್ಳುತ್ತದೆ.

ಕ್ರಮೇಣ ಆ ಭಾಗವನ್ನೆಲ್ಲ ಉಪ್ಪಿನಂಶ ತುಂಬಿಕೊಂಡು ಭೂಮಿ ಬರಡಾಗುತ್ತದೆ. ಅಲ್ಲಿ ಏನನ್ನೂ ಬೆಳೆಯಲಾಗುವುದಿಲ್ಲ. ಮನೆ/ಕಟ್ಟಡಗಳು ಕೂಡ ಅಲ್ಲಿ ಜಡವಾಗಿ ಹೋಗುತ್ತವೆ. ವಿವರಿಸಿ ಹೇಳ ಬೇಕೆಂದರೆ, ಒಮ್ಮೆ ಮೇಲಿನಿಂದ ಹರಿಯುವ ನೀರಿನ ಒತ್ತಡ ಕಡಿಮೆಯಾದರೆ ಬಹುತೇಕ ಕರಾವಳಿ ಬಂಜರಾಗುತ್ತದೆ. ಇವೆಲ್ಲ ಬಹಳ ಸರಳ ವಿಷಯಗಳು. ಇನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ, ವನ್ಯಜೀವಿ, ಪಕ್ಷಿಸಂಕುಲ ಇಂಥವುಗಳ ಮೇಲೆ ಸಂಭವಿಸಬಹುದಾದ ಪ್ರಭಾವಗಳ ಕುರಿತು ವಿಜ್ಞಾನಿ ಗಳು ಹೇಳಬೇಕು.

ಯೋಜನಾ ವರದಿ ಸಿದ್ಧಪಡಿಸಿದ ವ್ಯಕ್ತಿಗಳು ಈ ಕುರಿತು ಏನು ಹೇಳುತ್ತಾರೆ ಎನ್ನುವುದನ್ನು ಬಹಿರಂಗ ವಾಗಲಿ. ಅಲ್ಲಿಯ ತನಕ ಯೋಜನೆ ಮುಂದುವರಿಯುವಂತಿಲ್ಲ.

(ಲೇಖಕರು ಸಂವಹನಾ ಸಮಾಲೋಚಕರು)