ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs PAK: ಇಶಾನ್‌ ಕಿಶನ್‌ ಅಬ್ಬರ, ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತಕ್ಕೆ ಸೂಪರ್‌-8 ಟಿಕೆಟ್‌!

IND vs PAK Match Highlights: ಇಶಾನ್‌ ಕಿಶನ್‌ ಸ್ಪೋಟಕ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಸೂಪರ್‌-8ಕ್ಕೆ ಪ್ರವೇಶ ಮಾಡಿತು.

T20 World Cup: ಪಾಕ್‌ ವಿರುದ್ಧ ಗೆದ್ದು ಸೂಪರ್‌-8ಕ್ಕೆ ಪ್ರವೇಶಿಸಿದ ಭಾರತ!

ಪಾಕಿಸ್ತಾನ ವಿರುದ್ಧ ಗೆದ್ದು ಸೂಪರ್‌-8ಕ್ಕೆ ಪ್ರವೇಶಿಸಿದ ಭಾರತ. -

Profile
Ramesh Kote Feb 15, 2026 10:21 PM

ಕೊಲಂಬೊ: ಇಶಾನ್‌ ಕಿಶನ್‌ (Ishan Kishan) ಸ್ಪೋಟಕ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ (IND vs PAK) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಇದರ ಫಲವಾಗಿ ಚುಟುಕು ವಿಶ್ವಕಪ್‌ ಟೂರ್ನಿಯ ಸೂಪರ್‌-8ಕ್ಕೆ ಅಧಿಕೃತವಾಗಿ ಅರ್ಹತೆ ಪಡೆಯಿತು. ಇನ್ನು ಬ್ಯಾಟಿಂಗ್‌ ವೈಫಲ್ಯದಿಂದ ಹೀನಾಯ ಸೋಲು ಅನುಭವಿಸಿದ ಪಾಕಿಸ್ತಾನ ತಂಡ, ಸೂಪರ್‌-8ಕ್ಕೆ ಅರ್ಹತೆ ಪಡೆಯಲು ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಭಾನುವಾರ ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 176 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ, ಸ್ಕೋರ್‌ ಬೋರ್ಡ್‌ ಒತ್ತಡಕ್ಕೆ ಒಳಗಾಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಪಾಕ್‌ ಪರ ಉಸ್ಮಾನ್‌ ಖಾನ್‌ 34 ಎಸೆತಗಳಲ್ಲಿ 44 ರನ್‌ ಗಳಿಸಿ, ಭಾರತದ ಬೌಲರ್‌ಗಳಿಗೆ ಸ್ವಲ್ಪ ಪ್ರತಿರೋಧ ತೋರಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಅಂತಿಮವಾಗಿ ಪಾಕಿಸ್ತಾನ ತಂಡ 18 ಓವರ್‌ಗಳಿಗೆ 114 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.

IND vs PAK: ಪಾಕಿಸ್ತಾನ ನಾಯಕ ಸಲ್ಮಾನ್‌ ಆಘಾಗೆ ಹ್ಯಾಂಡ್‌ಶೇಕ್‌ ಮಾಡದ ಸೂರ್ಯಕುಮಾರ್‌ ಯಾದವ್‌!

ಪಾಕಿಸ್ತಾನಕ್ಕೆ ಆರಂಭಿಕ ಓವರ್‌ನಲ್ಲಿ ಇನ್‌ಫಾರ್ಮ್‌ ಬ್ಯಾಟರ್‌ ಸಹಿಬ್ದಾಝಾ ಫರ್ಹಾನ್‌ ಅವರನ್ನು ಹಾರ್ದಿಕ್‌ ಪಾಂಡ್ಯ ಔಟ್‌ ಮಾಡಿದ್ದರು. ನಂತರ ಎರಡನೇ ಓವರ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ, ಸೈಯಮ್‌ ಆಯುಬ್‌ ಮತ್ತು ನಾಯಕ ಸಲ್ಮಾನ್‌ ಅಲಿ ಆಘಾ ಅವರನ್ನು ಔಟ್‌ ಮಾಡಿದರು. ಐದನೇ ಓವರ್‌ನಲ್ಲಿ ಬಾಬರ್‌ ಆಝಮ್‌ ಅವರನ್ನು ಅಕ್ಷರ್‌ ಪಟೇಲ್‌ ಪೆವಿಲಿಯನ್‌ಗೆ ಕಳುಹಿಸಿದರು. ಭಾರತದ ಬೌಲರ್‌ಗಳನ್ನು ಎದುರಿಸುವಲ್ಲಿ ಪಾಕ್‌ ಬ್ಯಾಟರ್‌ಗಳು ಸಂಪೂರ್ಣವಾಗಿ ನೆಲಕಚ್ಚಿದರೆ, ಉಸ್ಮಾನ್‌ ಖಾನ್‌ 44 ರನ್‌ ಗಳಿಸಿ ಸ್ವಲ್ಪ ಪ್ರತಿರೋಧ ತೋರಿದರು. ಕೊನೆಯಲ್ಲಿ ಶಾಹೀನ್‌ ಶಾ ಅಫ್ರಿದಿ ಅಜೇಯ 23 ರನ್‌ ಗಳಿಸಿದರು. ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ 20ರ ಗಡಿ ದಾಟಲಿಲ್ಲ.



ಭಾರತದ ಪರ ಜಸ್‌ಪ್ರೀತ್‌ ಬುಮ್ರಾ, ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ ಮತ್ತು ಹಾರ್ದಿಕ್‌ ಪಾಂಡ್ಯ ತಲಾ ಎರಡೆರಡು ವಿಕೆಟ್‌ ಕಿತ್ತರು. ಕುಲ್ದೀಪ್‌ ಯಾದವ್‌ ಮತ್ತು ತಿಲಕ್‌ ವರ್ಮಾ ಕೂಡ ತಲಾ ಒಂದೊಂದು ವಿಕೆಟ್‌ ಪಡೆದರು.

175 ರನ್‌ ಕಲೆ ಹಾಕಿದ ಭಾರತ ತಂಡ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಇಶಾನ್‌ ಕಿಶನ್‌ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಾಕಿಸ್ತಾನಕ್ಕೆ 176 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಇಶಾನ್‌ ಕಿಶನ್‌ 40 ಎಸೆತಗಳಲ್ಲಿ 77 ರನ್‌ಗಳನ್ನು ಕಲೆ ಹಾಕಿ, ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

IND vs PAK: ಸ್ಪೋಟಕ ಅರ್ಧಶತಕ ಸಿಡಿಸಿ ಯುವರಾಜ್‌ ಸಿಂಗ್‌ ದಾಖಲೆ ಮುರಿದ ಇಶಾನ್‌ ಕಿಶನ್!

ಇಶಾನ್‌ -ತಿಲಕ್‌ ಜುಗಲ್‌ಬಂದಿ

ಸಂಜು ಸ್ಯಾಮ್ಸನ್‌ ಬದಲು ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಆಡಿದ 4 ಎಸೆತಗಳಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಭಾರತ ತಂಡ ಒಂದು ರನ್‌ಗೆ ಒಂದು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಮೊದಲನೇ ಓವರ್‌ನಲ್ಲಿ ಭಾರತ ಹಿನ್ನಡೆ ಅನುಭವಿಸಿದರೂ ಭಾರತ ತಂಡ ಎರಡನೇ ಓವರ್‌ನಲ್ಲಿ ಇಶಾನ್‌ ಕಿಶನ್‌ ಸ್ಪೋಟಕ ಬ್ಯಾಟಿಂಗ್‌ ಮೂಲಕ ಕಮ್‌ಬ್ಯಾಕ್‌ ಮಾಡಿತು. ಎರಡನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಹಾಗೂ ತಿಲಕ್‌ ವರ್ಮಾ 87 ರನ್‌ಗಳನ್ನು ಕಲೆ ಹಾಕಿದರು. ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿದರು.



ಇಶಾನ್‌ ಕಿಶನ್‌ ಸ್ಪೋಟಕ ಅರ್ಧಶತಕ

ಮೊದಲನೇ ವಿಕೆಟ್‌ ಬೇಗ ಕಳೆದುಕೊಂಡರೂ ಇಶಾನ್‌ ಕಿಶನ್‌ ಮಾತ್ರ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಅವರು ಆರಂಭದಿಂದಲೂ ಸ್ಪೋಟಕ ಬ್ಯಾಟ್‌ ಮಾಡಿದರು. ಅವರು ಆಡಿದ 27 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದರು ಹಾಗೂ ಅಂತಿಮವಾಗಿ 40 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 77 ರನ್‌ ಗಳಿಸಿ ಭಾರತ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟು ಸೈಯಮ್‌ ಆಯುಬ್‌ಗೆ ವಿಕೆಟ್‌ ಒಪ್ಪಿಸಿದರು.

IND vs PAK: 18 ಓವರ್‌ ಬೌಲ್‌ ಮಾಡಿದ ಸ್ಪಿನ್ನರ್ಸ್‌, ಅಪರೂಪದ ದಾಖಲೆ ಬರೆದ ಪಾಕಿಸ್ತಾನ!

ಇಶಾನ್‌ ಬೆನ್ನಲ್ಲೆ ತಿಲಕ್‌ ವರ್ಮಾ 24 ಎಸೆತಗಳಲ್ಲಿ 25 ರನ್‌ಗಳಿಸಿ ಔಟ್‌ ಆದರು. ಹಾರ್ದಿಕ್‌ ಪಾಂಡ್ಯ ಆಡಿದ ಮೊದಲನೇ ಎಸೆತದಲ್ಲಿ ಔಟ್‌ ಆದರು. ಸೈಯಮ್‌ ಆಯುಬ್‌ 15ನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ತಿಲಕ್‌ ಮತ್ತು ಹಾರ್ದಿಕ್‌ ವಿಕೆಟ್‌ ಕಿತ್ತು. ಆದರೆ, ನಾಯಕ ಸೂರ್ಯಕುಮಾರ್‌ ಜವಾಬ್ದಾರಿಯುತವಾಗಿ ಆಡಿ 29 ಎಸೆತಗಳಲ್ಲಿ 32 ರನ್‌ ಗಳಿಸಿದರು ಹಾಗೂ ಶಿವಂ ದುಬೆ 17 ಎಸೆತಗಳಲ್ಲಿ 27 ರನ್‌ ಸಿಡಿಸಿ ಔಟ್‌ ಆದರು. ರಿಂಕು ಸಿಂಗ್‌ 4 ಎಸೆತಗಳಲ್ಲಿ 11 ರನ್‌ ಗಳಿಸಿದರು.

ಪಾಕಿಸ್ತಾನ ಪರ ಸೈಯಮ್‌ ಆಯುಬ್‌ ನಾಲ್ಕು ಓವರ್‌ಗಳಿಗೆ 25 ರನ್‌ ನೀಡಿ 3 ವಿಕೆಟ್‌ ಕಿತ್ತು ಯಶಸ್ವಿ ಬೌಲರ್‌ ಎನಿಸಿಕೊಂಡರು. ಉಸ್ಮಾನ್‌ ತಾರಿಖ್‌ 4 ಓವರ್‌ಗೆ 24 ರನ್‌ ನೀಡಿ ಒಂದು ವಿಕೆಟ್‌ ಪಡೆದರು.