Dr N Someshwara Column: ಪೋಲಿ ಮಾತುಗಳನ್ನಾಡಿಸುವ ಟೂರೆಟ್ ಲಕ್ಷಣಾವಳಿ
ಫ್ರಾನ್ಸ್ ದೇಶದ ನರವೈದ್ಯ. ಮಿದುಳಿನ ಬೆಳವಣಿಗೆಗೆ ಸಂಬಂಧಿಸಿದಂಥ ಒಂದು ವಿಶಿಷ್ಟ ಲಕ್ಷಣಾ ವಳಿಯನ್ನು ಈತನು ಮೊದಲ ಬಾರಿಗೆ ವಿವರಿಸಿದ ಕಾರಣ, ಈ ಲಕ್ಷಣಾವಳಿಗೆ ಈತನ ಹೆಸರನ್ನೇ ನೀಡಲಾಗಿದೆ. ಈ ವೈಪರೀತ್ಯದ ಮುಖ್ಯ ಲಕ್ಷಣ ‘ಟಿಕ್ಸ್’. ಟಿಕ್ ಎಂದರೆ ‘ಅನಿಯಂತ್ರಿತ, ಸ್ವಯಂ ಚಾಲಿತ, ಮತ್ತೆ ಮತ್ತೆ ಮರುಕಳಿಸುವ, ಅಂಗಾಂಗ ಚಲನೆ ಹಾಗೂ ಉದ್ಗಾರಗಳು’. ರಾಣಿ ಮುಖ ರ್ಜಿ ‘ಚ ಚ ಚ’ ಎಂಬ ತ್ವರಿತ ಉದ್ಗಾರದೊಡನೆ ತನ್ನ ಕುತ್ತಿಗೆ ಯನ್ನು ಎಡಕ್ಕೆ ಮತ್ತೆ ಮತ್ತೆ ತ್ವರಿತವಾಗಿ ತಿರುಗಿಸುತ್ತಾರೆ.

ಅಂಕಣಕಾರ ಡಾ.ನಾ.ಸೋಮೇಶ್ವರ

ಹಿಂದಿರುಗಿ ನೋಡಿದಾಗ
‘ಹಿಚ್ಕಿ’ ಎನ್ನುವ ಹಿಂದಿ ಚಿತ್ರವು 2018ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಾಣಿ ಮುಖರ್ಜಿಯವರು ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದರು. ಸಿದ್ಧಾರ್ಥ ಪಿ.ಮಲ್ಹೋತ್ರ ನಿರ್ದೇಶಿಸಿದ ಈ ಚಿತ್ರಕ್ಕೆ ಆರಂಭದಲ್ಲಿ ಹಣತೊಡಗಿಸಲು ಯಾರೂ ಮುಂದೆ ಬರಲಿಲ್ಲ. ಆದರೆ ಕೊನೆಗೆ ಆದಿತ್ಯ ಚೋಪ್ರಾ ಹಣವನ್ನು ತೊಡಗಿಸಿದರು. 20 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರವು, 215 ಕೋಟಿ ರುಪಾಯಿ ಲಾಭವನ್ನು ಗಳಿಸಿತು. ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದ ಈ ಚಿತ್ರದಲ್ಲಿ, ರಾಣಿ ಮುಖರ್ಜಿಯವರು ‘ನೈನಾ’ ಮಾಥುರ್ ಎಂಬ ಟುರೆಟ್ ಸಿಂಡ್ರೋಮ್ ಗ್ರಸ್ತ (ಟಿಎಸ್) ಅಧ್ಯಾಪಿಕೆಯಾಗಿ ನೀಡಿದ ಅಭಿನಯ ಅತ್ಯಂತ ಮನೋಜ್ಞ. ಹಿಚ್ಕಿ ಚಿತ್ರಕ್ಕೆ ಸ್ಪೂರ್ತಿ ಅಮೆರಿಕದ ಪ್ರೇರಣದಾಯಿ ಭಾಷಣಕಾರ ಬ್ರಾಡ್ ಕೋಹೆನ್ ಅವರ ಆತ್ಮಕಥೆ ‘ಫ್ರಂಟ್ ಆಫ್ ದ ಕ್ಲಾಸ್: ಹೌ ಟುರೆಟ್ ಸಿಂಡ್ರೋಮ್ ಮೇಡ್ ಮಿ ದ ಟೀಚರ್ ಐ ನೆವರ್ ಹ್ಯಾಡ್’. ಈತನ ಆತ್ಮಕಥೆಯು ಯೂಟ್ಯೂಬಿನಲ್ಲಿ ‘ಫ್ರಂಟ್ ಆಫ್ ದಿ ಕ್ಲಾಸ್’ ಎಂಬ ಹೆಸರಿನಲ್ಲಿ ಲಭ್ಯವಿದೆ.
ಇದನ್ನೂ ಓದಿ: Dr N Someshwara Column: ನಮಗೆಂಥ ಶಿಕ್ಷಣ ಬೇಕೆಂದು ನಮಗೇಕೆ ತಿಳಿದಿಲ್ಲ ?
ಈ ಚಿತ್ರವನ್ನು ದಯವಿಟ್ಟು ನೋಡಿ ( https:// www.youtube.com/watch?v=EsPTGIW_ hGQ , ಒಂದು ಹೊಸ ಜಗತ್ತು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಹೃದಯ ತುಂಬಿ ಬರು ತ್ತದೆ. ಹಿಚ್ಕಿ ಎಂದರೆ ಬಿಕ್ಕಳಿಕೆ. ಕಥಾನಾಯಕಿಯು ಟಿಎಸ್ ಪೀಡಿತಳು. ಟುರೆಟ್ ಎನ್ನುವುದು ಓರ್ವ ನರವೈದ್ಯನ ಹೆಸರು. ಈತನ ಪೂರ್ಣ ಹೆಸರು ಜಾರ್ಜಸ್ ಆಲ್ಬರ್ಟ್ ಎಡ್ವರ್ಡ್ ಬ್ರೂಟಸ್ ಜಯೋಸ್ ದಲ ಟುರೆಟ್ (1857-1904).

ಫ್ರಾನ್ಸ್ ದೇಶದ ನರವೈದ್ಯ. ಮಿದುಳಿನ ಬೆಳವಣಿಗೆಗೆ ಸಂಬಂಧಿಸಿದಂಥ ಒಂದು ವಿಶಿಷ್ಟ ಲಕ್ಷಣಾವಳಿಯನ್ನು ಈತನು ಮೊದಲ ಬಾರಿಗೆ ವಿವರಿಸಿದ ಕಾರಣ, ಈ ಲಕ್ಷಣಾವಳಿಗೆ ಈತನ ಹೆಸರನ್ನೇ ನೀಡಲಾಗಿದೆ. ಈ ವೈಪರೀತ್ಯದ ಮುಖ್ಯ ಲಕ್ಷಣ ‘ಟಿಕ್ಸ್’. ಟಿಕ್ ಎಂದರೆ ‘ಅನಿಯಂತ್ರಿತ, ಸ್ವಯಂಚಾಲಿತ, ಮತ್ತೆ ಮತ್ತೆ ಮರುಕಳಿಸುವ, ಅಂಗಾಂಗ ಚಲನೆ ಹಾಗೂ ಉದ್ಗಾರಗಳು’. ರಾಣಿ ಮುಖರ್ಜಿ ‘ಚ ಚ ಚ’ ಎಂಬ ತ್ವರಿತ ಉದ್ಗಾರದೊಡನೆ ತನ್ನ ಕುತ್ತಿಗೆ ಯನ್ನು ಎಡಕ್ಕೆ ಮತ್ತೆ ಮತ್ತೆ ತ್ವರಿತವಾಗಿ ತಿರುಗಿಸುತ್ತಾರೆ. ಈ ಲಕ್ಷಣಾವಳಿಯಲ್ಲಿ ಯಾವ ರೀತಿಯ ಅನಿಯಂತ್ರಿತ ಶಬ್ದಗಳು ಹೊರಬರಬಹುದು ಹಾಗೂ ಶರೀರದ ಯಾವ ಸ್ನಾಯು ಗಳು ತ್ವರಿತ ಮತ್ತು ಅನಿಯಂತ್ರಿತ ಚಲನೆಗಳನ್ನು ತೋರಬಹುದು ಎನ್ನುವುದು ವ್ಯಕ್ತಿ ಯಿಂದ ವ್ಯಕ್ತಿಗೆ ಬದಲಾಗಬಹುದು.
ಇಂಗ್ಲಿಷಿನಲ್ಲಿ ‘ವಿನ್ಸೆಂಟ್ ವಿಲ್ ಮೀರ್, ದಿ ರೋಡ್ ವಿತಿನ್, ಮೇಜ಼್, ದಿ ಟಿಕ್ ಕೋಡ್, ಐ ಹ್ಯಾವ್ ಟೂರೆಟ್ಸ್, ಟೂರೆಟ್ಸ್ ಡಸಂಟ್ ಹ್ಯಾವ್ ಮಿ’ ಮುಂತಾದ ಚಿತ್ರಗಳು ನಿರ್ಮಾಣ ವಾಗಿವೆ. ಆದರೆ ಭಾರತೀಯ ಭಾಷೆಗಳಲ್ಲಿ ಹಿಚ್ಕಿ ಮೊದಲನೆಯ ಚಿತ್ರವಾಗಿದೆ. ಷಾರ್ಕೋ: 19ನೆಯ ಶತಮಾನದ ಯುರೋಪಿನಲ್ಲಿ ನರ ವಿಜ್ಞಾನಕ್ಕೆ ಸಂಬಂಧಿಸಿದ ಅದ್ಭುತ ಸಂಶೋ ಧನೆಗಳು ನಡೆದವು.
ಅದರ ಫಲವಾಗಿ ಅನೇಕ ನರರೋಗಗಳು ಹಾಗೂ ನರ ವೈಪರೀತ್ಯಗಳು ಬೆಳಕಿಗೆ ಬಂದವು. ಇಂಥ ಸಂಶೋಧಕರ ಪೈಕಿ ಮುಂಚೂಣಿಯಲ್ಲಿದ್ದವನು ಜೀನ್ ಮಾರ್ಟಿನ್ ಷಾರ್ಕೋ (1825-1893). ಈತನನ್ನು ‘ಆಧುನಿಕ ನರವಿಜ್ಞಾನದ ಪಿತಾಮಹ’ ಎಂದೂ ಕರೆಯು ವುದುಂಟು. ಈತನು ಪ್ಯಾರಿಸ್ ನಗರದ ಪ್ರಖ್ಯಾತ ಸಾಲ್ಪೀತ್ರಿಂii ಆಸ್ಪತ್ರೆಯಲ್ಲಿ ಕೆಲಸವನ್ನು ಮಾಡುತ್ತಿದ್ದ. ನರವೈದ್ಯಕೀಯದಲ್ಲಿ ಅಪಾರ ಪರಿಣತಿಯನ್ನು ಪಡೆದಿದ್ದ ಈತನ ಬಳಿ ಕಲಿಯಲು ಯುವ ವೈದ್ಯರು ಹಾಗೂ ಚಿಕಿತ್ಸೆಯನ್ನು ಪಡೆಯಲು ಅಸಂಖ್ಯ ರೋಗಿಗಳು ಬರುತ್ತಿದ್ದರು.
ಈತನ ಜನಪ್ರಿಯತೆಯನ್ನು ಕಂಡ ಆಸ್ಪತ್ರೆಯ ಆಡಳಿತ ವರ್ಗದವರು ಈತನನ್ನು ಆಸ್ಪತ್ರೆ ಯ ನಿರ್ದೇಶಕನನ್ನಾಗಿ ಆಯ್ಕೆ ಮಾಡಿದರು. ಈತನ ಬಳಿ ಶಿಷ್ಯವೃತ್ತಿ ಬಯಸಿ ಬಂದವರಲ್ಲಿ ಆಧುನಿಕ ಮನೋವಿಜ್ಞಾನಕ್ಕೆ ದೊಡ್ಡ ತಿರುವನ್ನು ಕೊಟ್ಟ ಸಿಗ್ಮಂಡ್ ಫ್ರಾಯ್ಡ್ ಒಬ್ಬನಾ ಗಿದ್ದ. ಮತ್ತೋರ್ವ ಪ್ರಖ್ಯಾತ ಶಿಷ್ಯನೆಂದರೆ ಜಯೋಸ್ ದಲ ಟೂರೆಟ್.
ಈತನು ಮೊದಲ ಬಾರಿಗೆ ವಿವರಿಸಿದ ಲಕ್ಷಣಾವಳಿಯು, ಈತನ ಹೆಸರಿನಲ್ಲಿಯೇ ‘ಟುರೆಟ್ ಲಕ್ಷಣಾವಳಿ’ ಎಂದು ಪ್ರಸಿದ್ಧವಾಗಿದೆ. ಫ್ರಾನ್ಸ್ ದೇಶದ ಒಂದು ಪುಟ್ಟ ಹಳ್ಳಿಯಲ್ಲಿ ಟುರೆಟ್, ಅಕ್ಟೋಬರ್ 30, 1857ರಲ್ಲಿ ಹುಟ್ಟಿದ. ಈತನ ಬಾಲ್ಯದ ಬಗ್ಗೆ ಹೆಚ್ಚಿಗೆ ಏನೂ ತಿಳಿದಿಲ್ಲ. 1873-76ರವರೆಗೆ ಪಾಯಟರೀಸ್ ಮತ್ತು ಪ್ಯಾರಿಸ್ ನಗರಗಳಲ್ಲಿ ವೈದ್ಯಕೀಂii ಶಿಕ್ಷಣವನ್ನು ಪಡೆದ. ನಂತರ ಡಾ. ಷಾರ್ಕೋ ಅವರ ನೇತೃತ್ವದಲ್ಲಿ ಸಾಲ್ಪೀತ್ರಿಯ ಆಸ್ಪತ್ರೆಯಲ್ಲಿ ಉನ್ನತ ತರಬೇತಿಯನ್ನು ಪಡೆದ.
ಉನ್ಮಾದ (ಹಿಸ್ಟೀರಿಯ), ವಶೀಕರಣ ವಿದ್ಯೆ (ಹಿಪ್ನೋಸಿಸ್), ತತ್ತರಿಕೆ (ಅಟಾಕ್ಸಿಯ, ಅಂಗಾಂಗ ಳ ಚಲನೆಯ ನಡುವೆ ಹೊಂದಾಣಿಕೆ ಇಲ್ಲದಿರುವಿಕೆ) ಮುಂತಾದ ಪ್ರಕರಣಗಳನ್ನು ಅಧ್ಯ ಯನ ಮಾಡಿ ಅವುಗಳ ಮೇಲೆ ಪ್ರಭುತ್ವವನ್ನು ಸಾಧಿಸಿದ. ಆಗ ಷಾರ್ಕೋ, ಅಸಹಜ ಅನಿರೀ ಕ್ಷಿತ ಅಂಗಾಂಗ ಚಲನಾ ವೈಪರೀತ್ಯಗಳಿಗೆ (ಪ್ಯಾರಾಕ್ಸಿಸಿಮಲ್ ಮೂವ್ಮೆಂಟ್ ಡಿಸಾರ್ಡರ್) ಸಂಬಂಧಿಸಿದಂತೆ ಅಧ್ಯಯನವನ್ನು ಮಾಡಲು ಟುರೆಟನಿಗೆ ಸೂಚಿಸಿದ. 1884. ಟುರೆಟ್ ಇನ್ನೂ, ಷಾರ್ಕೋವಿನ ಬಳಿ ನರವೈದ್ಯಕೀಯವನ್ನು ಕಲಿಯುತ್ತಿದ್ದ ವಿದ್ಯಾರ್ಥಿ ಯಾಗಿದ್ದ. ಆಗಲೇ ಆತನ ಹೆಸರನ್ನು ಹೊರಲಿರುವ ಹೊಸ ಲಕ್ಷಣಾವಳಿಯ ಸಮಗ್ರ ವಿವರಣೆಯನ್ನು ಮೊದಲ ಬಾರಿಗೆ ಗಮನಿಸಿ, ದಾಖಲಿಸಿ, ಒಂದು ಸ್ಪಷ್ಟ ಚಿತ್ರವನ್ನು ಕೊಡುವ ಅಪೂರ್ವ ಅವಕಾಶವನ್ನು ಷಾರ್ಕೋ, ಟುರೆಟನಿಗೆ ವಹಿಸಿದ.
ಟುರೆಟ್, 1885ರ ಜನವರಿ ತಿಂಗಳಿನಲ್ಲಿ ‘ಮ್ಯಾಲಡಿ ದೆಸ್ ಟಿಕ್’ ಎಂಬ ಪ್ರಬಂಧವನ್ನು ‘ಆರ್ಕೈವ್ಸ್ ದ ನ್ಯೂರಾಲಜಿ’ ಪತ್ರಿಕೆಯಲ್ಲಿ ಪ್ರಕಟಿಸಿದ. ಈ ಪ್ರಬಂಧವು 9 ರೋಗಿಗಳ ಅಧ್ಯಯನ ಸಾರಾಂಶವನ್ನು ಒಳಗೊಂಡಿತ್ತು. ಈ 9 ರೋಗಿಗಳ ಅಧ್ಯಯನದಲ್ಲಿ ಹಲವು ನಿರ್ದಿಷ್ಟ ರೋಗ ಲಕ್ಷಣಗಳನ್ನು ದಾಖಲಿಸಿದ. ಮೊದಲನೆಯದು ಈ ಲಕ್ಷಣಾವಳಿಯು ಬಾಲ್ಯದಲ್ಲಿಯೇ ಕಂಡುಬರುತ್ತದೆ. ಕುಟುಂಬಗಳಲ್ಲಿ ಆನುವಂಶಿಕವಾಗಿ ವ್ಯಾಪಿಸುತ್ತದೆ.
ರೋಗಲಕ್ಷಣಗಳು ಕೆಲವು ಸಲ ಉಗ್ರವಾಗಿ, ಕೆಲವು ಸಲ ಸೌಮ್ಯವಾಗಿ, ಏರಿಳಿಯುತ್ತಲೇ ಇರುತ್ತವೆ. ಪ್ರತಿಸಲವೂ ಏಕರೂಪದ ಅಂಗಾಂಗಗಳ ಅಸಹಜ, ಪುನರಾವರ್ತಿತ, ತ್ವರಿತ ಚಲನೆಗಳು ಕಂಡುಬರುತ್ತವೆ. ಇವು ಬರಲಿವೆ ಎಂಬ ಮುನ್ಸೂಚನೆಯು (ಪ್ರಿಮಾನಿಶನ್) ಈ ವ್ಯಕ್ತಿಗಳಿಗೆ ದೊರೆಯುತ್ತದೆ. ಮಾರ್ಮರುನುಡಿಯುವಿಕೆ (ಎಕೋ ಲಾಲಿಯ) ಅಂದರೆ, ಹೇಳಿದ ಮಾತನ್ನೇ ಮತ್ತೆ ಮತ್ತೆ ಪುನರಾವರ್ತಿಸುವುದು (ಆ ಮಾತಿಗೆ ಅರ್ಥವಿರಲೇಬೇಕಾ ಗಿಲ್ಲ) ಹಾಗೂ ಅಸಭ್ಯನುಡಿಯುವಿಕೆ (ಕೋಪ್ರೋಲಾಲಿಯ) ಮುಖ್ಯವಾದವು.
ಅಸಭ್ಯನುಡಿಗಳೆಂದರೆ, ಕೆಟ್ಟ ನುಡಿಗಳು ಹಾಗೂ ಪೋಲಿ ನುಡಿಗಳು. ಜನ ನಾಚಿ ತಲೆ ಯನ್ನು ಬಾಗಿಸಬೇಕಾದಂಥ ಅಶ್ಲೀಲ ಬೈಗುಳ. ಸಮಾಜವು ಟುರೆಟ್ ಲಕ್ಷಣಾವಳಿಯಿರುವ ಜನರನ್ನು ಅಷ್ಟು ಸಹಾನುಭೂತಿಯಿಂದ ನೋಡಲು ಹಿಂದೆಗೆಯಲು ಕಾರಣ ಈ ಸೊಂಟ ದ ಕೆಳಗಿನ ಮಾತುಗಳು. ಆದರೆ ಈ ಎಲ್ಲ ಕೆಟ್ಟನುಡಿಗಳು ಅಪ್ರಜ್ಞಾಪೂರ್ವಕವಾಗಿ ಹೊರಡುತ್ತವೆ ಎನ್ನುವ ವಿಚಾರವನ್ನು ನೆನಪಿನಲ್ಲಿಡಬೇಕು.
ಹಾಗೆಯೇ ಎಲ್ಲ ಟಿಎಸ್ ಜನರಲ್ಲಿ ಎಲ್ಲ ಲಕ್ಷಣಗಳು ಕಾಣಲೇಬೇಕೆಂಬ ನಿಯಮವು ಇರುವುದಿಲ್ಲ ಎನ್ನುವುದನ್ನು ಮರೆಯಬಾರದು. ಟುರೆಟ್, ತನ್ನ ‘ಮ್ಯಾಲಡಿ ದೆಸ್ ಟಿಕ್’ ಪ್ರಬಂಧವನ್ನು ಪ್ರಕಟಿಸಿದ ಮರುವರ್ಷ, 1886ರಲ್ಲಿ ಪೂರ್ಣಪ್ರಮಾಣದ ವೈದ್ಯನಾದ. ಈತನು ಸಾಲ್ಪೀತ್ರಿಯ ಆಸ್ಪತ್ರೆಯನ್ನು ಬಿಟ್ಟು ಇತರ ಆಸ್ಪತ್ರೆಗಳಲ್ಲಿ ಕೆಲಸವನ್ನು ಮಾಡಿದ. ತಾನು ಹೋದ ಕಡೆಗಳಲ್ಲೆಲ್ಲ ಉನ್ಮಾದ, ವಶೀಕರಣ ವಿದ್ಯೆ, ತತ್ತರಿಕೆ, ಟಿಎಸ್ ಬಗ್ಗೆ ಅಧ್ಯ ಯನವನ್ನು ಮುಂದುವರಿಸಿದ.
ಹಾಗೆಯೇ ತನ್ನ ವೈಯುಕ್ತಿಕ ಆಸಕ್ತಿಯ ಕ್ಷೇತ್ರಗಳಾದ ಕಲೆ, ಸಾಹಿತ್ಯ ಮತ್ತು ಕಾನೂನಿಗೆ ಸಂಬಂಧಿಸಿದ ಹಾಗೆ ಲೇಖನಗಳನ್ನು ಪ್ರಕಟಿಸಿದ. 1893. ಟುರೆಟ್‌ನ ಪಾಲಿಗೆ ಒಂದು ಕೆಟ್ಟ ವರ್ಷ. ಆ ವರ್ಷದಲ್ಲಿ ಟುರೆಟ್ಟಿನ ಮಗ ಮರಣಿಸಿದ. ಅವನಿಗೆ ನರ ವೈದ್ಯಕೀಯವನ್ನು ಕಲಿಸಿದ ಗುರುಗಳಾದ ಷಾರ್ಕೋ ನಿಧನ ವಾದ. ರೋಸ್ ಕ್ಯಾಂಪರ್ ಎಂಬ ಮಹಿಳೆಯು ಟುರೆಟ್ಟಿನ ತಲೆಗೆ ಗುಂಡನ್ನು ಹಾರಿಸಿದಳು. ಗುಂಡು ತಲೆಗೆ ಸಾಕಷ್ಟು ಹಾನಿಯನ್ನು ಮಾಡಿದರೂ, ಜೀವವನ್ನು ತೆಗೆಯಲಿಲ್ಲ.
ಸಾಲ್ಪೀತ್ರಿಯ ಆಸ್ಪತ್ರೆಯವರು ತನ್ನನ್ನು ವಶೀಕರಣಕ್ಕೊಳಪಡಿಸಿರುವ ಕಾರಣ, ತಾನು ತನ್ನ ಜೀವನವನ್ನು ಸಮಾಧಾನಕರವಾಗಿ ನಿರ್ವಹಿಸುತ್ತಲೂ ಆಗುತ್ತಿಲ್ಲ ಎಂಬುದು ಆಕೆಯ ದೂರು. ಈ ಕೊರಗಿನ ಹಿನ್ನೆಲೆಯಲ್ಲಿ ಆಕೆ ಗುಂಡು ಹಾರಿಸಿದಳು. ಈ ಗುಂಡೇಟಿನ ಕಾರಣ, ತನ್ನ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲಾಗದ ಸ್ಥಿತಿಯನ್ನು ತಲುಪಿದ. ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಗಳನ್ನು ಅವನು ಬಿಟ್ಟು ಹೊರಬರಬೇಕಾಯಿತು.
ಕೊನೆಗೆ ಅವನೇ ಖಿನ್ನತೆ (ಡಿಪ್ರೆಶನ್) ಮತ್ತು ಚಿತ್ತ ವಿಕಲತೆಗೆ (ಡಿಮೆನ್ಷಿಯ) ತುತ್ತಾದ. 1901-02ರಲ್ಲಿ ಆತನು ಸ್ವಿಜ಼ರ್ಲ್ಯಾಂಡಿನ ಲಸಾನ ಆಸ್ಪತ್ರೆಯ ಮನೋರೋಗಿಗಳ ವಿಭಾಗ ದಲ್ಲಿ ದಾಖಲಾದ. ಅವನ ಆರೋಗ್ಯವು ದಿನೇ ದಿನೆ ಕ್ಷೀಣಿಸಿತು. ಕೊನೆಗೆ ಮೇ 22, 1904 ರಂದು ಮರಣಿಸಿದ.
ಮೊದಲಲ್ಲ: ಟಿಎಸ್ ಅನ್ನು ಮೊದಲ ಬಾರಿಗೆ ಜಯೋಸ್ ದಲ ಟೂರಿಟ್ ಮೊದಲ ಬಾರಿಗೆ ಗುರುತಿಸಿದನೇ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ಅವನಿಗಿಂತಲೂ ಮೊದಲೇ ಹಲವರು ಗುರುತಿಸಿದ್ದರು ಎನ್ನುವ ಮಾಹಿತಿಯು ದೊರೆಯುತ್ತದೆ. ಆದರೆ ಅವರಲ್ಲಿ ಯಾರೂ ಟಿಎಸ್ ಅನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ನಿಖರವಾದ ಮಾಹಿತಿಯನ್ನು ನೀಡಿರಲಿಲ್ಲ.
ಜಾಕೋಬ್ ಸ್ಪ್ರೆಂಗರ್ ಮತ್ತು ಹೆನ್ರೀಚ್ ಕ್ರೇಮರ್ 1498ರ ‘ಮ್ಯಾಲಿಯಸ್ ಮ್ಯಾಲಿ ಕಾರಮ್’ (ಮಾಟಗಾತಿಯ ಸುತ್ತಿಗೆ) ಎನ್ನುವ ತಮ್ಮ ಕೃತಿಯಲ್ಲಿ ಒಬ್ಬ ಪುರೋಹಿತನಲ್ಲಿ ಟಿಎಸ್ ಲಕ್ಷಣಗಳಿವೆ ಎಂದು ದಾಖಲಿಸಿದ್ದಾರೆ. ಟಿಎಸ್‌ಗೆ ಕಾರಣ ಸೈತಾನ/ಮಾಟ/ದುಷ್ಟ ಶಕ್ತಿಯ ಕಾಟ ಹೀಗೆಲ್ಲ ಅಂದಿನ ಜನರು ನಂಬಿದ್ದರು. 1825ರಲ್ಲಿ ಜೀನ್ ಮಾರ್ಕ್ ಗ್ಯಾಸ್ಪರ್ಡ್ ಇಟಾರ್ಡ್ ಎಂಬ ಫ್ರೆಂಚ್ ವೈದ್ಯನು, ಪ್ಯಾರಿಸ್ ನಗರದ ಶ್ರೀಮಂತ ವಲಯದಲ್ಲಿ ಮಾರ್ಕೀಸ್ ದಾಂಪಿಯರ್ ಎಂಬ ಮಹಿಳೆಯು ಹಠಾತ್ತನೇ ಅನೈಚ್ಛಿಕ ಚಲನವಲನ ದೊಡನೆ ಕೆಟ್ಟ ಕೆಟ್ಟ ಮಾತುಗಳನ್ನು ಅಪ್ರಯತ್ನವಾಗಿ ಆಡುತ್ತಿದ್ದುದರ ಬಗ್ಗೆ ಬರೆದಿದ್ದಾನೆ.
1885ರಲ್ಲಿ ಟುರೆಟ್ ಅಧ್ಯಯನ ಮಾಡಿದ 9 ಪ್ರಕರಣಗಳಲ್ಲಿ ಈಕೆಯೂ ಸೇರಿದ್ದಳು. ಆರ್ಮಂಡ್ ಟ್ರೌಸ್ಯೂ (1801-1867) ಹ್ಯೂಲಿಂಗ್ಸ್ ಜಾಕ್ಸನ್ (1835-1911) ಇವರೂ ಈ ಲಕ್ಷಣಾವಳಿಯ ಬಗ್ಗೆ ದಾಖಲಿಸಿರುವರು. ಹ್ಯಾಲೋಪೆರಿಡಾಲ್: 1960-70ರ ದಶಕ ದವರೆಗೆ ನರ ವೈದ್ಯಕೀಯ ಜಗತ್ತಿನಲ್ಲಿ ಪಾರ್ಕಿನ್ಸನ್ ಕಾಯಿಲೆ ಹಾಗೂ ಆಲ್ಜೈಮರ್ ಕಾಯಿಲೆಗಳು ವೈದ್ಯರ ಗಮನವನ್ನು ಸೆಳೆದ ಕಾರಣ, ಯಾರೂ ಟಿಎಸ್ ಬಗ್ಗೆ ತಲೆಯನ್ನು ಕೆಡಿಸಿ ಕೊಳ್ಳಲಿಲ್ಲ.
ನಂತರ ಆರ್ಥರ್ ಕೆ ಶಪೀರೋ (1923-1995) ಮತ್ತು ಸಂಗಡಿಗರು ನಡೆಸಿದ ಅಧ್ಯಯನ ಗಳ ಕಾರಣ, ಹ್ಯಾಲೋ ಪೆರಿಡಾಲ್ ಎನ್ನುವ ಔಷಧ ಟಿಎಸ್ ಲಕ್ಷಣಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. 1972ರ ಹೊತ್ತಿಗೆ ಅಮೆರಿಕದಲ್ಲಿ ಟುರೆಟ್ ಲಕ್ಷಣಾವಳಿಯವರ ಸಂಘಟನೆಯೊಂದು ಆರಂಭವಾಯಿತು.
1948ರ ನಂತರ ಟುರೆಟ್ ಲಕ್ಷಣಾವಳಿಯ ಬಗ್ಗೆ ಸಂಶೋಧನೆಯನ್ನು ನಡೆಸಲು ಹಣಕಾಸಿನ ನೆರವು ದೊರೆಯಿತು. ಈ ಅಧ್ಯಯನಗಳ ಕಾರಣ, ಟಿಎಸ್ ಏಕೆ ಬರುತ್ತದೆ, ಹೇಗೆ ಬರುತ್ತದೆ, ಅದನ್ನು ಗುಣಪಡಿಸಲಾಗದಿದ್ದರೂ ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎನ್ನು ವುದರ ಬಗ್ಗೆ ಹೆಚ್ಚಿನ ಮಾಹಿತಿಯು ದೊರೆಯಿತು.
‘ಡಯಾಗ್ನೋಸ್ಟಿಕ್ ಆಂಡ್ ಸ್ಟಾಟಿಸ್ಟಿಕಲ್ ಮ್ಯಾನ್ಯುಯಲ್ ಆಫ್ ಮೆಂಟಲ್ ಡಿಸಾರ್ಡರ್’ (ಡಿಎಸ್‌ಎಂ) ಎಂಬ ಮಾರ್ಗದರ್ಶಕ ಕೈಪಿಡಿಯು ಇಂದು ಲಭ್ಯವಿದೆ. ಇದು ಟಿಎಸ್ ಅನ್ನು ‘ಕ್ರಾನಿಕ್ ಮೋಟಾರ್ ಆರ್ ವೋಕಲ್ ಟಿಕ್ ಡಿಸಾರ್ಡರ್’ ಎಂಬ ವೈಪರೀತ್ಯಗಳ ಗುಂಪಿಗೆ ಸೇರಿಸಿದೆ. ಈಗ ಟಿಎಸ್ ಇರುವ ಸುಮಾರು ಅರ್ಧದಷ್ಟು ರೋಗಿಗಳಲ್ಲಿ, ಟಿಎಸ್ ಜತೆಯಲ್ಲಿ ಇತರ ಮನೋವೈದ್ಯಕೀಯ ಸಮಸ್ಯೆಗಳು (ಉದಾ: ಗೀಳು ಕಾಯಿಲೆ (ಓಸಿಡಿ), ಚಂಚಲತೆ ಮತ್ತು ಅತಿ ಚಟುವಟಿಕೆ ಕಾಯಿಲೆ (ಎಡಿಎಚ್‌ಡಿ), ವಿಪರೀತ ಕೋಪ ಹಾಗೂ ಹಠಾತ್ ಮತ್ತು ಅನಿಯಂತ್ರಿತ ಚಟುವಟಿಕೆಗಳು) ಇರುವುದನ್ನು ಗುರುತಿಸಿದ್ದಾರೆ.
ಈಗ ಟಿಎಸ್ ವರ್ಗೀಕರಣದ ಬಗ್ಗೆ ಗೊಂದಲವೆದ್ದಿದೆ. ನರ/ಮನೋ/ನರಮನೋ/ನರ ವರ್ತನಾ ರೋಗಗಳಲ್ಲಿ ಯಾವ ಗುಂಪಿಗೆ ಸೇರಿಸಬೇಕು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 1000 ಮಕ್ಕಳಲ್ಲಿ 3 ಮಕ್ಕಳಿಗೆ ಈ ಸಮಸ್ಯೆ ಬರಬಹುದು. ಇದನ್ನು ಗುಣ ಪಡಿಸುವ ಔಷಧವಿಲ್ಲ. ನಿಯಂತ್ರಿಸುವ ಪ್ರಯತ್ನಗಳು ನಡೆದಿವೆ. ಶಸ್ತ್ರ ಚಿಕಿತ್ಸೆಯನ್ನು ಮಾಡುವ ಪ್ರಯತ್ನಗಳೂ ನಡೆದಿವೆ. ಟಿಎಸ್ ಇಂದಿಗೂ ವೈದ್ಯರಿಗೆ ಒಂದು ಸವಾಲಿನ ಲಕ್ಷಣಾವಳಿಯಾಗಿದೆ.