ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Raghava Sharma Nidle Column: ಉ.ಪ್ರ.ಚುನಾವಣೆ: ಕೇಸರಿಗೆ ಮೇಲ್ಜಾತಿ ಮುನಿಸಿನ ಚಿಂತೆ

ಜೆಎಸ್ಪಿಗಂತೂ ಇದೊಂದು ಐತಿಹಾಸಿಕ ರಾಜಕೀಯ-ಚುನಾವಣಾ ಗೆಲುವು. ಅದೂ ಪಕ್ಷದ ಭದ್ರಕೋಟೆ ಎನಿಸಿದ ಕ್ಷೇತ್ರದಲ್ಲಿ ಮತ್ತು ಮೈತ್ರಿ ಸರಕಾರದಲ್ಲಿ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಹುದ್ದೆಯಲ್ಲಿರು ವಾಗ ಸೋಲುಂಟಾಗಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕ್ಷೇತ್ರದ ಅವರ ಪ್ರಭಾವಳಿ ಕೆಲಸ ಮಾಡಲಿಲ್ಲ.

ಜನಪಥ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಪ್ರತಿನಿಧಿಸಿದ್ದ ಬಿಹಾರದ ಬಾಂಕಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಅಭೂತಪೂರ್ವ ಗೆಲುವು ಸಾಧಿಸಿರುವುದು ಬಿಜೆಪಿ ದಿಲ್ಲಿ ನಾಯಕರನ್ನು ಚಿಂತೆಗೆ ತಳ್ಳಿರುವ ಜತೆಗೆ 2027ರ ಆರಂಭ ದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮಹಾಕಾಳಗಕ್ಕೆ ವಿಪಕ್ಷಗಳ ನೈತಿಕ ಬಲ ದುಪ್ಪಟ್ಟುಗೊಳಿಸುತ್ತಿದೆ.

ಬಾಂಕಿಪುರ ಫಲಿತಾಂಶವನ್ನು ಬಿಜೆಪಿ ವಿರುದ್ಧದ ನ್ಯಾಷನಲ್ ಪೊಲಿಟಿಕಲ್ ನರೇಟಿವ್ ಆಗಿ ರೂಪಿಸಲು ವಿಪಕ್ಷಗಳು ಯತ್ನಿಸುತ್ತಿರುವುದು ಸಹಜವಾಗಿಯೇ ಬಿಜೆಪಿಯನ್ನು ಇಕಟ್ಟಿನಲ್ಲಿ ಸಿಲುಕಿಸುತ್ತಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅದ್ವಿತೀಯ ಗೆಲುವು ಸಾಧಿಸಿ, 9 ತಿಂಗಳ ನಂತರದ ಉಪಚುನಾವಣೆಯಲ್ಲಿ ರಾಜಕೀಯದ ಕೂಸು ಜನಸುರಾಜ್ ವಿರುದ್ಧ ಹೀನಾಯವಾಗಿ ಸೋಲುವುದು ಸಾಮಾನ್ಯ ಬೆಳವಣಿಗೆಯೇನಲ್ಲ.

ಜೆಎಸ್ಪಿಗಂತೂ ಇದೊಂದು ಐತಿಹಾಸಿಕ ರಾಜಕೀಯ-ಚುನಾವಣಾ ಗೆಲುವು. ಅದೂ ಪಕ್ಷದ ಭದ್ರಕೋಟೆ ಎನಿಸಿದ ಕ್ಷೇತ್ರದಲ್ಲಿ ಮತ್ತು ಮೈತ್ರಿ ಸರಕಾರದಲ್ಲಿ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಹುzಯಲ್ಲಿರುವಾಗ ಸೋಲುಂಟಾಗಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕ್ಷೇತ್ರದ ಅವರ ಪ್ರಭಾವಳಿ ಕೆಲಸ ಮಾಡಲಿಲ್ಲ.

ಬಾಂಕಿಪುರ ಸೋಲಿನ ಹಿಂದೆ ಹಲವು ಸಂದೇಶಗಳಿವೆ. ಮುಖ್ಯವಾಗಿ, ಉತ್ತರ ಭಾರತದ ಹಿಂದಿ ಹಾರ್ಟ್‌ಲ್ಯಾಂಡ್ ನಲ್ಲಿ ಮೇಲ್ವರ್ಗದ ಮತದಾರರಲ್ಲಿ ಕಂಡುಬರುತ್ತಿರುವ ಅಸಮಾಧಾನ ಬಿಹಾರ ಮತ್ತು ಉತ್ತರ ಪ್ರದೇಶದ ರಾಜಕೀಯದ ಮೇಲೆ ಬೀರುತ್ತಿರುವ ಪ್ರಭಾವವನ್ನು ಅದು ಸೂಚ್ಯವಾಗಿ ತಿಳಿಸಿದೆ. ಬಾಂಕಿಪುರ ಉಪಚುನಾವಣೆ ಪ್ರಚಾರ ಸಂದರ್ಭದ ನೀಟ್ ಪತ್ರಿಕೆ ಸೋರಿಕೆ ವಿವಾದ, ದಿಲ್ಲಿ ಜಂತರ್ ಮಂತರ್‌ನಲ್ಲಿ ಸಿಜೆಪಿ ಹೋರಾಟ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆಳವಣಿಗೆಗಳು ನಡೆದರೂ, ಈ ಸೋಲಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಈ ಹಿಂದೆ ಜಾರಿ ಮಾಡಿದ್ದ ಹೊಸ ಸಮಾನತೆಯ ನಿಯಮಾವಳಿಗಳು ಕೂಡ ಪ್ರಮುಖ ಕಾರಣ ಎಂಬ ಚರ್ಚೆ ಪಕ್ಷದೊಳಗೆ ನಡೆದಿದೆ.

ಇದನ್ನೂ ಓದಿ: Raghava Sharma Nidle Column: ಬಾಂಕಿಪುರದಲ್ಲಿ ಹೊಸ ಅಧ್ಯಾಯ ಬರೆದ ಪ್ರಶಾಂತ್‌ ಕಿಶೋರ್

ಎಸ್ಸಿ/ಎಸ್ಟಿ/ಒಬಿಸಿಗಳ ಓಲೈಕೆಗಾಗಿ ಸಾಮಾನ್ಯ ವರ್ಗದ ಯುವಕರ ಹಿತಾಸಕ್ತಿ ಬಲಿ ಕೊಡುವ ನಿಯಮ ಜಾರಿ ಮಾಡುವ ಜರೂರತ್ತು ಕೇಂದ್ರದ ಬಿಜೆಪಿ ಸರಕಾರಕ್ಕೇಕೆ ಬಂತು ಎನ್ನುವುದು ಸಾಮಾನ್ಯ ವರ್ಗದ ಯುವಕರ ಪ್ರಶ್ನೆಯಾಗಿತ್ತು. ಆದರೆ, ಈ ಪ್ರಶ್ನೆಗೆ ಉತ್ತರಿಸುವ, ಸ್ಪಂದಿಸುವ ಕನಿಷ್ಠ ಕಳಕಳಿಯನ್ನೂ ಸರಕಾರ ಪ್ರದರ್ಶಿಸಲಿಲ್ಲ ಎನ್ನುವುದು ಸಮುದಾಯದ ಸಿಟ್ಟನ್ನು ದುಪ್ಪಟ್ಟು ಮಾಡಿತ್ತು. ಇದೇ ಕಾರಣಕ್ಕೆ, ಬಿಜೆಪಿ ಬೆಂಬಲಿಸುತ್ತಿದ್ದ ಬಹುಪಾಲು ಮೇಲ್ಜಾತಿ ಯುವಕರು ಜಂತರ್ ಮಂತರ್ ಹೋರಾಟದ ವೇಳೆ ಕೇಂದ್ರ ಸರಕಾರವನ್ನು ಸಮರ್ಥಿಸುವ ಬದಲು ಮೌನಕ್ಕೆ ಸರಿದಿದ್ದರು.

ವಾಸ್ತವದಲ್ಲಿ, ಯುಜಿಸಿ ನಿಯಮ ವಿರೋಧಿಸಿ ಸಾಮಾನ್ಯ ವರ್ಗದ ಯುವಕರು ಬೀದಿಗಿಳಿದಿದ್ದಾಗಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿದ್ದರು. ದೇಶದ ಹಿಂದಿ ಬೆಲ್ಟ್‌ನಲ್ಲಿ ಬ್ರಾಹ್ಮಣ ಹಾಗೂ ಠಾಕೂರ್, ರಜಪೂತ ಸಮುದಾಯ ಸೇರಿ ವಿವಿಧ ಮೇಲ್ವರ್ಗಗಳು ಬಿಜೆಪಿಯ ಸಾಂಪ್ರದಾಯಿಕ ಬೆಂಬಲ ಶಕ್ತಿಗಳಾಗಿದ್ದು, ನಮ್ಮ ಕಷ್ಟಕ್ಕೆ ಬಿಜೆಪಿ ಸ್ಪಂದಿಸುತ್ತಿಲ್ಲ ಎಂಬ ಭಾವನೆ ಆ ಸಮುದಾಯದಲ್ಲಿ ಬಲವಾಗಿ ಬೇರೂರಿತ್ತು.

ಸುಪ್ರೀಂ ಕೋರ್ಟ್ ಹಸ್ತಕ್ಷೇಪದಿಂದ ಯುಜಿಸಿ ನಿಯಮಾವಳಿಗೆ ತಡೆ ಬಿದ್ದಿದೆಯೇ ವಿನಃ ಕೇಂದ್ರ ಏನೂ ಮಾಡಿಲ್ಲ ಎಂಬ ಆಕ್ರೋಶ ಈಗಲೂ ಹಾಗೆಯೇ ಉಳಿದುಕೊಂಡಿದೆ. ಹಾಗಾಗಿ, ಸಿಜೆಪಿ ಹೋರಾಟದ ವೇಳೆ ಪ್ರಧಾನ್ ರಾಜೀನಾಮೆ ನೀಡಿರುವುದನ್ನು ಈ ಸಮಾಜದ ಯುವಕರು ಒಳಗೊಳಗೇ ಸಂಭ್ರಮಿಸಿದ್ದಾರೆ ಎನ್ನುವುದು ಅವಾಸ್ತವಿಕವೇನೂ ಅಲ್ಲ!

Yogi and Modi

ಉತ್ತರ ಪ್ರದೇಶದಲ್ಲೂ ಬ್ರಾಹ್ಮಣ ಮತ್ತು ಮೇಲ್ವರ್ಗದ ಮತದಾರರು ಇದೇ ರೀತಿ ಅಸಮಾಧಾನ ಗೊಂಡು ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ತಿರುಗಿಬೀಳಬಹುದು ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿವೆ.

ಯುಜಿಸಿ ನಿಯಮಾವಳಿಗಳನ್ನು ವಿರೋಧಿಸಿ ಕೆಲ ದಿನಗಳ ಹಿಂದೆ ರಾಜಸ್ತಾನದ ರಜಪೂತ್ ಕರ್ಣಿ ಸೇನೆಯು ಬಿಕಾನೇರ್ ನಿಂದ ಜೈಪುರದವರೆಗೆ 24 ದಿನಗಳ 600 ಕಿ.ಮೀ ಸುದೀರ್ಘ ‘ಸವರ್ಣ ನ್ಯಾಯ ಯಾತ್ರೆ’ ನಡೆಸಿ, ಜೈಪುರದಲ್ಲಿ ಬೃಹತ್ ರ್ಯಾಲಿ ಮೂಲಕ ಸಮಾಪನಗೊಳಿಸಿತ್ತು. ಕೇಂದ್ರ ಸರಕಾರಕ್ಕೆ ಯುಜಿಸಿ ನಿಯಮವನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂಬ ಗಡುವನ್ನೂ ಅದು ನೀಡಿದೆ.

ಯುಜಿಸಿ ಸಮಾನ ಸೂತ್ರವು ಮೇಲ್ವರ್ಗ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಅನ್ಯಾಯ ವಾಗಿ ಗುರಿ ಮಾಡಿ, ಅವರ ಹಕ್ಕುಗಳನ್ನು ಕಸಿಯುತ್ತಿದೆ ಎಂಬುದು ಕರ್ಣಿ ಸೇನೆಯ ತಕರಾರು. ಇದಕ್ಕೂ ಮುನ್ನ ವರ್ಷಾರಂಭದಲ್ಲಿ ಯುಜಿಸಿ ನಿಯಮಾವಳಿ ಖಂಡಿಸಿ, ಉತ್ತರ ಪ್ರದೇಶದ 2019ರ ಬ್ಯಾಚ್ʼನ ಪಿಸಿಎಸ್ ಅಧಿಕಾರಿ ಹಾಗೂ ಬರೇಲಿ ನಗರದ ಸಿಟಿ ಮ್ಯಾಜಿಸ್ಟ್ರೇಟ್ ಆಗಿದ್ದ ಅಲಂಕಾರ್ ಅಗ್ನಿಹೋತ್ರಿ ಅವರು ಗಣರಾಜ್ಯೋತ್ಸವ ದಿನದಂದು ತಮ್ಮ ಹುzಗೆ ರಾಜೀನಾಮೆ ನೀಡಿದ್ದನ್ನಿಲ್ಲಿ ನೆನಪಿಸಿಕೊಳ್ಳಬಹುದು. ಯುಜಿಸಿ ಸಮಾನತೆಯ ನಿಯಮಗಳನ್ನು ಅವರು ಕಪ್ಪು ಕಾಯ್ದೆ ಎಂದು ಟೀಕಿಸಿದ್ದರು. ತಮ್ಮ ಹೆಸರಿನ ಪಕ್ಕದಲ್ಲಿದ್ದ ಅಧಿಕೃತ ಬೋಡ್ ನಲ್ಲಿ ‘ರಾಜೀನಾಮೆ ನೀಡಲಾಗಿದೆ’ ಎಂದು ಬರೆದು, ಆ ಚಿತ್ರವನ್ನು ವೈರಲ್ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ದೊಡ್ಡ ಆಘಾತ ನೀಡಿದ್ದರು.

2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸೀಟುಗಳಲ್ಲಿ 43ನ್ನು ಇಂಡಿಯಾ ಒಕ್ಕೂಟ ಗೆದ್ದುಕೊಂಡಿದ್ದರ ಹಿಂದೆ ಒಬಿಸಿ, ದಲಿತ, ಮುಸ್ಲಿಂ ಮತಬ್ಯಾಂಕ್ ಕ್ರೋಢೀಕರಣ ಕೆಲಸ ಮಾಡಿದ್ದರೂ, ಮೇಲ್ವರ್ಗದ ಬಹು ಮಂದಿ ಬಿಜೆಪಿ ಜತೆಗೇ ಇದ್ದರು. ಟಿಕೆಟ್ ಹಂಚಿಕೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಗೃಹ ಸಚಿವ ಅಮಿತ್ ಶಾ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಪಕ್ಷ ಕೇವಲ 33 ಸೀಟುಗಳಿಗೆ ಸೀಮಿತಗೊಂಡಿತು ಎಂಬುದನ್ನು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ.

ಇದೀಗ ಉ.ಪ್ರ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇಲ್ವರ್ಗದ ಅಸಮಾಧಾನದ ಲಾಭವನ್ನು ಪಡೆಯಲು ಹವಣಿಸುತ್ತಿರುವ ಸಮಾಜವಾದಿ-ಕಾಂಗ್ರೆಸ್ ಒಕ್ಕೂಟ, ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಮತವರ್ಗದಾಚೆ ವಿಸ್ತರಿಸಲು ಕಾರ್ಯತಂತ್ರ ರೂಪಿಸತೊಡಗಿದೆ. ಉತ್ತರ ಪ್ರದೇಶದ ಪೂರ್ವಾಂಚಲ ಅಥವಾ ಪೂರ್ವ ಉತ್ತರ ಪ್ರದೇಶ ರಾಜ್ಯ ರಾಜಕೀಯದ ಅತ್ಯಂತ ನಿರ್ಣಾಯಕ ಪ್ರಾಂತ್ಯವಾಗಿದೆ. ಇಲ್ಲಿ ರಾಜ್ಯದ ಅತಿ ಹೆಚ್ಚು ಬ್ರಾಹ್ಮಣ ಜನಸಂಖ್ಯೆಯ ಸಾಂದ್ರತೆಯಿದೆ. ಈ ಭಾಗದ ಬ್ರಾಹ್ಮಣ ಮತದಾರರು ಪ್ರತಿ ಚುನಾವಣೆಯ ಸೋಲು-ಗೆಲುವನ್ನು ನಿರ್ಧರಿಸುವಷ್ಟು ಪ್ರಭಾವಶಾಲಿ ಯಾಗಿದ್ದಾರೆ.

ಸಾಮಾಜಿಕ-ರಾಜಕೀಯ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಆ ಸಮುದಾಯದ ಪಾತ್ರ ದೊಡ್ಡದು ಎನ್ನುವುದು ಗುಟ್ಟಿನ ವಿಷಯವೇನಲ್ಲ. ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬ್ರಾಹ್ಮಣ ಮತದಾರರು ಅಭ್ಯರ್ಥಿಗಳ ಫಲಿತಾಂಶ ನಿರ್ಧರಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಅವರ ಗೋರಖ್‌ಪುರ ಕೂಡ ಪೂರ್ವಾಂಚಲ ಭಾಗದಲ್ಲಿದ್ದು, ಬ್ರಾಹ್ಮಣರು, ರಜಪೂತರು, ಠಾಕೂರ್ ಸಮುದಾಯಗಳ ನಡುವಿನ ಸಾಂಪ್ರದಾಯಿಕ ರಾಜಕೀಯ ಸಮತೋಲನ ಕಾಯ್ದುಕೊಳ್ಳುವುದು ಅವರಿಗೆ ಸವಾಲಾಗಲಿದೆ. 2022ರ ಚುನಾವಣೆಯಲ್ಲಿ ಸಮಾಜವಾದಿ ನೇತೃತ್ವದ ಮೈತ್ರಿಕೂಟ ಒಟ್ಟು 40 ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಅಂದರೆ, ಎಸ್‌ಪಿ ನೀಡಿದ್ದ ಒಟ್ಟು ಮೇಲ್ವರ್ಗದ ಟಿಕೆಟ್‌ಗಳಲ್ಲಿ 51% ಟಿಕೆಟ್‌ಗಳು ಬ್ರಾಹ್ಮಣ ಅಭ್ಯರ್ಥಿಗಳಿಗೇ ಲಭಿಸಿದ್ದವು!

ಮತ್ತೊಂದೆಡೆ, ಬಿಜೆಪಿ ಬರೋಬ್ಬರಿ 68 ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಈ ಅಭ್ಯರ್ಥಿ ಗಳ ಪಟ್ಟಿಯಲ್ಲಿ ಕೇವಲ ಒಂದು ಪ್ರಬಲ ಜಾತಿಯಿಂದ ಆಯ್ಕೆಯಾದ ಅತಿ ಹೆಚ್ಚು ಅಭ್ಯರ್ಥಿಗಳು ಎಂದರೆ ಬ್ರಾಹ್ಮಣರೇ ಆಗಿದ್ದರು. 2007ರಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದು ಕೂಡ ದಲಿತ-ಬ್ರಾಹ್ಮಣ ಎಂಬ ಅಪರೂಪದ ಕಾಂಬಿನೇಷನ್ ಮೂಲಕ ಎನ್ನುವುದೂ ಇಲ್ಲಿ ಉಲ್ಲೇಖಾರ್ಹ.

ಸದ್ಯ ಬ್ರಾಹ್ಮಣ ಸೇರಿ ವಿವಿಧ ಮೇಲ್ಜಾತಿಗಳು ಬಿಜೆಪಿ ಜತೆ ಗುರುತಿಸಿಕೊಂಡಿದ್ದರೂ, ಅವರ ಅಸಮಾಧಾನದ ಕಟ್ಟೆ ಒಡೆದರೆ ಫಲಿತಾಂಶವನ್ನು ಅವರು ಯಾವ ಕಡೆಗೂ ತಿರುಗಿಸಬಲ್ಲ ಶಕ್ತಿ-ಸಾಮರ್ಥ್ಯ ಹೊಂದಿದ್ದಾರೆ. ಇಲ್ಲಿನ ಬ್ರಾಹ್ಮಣರ ಒಲವು-ನಿಲವು ಯಾವುದೇ ಒಂದು ಪಕ್ಷಕ್ಕೆ ಶಾಶ್ವತವಾಗಿ ಸೀಮಿತವೆನಿಸಿಲ್ಲ. ಅನುಕೂಲ ರಾಜಕೀಯ ವಾತಾವರಣ, ಸೂಕ್ತ ಪ್ರಾತಿನಿಧ್ಯ ಹಾಗೂ ತಮ್ಮ ನೋವಿಗೆ ದನಿಯಾಗುವ ಕಡೆ ಅವರು ವಾಲಬಲ್ಲರು. ಇದೇ ಕಾರಣಕ್ಕಾಗಿ, ಯುಜಿಸಿ ವಿವಾದ ಹಚ್ಚಿಸಿದ ಕಿಡಿ ಹಾಗೂ ಬಾಂಕಿಪುರ ಸೋಲಿನ ನಂತರ ಬಿಜೆಪಿಗೆ ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಅನಿವಾರ್ಯ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ, ಸಮಾಜವಾದಿ ಪಕ್ಷ ಧರ್ಮ ಹಾಗೂ ದೇವರನ್ನು ಹೊರಗಿಟ್ಟು, ಕೇವಲ ಸರಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯವನ್ನು ಪ್ರಶ್ನಿಸುವ ಅತ್ಯಂತ ಜಾಣ್ಮೆಯ ರಾಜಕೀಯ ತಂತ್ರವನ್ನು ಬಳಸುತ್ತಿದೆ. ತಮ್ಮ ಪಕ್ಷದ ಮೇಲಿನ ಧರ್ಮವಿರೋಧಿ ಪಟ್ಟ ಉಂಟು ಮಾಡಿದ ರಾಜಕೀಯ ನಷ್ಟದ ಅರಿವು ಅಖಿಲೇಶ್ ಯಾದವ್‌ಗಿದೆ.

ಹೀಗಾಗಿ, ಅಯೋಧ್ಯೆಯ ರಾಮಮಂದಿರ ಹುಂಡಿ ಹಣ ಕಳವು ಪ್ರಕರಣದಲ್ಲೂ ಕೇವಲ ‘ಸರಕಾರದ ಪಾರದರ್ಶಕತೆ ಮತ್ತು ಜವಾಬ್ದಾರಿ’ಯ ಕೊರತೆಯನ್ನೇ ಪ್ರಶ್ನಿಸುತ್ತಿರುವ ಸಮಾಜವಾದಿ ಪಕ್ಷ, ದೇವಾಲಯದ ನಿರ್ವಹಣೆ ಮತ್ತು ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮದ ಆರೋಪ ವನ್ನು ‘ಸರಕಾರದ ಪಾರದರ್ಶಕತೆ ಮತ್ತು ಜವಾಬ್ದಾರಿ’ಯ ವಿಷಯವಾಗಿ ಜನರ ಮುಂದಿಡುತ್ತಿದೆ. ದೇಗುಲ ಆಡಳಿತ ನಿರ್ವಹಣೆ ವೈಫಲ್ಯ ಮತ್ತು ಹುಂಡಿ ಹಣ ಕಳವಿಗೆ ಬಿಜೆಪಿಯೇ ಹೊಣೆ ಎಂದು ಅದು ಬಿಂಬಿಸುತ್ತಿದೆ.

ತಮ್ಮ ಹೋರಾಟ ಶ್ರೀರಾಮ, ರಾಮಮಂದಿರ ಅಥವಾ ಸನಾತನ ಧರ್ಮದ ವಿರುದ್ಧವಲ್ಲ. ಬದಲಾಗಿ ಬರೀ ಸರಕಾರದ ವಿರುದ್ಧ ಎಂದು ಎಸ್‌ಪಿ ಸ್ಪಷ್ಟಪಡಿಸಿದೆ. ಕೆಲ ದಿನಗಳ ಹಿಂದೆ ಸಂಸದ ಪಪ್ಪು ಯಾದವ್ ಸಂಸತ್ ಆವರಣದಲ್ಲಿ ಸಾಧುವಿನ ವೇಷ ಧರಿಸಿ ಪ್ರತಿಭಟಿಸಿದ್ದನ್ನೂ ವಿರೋಧಿಸಿದ್ದ ಎಸ್‌ಪಿ ಸಂಸದ ರಾಮ್ ಗೋಪಾಲ್ ಯಾದವ್, ಈ ರೀತಿ ಸಾಧು-ಸನ್ಯಾಸಿಗಳಿಗೆ ಅವಮಾನ ಮಾಡುವುದು ಸರಿಯಲ್ಲ ಎಂದಿದ್ದರು. ವಿರೋಧ ಪಕ್ಷಗಳು ರಾಮಮಂದಿರದ ವಿಚಾರ ಪ್ರಶ್ನಿಸಿ ದಾಗಲೆ, ಬಿಜೆಪಿ ನಾಯಕರು ಅವರನ್ನು ಹಿಂದೂ ವಿರೋಧಿ ಅಥವಾ ರಾಮನ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಾರೆ.

90ರ ದಶಕದಲ್ಲಿ ಕರಸೇವಕರ ಮೇಲೆ ಅಂದಿನ ಮುಲಾಯಂ ಸಿಂಗ್ ಯಾದವ್ ಸರಕಾರ ದಾಳಿ ಮಾಡಿದ್ದನ್ನೇ ಉಲ್ಲೇಖಿಸುವ ಮೂಲಕ ಅವರ ಬಾಯಿ ಮುಚ್ಚಿಸುವ ಯತ್ನ ಮಾಡುತ್ತದೆ. ಹೀಗಾಗಿ, ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಸಮಾಜವಾದಿ ನಾಯಕರು, ಸಾಧು-ಸಂತರು ಮತ್ತು ಮಂದಿರ ವನ್ನು ಟೀಕೆ-ಟಿಪ್ಪಣಿಗಳಿಂದ ಹೊರಗಿಡುವ ಮೂಲಕ ಬಿಜೆಪಿಗೆ ಅಂತಹ ಯಾವುದೇ ಅವಕಾಶ ಸಿಗದಂತೆ ತಡೆಯುತ್ತಿದೆ. ಸಮಾಜವಾದಿ ಪಕ್ಷ ಸಾಂಪ್ರದಾಯಿಕವಾಗಿ ಪಿಡಿಎಫ್ ಅಂದರೆ ಪಿಚ್ಡಾ (ಹಿಂದುಳಿದ ವರ್ಗಗಳು), ದಲಿತರು, ಮತ್ತು ಅಲ್ಪಂಖ್ಯಾಕ್ (ಅಲ್ಪಸಂಖ್ಯಾತರು) ಸಮುದಾಯ ಗಳನ್ನು ಒಗ್ಗೂಡಿಸುವ ರಾಜಕೀಯ ತಂತ್ರ ಅನುಸರಿಸುತ್ತಾ ಬಂದಿರುವುದನ್ನು ನೋಡಿದ್ದೇವೆ. ಆದರೆ, ತನ್ನ ತಲುಪುವಿಕೆಯನ್ನು ಕೇವಲ ಈ ಮೂರು ಸಮುದಾಯಗಳಿಗೆ ಸೀಮಿತಗೊಳಿಸದೆ, ಮೇಲ್ವರ್ಗದ ಮತದಾರರನ್ನು-ವಿಶೇಷವಾಗಿ ಬ್ರಾಹ್ಮಣರನ್ನು ಆಕರ್ಷಿಸಲು ಎಸ್‌ಪಿ ಪ್ರಯತ್ನಿಸು ತ್ತಿದೆ. ಇದಕ್ಕಾಗಿ ತನ್ನ ಪಿಡಿಎಯನ್ನು- ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಜೊತೆಗೆ ಪಂಡಿತರು (ಬ್ರಾಹ್ಮಣರು) ಕೂಡ ಎಂಬುದಾಗಿ ಮರುವ್ಯಾಖ್ಯಾನ ಮಾಡಿದೆ. ಬರೀ ಯಾದವರ ಪಕ್ಷ ಎಂದು ಗುರುತಿಸಿಕೊಳ್ಳದೆ. ‌

ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ‘ಪಿಡಿಎ + ಪಂಡಿತ್’ ಸೂತ್ರವನ್ನು ಅದು ಬಳಸುತ್ತಿದೆ. ಈ ಎಲ್ಲಾ ಜಾತಿ ಸಮೀಕರಣ, ಸಾಮಾಜಿಕ ಸಮತೋಲನವನ್ನು ಮೀರಿ ಸಿಎಂ ಯೋಗಿ ಆದಿತ್ಯ ನಾಥ್ ಅವರ ವೈಯಕ್ತಿಕ ವರ್ಚಸ್ಸು ಹಾಗೂ ಜನಪ್ರಿಯತೆ ಉತ್ತರ ಪ್ರದೇಶದಾದ್ಯಂತ ಹಬ್ಬಿದೆ ಎನ್ನುವುದು ಸುಳ್ಳೇನಲ್ಲ. ಕುಖ್ಯಾತ ಗ್ಯಾಂಗ್‌ಸ್ಟರ್‌ಗಳ ನಿರ್ನಾಮ, ಬಿಗಿ ಕಾನೂನು ಸುವ್ಯವಸ್ಥೆ, ಜನಸ್ನೇಹಿ ಯೋಜನೆಗಳ ಬಗ್ಗೆ ಈಗಲೂ ಜನ ಮೆಚ್ಚುಗೆಯ ಮಾತನಾಡುತ್ತಾರೆ.

2022ರ ಚುನಾವಣೆಯಲ್ಲೂ ಯೋಗಿ ತಮ್ಮ 2ನೇ ದಿಗ್ವಿಜಯ ಯಾತ್ರೆ ಮುಂದುವರಿಸಿದ್ದು ಇದೇ ಕಾರಣಗಳಿಂದ. ಇದೀಗ ಮೂರನೇ ಚುನಾವಣಾ ಯಾತ್ರೆಗೆ ಸಜ್ಜಾಗಿರುವ ಸಿಎಂ ಯೋಗಿ ಆದಿತ್ಯನಾಥ್‌ಗೆ 2024ರ ಲೋಕಸಭೆ ಚುನಾವಣೆ ಹಿನ್ನಡೆ, ಮಂದಿರ ಹುಂಡಿ ಕಳವು, ನೀಟ್ ಸೋರಿಕೆ, ಯುಜಿಸಿ ವಿವಾದ, ಬಾಂಕಿಪುರ ಸೋಲಿನ ನರೇಟಿವ್, ಅಖಿಲೇಶ್ ಪಿಡಿಎ ಕಾರ್ಯತಂತ್ರ ಸೇರಿ ಹಲವು ಸವಾಲುಗಳಿವೆ. ಆದರೆ, ಇವೆಲ್ಲವನ್ನೂ ದಾಟಿ ಸಿಎಂ ಯೋಗಿ ಯು.ಪಿ.ಯನ್ನು ಗೆದ್ದಾರೇ? ಕಾದು ನೋಡೋಣ.

ಕೆ. ರಾಘವ ಶರ್ಮ ನಿಡ್ಲೆ

View all posts by this author