ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranjith H Ashwath Column: ಅಭಿಮಾನೋತ್ಸವದಿಂದ ಸಂದೇಶ ಕೊಟ್ಟಿದ್ದು ಯಾರಿಗೆ ?

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಬಿಜೆಪಿಯಲ್ಲಿ ವಿರೋಧಾಭಾಸದ ಹೊರತಾಗಿಯೂ, ಇಡೀ ಬಿಜೆಪಿಯನ್ನು ಒಂದು ವೇದಿಕೆಯಲ್ಲಿ ತರುವ ಶಕ್ತಿ ಉಳಿದಿರುವುದು ಯಡಿಯೂರಪ್ಪ ಎನ್ನುವ ಹೆಸರಿಗೆ ಮಾತ್ರ ಎನ್ನುವುದು ಪ್ರಶ್ನಾತೀತ. ರಾಜ್ಯ ಬಿಜೆಪಿಯ ಈ ನಾಡಿಮಿಡಿತ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ಕಾರಣಕ್ಕಾಗಿಯೇ ಯಡಿಯೂರಪ್ಪನವರ ಹೆಸರಿನಲ್ಲಿಯೇ ಬೃಹತ್ ಸಮಾವೇಶ ಆಯೋಜಿಸಿ ಕೇವಲ ಪಕ್ಷದ ನಾಯಕರನ್ನು ಮಾತ್ರವಲ್ಲದೇ, ಸರ್ವ ಜಾತಿಗಳ ಮಠಾಧೀಶರು, ಜಗದ್ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದರು.

ಅಶ್ವತ್ಥಕಟ್ಟೆ

ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದ ಬಿಎಸ್‌ವೈ ಅಭಿಮಾನೋತ್ಸವ ಸಮಾ ವೇಶಕ್ಕೆ ನಿರೀಕ್ಷೆಯಂತೆ ನಾಲ್ಕು ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ಸಮಾವೇಶದಲ್ಲಿ ಸೇರಿದ್ದವರು ಯಡಿಯೂರಪ್ಪ, ಮೋದಿ ಪರ ಘೋಷಣೆ ಕೂಗುವುದು ಒಂದೆಡೆ ಯಾದರೆ, ಮುಂದಿನ ಚುನಾವಣೆಯನ್ನೂ ಯಡಿಯೂರಪ್ಪ ನೇತೃತ್ವದಲ್ಲಿಯೇ ಹೋಗಬೇಕೆಂಬ ಅಜೆಂಡಾವನ್ನು ರಾಜ್ಯ ನಾಯಕರ ಬಾಯಲ್ಲಿ ಹೇಳಿಸುವ ಮೂಲಕ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.

ರಾಜಕೀಯ ಎನ್ನುವುದು ನಿಂತ ನೀರಲ್ಲ. ಎಲ್ಲಾ ಬೀಸುವ ಬಿರುಗಾಳಿಯ ಸೈಡ್ ಎಫೆಕ್ಟ್‌ ಇನ್ನೆಲ್ಲೋ ಆಗುತ್ತಿರುತ್ತದೆ. ಇಂತಹ ಬಿರುಗಾಳಿಗಳು ಕೆಲವೊಮ್ಮೆ ಪಕ್ಷಗಳ ಜಂಗಬಲವನ್ನೇ ಉಡುಗಿಸಿದರೆ, ಇನ್ನು ಕೆಲವೊಮ್ಮೆ ಮಲಗಿದ್ದವರನ್ನು ಬಡಿದೆಬ್ಬಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತವೆ. ಆದರೆ, ಯಾವ ಸಮಯದಲ್ಲಿ ಬೀಸುವ ಗಾಳಿಗೆ ಯಾವ ಪ್ರಮಾಣದಲ್ಲಿ ತೂರಿಕೊಳ್ಳಬೇಕು? ಯಾವ ಬದಿಗೆ ತೂರಿಕೊಳ್ಳಬೇಕು ಎನ್ನುವುದು ಮುತ್ಸದಿತನವಷ್ಟೇ ಅಲ್ಲದೇ, ಆ ನಾಯಕ ಹಾಗೂ ಪಕ್ಷದ ಇಡೀ ರಾಜಕೀಯ ಜೀವನ ನಿಂತಿರುತ್ತದೆ.

ಸಾರ್ವಜನಿಕ ಜೀವನದಲ್ಲಿ ಹೀಗೆ ಆಗುತ್ತದೆ ಎನ್ನುವ ಲಿಖಿತ ನಿಯಮಗಳೊಂದಿಗೆ ಸಾಗಲು ಸಾಧ್ಯವಿಲ್ಲ. ಅನೇಕ ಸಮಯದಲ್ಲಿ ಜಾಣನಡೆಗಳು ತೆರೆಮರೆಗೆ ಸರಿದಿದ್ದ ನಾಯಕನನ್ನು ಏಕಾಏಕಿ ಮುನ್ನಲೆಗೆ ಬರುವಂತೆ ಮಾಡುವ ಕೆಲಸವನ್ನು ಮಾಡುತ್ತವೆ.

ಇನ್ನೂ ಕೆಲವೊಮ್ಮೆ ಇಡೀ ಪಕ್ಷವೇ ಒಪ್ಪಿಕೊಳ್ಳದಿದ್ದರೂ ಒಂದು ಸಮಾವೇಶ, ಕಾರ್ಯ ಕ್ರಮ, ಒಂದು ಅಜೆಂಡಾ ಎಲ್ಲರೂ ಎಲ್ಲವನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಯನ್ನು ಸೃಷ್ಟಿಸುತ್ತದೆ ಎನ್ನುವುದೇ ರಾಜಕೀಯದ ಒಳಸುಳಿ.

ಸದ್ಯ ಪಶ್ಚಿಮ ಬಂಗಾಳದ ದಿಗ್ವಿಜಯ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ ಇದೀಗ ತನ್ನ ಮುಂದಿನ ಗುರಿ ದಕ್ಷಿಣ ಭಾರತ. ಅದರಲ್ಲಿಯೂ ಈ ಹಿಂದೆ ಅಧಿಕಾರ ಅನುಭವಿಸಿರುವ ಕರ್ನಾಟಕ ಎನ್ನುವ ಲೆಕ್ಕಾಚಾರದಲ್ಲಿದೆ. ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿ ದರೆ, ಕರ್ನಾಟಕದಲ್ಲಿ ಸಂಘಟನೆಗೇನು ಕೊರತೆ ಇರಲಿಲ್ಲ.

ಆದರೆ, ಈ ಸಂಘಟನೆ, ಕಾರ್ಯಕರ್ತರ ಪಡೆಯನ್ನು ಬಡಿದೆಬ್ಬಿಸಲು ಒಂದು ಅವಕಾಶ ಬೇಕಿತ್ತು. ಅದರಲ್ಲಿಯೂ ಎರಡು ವರ್ಷ ಪೂರೈಸುತ್ತಾ ಬಂದರೂ, ಈಗಲೂ ಪಕ್ಷದ ಅನೇಕರು ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಎಂದು ಒಪ್ಪಿಕೊಳ್ಳದೇ ಇರುವ ಈ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಒಂದು ಶಕ್ತಿಯ ಅಗತ್ಯವಿತ್ತು.

ಇದನ್ನೂ ಓದಿ: Ranjith H Ashwath Column: ಕೈ ಮೌನದಾಟದ ಹಿಂದಿನ ಗುಟ್ಟೇನು ?

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಬಿಜೆಪಿಯಲ್ಲಿ ವಿರೋಧಾಭಾಸದ ಹೊರತಾಗಿಯೂ, ಇಡೀ ಬಿಜೆಪಿಯನ್ನು ಒಂದು ವೇದಿಕೆಯಲ್ಲಿ ತರುವ ಶಕ್ತಿ ಉಳಿದಿರುವುದು ಯಡಿಯೂರಪ್ಪ ಎನ್ನುವ ಹೆಸರಿಗೆ ಮಾತ್ರ ಎನ್ನುವುದು ಪ್ರಶ್ನಾತೀತ. ರಾಜ್ಯ ಬಿಜೆಪಿಯ ಈ ನಾಡಿಮಿಡಿತ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ಕಾರಣಕ್ಕಾಗಿಯೇ ಯಡಿಯೂರಪ್ಪನವರ ಹೆಸರಿನಲ್ಲಿಯೇ ಬೃಹತ್ ಸಮಾವೇಶ ಆಯೋಜಿಸಿ ಕೇವಲ ಪಕ್ಷದ ನಾಯಕರನ್ನು ಮಾತ್ರವಲ್ಲದೇ, ಸರ್ವ ಜಾತಿಗಳ ಮಠಾಧೀಶರು, ಜಗದ್ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದರು.

ಏಕೆಂದರೆ, ಈಗಲೂ ಕರ್ನಾಟಕದಲ್ಲಿ ಮಠಾಧೀಶರು ರಾಜಕೀಯದ ಒಳಸುಳಿಗಳನ್ನು ತಮ್ಮ ತಮ್ಮ ಸಮುದಾಯದ ಮೇಲೆ ಹೇರುವ ಸಾಮರ್ಥ್ಯ ಉಳಿಸಿಕೊಂಡಿದ್ದಾರೆ. ಈ ಎಲ್ಲ ಆಲೋಚನೆ, ತಂತ್ರಗಾರಿಕೆ, ಲೆಕ್ಕಚಾರಗಳಿಗೆ ಪೂರಕವಾಗಿ ಯಡಿಯೂರಪ್ಪನವರು ಸಾರ್ವಜನಿಕ ಕ್ಷೇತ್ರಕ್ಕೆ ಧುಮುಕಿ ಬರೋಬ್ಬರಿ ಐದು ದಶಕಗಳು ಕಳೆದಿದ್ದವು. ಈ ಅವಕಾಶ ವನ್ನೇ ಬಳಸಿಕೊಂಡು ಒಡೆದು ಹೋಳಾಗಿರುವ ಬಿಜೆಪಿಯನ್ನು ಒಗ್ಗೂಡಿಸಲು ಬಳಸಿ ಕೊಂಡರು.

ಏಕೆಂದರೆ, ಕರ್ನಾಟಕದಲ್ಲಿ ಪಕ್ಷದ ಬಾವುಟ ಕಟ್ಟಲು ಜನರಿಲ್ಲದಿರುವಾಗ ಪಕ್ಷ ಸಂಘಟಿಸಿ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ಸರಕಾರವನ್ನು ಕೂರಿಸುವಲ್ಲಿ ಯಡಿಯೂರಪ್ಪ ಪಾತ್ರ ಎಂತಹದ್ದು ಎನ್ನುವ ವಿಷಯದಲ್ಲಿ ಈಗಲೂ ಯಾರದ್ದು ವಿರೋಧವಿಲ್ಲ. ಆದ್ದರಿಂದಲೇ ಯಡಿಯೂರಪ್ಪನವರ ಐದು ದಶಕದ ಹೋರಾಟದ ಹಾದಿಯ ವಿಷಯವನ್ನೇ ಮುಂದಿಟ್ಟುಕೊಂಡು ಚಿತ್ರದುರ್ಗದಲ್ಲಿ ಬಿಎಸ್ʼವೈ ಅಭಿಮಾನೋತ್ಸವ ಸಮಾವೇಶವನ್ನು ಆಯೋಜಿಸಲಾಗಿತ್ತು.

ಇದರ ಮೂಲಕ ಹಲವು ರೀತಿಯ ಸಂದೇಶ ರವಾನಿಸುವ, ಮುಂದಿನ ಚುನಾವಣೆಗೂ ಮೊದಲೇ ಅಜೆಂಡಾವನ್ನು ಫಿಕ್ಸ್ ಮಾಡುವ ಪ್ರಯತ್ನಕ್ಕೆ ವಿಜಯೇಂದ್ರ ಕೈಹಾಕಿದ್ದಾರೆ. ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದ ಬಿಎಸ್‌ವೈ ಅಭಿಮಾನೋತ್ಸವ ಸಮಾವೇಶಕ್ಕೆ ನಿರೀಕ್ಷೆಯಂತೆ ನಾಲ್ಕು ಲಕ್ಷಕ್ಕೂ ಅಧಿಕ ಜನ ಸೇರಿದ್ದರು.

Screenshot_4

ಸಮಾವೇಶದಲ್ಲಿ ಸೇರಿದ್ದವರು ಯಡಿಯೂರಪ್ಪ, ಮೋದಿ ಪರ ಘೋಷಣೆ ಕೂಗುವುದು ಒಂದೆಡೆಯಾದರೆ, ಮುಂದಿನ ಚುನಾವಣೆಯನ್ನೂ ಯಡಿಯೂರಪ್ಪ ನೇತೃತ್ವದಲ್ಲಿಯೇ ಹೋಗಬೇಕೆಂಬ ಅಜೆಂಡಾವನ್ನು ರಾಜ್ಯ ನಾಯಕರ ಬಾಯಲ್ಲಿ ಹೇಳಿಸುವ ಮೂಲಕ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಂಭಾಪುರಿ ಶ್ರೀಗಳ, ನಿರಂಜನನಾಥ ಪುರಿ ಶ್ರೀಗಳು, ನಿರ್ಮಲಾನಂದನಾಥ ಶ್ರೀಗಳು, ವಚನಾನಂದ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿಗಳು ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುವ ಜತೆಜತೆಗೆ ಈ ನಾಯಕತ್ವವನ್ನು ಬಳಸಿಕೊಳ್ಳಬೇಕು ಎನ್ನುವ ಮಾತುಗಳು ವರಿಷ್ಠರ ಕಿವಿಗೆ ಬೀಳುವಂತೆ ನೋಡಿಕೊಂಡರು.

ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಹೋರಾಟದ ಬದುಕಿನ ಸಂಭ್ರಮಾ ಚರಣೆ, ಭೂತ ಕಾಲದ ಮಾತುಗಳಿಗಿಂತ ಹೆಚ್ಚಾಗಿ ಭವಿಷ್ಯದ ನಾಯಕತ್ವಕ್ಕೆ ಸಂಬಂಧಿಸಿ ದಂತೆ ಬಿಜೆಪಿಯಲ್ಲಿರುವ ಗೊಂದಲಗಳಿಗೆ ಉತ್ತರ ನೀಡುವಂತಿತ್ತು. ಅದರಲ್ಲಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ರಾಧಮೋಹನ್ ಅಗರ್ವಾಲ್ ಸಮ್ಮುಖದಲ್ಲಿ ಸುಮಾರು ನಾಲ್ಕು ಜನರಿಂದ ಈ ಸಂದೇಶವನ್ನು ರವಾನಿಸಿದ್ದಾರೆ.

ಯಡಿಯೂರಪ್ಪ ಅವರು ಆರಂಭದಿಂದಲೂ ಮಠ-ಮಾನ್ಯಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಈ ಹಿಂದೆ ಯಡಿಯೂರಪ್ಪ ಸಂಕಷ್ಟ ಕಾಲದಲ್ಲಿಯೂ ಲಿಂಗಾಯತ ಸ್ವಾಮೀಜಿಗಳು ಯಡಿಯೂರಪ್ಪ ಪರವಾಗಿ ಬ್ಯಾಟ್ ಬೀಸಿದ್ದರು. ಇದರ ಮುಂದುವರಿದ ಭಾಗ ಎನ್ನುವಂತೆ ಶನಿವಾರದ ಕಾರ್ಯಕ್ರಮದಲ್ಲಿಯೂ ನೂರಾರು ಮಠಾಧೀಶರು, ಜಗದ್ಗುರುಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಅದರಲ್ಲಿಯೂ ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ, ದಲಿತ ಹಾಗೂ ಬ್ರಾಹ್ಮಣ ಸಮುದಾಯದ ಪ್ರಮುಖ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಬೃಹತ್ ವೇದಿಕೆಯನ್ನು ಶಕ್ತಿ ಪ್ರದರ್ಶನ ಮಾಡುವ ತಂತ್ರದಲ್ಲಿ ಯಶ ಕಂಡಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ನಾಯಕರು ಒಂದೊಂದು ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿದ್ದರು. ಆರಂಭದಲ್ಲಿಯೇ ಅಭಿಮಾನೋ ತ್ಸವ ಸಮಿತಿಯ ಅಧ್ಯಕ್ಷ, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಹಿಂದು ಧರ್ಮ, ಸನಾತನ ಧರ್ಮದ ಉಳಿವಿಗಾಗಿ ಅಶ್ವಮೇಧವನ್ನು ಬಿಡಲು ನಾವು ಸಿದ್ಧರಾಗಿದ್ದೇವೆ. ಅದನ್ನು ತಡೆಯಲು ಶಕ್ತಿ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರೆ, ಬಳಿಕ ಬಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆಡಳಿತ ಪಕ್ಷದ (ಕಾಂಗ್ರೆಸ್) ಸೂರ್ಯ ಮುಳುಗುತ್ತಿದೆ.

ನಮ್ಮದು ಉದಯಿಸುತ್ತಿದೆ. ಎಲ್ಲರೂ ಒಂದಾಗಿ ಕೆಲಸ ಮಾಡುವ ಸಂಕಲ್ಪ ಮಾಡಿದರೆ ಮತ್ತೊಮ್ಮೆ ಸರಕಾರ ಬರುವುದು ನಿಶ್ಚಿತ ಎನ್ನುವ ಮೂಲಕ ಚುನಾವಣೆಗೆ ಸಜ್ಜಾಗಿ ಎನ್ನುವ ಸಂದೇಶ ರವಾನಿಸಿದರು. ಇನ್ನು ಕೇಂದ ಸಚಿವ ಪ್ರಲ್ಹಾದ್ ಜೋಶಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಈ ಹಿಂದೆ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ಬಂದಿತ್ತು.

ಮುಂದೆಯೂ ಅವರ ನೇತೃತ್ವದಲ್ಲಿಯೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಅಂತಿಮವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನನಗೆ ಯಾವುದೇ ಸವಾಲು ಬಂದರೂ ಮೆಟ್ಟಿ ನಿಲ್ಲುವ ಶಕ್ತಿ ಸಿಗಲಿ ಎಂದು ಆರ್ಶೀವಾದ ಮಾಡಲಿ. ಯಡಿಯೂರಪ್ಪನವರ ಮಗನಾಗಿ ನಿಮ್ಮ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎನ್ನುವ ಮೂಲಕ ಯಡಿಯೂರಪ್ಪ ಬಳಿಕ ಅವರ ಉತ್ತರಾಧಿಕಾರಿ ನಾನೇ ಎನ್ನುವ ಸಂದೇಶ ರವಾನಿಸಿದ್ದರು.

ಇಡೀ ಸಮಾವೇಶದ ತಯಾರಿಯನ್ನು ಗಮನಿಸಿದರೆ ಕೇವಲ ಯಡಿಯೂರಪ್ಪನವರ ಶಕ್ತಿ ಪ್ರದರ್ಶನ, ಅವರ ಬಳಿಕ ಪುತ್ರನಿಗೆ ಉತ್ತರಾಧಿಕಾರಿ ಪಟ್ಟ ಕಟ್ಟಬೇಕೆಂಬ ಒತ್ತಡ ಹೇರುವು ದಷ್ಟೇ ಆಗಿರಲಿಲ್ಲ. ಬದಲಿಗೆ ಬಿಜೆಪಿಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಇರುವ ಗೊಂದಲಗಳಿಂದ ಸಂಘಟನೆಯೇ ಸತ್ತು ಹೋಗಿದ್ದಾಗ, ಕಾರ್ಯಕರ್ತರು ಪಕ್ಷದ ಕಾರ್ಯ ಗಳನ್ನು ಪಕ್ಕಕ್ಕಿಟ್ಟು ತಮ್ಮ ಜೀವನ ನೋಡಿಕೊಳ್ಳೋಣ ಎನ್ನುವ ಮನಸ್ಥಿತಿಗೆ ಬಂದಿದ್ದರು. ಈ ಸಮಯದಲ್ಲಿ, ಪಶ್ಚಿಮ ಬಂಗಾಳದ ಅಭೂತಪೂರ್ವ ಫಲಿತಾಂಶದಿಂದ ದೇಶದೆಡೆ ಕಾರ್ಯಕರ್ತರು ಮಾನಸಿಕವಾಗಿ ಬೂಸ್ಟ್ ಆಗಿದ್ದರು. ‌

ಈ ಅವಕಾಶವನ್ನೇ ಬಳಸಿಕೊಂಡು ಕರ್ನಾಟಕದಲ್ಲಿ ಮಲಗಿದ್ದ ಸಂಘಟನೆಗೆ ವೇಗ ನೀಡುವ ಆಲೋಚನೆಯಲ್ಲಿಯೇ ಇಡೀ ಕಾರ್ಯಕ್ರಮವನ್ನು ವಿಜಯೇಂದ್ರ ಆಯೋಜಿಸಿ ದ್ದರು ಎಂದರೆ ತಪ್ಪಾಗುವುದಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಲ್ಕು ಜನ ಬಂದು ಕೇಕೆ ಹೊಡೆದು, ಚಪ್ಪಾಳೆ ತಟ್ಟಿ, ಜೈಕಾರ ಕೂಗಿ ಹೋಗುವುದಷ್ಟೇ ಅಲ್ಲದೇ, ಈ ಸಮಾವೇಶದ ವೇವ್ ಅನ್ನು ಕನಿಷ್ಠ ಆರು ತಿಂಗಳ ಕಾಲ ಉಳಿಯುವಂತೆ ನೋಡಿ ಕೊಂಡಿದ್ದಾರೆ.

ಸಣ್ಣ ವಿಷಯದಲ್ಲಿಯೂ ಎಚ್ಚರಿಕೆ ವಹಿಸಿ ಇಡೀ ಸಮಾವೇಶವನ್ನು ರೂಪುಗೊಳ್ಳಿಸಿದ್ದರು ಎಂದರೆ ತಪ್ಪಾಗುವುದಿಲ್ಲ. ಉದಾಹರಣೆಗೆ, ಸಮಾವೇಶಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗೆ ನೀಡಲು ನಿಗದಿಪಡಿಸಿದ್ದ ವಾಟರ್ ಬಾಟಲ್ ಮೇಲೆ ಅಭಿಮಾನೋತ್ಸವದ ಲೋಗೋ, ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸಿದ್ಧಪಡಿಸಿದ್ದ ಬೀಸಣಿಕೆಯ ಮೇಲೆ ಅಭಿಮಾನೋತ್ಸವದ ಲೋಗೋ ಸೇರಿದಂತೆ ವಿಜಯೇಂದ್ರ ಫೋಟೊ, ಆಯ್ದ ಪ್ರಮುಖರಿಗೆ ನೀಡಿದ ಕಸ್ಟಮೈಸ್ಡ್ ವಾಟರ್ ಬಾಟಲಿ ಸೇರಿದಂತೆ ಪ್ರತಿಯೊಂದು ವಸ್ತುವಿನ ಮೇಲೆ ಅಭಿಮಾನೋತ್ಸವ, ಮೋದಿ, ಅಮಿತ್ ಶಾ, ಯಡಿಯೂರಪ್ಪ, ವಿಜಯೇಂದ್ರ ಫೋಟೊಗಳು ಇರುವಂತೆ ನೋಡಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಹುತೇಕರು ಬಾಟಲಿ, ಬೀಸಣಿಕೆ, ಕೈಚೀಲ ಸೇರಿದಂತೆ ಯಾವುದಾದರೂ ಒಂದನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಮೂಲಕ ಇಡೀ ಕಾರ್ಯಕ್ರಮದ ಜೋಶ್ ಊರುಗಳಿಗೆ ತೆರಳಿದ ಬಳಿಕವೂ ಇರುವಂತೆ ನೋಡಿಕೊಂಡಿ ದ್ದಾರೆ.

ಹಾಗೇ ನೋಡಿದರೆ, ಈ ಸಮಾವೇಶದ ವೇವ್ ಅನ್ನು ಮುಂದಿನ ಚುನಾವಣೆವರೆಗೆ ಉಳಿಸಿ ಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಸತ್ಯ. ಚುನಾವಣೆಗೆ ಎರಡು ವರ್ಷವಿರುವಾಗ ಈ ಸಮಾವೇಶದ ಜೋಶ್ ಅನ್ನೇ ಬಳಸಿಕೊಂಡು ಚುನಾವಣೆಗೆ ಹೋಗಲಾಗುವುದಿಲ್ಲ ಎನ್ನು ವುದು ವಿಜಯೇಂದ್ರ ಹಾಗೂ ಯಡಿಯೂರಪ್ಪನವರಿಗೂ ಗೊತ್ತಿರುವ ವಿಷಯ.

ಆದರೆ, ಪಶ್ಚಿಮ ಬಂಗಾಳದಲ್ಲಿ ಗೆದ್ದಿರುವ ಉತ್ಸಾಹದಲ್ಲಿರುವ ಕಾರ್ಯಕರ್ತರಿಗೆ ಕರ್ನಾಟಕ ದಲ್ಲಿಯೂ ಒಂದು ಜೋಶ್ ನೀಡುವ ಕೆಲಸವನ್ನು ಮಾಡಬೇಕಿತ್ತು. ಅದಕ್ಕೆ ಯಡಿಯೂ ರಪ್ಪನವರ ಫೇಸ್ ಅನ್ನು ತೋರಿಸಬೇಕಾದ ಅನಿವಾರ್ಯತೆ ಇತ್ತು.

ಈ ವಿಷಯವನ್ನು ಅರಿತೇ ಸ್ವತಃ ಅಮಿತ್ ಶಾ ಅವರು ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಕೊಂಡರು. ಇದರೊಂದಿಗೆ, ಸಾಮಾನ್ಯ ವಾಗಿ ಬೃಹತ್ ಸಮಾವೇಶಗಳಿಂದ ಅಂತರ ಕಾಯ್ದುಕೊಳ್ಳುವ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಹ ಕಾರ್ಯ ಕ್ರಮಕ್ಕೆ ಆಗಮಿಸಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ.‌

ಈ ಎಲ್ಲವನ್ನು ಮೀರಿ ದೇಶದಲ್ಲಿ ವರ್ಷದಿಂದ ವರ್ಷಕ್ಕೆ, ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ದಿಗ್ವಿಜಯ ಸಾಧಿಸಿದ್ದರೂ, ಕರ್ನಾಟಕದಲ್ಲಿ ಮಾತ್ರ ಯಡಿಯೂರಪ್ಪ ಸಕ್ರಿಯ ರಾಜ ಕಾರಣದಿಂದ ಹಿಂದೆ ಸರಿದ ಬಳಿಕ ರಾಜ್ಯ ಬಿಜೆಪಿಯ ಮುಂದಾಳತ್ವವನ್ನು ಯಾರು ವಹಿಸಬೇಕು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ, ಪ್ರತಿಪಕ್ಷ ನಾಯಕರನ್ನಾಗಿ ಅಶೋಕ್ ಅವರನ್ನು ನೇಮಿಸಿದ ಬಳಿಕ ಪಕ್ಷದಲ್ಲಿ ಭುಗಿಲೆದ್ದ ಅಸಮಾಧಾನಕ್ಕೆ ವರ್ಷಗಳೇ ಕಳೆಯು ತ್ತಾ ಬಂದರೂ, ಅದಕ್ಕೆ ಸಾಂತ್ವನ ಮಾತ್ರ ಸಿಕ್ಕಿಲ್ಲ. ಈಗಲೂ ರಾಜ್ಯ ಬಿಜೆಪಿಗೆ ಯಡಿಯೂರಪ್ಪನವರೇ ಅನಿರ್ವಾಯ ಎನ್ನುವುದು ಸ್ಪಷ್ಟವಾಗಿದೆ.

ಇದನ್ನು ಬೃಹತ್ ವೇದಿಕೆಯ ಮೂಲಕ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸುವ ಪ್ರಯತ್ನವನ್ನು ಬಿ.ವೈ.ವಿಜಯೇಂದ್ರ ತಂಡ ಯಶಸ್ವಿಯಾಗಿ ಮಾಡಿದೆ. ಯಡಿಯೂರಪ್ಪ ಅನಿವಾರ್ಯ ಎನ್ನುವುದಷ್ಟೇ ಅಲ್ಲದೇ, ಯಡಿಯೂರಪ್ಪ ಉತ್ತರಾಧಿಕಾರಿ ಎನ್ನುವ ಸಂದೇಶವನ್ನು ವಿವಿಧ ಮಠಾಧೀಶರ ಮೂಲಕ ಹಾಗೂ ಸ್ವತಃ ವಿಜಯೇಂದ್ರ ಅವರೇ ತಂದೆ ನೀಡಿದ್ದ ಬೆಂಬಲವನ್ನು ನನಗೂ ನೀಡಿ ಎನ್ನುವ ಮೂಲಕ ರವಾನಿಸಿದ್ದಾರೆ.

ದಕ್ಷಿಣ ಭಾರತದ ಮೇಲೆ ಕಣ್ಣಿಟ್ಟಿರುವ ವರಿಷ್ಠರಿಗೆ ಕೋಟೆ ನಾಡಿನಲ್ಲಿ ನಡೆದ ಅಭಿಮಾ ನೋತ್ಸವದ ಮೂಲಕ ಯಡಿಯೂರಪ್ಪ ಶಕ್ತಿಯ ಜತೆ ಜತೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿಯನ್ನು ಈಗಿನಿಂದಲೇ ರಾಜ್ಯ ಘಟಕ ಆರಂಭಿಸಿದೆ ಎನ್ನುವ ಸಂದೇಶ ರವಾನಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆ.

ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಅಮಿತ್ ಶಾ ಅವರು ಈ ಕಾರ್ಯಕ್ರಮವನ್ನು ಬಳಸಿಕೊಂಡು ಚುನಾವಣೆಗೆ ತಯಾರಿ ಆರಂಭಿಸಿ ಎನ್ನುವ ಸಂದೇಶ ನೀಡಬಹುದು ಎಂದೇ ಅನೇಕರು ಅಂದಾಜಿಸಿದ್ದರು.

ಆದರೆ ತಮ್ಮ ಇಡೀ ಭಾಷಣವನ್ನು ಯಡಿಯೂರಪ್ಪನವರನ್ನು ಹೊಗಳಲು ಸೀಮಿತ ಗೊಳಿಸುವ ಮೂಲಕ ಅನೇಕರ ಲೆಕ್ಕಾ ಚಾರಗಳನ್ನು ಉಲ್ಟಾ ಮಾಡಿzರೆ ಎಂದರೆ ತಪ್ಪಾಗುವುದಿಲ್ಲ. ಕೊನೆಯದಾಗಿ ಅಮಿತ್ ಶಾ ಕಡೆಯಿಂದ ಯಾವುದೇ ಸಂದೇಶ ವನ್ನು ಪಡೆಯಲು ಸಾಧ್ಯವಾಗದಿದ್ದರೂ, ಅಮಿತ್ ಶಾಗೆ ರವಾನಿಸಬೇಕಿದ್ದ ವಿಷಯವನ್ನು ರವಾನಿಸುವಲ್ಲಿ ಯಶಸ್ವಿಯಾಗುವ ಮೂಲಕ ಇಡೀ ಸಮಾವೇಶದ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದಂತೂ ಸ್ಪಷ್ಟ.

ರಂಜಿತ್​ ಎಚ್​ ಅಶ್ವತ್ಥ್

View all posts by this author