ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ಕೈ ಮೌನದಾಟದ ಹಿಂದಿನ ಗುಟ್ಟೇನು ?

ತಮ್ಮ ಮಾತಿನಿಂದಲೇ ರಾಜಕೀಯವನ್ನು ಹಾಳು ಮಾಡಿಕೊಂಡಿರುವ ಅನೇಕ ನಾಯಕರನ್ನು ನೋಡಿ ದ್ದೇವೆ. ಆದರೆ ಮಾತನ್ನು ಎಲ್ಲಿ ಎಷ್ಟರ ಮಟ್ಟಿಗೆ ಆಡಬೇಕು? ಯಾವ ಸಮಯದಲ್ಲಿ ಮೌನ ವಾಗಿರಬೇಕು ಎನ್ನುವುದೇ ರಾಜಕೀಯ ಪಠ್ಯದ ಮೊದಲ ಪಾಠ. ಮಾತು-ಮೌನ ಎನ್ನುವ ಅಸ್ತ್ರ- ಪ್ರತ್ಯಸ್ತ್ರದ ನಡುವೆ ಇರುವ ಸಣ್ಣ ಅಂತರವನ್ನು ಅರಿಯುವುದೇ ಮುತ್ಸದ್ದಿ ರಾಜಕಾರಣಿಯ ಮೊದಲ ಗುಣ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿರುವ ಮಾತು.

ಕೈ ಮೌನದಾಟದ ಹಿಂದಿನ ಗುಟ್ಟೇನು ?

-

ಅಶ್ವತ್ಥಕಟ್ಟೆ

‘ಮಾತು ಬೆಳ್ಳಿ-ಮೌನ ಬಂಗಾರ’ ಎನ್ನುವುದು ನಾಣ್ಣುಡಿಯಿದ್ದರೂ, ರಾಜಕೀಯದಲ್ಲಿರುವವರಿಗೆ ಮಾತ್ರ ಮಾತೇ ಬಂಡವಾಳ. ಮಾತೊಂದಿದ್ದರೆ ಯಾರನ್ನಾದರೂ ಗೆಲ್ಲಬಹುದು, ರಾಜಕೀಯವಾಗಿ ಯಾವ ಹಂತಕ್ಕಾದರೂ ಹೋಗಬಹುದು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಈ ಮಾತು ಎನ್ನುವುದು ಸಾರ್ವಜನಿಕ ಜೀವನದಲ್ಲಿ ಅಸ್ತ್ರ ಎನ್ನುವುದು ಎಷ್ಟು ದಿಟವೋ, ಅದೇ ಮಾತು ಅನೇಕ ಸಮಯದಲ್ಲಿ ತಿರುಗುಬಾಣವಾಗಿರುವುದನ್ನು ನೋಡಿದ್ದೇವೆ.

ತಮ್ಮ ಮಾತಿನಿಂದಲೇ ರಾಜಕೀಯವನ್ನು ಹಾಳು ಮಾಡಿಕೊಂಡಿರುವ ಅನೇಕ ನಾಯಕರನ್ನು ನೋಡಿದ್ದೇವೆ. ಆದರೆ ಮಾತನ್ನು ಎಲ್ಲಿ ಎಷ್ಟರ ಮಟ್ಟಿಗೆ ಆಡಬೇಕು? ಯಾವ ಸಮಯದಲ್ಲಿ ಮೌನ ವಾಗಿರಬೇಕು ಎನ್ನುವುದೇ ರಾಜಕೀಯ ಪಠ್ಯದ ಮೊದಲ ಪಾಠ. ಮಾತು-ಮೌನ ಎನ್ನುವ ಅಸ್ತ್ರ- ಪ್ರತ್ಯಸ್ತ್ರದ ನಡುವೆ ಇರುವ ಸಣ್ಣ ಅಂತರವನ್ನು ಅರಿಯುವುದೇ ಮುತ್ಸದ್ದಿ ರಾಜಕಾರಣಿಯ ಮೊದಲ ಗುಣ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿರುವ ಮಾತು.

ಸದ್ಯ ನಾಯಕನ ಬದಲಾವಣೆ, ಸಚಿವ ಸಂಪುಟ ಪುನಾರಚನೆ, ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಹತ್ತು ಹಲವು ಗೊಂದಲದ ಗೂಡಾಗಿರುವ ಕರ್ನಾಟಕ ಕಾಂಗ್ರೆಸ್‌ನಲ್ಲಿಯೂ ಇದೇ ಮಾತು-ಮೌನದ ನಡುವೆ ಗುದ್ದಾಟ ನಡೆಯುತ್ತಿದೆ.

ನಾಯಕತ್ವ ಬದಲಾವಣೆಯ ಆರಂಭದಲ್ಲಿ ‘ಮಾತಿಗೆ- ಪ್ರತಿಮಾತು’ ನಡೆಯುತ್ತಿತ್ತು. ಆದರೀಗ ಮಾತಿಗೆ ಮೌನದ ಉತ್ತರ, ಮೌನವಾಗಿದ್ದರೆ ಮಾತಿನಿಂದ ತಿವಿಯುವ ತಂತ್ರಗಾರಿಕೆ ನಡೆಯುತ್ತಿರುವು ದನ್ನು ನೋಡಬಹುದಾಗಿದೆ. ನಾಯಕತ್ವ ಬದಲಾವಣೆಯ ವಿಷಯ ಮುನ್ನಲೆಗೆ ಬಂದ ಸಮಯ ದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಆಪ್ತರ ನಡುವಿನ ಮಾತಿನ ಮೇಲಾಟ, ಕಳೆದ ಒಂದು ತಿಂಗಳಿಂದ ತಕ್ಕಮಟ್ಟಿಗೆ ತಗ್ಗಿದೆ.

ಅದರಲ್ಲಿಯೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ನಾಯಕತ್ವ ಬದಲಾವಣೆ ವಿಷಯದಲ್ಲಿ ‘ಮೌನ’ಕ್ಕೆ ಶರಣಾಗಿರುವ ಹಿಂದಿನ ಗುಟ್ಟೇನು ಎನ್ನುವುದೇ ಈಗಿರುವ ಬಹುದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ: Ranjith H Ashwath Column: ಪರೀಕ್ಷೆ ನಡೆಸೋದು ಬರೀ ಪಾಸ್‌ ಮಾಡೋಕಲ್ಲ !

ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಏರಿದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಎರಡುವರೆ ವರ್ಷ ತುಂಬು ಹೊಸ್ತಿಲಿನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಆಪ್ತರಿಂದ ಈ ಗೊಂದಲ ಶುರುವಾಗಿತ್ತು. ಮಾಡಿದ್ದ ಕೆಲಸಕ್ಕೆ ಕೂಲಿ ಕೇಳುತ್ತೇವೆ ಎನ್ನುವ ಮಾತು ಆ ಕಡೆಯಿಂದ ಬರುತ್ತಿದ್ದಂತೆ ಸಿದ್ದರಾಮಯ್ಯ ಆಪ್ತರು, ದಲಿತ ಸಿಎಂ, ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಎನ್ನುವ ಹೇಳಿಕೆಯನ್ನು ಶುರುಮಾಡಿದ್ದರು.

ಈ ವಿಷಯದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಅದಾದ ಬಳಿಕ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಮೌನವಾಗಿರಿ ಎನ್ನುವ ಸಂದೇಶ ನೀಡಿದ್ದರೂ ಮಾತಿನ ಮೇಲಾಟಕ್ಕೆ ಬ್ರೇಕ್ ಬಿದ್ದಿರಲಿಲ್ಲ.

ಸುಮಾರು ನಾಲ್ಕೈದು ತಿಂಗಳಿನಿಂದ ಶುರುವಾದ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಅಲ್ಲಿಂದ ಮುಂದಕ್ಕೆ ಹೋಗಿಲ್ಲ ಎನ್ನುವುದು ವಾಸ್ತವ. ಆದರೆ ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮ ಯ್ಯ ಅವರು, ‘ನಾನೇ ಐದು ವರ್ಷ ಮುಖ್ಯಮಂತ್ರಿ’ ಎನ್ನುವ ಹೇಳಿಕೆಯಿಂದ ‘ಹೈಕಮಾಂಡ್ ಹೇಳಿದ ಕ್ಷಣವೇ ರಾಜೀನಾಮೆ ನೀಡುವೆ’ ಎನ್ನುವ ತನಕ ಬಂದು ನಿಂತರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಿನಕ್ಕೊಂದು ಗೂಡಾರ್ಥದ ಹೇಳಿಕೆಗಳನ್ನು ನೀಡುತ್ತಾ ವಿಷಯ ಜೀವಂತವಾಗಿಡುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.

ಈ ನಡುವೆ ಪಂಚರಾಜ್ಯ ಚುನಾವಣೆಯ ನೆಪದಲ್ಲಿ ಈ ಎಲ್ಲವನ್ನು ಬದಿಗಿಟ್ಟು ಚುನಾವಣೆ ಕೆಲಸ ಮಾಡಿ ಎನ್ನುವ ಸಂದೇಶವನ್ನು ಹೈಕಮಾಂಡ್ ನೀಡಿದ ಬಳಿಕ ಮೌನಕ್ಕೆ ನಾಯಕರಿಬ್ಬರು ಶರಣಾದರು. ನಾಯಕರು ಮೌನಕ್ಕೆ ಶರಣಾದರೂ ಅವರ ಬೆಂಬಲಿಗರು, ಆಪ್ತರು ವಿವಾದವನ್ನು ಜೀವಂತವಾಗಿಡಲು ದಿನಕ್ಕೊಂದು ಹೇಳಿಕೆ ನೀಡಿಕೊಂಡೇ ಬಂದಿದ್ದಾರೆ.

ಡಿ.ಕೆ.ಶಿವಕುಮಾರ್ ಆಪ್ತರು, ಡಿಕೆ ಜನ್ಮದಿನಕ್ಕೆ ಬರ್ತ್‌ಡೇ ‘ಗಿಫ್ಟ್’ ಸಿಗಲಿದೆ ಎಂದು ಹೇಳಿ‌ ಕೊಳ್ಳುತ್ತಿದ್ದರೆ, ಇನ್ನೊಂದೆಡೆ ಸಿದ್ದರಾಮಯ್ಯ ಅವರು ಅಹಿಂದ ಯಾತ್ರೆ, ಸರಕಾರಕ್ಕೆ ಮೂರು ವರ್ಷ ಎನ್ನುವ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಆರಂಭಿಸಿದ್ದಾರೆ. ಎರಡೂ ಕಡೆಯಿಂದ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರೂ, ಸಿದ್ದು-ಡಿಕೆ ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ಸಿದ್ದರಾಮಯ್ಯನವರಂತೂ ಕಳೆದೊಂದು ವಾರದಿಂದ ಯಾವುದೇ ಪ್ರತಿಕ್ರಿಯೆ ನೀಡದೇ ‘ಮೌನ’ ವಾಗಿದ್ದುಕೊಂಡೇ ತಮ್ಮ ದಾಳವನ್ನು ಉರುಳಿಸುವಲ್ಲಿ ನಿರತರಾಗಿದ್ದಾರೆ. ಆದರೆ ಈಗ ಹೂಡಿರುವ ದಾಳ ಯಾರಿಗೆ ಲಾಭ ಎನ್ನುವುದು ಮಾತ್ರ ತಿಳಿಯುತ್ತಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ತಮ್ಮ ತಮ್ಮ ನಡೆಯ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ತಮ್ಮ ಆಪ್ತರ ಮೂಲಕ ದಾಳಗಳನ್ನು ಉರುಳಿಸು ತ್ತಿದ್ದರೂ, ಆ ದಾಳಗಳು ಸರಿಯಾದ ದಾರಿಯಲ್ಲಿಯೇ ಸಾಗುತ್ತಿವೆಯೇ ಎನ್ನುವ ಬಗ್ಗೆ ಸ್ಪಷ್ಟನೆ ಆಪ್ತರಿಗೂ ನೀಡುತ್ತಿಲ್ಲ.

ಅದರಲ್ಲಿಯೂ ಕಳೆದ ವಾರ ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್, ತಮ್ಮೊಂದಿಗೆ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರ ಹೊರತಾಗಿಯೂ ಇನ್ಯಾರನ್ನು ಕರೆದುಕೊಂಡು ಹೋಗದೇ ಇರುವುದು, ಅಲ್ಲಿ ಯಾವ ನಾಯಕರನ್ನು ಭೇಟಿಯಾಗಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡದೇ ಇರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಎನ್ನುವುದು ಸ್ಪಷ್ಟ.

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಕಾರಣಕ್ಕೆ ದೆಹಲಿಗೆ ತೆರಳು ತ್ತಿರುವುದಾಗಿ ಡಿ.ಕೆ.ಶಿವಕುಮಾರ್ ತಮ್ಮ ಆಪ್ತರ ಬಳಿ ಹೇಳಿಕೊಂಡು ಹೋಗುವಾಗಲೇ ಅವರಿಗೆ ಅಲ್ಲಿ ರಾಹುಲ್ ಸಿಗುವುದಿಲ್ಲ ಎನ್ನುವ ಖಾತ್ರಿ ಇತ್ತು. ಆದರೂ ದೆಹಲಿಗೆ ಹೋಗಿದ್ದು, ಎರಡು ದಿನ ಅಲ್ಲಿಯೇ ಉಳಿದುಕೊಳ್ಳುವುದರ ಹಿಂದಿನ ಕಾರಣವೇ ಮೌನವಾಗಿಯೇ ‘ಸಂದೇಶ’ ರವಾನೆ ಮಾಡುವುದಾಗಿತ್ತು.

ಪಂಚರಾಜ್ಯ ಚುನಾವಣಾ ಫಲಿತಾಂಶದ ಹೊಸ್ತಿಲಿನಲ್ಲಿ ಕರ್ನಾಟಕ ನಾಯಕತ್ವದ ಬಗ್ಗೆ ಚರ್ಚಿಸಿ ದರೆ ಅದು ಪಕ್ಷದ ನಾಯಕರ ಮನಸ್ಸಿಗೆ ನಾಟುವುದಿಲ್ಲ ಎನ್ನುವುದು ಡಿಕೆಶಿಗೆ ತಿಳಿದಿರಲಿಲ್ಲ ಎಂದೇನಿಲ್ಲ. ಆದರೂ ದೆಹಲಿ ಭೇಟಿಯ ಹಿಂದೆ ನೀಡಬೇಕಾಗಿರುವ ಸಂದೇಶವನ್ನು ನೀಡಿ ವಾಪಸಾಗುವುದಷ್ಟೇ ಆಗಿತ್ತು.

ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಭೇಟಿಯ ಹಿಂದೆ ಇದೇ ರಣತಂತ್ರ ವಿತ್ತು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಡಿಕೆ ಸಹೋದರರು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸುವ ವೇಳೆ, 2023ರ ಚುನಾವಣೆಯ ಬಳಿಕ ಖರ್ಗೆ ನಿವಾಸದಲ್ಲಿ ನಡೆದ ಗೌಪ್ಯ ಸಭೆಯ ವೇಳೆ ನೀಡಿದ್ದ ‘ಭರವಸೆ’ಗಳನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಸ್ಥಾನದ ಮೇಲೆ ಕ್ಲೇಮ್ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಅವರು, ರಾಹುಲ್ ಗಾಂಧಿ ಅವರು ಮೈಸೂರಿಗೆ ಆಗಮಿಸಿದಾಗ ವಿಷಯ ಪ್ರಸ್ತಾಪಿಸಿದ್ದು, ‘ವಿಲ್ ಕಾಲ್ ಯೂ ಸೂನ್’ ಎನ್ನುವ ಭರವಸೆಯನ್ನು ರಾಹುಲ್ ನೀಡಿದ್ದು ಸಾರ್ವಜನಿಕ ವಲಯದಲ್ಲಿರುವ ವಿಷಯ. ಆದರೆ ದೆಹಲಿ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರ ಮಟ್ಟದಲ್ಲಿ ಈವರೆಗೆ ನಾಯಕತ್ವ ಬದಲಾವಣೆ ವಿಷಯದ ಬಗ್ಗೆ ಗಂಭೀರ ಚರ್ಚೆಗಳೇ ನಡೆದಿಲ್ಲ. ನನ್ನ ಬಳಿ ಯಾವುದೇ ಚರ್ಚೆಗಳು ನಡೆಯದೇ ಇರುವಾಗ ಅದರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಲಿ ಎನ್ನುವ ಮನಸ್ಥಿತಿಯಲ್ಲಿ ರಾಹುಲ್ ಗಾಂಧಿ ಇದ್ದರಂತೆ.

ಇದಕ್ಕೆ ಪೂರಕ ಎನ್ನುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಸಿಎಂ ಬದಲಾವಣೆ ಪ್ರಸ್ತಾಪವೇ ಇಲ್ಲ’ ಎಂದು ಕಲಬುರಗಿಯಲ್ಲಿ ಹೇಳಿದ್ದಾರೆ. ಶಾಸಕ, ಸಚಿವರ ಪರೇಡ್, ಡಿಕೆಶಿ-ಸಿದ್ದರಾಮಯ್ಯ ಮೌನದಾಟದ ನಡುವೆ ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ನಿಲುವೇನು ಎನ್ನುವ ಕುತೂಹಲ ಅನೇಕರಲ್ಲಿತ್ತು. ಆದರೆ ಈ ಎಲ್ಲ ಕುತೂಹಲಗಳಿಗೆ ಕಲಬುರಗಿ ಯಿಂದಲೇ ಸ್ಪಷ್ಟನೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದಿದ್ದರು.

ಅದಾದ ಮರುದಿನವೇ ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಸದ್ಯಕ್ಕೆ ಯಾವುದೇ ದಿನಾಂಕ ನಿಗದಿಯಾಗಿಲ್ಲ. ಈ ಕುರಿತ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದು ಕೊಳ್ಳಲಿದೆ’ ಎನ್ನುವ ಮೂಲಕ ಈ ವಿಷಯ ಸದ್ಯಕ್ಕೆ ಅಪ್ರಸ್ತುತ ಎನ್ನುವ ಸಂದೇಶ ರವಾನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಈ ಹೇಳಿಕೆ ನೀಡುವ ಮೊದಲು ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ನಿಂತು ‘ನಾನು ಇಲ್ಲಿ ಗಾಳಿ ಕುಡಿಯಲು ಬಂದಿಲ್ಲ. ಪಕ್ಷದ ನಾಯಕರನ್ನು ಭೇಟಿ ಯಾಗಲು ಬಂದಿದ್ದೇನೆ. ಯಾರನ್ನು ಭೇಟಿಯಾದೆ ಎನ್ನುವುದನ್ನು ಬಹಿರಂಗಪಡಿಸುವುದಿಲ್ಲ’ ಎನ್ನುವ ಮೂಲಕ ನಾಯಕತ್ವ ಬದಲಾವಣೆಯ ವಿಷಯ ಜೀವಂತವಾಗಿಡುವ ಪ್ರಯತ್ನವನ್ನು ಮಾಡಿದ್ದರು. ಇದರೊಂದಿಗೆ ಸಿದ್ದರಾಮಯ್ಯ ಬಣಕ್ಕಿಂತ ಒಂದು ಹೆಜ್ಜೆ ಮುಂದಿದ್ದೇವೆ ಎನ್ನುವ ಸಂದೇಶ ರವಾನಿಸಲು ಪ್ರಯತ್ನಿಸಿದ್ದರು.

ಇದರ ಬೆನ್ನಲ್ಲೇ, ಸತೀಶ್ ಜಾರಕಿಹೊಳಿ, ಮಹದೇವಪ್ಪ ದೆಹಲಿ ಪರೇಡ್ ನಡೆಸಿ ‘ಅಹಿಂದ’ ವರ್ಗದವರನ್ನು ಪಕ್ಷದ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದರೆ, ಬೆಂಗಳೂರಿನಲ್ಲಿಯೇ ಕೂತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿದರೆ ಅಭ್ಯಂತರವಿಲ್ಲ ಎನ್ನುವ ಸಂದೇಶವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ಮೂಲಕ ಪಕ್ಷದ ಹೈಕಮಾಂಡ್‌ಗೆ ಕಳುಹಿಸುವ ಪ್ರಯತ್ನ ಮಾಡಿದರು.

ಇಷ್ಟೆಲ್ಲ ಚರ್ಚೆಗಳ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನಕ್ಕೆ ಶರಣಾಗಿರುವುದು ಹಲವು ರೀತಿಯ ವಿಶ್ಲೇಷಣೆಗೆ ಮುನ್ನುಡಿ ಬರೆದಿದೆ ಎಂದರೆ ತಪ್ಪಾಗುವುದಿಲ್ಲ. ಈ ಎಲ್ಲದರ ಹೊರತಾಗಿಯೂ ಪಂಚರಾಜ್ಯ ಚುನಾವಣೆಯಲ್ಲಿ ತಕ್ಕಮಟ್ಟಿಗೆ ಸೀಟುಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ ಆ ಖುಷಿಯಲ್ಲಿ ಯಾವುದಾದರೂ ತೀರ್ಮಾನ ಕೈಗೊಳ್ಳುವ ರಿಸ್ಕ್ ತೆಗೆದು ಕೊಳ್ಳುವ ಸಾಧ್ಯತೆಯಿತ್ತು.

ಅದರಲ್ಲಿಯೂ ಅಸ್ಸಾಂ ವಿಧಾನಸಭಾ ಚುನಾವಣಾ ಉಸ್ತುವಾರಿಯಾಗಿದ್ದ ಡಿ.ಕೆ.ಶಿವಕುಮಾರ್, ಆ ಗೆಲುವನ್ನೇ ಮುಂದಿಟ್ಟುಕೊಂಡು ಮತ್ತೊಮ್ಮೆ ಕೂಲಿ ಕೇಳುವ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ ಅಸ್ಸಾಂನಲ್ಲಿ 16-17ರ ಆಸುಪಾಸಿಗೆ ಬಂದು ನಿಂತಿರುವುದರಿಂದ ಆ ಕೂಲಿಯನ್ನು ಕೇಳಲು ಸಾಧ್ಯವಿಲ್ಲ.

ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕರು ಯಾವುದೇ ಹೇಳಿಕೆ ನೀಡಲಿ, ಪಶ್ಚಿಮ ಬಂಗಾಳ, ಅಸ್ಸಾಂ ಪುದುಚೇರಿಯಲ್ಲಿ ಕಾಂಗ್ರೆಸ್ ಯಾವುದೇ ನಿರೀಕ್ಷೆಯನ್ನಿಟ್ಟು ಕೊಂಡಿರಲಿಲ್ಲ. ಇನ್ನು ಕೇರಳದಲ್ಲಿ ನಿರೀಕ್ಷೆಯಂತೆ ಯುಡಿಎಫ್ ಮೈತ್ರಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ.

ತಮಿಳುನಾಡಿನಲ್ಲಿ ಎಲ್ಲರ ನಿರೀಕ್ಷೆ‌ ಮೀರಿ ವಿಜಯ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿರುವುದರಿಂದ ಕಾಂಗ್ರೆಸ್‌ಗೆ ಬಹುದೊಡ್ಡ ಲಾಸ್ ಎನ್ನುವುದೇನು ಆಗಿಲ್ಲ. ಆದರೆ ಈ ಚುನಾವಣೆಯ ಫಲಿತಾಂಶ ವನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜಕೀಯ ವಿಷಯದಲ್ಲಿ ಹೈಕಮಾಂಡ್ ಕೆಲ ದಿನಗಳ ‘ಮೌನ’ ಮುಂದುವರೆಸಿದರೂ ಅಚ್ಚರಿ ಪಡಬೇಕಿಲ್ಲ.

ಏಕೆಂದರೆ, ದೇಶದ ಬಹುಪಾಲು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಪಾಲಿಗೆ ಕರ್ನಾಟಕ ‘ಆಮ್ಲಜನಕ’ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕ ಹೊರತುಪಡಿಸಿ ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿದೆ. ಆದರೆ ‘ಸಂಪನ್ಮೂಲ’ದ ಲೆಕ್ಕದಲ್ಲಿ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳು ಹೇಳಿಕೊಳ್ಳುವಷ್ಟು ಸ್ಥಿತಿಯಲ್ಲಿಲ್ಲ. ಆದ್ದರಿಂದ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಸಣ್ಣ ಏರುಪೇರಾದರೂ ಅದರ ನೇರ ಹೊಡೆತ ಕಾಂಗ್ರೆಸ್‌ನ ಒಟ್ಟಾರೆ ಲೆಕ್ಕಾಚಾರದ ಮೇಲೆ ಆಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಪೂರಕವಾಗಿರುವ ಇನ್ನೊಂದು ರಾಜ್ಯ ಕಾಣಿಸುತ್ತಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ನಾಯಕತ್ವ ಬದಲಾಯಿಸಿದರೂ, ಬದಲಾಯಿಸದಿದ್ದರೂ ಸಮಸ್ಯೆ. ಇದೇ ರೀತಿ ಸಂಪುಟ ಪುನಾರಚನೆ ಮಾಡಿದರೂ ಹೊಡೆತ, ಮಾಡದೇ ಮುಂದೂಡಿದರೂ ಹೊಡೆತ ಎನ್ನುವ ಅರಿವು ದೆಹಲಿ ನಾಯಕರಿಗೆ. ಅದರಿಂದ ಆಗಬಹುದಾದ ಲಾಭ-ನಷ್ಟವನ್ನು ಭರಿಸುವ, ನಿಭಾಯಿಸುವ ಶಕ್ತಿ ಇಂದಿನ ಹೈಕಮಾಂಡ್‌ಗೆ ಇದೆಯೇ? ಎನ್ನುವುದೇ ಈಗಿರುವ ಯಕ್ಷಪ್ರಶ್ನೆ.