Raghava Sharma Nidle Column: ಬಾಂಕಿಪುರದಲ್ಲಿ ಹೊಸ ಅಧ್ಯಾಯ ಬರೆದ ಪ್ರಶಾಂತ್ ಕಿಶೋರ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ನಿತಿನ್ ನಬಿನ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ರಾಜ್ಯಸಭೆ ಪ್ರವೇಶಿಸಿದ್ದರಿಂದ ಬಾಂಕಿಪುರಕ್ಕೆ ಉಪ ಚುನಾವಣೆ ನಿಗದಿಯಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಯುವ ಕಾರ್ಯಕರ್ತ ನೀರಜ್ ಕುಮಾರ್ ಸಿನ್ಹಾ ಸ್ಪರ್ಧೆ ಮಾಡಿದ್ದರೂ, ಇದು ನಿತಿನ್ ನಬಿನ್ Vs ಪ್ರಶಾಂತ್ ಕಿಶೋರ್ ಚುನಾವಣೆ ಎಂದೇ ಬಿಂಬಿತವಾಗಿತ್ತು
-
ಜನಪಥ
2025ರ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದು ವರ್ಷ ಕಳೆದಿಲ್ಲ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸತತ 5 ಬಾರಿ ಗೆದ್ದಿದ್ದ ಬಿಹಾರ ಬಾಂಕಿಪುರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ (ಪಿಕೆ) ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಕೇಸರಿಪಡೆಯ ಭದ್ರಕೋಟೆ ಭೇದಿಸಿದ್ದಾರೆ. 9 ತಿಂಗಳ ಹಿಂದಷ್ಟೇ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷವನ್ನು ತಿರಸ್ಕರಿಸಿದ್ದ ಮತದಾರರು, ಬಾಂಕಿಪುರದ ಹೈವೋಲ್ಟೇಜ್ ಕದನದಲ್ಲಿ ಪ್ರಶಾಂತ್‌ರನ್ನು ಗೆಲ್ಲಿಸುವ ಮೂಲಕ ದೆಹಲಿಯಲ್ಲಿ ವಿರಾಜಮಾನರಾಗಿರುವ ಕೇಂದ್ರ ಬಿಜೆಪಿ ನಾಯಕರಿಗೆ ಬಿಗಿ ಸಂದೇಶ ರವಾನೆ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ನಿತಿನ್ ನಬಿನ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ರಾಜ್ಯಸಭೆ ಪ್ರವೇಶಿಸಿದ್ದರಿಂದ ಬಾಂಕಿಪುರಕ್ಕೆ ಉಪ ಚುನಾವಣೆ ನಿಗದಿಯಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಯುವ ಕಾರ್ಯಕರ್ತ ನೀರಜ್ ಕುಮಾರ್ ಸಿನ್ಹಾ ಸ್ಪರ್ಧೆ ಮಾಡಿದ್ದರೂ, ಇದು ನಿತಿನ್ ನಬಿನ್ Vs ಪ್ರಶಾಂತ್ ಕಿಶೋರ್ ಚುನಾವಣೆ ಎಂದೇ ಬಿಂಬಿತವಾಗಿತ್ತು. ನಿತಿನ್ ನಬಿನ್‌ರ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯ ಪ್ರಭಾವಳಿಯಿಂದಲೇ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಇಲ್ಲಿ ಗೆಲುವು ಸಾಧಿಸಬೇಕಿತ್ತು. ಆದರೆ, ಬಿಜೆಪಿಯ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಇದೀಗ ಪಿಕೆ ವಿಧಾನ ಸಭೆ ಪ್ರವೇಶದಿಂದ ಮುಖ್ಯಮಂತ್ರಿ ಸಾಮ್ರಾಟ್ ಚೌಧುರಿ ಅವರಿಗೆ ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಜನ ಸುರಾಜ್ ಪಕ್ಷ 1 ಸೀಟು ಗೆದ್ದ ಮಾತ್ರಕ್ಕೆ ದೇಶದ ರಾಜಕೀಯವೇ ಬದಲಾಗುತ್ತದೆ, ಸ್ಥಳೀಯ ಸರ್ಕಾರ ಪತನಗೊಳ್ಳುತ್ತದೆ ಎಂದೇನಲ್ಲ. ಉಪಚುನಾವಣೆಗಳು ಸ್ಥಳೀಯ ಮಟ್ಟದ ಫಲಿತಾಂಶಗಳೇ ಹೊರತು, ಅವು ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆಯ ಕನ್ನಡಿಯಲ್ಲ. ಹಾಗಂತ, ಬಾಂಕಿಪುರ ಸೋಲನ್ನು ಆಡಳಿತಾರೂಢ ಬಿಜೆಪಿ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ.
ಇದನ್ನೂ ಓದಿ: Raghava Sharma Nidle Column: ಕಾಲ ಮಿಂಚಿಲ್ಲ, ಆತ್ಮಾವಲೋಕನಕ್ಕಿದು ಸಕಾಲ!
ಸ್ಥಳೀಯ ವಿಷಯಗಳು, ಅಭ್ಯರ್ಥಿಗಳ ಆಯ್ಕೆ, ಕಡಿಮೆ ಮತದಾನ ಪ್ರಮಾಣ ಅಥವಾ ಪ್ರಾದೇಶಿಕ ನಾಯಕರ ಪ್ರಭಾವ ಉಪಚುನಾವಣೆಯ ಫಲಿತಾಂಶಗಳನ್ನು ನಿರ್ಧರಿಸುತ್ತವೆಯಾದರೂ, ಅವು ಮತದಾರರ ಆಂತರಿಕ ಮನಸ್ಥಿತಿಯನ್ನು ತಿಳಿಸುವ ʻಆರಂಭಿಕ ಎಚ್ಚರಿಕೆ'ಯ ಸಂದೇಶಗಳು. ಬಾಂಕಿ ಪುರ ಸೋಲನ್ನೂ ಬಿಜೆಪಿ ಇದೇ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ.
ಇಂಥದ್ದೊಂದು ಸಾಂಪ್ರದಾಯಿಕ ಕ್ಷೇತ್ರದಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿರುವುದು ಆಡಳಿತದ ವೈಫಲ್ಯದ ಜತೆಗೆ ಕಾರ್ಯಕರ್ತರು ಮತ್ತು ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ ಎಂಬುದರ ಸೂಚಕ. ರಾಷ್ಟ್ರೀಯ ಮಟ್ಟದ ನಿರೂಪಣೆಗಳು ಎಷ್ಟೇ ಪ್ರಬಲವಾಗಿದ್ದರೂ, ಜನರ ದೈನಂದಿನ ಸಂಕಟಗಳಿಗೆ ಸ್ಪಂದಿಸದಿದ್ದಾಗ, ಮತದಾರರಲ್ಲಿ ನಿಶ್ಯಬ್ದ ಅಸಮಾಧಾನ ಹೊಗೆಯಾಡಲು ಪ್ರಾರಂಭಿಸುತ್ತದೆ. ಅಂಥದ್ದೇ ಅಸಮಾಧಾನ ಬಾಂಕಿಪುರದಲ್ಲಿ ಕಂಡುಬಂದಿದೆ.
1995ರಿಂದ 2006ರ ತನಕ ಈ ಕ್ಷೇತ್ರವನ್ನು ಬಿಜೆಪಿಯ ನವೀನ್ ಕಿಶೋರ್ ಪ್ರಸಾದ್ ಸಿನ್ಹಾ ಪ್ರತಿನಿಧಿಸುತ್ತಿದ್ದರು. ಆದರೆ, ಅವರ ಅಕಾಲಿಕ ಮರಣಾ ನಂತರ ಪುತ್ರ ನಿತಿನ್ ನಬಿನ್ 2006ರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ಒಟ್ಟು 5 ಬಾರಿ ಇಲ್ಲಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ, 31 ವರ್ಷಗಳ ಬಿಜೆಪಿ ದಾಖಲೆಯನ್ನು ಪ್ರಶಾಂತ್ ಕಿಶೋರ್ ಮುರಿದಿರುವುದಲ್ಲದೆ, ಬಿಜೆಪಿ ನಾಯಕರ ಅಹಂಕಾರಕ್ಕೆ ಮರೆಯಲಾಗದ ಛಡಿಯೇಟನ್ನೇ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗು ತ್ತಿದೆ.
ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರದ್ದು ಎಂದ ಹೇಳಲಾದ ʻʻಕುತ್ತಾ-ಬಿಲ್ಲಿಯನ್ನು ನಿಲ್ಲಿಸಿದರೂ ನಾವು ಗೆಲ್ಲುತ್ತೇವೆʼʼ ಎಂಬ ಮಾತು ಬಾಂಕಿಪುರ ಚುನಾವಣಾ ಕಣದಲ್ಲಿ ಭಾರೀ ಸದ್ದು ಮಾಡಿತ್ತು. ಚುನಾವಣಾ ಪ್ರಚಾರದುದ್ದಕ್ಕೂ ಪಿಕೆ ಈ ಮಾತುಗಳನ್ನು ಪ್ರಸ್ತಾಪಿಸುತ್ತಾ, ಮತದಾರರು Taken for granted ಎಂದುಕೊಳ್ಳುವ ಬಿಜೆಪಿಗೆ ನೀವೇ ಬುದ್ಧಿಕಲಿಸಿ ಎಂದು ಮತಯಾಚನೆ ಮಾಡಿದರು. ಇದಕ್ಕೆ ಪೂರಕವಾಗಿ ಜನ ಸುರಾಜ್ ಡಿಜಿಟಲ್ ತಂಡವೂ ಜನರನ್ನು ಪರಿಣಾಮಕಾರಿ ಯಾಗಿ ತಲುಪಿತು. ಈ ರೀತಿ ನಾನು ಹೇಳೇ ಇಲ್ಲ, ಇದು ಫೇಕ್ ವಿಡಿಯೋ ಎಂದು ರವಿಶಂಕರ್ ಪ್ರಸಾದ್ ಹೇಳಿದರೂ, ಆಗಿದ್ದ ಡ್ಯಾಮೇಜ್‌ನ ನಿಯಂತ್ರಣ ಸಾಧ್ಯವಾಗಲಿಲ್ಲ.
ವಾಸ್ತವದಲ್ಲಿ, ಬಾಂಕಿಪುರದಿಂದ ಸ್ಪರ್ಧೆ ಮಾಡಬೇಕೆಂಬ ಉದ್ದೇಶ ಪ್ರಶಾಂತ್ ಕಿಶೋರ್‌ರಲ್ಲಿ ಇರಲಿಲ್ಲ. ಸೂಕ್ತ ಅಭ್ಯರ್ಥಿಗಾಗಿ ಅವರು ಹುಡುಕಾಟ ನಡೆಸಿದ್ದರು. ಆದರೆ ಕುತ್ತಾ-ಬಿಲ್ಲಿ ಹೇಳಿಕೆ ಉಲ್ಲೇಖಿಸಿ, ಇಲ್ಲಿಂದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಕಣಕ್ಕಿಳಿಯಲು ತೀರ್ಮಾನಿಸಿದರು ಪಿಕೆ. ಬಾಂಕಿಪುರ ಉಪಚುನಾವಣೆ ಸೋಲಿಗೆ ಬಿಜೆಪಿ ವಿರುದ್ಧದ ಜೆನ್-ಝೀ ಹೋರಾಟವೇ ಮುಖ್ಯ ಕಾರಣವಲ್ಲ. ಆದರೆ, ಯುವ ಜನಾಂಗದ ಆಕ್ರೋಶವೂ ತಕ್ಕಮಟ್ಟಿಗೆ ಬಿಜೆಪಿ ವಿರೋಧಿ ಮತಗಳಾಗಿ ಪರಿವರ್ತನೆಗೊಂಡಿವೆ.
ಸರ್ಕಾರದ ವೈಫಲ್ಯಗಳನ್ನು ಪದೇಪದೇ ಪ್ರಶ್ನಿಸುತ್ತಿದ್ದ ಬಿಹಾರದ ಭೋಜ್‌ಪುರ ಜಿಲ್ಲೆಯ ಬಿಲೌತಿ ಗ್ರಾಮದ ಭರತ್ ಭೂಷಣ್ ತಿವಾರಿ ಎಂಬ ಯುವ ಸಾಮಾಜಿಕ ಕಾರ್ಯಕರ್ತನ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿ, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಬಾಂಕಿಪುರ ಕಣದಲ್ಲಿ ಭರತ್ ಭೂಷಣ್ ಸಾವು, ಸರ್ಕಾರದ ಕ್ರಮಗಳ ಕುರಿತ ಚರ್ಚೆ ಹಾಗೂ ನರೇಟಿವ್ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಪೊಲೀಸರು ತಮ್ಮ ಆತ್ಮರಕ್ಷಣೆ ಗಾಗಿ ಭರತ್ ಭೂಷಣ್ ಮೇಲೆ ಗುಂಡು ಹಾರಿಸಿದ್ದಾಗಿ ತಿಳಿಸಿದರೂ, ಇದು ನಕಲಿ ಎನ್‌ಕೌಂಟರ್ ಮತ್ತು ಹತ್ಯೆ ಎಂದು ಕುಟುಂಬಸ್ಥರ, ಸಾರ್ವಜನಿಕರ ಆರೋಪಗಳು ಆಡಳಿತಾರೂಢ ಬಿಜೆಪಿಯ ವರ್ಚಸ್ಸಿಗೆ ಹಾನಿ ಮಾಡಿತು.
ಬಾಂಕಿಪುರ ಸೋಲು ಕೇವಲ ನಿತಿನ್ ನಬಿನ್‌ರದ್ದಲ್ಲ. 21 ವರ್ಷಗಳ ಕಾಲ ರಾಜ್ಯದ ಸಿಎಂ ಆಗಿದ್ದ ನಿತೀಶ್ ಕುಮಾರ್ ಅವರು ಹಠಾತ್ ಬೆಳವಣಿಗೆಯಲ್ಲಿ ದೆಹಲಿಗೆ "ಶಿಫ್ಟ್" ಆಗಿದ್ದರಿಂದ ಬಿಜೆಪಿಯ ಸಾಮ್ರಾಟ್ ಚೌಧುರಿ ಅವರು ಏಪ್ರಿಲ್ ತಿಂಗಳಲ್ಲಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಉಪಚುನಾವಣೆಯುದ್ದಕ್ಕೂ ಪ್ರಶಾಂತ್ ಕಿಶೋರ್ ಇದು ತಮ್ಮ ಮತ್ತು ಸಾಮ್ರಾಟ್ ಚೌಧರಿ ನಡುವಿನ ನೇರ ಯುದ್ಧ ಎಂದೇ ರೂಪಿಸಲು ಯತ್ನಿಸಿದ್ದರು.
ಸಾಮ್ರಾಟ್ ಚೌಧುರಿ ವಿರುದ್ಧದ ಭ್ರಷ್ಟಾಚಾರ, ಅಪರಾಧ ಪ್ರಕರಣಗಳು ಮತ್ತು ಶಿಕ್ಷಣ ಅರ್ಹತೆ ಗಳನ್ನೇ ಅವರು ಟಾರ್ಗೆಟ್ ಮಾಡಿದರು. ಬಾಂಕಿಪುರ ಗೆದ್ದ ಬಳಿಕ, "ದಯವಿಟ್ಟು ಬಿಹಾರದ ಮುಖ್ಯಮಂತ್ರಿಯಾಗಿ ಒಳ್ಳೆಯ ವ್ಯಕ್ತಿಯನ್ನು ನೇಮಿಸಿ ಎಂಬ ಸ್ಪಷ್ಟ ಸಂದೇಶ ಬಿಜೆಪಿ ನಾಯಕತ್ವಕ್ಕೆ ರವಾನೆಯಾಗಿದೆ" ಎಂದು ಬಿಜೆಪಿ ನಾಯಕತ್ವವನ್ನು ಚುಚ್ಚಿದ್ದಾರೆ ಪಿಕೆ. ಒಬಿಸಿ ಕುಶ್ವಾಹ ಸಮುದಾಯದ ಮತ್ತೊಬ್ಬರನ್ನೇ ಬೇಕಿದ್ದರೆ ಆಯ್ಕೆ ಮಾಡಲಿ. ಅದು ಅವರಿಗೆ ಬಿಟ್ಟದ್ದು. ಆದರೆ ಆಯ್ಕೆಯಾದವರು ಆ ಸಮುದಾಯದ ಸಮರ್ಥ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿರಬೇಕು ಎಂದಿದ್ದಾರೆ. ಅಂದರೆ, ಮುಂದಿನ ದಿನಗಳಲ್ಲಿ ಸಿಎಂ ಸಾಮ್ರಾಟ್ ಚೌಧುರಿಯವರನ್ನು ಸುಮ್ಮನೆ ಬಿಡಲಾರೆ ಎಂಬ ಸಂದೇಶ ನೀಡಿದ್ದಾರೆ.
ಬಾಂಕಿಪುರ ಉಪ ಚುನಾವಣೆ ಫಲಿತಾಂಶ ಬಿಜೆಪಿ ಬಗ್ಗೆ ಮೇಲ್ಜಾತಿಗಳಲ್ಲಿನ ಅಸಮಾಧಾನವನ್ನೂ ಬಹಿರಂಗಪಡಿಸಿದೆ. ಬಿಹಾರದ ಭೂಮಿಹಾರ್, ರಜಪೂತ, ಬ್ರಾಹ್ಮಣ, ಕಾಯಸ್ಥ ಸಮುದಾಯಗಳ ನ್ನೊಳಗೊಂಡ ಮೇಲ್ಜಾತಿಗಳು ಕಳೆದ ಅನೇಕ ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ 2 ವಿಚಾರಗಳು ಈ ಸಮುದಾಯಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ. ಮೊದಲನೆಯದಾಗಿ, ಕುಶ್ವಾಹ (ಒಬಿಸಿ) ಸಮುದಾಯದ ಸಾಮ್ರಾಟ್ ಚೌಧುರಿ ಯವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ತೀರ್ಮಾನ. ಮೂರು ದಶಕಗಳಿಂದ ಪ್ರಬಲವಾಗಿ ಪಕ್ಷವನ್ನು ಬೆಂಬಲಿಸಿದರೂ ಅನ್ಯ ಪಕ್ಷದಿಂದ ಬಂದ ಸಾಮ್ರಾಟ್ ಚೌಧುರಿಗೆ ಉನ್ನತ ಸ್ಥಾನ ಕೊಟ್ಟದ್ದು ಈ ಮತಬ್ಯಾಂಕ್‌ನ್ನು ಮೊದಲ ದಿನದಿಂದಲೇ ವಿಚಲಿತಗೊಳಿಸಿತ್ತು. ಅದೇ ರೀತಿ, ಕೆಲ ತಿಂಗಳುಗಳ ಹಿಂದೆ ಬಿಹಾರದ ಸಾಮಾನ್ಯ ವರ್ಗದ ಯುವಕರು ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಜಾರಿಗೆ ತಂದಿದ್ದ "ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ ನಿಯಮಗಳು-2026" ನಿಯಮಗಳ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧವೇ ಬೀದಿಗಿಳಿದಿದ್ದರು.
ಎಸ್‌ಸ್ಸಿ/ಎಸ್ಟಿ, ಒಬಿಸಿ ಸಮುದಾಯಗಳನ್ನು ಓಲೈಸಲು ಸಾಮಾನ್ಯ ವರ್ಗದವರನ್ನು ಬಲಿಕೊಡುವ ತೀರ್ಮಾನವಿದು ಎಂದು ಕೆಂಡಕಾರಿದ್ದರು. ತಮ್ಮನ್ನು ಬೆಂಬಲಿಸುವ ಮತವರ್ಗ ಬೀದಿಗಿಳಿದಾಗಲೂ ಅವರನ್ನು ಸಮಾಧಾನ ಮಾಡಲು ಬಿಜೆಪಿ ನಾಯಕರು ಮುಂದಾಗಿರಲಿಲ್ಲ. ಈ ನಿಯಮಕ್ಕೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದರೂ, ಬಿಹಾರದಲ್ಲಿ ಇದು ಆಕ್ರೋಶದ ಕಿಚ್ಚನ್ನು ಕಡಿಮೆ ಮಾಡಲಿಲ್ಲ. ಬಾಂಕಿಪುರದಲ್ಲಿ ಸುಮಾರು 3.7 ಲಕ್ಷ ಮತದಾರರಿದ್ದು, ಅವರಲ್ಲಿ 1.6 ಲಕ್ಷ ಮೇಲ್ಜಾತಿ ಮತದಾರರಿದ್ದಾರೆ. ಅವರಲ್ಲಿ ಬಹುಮಂದಿ ಯುವಕರಿಗೆ ಈಗ ಪ್ರಶಾಂತ್ ಕಿಶೋರ್ "ಭರವಸೆಯ ಬೆಳ್ಳಿಕಿರಣ"ವಾಗಿ ಕಾಣುತ್ತಿದ್ದಾರೆ.
ನಗರವಾಸಿಗಳಿರುವ ಬಾಂಕಿಪುರದಲ್ಲಿ ಹಲವಾರು ಕಾಲೇಜುಗಳು, ಕೋಚಿಂಗ್ ಸೆಂಟರ್‌ಗಳಿವೆ. ಶಿಕ್ಷಿತ ಸಮುದಾಯ ಹೆಚ್ಚಿರುವ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಶೈಕ್ಷಣಿಕ ಅರ್ಹತೆ, ಸಾಮರ್ಥ್ಯ ಹಾಗೂ ರಾಜಕೀಯ ಚಾಣಾಕ್ಷತನದ ಮುಂದೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಎಂದು ಗುರುತಿಸಿ ಕೊಂಡ ನೀರಜ್ ಕುಮಾರ್ ಸಿನ್ಹಾ ಮತದಾರರನ್ನು ಆಕರ್ಷಿಸಲಿಲ್ಲ. ಪ್ರಚಾರ ಕಣದಲ್ಲಿದ್ದ ಬಿಜೆಪಿಯ 27 ಶಾಸಕರು, 17 ಸಂಸದರು, ಕೇಂದ್ರ ಸಚಿವರು, ಭೋಜ್‌ಪುರಿ ಫಿಲ್ಮ್ ಸ್ಟಾರ್‌ಗಳಿಗೂ ಪ್ರಶಾಂತ್ ಕಿಶೋರ್ ವರ್ಚಸ್ಸನ್ನು ತಗ್ಗಿಸಲಾಗಲಿಲ್ಲ.
ಅಚ್ಚರಿ ಎಂದರೆ, ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಮತದಾರರು ಪ್ರಶಾಂತ್ ಕಿಶೋರ್‌ರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದರು! ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜನ ಸುರಾಜ್ ಪರ ರಣನೀತಿಕಾರನಾಗಿ ಕಾರ್ಯನಿರ್ವಹಿಸಿದ್ದ ಕನ್ನಡಿಗ, ಶಿವಮೊಗ್ಗ ಮೂಲದ ಶರತ್ ಕುಮಾರ್ ದೇವ್ ಅವರೂ ಉಪ ಚುನಾವಣೆ ಸಂದರ್ಭ 20 ದಿನಗಳ ಬಾಂಕಿಪುರದಲ್ಲಿ ಪ್ರಶಾಂತ್ ಕಿಶೋರ್ ಜತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
2026 ವಿಧಾನಸಭೆ ಚುನಾವಣೆಯಲ್ಲಿ ಬಾಂಕಿಪುರದಲ್ಲಿ 41% ಮತದಾನವಾಗಿದ್ದರೆ, ಹಾಲಿ ಉಪ ಚುನಾವಣೆಯಲ್ಲಿ 34% ಮತದಾನ ನಡೆದಿದೆ. 2025ರಲ್ಲಿ ನಿತಿನ್ ನಬಿನ್ 98229 ಮತಗಳನ್ನು ಗಳಿಸಿ, ಆರ್‌ಜೆಡಿಯ ರೇಖಾ ಕುಮಾರಿ ಗುಪ್ತಾ (46363) ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಿದ್ದರು. ಜನ ಸುರಾಜ್‌ನ ವಂದನಾ ಕುಮಾರಿಗೆ ಸಿಕ್ಕಿದ್ದು ಕೇವಲ 7717 ಮತಗಳು ಮಾತ್ರ. ಆದರೆ, ಈ ಬಾರಿ ಜನ ಸುರಾಜ್ ಪರ ಮತ 7717ರಿಂದ 46151ಕ್ಕೇರಿತು. ಆರ್‌ಜೆಡಿಯ ರೇಖಾ ಕುಮಾರಿ ಮೂರನೇ ಸ್ಥಾನಿಯಾಗಿ ಕೇವಲ 14273 ಮತಗಳನ್ನಷ್ಟೇ ಪಡೆದುಕೊಂಡರು. ಬಿಜೆಪಿಯ ನೀರಜ್ ಕುಮಾರ್‌ಗೆ ಬಂದಿದ್ದು 44827 ಮತಗಳು. ಅಂದರೆ, ಆರ್‌ಜೆಡಿಯ ಬಹುಪಾಲು ವೋಟುಗಳು ಈ ಬಾರಿ ಪ್ರಶಾಂತ್ ಕಿಶೋರ್‌ಗೆ ಬಿದ್ದಿವೆ. ಚುನಾವಣೆ ಪ್ರಚಾರ ನಡೆಯುತ್ತಿದ್ದ ಸಂದರ್ಭದ ಬಹುಪಾಲು ದಿನಗಳನ್ನು ವಿದೇಶದಲ್ಲಿ ಕಳೆದಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, 2-3 ದಿನಗಳ ಕಾಲ ಮಾತ್ರ ರೇಖಾ ಕುಮಾರಿ ಪರ ಪ್ರಚಾರ ಮಾಡಿದ್ದರು.
ಬಹುಶಃ ಈ ಉಪ ಚುನಾವಣೆ ಗೆದ್ದು ಆಗುವುದೇನಿದೆ ಎಂದು ತೇಜಸ್ವಿ ಯಾದವ್‌ಗೆ ಅನಿಸಿರ ಬಹುದು. ಆದರೆ, ಬಿಹಾರ ರಾಜಕೀಯದಲ್ಲಿ ಭವಿಷ್ಯ ನೋಡುತ್ತಿರುವ ಪಿಕೆ, ಗಂಭೀರ ಹೋರಾಟ ನಡೆಸಿದ್ದಲ್ಲದೆ, "ಜಯಂಟ್ ಕಿಲ್ಲರ್" ಆಗಿ ಹೊರಹೊಮ್ಮಿದರು. 2025ರ "ಶೂನ್ಯ ಸಂಪಾದನೆ" ಪ್ರಶಾಂತ್ ಕಿಶೋರ್‌ರನ್ನು ವಿಚಲಿತಗೊಳಿಸಿರಲಿಲ್ಲ ಎನ್ನುವುದಕ್ಕೆ ಅವರ ಬಾಂಕಿಪುರ ಹೋರಾಟವೇ ಸಾಕ್ಷಿ.
2025ರ ವಿಧಾನಸಭಾ ಚುನಾವಣೆ ಪ್ರವಾಸದ ವೇಳೆ ಹತ್ತಾರು ಯುವಕರಲ್ಲಿ ಪ್ರಶಾಂತ್ ಕಿಶೋರ್ ಕುರಿತಾಗಿ ನಾನು ಮಾತನಾಡಿದ್ದೆ. ಯಾರೊಬ್ಬರೂ "ಪಿಕೆ ಅಸಮರ್ಥ ವ್ಯಕ್ತಿ" ಎಂದು ಹೇಳಿರಲಿಲ್ಲ. ಜನಮನ ಗೆಲ್ಲುವಂತೆ ಹೋರಾಟ ಮಾಡಿದರೆ 5 ವರ್ಷಗಳ ನಂತರ ಅವರು ಅಧಿಕಾರಕ್ಕೆ ಬರಬಲ್ಲರು ಮತ್ತು ಈ ಅವಧಿಯನ್ನು ಅವರು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದರು. ಬಿಹಾರದ ಮಂದಿ ರಾಜಕೀಯ ಸದಾ ಜಾಗೃತರು ಮತ್ತು ಬೀದಿಯಲ್ಲಿ ಕಸ ಗುಡಿಸುವ ವ್ಯಕ್ತಿಯೂ ಸ್ಥಳೀಯ-ರಾಷ್ಟ್ರ ರಾಜಕಾರಣದ ಬಗ್ಗೆ ಅರಳುಹುರಿದಂತೆ ಮಾತನಾಡಬಲ್ಲ. ಪಿಕೆಯವರ ಜನ ಸುರಾಜ್ ಆಯ್ಕೆ ವಿಷಯದಲ್ಲೂ ಬಿಹಾರ ಮತದಾರರದ್ದು ಲೆಕ್ಕಾಚಾರದ ನಡೆಯಾಗಿತ್ತು. ಬಹುಶಃ ಅದೇ ಕಾರಣಕ್ಕೆ ಜನ ಸುರಾಜ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಸೀಟನ್ನು ಗೆಲ್ಲಲ್ಲಿಲ್ಲ. ಆದರೆ, ಬಾಂಕಿಪುರ ಗೆಲುವಿನ ಮೂಲಕ ಪ್ರಶಾಂತ್ ಕಿಶೋರ್ ಬಿಹಾರ ರಾಜಕಾರಣದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದ್ದಾರೆ.
ಹಾಗಾದರೆ, ಬಾಂಕಿಪುರ ಸೋಲನ್ನು ಬಿಜೆಪಿ ಎಚ್ಚರಿಕೆಯ ಗಂಟೆಯನ್ನಾಗಿ ಪರಿಗಣಿಸಿ, ತನ್ನ ರಣನೀತಿಗಳನ್ನು ಬದಲಿಸುವುದೇ ಅಥವಾ ಬಾಂಕಿಪುರ ಫಲಿತಾಂಶ ದೇಶದ ಇತರೆಡೆಯೂ ಪ್ರತಿಫಲಿಸುವುದೇ? ಕಾಲವೇ ಉತ್ತರಿಸಲಿದೆ.