ಒಂದೊಳ್ಳೆ ಮಾತು
ಕನಕಪುರ ನಗರವನ್ನು ಆಳುತ್ತಿದ್ದ ಯಶೋಧರನೆಂಬ ರಾಜನು ನೀತಿವಂತನೂ, ಧರ್ಮಿಷ್ಠನೂ ಆಗಿದ್ದನು. ಅದೇ ನಗರದ ಧನಿಕ ವ್ಯಾಪಾರಿಯೊಬ್ಬನಿಗೆ ಉನ್ಮಾದಿನಿ ಎಂಬ ಮಗಳಿದ್ದಳು. ಆಕೆಯ ಸೌಂದರ್ಯ ಎಷ್ಟೊಂದು ಕಣ್ಣು ಕೋರೈಸುವಂತಿತ್ತೆಂದರೆ, ಆಕೆಯನ್ನು ನೋಡಿದ ಪುರುಷರು ತಮ್ಮ ಪ್ರಜ್ಞೆಯನ್ನೇ ಕಳೆದುಕೊಂಡು ಉನ್ಮತ್ತರಾಗುತ್ತಿದ್ದರು; ಆ ಕಾರಣ ದಿಂದಲೇ ಆಕೆಗೆ ‘ಉನ್ಮಾದಿನಿ’ ಎಂಬ ಹೆಸರು ಬಂದಿತ್ತು.
ಮಗಳ ಅದ್ಭುತ ಲಾವಣ್ಯವನ್ನು ಕಂಡು ತಂದೆಯು, ಈಕೆ ಸಾಮಾನ್ಯನಿಗೆ ಸಲ್ಲಬೇಕಾದವಳಲ್ಲ, ರಾಜನ ಅಂತಃಪುರಕ್ಕೇ ಯೋಗ್ಯಳು ಎಂದು ಭಾವಿಸಿ, ಆಕೆಯನ್ನು ವಿವಾಹವಾಗುವಂತೆ ರಾಜನಿಗೆ ಸಂದೇಶ ಕಳುಹಿಸಿದನು. ರಾಜನು ಕನ್ಯೆಯ ಲಕ್ಷಣಗಳನ್ನು ಪರೀಕ್ಷಿಸಲು ತನ್ನ ಆಸ್ಥಾನದ ಪುರೋಹಿತರನ್ನು ಕಳುಹಿಸಿದನು. ಆದರೆ ಉನ್ಮಾದಿನಿಯ ನಿರುಪಮ ರೂಪವನ್ನು ಕಂಡ ಕ್ಷಣವೇ ಪುರೋಹಿತರು ಬೆರಗಾಗಿ ಹೋದರು. ಈಕೆಯ ರೂಪ ರಾಜನ ಕಣ್ಣಿಗೆ ಬಿದ್ದರೆ, ರಾಜನು ಆಕೆಯ ಮೋಹಪಾಶದಲ್ಲಿ ಮುಳುಗಿ ಇಡೀ ರಾಜ್ಯಭಾರವನ್ನೇ ಮರೆತು ಬಿಡುತ್ತಾನೆ; ದೇಶವೇ ನಾಶವಾಗುತ್ತದೆ ಎಂದು ತಮ್ಮ ಆತಂಕಗೊಂಡರು.
ಅರಮನೆಗೆ ಮರಳಿದ ಪುರೋಹಿತರು ರಾಜನಿಗೆ, ಮಹಾರಾಜರೇ, ಆ ಕನ್ಯೆಯಲ್ಲಿ ಅಶುಭ ಲಕ್ಷಣಗಳಿವೆ, ಆಕೆಯನ್ನು ಮದುವೆಯಾದರೆ ರಾಜ್ಯಕ್ಕೆ ಕೇಡು ಎಂದು ಸುಳ್ಳು ಹೇಳಿದರು. ರಾಜನು ಅವರ ಮಾತನ್ನು ನಂಬಿ ಆಕೆಯನ್ನು ತಿರಸ್ಕರಿಸಿದನು. ನಂತರ ಆಕೆಯ ತಂದೆಯು ಉನ್ಮಾದಿನಿ ಯನ್ನು ರಾಜನ ಸೇನಾಪತಿಗೆ ಕೊಟ್ಟು ವಿವಾಹ ಮಾಡಿದನು.
ಇದನ್ನೂ ಓದಿ; Roopa Gururaj Column: ವಿಕ್ರಮ ಬೇತಾಳ 15: ರಾಜ ಜೀಮೂತವಾಹನ ಮತ್ತು ಶಂಖಚೂಡನ ತ್ಯಾಗ
ಒಮ್ಮೆ ನಗರದ ವಸಂತೋತ್ಸವದ ಮೆರವಣಿಗೆಯಲ್ಲಿ ರಾಜನು ಆನೆಯ ಮೇಲೆ ಸಾಗುತ್ತಿದ್ದಾಗ, ಉಪ್ಪರಿಗೆಯ ಮೇಲೆ ನಿಂತಿದ್ದ ಉನ್ಮಾದಿನಿಯು ರಾಜನ ಕಣ್ಣಿಗೆ ಬಿದ್ದಳು. ತನ್ನನ್ನು ತಿರಸ್ಕರಿಸಿದ ರಾಜನಿಗೆ ತನ್ನ ಅಸಲಿ ಸೌಂದರ್ಯವನ್ನು ತೋರಿಸಬೇಕೆಂಬ ಹಠದಿಂದ ಆಕೆ ರಾಜನತ್ತ ತೀಕ್ಷ್ಣವಾಗಿ ದೃಷ್ಟಿ ಬೀರಿದಳು. ಆಕೆಯ ಅಪೂರ್ವ ಸೌಂದರ್ಯವನ್ನು ಕಂಡ ಕ್ಷಣವೇ ರಾಜನ ಎದೆ ಝಂದಿತು; ಆಕೆಯ ಮೋಹಕ್ಕೆ ಸಿಲುಕಿ ರಾಜನು ಪ್ರಜ್ಞೆ ತಪ್ಪಿ ಬಿದ್ದನು.
ಅರಮನೆಗೆ ಬಂದ ಮೇಲೆ ಪುರೋಹಿತರು ಆಡಿದ್ದ ಸುಳ್ಳು ಬಯಲಾಯಿತು. ಆದರೆ, ಆಗಲೇ ಆಕೆ ಸೇನಾ ಪತಿಯ ಪತ್ನಿಯಾಗಿದ್ದಳು. ರಾಜನ ವಿರಹಾವಸ್ಥೆ ಮತ್ತು ನರಳಾಟವನ್ನು ಕಂಡ ಸೇನಾಪತಿಯು ಧಾವಿಸಿ ಬಂದು, ಪ್ರಭು, ನಿಮ್ಮ ಪ್ರಾಣ ಉಳಿಯುವುದಾದರೆ ನನ್ನ ಪತ್ನಿಯನ್ನು ಸಂತೋಷದಿಂದ ನಿಮಗೆ ಅರ್ಪಿಸುತ್ತೇನೆ; ಆಕೆಯನ್ನು ಸ್ವೀಕರಿಸಿ ಎಂದು ಕೈಮುಗಿದು ಬೇಡಿದನು.
ರಾಜನಿಗೆ ಆಕೆಯನ್ನು ಪಡೆಯಲು ರಾಜಾಧಿಕಾರವೂ ಇತ್ತು, ಸೇನಾಪತಿಯ ಸ್ವಯಂ ಒಪ್ಪಿಗೆಯೂ ಇತ್ತು. ಆದರೆ ರಾಜ ಯಶೋಧ ರನು ದೃಢವಾಗಿ ನಿರಾಕರಿಸಿದನು. ಸೇನಾಪತಿ, ನೀನು ನನ್ನ ನಿಷ್ಠಾವಂತ ಸೇವಕ. ಪ್ರಜೆಗಳ ಧರ್ಮ ವನ್ನು ರಕ್ಷಿಸಬೇಕಾದ ರಾಜನೇ ಪರಸ್ತ್ರೀಯನ್ನು ಕಾಮಿಸಿದರೆ, ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ? ಪ್ರಾಣ ಹೋದರೂ ಸರಿಯೇ, ನನ್ನ ಸ್ವಾರ್ಥಕ್ಕಾಗಿ ನಾನು ರಾಜಧರ್ಮವನ್ನು ಬಿಡಲಾರೆ ಎಂದು ಆಕೆಯನ್ನು ನಿರಾಕರಿಸಿ, ಆ ವಿರಹದ ತಾಪದ ಪ್ರಾಣತ್ಯಾಗ ಮಾಡಿದನು! ರಾಜನ ಈ ಪರಮೋಚ್ಛ ಧರ್ಮನಿಷ್ಠೆಯನ್ನು ಕಂಡ ಸೇನಾಪತಿಯೂ ಆತನ ಚಿತೆಗೇ ಹಾರಿ ಪ್ರಾಣಬಿಟ್ಟನು.
ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಕಠಿಣ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಈ ಇಬ್ಬರಲ್ಲಿ ಯಾರು ಹೆಚ್ಚು ಉದಾತ್ತರು? ಹೆಂಡತಿಯನ್ನು ಬಿಟ್ಟುಕೊಡಲು ಬಂದ ಸೇನಾ ಪತಿಯೋ ಅಥವಾ ಆಸೆಯನ್ನು ನಿಯಂತ್ರಿಸಿ ಪ್ರಾಣಬಿಟ್ಟ ರಾಜನೋ? ವಿಕ್ರಮಾದಿತ್ಯನು ಆಳವಾದ ವಿವೇಕದಿಂದ ಉತ್ತರಿಸುತ್ತಾನೆ: ರಾಜ ಯಶೋಧರನ ಉದಾತ್ತತೆಯೇ ಎಲ್ಲಕ್ಕಿಂತ ಶ್ರೇಷ್ಠವಾದುದು!
ಸೇನಾಪತಿಯು ಸೇವಕಧರ್ಮ ಮತ್ತು ರಾಜನ ಮೇಲಿನ ಕೃತಜ್ಞತೆಗೆ ಕಟ್ಟುಬಿದ್ದು ತ್ಯಾಗಕ್ಕೆ ಮುಂದಾದನು. ಆದರೆ ರಾಜನಿಗೆ ಸರ್ವಾಧಿಕಾರ ವಿತ್ತು; ಯಾರೂ ಆತನನ್ನು ಪ್ರಶ್ನಿಸುವವರಿರಲಿಲ್ಲ. ಎದುರಿಗೇ ಸಿಕ್ಕ ಭೋಗದ ಅಮೃತವನ್ನು, ಕೇವಲ ನೈತಿಕತೆ ಮತ್ತು ‘ಪರಸ್ತ್ರೀ ಧರ್ಮ’ದ ಪಾವಿತ್ರ್ಯ ಕ್ಕಾಗಿ ತಿರಸ್ಕರಿಸಿ, ಪ್ರಾಣವನ್ನೇ ಕೊಟ್ಟ ರಾಜನ ಆತ್ಮಸಂಯಮಕ್ಕೆ ಜಗತ್ತಿನಲ್ಲಿ ಸಾಟಿಯಿಲ್ಲ.
ಅಧಿಕಾರ, ಸಂಪತ್ತು ಅಥವಾ ಬಲವಿದ್ದಾಗ ನಿಯಮಗಳನ್ನು ಮೀರಿ ಇಷ್ಟಬಂದಂತೆ ಬದುಕುವುದು ಸುಲಭ. ಆದರೆ ಯಾರೂ ತಡೆಯಲಾರ ದಂತಹ ಪರಮ ಸ್ವಾತಂತ್ರ್ಯವಿದ್ದಾಗಲೂ, ನಮಗೆ ನಾವೇ ಹಾಕಿಕೊಳ್ಳುವ ನೈತಿಕತೆಯ ಬೇಲಿ ನಿಜ ವಾದ ಯೋಗ್ಯತೆ. ಕಣ್ಣಿಗೆ ಕಾಣುವ ಆಕರ್ಷಣೆಗಳು ಮತ್ತು ಕ್ಷಣಿಕ ಸುಖಗಳು ಬದುಕಿನ ಶಾಶ್ವತ ಮೌಲ್ಯಗಳಿಗಿಂತ ದೊಡ್ಡದಲ್ಲ. ಪ್ರಾಣಕ್ಕಿಂತ ಹೆಚ್ಚಾಗಿ ಧರ್ಮ ಮತ್ತು ಚಾರಿತ್ರ್ಯವನ್ನು ಕಾಪಾಡಿಕೊಳ್ಳುವ ಅಂತರಂಗದ ಸಂಯಮವೇ ನಮ್ಮ ಅಭಿವೃದ್ಧಿಗೆ ನೆರವಾಗುತ್ತದೆ.
ಆಸೆಗಳ ಮೇಲೆ ವಿವೇಕದ ವಿಜಯ ಸಾಧಿಸುವುದೇ ಜೀವನದ ಪರಮ ಸಾರ್ಥಕತೆ. ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು.