Mohan Vishwa Column: ಉಕ್ರೇನ್‌ನೊಂದಿಗೆ ಟ್ರಂಪ್ ಹೊಸ ಡೀಲ್
ಅಧಿಕಾರಕ್ಕೆ ಬರುತ್ತಿದ್ದಂತೆ ಟ್ರಂಪ್ ತೆಗೆದುಕೊಳ್ಳುತ್ತಿರುವ ಹಲವು ನಿರ್ಧಾರಗಳು ಹೊರಜಗತ್ತಿಗೆ ಕಿರಿಕಿರಿ ಉಂಟು ಮಾಡುತ್ತಿರಬಹುದು. ಆದರೆ ಟ್ರಂಪ್ ಒಬ್ಬ ವ್ಯವಹಾರಸ್ಥರಾದ ಕಾರಣ, ತಮ್ಮ ದೇಶಕ್ಕೆ ಆಗ ಬಹುದಾದ ಉಪಯೋಗಗಳ ಬಗ್ಗೆ ಮಾತ್ರ ಆಲೋಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ
![Mohan Vishwa Column: ಉಕ್ರೇನ್‌ನೊಂದಿಗೆ ಟ್ರಂಪ್ ಹೊಸ ಡೀಲ್](https://cdn-vishwavani-prod.hindverse.com/media/original_images/mohan_vishwa_column_0802.jpg)
ಅಂಕಣಕಾರ ಮೋಹನ್ ವಿಶ್ವ
![ಮೋಹನ್ ವಿಶ್ವ](https://cdn-vishwavani-prod.hindverse.com/media/images/Mohan_Vishwa_rgylr.2e16d0ba.fill-100x100.jpg)
ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ದಿನ ಹಲವು ಕಡತಗಳಿಗೆ ಸಹಿ ಹಾಕಿ, ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆ ಗಳನ್ನು ಈಡೇರಿಸುತ್ತಿರುವೆನೆಂಬ ಸಂದೇಶ ವನ್ನು ಅಮೆರಿಕದ ಜನತೆಗೆ ರವಾನಿಸಿದ್ದಾರೆ. ರಾಷ್ಟ್ರೀಯತೆಯ ವಿಷಯದ ಮೇಲೆ ಚುನಾವಣೆಯಲ್ಲಿ ಸೆಣಸಿದ ಟ್ರಂಪ್, ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ದೇಶವನ್ನಾಗಿ ಮಾಡುತ್ತೇನೆಂದು ಹೇಳುವ ಮೂಲಕ ಹಲವು ನಿಷ್ಠುರ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ವಲಸಿಗರಿಗೆ ಅಮೆರಿಕದಲ್ಲಿ ಹುಟ್ಟುವ ಮಕ್ಕಳಿಗೆ ಹುಟ್ಟಿನಿಂದಲೇ ಸಿಗುತ್ತಿದ್ದಂಥ ಪೌರತ್ವವನ್ನು ರದ್ದುಗೊಳಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.
ಈ ಆದೇಶ ಜಾರಿಗೆ ಬರಲು 30 ದಿನದ ಕಾಲಾವಧಿಯಿರುವ ಕಾರಣ, ಅಮೆರಿಕದಲ್ಲಿ ನೆಲೆಸಿರುವ ವಲಸಿಗ ಗರ್ಭಿಣಿಯರು, ಗರ್ಭಾವಸ್ಥೆಯ ಅವಧಿ ಸಂಪನ್ನಗೊಳ್ಳುವ ಮುನ್ನವೇ ಶಸ್ತ್ರಚಿಕಿತ್ಸೆಯ ಮೂಲಕ ತಮ್ಮ ಮಗುವಿನ ಹೆರಿಗೆ ಮಾಡು ವಂತೆ ವೈದ್ಯರನ್ನು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: Mohan Vishwa Column: ಗೆದ್ದಾಗ EVM ಬೇಕು ಸೋತಾಗ ಬೇಡ !
ಅಧಿಕಾರಕ್ಕೆ ಬರುತ್ತಿದ್ದಂತೆ ಟ್ರಂಪ್ ತೆಗೆದುಕೊಳ್ಳುತ್ತಿರುವ ಹಲವು ನಿರ್ಧಾರಗಳು ಹೊರಜಗತ್ತಿಗೆ ಕಿರಿಕಿರಿ ಉಂಟು ಮಾಡುತ್ತಿರಬಹುದು. ಆದರೆ ಟ್ರಂಪ್ ಒಬ್ಬ ವ್ಯವಹಾರಸ್ಥರಾದ ಕಾರಣ, ತಮ್ಮ ದೇಶಕ್ಕೆ ಆಗಬಹುದಾದ ಉಪಯೋಗಗಳ ಬಗ್ಗೆ ಮಾತ್ರ ಆಲೋಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ ಇಂಥ ನಿರ್ಧಾರಗಳಿಂದ ಅಮೆರಿಕಕ್ಕೆ ಸದಾ ಉಪಯೋಗ ವಾಗುತ್ತದೆಂಬುದು ಸುಳ್ಳು.
ಅವರ ನಿರ್ಧಾರಗಳು ಭವಿಷ್ಯತ್ತಿನಲ್ಲಿ ಅಮೆರಿಕಕ್ಕೆ ಸಮಸ್ಯೆಯನ್ನೂ ತಂದೊಡ್ಡಬಹುದು ಎಂಬ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿವೆ.
ಟ್ರಂಪ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ‘ಕೃತಕ ಬುದ್ಧಿಮತ್ತೆ’ (ಎಐ) ಬಗ್ಗೆ ಬಹಳಷ್ಟು ಚರ್ಚೆ ಗಳಾದವು. ಮೈಕ್ರೋಸಾಫ್ಟ್ ಸಂಸ್ಥೆಯ ಸತ್ಯ ನಾಡೆಲ್ಲಾ ಮತ್ತು ‘ಓಪನ್ ಎಐ’ ಕಂಪನಿಯ ಸಂಸ್ಥಾ ಪಕರು ಈ ವಲಯದಲ್ಲಿ ಬಿಲಿಯನ್ ಗಟ್ಟಲೆ ಹಣವನ್ನು ಹೂಡಿಕೆ ಮಾಡುವುದಾಗಿ ಘೋಷಿ ಸಿದರು.
ಇದಾದ ಕೆಲವೇ ಗಂಟೆಗಳಲ್ಲಿ ಚೀನಾ ದೇಶದ ‘ಡೀಪ್ ಸೀಕ್’ ಕೃತಕ ಬುದ್ಧಿಮತ್ತೆ ತಂತ್ರಾಂಶವು ನೂರಾರು ಕೋಟಿ ಜನರ ಮೊಬೈಲ್ ಫೋನಿನಲ್ಲಿ ಬಂದು ಕುಳಿತಿತ್ತು. ಅಮೆರಿಕನ್ನರ ಖರ್ಚಿನ ಶೇ.4ರಷ್ಟು ಹಣವನ್ನು ಖರ್ಚುಮಾಡಿ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಮೂಲಕ ಚೀನಾ ದೇಶವು ಅಮೆರಿಕದ ಷೇರು ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು.
ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಕೆನಡಾ, ಮೆಕ್ಸಿಕೋ ಮತ್ತು ಚೀನಾ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿ ಬಿಸಿ ಮುಟ್ಟಿಸುವ ಕೆಲಸ ಮಾಡಿದರು. ಮೆಕ್ಸಿಕೋ ದೇಶವು ಟ್ರಂಪ್ ನಿರ್ಧಾರವನ್ನು ಮೊದಲು ಖಂಡಿಸಿ, ನಂತರ ಅಮೆರಿಕದ ಜತೆ ಮಾತುಕತೆ ನಡೆಸಿ, ತನ್ನ ಗಡಿಯ ಮೂಲಕ ಅಮೆರಿಕ ತಲುಪುವವರನ್ನು ತಡೆಯಲು 15000 ಮಂದಿಯ ಭದ್ರತಾ ಪಡೆ ಯನ್ನು ನಿಯೋಜಿಸಲು ನಿರ್ಧರಿಸಿತು.
ಈ ನಿರ್ಧಾರವನ್ನು ಸ್ವಾಗತಿಸಿದ ಟ್ರಂಪ್, ತಾವು ವಿಧಿಸಿದ್ದ ಆಮದು ಸುಂಕದ ಅವಧಿಯನ್ನು ಒಂದು ತಿಂಗಳವರೆಗೆ ತಡೆದಿದ್ದಾರೆ. ಅತ್ತ ಕೆನಡಾ ಕೂಡ ಟ್ರಂಪ್‌ರೊಂದಿಗೆ ಮಾತುಕತೆ ನಡೆಸಿ ತನ್ನ ಗಡಿಯನ್ನು ಭದ್ರ ಪಡಿಸುವುದಾಗಿ ಹೇಳುವ ಮೂಲಕ ಟ್ರಂಪ್ ವಿಧಿಸಿದ ಹೆಚ್ಚಿನ ಸುಂಕದಿಂದ ತಾತ್ಕಾಲಿಕವಾಗಿ ಪಾರಾಗಿದೆ. ಆದರೆ ಚೀನಾ ದೇಶವು ಟ್ರಂಪ್ ವಿಧಿಸಿರುವ ಆಮದು ಸುಂಕದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಬದಲಾಗಿ ಅಮೆರಿಕದಿಂದ ತನ್ನಲ್ಲಿಗೆ ಆಮದಾಗುವ ಕಲ್ಲಿದ್ದಲು, ಟ್ರ್ಯಾಕ್ಟರ್, ಕೃಷಿ ಉಪಕರಣಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಮೂಲಕ ತಿರುಗೇಟು ನೀಡಿದೆ ಹಾಗೂ ಅಮೆರಿಕಕ್ಕೆ ಒಂದು ವಾರದ ಕಾಲಾವಕಾಶ ನೀಡಿ, ಹೆಚ್ಚಿನ ಆಮದು ಸುಂಕವನ್ನು ವಾಪಸ್ ಪಡೆಯ ದಿದ್ದರೆ ತಾನು ವಿಧಿಸಿರುವ ಸುಂಕವನ್ನು ಮುಂದುವರಿಸುವುದಾಗಿ ಹೇಳಿದೆ.
ಮತ್ತೊಂದೆಡೆ ಐರೋಪ್ಯ ಒಕ್ಕೂಟದ ದೇಶಗಳು, ಅಮೆರಿಕವು ಮುಂದಿನ ದಿನಗಳಲ್ಲಿ ತಮ್ಮ ಮೇಲೆ ತೆಗೆದುಕೊಳ್ಳುವ ನಿರ್ಧಾರವನ್ನು ನೋಡಿಕೊಂಡು ಸುಮ್ಮನೇ ಕೂರುವುದಿಲ್ಲ, ಬದಲಾಗಿ ತಾವೂ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ. ಕೆನಡಾ ಮತ್ತು ಮೆಕ್ಸಿಕೋ ದೇಶಗಳ ನಡೆಯಿಂದ, ತಾವು ಗೆದ್ದಿರುವುದಾಗಿ ಟ್ರಂಪ್ ತಾತ್ಕಾಲಿಕವಾಗಿ ಜನರ ಬಳಿ ಹೇಳಬಹುದು.
ಆದರೆ ಚೀನಾ ಮತ್ತು ಐರೋಪ್ಯ ದೇಶಗಳ ವಿಷಯದಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ. ತಾವು ಅಧಿ ಕಾರಕ್ಕೆ ಬಂದರೆ ಯುದ್ಧ ಮಾಡುವುದಿಲ್ಲ, ಆದರೆ ಒಂದು ಯುದ್ಧವನ್ನು ನಿಲ್ಲಿಸುವ ಪ್ರಯತ್ನವನ್ನು ಖಂಡಿತ ಮಾಡುವುದಾಗಿ ಟ್ರಂಪ್ ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.
ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಯುದ್ಧ ಮಾಡಿರಲಿಲ್ಲ; ಅಮೆರಿಕ ಅಧ್ಯಕ್ಷರ ಇತಿಹಾಸದಲ್ಲಿ ಯುದ್ಧ ನಡೆಸದ ಏಕೈಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಶಾಂತಿ ಒಪ್ಪಂದಕ್ಕೆ ಮುದ್ರೆ ಬಿದ್ದಾಗಿದೆ, ಆದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೊಂಡಿಲ್ಲ.
ಉಕ್ರೇನ್ ಯುದ್ಧದ ವಿಚಾರದಲ್ಲಿ ಟ್ರಂಪ್ ಯೋಚನೆ ಬೇರೆ ರೀತಿಯದ್ದಾಗಿದೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ 175 ಬಿಲಿಯನ್ ಡಾಲರ್‌ನಷ್ಟು ಆರ್ಥಿಕ ಸಹಾಯ ನೀಡುವ ಮೂಲಕ, ನ್ಯಾಟೋ ಸದಸ್ಯ ದೇಶಗಳ ಪೈಕಿ ಅತಿ ಹೆಚ್ಚು ನೆರವು ನೀಡಿದ ದೇಶ ಎನಿಸಿಕೊಂಡಿತು ಅಮೆರಿಕ. ಜೋ ಬೈಡೆನ್ ಅವಧಿಯಲ್ಲಿ ಈ ಮಟ್ಟದ ಆರ್ಥಿಕ ನೆರವು ನೀಡಿದ ಅಮೆರಿಕಕ್ಕೆ ಸಿಕ್ಕಿದ್ದಾದರೂ ಏನು? ಎಂಬುದು ಡೊನಾಲ್ಡ್ ಟ್ರಂಪ್‌ರ ಪ್ರಶ್ನೆ.
ಟ್ರಂಪ್ ಒಬ್ಬ ವ್ಯವಹಾರಸ್ಥರಾಗಿರುವ ಕಾರಣ, ತಮ್ಮ ದೇಶವು ಇತರರಿಗೆ ಮಾಡುವ ಸಹಾಯಕ್ಕೆ ಪ್ರತಿಯಾಗಿ ದೇಶಕ್ಕೆ ಆಗುವ ಲಾಭದ ಬಗ್ಗೆ ಯೋಚಿಸುತ್ತಾರೆ. ಉಕ್ರೇನ್ ದೇಶದಲ್ಲಿರುವ ಅಪಾರ ಖನಿಜ ಸಂಪತ್ತಿನ ಮೇಲೆ ಟ್ರಂಪ್ ಕಣ್ಣು ಬಿದ್ದಿದೆ. ಉಕ್ರೇನ್‌ನಲ್ಲಿ ಅಪಾರ ಪ್ರಮಾಣದ ಲೀಥಿಯಂ ಮತ್ತು ಗ್ಯಾಲಿಯಂ ಇದೆ. ಭೂಮಿಯಲ್ಲಿ ಸಿಗುವ ಈ ಅಪರೂಪದ ಖನಿಜಗಳು, ವಿದ್ಯುತ್ ಚಾಲಿತ ವಾಹನಗಳಿಗೆ ಬೇಕಿರುವ ಬ್ಯಾಟರಿ ಮತ್ತು ಸೋಲಾರ್ ಪ್ಯಾನೆಲ್‌ಗಳ ತಯಾರಿಕೆಯಲ್ಲಿ ಪ್ರಮುಖ ಕಚ್ಚಾವಸ್ತುಗಳಾಗಿವೆ.
ಬ್ಯಾಟರಿ ತಯಾರಿಕೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬೇಡಿಕೆಯಿದ್ದು, ಇದರ ಶೇ.90ರಷ್ಟು ಭಾಗದ ಅಪರೂಪದ ಖನಿಜ ಸಂಪತ್ತನ್ನು ಚೀನಾ ಪೂರೈಕೆ ಮಾಡುತ್ತಿದೆ. ಚೀನಾ ತನ್ನ ‘ಬೆಲ್ಟ್ ಆಂಡ್ ರೋಡ್’ ಯೋಜನೆಯ ಮೂಲಕ, ಖನಿಜ ಸಂಪತ್ತಿರುವ ಅನೇಕ ದೇಶಗಳ ಜತೆ ಒಪ್ಪಂದ ಮಾಡಿ ಕೊಂಡು ಜಗತ್ತಿನ ದೊಡ್ಡ ಪೂರೈಕೆದಾರನಾಗಿದೆ.
ಕಚ್ಚಾತೈಲಕ್ಕಾಗಿ ಕೊಲ್ಲಿ ರಾಷ್ಟ್ರಗಳ ಮೇಲೆ ಅವಲಂಬಿತರಾಗುವ ಪರಿಸ್ಥಿತಿ ಎದುರಾದಂತೆ, ಮುಂದಿ ನ ದಿನಗಳಲ್ಲಿ ಬ್ಯಾಟರಿಗಳ ಉತ್ಪಾದನೆಗಾಗಿ ಚೀನಾವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬರಬಹು ದೆಂಬ ಆತಂಕ ಎಲ್ಲರಲ್ಲೂ ಇದೆ. ಈ ವಿಷಯದಲ್ಲಿ ಚೀನಾದ ಏಕಸ್ವಾಮ್ಯತೆಯನ್ನು ಮುರಿಯಲು ಹೊರಟಿರುವ ಟ್ರಂಪ್, ಉಕ್ರೇನ್ ಅಧ್ಯಕ್ಷರ ಜತೆ ಮಾತುಕತೆ ನಡೆಸಿದ್ದಾರೆ.
ಅಮೆರಿಕವು ಮುಂದಿನ ದಿನಗಳಲ್ಲಿ ಉಕ್ರೇನ್‌ಗೆ ನೆರವಾಗಬೇಕೆಂದರೆ, ಅಲ್ಲಿರುವ ಅಪರೂಪದ ಖನಿಜ ಸಂಪತ್ತಿನ ಗಣಿಗಾರಿಕೆ ಹಕ್ಕನ್ನು ಅಮೆರಿಕಕ್ಕೆ ನೀಡಬೇಕೆಂಬುದು ಟ್ರಂಪ್ ನಿರೀಕ್ಷೆ. ರಷ್ಯಾ ಅಧ್ಯಕ್ಷರ ಜತೆ ಟ್ರಂಪ್ ಮಾತುಕತೆ ನಡೆಸಿ ಯುದ್ಧವನ್ನು ನಿಲ್ಲಿಸಬಹುದು ಅಥವಾ ಯುದ್ಧ ಮುಂದುವರಿದರೆ ಅಮೆರಿಕದ ನೆರವನ್ನು ಉಕ್ರೇನ್‌ಗೆ ನೀಡಬಹುದು. ಆದರೆ ಟ್ರಂಪ್ ಎಣಿಸಿದಷ್ಟು ಸುಲಭವಾಗಿ ಉಕ್ರೇನ್‌ನಿಂದ ಅಪರೂಪದ ಖನಿಜ ಸಂಪತ್ತನ್ನು ಹೊರತರಲಾಗುವುದಿಲ್ಲ.
ಕಾರಣ, ಉಕ್ರೇನ್ ಒಂದು ಕಾಲಕ್ಕೆ ಸೋವಿಯೆತ್ ಒಕ್ಕೂಟದ ಭಾಗವಾಗಿತ್ತೆಂಬುದನ್ನು ಮರೆಯುವ ಹಾಗಿಲ್ಲ. ರಷ್ಯಾ ಅಧ್ಯಕ್ಷ ಪುಟಿನ್‌ರಿಗೆ ಕೂಡ ಉಕ್ರೇನ್‌ನಲ್ಲಿರುವ ಅಪರೂಪದ ಖನಿಜ ಸಂಪತ್ತಿನ ಬಗ್ಗೆ ಅರಿವಿದೆ. ಈಗಾಗಲೇ ಎರಡೂ ದೇಶಗಳ ನಡುವೆ ಯುದ್ಧ ನಡೆಯುತ್ತಿರುವುದರಿಂದ, ಯುದ್ಧ ಭೂಮಿಯಲ್ಲಿರುವ ಖನಿಜ ಸಂಪತ್ತನ್ನು ಅಮೆರಿಕ ಹೇಗೆ ತಾನೇ ಹೊರತೆಗೆಯಲಾದೀತು? ಅಮೆರಿ ಕವು ಉಕ್ರೇನ್‌ನಲ್ಲಿ ಗಣಿಗಾರಿಕೆಗೆ ಮುಂದಾದರೆ ರಷ್ಯಾ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದೇ? ಅಮೆರಿಕವು ಉಕ್ರೇನ್‌ಗೆ ನೀಡುವ ನೆರವಿನಿಂದ ಹೆಚ್ಚಿನ ನಷ್ಟವಾಗುವುದು ರಷ್ಯಾಕ್ಕೆ, ಹೀಗಾಗಿ ಪುಟಿನ್ ಸುಲಭವಾಗಿ ಬಿಟ್ಟುಕೊಡುವುದಿಲ್ಲ.
ಯುದ್ಧ ನಿಂತರೆ ಉಕ್ರೇನ್ ಅಧ್ಯಕ್ಷ ಅಮೆರಿಕಕ್ಕೆ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು, ಅದ ನ್ನೂ ಪುಟಿನ್ ಒಪ್ಪುವುದು ಅನುಮಾನ. ಉಕ್ರೇನ್‌ನಿಂದ ಅಮೆರಿಕಕ್ಕೆ ಅನುಕೂಲವಾಗದಿದ್ದರೆ ಹಣ ಮತ್ತು ಮಿಲಿಟರಿ ನೆರವನ್ನು ನೀಡುವುದಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ ಟ್ರಂಪ್.
ಇವೆಲ್ಲ ವನ್ನೂ ನೋಡಿದರೆ, ಉಕ್ರೇನ್ ಅಧ್ಯಕ್ಷ ರಷ್ಯಾ ವಿರುದ್ಧ ಯುದ್ಧ ನಡೆಸುವುದು ಮುಂದಿನ ದಿನಗಳಲ್ಲಿ ಸಾಧ್ಯವಿಲ್ಲ. ಜೋ ಬೈಡೆನ್ ಅವಧಿಯಲ್ಲಿ ಅಮೆರಿಕವು ಉಕ್ರೇನ್‌ಗೆ ಭರಪೂರ ನೆರವನ್ನು ನೀಡಿತ್ತು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಅಮೆರಿಕಕ್ಕೆ ಲಾಭವಾಗದೆ ಟ್ರಂಪ್ ನೆರವು ನೀಡುವು ದಿಲ್ಲ. ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳು ಬಿಟ್ಟುಬಂದಿರುವ ಬಿಲಿಯನ್‌ಗಟ್ಟಲೆ ಮೌಲ್ಯದ ಸೆಕೆಂಡ್ ಹ್ಯಾಂಡ್ ಮಿಲಿಟರಿ ಉಪಕರಣಗಳನ್ನು ಹಿಂದಿರುಗಿಸುವಂತೆ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದಂಥವರು ಟ್ರಂಪ್.
ಅಂತಹುದರಲ್ಲಿ ಅಮೆರಿಕಕ್ಕೆ ಲಾಭವಿಲ್ಲದಿದ್ದರೆ ಅವರು ಉಕ್ರೇನ್‌ಗೆ ನೆರವಾಗುವುದಿಲ್ಲ. ಉಕ್ರೇನ್‌ನ ಪೂರ್ವಭಾಗದಲ್ಲಿರುವ ಅಪರೂಪದ ಖನಿಜ ಸಂಪತ್ತಿನ ಭೂಭಾಗವನ್ನು ರಷ್ಯಾ ವಶಪಡಿಸಿ ಕೊಳ್ಳಬಹುದೆಂಬ ಭಯದಿಂದ ಅಮೆರಿಕದ ಕಂಪನಿಗಳಿಗೆ ತಮ್ಮ ದೇಶದಲ್ಲಿ ಗಣಿಗಾರಿಕೆ ಮಾಡಲು ಅವಕಾಶ ನೀಡುವುದಾಗಿ ಉಕ್ರೇನ್ ಅಧ್ಯಕ್ಷ ಈಗಾಗಲೇ ಹೇಳಿದ್ದಾರೆ.
ಆದರೆ, ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಟ್ರಂಪ್ ಮತ್ತು ಪುಟಿನ್ ನಡುವೆ ಯಾವುದೇ ರೀತಿಯ ಮಾತು ಕತೆಗಳು ದೊಡ್ಡಮಟ್ಟದಲ್ಲಿ ನಡೆದಿಲ್ಲ. ಯುದ್ಧ ನಿಲ್ಲಿಸುವುದಾಗಿ ಟ್ರಂಪ್ ಬಹಿರಂಗವಾಗಿ ಹೇಳಿರ ಬಹುದು. ಆದರೆ ಅದರಿಂದ ತಮಗಾಗುವ ಲಾಭ ಮತ್ತು ನಷ್ಟವನ್ನು ಅಳೆದು ತೂಗಿ, ಪುಟಿನ್ ಜತೆ ಅವರು ಮಾತನಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜಗತ್ತಿನಲ್ಲಿ ಅತಿ ಹೆಚ್ಚು ಗೋಧಿ ಉತ್ಪಾದಿಸುವ ದೇಶವಾದ ಉಕ್ರೇನ್, ಇದರ ಜತೆಗೆ ಇತರ ಕೃಷಿ ಉತ್ಪನ್ನಗಳನ್ನು ಅನೇಕ ದೇಶಗಳಿಗೆ ರಫ್ತು ಮಾಡುತ್ತದೆ. ರಷ್ಯಾ ಅಧ್ಯಕ್ಷ ಪುಟಿನ್ ಜತೆಗೆ ಟ್ರಂಪ್ ಮಾತುಕತೆ ನಡೆಸಿ ಯುದ್ಧವನ್ನೇನಾದರೂ ನಿಲ್ಲಿಸಿದರೆ, ಐರೋಪ್ಯ ಒಕ್ಕೂಟಕ್ಕೆ ಭಾರಿ ಹಿನ್ನಡೆ ಯಾಗಲಿದೆ. ಜೋ ಬೈಡೆನ್ ನೇತೃತ್ವದ ಪಶ್ಚಿಮದ ನ್ಯಾಟೋ ದೇಶಗಳ ಒಕ್ಕೂಟವು ಉಕ್ರೇನ್ ದೇಶವನ್ನು ರಷ್ಯಾ ವಿರುದ್ಧದ ಯುದ್ಧದಲ್ಲಿ ಬೆಂಬಲಿಸುತ್ತಾ ಬಂದಿದ್ದರೆ, ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಪುಟಿನ್ ಪರವಾಗಿ ನಿಂತು ಯುದ್ಧ ನಿಲ್ಲಿಸುವತ್ತ ಯೋಚಿಸುತ್ತಿದ್ದಾರೆ.
ಉಕ್ರೇನ್‌ನ ಜನರಿಗೆ ಐರೋಪ್ಯ ಒಕ್ಕೂಟದ ದೇಶಗಳಿಗಿಂತಲೂ ಟ್ರಂಪ್ ಮೇಲೆ ವಿಶ್ವಾಸ ಹೆಚ್ಚಾಗಿದೆ ಯೆಂದು ಅಲ್ಲಿನ ಸಂಸ್ಥೆಯೊಂದು ವರದಿ ಮಾಡಿದೆ. ಮತ್ತೊಂದೆಡೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ನಾಮಾವಶೇಷಗೊಂಡಿರುವ ಗಾಜಾ ಪಟ್ಟಿಯನ್ನು ಅಮೆರಿಕ ವಶಪಡಿಸಿ ಕೊಳ್ಳಲಿದೆಯೆಂದು ಟ್ರಂಪ್ ಹೇಳಿದ್ದಾರೆ. ಗಾಜಾ ಪಟ್ಟಿಯಲ್ಲಿ ದಶಕಗಳಿಂದ ನಡೆಯುತ್ತಿದ್ದಂಥ ಯುದ್ಧಕ್ಕೆ ಪೂರ್ಣವಿರಾಮ ಹಾಕುವ ನಿಟ್ಟಿನಲ್ಲಿ ಟ್ರಂಪ್ ಯೋಚಿಸುತ್ತಿರುವಂತೆ ಕಾಣುತ್ತಿದೆ.
ಗಾಜಾಪಟ್ಟಿಯನ್ನು ವಶಪಡಿಸಿಕೊಂಡ ನಂತರ ಅಮೆರಿಕ ಏನು ಮಾಡುತ್ತದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆಯಿಲ್ಲ. ಟ್ರಂಪ್ ಹಾಗೂ ಉಕ್ರೇನ್ ನಡುವಿನ ಒಪ್ಪಂದವು ನ್ಯಾಟೋ ಒಕ್ಕೂಟ ವನ್ನೇ ಇಲ್ಲದಂತಾಗಿಸಬಹುದು. ಏಷ್ಯಾ ಖಂಡದ ದೇಶಗಳೊಂದಿಗೂ ಟ್ರಂಪ್ ವ್ಯಾವಹಾರಿಕ ಸಂಬಂಧವನ್ನು ನೋಡುತ್ತಿರುವುದನ್ನು ಕಾಣಬಹುದಾಗಿದೆ. ಟ್ರಂಪ್ ಅವರಿಗೊಂದು ಸ್ಪಷ್ಟತೆ ಯಿದೆ.
ಚೀನಾ, ಮೆಕ್ಸಿಕೋ ಮತ್ತು ಕೆನಡಾ ದೇಶಗಳ ಮೇಲೆ ಹೇರಿದ ಆಮದು ಸುಂಕವನ್ನು ಅವರು ಭಾರ ತದ ಮೇಲೆ ಹೇರಲಿಲ್ಲ. ನರೇಂದ್ರ ಮೋದಿಯವರ ಗಟ್ಟಿ ನಾಯಕತ್ವ, ಟ್ರಂಪ್ ತಂಡದಲ್ಲಿರುವ ಭಾರತೀಯರು ಮತ್ತು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳನ್ನು ಮುನ್ನಡೆಸುತ್ತಿರುವ ಭಾರತೀ ಯರ ನೆರವು ಅಮೆರಿಕಕ್ಕೆ ಹಿಂದೆಯೂ ಬೇಕಿತ್ತು, ಮುಂದೆಯೂ ಬೇಕಿದೆ.