ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr T N Vasudevamurthy Column: ಬದಲಾವಣೆಯ ಮಾತಾಡುವವರು ನೈಜ ಬದಲಾವಣೆ ತರಲು ತಲ್ಲಣಿಸುತ್ತಾರೆ

ದೇಶದ ಮೇಲೆ 50 ವರ್ಷಗಳ ಹಿಂದೆ ಹೇರಲಾದ ‘ತುರ್ತು ಪರಿಸ್ಥಿತಿ’ಯನ್ನು ‘ಕರಾಳ ನೆನಪು’ ಎನ್ನುವವರು ಇರುವಂತೆಯೇ, ಅದನ್ನು ಸಕಾರಾತ್ಮಕವಾಗಿ ನೋಡಿದವರೂ ಉಂಟು. ಅವರಲ್ಲಿ ಆಚಾರ್ಯ ರಜನೀಶ್ (ಓಶೋ) ಕೂಡ ಒಬ್ಬರಾಗಿದ್ದರು. ತುರ್ತು ಪರಿಸ್ಥಿತಿಯ ಕುರಿತು ‘ಓಶೋ’ ಅಲ್ಲಲ್ಲಿ ನುಡಿದಿರುವ ಮಾತುಗಳ ಭಾವಾನುವಾದದ ಮುಂದುವರಿದ ಭಾಗವಿದು.

ಬದಲಾವಣೆಯ ಮಾತಾಡುವವರು ನೈಜ ಬದಲಾವಣೆ ತರಲು ತಲ್ಲಣಿಸುತ್ತಾರೆ

Profile Ashok Nayak Jul 1, 2025 8:44 AM

ಭಿನ್ನಭಾವ (ಭಾಗ-2)

ಡಾ.ಟಿ.ಎನ್.ವಾಸುದೇವಮೂರ್ತಿ

ಹಿಂಸಾಚಾರ ಉಂಟುಮಾಡಲು, ಗುಲಾಮರುಗಳನ್ನು ಹುಟ್ಟಿಸಲು ಬಯಸುವ ಮನಸ್ಸುಗಳನ್ನು ನಾನು ‘ರಾಜಕೀಯ ಮನಸ್ಸು’ ಎನ್ನುತ್ತೇನೆ. ಈ ಅರ್ಥದಲ್ಲಿ ಇಂದಿರಾ ಗಾಂಧಿ ರಾಜಕಾರಣಿಯಲ್ಲ. ಇಂದು ಆಕೆಯ ಸ್ವಭಾವಕ್ಕೆ ವಿರುದ್ಧವಾದ ಗುಣಗಳನ್ನೆಲ್ಲ ಆಕೆಗೆ ಆರೋಪಿಸಿ ಅಪಪ್ರಚಾರ ಮಾಡಲಾಗುತ್ತಿದೆ.

ಇಂದಿರಾ ಗಾಂಧಿ ನಿಜಕ್ಕೂ ರಾಜಕಾರಣಿಯಾಗಿದ್ದರೆ ಅಥವಾ ಕೇವಲ ರಾಜಕಾರಣಿಯಾಗಿದ್ದರೆ ಹೀಗೆ ಭಾರತೀಯ ಮನಸ್ಸು, ನಂಬಿಕೆಗಳಿಗೆ ವಿರುದ್ಧವಾಗಿ ಎಂದೂ ನಡೆದುಕೊಳ್ಳುತ್ತಿರಲಿಲ್ಲ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ನಾಯಕನೂ ಜನರ ವಿರುದ್ಧವಾಗಿ ನಡೆಯಲು ಬಯಸುವುದಿಲ್ಲ, ಬದಲಿಗೆ ನಾಯಕನಾದವನು ತನ್ನ ಹಿಂಬಾಲಕರು ನಂಬಿರುವ ನಂಬಿಕೆಗಳನ್ನು ಹಿಂಬಾಲಿಸುತ್ತಾನೆ.

ಈ ವ್ಯವಸ್ಥೆಯಲ್ಲಿ ಕ್ರಾಂತಿಕಾರಕವಾಗಿ ಯೋಚಿಸಿ ಜನರನ್ನು ಕೆರಳಿಸುವವರು ಅಪಾರವಾದ ಬೆಲೆ ತೆರಬೇಕಾಗುತ್ತದೆ. ಬದಲಾವಣೆಯ ಮಾತುಗಳನ್ನಾಡುವ ರಾಜಕಾರಣಿಗಳು ನಿಜವಾದ ಬದಲಾವಣೆ ತರಲು ತಲ್ಲಣಿಸುತ್ತಾರೆ. ನಾನು ಇಂದಿರಾ ಗಾಂಧಿಯನ್ನು ಬೆಂಬಲಿಸಿದ್ದಕ್ಕೆ ಕೆಲವು ಕಾರಣಗಳಿವೆ.

ಮೊದಲನೆಯದಾಗಿ ಆಕೆ “ಬರಿಮಾತಿನಿಂದ ಏನೂ ಆಗದು, ಏನನ್ನಾದರೂ ಮಾಡಿಯೇ ತೀರಬೇಕು" ಎಂದು ಸಂಕಲ್ಪಿಸಿದವಳು. ಆಕೆಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದೆ. ಹಾಗಾಗಿ ದೇಶದ ಎಲ್ಲ ಶ್ರೀಮಂತರನ್ನೂ ಎದುರು ಹಾಕಿಕೊಂಡಳು. ಬಡತನ ನಿರ್ಮೂಲನೆಗೆ ಯಾವ ಯೋಜನೆ ಯನ್ನು ಕೈಗೊಂಡರೂ ಅದೆಲ್ಲ ಕ್ರಮೇಣ ಬಡಜನರ ನಂಬಿಕೆಗಳಿಗೆ ಹಾನಿಕಾರಕವಾಗಿ ಪರಿಣಮಿಸು ತ್ತದೆ.

ಇದನ್ನೂ ಓದಿ: Roopa Gururaj Column: ಪ್ರಾಣ ಉಳಿಸುವ ಸಮಯ ಪ್ರಜ್ಞೆ

ಹಾಗಾಗಿ ಆಕೆ ಎಲ್ಲ ಬಡವರ ವಿರೋಧವನ್ನೂ ಕಟ್ಟಿಕೊಂಡಳು. ಉದಾಹರಣೆಗೆ, ಆಕೆ ಜನನ ನಿಯಂತ್ರಣವನ್ನು ಕಡ್ಡಾಯಗೊಳಿಸಿದ್ದು ಯಾವ ಭಾರತೀಯ ಮನಸ್ಸಿಗೂ ಸರಿದೋರಲಿಲ್ಲ. ಈಗ ತುರ್ತು ಪರಿಸ್ಥಿತಿಯ ತರುವಾಯ ಅಧಿಕಾರಕ್ಕೆ ಬಂದಿರುವ ಮೊರಾರ್ಜಿ ದೇಸಾಯಿ ಜನನ ನಿಯಂತ್ರಣ ಕಾಯಿದೆಯನ್ನೇ ತಿದ್ದುಪಡಿ ಮಾಡಿದ್ದಾರೆ. ನಮ್ಮ ದೇಶದಲ್ಲಿ ಈಗಾಗಲೇ ಶೇ.70ಕ್ಕೂ ಅಧಿಕ ಜನಸಂಖ್ಯೆ ಸಾಧಾರಣ ಜೀವನ ಮಟ್ಟಕ್ಕಿಂತ ಕೆಳ ಹಂತದಲ್ಲಿ ಜೀವಿಸುತ್ತಿದೆ. ಈ ವ್ಯವಸ್ಥೆ ಹೀಗೇ ಮುಂದುವರಿದರೆ ಈ ಶತಮಾನದ ಅಂತ್ಯದ ವೇಳೆಗೆ ಬಡತನದ ರೇಖೆ ಶೇ.70ನ್ನು ತಲುಪಲಿದೆ. ಯಾರು ಸತ್ತರೇನಂತೆ ನಮಗೆ ನಮ್ಮ ಅಧಿಕಾರ ಉಳಿಯುವುದು ಮುಖ್ಯ ಎಂದು ರಾಜಕಾರಣಿಗಳು ಯೋಚಿಸುತ್ತಾರೆ. ಇಂದಿರಾ ಗಾಂಧಿಯಾದರೂ ಅಂಥವರ ಪೈಕಿಯಲ್ಲ.

ಎರಡನೆಯದಾಗಿ, ಆಕೆ ಕೈಗೊಳ್ಳುತ್ತಿರುವ ಒಂದೊಂದು ಕಾರ್ಯಕ್ರಮವೂ ಯಶಸ್ವಿಯಾಗಿ ನೆರವೇರಿದೆ. ರಾಜಕಾರಣಿಯಾದವನಿಗೆ ತೋರಿಕೆ ಆಶ್ವಾಸನೆಗಳು ಮುಖ್ಯವಾಗಬೇಕೇ ವಿನಾ ಗೆಲುವು ಎಂದೂ ಸಿದ್ಧಿಸಬಾರದು, ಅದನ್ನು ಯಾವ ರಾಜಕಾರಣಿಯೂ ಸಹಿಸುವುದಿಲ್ಲ. ಒಂದು ವೇಳೆ ಆಕೆ ಸೋತರೆ ಬೇರೆಯವರಿಗೂ ಅವಕಾಶ ಸಿಗುತ್ತದೆ. ಆದರೆ ಆಕೆ ಒಂದೇ ಸಮನೆ ಗೆಲ್ಲುತ್ತಿರುವುದರಿಂದ ಇಂದು ಆಕೆಯ ರಾಜಕೀಯ ಶತ್ರುಗಳೆಲ್ಲ ಒಂದಾಗಿದ್ದಾರೆ.

ಯಾರಿಗೂ ಸೈದ್ಧಾಂತಿಕ ಬದ್ಧತೆ ಮುಖ್ಯ ಅನ್ನಿಸುತ್ತಿಲ್ಲ. ಗಾಂಧಿವಾದಿಯಾದ ಮೊರಾರ್ಜಿ ದೇಸಾಯಿ ಇಂದು ಗಾಂಧಿಯನ್ನು ಕೊಂದವರ ಪಕ್ಷದ ಬೆಂಬಲದಿಂದ ಅಧಿಕಾರವನ್ನು ಪಡೆದಿದ್ದಾರೆ. ರಾಜಕಾರಣಿಗಳಿಗೆ ಸಿದ್ಧಾಂತಗಳು ಬಿಡುವಿನ ವೇಳೆಯಲ್ಲಿ ಮನರಂಜನೆಗೆ ಉಪಯೋಗಿಸಲಾಗುವ ಆಟಿಕೆಗಳಾಗಿ ಬಿಟ್ಟಿವೆ. ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವುದು ಜೀವನ್ಮರಣದ ಪ್ರಶ್ನೆ ಯಾಗಿರುವಾಗ ಸಿದ್ಧಾಂತಗಳನ್ನು ಯಾರು ಲೆಕ್ಕಿಸುತ್ತಾರೆ!

ಇಂದು ದೇಶದ ಎಲ್ಲ ವಿಭಿನ್ನ, ವೈರುಧ್ಯಕರ ಸಿದ್ಧಾಂತಗಳೂ ಇಂದಿರಾ ವಿರುದ್ಧ ಒಂದಾಗಿ ದನಿ ಯೆತ್ತಿವೆ. ಮೂರನೆಯದಾಗಿ, ನಾನು ಕಂಡಂತೆ ಭಾರತೀಯ ನೌಕರಶಾಹಿಯು ಜಗತ್ತಿನ ಅತ್ಯಂತ ಕಳಪೆ ದರ್ಜೆಯದ್ದಾಗಿದೆ. ವರ್ಷಗಳು ಕಳೆದರೂ ಇಲ್ಲಿ ಯಾವ -ಲೂ ಮುಂದಕ್ಕೆ ಹೋಗುವುದಿಲ್ಲ, ಯಾವ ಅಭಿವೃದ್ಧಿ ಕೆಲಸಗಳೂ ಸರಿಯಾದ ಸಮಯಕ್ಕೆ ಆಗುವುದಿಲ್ಲ.

ಏನನ್ನಾದರೂ ಮಾಡಬೇಕೆಂದು ಹೋದರೆ ಅದಕ್ಕೂ ಇವರು ಅವಕಾಶ ನೀಡುವುದಿಲ್ಲ. ಇಂದಿರಾ ಗಾಂಧಿಯಾದರೂ ಈ ನೌಕರಶಾಹಿಗೆ ಬಿಸಿ ಮುಟ್ಟಿಸಿದಳು. ಹಾಗಾಗಿ ಇವರು ಆಕೆಯ ಮೇಲೆ ಸೇಡು ತೀರಿಸಿಕೊಂಡರು. ತಪ್ಪು ಅಂಕಿ-ಅಂಶಗಳನ್ನು ತೋರಿಸಿ ಚುನಾವಣೆಗಳನ್ನು ಧಾರಾಳವಾಗಿ ನಡೆಸಬಹುದು ಎಂದು ಸಲಹೆ ನೀಡಿದರು. ತಮ್ಮ ದಾಖಲೆಗಳನ್ನೇ ನಂಬಿದ್ದ ಆಕೆಯನ್ನು ದಾರಿ ತಪ್ಪಿಸಿದರು. ಈಗ ಮೊರಾರ್ಜಿ ದೇಸಾಯಿ ಅಧಿಕಾರಕ್ಕೆ ಬಂದಿರುವುದರಿಂದ ಎಲ್ಲ ನೌಕರಶಾಹಿಗೂ ಆನಂದವಾಗಿದೆ. ಸ್ವತಃ ಮೊರಾರ್ಜಿ ದೇಸಾಯಿ ನೌಕರಶಾಹಿ ಹಿನ್ನೆಲೆಯಿಂದ ಬಂದವರು, ಡೆಪ್ಯುಟಿ ಕಲೆಕ್ಟರ್ ಆಗಿದ್ದವರು.

ಹಾಗಾಗಿ ನೌಕರಶಾಹಿ ಹೇಗೆ ಕೆಲಸ ಮಾಡುತ್ತದೆ ಎಂದು ಚೆನ್ನಾಗಿಯೇ ತಿಳಿದಿರುವ ಮೊರಾರ್ಜಿ ನೌಕರಶಾಹಿಯ ವಿಷಯದಲ್ಲಿ ಎಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ಇಂಥವರನ್ನು ಎದುರು ಹಾಕಿ ಕೊಳ್ಳಬಾರದು ಎಂದು ಆತ ಚೆನ್ನಾಗಿ ಬಲ್ಲ. ನಾಲ್ಕನೆಯದಾಗಿ, ಆಕೆ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದು; ಆಕೆ ಅಪ್ರಾಮಾಣಿಕಳಾಗಿದ್ದರೆ ತುರ್ತು ಪರಿಸ್ಥಿತಿಯನ್ನು ಘೋಷಿಸದೆಯೇ ತನ್ನ ಉದ್ದೇಶಗಳನ್ನೆಲ್ಲ ನೆರವೇರಿಸಿಕೊಳ್ಳುತ್ತಿದ್ದಳು.

ಈಗ ಮೊರಾರ್ಜಿ ದೇಸಾಯಿ ಅದನ್ನೇ ಅಲ್ಲವೆ ಮಾಡುತ್ತಿರುವುದು? ಇಂದಿರಾ ಗಾಂಧಿಯಾದರೂ ಪ್ರಾಮಾಣಿಕ ಮಹಿಳೆ, ನೇರವಾಗಿಯೇ ತನ್ನ ನಿರಂಕುಶ ಆಡಳಿತವನ್ನು ಘೋಷಿಸಿಕೊಂಡಳು. ದೇಶವನ್ನು ಸರಿದಾರಿಗೆ ತರಲು ತನ್ನ ಅಧಿಕಾರವನ್ನೂ ಗಂಡಾಂತರಕ್ಕೊಡ್ಡಿದಳು. ತುರ್ತು ಪರಿಸ್ಥಿತಿಯ ವಿರುದ್ಧ ಮೊದಲು ದನಿ ಎತ್ತಿದವರು ಮಾಧ್ಯಮದವರು. ಯಾವ ರಾಜಕಾರಣಿಯೂ ಪತ್ರಕರ್ತರನ್ನು ಎದುರುಹಾಕಿಕೊಳ್ಳಲು ಇಷ್ಟಪಡುವುದಿಲ್ಲ.

ಇಂದಿರಾ ಗಾಂಧಿಯ ಅಧಃಪತನಕ್ಕೆ ಭಾರತೀಯ ಪತ್ರಕರ್ತರೇ ಮೂಲಕಾರಣ ಎಂದು ನನ್ನ ಅಭಿಪ್ರಾಯ. ‘ಪತ್ರಿಕಾ ಸ್ವಾತಂತ್ರ್ಯ’ದ ಹೆಸರಿನಲ್ಲಿ ಕಾಡು ಹರಟೆಗಳನ್ನು, ಸುಳ್ಳು ವದಂತಿಗಳನ್ನು ಸುದ್ದಿಗಳೆಂದು ಪ್ರಚಾರ ಮಾಡಲು ಇವರಿಗೆ ಅಡಚಣೆಯಾಯಿತು. ಹಾಗಾಗಿ ತುರ್ತು ಪರಿಸ್ಥಿತಿ ಯನ್ನು ಹಿಂದಕ್ಕೆ ತೆಗೆದುಕೊಂಡೊಡನೆಯೇ ಎಲ್ಲ ಭಾರತೀಯ ಪತ್ರಕರ್ತರೂ ಸೇರಿ ಇಂದಿರಾ ಗಾಂಧಿಯ ಮೇಲೆ ಸೇಡು ತೀರಿಸಿಕೊಂಡರು.

ಮನುಷ್ಯರ ಮನಸ್ಸು ಕೆಲಸ ಮಾಡುವುದೇ ಹೀಗೆ. ಇದು ಎಲ್ಲ ಚಾಣಾಕ್ಷ ರಾಜಕಾರಣಿಗಳಿಗೆ ತಿಳಿದಿರುತ್ತದೆ. ಐದನೆಯದಾಗಿ, ತನ್ನ ಮಗ ಸಂಜಯ್ ಗಾಂಧಿಯನ್ನು ರಾಜಕೀಯ ಪ್ರವೇಶ ಮಾಡಿಸಿದ್ದು. ಒಬ್ಬ ಕುಟಿಲ ಬುದ್ದಿಯ ರಾಜಕಾರಣಿ ಹೀಗೆಲ್ಲ ಬಹಿರಂಗವಾಗಿ ತನ್ನ ಮಗನೇ ತನ್ನ ಉತ್ತರಾಧಿಕಾರಿ ಎಂದು ಘೋಷಿಸದೇ ಹಿಂಬಾಗಿಲಿನಿಂದ ಅವನನ್ನು ಗದ್ದುಗೆಗೆ ತರುತ್ತಾನೆ.

ಅಷ್ಟಕ್ಕೂ ಇಂದಿರಾಳ ಈ ನಡೆಯಲ್ಲಿ ನನಗೆ ಯಾವ ತಪ್ಪೂ ಕಾಣಿಸುವುದಿಲ್ಲ. ಒಬ್ಬ ಪ್ರಧಾನ ಮಂತ್ರಿಯ ಮಗನಿಗೂ ಈ ದೇಶದ ಇತರ ಪ್ರಜೆಯಂತೆಯೇ ರಾಜಕೀಯದಲ್ಲಿ ಪ್ರವೇಶ ಮಾಡುವ ಸಮಾನ ಅಧಿಕಾರ ಇದೆ. ಅಲ್ಲದೆ ಸಂಜಯ್ ಗಾಂಧಿ ಎಲ್ಲ ದೃಷ್ಟಿಯಿಂದಲೂ ಒಬ್ಬ ಸಮರ್ಥ ನಾಯಕ ಕೂಡ. ಹಾಗೆ ನೋಡಿದರೆ ಇಂದಿರಾಳ ತಂದೆಯೇ ತನ್ನ ಮಗಳನ್ನು ಹೀಗೆ ಬಹಿರಂಗವಾಗಿ ರಾಜಕೀಯಕ್ಕೆ ಸೇರಿಸಿಕೊಳ್ಳಲಿಲ್ಲ. ಅವರು ಪ್ರಧಾನಿಯಾಗಿದ್ದಾಗ ಪತ್ರಕರ್ತರು ಒಂದೇ ಸಮನೆ “ನಿಮ್ಮ ಉತ್ತರಾಧಿಕಾರಿ ಯಾರು?" ಎಂದು ಅವರನ್ನು ಕೇಳುತ್ತಿದ್ದರು.

ಬದುಕಿರುವ ತನಕವೂ ಅವರು ಒಮ್ಮೆಯೂ ತನ್ನ ಉತ್ತರಾಧಿಕಾರಿ ಯಾರು ಎಂದು ಸೂಚ್ಯ ವಾಗಿಯೂ ಸೊತ್ತಲಿಲ್ಲ. ಹೇಳಿ ಬಿಟ್ಟರೆ ತನ್ನ ಲೆಕ್ಕಾಚಾರವೆಲ್ಲ ತಲೆಕೆಳಗಾಗುವುದೆಂದು ಅವರಿಗೆ ಗೊತ್ತಿತ್ತು. ಈ ವಿಷಯದಲ್ಲಿ ಅವರು ಇಂದಿರಾ ಗಾಂಧಿಗಿಂತ ಹೆಚ್ಚು ಚಾಣಾಕ್ಷ ರಾಜಕಾರಣಿ ಯಾಗಿದ್ದರು.

ರಾಜಕೀಯದ ಒಳಸುಳಿಗಳನ್ನೆಲ್ಲ ಬಲ್ಲವರಾಗಿದ್ದರು. ಸ್ವತಃ ಹಿಂಬಾಗಿಲಿನಿಂದ ರಾಜಕೀಯವನ್ನು ಪ್ರವೇಶಿಸಿದ ಇಂದಿರಾ ಗಾಂಧಿ ಇಂದು ತನ್ನ ಮಗನನ್ನು ಬಹಿರಂಗವಾಗಿ ಪಕ್ಷದ ನಾಯಕನನ್ನಾಗಿ ಮಾಡುವ ಮೂಲಕ ತಾನು ಒಬ್ಬ ಒಳ್ಳೆಯ ತಾಯಿ, ಕುತಂತ್ರಿ ರಾಜಕಾರಿಣಿಯಲ್ಲ ಎಂದು ರುಜುವಾತುಪಡಿಸಿದ್ದಾಳೆ. ಈ ಬೆಳವಣಿಗೆಗಳು ಕೂಡ ಆಕೆಯ ಅಧಃಪತನಕ್ಕೆ ಬಹುಮುಖ್ಯ ಕಾರಣ ವಾಗಿವೆ.

ಅಲ್ಲದೆ ಸಂಜಯ್ ಗಾಂಧಿ ಇಂದಿರಾಗಿಂತ ಹೆಚ್ಚು ಅಪಾಯಕಾರಿ. ಇಂದಲ್ಲ ನಾಳೆ ಆತ ಎಲ್ಲರನ್ನೂ ದಮನಗೈದು ನಿಸ್ಸಂಶಯವಾಗಿ ಪ್ರಧಾನಿಯ ಕುರ್ಚಿಯನ್ನು ಏರುತ್ತಾನೆ, ಆ ಸಾಮರ್ಥ್ಯ ಅವನಿಗಿದೆ. ಈ ವಿಷಯದಲ್ಲಿ ಮೊರಾರ್ಜಿ ದೇಸಾಯಿ ಮಹಾ ಕುತಂತ್ರಿ. ಅವರಿಗೂ ಒಬ್ಬ ಮಗನಿದ್ದಾನೆ, ಆದರೆ ಅವನು ಯಾವಾಗಲೂ ತೆರೆಯ ಹಿಂದೆ ನಿಂತೇ ತನ್ನ ಕೆಲಸ ಕಾರ್ಯಗಳನ್ನು ನೆರವೇರಿಸಿಕೊಳ್ಳು ತ್ತಾನೆ.

ಇನ್ನು ಕೆಲವು ರಾಜಕಾರಣಿಗಳ ಅಧಿಕಾರ ಲಾಲಸೆ ಯಾರ ಊಹೆಗೂ ನಿಲುಕುವಂಥದಲ್ಲ. ಹರಿಯಾಣದ ಮುಖ್ಯಮಂತ್ರಿ ದೇವೀಲಾಲ್ ಅಧಿಕಾರವನ್ನು ಉಳಿಸಿಕೊಳ್ಳಲು ತನ್ನ ಮಗನಿಗೇ ದ್ರೋಹ ಮಾಡಿದ. ಇಂದಿರಾ ಗಾಂಧಿಯಾದರೂ ಮಗನಿಗಾಗಿ ತನ್ನ ರಾಜಕೀಯ ಭವಿಷ್ಯವನ್ನೂ ಹಾಳುಮಾಡಿ ಕೊಂಡಿದ್ದಾಳೆ.

ಆರನೆಯದಾಗಿ, ಯಾವ ರಾಜಕಾರಣಿಯೂ ಮಾಡದ ಒಂದು ದೊಡ್ಡ ಅಚಾತುರ್ಯವನ್ನು ಆಕೆ ಮಾಡಿಕೊಂಡಿದ್ದಾಳೆ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಎಲ್ಲ ರಾಜಕಾರಣಿಗಳನ್ನೂ ಜೈಲಿಗೆ ದೂಡಿದಳು. ರಾಜಕೀಯ ಪರಿಣತನಲ್ಲದ ನನ್ನಂಥವನಿಗೂ ಇದು ತೀರಾ ಮೂರ್ಖತನದ ನಿರ್ಧಾರ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

ನಮ್ಮ ಶತ್ರುಗಳನ್ನೆಲ್ಲ ಒಟ್ಟಿಗೆ ಒಂದೇ ಜೈಲಿನಲ್ಲಿ ಇರಿಸಿದರೆ ಅವರೆಲ್ಲ ನಮ್ಮ ವಿರುದ್ಧವೇ ಒಂದಾಗಿ ಬಿಡುವುದಿಲ್ಲವೇ? ಆಕೆ ನಮ್ಮ ದೇಶದ ಚಾಣಕ್ಯ, ಇಟಲಿಯ ಮೆಖಿಯಾವೆಲ್ಲಿ ಇಂಥವ ರನ್ನು ಸರಿಯಾಗಿ ಓದಿಕೊಂಡಿಲ್ಲ ಎನಿಸುತ್ತದೆ. ರಾಜಕೀಯ ಗೊತ್ತಿರುವ ಯಾರೂ ಇಂಥ ಕೆಲಸ ಮಾಡುವು ದಿಲ್ಲ. ಅರ್ಧ ಶತ್ರುಗಳನ್ನು ಜೈಲಿನ ಹೊರಗೂ, ಇನ್ನರ್ಧ ಜನರನ್ನು ಜೈಲಿನ ಹೊರಗೂ ಇರಿಸಿದ್ದರೆ ಶತ್ರುಗಳು ಪರಸ್ಪರ ಕಿತ್ತಾಡಿಕೊಂಡಾದರೂ ಇರುತ್ತಿದ್ದರು.

ಹೀಗೆ ಕಿತ್ತಾಟ ಹುಟ್ಟಿಸಿದಾಗಲೇ ಆಳ್ವಿಕೆ ಮಾಡಲಾಗುವುದು. ಈಗ ಪ್ರತಿಯೊಬ್ಬರಿಗೂ ಇಂದಿರಾ ಒಬ್ಬಳೇ ಏಕಮಾತ್ರ ಶತ್ರುವಾಗಿ ಪರಿಣಮಿಸಿzಳೆ. ಶತ್ರುಗಳಲ್ಲಿ ಒಡಕು ಮೂಡಿಸುವ ಮೂಲಕವೇ ಕಾಂಗ್ರೆಸ್ ೩೦ ವರ್ಷಗಳ ಕಾಲ ಆಳ್ವಿಕೆ ಮಾಡಿದೆ. ನಾವೆಲ್ಲ ಕೈಜೋಡಿಸಿದರೆ ಇಂದಿರಾ ಕಥೆ ಮುಗಿದಂತೆಯೇ ಎಂಬ ಹೊಸ ಪಾಠವನ್ನು ಶತ್ರುಗಳಿಗೆಲ್ಲ 30 ವರ್ಷಗಳ ನಂತರ ಮೊದಲ ಬಾರಿಗೆ ಇಂದಿರಾ ಗಾಂಧಿ ಕಲಿಸಿಕೊಡುತ್ತಿದ್ದಾಳೆ.

ಇವೆಲ್ಲ ನುರಿತ ರಾಜಕಾರಣಿಗಳು ಎಂದೂ ಮಾಡಬಾರದ ತಪ್ಪುಗಳಾಗಿವೆ. ಏಳನೆಯದಾಗಿ, ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಂಡ ಮರುಗಳಿಗೆಯೇ, ದೇಶದ ಎಲ್ಲ ಬಡವರ, ಎಲ್ಲ ಶ್ರೀಮಂತರ ಹಾಗೂ ಎಲ್ಲ ಪತ್ರಕರ್ತರ ವಿಶ್ವಾಸವನ್ನು ಕಳೆದುಕೊಂಡ ಮರುಗಳಿಗೆಯೇ, ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದಾಳೆ. ಆಕೆಯ ಈ ನಡೆಯನ್ನು ಅರ್ಥಮಾಡಿಕೊಳ್ಳಲು ನನಗೂ ಸಾಧ್ಯವಾಗುತ್ತಿಲ್ಲ. ಚುನಾವಣೆ ಘೋಷಿಸುವ ಮುನ್ನ ಆಕೆ ನನ್ನ ಸಲಹೆಯನ್ನಾದರೂ ಕೇಳ ಬಹುದಿತ್ತು, “ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಂಡ ಮೇಲೆ ಒಂದು ವರ್ಷಗಳ ಕಾಲ ಸುಮ್ಮನಿದ್ದುಬಿಡಿ" ಎಂದು ಸಲಹೆ ನೀಡಿರುತ್ತಿದ್ದೆ.

ಒಂದು ವರ್ಷದೊಳಗೇ ತುರ್ತು ಪರಿಸ್ಥಿತಿಯಿಂದ ಇಂದಿರಾಗೆ ಹತ್ತಿಕೊಂಡಿದ್ದ ಕಳಂಕವೆಲ್ಲ ತೊಡೆದು ಹೋಗುತ್ತಿತ್ತು, ಅಷ್ಟು ಹೊತ್ತಿಗೆ ಪತ್ರಕರ್ತರ ಸಿಟ್ಟೆಲ್ಲ ತಣ್ಣಗಾಗುತ್ತಿತ್ತು ಮತ್ತು ಈಕೆಯ ರಾಜಕೀಯ ಶತ್ರುಗಳೆಲ್ಲ ಮತ್ತೆ ಪರಸ್ಪರ ಕಿತ್ತಾಡುವ ತಮ್ಮ ಹಳೆಯ ಚಾಳಿಗಳಿಗೆ ಅಂಟಿಕೊಳ್ಳು ತ್ತಿದ್ದರು. ಜನಜಂಗುಳಿಯ ನೆನಪಿನ ಶಕ್ತಿ ತುಂಬ ದುರ್ಬಲವಾದುದು. ಹೀಗೆ ತಕ್ಷಣವೇ ಸಾರ್ವಜನಿಕ ಚುನಾವಣೆಯನ್ನು ಘೋಷಿಸುವುದು ನಿಜಕ್ಕೂ ಅನರ್ಥಕಾರಕ.

ಅದಕ್ಕೆ ಕಳೆದ ಚುನಾವಣೆಯಲ್ಲಿ ಆಕೆ ಹೀನಾಯವಾಗಿ ಸೋತದ್ದು. ಈ ಎಲ್ಲ ಅಚಾತುರ್ಯಗಳ ಕಾರಣದಿಂದ ಭಾರತೀಯ ರಾಜಕೀಯ ಸಂದರ್ಭದಲ್ಲಿ ಆಕೆ ಅಷ್ಟು ನುರಿತ ರಾಜಕಾರಣಿಯಲ್ಲ ಎಂದು ಸಾಬೀತಾಗಿದೆ.

ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಂಡ ಮರುಗಳಿಗೆಯೇ ಇಂದಿರಾ ಗಾಂಧಿಯನ್ನು ಮೊರಾರ್ಜಿ ದೇಸಾಯಿ ಜೈಲಿಗೆ ತಳ್ಳಿದರು. ಇದು ಆಕೆಗೆ ಸಂದ ಬಹುಮಾನ, ಶಿಕ್ಷೆಯಲ್ಲ ಎನ್ನುತ್ತೇನೆ. ಇದು ಪ್ರತಿಯೊಬ್ಬ ಕ್ರಾಂತಿಕಾರಿಗೂ ಸಲ್ಲುವ ಶಿಕ್ಷೆಯಾಗಿದೆ. ಇದರಿಂದ ಮೊರಾರ್ಜಿಯ ನಿಜವಾದ ಬಣ್ಣ ಬಯಲಾದಂತಾಗಿದೆ. ಇಂದಿರಾಳನ್ನು ಜೈಲಿಗೆ ತಳ್ಳಿರುವ ಮೊರಾರ್ಜಿ ತಾನೆಷ್ಟು ದುರ್ಬಲ ಎಂದು ಸಾಬೀತುಪಡಿಸಿದ್ದಾರೆ.

ಇದು ಪ್ರಜಾ ಪ್ರಭುತ್ವ ವಿರೋಧಿ ಕ್ರಮವಾಗಿದೆ. ಜೈಲಿಗೆ ತಳ್ಳಿ ಆಕೆಯನ್ನು ಆರಿಸಿ ಕಳಿಸಿದ ಮತದಾರ ರಿಗೆ ಅವಮಾನ ಮಾಡಿದ್ದಾರೆ. ಆದರೆ ಮೊರಾರ್ಜಿ ದೇಸಾಯಿ ಹೀಗೆ ಜೈಲಿಗೆ ತಳ್ಳಿ ತನ್ನ ಕಡೆಯ ದಿನಗಳನ್ನು ತಾನೇ ತಂದುಕೊಂಡಿರುವುದು ನನಗೆ ನಿಜಕ್ಕೂ ಸಂತೋಷ ತಂದಿದೆ. ಏಕೆಂದರೆ ಯಾರಿಗಾದರೂ ನಿಜಕ್ಕೂ ಅನ್ಯಾಯವಾದರೆ ಸಮಾಜದ ಅನುಕಂಪ, ಸಹಾನುಭೂತಿಗಳು ಸುಲಭ ವಾಗಿ ಅವರತ್ತ ಹರಿಯುತ್ತವೆ. ಮೊರಾರ್ಜಿ ದೇಸಾಯಿ ಮಾಡಿರುವ ಕೆಲಸದಿಂದ ಇಂದಿರಾಳ ಘನತೆ ಹೆಚ್ಚಾಗಿದೆ.

ಒಮ್ಮೆ ಇಂದಿರಾ ಗಾಂಧಿಗೆ ಒಂದು ವಿಲಕ್ಷಣ ಸಲಹೆಯನ್ನು ನೀಡಿದ್ದೆ. ಇಂದಿರಾ ಗಾಂಧಿ ತಂದೆ ಯೊಂದಿಗೇ ಬೆಳೆದವಳು, ಆಕೆ ಹುಟ್ಟು ರಾಜಕಾರಣಿ. ತಂದೆ ಇದ್ದಷ್ಟೂ ಕಾಲ ಆಕೆ ಕ್ರಿಯಾಶೀಲ ರಾಜಕಾರಣದಲ್ಲಿ ತೊಡಗದೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಪ್ರತಿಯೊಬ್ಬ ರಾಜಕಾರಣಿಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು. ಅವರ ಭ್ರಷ್ಟಾಚಾರ, ಕಪ್ಪುಹಣ, ಅವರ ದೌರ್ಬಲ್ಯ ಇತ್ಯಾದಿ ಎಲ್ಲ ಮಾಹಿತಿಯನ್ನೂ ಗುಪ್ತವಾಗಿ ಸಂಗ್ರಹಿಸುತ್ತಿದ್ದಳು.

ಆಕೆ ಸಂಗ್ರಹಿಸಿದ್ದ ಆ -ಲುಗಳನ್ನು ಒಮ್ಮೆ ನನಗೂ ತೋರಿಸಿದ್ದಳು. ನೆಹರು ಸತ್ತ ಮೇಲೆ ಎಲ್ಲ ರಾಜಕಾರಣಿಗಳೂ ಆತಂಕಿತರಾದರು. ಏಕೆಂದರೆ ಅವರ ಎಲ್ಲ ಗುಪ್ತಮಾಹಿತಿಗಳೂ ಸಾಕ್ಷ್ಯಾಧಾರಗಳ ಸಮೇತ ಇಂದಿರಾ ಬಳಿ ಇದ್ದವು. ಸಾಲದ್ದಕ್ಕೆ ಆಕೆ ಬೇರೆಯವರಂತೆ ಭ್ರಷ್ಟಳಾಗಿರಲಿಲ್ಲ. ಅದೊಂದು ಗುಣವನ್ನು ಆಕೆ ತನ್ನ ತಂದೆಯಿಂದ ಕಲಿತಿದ್ದಳು.

ಜತೆಗೆ ನಾವು ಶುದ್ಧಹಸ್ತರಾಗಿದ್ದರೆ ನಮ್ಮನ್ನು ಯಾರೂ ಪ್ರಶ್ನಿಸಲಾರರು ಎಂಬುದನ್ನೂ ಕಲಿತಿದ್ದಳು. ತುರ್ತು ಪರಿಸ್ಥಿತಿಗೆ ಮುನ್ನ ಒಮ್ಮೆ ನಾನು ಇಂದಿರಾಗೆ ಒಂದು ವಿಲಕ್ಷಣವಾದ ಸಲಹೆ ನೀಡಿದ್ದೆ- “ಭಾರತ ಎಂದಾದರೂ ಜಗತ್ತಿನ ಶಕ್ತಿಶಾಲಿ ರಾಷ್ಟ್ರ ಎನಿಸಿಕೊಳ್ಳಲು ಸಾಧ್ಯವೇ? ರಷ್ಯಾ, ಅಮೆರಿಕಗಳ ಮಟ್ಟವನ್ನು ತಲುಪಲು ನಮಗೆ ಇನ್ನೂ 300 ವರ್ಷಗಳಾದರೂ ಬೇಕು. ಈ 300 ವರ್ಷಗಳಲ್ಲಿ ಅವರೇನೂ ಸುಮ್ಮನೆ ಕೂತಿರುವುದಿಲ್ಲ.

ಆಗ ಅವು 900 ವರ್ಷಗಳಷ್ಟು ಮುಂದುವರಿದಿರುತ್ತವೆ" ಎಂದೆ. ಆಗ ಇಂದಿರಾ “ನಿಮ್ಮ ಮಾತು ನಿಜ" ಎಂದಿದ್ದಳು. ನಿಜವೆಂದು ತಿಳಿದ ಮೇಲೆ ಈ ಅಣುಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳೇಕೆ? ಈ ಪ್ರಯತ್ನಗಳಿಂದ ಇಂದಲ್ಲ ನಾಳೆ ನಾವು ಬೇರೆ ದೇಶಗಳನ್ನು ಮೀರಿಸಬವು ಎಂದಾದರೆ ಗಟ್ಟಿ ಮನಸ್ಸು ಮಾಡಬಹುದು. ಜನ ಹಸಿವು, ರೋಗಗಳಿಂದ ಇನ್ನೂ ಕೆಲಕಾಲ ಯಾತನೆಪಟ್ಟರೆ ಪಡಲಿ ಎಂದು ನಿರ್ಧರಿಸಬಹುದು.

ಹೇಗೂ ಸಾವಿರಾರು ವರ್ಷಗಳಿಂದಲೂ ನಾವು ಯಾತನೆಗೆ ಒಗ್ಗಿಬಿಟ್ಟಿದ್ದೇವೆ. ಆದರೆ ನಮಗೆ ಯಾರೊಂದಿಗೂ ಪೈಪೋಟಿ ಮಾಡುವ ಶಕ್ತಿ ಇಲ್ಲದ ಮೇಲೆ ಭಾರತವನ್ನು ಒಂದು ಅಂತಾ ರಾಷ್ಟ್ರೀಯ ದೇಶವೆಂದು ಘೋಷಿಸಬಾರದೇಕೆ? “ನಮ್ಮ ದೇಶಕ್ಕೆ ಯಾವುದೇ ಗಡಿರೇಖೆಯಿಲ್ಲ, ಇಲ್ಲಿ ಪ್ರವೇಶಿಸಲು ಯಾರ ಅನುಮತಿಯನ್ನೂ ಪಡೆಯಬೇಕಾದ ಅಗತ್ಯವಿಲ್ಲ ಎಂದು ವಿಶ್ವ ಸಮುದಾ ಯಕ್ಕೆ ಆಹ್ವಾನ ನೀಡಿದರೆ ಏನಾಗುತ್ತದೆ. ನಾವು ಇನ್ನೂ ಹೆಚ್ಚು ಬಡವರಾಗಲಂತೂ ಸಾಧ್ಯವಿಲ್ಲ.

ಒಂದು ದೇಶ ತಾನು ವಿಶ್ವಸಮುದಾಯದಿಂದ ಪ್ರತ್ಯೇಕವಲ್ಲ ಎಂದು ಘೋಷಿಸಿಕೊಂಡರೆ ಅದು ನಿಜಕ್ಕೂ ಒಂದು ಚರಿತ್ರಾರ್ಹ ಘಟನೆಯಾಗುತ್ತದೆ. ಈಗ ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ಅದನ್ನು ತಡೆಯುವ ಶಕ್ತಿ ನಮಗಿಲ್ಲ. ಅಂದ ಮೇಲೆ ಮಿಲಿಟರಿ ವ್ಯವಸ್ಥೆಯನ್ನೇ ವಿಸರ್ಜಿಸಿ ಬಿಡಬಾರದೇ? ನಮ್ಮ ಸೈನಿಕರನ್ನು ಹೊಲ ಗದ್ದೆಗಳಿಗೆ, ಕಾರ್ಖಾನೆಗಳಿಗೆ ದುಡಿಯಲು ಕಳುಹಿ ಸೋಣ" ಎಂದೆ.

ಆಗ ಆಕೆ “ಹೀಗೆಲ್ಲ ಮಾಡಿದರೆ ಯಾರಾದರೂ ದಾಳಿ ನಡೆಸಿ ನಾವು ಮತ್ತೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದಿಲ್ಲವೇ?" ಎಂದು ಕೇಳಿದಳು. “ಈಗಲೂ ಯಾರು ಯಾವ ಕ್ಷಣದದರೂ ದಾಳಿ ನಡೆಸಬಹುದಲ್ಲವೇ? ಒಂದು ವೇಳೆ ಆಗ ಯಾರಾದರೂ ನಮ್ಮ ಮೇಲೆ ದಾಳಿ ನಡೆಸಲು ಮುಂದಾ ದರೆ ಅವರು ಇಡೀ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಏಕೆಂದರೆ ಆಗ ಭಾರತವು ಇಡೀ ವಿಶ್ವಸಮುದಾಯಕ್ಕೆ ಸೇರಿದ ದೇಶವಾಗಿರುತ್ತದೆ.

ಇಡೀ ವಿಶ್ವವೇ ನಮ್ಮ ಸ್ನೇಹಿತರಾಗಿರುತ್ತಾರೆ. ಈಗಲಾದರೂ ನಾವು ಯಾರ ದಾಳಿಗೂ ಸುಲಭವಾಗಿ ತುತ್ತಾಗುವ ಪರಿಸ್ಥಿತಿಯಲ್ಲಿದ್ದೇವೆ. ಚೀನಾ ಈಗಾಗಲೇ ನಮ್ಮ ಮೇಲೆ ಆಕ್ರಮಣ ನಡೆಸಿ ಹಿಮಾಲಯದ ತಪ್ಪಲಿನ ಸಾವಿರಾರು ಚದರ ಕಿ.ಮೀ. ಪ್ರದೇಶವನ್ನು ವಶಪಡಿಸಿಕೊಂಡಿತು. ನಿಮ್ಮ ತಂದೆ ಬದುಕಿದ್ದಾಗ ‘ಅದೊಂದು ಬಂಜರು ಪ್ರದೇಶ, ನಮಗೆ ಅದರಿಂದ ಉಪಯೋಗವಿಲ್ಲ’ ಎಂದು ಸಂಸತ್‌ನಲ್ಲಿ ಉತ್ತರಿಸಿದ್ದರು.

ಅದು ನಿಜಕ್ಕೂ ಬಂಜರು ಪ್ರದೇಶವಾಗಿದ್ದರೆ ಅವರು ದಾಳಿ ನಡೆಸಿದಾಗ ನಾವು ಯುದ್ಧ ಮಾಡಿ ದ್ದೇಕೆ? ಅವರು ದಾಳಿ ಮಾಡುವ ಸೂಚನೆ ಸಿಗುತ್ತಿದ್ದಂತೆಯೇ ‘ಆ ಭೂಮಿಯನ್ನು ನಿಮಗೆ ಉಡುಗೊರೆಯನ್ನಾಗಿ ನೀಡುತ್ತಿದ್ದೇವೆ, ಅದೊಂದು ಬಂಜರು ಭೂಮಿ, ಸಾಧ್ಯವಾದರೆ ಏನಾದರೂ ಬೆಳೆದುಕೊಳ್ಳಿ’ ಎಂದು ಘೋಷಿಸಬಹುದಿತ್ತಲ್ಲ!

ಸೋತು ಕಳೆದುಕೊಳ್ಳುವುದಕ್ಕಿಂತ ದಾನ ಮಾಡಿ ಬರಿಗೈಯಾಗುವುದು ಹೆಚ್ಚು ಉದಾತ್ತವಾದುದು. ಸದ್ಯಕ್ಕಂತೂ ನಮ್ಮ ಮಿಲಿಟರಿ ಶಕ್ತಿ ಎಲ್ಲ ದೃಷ್ಟಿಯಿಂದಲೂ ನಮ್ಮ ಪಾಲಿಗೆ ನಿರುಪಯುಕ್ತವಾಗಿದೆ. ಮಹಾಯುದ್ಧದ ಸಮಯದಲ್ಲಿ ಜರ್ಮನಿ-ಜಪಾನ್ ನಂಥ ದೇಶಗಳ ಮಿಲಿಟರಿ ಶಕ್ತಿಗಳೂ ನಿರುಪಯುಕ್ತವೆಂದು ಸಾಬೀತಾಗಿದೆ. ಹಾಗಾಗಿ ನೀವು ನನ್ನ ಸಲಹೆಯನ್ನು ಪರಿಗಣಿಸಿದರೆ ಜಗತ್ತಿನ ಇತಿಹಾಸದ ನಿಮ್ಮ ಹೆಸರು ಶಾಶ್ವತವಾಗುವುದು.

ಮಾತ್ರವಲ್ಲ, ನಿಮ್ಮ ನಿರ್ಧಾರ ಎಲ್ಲ ದೃಷ್ಟಿಯಿಂದಲೂ ತುಂಬ ವಿವೇಕಯುತವಾದುದು ಎನಿಸಿಕೊಳ್ಳುವುದು. ಆಗ ಭಾರv ವಿಶ್ವಗುರುವಿನ ಸ್ಥಾನದಲ್ಲಿದೆ ಎಂದು ಬಾಯಿಮಾತಿನಲ್ಲಿ ಹೇಳುವು ದನ್ನು ಬಿಟ್ಟು ಕ್ರಿಯೆಯಲ್ಲಿಯೂ ತೋರಿಸಿದಂತಾಗುತ್ತದೆ. ಇಂದು ಅಂಥ ನಿರ್ಧಾರವನ್ನು ತೆಗೆದುಕೊಳ್ಳುವ ಕಾಲ ಪಕ್ವವಾಗಿದೆ.

ಈ ನಕ ಜಗತ್ತಿನ ಯಾವ ದೇಶವೂ ಈ ಧೈರ್ಯ ಮಾಡಿಲ್ಲ. ಕೂಡಲೇ ಈ ವಿಷಯವನ್ನು ವಿಶ್ವ ಸಂಸ್ಥೆಯ ಗಮನಕ್ಕೆ ತನ್ನಿ. ಆಗ ವಿಶ್ವಸಂಸ್ಥೆ ತನ್ನ ಎಲ್ಲ ಕಚೇರಿಗಳನ್ನೂ ನಿಸ್ಸಂಶಯವಾಗಿ ತಟಸ್ಥ ದೇಶವಾದ ಭಾರತಕ್ಕೇ ಸ್ಥಳಾಂತರಿಸುತ್ತದೆ. ನಮ್ಮೆಲ್ಲ ಮಿಲಿಟರಿ ಶಕ್ತಿಯೂ ವಿಶ್ವಶಾಂತಿಯ ಸ್ಥಾಪನೆಗೆ ವಿನಿಯೋಗವಾಗಲಿ ಎಂದು ಹೇಳಿ ಇಡೀ ರಕ್ಷಣಾ ಇಲಾಖೆಯನ್ನು ವಿಶ್ವಸಂಸ್ಥೆಯ ಕೈಗೊಪ್ಪಿಸಿ" ಎಂದೆ.

ಆಕೆ “ನಿಮ್ಮ ಅಭಿಪ್ರಾಯಗಳು ಸರಿ ಕಂಡರೂ ಎಲ್ಲಾ ಸ್ವಲ್ಪ ಅತಿರೇಕದ್ದು ಎನಿಸುತ್ತದೆ. ಇಂಥದಕ್ಕೆಲ್ಲ ನನಗಂತೂ ಧೈರ್ಯವಿಲ್ಲ. ನಿಮ್ಮಂಥವರಾದರೆ ಸುಲಭವಾಗಿ ಮಾಡಬಲ್ಲಿರಿ. ಈ ರಾಜಕೀಯ ಚದುರಂಗದಾಟದಲ್ಲಿ ಪಾಲ್ಗೊಂಡು ನೀವೇ ಪ್ರಧಾನಿಯ ಕುರ್ಚಿ ಏರಿ. ನಾನು ಎಲ್ಲ ರೀತಿಯ ಬೆಂಬಲ ನೀಡುತ್ತೇನೆ.

ನನ್ನಂಥವಳೇನಾದರೂ ಈ ಬಗೆಯ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಿಳಿದರೆ ಪ್ರತಿಸ್ಪರ್ಧಿ ಗಳು ಕೂಡಲೆ ನನ್ನ ಕಾಲೆಳೆದು ಕುರ್ಚಿಯನ್ನು ಆಕ್ರಮಿಸುತ್ತಾರೆ" ಎಂದಳು. ಆದರೆ ನನಗೆ ಆ ಚದುರಂಗದಾಟವನ್ನು ಆಡುವ ವ್ಯವಧಾನವಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಅಕಸ್ಮಾತ್ತಾಗಿ ನಾನು ಆಕೆಯ ಸ್ಥಾನದಲ್ಲಿ ಇದ್ದಿದ್ದರೆ ನಿಸ್ಸಂಶಯವಾಗಿ ನನ್ನ ಅಭಿಪ್ರಾಯಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದೆ.

ಅವಕಾಶವಾದಿಗಳು ನನ್ನನ್ನು ಕುರ್ಚಿಯಿಂದ ಕೆಳಗೆ ಇಳಿಸಿದ್ದರೂ, ನನ್ನ ಪ್ರಯತ್ನ ನಿಷ್ಫಲವಾಗಿ ದ್ದರೂ ಒಬ್ಬ ವ್ಯಕ್ತಿ ವಿಶ್ವಶಾಂತಿಗಾಗಿ ಇಂಥದೊಂದು ಪ್ರಯತ್ನ ಮಾಡಿದ ಎಂದು ಇತಿಹಾಸದಲ್ಲಿ ದಾಖಲಾಗುತ್ತಿತ್ತು. ಆಮೇಲೆ ಇಂದಿರಾ ಗಾಂಧಿ ನನ್ನನ್ನು ತುಂಬ ಸಲ ಭೇಟಿ ಮಾಡಬೇಕು ಎಂದು ಕೊಂಡರೂ ಆಕೆಗೆ ಸಾಧ್ಯವಾಗಲಿಲ್ಲ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಆತನನ್ನು ಭೇಟಿ ಮಾಡದಿರುವುದೇ ಒಳ್ಳೆಯದು ಎಂದು ಆಕೆಯ ಆಪ್ತ ಸಲಹೆಗಾರರು ಸೂಚಿಸಿದರಂತೆ.

(ಲೇಖಕರು ಸಹ ಪ್ರಾಧ್ಯಾಪಕರು, ಆದಿಚುಂಚನಗಿರಿ ವಿಶ್ವವಿದ್ಯಾಲಯ)