ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಅಹಂಕಾರ ಮುರಿದು ಕರುಣಾಮಯಿಯಾಗಿ ನೆಲೆನಿಂತ ತಿರುಮಲ ಶ್ರೀನಿವಾಸ

ಮಹಾವಿಷ್ಣುವಿನ ಹೃದಯವು ತಾಯಿ ಮಹಾಲಕ್ಷ್ಮಿಯ ಶಾಶ್ವತ ನಿವಾಸ. ಶ್ರೀಹರಿ ಸಿಟ್ಟಿಗೇಳುವ ಬದಲು, ಶಾಂತಚಿತ್ತದಿಂದ ಎದ್ದು ನಿಂತು, ಮುನಿಶ್ರೇಷ್ಠರೇ, ವಜ್ರದಂತಿರುವ ನನ್ನ ಎದೆ ತಾಗಿ ನಿಮ್ಮ ಕೋಮಲ ಪಾದಗಳಿಗೆ ನೋವಾಯಿತೇ? ಎಂದು ಪಾದವನ್ನೊತ್ತಿದ. ಆ ಮೃದುಸ್ಪರ್ಶದ ಮುನಿಯ ಪಾದದಲ್ಲಿದ್ದ ಅಹಂಕಾರದ ಕಣ್ಣು ಕರಗಿ, ಜ್ಞಾನೋದಯವಾಯಿತು.

ಒಂದೊಳ್ಳೆ ಮಾತು

ಶ್ವೇತವರಾಹ ಕಲ್ಪದ ಇಪ್ಪತ್ತೆಂಟನೆಯ ಕಲಿಯುಗದ ಆರಂಭದಲ್ಲಿ, ಗಂಗಾತೀರದಲ್ಲಿ ಕಶ್ಯಪಾದಿ ಮುನಿಗಳು ಯಾಗವೊಂದನ್ನು ಸಂಕಲ್ಪಿಸಿದರು. ಯಾಗದ ಫಲವನ್ನು ತ್ರಿಮೂರ್ತಿಗಳಲ್ಲಿ ಯಾರಿಗೆ ಅರ್ಪಿಸಬೇಕೆಂಬ ಪರೀಕ್ಷೆಗಾಗಿ ಭೃಗು ಮಹರ್ಷಿಗಳನ್ನು ನಿಯೋಜಿಸಲಾಯಿತು.

ಮಹಾತಪಸ್ವಿಯಾಗಿದ್ದರೂ ತನ್ನ ಪಾದದಲ್ಲಿದ್ದ ಮೂರನೆಯ ಕಣ್ಣಿನಿಂದಾಗಿ ಭೃಗು ಮಹರ್ಷಿಗೆ ಅಪಾರ ಅಹಂಕಾರವಿತ್ತು. ಸತ್ಯಲೋಕ ಮತ್ತು ಕೈಲಾಸದಲ್ಲಿ ತನಗೆ ಸೂಕ್ತ ಆದರ ಸಿಗಲಿಲ್ಲವೆಂಬ ಸಿಟ್ಟಿನಿಂದ ಅವರು ವೈಕುಂಠಕ್ಕೆ ಧಾವಿಸಿದರು. ವೈಕುಂಠದಲ್ಲಿ ಶ್ರೀಮನ್ನಾರಾಯಣನು ಶೇಷಶಯನ ದ ಮೇಲೆ ಯೋಗನಿದ್ರೆಯಲ್ಲಿದ್ದ. ಬಂದ ಅತಿಥಿ ಯನ್ನು ಸತ್ಕರಿಸಲಿಲ್ಲವೆಂಬ ಆಕ್ರೋಶದಿಂದ ಭೃಗುಮುನಿ ನೇರವಾಗಿ ನಾರಾಯಣನ ವಕ್ಷಃಸ್ಥಳಕ್ಕೆ ಕಾಲಿನಿಂದ ಒದ್ದರು.

ಮಹಾವಿಷ್ಣುವಿನ ಹೃದಯವು ತಾಯಿ ಮಹಾಲಕ್ಷ್ಮಿಯ ಶಾಶ್ವತ ನಿವಾಸ. ಶ್ರೀಹರಿ ಸಿಟ್ಟಿಗೇಳುವ ಬದಲು, ಶಾಂತಚಿತ್ತದಿಂದ ಎದ್ದು ನಿಂತು, ಮುನಿಶ್ರೇಷ್ಠರೇ, ವಜ್ರದಂತಿರುವ ನನ್ನ ಎದೆ ತಾಗಿ ನಿಮ್ಮ ಕೋಮಲ ಪಾದಗಳಿಗೆ ನೋವಾಯಿತೇ? ಎಂದು ಪಾದವನ್ನೊತ್ತಿದ. ಆ ಮೃದುಸ್ಪರ್ಶದ ಮುನಿಯ ಪಾದದಲ್ಲಿದ್ದ ಅಹಂಕಾರದ ಕಣ್ಣು ಕರಗಿ, ಜ್ಞಾನೋದಯವಾಯಿತು. ಆದರೆ ತನ್ನ ನೆಲೆಗೆ ಆದ ಅಪಮಾನವನ್ನು ಪತಿ ಕ್ಷಮಿಸಿದ್ದನ್ನು ಕಂಡು ಲಕ್ಷ್ಮೀದೇವಿಗೆ ತೀವ್ರ ನೋವಾಯಿತು.

ಇದನ್ನೂ ಓದಿ: Vishweshwar Bhat Column: ಸ್ನಾನ ಮಾಡುವುದು ಹೇಗೆ?

ವೈಕುಂಠ ತೊರೆದು ಭೂಲೋಕದ ಕೊಲ್ಲಾಪುರಕ್ಕೆ ತೆರಳಿ ತಪಸ್ಸಿಗೆ ಕುಳಿತಳು. ಲಕ್ಷ್ಮಿಯ ವಿರಹ ತಾಳಲಾರದ ನಾರಾಯಣನು ‘ಶ್ರೀನಿವಾಸ’ನಾಗಿ ಭೂಮಿಗೆ ಇಳಿದು, ಶೇಷಾಚಲ ಬೆಟ್ಟದ ಹುತ್ತ ವೊಂದರಲ್ಲಿ ಧ್ಯಾನಸ್ಥನಾದ. ಅವನ ಹಸಿವನ್ನು ನೀಗಿಸಲು ಬ್ರಹ್ಮ-ಶಿವ ಹಸು-ಕರುಗಳಾಗಿ ಬಂದು ಪ್ರತಿದಿನ ಹುತ್ತಕ್ಕೆ ಹಾಲೆರೆಯುತ್ತಿದ್ದರು. ಇದನ್ನು ಕಂಡ ಗೋಪಾಲಕನು ಹಸುವಿಗೆ ಕೊಡಲಿಯಿಂದ ಹೊಡೆಯಲು ಹೋದಾಗ, ಹಸುವನ್ನು ರಕ್ಷಿಸಲು ಹೊರಬಂದ ಶ್ರೀನಿವಾಸನ ಹಣೆಗೆ ಏಟು ಬಿದ್ದಿತು.

ಹಿಂದಿನ ಜನ್ಮದ ಯಶೋದೆಯಾಗಿದ್ದ ವಕುಳಾದೇವಿಯು ತಾಯಿಯಾಗಿ ಆತನಿಗೆ ಆಶ್ರಯವಿತ್ತು, ಗಾಯಕ್ಕೆ ಪಚ್ಚಕರ್ಪೂರ-ಕಸ್ತೂರಿಯ ಲೇಪನ ಮಾಡಿದಳು. ಆ ಗಾಯದ ಶಮನಕ್ಕಾಗಿ ಹಚ್ಚಿದ ಪವಿತ್ರ ಲೇಪನವೇ ಇಂದಿಗೂ ಆತನ ಹಣೆಯ ಮೇಲೆ ಬೆಳಗುವ ‘ತಿರುನಾಮ’.

ಮುಂದೆ, ತ್ರೇತಾಯುಗದ ವೇದವತಿಯೇ ಆಕಾಶರಾಜನ ಮಗಳಾಗಿ ಪದ್ಮಾವತಿಯೆಂಬ ಹೆಸರಿನಲ್ಲಿ ಅವತರಿಸಿದ್ದಳು. ಶ್ರೀನಿವಾಸನು ಪದ್ಮಾವತಿಯನ್ನು ವರಿಸಲು ನಿರ್ಧರಿಸಿ, ವಿವಾಹದ ವೆಚ್ಚಕ್ಕಾಗಿ ಬ್ರಹ್ಮ-ಶಿವ ಮತ್ತು ಸೂರ್ಯ-ಚಂದ್ರರ ಸಾಕ್ಷಿಯಾಗಿ ಕುಬೇರನಿಂದ ಒಂದು ಕೋಟಿ ಹನ್ನೊಂದು ಲಕ್ಷ ಸುವರ್ಣ ನಾಣ್ಯಗಳನ್ನು ಸಾಲವಾಗಿ ಪಡೆದ. ಕಲಿಯುಗದ ಅಂತ್ಯದವರೆಗೂ ಈ ಸಾಲದ ಬಡ್ಡಿ ಯನ್ನು ಮಾತ್ರ ತೀರಿಸುತ್ತೇನೆ ಎಂಬ ಕರಾರಿನೊಂದಿಗೆ ಕಲ್ಯಾಣ ನೆರವೇರಿತು.

ಭಕ್ತರು ತಿರುಪತಿಯ ಹುಂಡಿಗೆ ಅರ್ಪಿಸುವ ಕಾಣಿಕೆಯು ಈ ಸಾಲದ ಬಡ್ಡಿಯನ್ನು ತೀರಿಸುವ ಸಂಕೇತವಾಯಿತು. ವಿವಾಹದ ಬಳಿಕ ಕೊಪುರದಿಂದ ಲಕ್ಷ್ಮಿಯೂ ಅಲ್ಲಿಗೆ ಆಗಮಿಸಿದಾಗ, ಇಬ್ಬರು ಜಗನ್ಮಾತೆಯರಿಗೆ ಸಮಾನ ಗೌರವ ನೀಡಲು ಮತ್ತು ಕಲಿಯುಗದ ಭಕ್ತರನ್ನು ಸದಾ ರಕ್ಷಿಸಲು ಶ್ರೀನಿವಾಸನು ಶಿಲಾರೂಪಿಯಾಗಿ (ಅರ್ಚಾಮೂರ್ತಿ) ನೆಲೆನಿಂತ. ತನ್ನ ಎದೆಯ ಬಲಭಾಗದಲ್ಲಿ ಲಕ್ಷ್ಮಿಯನ್ನೂ, ಎಡಭಾಗದಲ್ಲಿ ಪದ್ಮಾವತಿಯನ್ನೂ ಶಾಶ್ವತವಾಗಿ ನೆಲೆಗೊಳಿಸಿದ.

ಮನುಷ್ಯನಲ್ಲಿ ಅಹಂಕಾರ ಮತ್ತು ಕ್ಷಣಿಕ ಕೋಪ ಮನೆ ಮಾಡಿದರೆ ಎಂತಹ ತಪಸ್ವಿಯೂ ದಾರಿ ತಪ್ಪುತ್ತಾನೆ; ಅದೇ ಕ್ಷಮೆ ಮತ್ತು ವಿನಯವಿದ್ದರೆ ಎಂತಹ ಬಿಕ್ಕಟ್ಟೂ ಲೋಕಕಲ್ಯಾಣದ ದೈವಲೀಲೆ ಯಾಗಿ ಪರಿವರ್ತನೆಗೊಳ್ಳುತ್ತದೆ ಎಂಬುದಕ್ಕೆ ತಿರುಪತಿ ಶ್ರೀನಿವಾಸನ ಅವತಾರವೇ ಪರಮ ಸಾಕ್ಷಿ. ಸಾಕ್ಷಾತ್ ಭಗವಂತನೇ ಮನುಷ್ಯನಾಗಿ ಭೂಮಿಗೆ ಬಂದಾಗ ಲೌಕಿಕ ಕಷ್ಟಗಳನ್ನು, ಸಾಲದ ಹೊಣೆ ಯನ್ನು ಎದುರಿಸಬೇಕಾಯಿತು. ಕಷ್ಟಗಳು ಮಾನವ ಜೀವನದ ಸಹಜ ಪ್ರಕ್ರಿಯೆ, ಅದರಿಂದ ಪಲಾಯನ ಮಾಡದೆ ಬಂದ ಕಷ್ಟಗಳನ್ನು ಎದುರಿಸಿ ನೀಗಿಸಿಕೊಳ್ಳಬೇಕು.

ನಾವು ತಿರುಪತಿಯ ಹುಂಡಿಗೆ ಹಾಕುವ ಹಣವು ಕೇವಲ ಕಾಣಿಕೆಯಲ್ಲ; ಬದುಕಿನಲ್ಲಿ ಭಗವಂತ ನಮಗೆ ಕೊಟ್ಟ ಅನುಗ್ರಹಕ್ಕೆ ನಾವು ಸಮರ್ಪಿಸುವ ಕೃತಜ್ಞತೆಯ ಸಂಕೇತ. ಇದರ ಜೊತೆ ಜೊತೆಗೆ ಕಷ್ಟದಲ್ಲಿ ರುವವರಿಗೆ ನಮ್ಮ ಸುತ್ತಲೂ ಸಹಾಯದ ಅಗತ್ಯವಿರುವವರಿಗೆ ಆ ದುಡ್ಡು ವಿನಿಯೋಗ ವಾದರೆ ಅದಕ್ಕಿಂತ ಸಾರ್ಥಕತೆ ಮತ್ತೊಂದಿಲ್ಲ. ನಾವು ಭಕ್ತಿಯಿಂದ ಹಾಕುವ ಒಂದು ನಮಸ್ಕಾರ ಕೂಡ ದೇವರಿಗೆ ತಲುಪುತ್ತದೆ.

ರೂಪಾ ಗುರುರಾಜ್

View all posts by this author