ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: 26,000 ಅಂಕಗಳ ಗಡಿ ಮುಟ್ಟಿದ ನಿಫ್ಟಿ; ಸೆನ್ಸೆಕ್ಸ್‌ 567 ಅಂಕ ಜಿಗಿತ

Share Market: ಇಂದು ಮಧ್ಯಂತರ ವಹಿವಾಟನಲ್ಲಿ ನಿಫ್ಟಿ 26,000 ಅಂಕಗಳ ಗಡಿಯನ್ನು ದಾಟಿದೆ. ದಿನದ ಕೊನೆಯಲ್ಲಿ ಸೆನ್ಸೆಕ್ಸ್‌ 567 ಅಂಕಗಳ ಏರಿಕೆ ದಾಖಲಿಸಿ 84,779 ಕ್ಕೆ ಸ್ಥಿರವಾಯಿತು. ನಿಫ್ಟಿ 170 ಅಂಕ ಏರಿಕೊಂಡು 25,967ಕ್ಕೆ ಸ್ಥಿರವಾಯಿತು. ಈ ಕುರಿತ ವಿವರ ಇಲ್ಲಿದೆ.

26,000 ಅಂಕಗಳ ಗಡಿ ಮುಟ್ಟಿದ ನಿಫ್ಟಿ; ಸೆನ್ಸೆಕ್ಸ್‌ 567 ಅಂಕ ಜಿಗಿತ

ಸಾಂದರ್ಭಿಕ ಚಿತ್ರ. -

Profile Siddalinga Swamy Oct 27, 2025 7:48 PM

ಕೇಶವ ಪ್ರಸಾದ್‌ ಬಿ.

ಮುಂಬೈ: ಸೋಮವಾರ ಮಧ್ಯಂತರ ವಹಿವಾಟನಲ್ಲಿ ನಿಫ್ಟಿ 26,000 ಅಂಕಗಳ ಗಡಿಯನ್ನು ದಾಟಿದೆ. ದಿನದ ಕೊನೆಯಲ್ಲಿ ಸೆನ್ಸೆಕ್ಸ್‌ (Stock Market) 567 ಅಂಕಗಳ ಏರಿಕೆ ದಾಖಲಿಸಿ 84,779ಕ್ಕೆ ಸ್ಥಿರವಾಯಿತು. ನಿಫ್ಟಿ 170 ಅಂಕ ಏರಿಕೊಂಡು 25,967ಕ್ಕೆ ಸ್ಥಿರವಾಯಿತು. ಮೂರು ಅಂಕ ಗಳಿಸಿದ್ದರೆ ಕ್ಲೋಸಿಂಗ್‌ ರೇಟ್‌ ಕೂಡ 26 ಸಾವಿರ ದಾಟುತ್ತಿತ್ತು. ಅಮೆರಿಕದಲ್ಲಿ ಹಣದುಬ್ಬರ ಇಳಿಕೆಯಾಗುತ್ತಿರುವುದು, ಫೆಡರಲ್‌ ರಿಸರ್ವ್‌ ಬಡ್ಡಿ ದರ ಇಳಿಸುವ ನಿರೀಕ್ಷೆ, ಅಮೆರಿಕ-ಚೀನಾ ವ್ಯಾಪಾರ ಮಾತುಕತೆಯ ಪ್ರಗತಿ ಮೊದಲಾದ ಕಾರಣಗಳಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರುತ್ತಿದೆ.

ಇಂದಿನ ಸ್ಟಾಕ್‌ ಮಾರ್ಕೆಟ್‌ ಟ್ರೆಂಡ್‌ ಬಗ್ಗೆ ಪ್ರಮುಖ ಅಂಶಗಳು

ಮೊದಲನೆಯದಾಗಿ ಸೋಮವಾರ ಏಕೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಆಗಿದೆ ಎನ್ನುವುದರ ಕುರಿತು ನೋಡೋಣ. ಜಿಯೊಜಿತ್‌ ಇನ್ವೆಸ್ಟ್‌ಮೆಂಟ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್‌ ಪ್ರಕಾರ, ಅಮೆರಿಕ-ಚೀನಾ ವ್ಯಾಪಾರ ಮಾತುಕತೆಯಲ್ಲಿ ಉಂಟಾಗಿರುವ ಪ್ರಗತಿಯೇ ಷೇರು ಮಾರುಕಟ್ಟೆ ಸೂಚ್ಯಂಕಗಳ ಚೇತರಿಕೆಗೆ ಕಾರಣ.

ಅಮೆರಿಕದಲ್ಲಿ ಗ್ರಾಹಕ ದರ ಅಧಾರಿತ ಹಣದುಬ್ಬರ ನಿರೀಕ್ಷೆಗೂ ಮೀರಿ ಇಳಿಕೆಯಾಗಿದೆ. ಇದರ ಪರಿಣಾಮ ಈ ವಾರ ಫೆಡರಲ್‌ ರಿಸರ್ವ್‌ ಬಡ್ಡಿ ದರ ಇಳಿಸುವ ನಿರೀಕ್ಷೆ ಮೂಡಿದೆ. ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ. ಭಾರತದಲ್ಲೀ ಆರ್ಥಿಕ ಸುಧಾರಣಾ ನೀತಿಗಳಿಂದ ಅನುಕೂಲವಾಗುವ ವಿಶ್ವಾಸವಿದೆ.



ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳು

ನಿಫ್ಟಿ 50 ಷೇರುಗಳಲ್ಲಿ 30 ಷೇರುಗಳು ಲಾಭ ಗಳಿಸಿದೆ. ಗ್ರಾಸಿಮ್‌ 3.22% ಲಾಭ ಗಳಿಸಿದೆ. ಎಸ್‌ಬಿಐ ಲೈಫ್‌ 3.16% ಏರಿಕೆ ದಾಖಲಿಸಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಕೂಡ ಲಾಭ ಗಳಿಸಿದೆ.

ನಿಫ್ಟಿ 50ಯಲ್ಲಿ ಇವತ್ತು ನಷ್ಟಕ್ಕೀಡಾದ ಷೇರುಗಳು

ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಬಿಇಎಲ್‌, ಬಜಾಜ್‌ ಫೈನಾನಸ್‌, ಅದಾನಿ ಎಂಟರ್‌ ಪ್ರೈಸಸ್‌ ಸ್ಟಾಕ್ಸ್‌ ನಷ್ಟಕ್ಕೀಡಾಗಿದೆ. ಸೆಕ್ಟರ್‌ಗಳ ಪೈಕಿ 9 ಸೆಕ್ಟರ್‌ಗಳು ಲಾಭ ಗಳಿಸಿವೆ. ನಿಫ್ಟಿ ಮೀಡಿಯಾ, ನಿಫ್ಟಿ ಫಾರ್ಮಾ, ನಿಫ್ಟಿ‌ ಪಿಎಸ್‌ಯು ಬ್ಯಾಂಕ್ ಲಾಭ ಗಳಿಸಿದೆ.

ಇಂದು ಹೆಚ್ಚು ಸಕ್ರಿಯವಾಗಿದ್ದ ಷೇರುಗಳು

ವಾಲ್ಯೂಮ್‌ ದೃಷ್ಟಿಯಿಂದ ಇವತ್ತು ವೊಡಾಫೋನ್‌ ಐಡಿಯಾ ಹೆಚ್ಚು ಸಕ್ರಿಯವಾಗಿತ್ತು. 4% ಏರಿಕೆ ದಾಖಲಿಸಿತು. ಕಂಪನಿಯು ದೂರಸಂಪರ್ಕ ಇಲಾಖೆಗೆ ಕೊಡಬೇಕಿರುವ 5,000 ಕೋಟಿ ರುಪಾಯಿ ಎಜಿಆರ್‌ ಶುಲ್ಕದ ಬಗ್ಗೆ ಮರು ಪರಿಶೀಲಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಅನಿಮತಿ ನೀಡಿರುವುದು ಇದಕ್ಕೆ ಕಾರಣ. ಯಸ್‌ ಬ್ಯಾಂಕ್‌, ಅರಿಹಂತ್‌ ಕ್ಯಾಪಿಟಲ್‌, ಸೌತ್‌ ಇಂಡಿಯನ್‌ ಬ್ಯಾಂಕ್‌, ಟಾಟಾ ಗೋಲ್ಡ್‌ ಷೇರುಗಳೂ ಹೆಚ್ಚು ಸಕ್ರಿಯವಾಗಿತ್ತು.

ಹಟ್ಸನ್‌ ಅಗ್ರೊ, ಪಿಎಸ್‌ಒಇ ಪ್ರಾಜೆಕ್ಟ್ಸ್‌, ಎಸ್ಸಾರ್‌ ಶಿಪ್ಪಿಂಗ್‌, ಫ್ಯಾನ್‌ ಟೆಕ್‌ ಷೇರುಗಳ ದರದಲ್ಲಿ 10%ಗೂ ಹೆಚ್ಚು ಏರಿಕೆ ಆಯಿತು. 89 ಷೇರುಗಳು 52 ವಾರಗಳಲ್ಲಿನ ಗರಿಷ್ಠ ಎತ್ತರಕ್ಕೇರಿದವು. ಅವುಗಳಲ್ಲಿ ಎಬಿ ಕ್ಯಾಪಿಟಲ್‌, ಬ್ಯಾಂಕ್‌ ಆಫ್‌ ಬರೋಡಾ, ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಇತ್ತು. 57 ಷೇರುಗಳು 52 ವಾರಗಳಲ್ಲಿನ ಕನಿಷ್ಠ ಮಟ್ಟಕ್ಕೆ ಇಳಿಯಿತು. ಅದರಲ್ಲಿ ಅಪೊಲೊ ಪೈಪ್ಸ್‌, ಜಾರೊ ಇನ್‌ಸ್ಟಿಟ್ಯೂಟ್‌, ಸ್ಪೆನ್ಸರ್ಸ್‌ ರಿಟೇಲ್‌ ಇವೆ. ಬಿಎಸ್‌ಇಯಲ್ಲಿ 2,178 ಷೇರುಗಳು ಲಾಭ ಗಳಿಸಿದರೆ, 2,114 ಷೇರುಗಳು ನಷ್ಟ ಅನುಭವಿಸಿದವು.

ನಿಫ್ಟಿ ಇವತ್ತು ಪ್ರಬಲ ಆರಂಭದಲ್ಲಿ ವಹಿವಾಟು ನಡೆಸಿತು. ದಿನದುದ್ದಕ್ಕೂ ಸೈಡ್‌ ವೇಸ್‌ ಟ್ರೆಂಡ್‌ ಇತ್ತು. ಎನ್‌ಎಸ್‌ಇ ಫ್ಯೂಚರ್‌ ಆಂಡ್‌ ಆಪ್ಷನ್ಸ್‌ ಸಮೀಪದಲ್ಲಿರುವುದು ಇದಕ್ಕೆ ಕಾರಣವಾಗಿತ್ತು. ತಜ್ಞರ ಪ್ರಕಾರ ನಿಫ್ಟಿ ಶೀಘ್ರದಲ್ಲಿ 25,500 ಅಂಕಗಳ ತನಕ ಏರುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ | Invest Karnataka: ಕರ್ನಾಟಕದಲ್ಲಿ 13 ಕಂಪನಿಗಳಿಂದ ₹27 ಸಾವಿರ ಕೋಟಿ ಹೂಡಿಕೆಗೆ ಅಸ್ತು: 8 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ಟಾಟಾ ಮೋಟಾರ್ಸ್‌ ಡಿಮರ್ಜರ್‌ ಅಥವಾ ವಿಭಜನೆಯಾದ ಬಳಿಕ ಟಿಎಂಎಲ್ ಕಮರ್ಶಿಯಲ್‌ ವೆಹಿಕಲ್ಸ್‌ ಕಂಪನಿಯ ಷೇರುಗಳು ಷೇರುದಾರರಿಗೆ ವಿತರಣೆಯಾಗಿದೆ. ಆದರೆ ಟ್ರೇಡಿಂಗ್‌ ಅನ್ನು ಬಿಎಸ್‌ ಇ ಮತ್ತು ಎನ್‌ಎಸ್‌ಇ ಅನುಮೋದನೆಗಾಗಿ ತಡೆಹಿಡಿಯಲಾಗಿದೆ. ಲಿಸ್ಟ್‌ ಆದ ಬಳಿಕ ಈ ಷೇರುಗಳನ್ನು ಟ್ರೇಡ್‌ ಮಾಡಬಹುದು. ಬ್ರೋಕರೇಜ್‌ಗಳ ಪ್ರಕಾರ ಟಾಟಾ ಮೋಟಾರ್ಸ್‌ ಕಂಪನಿಯನ್ನು ಪ್ಯಾಸೆಂಜರ್‌ ಮತ್ತು ಕಮರ್ಶಿಯ್‌ ವಾಹನಗಳು ಎಂಬುದಾಗಿ ಎರಡಾಗಿ ವಿಭಜಿಸಿರುವುದು ಷೇರುದಾರರಿಗೂ ಒಳ್ಳೆಯದೇ. ಭವಿಷ್ಯದಲ್ಲಿ ಕಂಪನಿಯ ಬೆಳವಣಿಗೆಗೆ ಅನುಕೂಲಕರ. ಷೇರುಗಳ ಭವಿಷ್ಯಕ್ಕೂ ಉತ್ತಮ. ಅನೇ ಷೇರುದಾರರು ಟಿಎಂಎಲ್‌ ಕಮರ್ಶಿಯಲ್‌ ವೆಹಿಕಲ್ಸ್‌ ಲಿಮಿಟೆಡ್‌ ಷೇರುಗಳು ತಮ್ಮ ಡಿಮಾಟ್‌ ಖಾತೆಗೆ ಬಂದಿದ್ದರೂ, ತಮ್ಮ ಟ್ರೇಡಿಂಗ್‌ ಪ್ಲಾಟ್‌ ಫಾರ್ಮ್‌ನಲ್ಲಿ ಕಾಣಿಸುತ್ತಿಲ್ಲ ಎಂದು ಗಮನಿಸಿದ್ದಾರೆ. ಆದರೆ ಆತಂಕ ಪಡಬೇಕಿಲ್ಲ. ಲಿಸ್ಟ್‌ ಆದ ಮೇಲೆ ಕಾಣಿಸಲಿದೆ. ಟ್ರೇಡ್‌ ಕೂಡ ಮಾಡಬಹುದು. ಈ ಲಿಸ್ಟಿಂಗ್‌ ಪ್ರಕ್ರಿಯೆಎ ಎರಡು ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಷೇರುಗಳು ಡಿಮ್ಯಾಟ್‌ ಖಾತೆಯಲ್ಲಿ ಇದ್ದರೂ ಟ್ರೇಡ್‌ ಮಾಡಲು ನಿರ್ಬಂಧ ಇರುತ್ತದೆ.