Ranjith H Ashwath Column: ಭರ್ತಿಗಿಂತ, ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ !
ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸರಕಾರಗಳು ಬದಲಾಗುವುದಕ್ಕೆ ಭ್ರಷ್ಟಾಚಾರದೊಂದಿಗೆ ನಿರುದ್ಯೋಗ ಸಮಸ್ಯೆಯೂ ಪ್ರಮುಖ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಉದ್ಯೋಗ ಸೃಷ್ಟಿಗೆ ಸರಕಾರದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಗಳನ್ನು ನೀಡುತ್ತಾ ಬಂದಿವೆ.
-
ಅಶ್ವತ್ಥಕಟ್ಟೆ
ಸರಕಾರಗಳು ಬದಲಾಗುವುದಕ್ಕೆ ಭ್ರಷ್ಟಾಚಾರದೊಂದಿಗೆ ನಿರುದ್ಯೋಗ ಸಮಸ್ಯೆಯೂ ಕಾರಣವಾಗುತ್ತದೆ. ಹೀಗಾಗಿ ಬಹುತೇಕ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಖಾಲಿ ಯಿರುವ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಗಳನ್ನು ನೀಡುತ್ತವೆ. ಆದರೆ ಈವರೆಗೆ ಯಾವ ಸರಕಾರಗಳೂ ಈ ಮಾತನ್ನು ಉಳಿಸಿಕೊಂಡಿಲ್ಲ.
ಕಳೆದ ಒಂದು-ಒಂದೂವರೆ ವರ್ಷದ ಅವಧಿಯಲ್ಲಿ ವಿಶ್ವದ ಅನೇಕ ದೇಶಗಳ ಸುಭದ್ರ ಸರಕಾರಗಳು ಯುವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿ ಬಲಿಯಾಗಿವೆ. ಯುವಜನರ ಕಿಚ್ಚಿನಿಂದಾಗಿ ಅದೆಷ್ಟೋ ನಾಯಕರು ತಲೆಮರೆಸಿಕೊಳ್ಳುವಂಥ ಸ್ಥಿತಿ ಸೃಷ್ಟಿಯಾಗಿದೆ. ಈ ರೀತಿ ಕಿಚ್ಚು ಹೊತ್ತಿಸುವುದಕ್ಕೆ ಬಹುಪಾಲು ಕಾರಣ ‘ನಿರುದ್ಯೋಗ’ ಸಮಸ್ಯೆ.
ನಿರುದ್ಯೋಗ, ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ರೋಸಿ ಯುವಜನರ ಗುಂಪು ಸರಕಾರಗಳ ವಿರುದ್ಧ ತಿರುಗಿ ಬಿದ್ದಿರುವುದನ್ನು ನೋಡಿದ್ದೇವೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಲ್ಲಿ ಯುವಕರು ಸಿಡಿದೇಳುವುದಕ್ಕೆ ನಿರುದ್ಯೋಗದೊಂದಿಗೆ ಅಸಮಾನತೆ, ಭ್ರಷ್ಟಾಚಾರವೂ ಕಾರಣವಾಗಿದ್ದವು.
ಭಾರತದಲ್ಲಿ ಸದ್ಯಕ್ಕೆ ಈ ಪ್ರಮಾಣದಲ್ಲಿ ರೋಷಾಗ್ನಿ ಬಹಿರಂಗವಾಗಿ ಕಾಣಿಸುತ್ತಿಲ್ಲ. ಆದರೆ, ನಿರುದ್ಯೋಗ ಸಮಸ್ಯೆಯನ್ನು ಮುಂದಿಟ್ಟುಕೊಂಡು ಯುವಜನರು ಸರಕಾರಗಳ ವಿರುದ್ಧ ಒಳಗೊಳಗೇ ತಿರುಗಿಬೀಳುವುದನ್ನು ನೋಡಿದ್ದೇವೆ.
ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸರಕಾರಗಳು ಬದಲಾಗುವುದಕ್ಕೆ ಭ್ರಷ್ಟಾಚಾರದೊಂದಿಗೆ ನಿರುದ್ಯೋಗ ಸಮಸ್ಯೆಯೂ ಪ್ರಮುಖ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಉದ್ಯೋಗ ಸೃಷ್ಟಿಗೆ ಸರಕಾರ ದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಗಳನ್ನು ನೀಡುತ್ತಾ ಬಂದಿವೆ. ಆದರೆ ಈವರೆಗೆ ಯಾವ ಸರಕಾರಗಳೂ ಈ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ.
ಇದನ್ನೂ ಓದಿ: Ranjith H Ashwath Column: ವಿವಿ ಚುನಾವಣೆ ವಿಷಯದಲ್ಲೇಕೆ ಗೊಂದಲ ?
ದೇಶದೆಲ್ಲೆಡೆ ಈ ವಿಷಯದಲ್ಲಿ ಅಸಮಾಧಾನವಿದ್ದರೂ, ಕರ್ನಾಟಕದಲ್ಲಿ ಬಹಿರಂಗವಾಗಿ ಯುವಜನರ ಪ್ರತಿಭಟನೆಗಳು ಜೋರಾಗಿವೆ. ಎಲ್ಲ ನಿರುದ್ಯೋಗಿ ಯುವಜನರಿಗೂ ಸರಕಾರ ಗಳೇ ಕೆಲಸ ಕೊಡಬೇಕು ಎನ್ನುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲವಾದರೂ, ತಮ್ಮ ಕೈಗೆ ಕೆಲಸ ಕೊಡುವಂಥ ವಾತಾವರಣವನ್ನು ನಿರ್ಮಿಸುವುದು ಸರಕಾರಗಳ ಜವಾಬ್ದಾರಿ ಎನ್ನುವ ಯುವಜನರ ಬೇಡಿಕೆ ನ್ಯಾಯಯುತವಾಗಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಕಳೆದ ಮೂರ‍್ನಾಲ್ಕು ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಈ ಕಿಡಿ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿಯೂ ಸರಕಾರಿ ನೇಮಕ ಪರೀಕ್ಷೆಯ ತಯಾರಿಗೆ, ತರಬೇತಿಗೆ ಹೇಳಿ ಮಾಡಿಸಿರುವ ವಿದ್ಯಾಕಾಶಿ ಧಾರವಾಡದಲ್ಲಿ ಹೋರಾಟ ತೀವ್ರ ಪ್ರಮಾಣ ದಲ್ಲಿ ಕಾಣಿಸಿಕೊಂಡಿದೆ.
ಕಳೆದ ವಾರದ ಪ್ರತಿಭಟನೆಯಲ್ಲಿ ಯುವಕರು ಹಾಗೂ ಪೊಲೀಸರ ನಡುವಿನ ತಿಕ್ಕಾಟದ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತ್ತು ಎಂದರೂ ತಪ್ಪಾಗುವುದಿಲ್ಲ. ಈ ರೀತಿ ಹೋರಾ ಟಕ್ಕೆ ಪದೇಪದೆ ರಸ್ತೆಗೆ ಇಳಿಯುತ್ತಿರುವ ಯುವಜನರ ಏಕಮಾತ್ರ ಆಗ್ರಹವೆಂದರೆ, ರಾಜ್ಯ ದಲ್ಲಿ ಖಾಲಿಯಿರುವ 2.84 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎನ್ನುವು ದಾಗಿದೆ.
ರಾಜ್ಯ ಸರಕಾರದ ವಿವಿಧ ಇಲಾಖೆ, ನಿಗಮ-ಮಂಡಳಿ, ಪ್ರಾಧಿಕಾರಗಳಿಂದ ಸರಿಸುಮಾರು ಏಳೂವರೆ ಲಕ್ಷ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 2.84 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ಸರಕಾರ ಹೇಳಿಕೊಂಡಿದೆ. ಖಾಲಿಯಿರುವ ಈ ಹುದ್ದೆಗಳ ಪೈಕಿ ಸುಮಾರು 1.7 ಲಕ್ಷ ಹುದ್ದೆಗಳು ಕ್ಲರಿಕಲ್ ಅಥವಾ ಗ್ರೂಪ್-ಸಿ ವಿಭಾಗದ ಹುದ್ದೆಗಳೇ ಆಗಿವೆ.
ಇನ್ನುಳಿದಂತೆ ಗ್ರೂಪ್-ಎ ವಿಭಾಗದ ಬಹುತೇಕ ಹುದ್ದೆಗಳಿಗೆ ಯುಪಿಎಸ್‌ಸಿ ಮೂಲಕವೇ ನೇಮಕವಾಗುವುದರಿಂದ ಅದರಲ್ಲಿ ಹೆಚ್ಚು ಖಾಲಿಯಿಲ್ಲ. ಅದೇ ರೀತಿ ಗ್ರೂಪ್-ಬಿ ವಿಭಾಗ ದಲ್ಲಿ ಗೆಜೆಡೆಟ್ ಅಧಿಕಾರಿಗಳು, ಎಂಜಿನಿಯರ್‌ಗಳು ಸೇರುವುದರಿಂದ ಅವರ ನೇಮಕ ಪ್ರಕ್ರಿಯೆಗಳು ತಡವಾದರೂ ಹೆಚ್ಚು ಪರಿಣಾಮ ಬೀರುತ್ತಿಲ್ಲ. ಆದರೆ ಗ್ರೂಪ್-ಸಿ ಹುದ್ದೆಗಳಿಗೆ ಶೇ.60ಕ್ಕೂ ಹೆಚ್ಚು ಆಕಾಂಕ್ಷಿಗಳು ಪ್ರಯತ್ನಿಸುವುದರಿಂದ, ಇವುಗಳ ಭರ್ತಿ ತಡವಾಗು ತ್ತಿರುವುದು ಯುವಜನರ ಅಕ್ಷೇಪ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಹಾಗೆ ನೋಡಿದರೆ, ಖಾಲಿ ಹುದ್ದೆ ಭರ್ತಿ ಸಂಬಂಧಿತ ಸಮಸ್ಯೆಯು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ಈ ಸಮಸ್ಯೆ ಭುಗಿಲೆದ್ದಿದೆ. ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿಯೇ ಒಂಬತ್ತು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಇವುಗಳನ್ನು ಭರ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಉತ್ತರ ಪ್ರದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಹುದ್ದೆಗಳು, ಬಿಹಾರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು, ಮಹಾರಾಷ್ಟ್ರದಲ್ಲಿ ಮೂರು ಲಕ್ಷಕ್ಕೂ ಅಧಿಕ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ಖಾಲಿಯಿವೆ. ಇಡೀ ದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡನ್ನೂ ಸೇರಿಸಿದರೆ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ ಎಂದರೆ ನಂಬಲೇ ಬೇಕು!
ಖಾಲಿ ಹುದ್ದೆ ಭರ್ತಿಗೆ ಪ್ರಮುಖವಾಗಿ, ಆರ್ಥಿಕ ಇಲಾಖೆಯ ಅಕ್ಷೇಪಣೆ, ಕಾನೂನಾತ್ಮಕ ತೊಡಕು (ಕರ್ನಾಟಕದಲ್ಲಿ ಒಳಮೀಸಲು ಸಮಸ್ಯೆ), ಖಾಲಿ ಹುದ್ದೆ ಭರ್ತಿಗೆ ಸರಕಾರಗಳು ನಡೆಸುವ ಪ್ರಕ್ರಿಯೆಯಲ್ಲಿನ ವಿಳಂಬ ನೀತಿಗಳೇ ಕಾರಣ. ಕರ್ನಾಟಕದ ಮಟ್ಟಿಗೆ ನೋಡುವು ದಾದರೆ ಇಲ್ಲಿ ಖಾಲಿ ಹುದ್ದೆಗಳನ್ನೆಲ್ಲ ಭರ್ತಿ ಮಾಡಿಕೊಂಡರೆ ಸರಕಾರಕ್ಕೆ ವಾರ್ಷಿಕ ಹೆಚ್ಚು ವರಿಯಾಗಿ ವೇತನಕ್ಕಾಗಿಯೇ 15 ರಿಂದ 20 ಸಾವಿರ ಕೋಟಿ ರು. ಅನುದಾನ ಮೀಸಲಿಡ ಬೇಕಾಗುತ್ತದೆ. ಈ ಪ್ರಮಾಣದ ಅನುದಾನ ಮೀಸಲಿಡುವಷ್ಟು ಸಂಪನ್ಮೂಲ ವಿದೆಯೇ ಎನ್ನುವುದೂ ಬಹುದೊಡ್ಡ ಪ್ರಶ್ನೆ.
ಈ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಿವೆ ಎನ್ನುವುದು ಒಂದೆಡೆಯಾದರೆ, ಇನ್ನೊಂದು ಆಯಾಮದಲ್ಲಿ ನೋಡಿದರೆ ಈ ಎಲ್ಲ ಹುದ್ದೆಗಳು ಅಗತ್ಯವೇ ಎನ್ನುವ ಪ್ರಶ್ನೆಗಳು ಮೂಡು ತ್ತವೆ. ಹುದ್ದೆ ಭರ್ತಿ ಒಂದು ಭಾಗವಾದರೆ, ತಂತ್ರಜ್ಞಾನ ಯುಗದಲ್ಲಿ ಈ ಹಿಂದೆ ಇದ್ದಷ್ಟೇ ನೌಕರರ ಅಗತ್ಯ ನಿಜಕ್ಕೂ ಇದೆಯೇ ಎನ್ನುವ ಪ್ರಶ್ನೆಯೂ ಇದೆ.
ಅನಗತ್ಯ ಹುದ್ದೆಗಳಿಗೆ ಸಂಬಂಧಿಸಿದಂತೆ ಪದೇಪದೆ ಸರಕಾರಗಳು ಪ್ರಸ್ತಾಪಿಸಿದರೂ, ಅನಗತ್ಯ ಹುದ್ದೆಗಳನ್ನು ತೆಗೆದು ಹಾಕುವ ಬಗ್ಗೆ ಗಂಭೀರ ಚಿಂತನೆಗಳನ್ನು ನಡೆಸುತ್ತಿಲ್ಲ. ಕರ್ನಾಟಕದಲ್ಲಿಯೇ ಖಾಲಿಯಿರುವ 2.84 ಲಕ್ಷ ಹುದ್ದೆಗಳಲ್ಲಿ ಶೇ.10ರಷ್ಟು ಅಂದರೆ 20 ರಿಂದ 30 ಸಾವಿರ ಹುದ್ದೆಗಳು ಇಂದಿನ ದಿನಮಾನಕ್ಕೆ ಅನಗತ್ಯ ಎನ್ನುವ ಮಾತುಗಳಿವೆ.
ಆಡಳಿತ ಸುಧಾರಣಾ ಆಯೋಗ ಮಾಡಿರುವ ಶಿಫಾರಸಿನಲ್ಲಿಯೂ ಈ ಅಂಶವನ್ನು ಪ್ರಸ್ತಾಪಿಸಲಾಗಿದೆ. ಈ ಹಿಂದೆ ಎಲ್ಲವನ್ನೂ ನೌಕರರೇ ಮಾಡಬೇಕಿದ್ದ ಕಾರಣಕ್ಕೆ ಹೆಚ್ಚುವರಿ ಹುದ್ದೆಗಳ ಅಗತ್ಯವಿತ್ತು. ಆದರೆ ಇಂದು ತಂತ್ರಜ್ಞಾನ ತೀವ್ರ ಪ್ರಮಾಣದಲ್ಲಿ ಬೆಳೆದಿರುವು ದರಿಂದ ಖಾಲಿಯಿರುವಷ್ಟು ಹುದ್ದೆಗಳು ಅನಗತ್ಯ. ಉದಾಹರಣೆಗೆ ಈ ಹಿಂದೆ ಟಪಾಲು ಗಳನ್ನು ಒಂದು ಟೇಬಲ್ ನಿಂದ ಇನ್ನೊಂದು ಟೇಬಲ್‌ಗೆ ತೆಗೆದುಕೊಂಡು ಹೋಗುವುದಕ್ಕೆ ಪ್ರತ್ಯೇಕ ಸಿಬ್ಬಂದಿ, ಶಾಖೆ ಇರುತ್ತಿತ್ತು.
ಆದರಿಂದು, ಇ-ಆಫೀಸ್ ಆಗಿರುವುದರಿಂದ, ತೆಗೆದುಕೊಂಡು ಹೋಗುವುದಕ್ಕೆ ಈ ಹಿಂದೆ ಇದ್ದಷ್ಟು ನೌಕರರ ಅಗತ್ಯವಿಲ್ಲ. ಇನ್ನು, ಖಾಲಿಯಿರುವ ಹುದ್ದೆಗಳ ಪೈಕಿ ಶಿಕ್ಷಕರ ಕೊರತೆ ಬಹುದೊಡ್ಡ ಪ್ರಮಾಣದಲ್ಲಿದೆ. ಆದರೆ ಖಾಸಗಿ ಶಾಲೆಗಳ ಪ್ರಾಬಲ್ಯದಿಂದಾಗಿ, ಅನೇಕ ಶಾಲೆಗಳಲ್ಲಿ ಮಕ್ಕಳೇ ಇಲ್ಲದೇ ಶಾಲೆಗಳನ್ನು ಮುಚ್ಚಿರುವ, ಮಕ್ಕಳಿದ್ದರೂ ಒಂದಂಕಿಯಲ್ಲಿ ರುವ ಕಾರಣಕ್ಕೆ ಶಿಕ್ಷಕರ ಸಂಖ್ಯೆಯನ್ನು ತಗ್ಗಿಸಿರುವ ಅದೆಷ್ಟೋ ಉದಾಹರಣೆಗಳಿವೆ.
ಕರ್ನಾಟಕದಲ್ಲಿರುವ 49,679 ಶಾಲೆಗಳ ಪೈಕಿ ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಇದೇ ರೀತಿ 1078 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಗಳ ನೋಂದಣಿಯೇ ಆಗದೇ ಮುಚ್ಚಿರುವ ಉದಾಹರಣೆಗಳಿವೆ. ಈ ಶಾಲೆಗಳಿಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಶಿಕ್ಷಕರ ಅಗತ್ಯವಿದೆ. ಈ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಅಡ್ಮಿಷನ್ ಹೆಚ್ಚಾಗದೇ, ಶಿಕ್ಷಕರನ್ನು ತೆಗೆದುಕೊಳ್ಳುವುದರಿಂದ ಆಗುವ ಪ್ರಯೋಜನವೇನಿದೆ? ಸದ್ಯ ಸರಕಾರ ನೀಡುತ್ತಿರುವ 2.84 ಲಕ್ಷ ಖಾಲಿ ಹುದ್ದೆಗಳಲ್ಲಿ ಈ ರೀತಿಯ ಸಾವಿರಾರು ಹುದ್ದೆಗಳು ಸೇರಿವೆ. ಶಿಕ್ಷಣ ಇಲಾಖೆಯ ಹೊರತಾಗಿಯೂ ಇತರೆ ಇಲಾಖೆಗಳಲ್ಲಿ ಈ ರೀತಿಯ ಹುದ್ದೆ ಗಳನ್ನು ಮುಂದುವರಿಸಬೇಕೇ ಅಥವಾ ಮರುಪರಿಶೀಲಿಸಬೇಕೇ? ಎನ್ನುವುದನ್ನು ಸರಕಾರ ಗಳು ಯೋಚಿಸಬೇಕು.
ಇಂದಿನ ದಿನಮಾನಗಳಿಗೆ ತಕ್ಕಂತೆ ಮೂವರು ನೌಕರರು ಕೆಲಸ ಮಾಡುವ ಜಾಗದಲ್ಲಿ, ಈಗ ಒಬ್ಬರು ಕೆಲಸ ಪೂರ್ಣಗೊಳಿಸಬಹುದು ಎನ್ನುವುದು ಸರಕಾರಗಳಿಗೆ ಮನದಟ್ಟಾಗಿದ್ದರೆ, ಆ ವಿಷಯವನ್ನಾದರೂ ಯುವ ಸಮುದಾಯಕ್ಕೆ ಸ್ಪಷ್ಟಪಡಿಸಬೇಕು.
ಒಟ್ಟು ಮಂಜೂರಾಗಿರುವ ಹುದ್ದೆಗಳಲ್ಲಿ ಯಾವ ಪ್ರಮಾಣದಲ್ಲಿ ಹುದ್ದೆಗಳನ್ನು ತಗ್ಗಿಸ ಬಹುದು? ಕಾಸ್ಟ್ ಕಟಿಂಗ್‌ನ ಪ್ರಮಾಣವೇನು? ಇದರಿಂದ ದೇಶಕ್ಕೆ, ರಾಜ್ಯಗಳ ಬೊಕ್ಕಸಕ್ಕೆ ಆಗುವ ಲಾಭವೇನು ಎನ್ನುವ ಬಗ್ಗೆ ಸ್ಪಷ್ಟನೆ ನೀಡಬೇಕು. ಇದರ ಜತೆಜತೆಗೆ ಸರಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಯುವಜನರಿಗೆ ‘ಪರ್ಯಾಯ’ ವ್ಯವಸ್ಥೆಯನ್ನು ಸೂಚಿಸಿಬೇಕು.
ಸರಕಾರಿ ಹುದ್ದೆಗಳನ್ನು ತಗ್ಗಿಸುವ ಬಗ್ಗೆ ಆಲೋಚನೆ ಮಾಡುವ ಜತೆಜತೆಗೆ ಯುವ ಸಮುದಾಯಕ್ಕೆ ಬದಲಿ ಉದ್ಯೋಗ, ಉದ್ಯಮದ ಬಗ್ಗೆಯೂ ತಿಳಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಅದೆಷ್ಟೋ ವೈಟ್ ಕಾಲರ್ ಜಾಬ್‌ಗಳಿಗಿಂತ ಹೆಚ್ಚಿನ ವೇತನವನ್ನು ಡೆಲಿವರಿ ಬಾಯ್‌ಗಳು ದುಡಿಯುತ್ತಿದ್ದಾರೆ. ಆದರೆ ಉದ್ಯೋಗ ಅರಸುತ್ತಿರುವ ಅನೇಕರಿಗೆ ಈ ವಿಷಯ ಗೊತ್ತಿಲ್ಲ. ಇದೇ ರೀತಿ ಖಾಸಗಿ ವಲಯದಲ್ಲಿ ಈಗಲೂ ಹುದ್ದೆಗಳು ಖಾಲಿಯಿದ್ದು, ಅವುಗಳ ಭರ್ತಿಗೆ ‘ಅರ್ಹ’ರ ಹುಡುಕಾಟದಲ್ಲಿ ಅನೇಕ ಕಂಪನಿಗಳಿವೆ.
ಕೈಗಾರಿಕಾ ವಲಯ ಕೇಳುತ್ತಿರುವ ಕೌಶಲವನ್ನು ಯುವಕರಿಗೆ ಸರಕಾರಗಳು ನೀಡಿದರೆ, ಸರಕಾರಿ ಹುದ್ದೆಯೇ ಬೇಕೆಂದು ಕೂತಿರುವ ಅದೆಷ್ಟೋ ಯುವಕರಿಗೆ ಕೆಲಸ ಸಿಗಲಿದೆ. ಇದೇ ರೀತಿ ಉದ್ಯೋಗ ಅರಸುವ ಯುವಕರು ಸರಕಾರಿ ಉದ್ಯೋಗಕ್ಕೆ ಯುವಕರು ‘ಜೋತು’ಬಿದ್ದು ಅಮೂಲ್ಯ ಅವಕಾಶ ಕಳೆದುಕೊಳ್ಳುವ ಬದಲು, ಸ್ವ-ಉದ್ಯೋಗ, ಖಾಸಗಿ ವಲಯದಲ್ಲಿರುವ ಅವಕಾಶಗಳತ್ತ ನೋಡುವುದು ಸೂಕ್ತ.
ಸರಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುವ ಅರ್ಧದಷ್ಟು ಪ್ರಯತ್ನವನ್ನು ಖಾಸಗಿ ವಲಯ ದಲ್ಲಿ ವಿನಿಯೋಗಿಸಿದರೆ, ಉದ್ಯೋಗ ಸಿಗುವುದು ನಿಶ್ಚಿತ. ಏಕೆಂದರೆ, ಸರಕಾರಿ ವಲಯದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬೇಕಿರುವ ಅನೇಕ ‘ಅರ್ಹತೆ’ಗಳು ಖಾಸಗಿ ವಲಯದಲ್ಲಿ ಅಗತ್ಯ ವಿಲ್ಲ.
ಅಲ್ಲೇನಿದ್ದರೂ, ಬುದ್ಧಿಗೆ ತಕ್ಕ ಸಂಬಳ ಎನ್ನುವ ಸೂತ್ರವಿರುವುದರಿಂದ ಪ್ರತಿಭಾನ್ವಿತರು ಅತ್ತ ಕಣ್ಣು ಹೊರಳಿಸುವುದು ಸೂಕ್ತ. ರಾಜ್ಯ ಸರಕಾರಗಳು 2.84 ಲಕ್ಷ ಹುದ್ದೆಗಳು ಖಾಲಿ ಯಿವೆ ಎಂದು ಅಂಕಿ-ಅಂಶ ನೀಡುವ ಜತೆಜತೆಗೆ ಈ ಪೈಕಿ ಎಷ್ಟು ಹುದ್ದೆಗಳು ಇಂದಿನ ದಿನಮಾನಕ್ಕೆ ಅನಗತ್ಯ ಎನ್ನುವುದನ್ನೂ ಗಮನಿಸಬೇಕಿದೆ.
ಇದರೊಂದಿಗೆ ದುಡಿದು ತಿನ್ನಲು ಬಯಸುವ ಯುವಜನರಿಗೆ ಸರಕಾರಿ ಉದ್ಯೋಗದ ಜತೆಜತೆಗೆ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿಯೂ ಖಾಸಗಿ ಉದ್ಯೋಗ ಸಿಗುವಂಥ ವಾತಾವಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ. ಈ ಸ್ಪಷ್ಟನೆಯನ್ನು ಸರಕಾರಗಳು ಯುವ ಸಮುದಾಯಕ್ಕೆ ನೀಡದೇ ಹೋದರೆ, ಧಾರವಾಡ ದಲ್ಲಿ ಆರಂಭವಾಗಿರುವ ಕಿಚ್ಚು ರಾಜ್ಯದ, ದೇಶದ ವಿವಿಧ ಭಾಗಗಳಿಗೂ ವಿಸ್ತರಣೆಯಾಗುವ ಅಪಾಯವಿದೆ. ಈ ಕಿಚ್ಚನ್ನು ನಂದಿಸದೇ ಹೋದರೆ, ಮುಂದೊಂದು ದಿನ ನೆರೆದೇಶಗಳಲ್ಲಿ ಆಗುತ್ತಿರುವ ಕ್ರಾಂತಿಗಳು ಭಾರತಕ್ಕೆ ಕಾಲಿಟ್ಟರೂ ಅಚ್ಚರಿಯಿಲ್ಲ.