Prithvi Shaw: ರಣಜಿ ಟ್ರೋಫಿ ಟೂರ್ನಿಯ ಮೂರನೇ ವೇಗದ ದ್ವಿಶತಕ ಬಾರಿಸಿದ ಪೃಥ್ವಿ ಶಾ!
Prithvi Shaw Scored Double Century: ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಪ್ರಯತ್ನದಲ್ಲಿರುವ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಇದೀಗ ನಡೆಯುತ್ತಿರುವ 2025-26ರ ರಣಜಿ ಟ್ರೋಫಿ ಟೂರ್ನಿಯಲ್ಲಿ ದ್ವಿಶತಕ ಬಾರಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಈ ಇನಿಂಗ್ಸ್ ಆಡಿದ್ದಾರೆ.
ಚಂಡೀಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಪೃಥ್ವಿ ಶಾ. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025-26ರ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯಲ್ಲಿ ಭಾರತ ಅಂಡರ್-19 ತಂಡದ ಮಾಜಿ ನಾಯಕ ಪೃಥ್ವಿ ಶಾ (Prithvi shaw) ಭರ್ಜರಿ ಪ್ರದರ್ಶನವನ್ನು ತೋರುತ್ತಿದ್ದಾರೆ. ಮುಂಬೈ ತಂಡವನ್ನು ತೊರೆದು ಮಹಾರಾಷ್ಟ್ರ (Maharashtra) ಪರ ರಣಜಿ ಟ್ರೋಫಿ ಆಡುತ್ತಿರುವ ಪೃಥ್ವಿ ಶಾ, ಚಂಡೀಗಢ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದಾರೆ. ಆ ಮೂಲಕ ಅವರು ರಣಜಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿಯೇ ಮೂರನೇ ಅತ್ಯಂತ ವೇಗದ ದ್ವಿಶತಕವನ್ನು ಬಾರಿಸಿದ್ದಾರೆ. ಇದರೊಂದಿಗೆ ಅವರು ಬಿಸಿಸಿಐ ಆಯ್ಕೆದಾರರ ಗಮನವನ್ನು ಸೆಳೆದಿದ್ದಾರೆ.
ಚಂಡೀಗಢದ ಸೆಕ್ಟರ್ 16 ಅಂಗಣದಲ್ಲಿ ನಡೆಯುತ್ತಿರುವ ಎಲೈಟ್ ಬಿ ಗುಂಪಿನ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 8 ರನ್ ಗಳಿಸಿ ಔಟ್ ಆಗಿದ್ದ ಪೃಥ್ವಿ ಶಾ, ದ್ವಿತೀಯ ಇನಿಂಗ್ಸ್‌ನಲ್ಲಿ ದೊಡ್ಡ ಇನಿಂಗ್ಸ್ ಆಡಿದರು. ಅವರು ಆಡಿದ 141 ಎಸೆತಗಳಲ್ಲಿಯೇ ದ್ವಿಶತಕವನ್ನು ಬಾರಿಸಿದರು. ಆ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ದ್ವಿಶತಕವನ್ನು ಬಾರಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ದ್ವಿಶತಕ ದಾಖಲೆ ಹೈದರಾಬಾದ್ ತಂಡದ ತನ್ಮಯ್ ಅಗರ್ವಾಲ್ ಅವರ ಹೆಸರನಲ್ಲಿದೆ. 2024ರ ರಣಜಿ ಟ್ರೋಫಿ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 119 ಎಸೆತಗಳಲ್ಲಿ ಈ ದಾಖಲೆ ಬರೆದಿದ್ದರು.
IND vs SA: ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡ ಪ್ರಕಟ!
ಪೃಥ್ವಿ ಶಾ ಅಜೇಯ 222 ರನ್
ಭಾರತ ತಂಡದ ಮಾಜಿ ಕೋಚ್ ಮತ್ತು ಮಾಜಿ ಆಲ್‌ರೌಂಡರ್ ರವಿಶಾಸ್ತ್ರಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 1985 ರಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಅವರು 123 ಎಸೆತಗಳಲ್ಲಿ ದ್ವಿಶತಕವನ್ನು ಬಾರಿಸಿದ್ದರು. ಅಂದ ಹಾಗೆ ಚಂಡೀಗಢ ವಿರುದ್ದದ ಪಂದ್ಯದಲ್ಲಿ ಪೃಥ್ವಿ ಶಾ, 72 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಅವರು ಮೂರನೇ ದಿನದಾಟದ ಅಂತ್ಯಕ್ಕೆ 156 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 29 ಬೌಂಡರಿಗಳೊಂದಿಗೆ ಅಜೇಯ 222 ರನ್‌ಗಳನ್ನು ಕಲೆ ಹಾಕಿದ್ದಾರೆ.
ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಚಂಡೀಗಢ ನಾಯಕ ಮನನ್ ವೋಹ್ರಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮಹಾರಾಷ್ಟ್ರ ಪ್ರಥಮ ಇನಿಂಗ್ಸ್‌ನಲ್ಲಿ 313 ರನ್ ಗಳಿಸಿತು. ಋತುರಾಜ್ ಗಾಯಕ್ವಾಡ್ ಪ್ರಥಮ ಇನಿಂಗ್ಸ್‌ನಲ್ಲಿ 116 ರನ್ ಗಳಿಸಿದ್ದರು. ಚಂಡೀಗಢ ಪರ ಜಗಜಿತ್ ಸಿಂಗ್ ಮತ್ತು ಅಭಿಷೇಕ್ ಸೈನಿ ತಲಾ ಮೂರು ವಿಕೆಟ್ ಪಡೆದರು.
Prithvi Shaw is batting at 180 after playing just 126 balls.
— abhay singh (@abhaysingh_13) October 27, 2025
pic.twitter.com/czlpszkM7y
ಚಂಡೀಗಢ ತಂಡಕ್ಕೆ 335 ರನ್ ಅಗತ್ಯ
ನಂತರ ಚಂಡೀಗಢ ಪ್ರಥಮ ಇನಿಂಗ್ಸ್‌ನಲ್ಲಿ 209 ರನ್‌ಗಳಿಗೆ ಆಲೌಟ್ ಆಯಿತು. ನಂತರ ಮಹಾರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 359 ರನ್‌ಗಳಿಗೆ ತನ್ನ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿ, ಚಂಡೀಗಢಕ್ಕೆ 464 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿತು. ಶಾ ಜೊತೆಗೆ, ಸಿದ್ಧೇಶ್ ವೀರ್ 62 ರನ್ ಗಳಿಸಿದರು ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರ ಪರ ಋತುರಾಜ್ ಗಾಯಕ್ವಾಡ್ ಅಜೇಯ 36 ರನ್ ಗಳಿಸಿದರು. ಇದೀಗ ನಾಲ್ಕನೇ ದಿನ ಚಂಡೀಗಢ ತಂಡಕ್ಕೆ ಗೆಲ್ಲಲು 335 ರನ್‌ಗಳ ಅಗತ್ಯವಿದೆ.