ಕೃಷಿ ರಂಗ
ಬಸವರಾಜ ಶಿವಪ್ಪ ಗಿರಗಾಂವಿ
ಅಲ್ಪಾವಧಿ ತಳಿಯ ಕಬ್ಬನ್ನು ನಾಟಿ ಮಾಡುವುದರಿಂದ ಕಾರ್ಖಾನೆಗೆ ಹೆಚ್ಚು ಆದಾಯ ವಾಗುತ್ತದೆ. ಇದರಿಂದ ರೈತರಿಗೂ ಹೆಚ್ಚಿನ ಪಾಲು ಲಭಿಸುತ್ತದೆ. ಅಲ್ಪಾವಧಿ ಕಬ್ಬು ತಳಿಗಳು ವಿಶೇಷವಾಗಿ ಸುಂಕ (ಮುಳ್ಳು)ಗಳನ್ನು ಹೊಂದಿರುವುದರಿಂದ ರೈತರು ನಾಟಿ ಮಾಡಲು ಹಿಂಜರಿಯುತ್ತಾರೆ. ಸದ್ಯ ಯಾಂತ್ರೀಕೃತ ಕಟಾವು ಸಾಧ್ಯವಿರುವುದರಿಂದ ಅಲ್ಪಾವಧಿ ತಳಿಗಳ ಕಟಾವಿಗೆ ಸಮಸ್ಯೆ ಯಾಗುವುದಿಲ್ಲ.
ಕಬ್ಬು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ೨ನೇ ಸ್ಥಾನದಲ್ಲಿದ್ದರೆ, ಸಕ್ಕರೆ ಉತ್ಪಾದನೆ ಹಾಗೂ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕಬ್ಬು ಬೆಳೆಯು ಭಾರತದ ಆರ್ಥವ್ಯವಸ್ಥೆಗೆ ವಿವಿಧ ತೆರಿಗೆಗಳ ಮೂಲಕ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಅಂತೆಯೇ ನೂರಾರು ವರ್ಷಗಳ ಇತಿಹಾಸ ವಿರುವ ಸಕ್ಕರೆ ಉದ್ಯಮದ ಕಾರ್ಯನೀತಿಯು ಇಂದಿಗೂ ಸರಕಾರದ ನಿಯಂತ್ರಣದಲ್ಲಿದೆ.
‘ಸೋಮಾರಿ ಬೆಳೆ’ ಎನಿಸಿರುವ ಕಬ್ಬು ಪ್ರತಿವರ್ಷ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ. ಕ್ರಿ.ಶ. 2000ಕ್ಕಿಂತ ಪೂರ್ವದಲ್ಲಿ ಕಾರ್ಖಾನೆಗಳಿಗೆ ಕಬ್ಬು ಪೂರೈಸುವುದೆಂದರೆ ರೈತರಿಗೆ ದೊಡ್ಡ ಸಾಹಸ ವಾಗಿತ್ತು. ಮಂತ್ರಿ-ಮಹೋದಯರ ಶಿಫಾರಸು ಪತ್ರಗಳಿಗೂ ಮನ್ನಣೆ ಸಿಗುತ್ತಿರಲಿಲ್ಲ. ಕಡಿಮೆ ಸಾಮರ್ಥ್ಯದ ಮತ್ತು ಬೆರಳೆಣಿಕೆಯಷ್ಟಿದ್ದ ಅಂದಿನ ಕಾರ್ಖಾನೆಗಳಿಗೆ ಬೆಳೆದ ಕಬ್ಬನ್ನು ಸಂಪೂರ್ಣ ವಾಗಿ ಅರೆಯಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನೂ ಓದಿ: Basavaraj Shivappa Giraganvi Column: ಅನಾರೋಗ್ಯದತ್ತ ತಳ್ಳುವ ಮೊಬೈಲ್ ಮಾಯಾಂಗನೆ
ಹೀಗಾಗಿ ಕಬ್ಬು ಬೆಳೆಗಾರರು ಅದರಲ್ಲೂ ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ ಭಾಗದವರು ಅತಿಯಾಗಿ ಹಾನಿಗೀಡಾದರು. ಹಿಂದೆ ಅವರಿಗೆ ಆದ ನಷ್ಟಗಳು ಹೀಗಿವೆ:
? ಕಬ್ಬು ಕಟಾವು ಮಾಡಲು ಸರಾಸರಿ ಒಂದೂವರೆ ವರ್ಷದವರೆಗೆ ಕಾಯಬೇಕಾಗುತ್ತಿದ್ದುದರಿಂದ ಕಬ್ಬು ತೂಕವನ್ನು ಕಳೆದುಕೊಳ್ಳುತ್ತಿತ್ತು. ಅದರಲ್ಲೂ ಅಲ್ಪಾವಧಿ ತಳಿಗಳ ಪರಿಸ್ಥಿತಿಯಂತೂ ಹೇಳತೀರದು.
? ಒಂದೂವರೆ ವರ್ಷದತನಕ ಕಬ್ಬಿಗೆ ನೀರು ಪೂರೈಕೆ, ಕಳೆ ನಿರ್ವಹಣೆ ಮಾಡಬೇಕಾಗಿತ್ತಲ್ಲದೆ, ಪ್ರಾಣಿ, ವಿದ್ಯುತ್, ಬೆಂಕಿಯಂಥ ಅಪಾಯಗಳಿಂದ ಅದನ್ನು ಪಾರು ಮಾಡಬೇಕಾಗುತ್ತಿತ್ತು.
? ಕಡಿಮೆ ಸಂಖ್ಯೆಯಲ್ಲಿದ್ದ ಹಾಗೂ ಕಡಿಮೆ ಸಾಮರ್ಥ್ಯವಿದ್ದ ಕಾರ್ಖಾನೆಗಳಿಗೆ ಅಕ್ಟೋಬರ್‌ನಿಂದ ಜೂನ್‌ವರೆಗೆ ಸರಾಸರಿ 9 ತಿಂಗಳುಗಳ ಕಾಲ ಕಬ್ಬು ಅರೆದರೂ ಬೆಳೆದು ನಿಂತ ಕಬ್ಬು ಕಟಾವಾಗದೆ ಉಳಿಯುತ್ತಿತ್ತು.
? ರಾಜಿಯಿಲ್ಲದೆ ಜೇಷ್ಠತೆಯ ಆಧಾರದಲ್ಲಿ ಮತ್ತು ಪಕ್ವಗೊಂಡ ಕಬ್ಬನ್ನು ಮಾತ್ರ ಅರೆಯಲಾಗು ತ್ತಿತ್ತು.
? ಕಟಾವಾಗದೆ ಉಳಿದ ಕಬ್ಬನ್ನು ರೈತರು ಒಡ್ಡುಗಳಿಗೆ ಮತ್ತು ದನಕರುಗಳಿಗೆ ಕಟಾವು ಮಾಡಿ ಹಾಕುತ್ತಿದ್ದರು.
? ಬೆಲ್ಲದ ಉತ್ಪಾದನೆಯಿಂದಲೂ ಆದಾಯ ಕಡಿಮೆ ಬರುತ್ತಿತ್ತು.
? ಕಬ್ಬು ಬೆಳೆಗಾರರು ಹೋರಾಟ ಮಾಡಿ ಕಬ್ಬಿನ ದರ ಪಡೆಯಲು ಹಿಂಜರಿಯುತ್ತಿದ್ದರು.
? ವಿಳಂಬಿತ ಕಬ್ಬು ಕಟಾವಿನಿಂದ ಕಬ್ಬು ಬಿಲ್ ಸಹ ವಿಳಂಬವಾಗಿ ಬರುತ್ತಿತ್ತಲ್ಲದೆ ಕನಿಷ್ಠ ಮೂರು ಹಂತದಲ್ಲಿ ಕಬ್ಬು ದರ ಪಡೆಯಬೇಕಾಗಿತ್ತು.
? ಕಾರ್ಖಾನೆಯಿಂದ ಕಬ್ಬು ಬೀಜ, ರಸಗೊಬ್ಬರ ಪಡೆಯುವುದು ಮತ್ತು ತಮಗಿಷ್ಟವಾದ ಕಾರ್ಖಾನೆಗೆ ಕಬ್ಬು ಪೂರೈಸುವುದು ಅಷ್ಟೊಂದು ಸಲೀಸಾಗಿರಲಿಲ್ಲ.
? ಬಹುತೇಕವಾಗಿ ಕಾರ್ಖಾನೆಗಳಲ್ಲಿ ಕಬ್ಬು ತುಂಬಿದ ವಾಹನಗಳು ಹಲವು ದಿನಗಳವರೆಗ ಕಾಯ್ದು ಕಬ್ಬು ಅರೆಯಬೇಕಾಗುತ್ತಿತ್ತು. ಇದರಿಂದ ಕಬ್ಬಿನಲ್ಲಿ ತೂಕ ಮತ್ತು ಸಕ್ಕರೆ ಇಳುವರಿಯು ಕಡಿಮೆಯಾಗುತ್ತಿತ್ತು.
? ಕಬ್ಬು ಬೆಳೆಗಾರರು, ಕಟಾವುದಾರರು ಮತ್ತು ಸಾರಿಗೆದಾರರು ಕಾರ್ಖಾನೆಗಳ ಮಾತನ್ನು ಮೀರುತ್ತಿರಲಿಲ್ಲ.
? ಕಬ್ಬು ಕಟಾವು ಯಂತ್ರಗಳು ಲಭ್ಯವಿರಲಿಲ್ಲ.
? ಕಡು ಬೇಸಿಗೆಯಲ್ಲಿಯೂ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದುದರಿಂದ ಅತಿಯಾದ ತಾಪಮಾನದಿಂದ ತೊಂದರೆಯಾಗುತ್ತಿತ್ತು.
ಹೀಗೆ ಅಂದಿನ ದಿನಮಾನಗಳಲ್ಲಿ ಕಬ್ಬು ಬೆಳೆಗಾರರು ಅತಿಯಾದ ತೊಂದರೆ ಮತ್ತು ನಷ್ಟವನ್ನು ಅನುಭವಿಸುತ್ತಿದ್ದರು. ಪ್ರಸಕ್ತ ದಿನಮಾನದಲ್ಲಿ ಬಹುತೇಕವಾಗಿ ಮೇಲಿನ ತೊಂದರೆಗಳಿಲ್ಲ. ಆದರೂ ಕಬ್ಬು ಬೆಳೆಗಾರರು ಹಾನಿ ಅನುಭವಿಸುತ್ತಿದ್ದಾರೆ. ಕಬ್ಬು ಬೆಳೆಗಾರರು ಮಾಡುತ್ತಿರುವ ಕೆಲವು ತಪ್ಪು ಗಳನ್ನು ತಿದ್ದಿಕೊಂಡಲ್ಲಿ ಯಾವುದೇ ಹೋರಾಟಗಳಿಲ್ಲದೆ ಸರಳವಾಗಿ ಇನ್ನೂ ಹೆಚ್ಚಿನ ಆದಾಯ ವನ್ನು ಪಡೆಯಬಹುದಾಗಿದೆ.
? ಕಬ್ಬಿನೊಂದಿಗೆ ರವದಿ, ಮಣ್ಣು, ಬೇರು, ಎಲೆ, ಎಳೆಕಬ್ಬು ಮತ್ತು ಹಸಿರು ತುದಿ ಪೂರೈಕೆಯಾಗುತ್ತಿರುವುದರಿಂದ ಗುಣಮಟ್ಟದ ಸಕ್ಕರೆಯು ಉತ್ಪಾದನೆಯಾಗುವುದಿಲ್ಲ. ಇದರಿಂದ ಕಾರ್ಖಾನೆಗೆ ಹಾನಿಯಾಗುವುದರಿಂದ ರೈತರಿಗೆ ಕಬ್ಬು ದರವು ಕಡಿಮೆ ಲಭಿಸುತ್ತದೆ. ತಾಜಾ ಮತ್ತು ಗುಣಮಟ್ಟದ (ಪಕ್ವ) ಕಬ್ಬಿನಿಂದ ಹೆಚ್ಚು ಸಕ್ಕರೆ ಮತ್ತು ತೂಕವು ಲಭಿಸುತ್ತದೆ.
? ಪ್ರಸಕ್ತ ಕಬ್ಬು ಕೊರತೆಯ ದಿನಮಾನಗಳಲ್ಲಿ ಕಟಾವುದಾರರಿಗೆ ನಿಗದಿತ ದರಕ್ಕಿಂತ ಹೆಚ್ಚು ಹಣ (ಲಗಾಣಿ) ಕೊಡುವ ಅವಶ್ಯಕತೆಯಿರುವುದಿಲ್ಲ. ಸ್ವಲ್ಪ ಕಾಯಬೇಕಷ್ಟೇ. ದಕ್ಷಿಣ ಕರ್ನಾಟಕದಲ್ಲಿನ ಕಟಾವು ದರಗಳು ಭಯಾನಕವಾಗಿವೆ. ಪ್ರಸ್ತುತ ಕಟಾವುದಾರರಿಗೆ ಉಳಿಯುವಷ್ಟು ಹಣವು ನೂರಾರು ಕೋಟಿ ಹಣ ಹೂಡಿದ ಕಾರ್ಖಾನೆದಾರರಿಗೆ ಮತ್ತು ಲಕ್ಷಾಂತರ ಹಣ ಖರ್ಚು ಮಾಡಿ ಕಬ್ಬು ಬೆಳೆಸುತ್ತಿರುವ ರೈತನಿಗೂ ಉಳಿಯುತ್ತಿಲ್ಲ.
ಇದನ್ನು ಇತಿಮಿತಿಯೊಂದಿಗೆ ಸಾಮೂಹಿಕವಾಗಿ ಕೈಗೊಳ್ಳುವುದು ಕಡ್ಡಾಯ. ಕಾರ್ಮಿಕರ ಕೊರತೆಯ ದಿನಮಾನಗಳಲ್ಲಿ ಯೋಗ್ಯ ಕೂಲಿ ದೊರೆಯದಿದ್ದಲ್ಲಿ ಕಾರ್ಮಿಕರು ಬೇರೆ ಉದ್ಯೋಗ ದತ್ತ ವಲಸೆ ಹೋಗುವ ಅಪಾಯವಿರುತ್ತದೆ ಎಂಬ ಗಮನವಿರಬೇಕಷ್ಟೆ.
? ಸದ್ಯ ಅವಧಿಪೂರ್ವ ಅಂದರೆ ಗ್ಲೂಕೋಜ್ (ಪಕ್ವಪೂರ್ವ) ಹಂತದಲ್ಲಿ ಕಬ್ಬು ಕಟಾವು ಮಾಡುತ್ತಿರುವುದು ಜೋರಾಗಿದೆ, ಇದರಿಂದ ಕಬ್ಬಿನ ತೂಕ ಕಡಿಮೆಯಾಗುತ್ತದೆ. ಕಬ್ಬನ್ನು ಪಕ್ವಗೊಂಡ ನಂತರ ಅಂದರೆ ಸುಕ್ರೋಸ್ ಹಂತದಲ್ಲಿ ಕಟಾವು ಮಾಡುವುದರಿಂದ ಹೆಚ್ಚಿನ ತೂಕವು ಲಭಿಸುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಅವಽಪೂರ್ವ/ಪಕ್ವಪೂರ್ವ ಕಬ್ಬು ಕಟಾವು ರೈತರಿಗೆ ಮತ್ತು ಕಾರ್ಖಾನೆಗಳಿಗೆ ಮಾರಕವಾಗಿವೆ. ಮನುಷ್ಯರಿಗೆ ತಿನ್ನಲು ಯೋಗ್ಯವಿರುವ ಕಬ್ಬಿನಿಂದ ಮಾತ್ರ ಗುಣಮಟ್ಟದ ಸಕ್ಕರೆ, ಎಥೆನಾಲ್ ಉತ್ಪಾದನೆಯಾಗುತ್ತದೆ.
? ಸದ್ಯದ ಕಬ್ಬು ಕಟಾವಿನ ಸರಾಸರಿ ಅವಧಿಯು ಕೇವಲ 9 ತಿಂಗಳಾಗಿದೆ. ಅಲ್ಪಾವಧಿ ತಳಿಗಳನ್ನು ಸೂಕ್ತ ಸಮಯದಲ್ಲಿ ನಾಟಿ ಮಾಡಿ ಮತ್ತು ಸಮರ್ಪಕ ನಿರ್ವಹಣೆ ಮಾಡಿ ಸರಾಸರಿ 12 ತಿಂಗಳಿಗೆ ಕಾರ್ಖಾನೆಗೆ ಪೂರೈಸಿದಲ್ಲಿ ಹೆಕ್ಟೇರಿಗೆ ನಿಗದಿತ ತೂಕಕ್ಕಿಂತ ಸರಾಸರಿ 15 ಟನ್ ಹೆಚ್ಚಿಗೆ ತೂಕವನ್ನು ಪಡೆಯಬಹುದಾಗಿದೆ.
? ಉಪಗ್ರಹ, ಡ್ರೋನ್, ಕೃತಕ ಬುದ್ಧಿಮತ್ತೆ ಹಾಗೂ ಜಿಪಿಎಸ್ ಆಧಾರಿತ ಕಬ್ಬು ಕೃಷಿ ನಿರ್ವಹಣೆ ಯಿಂದ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬಹುದು. ಇದು ಕಡಿಮೆ ಕ್ಷೇತ್ರದಲ್ಲಿ ಕಡಿಮೆ ಖರ್ಚಿನೊಂದಿಗೆ ಹೆಚ್ಚು ಇಳುವರಿ ಪಡೆಯುವ ಆಧುನಿಕ ಪದ್ದತಿಯಾಗಿದೆ.
? ಅಲ್ಪಾವಧಿ ತಳಿಯ ಕಬ್ಬನ್ನು ನಾಟಿ ಮಾಡುವುದರಿಂದ ಕಾರ್ಖಾನೆಗೆ ಹೆಚ್ಚು ಆದಾಯವಾಗುತ್ತದೆ. ಇದರಿಂದ ರೈತರಿಗೂ ಹೆಚ್ಚಿನ ಪಾಲು ಲಭಿಸುತ್ತದೆ. ಅಲ್ಪಾವಧಿ ಕಬ್ಬು ತಳಿಗಳು ವಿಶೇಷವಾಗಿ ಸುಂಕ (ಮುಳ್ಳು)ಗಳನ್ನು ಹೊಂದಿರುವುದರಿಂದ ರೈತರು ನಾಟಿ ಮಾಡಲು ಹಿಂಜರಿಯುತ್ತಾರೆ. ಸದ್ಯ ಯಾಂತ್ರೀಕೃತ ಕಟಾವು ಸಾಧ್ಯವಿರುವುದರಿಂದ ಅಲ್ಪಾವಽ ತಳಿಗಳ ಕಟಾವಿಗೆ ಸಮಸ್ಯೆಯಾಗುವುದಿಲ್ಲ.
? ಕಬ್ಬು ನಾಟಿ ಮಾಡುವ ಸಮಯವು ವಿಶೇಷವಾಗಿ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಇರುತ್ತದೆ. ಈ ಅವಽಯಲ್ಲಿ ವಾತಾವರಣವು ಹೆಚ್ಚು ಆರ್ದ್ರತೆಯನ್ನು ಹೊಂದಿರುವುದರಿಂದ ಬೀಜವು ಹೆಚ್ಚಿನ ಪ್ರಮಾಣದಲ್ಲಿ ಮೊಳಕೆಯೊಡೆಯುತ್ತದೆ.
ಸದ್ಯ ಕಾರ್ಖಾನೆಗಳು ಕಬ್ಬು ಕೊರತೆಯಿಂದ ೨೦೦ರಿಂದ ೨೫೦ ದಿನಗಳ ಬದಲಾಗಿ ಸರಾಸರಿ ೧೨೦ ದಿನಗಳು ಮಾತ್ರ ಕಬ್ಬು ಅರೆಯುತ್ತಿವೆ. ಕಡು ಬೇಸಗೆಯ ಪೂರ್ವದಲ್ಲಿಯೇ ಕಾರ್ಖಾನೆಗಳು ಸಂಪೂರ್ಣ ಕಬ್ಬು ಅರೆದು ಮುಗಿಸುತ್ತಿವೆ. ಇಂಥ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಬ್ಬು ಕಟಾವು ಮಾಡಲು ರೈತರು ಅವಸರಪಡುವ ಅವಶ್ಯಕತೆಯಿರುವುದಿಲ್ಲ.
? ಸದ್ಯ ಕಾರ್ಖಾನೆಗಳು ಹೆಚ್ಚಾಗಿದ್ದು, ಹಿಂದಿನಂತೆ ಕಬ್ಬು ಕಟಾವಾಗದೆ ಉಳಿಯುವ ಭಯವಿಲ್ಲ. ಆದ್ದರಿಂದ ರೈತರು ಸಮೀಪದ ಕಾರ್ಖಾನೆಗಳಿಗೆ ಕಬ್ಬು ಪೂರೈಸಬೇಕು. ಇದರಿಂದ ಸಾಗಾಣಿಕೆ ವೆಚ್ಚವನ್ನು ಉಳಿಸಿ ಹೆಚ್ಚಿನ ಲಾಭ ಪಡೆಯಬಹುದು. ಬೆಳೆಗಾರರು ಈ ಕ್ರಮಗಳನ್ನು ಅಳವಡಿಸಿ ಕೊಂಡಲ್ಲಿ ಕಬ್ಬು ಬೆಳೆಯಿಂದ ಮತ್ತಷ್ಟು ಆದಾಯವನ್ನು ಪಡೆಯಬಹುದಾಗಿದೆ.
(ಲೇಖಕರು ಕೃಷಿ ತಜ್ಞರು ಹಾಗೂ ಸಹಾಯಕ ಮಹಾ ಪ್ರಬಂಧಕರು)