ಅಶ್ವತ್ಥಕಟ್ಟೆ
ದೇಶಗಳ ಅಭಿವೃದ್ಧಿಯನ್ನು ಶಿಕ್ಷಣದಲ್ಲಿ ಕಾಣಬಹುದು. ಅದರಲ್ಲಿಯೂ ಉನ್ನತ ಶಿಕ್ಷಣ, ಸಂಶೋಧನೆಗಳು ಇಡೀ ದೇಶದ ಭವಿಷ್ಯವನ್ನು ರೂಪಿಸುತ್ತವೆ ಎಂದರೂ ತಪ್ಪಾಗುವುದಿಲ್ಲ. ಇಂಥ ಸಂಶೋಧನೆಗಳ ಕೇಂದ್ರಬಿಂದುವಾಗಬೇಕಾದ ವಿಶ್ವವಿದ್ಯಾಲಯಗಳು ಇಂದು ಕೇವಲ ಪಾಠ ಮಾತ್ರ ಮಾಡುವ ಕಾಲೇಜುಗಳಾಗುತ್ತಿವೆಯೇ ಎನ್ನುವ ಅನುಮಾನ ಶುರು ವಾಗುತ್ತಿದೆ.
ಅದರಲ್ಲಿಯೂ ದಕ್ಷಿಣ ಭಾರತ ಹಾಗೂ ಕರ್ನಾಟಕದ ಬಹುತೇಕ ಸರಕಾರಿ ವಿಶ್ವವಿದ್ಯಾ ಲಯಗಳು ಪದವಿ ನೀಡುವುದಷ್ಟೇ ನಮ್ಮ ಕೆಲಸ ಎನ್ನುವ ರೀತಿಯ ವಿವಿಗಳಾಗಿ ಮಾರ್ಪಾಟಾಗಿವೆಯೇ ಎನ್ನುವ ಸಂಶಯ ಮೂಡುತ್ತಿದೆ.
ಅಧಿಕಾರಕ್ಕೆ ಬರುವ ಬಹುತೇಕ ಸರಕಾರಗಳು ಶಿಕ್ಷಣಕ್ಕೆ ಒತ್ತು ನೀಡುವ ಮಾತುಗಳನ್ನು ಆಡುತ್ತವೆ. ಅದೇ ರೀತಿ ವಿಶ್ವವಿದ್ಯಾಲಯಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ, ಬೋಧಕ ಸಿಬ್ಬಂದಿಯ ನೇಮಕ, ಮೂಲಸೌಕರ್ಯ ಮಾಡುವುದಾಗಿ ಘೋಷಿಸುತ್ತವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿವರ್ಷ ಒಂದಿಲ್ಲೊಂದು ಹೊಸ ವಿಶ್ವವಿದ್ಯಾಲಯಗಳನ್ನು ಘೋಷಿಸುತ್ತವೆ.
ಆದರೆ ಈ ಎಲ್ಲ ಘೋಷಣೆ ಮಾಡುವ ಸರಕಾರಗಳು, ವಿಶ್ವವಿದ್ಯಾಲಯದಲ್ಲಿ ಆಗಬೇಕಿರುವ ಸಂಶೋಧನಾ ಕೆಲಸದ ವಿಷಯದಲ್ಲಿ ಮಾತ್ರ ಜಾಣಮೌನ ವಹಿಸುತ್ತಿವೆ. ಕೇಂದ್ರ ಸರಕಾರ ದ ಯುಜಿಸಿಯು ಸಂಶೋಧನೆ ನಡೆಸಲೆಂದೇ ವಿವಿಗಳಿಗೆ ಅನುದಾನ ನೀಡುತ್ತದೆಯಾದರೂ, ಅದು ಯಾವ ಪ್ರಮಾಣದಲ್ಲಿ ಪ್ರಯೋಜನವಾಗುತ್ತಿದೆ ಎನ್ನುವುದಕ್ಕೆ ಬಹುತೇಕರ ಬಳಿ ಉತ್ತರವಿಲ್ಲ.
ಇದನ್ನೂ ಓದಿ: Ranjith H Ashwath Column: ಭರ್ತಿಗಿಂತ, ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ !
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಶುಕ್ರವಾರ ಮಂಡಿಸಿದ 17ನೇ ಬಜೆಟ್‌ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ 13ರಿಂದ 14 ಸಾವಿರ ಕೋಟಿ ರುಪಾಯಿಗಳನ್ನು ಮೀಸಲಿಟಿದ್ದಾರೆ. ಮೊತ್ತವನ್ನು ನೋಡಿದ ಯಾರಾದರೂ, ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಯಾವ ಪ್ರಮಾಣದಲ್ಲಿ ಪ್ರೋತ್ಸಾಹವಿದೆ ಎಂದುಕೊಳ್ಳುವಂತಾಗಿದೆ.
ಆದರಲ್ಲಿಯೂ ವಿಶ್ವವಿದ್ಯಾಲಯಗಳಿಗೆ 3500ರಿಂದ 4000 ಕೋಟಿ ರು. ಮೀಸಲಿಡ ಲಾಗುತ್ತಿದೆ. ಈ 4000 ಕೋಟಿ ರು.ನಲ್ಲಿ ಶೇ.70ರಿಂದ 80ರಷ್ಟು ಸಿಬ್ಬಂದಿಯ ವೇತನ, ಪಿಂಚಣಿಗೆ ಹೋದರೆ ಮೂಲಸೌಕರ್ಯಕ್ಕೆ ಶೇ.5ರಿಂದ 10ರಷ್ಟು, ವಿಶ್ವವಿದ್ಯಾಲಯಗಳ ನಿರ್ವಹಣೆಗೆ ಶೇ.10ರಿಂದ 15ರಷ್ಟು ಅನುದಾನ ನೀಡಲಾಗುತ್ತಿದೆ.
ಇನ್ನುಳಿದ ಶೇ.3ರಿಂದ 5ರಷ್ಟು ಅನುದಾನವನ್ನು ಮಾತ್ರ ಸಂಶೋಧನೆಗಳಿಗೆ ಬಳಕೆ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳೇ ಹೆಚ್ಚಾಗಿ ನಡೆಯ ಬೇಕಿರು ವುದು. ಆದರೆ ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ, ಸರಕಾರಗಳು ಈ ಕಾರ್ಯ ಮಾಡಲು ಅನುದಾನವನ್ನೇ ನೀಡುತ್ತಿಲ್ಲ. ಇನ್ನು ಸ್ವಂತ ಆದಾಯವನ್ನು ಬಳಸಿಕೊಂಡು ಸಂಶೋಧನೆ ಗಳಿಗೆ ಒತ್ತು ನೀಡೋಣವೆಂದರೆ, ಕರ್ನಾಟಕದ ಟಾಪ್ 3 ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ, ಇನ್ನುಳಿದ ಬಹುತೇಕ ವಿಶ್ವವಿದ್ಯಾಲಯಗಳು ವೇತನಕ್ಕೂ ಸರಕಾರದ ಸಹಾಯಧನವನ್ನೇ ನೆಚ್ಚಿಕೊಂಡಿವೆ.
ಇದರಿಂದ ಅಲ್ಲಿರುವವರಿಗೂ ‘ಹೊಸ’ ಆಲೋಚನೆಗೆ ಅವಕಾಶವಿಲ್ಲದಂತಾಗಿದೆ. ಈ ಕಾರಣಕ್ಕೆ ಕರ್ನಾಟಕದಲ್ಲಿ 32 ಸರಕಾರಿ ವಿಶ್ವವಿದ್ಯಾಲಯಗಳಿದ್ದರೂ, ವಿಶ್ವದ ಟಾಪ್ 500ರ ಆಸುಪಾಸಿನಲ್ಲಿ ಯಾವುದೂ ಸುಳಿಯುವುದಿಲ್ಲ. ಬೆಂಗಳೂರಿನಲ್ಲಿ ಐಐಟಿಯಿದ್ದರೂ, ಅದು ಕೇಂದ್ರ ಸರಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಇನ್ನುಳಿದಂತೆ ಟಾಪ್ 500 ವಿವಿಯಲ್ಲಿ ಕಾಣಿಸಿರುವ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳು ಖಾಸಗಿ ವಿವಿ ಅಥವಾ ಸ್ವಾಯತ್ತ ವಿವಿಗಳಾಗಿರುತ್ತವೆ.
ವಿಶ್ವದ ಅಥವಾ ದೇಶದ ಪ್ರಸಿದ್ಧ ವಿಶ್ವವಿದ್ಯಾಲಯದ ಪಟ್ಟಿಯಲ್ಲಿ ಕರ್ನಾಟಕದ ವಿಶ್ವ ವಿದ್ಯಾಲಯಗಳು ಕಾಣಿಸಿಕೊಳ್ಳದಿರಲು ಅನುದಾನ ಕೊರತೆ ಕಾರಣ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಅತಿ ಹೆಚ್ಚು ಆದಾಯವಿರುವ ಬೆಂಗಳೂರು ವಿಶ್ವವಿದ್ಯಾಲಯ 250 ರಿಂದ 300 ಕೋಟಿ ರು. ಬಜೆಟ್ ಹೊಂದಿದೆ.
200ರಿಂದ 250 ಕೋಟಿ ರು. ಬಜೆಟ್‌ನೊಂದಿಗೆ ಮೈಸೂರು ವಿವಿ ಎರಡನೇ ಸ್ಥಾನದಲ್ಲಿದ್ದರೆ, ಧಾರವಾಡ ವಿವಿ 180-220 ಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ವಿಶ್ವವಿದ್ಯಾಲಯಗಳು ನೂರು ಕೋಟಿ ಬಜೆಟ್ ಅನ್ನು ಹೊಂದಿವೆ. ಇನ್ನುಳಿದ ಎಲ್ಲ ವಿವಿಗಳ ವಾರ್ಷಿಕ ಬಜೆಟ್ ನೂರು ಕೋಟಿ ರು. ಒಳಗಿದೆ. ಆದ್ದರಿಂದ ಸಂಶೋಧನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹಾಗೆ ನೋಡಿದರೆ, ಪ್ರತಿವರ್ಷ ಸರಕಾರದಿಂದ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಲಾ ಗುತ್ತಿದೆ. ಆದರೆ ಇದರಲ್ಲಿ ಬಹುಪಾಲು ಬದ್ಧತಾ ವೆಚ್ಚದಲ್ಲಿಯೇ ಕಳೆದು ಹೋಗುವುದರಿಂದ ಸಂಶೋಧನೆ ಹಾಗೂ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಜೆಟ್‌ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಾವಿರಾರು ಕೋಟಿ ರು. ಅನುದಾನ ಮೀಸಲಿಟ್ಟ ರೂ, ಆ ಅನುದಾನದ ಬಹುಪಾಲು ಮೊತ್ತ ವಿಶ್ವವಿದ್ಯಾಲಯಗಳಲ್ಲಿರುವ ಬೋಧಕ-ಬೋಧಕೇತರ ಸಿಬ್ಬಂದಿಯ ವೇತನ, ಪಿಂಚಣಿ, ದುರಸ್ತಿ ಕಾಮಗಾರಿಗಳಿಗೇ ಖರ್ಚಾಗುತ್ತಿದೆ. ಇನ್ನುಳಿದ ಅನುದಾನವನ್ನು ವಿಶ್ವವಿದ್ಯಾಲಯಗಳೇ ಹೊಂದಾಣಿಕೆ ಮಾಡಿಕೊಳ್ಳಬೇಕಿರುವು ದರಿಂದ, ಟಾಪ್ 3 ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ, ಇತ್ತೀಚಿಗೆ ಆರಂಭಗೊಂಡಿ ರುವ, ಸಣ್ಣ ಸಣ್ಣ ವಿಶ್ವವಿದ್ಯಾಲಯಗಳಿಗೆ ‘ಅನುದಾನ’ ಹೊಂದಾಣಿಕೆಯೇ ಇಡೀ ವರ್ಷದ ಬಹುದೊಡ್ಡ ಸರ್ಕಸ್ ಎನ್ನುವುದು ವಾಸ್ತವ.
ಯಾವುದೇ ವಿಶ್ವವಿದ್ಯಾಲಯಗಳ ಬಹುದೊಡ್ಡ ಆದಾಯ ಮೂಲವೆಂದರೆ ಕಾಲೇಜುಗಳ ಸಂಯೋಜನೆ. ಹೆಚ್ಚು ಕಾಲೇಜುಗಳು ಸಂಯೋಜಿತವಾಗಿದ್ದರೆ, ಆದಾಯ ಹೆಚ್ಚಿರುತ್ತದೆ. ಬೆಂಗಳೂರು ವಿವಿಯೊಂದಿಗೆ ಸರಿಸುಮಾರು 250ರಿಂದ 270 ಕಾಲೇಜು, ಮೈಸೂರು ವಿವಿ ಯೊಂದಿಗೆ 220ಕ್ಕೂ ಹೆಚ್ಚು ಕಾಲೇಜು, ಧಾರವಾಡ ವಿವಿಯೊಂದಿಗೆ 200ಕ್ಕೂ ಹೆಚ್ಚು ಕಾಲೇಜುಗಳು ಸಂಯೋಜನೆಯಾಗಿವೆ. ಆದ್ದರಿಂದ ಈ ವಿಶ್ವವಿದ್ಯಾಲಯಗಳಿಗೆ ಸರಕಾರದ ಅನುದಾನದ ಹೊರತಾಗಿಯೂ, ವಿವಿಯನ್ನು ಮುನ್ನಡೆಸಲು ಶಕ್ತಿ ಇದೆ.
ಆದರೆ ಇನ್ನುಳಿದ 25ರಿಂದ 27 ವಿಶ್ವವಿದ್ಯಾಲಯಗಳೊಂದಿಗೆ 100ಕ್ಕಿಂತ ಕಡಿಮೆ ಕಾಲೇಜು ಗಳು ಸಂಯೋಜಿತವಾಗಿವೆ. ಇದರಿಂದ ಸ್ವಂತ ಆದಾಯ ಕ್ರೋಡೀಕರಣವೂ ಇಲ್ಲ, ಅತ್ತ ಸರಕಾರದಿಂದಲೂ ಅನುದಾನವಿಲ್ಲ ಎನ್ನುವ ಪರಿಸ್ಥಿತಿಯಿಂದಾಗಿ, ಸಿಬ್ಬಂದಿಗೆ ವೇತನ ನೀಡುವುದೇ ಸವಾಲಾಗಿದೆ. ಹೀಗಿರುವಾಗ, ಸಂಶೋಧನೆಗಳಿಗೆ ಅನುದಾನ ಹೊಂದಾಣಿಕೆ ಎಲ್ಲಿಂದ ಎನ್ನುವುದು ಕುಲಪತಿಗಳ ಮುಂದಿರುವ ಪ್ರಶ್ನೆ ಹಾಗೂ ದೊಡ್ಡ ಸವಾಲಾಗಿದೆ.
ಮೂಲಗಳ ಪ್ರಕಾರ, ‘ದೊಡ್ಡ’ ವಿಶ್ವವಿದ್ಯಾಲಯಗಳಲ್ಲಿಯೂ ಶೇ.3ರಿಂದ 4ರಷ್ಟು ಅನುದಾನವನ್ನು ಮಾತ್ರ ಸಂಶೋಧನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಇನ್ನುಳಿದ ಅನುದಾನ ವೇತನ, ಪಿಂಚಣಿ, ಮೂಲಸೌಕರ್ಯಕ್ಕೆ ಸರಿಹೋಗುತ್ತಿದೆ. ಯುಜಿಸಿಯಿಂದ ಕೆಲವೊಂದಷ್ಟು ಅನುದಾನವು ಸಂಶೋಧನೆಗೆ ಬರುತ್ತಿದ್ದರೂ, ಆ ಸಂಶೋಧನೆಗಳು ಫಂಡ್ ಬಳಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗುತ್ತಿವೆ ಎನ್ನುವ ಆರೋಪವಿದೆ.
ಒಂದೇ ವಿಷಯದ ಮೇಲೆ ಹತ್ತಾರು ಸಂಶೋಧನೆಗಳು ‘ನಾಮ್-ಕೆ-ವಾಸ್ತೆ’ ಲೆಕ್ಕಾಚಾರದಲ್ಲಿ ಮಾಡಿರುವ ಕಾರಣಕ್ಕೆ, ಕರ್ನಾಟಕದ ಸರಕಾರಿ ವಿವಿಗಳು ಪೇಟೆಂಟ್ ಪಡೆದುಕೊಳ್ಳುವಲ್ಲಿ ತೀರಾ ಹಿಂದಿವೆ. ರಾಜ್ಯದಲ್ಲಿರುವ ಬಹುಪಾಲು ಸರಕಾರಿ ವಿವಿಗಳು, ಸಂಶೋಧನಾ ಕೇಂದ್ರ ಗಳಾಗಿ ರೂಪುಗೊಳ್ಳುವ ಬದಲು ಕಾಲೇಜುಗಳ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳಾಗಿವೆ. ಆದರೆ ವಿದೇಶಗಳಲ್ಲಿರುವ ವಿಶ್ವವಿದ್ಯಾಲಯಗಳಿಗೆ ಸರಕಾರ ದಿಂದಲೂ ಭಾರಿ ಪ್ರಮಾಣದ ಆದಾಯ ಬರುವುದರಿಂದ, ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಾರೆ.
ಇದರೊಂದಿಗೆ ವಿದೇಶಿ ವಿಶ್ವವಿದ್ಯಾಲಯಗಳಿಗೂ, ಭಾರತದ ವಿಶ್ವವಿದ್ಯಾಲಯಗಳು ಸಂಶೋಧನೆಯಲ್ಲಿ ಹಿಂದೆ ಬೀಳಲು ಅನುದಾನ ಕೊರತೆಯೊಂದಿಗೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಯಂ ಸಿಬ್ಬಂದಿಗಳ ಕೊರತೆಯೂ ಕಾರಣ ಎನ್ನಲಾಗುತ್ತಿದೆ. ವಿದೇಶಗಳಲ್ಲಿ ಒಂದು ವಿಶ್ವವಿದ್ಯಾಲಯವೆಂದರೆ ಸಾವಿರ ಲೆಕ್ಕದಲ್ಲಿ ವಿದ್ಯಾರ್ಥಿಗಳಿರುತ್ತಾರೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯವೊಂದರಲ್ಲಿಯೇ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಗಳಿದ್ದಾರೆ.
ಹೀಗಿರುವಾಗ, ಉಪನ್ಯಾಸಕರಿಗೂ ವಿದ್ಯಾರ್ಥಿಗಳ ಮೇಲೆ ಫೋಕಸ್ ಮಾಡಲು ಸಾಧ್ಯ ವಾಗುವುದಿಲ್ಲ. ಕಾಯಂ ಬೋಧಕ ಸಿಬ್ಬಂದಿಯನ್ನು ನೇಮಿಸಿಕೊಂಡರೆ, ಭಾರಿ ಪ್ರಮಾಣದ ವೇತನ ನೀಡಬೇಕಾಗುತ್ತದೆ. ಯುಜಿಸಿ ನಿಯಮದ ಅನ್ವಯ ಕಾಯಂ ಉಪನ್ಯಾಸಕನಿಗೆ ಆರಂಭದಲ್ಲಿಯೇ 1.20 ಲಕ್ಷ ರು. ವೇತನ ನೀಡಬೇಕಾಗುತ್ತದೆ.
ಆದ್ದರಿಂದ ಅತಿಥಿ ಉಪನ್ಯಾಸಕರು, ಗುತ್ತಿಗೆ ಆಧಾರಿತ ಸಿಬ್ಬಂದಿಗೆ ವಿವಿ ಹಾಗೂ ಸರಕಾರ ಗಳು ಕಣ್ಣು ಹಾಯಿಸುತ್ತವೆ. ಅತಿಥಿ ಉಪನ್ಯಾಸಕರು, ಗುತ್ತಿಗೆ ಆಧಾರಿತ ನೌಕರರನ್ನು ಇಟ್ಟುಕೊಂಡು ಸಂಶೋಧನೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಇದರಿಂದಾಗಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಒತ್ತು ನೀಡುವುದನ್ನು ಮರೆತು, ಅಂಕಪಟ್ಟಿ, ಸರ್ಟಿಫಿಕೇಟ್ ಕೊಡುವ ಸಂಸ್ಥೆಗಳಾಗಿ ಮಾರ್ಪಾಟಾಗಿವೆ.
ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಗೆ ಈ ರೀತಿಯ ಸಮಸ್ಯೆಯಿದ್ದರೆ, ಹೊಸದಾಗಿ ಆರಂಭವಾಗಿರುವ ವಿವಿಗಳ ಗೋಳು ಕೇಳುವವರಿಲ್ಲ. ಅನೇಕ ವಿಶ್ವವಿದ್ಯಾಲಯಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗದಿದ್ದರೆ ವೇತನ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಈ ಕಾರಣಕ್ಕಾಗಿಯೇ ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿವಿಗಳು ವರ್ಷದಲ್ಲಿ ಹಲವು ಬಾರಿ ಶೈಕ್ಷಣಿಕ ಕಾರಣಕ್ಕಿಂತ ಹೆಚ್ಚಾಗಿ ಸಿಬ್ಬಂದಿಗೆ ವೇತನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿಲ್ಲ ಎನ್ನುವುದರಿಂದಲೇ ಸುದ್ದಿಯಾಗುತ್ತವೆ.
ಸರಕಾರದಿಂದಲೂ ಸೂಕ್ತ ಅನುದಾನ ಸಿಗದೇ, ಕಡಿಮೆ ಕಾಲೇಜುಗಳ ಅಫಿಲಿಯೇಶನ್‌ಗಳು ಇಲ್ಲದೇ ಸಂಶೋಧನೆಗಳನ್ನು ಮರೆತು ಪದವಿ ನೀಡುವ ಕೇಂದ್ರಗಳಾಗುತ್ತಿವೆ. ಸಂಶೋಧನೆ ನಡೆಸಲು ಅನುದಾನದ ಕೊರತೆಯ ಸಮಸ್ಯೆ ಒಂದೆಡೆಯಾದರೆ, ವಿಶ್ವವಿದ್ಯಾಲಯಗಳಲ್ಲಿ ಇಂದಿನ ದಿನಮಾನಕ್ಕೆ ಅಗತ್ಯವೇನಿದೆ ಎನ್ನುವುದನ್ನು ಅರಿಯದೇ, ಅಜ್ಜ ಹಾಕಿದ ಆಲದ ಮರಕ್ಕೆ ಜೋತುಬಿದ್ದು ದಶಕಗಳಿಂದ ಒಂದೇ ಪಠ್ಯವನ್ನು ಬೋಧಿಸಿಕೊಂಡು ಬರುತ್ತಿದ್ದಾರೆ.
ಕೈಗಾರಿಕೆಗಳು ಅಥವಾ ಮಾರುಕಟ್ಟೆಯಲ್ಲಿ ಯಾವ ಕೌಶಲವನ್ನು ಬಯಸುತ್ತಾರೆ ಎನ್ನುವು ದನ್ನು ಅರಿಯದೇ, ಹಳೇ ಪಠ್ಯವನ್ನು ಕಲಿತು ಡಬಲ್ ಡಿಗ್ರಿ ಪಡೆದು ಕೆಲಸಕ್ಕೆ ಹೋದರೂ ಅಲ್ಲಿ ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗುತ್ತಿಲ್ಲ ಎನ್ನುವುದು ವಾಸ್ತವ. ಆದ್ದರಿಂದ ರಾಜ್ಯ ಸರಕಾರ, ಬಜೆಟ್‌ನಲ್ಲಿ ಹೊಸ ಕೋರ್ಸ್‌ಗಳನ್ನು ಘೋಷಿಸುವ ಮೊದಲು ಈಗಾಗಲೇ ಚಾಲ್ತಿಯಲ್ಲಿರುವ ಕೋರ್ಸ್‌ಗಳಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ.
ಏಕೆಂದರೆ, ಅನೇಕ ವಿಶ್ವವಿದ್ಯಾಲಯಗಳು ಆರಂಭಿಸಿರುವ ಅನೇಕ ಕೋರ್ಸ್‌ಗಳ ಪ್ರಯೋಜನವೇನು ಎನ್ನುವುದಕ್ಕೆ ಈಗಲೂ ಉತ್ತರವಿಲ್ಲ. ಕೆಲವೊಂದಷ್ಟು ಕೋರ್ಸ್‌ಗಳಿಗೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳ ಕೊರತೆಯಿದ್ದರೆ, ಇನ್ನೂ ಕೆಲ ಕೋರ್ಸ್‌ಗಳನ್ನು ತೆಗೆದು ಕೊಂಡ ವಿದ್ಯಾರ್ಥಿಗಳು ಈ ಪದವಿ ಪಡೆದು ಮುಂದೇನು ಮಾಡಬೇಕು ಎನ್ನುವುದಕ್ಕೆ ಸ್ಪಷ್ಟತೆಯಿಲ್ಲದೆ ಹೆಣಗಾಡುತ್ತಿದ್ದಾರೆ. ಆದ್ದರಿಂದ ಸರಕಾರ, ವಿಶ್ವವಿದ್ಯಾಲಯಗಳು ಹೊಸ ಕೋರ್ಸ್‌ಗಳ ಘೋಷಣೆಗಿಂತ, ಚಾಲ್ತಿಯಲ್ಲಿರುವ ಕೋರ್ಸ್‌ಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.
ಶಿಕ್ಷಣಕ್ಕೆ ಮೊದಲ ಆದ್ಯತೆ ಎನ್ನುವ ಸರಕಾರಗಳು ಉನ್ನತ ಶಿಕ್ಷಣಕ್ಕೆ ಕೋಟಿ ಕೋಟಿ ಅನುದಾನ ನೀಡುವುದಕ್ಕಿಂತ ಈ ಅನುದಾನ ಯಾವುದಕ್ಕೆ ಖರ್ಚಾಗುತ್ತಿದೆ ಎನ್ನುವುದನ್ನು ಗಮನಿಸಬೇಕಿದೆ. ಯುಜಿಸಿಯಿಂದ ಬರುವ ಅನುದಾನಗಳನ್ನು ಬಳಸಿಕೊಂಡು ನಡೆಸ ಲಾಗುತ್ತಿರುವ ‘ನಾಮ್-ಕೆ-ವಾಸ್ತೆ’ ಸಂಶೋಧನೆಗಳ ಬದಲಿಗೆ, ಇಂದಿನ ದಿನಕ್ಕೆ ಅಗತ್ಯ ಎನಿಸುವ ಸಂಶೋಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ.
ಇಲ್ಲದೇ ಹೋದರೆ, ಭವಿಷ್ಯದಲ್ಲಿ ಸಂಶೋಧನೆಗಳೆನ್ನುವುದು ಸರಕಾರಿ ವಿಶ್ವವಿದ್ಯಾಲಯ ಗಳಲ್ಲಿ ಗಗನ ಕುಸುಮವಾಗುವ ದಿನಗಳು ದೂರ ಉಳಿದಿಲ್ಲ.